ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್

ಅವಧಿ ಸಂದರ್ಶನ 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಐ ಎ ಎಸ್ ಅಧಿಕಾರಿ ಕೆ ಎ ದಯಾನಂದ ಅವರು ‘ಹಾದಿಗಲ್ಲು’ ಆತ್ಮಕಥೆಯನ್ನು ಬರೆದಿದ್ದಾರೆ. ಆಳವಾದ ಸಾಂಸ್ಕೃತಿಕ ಪ್ರೀತಿ ಹಾಗೂ ಜನಪರ ನೋಟ ಇರುವ ಇವರನ್ನು ಖ್ಯಾತ ರಂಗ ನಿರ್ದೇಶಕ, ಶಿವಮೊಗ್ಗದ ಸಾಸ್ವೆಹಳ್ಳಿ ಸತೀಶ್ ಅವರು ‘ಅವಧಿ’ಗಾಗಿ ಸಂದರ್ಶಿಸಿದ್ದಾರೆ. 

ಆತ್ಮಕಥೆ ಬರೆಯುವ ಹುಮ್ಮಸ್ಸು ಬಂದಿದ್ದು ಹೇಗೆ?

ಆತ್ಮಕತೆ ಬರೆಯಬೇಕು ಅನ್ನೋ ಉದ್ದೇಶ ಇರಲಿಲ್ಲ. ಆದರೆ ಕನ್ನಡ ಸಂಸ್ಕೃತಿ ಇಲಾಖೆಗೆ ಬಂದಾಗ ಬಹಳಷ್ಟು ಸಲ ಕಾರ್ಯಕ್ರಮಗಳಲ್ಲಿ ಅಥವಾ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಾಷಣವನ್ನು ಮಾಡಬೇಕಾದರೆ, ಕೆಲವರು ಸಲಹೆ ಕೊಟ್ಟರು. ಇದನ್ನು ಬರೆದು ದಾಖಲಿಸಿ ಮುಂದೆ ಮಕ್ಕಳಿಗೆ ಉಪಯೋಗಕ್ಕೆ ಬರಬಹುದು ಅಂತಾ. ನನ್ನಂತೆಯೇ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಂತಹ, ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿಯೂ ನನ್ನಲ್ಲಿ ಇದ್ದಂತಹ ಕೀಳರಮೆ ಇರಬಹುದು ಅನ್ನಿಸೋಕೆ ಶುರುವಾಯ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಖ್ಯ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ಆಗಿದ್ದಾಗ ಶಾಲೆಗಳಲ್ಲಿ ಪಾಠ ಮಾಡೋಕೆ ಹೋಗ್ತಾ ಇದ್ದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾಷಣ ಆಥವಾ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಹೋದಾಗ ಸಹಜವಾಗಿಯೇ ಕೀಳರಿಮೆಯ ಭಾವ ಮಕ್ಕಳಲ್ಲಿ ಇರುವುದು ತಿಳಿಯುತ್ತಿತ್ತು. ನಮಗೂ ಆ ಭಾವ ಇತ್ತು. ಅದರಿಂದ ಹೊರಬಂದು ಉನ್ನತ ಹುದ್ದೆಗೆ ನಾನು ಬಂದಿದ್ದೀನಿ ಅಂದ್ರೆ ಅವರಿಗೂ ಕೂಡಾ ಬರುವಂತಹ ಸಾಮರ್ಥ್ಯವಿರುತ್ತದೆ. ಆ ಸಾಮರ್ಥ್ಯ ಇದೆ ಅನ್ನೋದನ್ನ ಅವರಿಗೆ ಮನದಟ್ಟು ಮಾಡಿಸಬೇಕು ಅನ್ನೊ ಉದ್ದೇಶದಿಂದ ನನ್ನ ಅನುಭವಗಳನ್ನ ದಾಖಲು ಮಾಡಿದರೆ ಓದಿದವರಿಗೆ ಪ್ರೇರಣೆ ಆಗಬುಹುದು ಎಂದು ನಾನು ಆತ್ಮಕತೆ ಬರೆದೆ.

ಐಎಎಸ್ ಅಧಿಕಾರಿಯಾಗಿ ಸಮಯದ ಅಭಾವ ತುಂಬಾ ಇರುತ್ತೆ, ಹೇಗೆ ಬರೆದ್ರಿ ? 

ನಾನು ಎಲ್ಲೋ ಒಂದು ಕಡೆ ಏಕಾಂತದಲ್ಲಿ ಕುಳಿತು ಬರೆದವನು ಅಲ್ಲ. ಪೇಪರ್ ಪೆನ್ನು ಬಳಸಿ ಬರೆದವನೂ ಅಲ್ಲ. ನಮ್ಮ ಅನುಭವಗಳನ್ನ ಹೇಗೆ ದಾಖಲಿಸಬೇಕು ಅಂತಾ ಕೆ. ವೈ. ನಾರಾಯಣಸ್ವಾಮೀ ಅವರನ್ನ ಕೇಳಿದ್ದೆ. ಅವರು ಎಲ್ಲಾ ಮುಖ್ಯ ಘಟನೆಗಳನ್ನೂ ನಮೂದು ಮಾಡ್ತಿರಿ. ಮುಂದೊಂದು ದಿನ ಬೇಕಾಗುತ್ತೆ ಅಂದಿದ್ದರು. ಹಾಗಾಗಿ ನಾನು ಮೊಬೈಲ್ ನಲ್ಲಿ ‘ನೋಟ್ಸ್ ಆ್ಯಪ್’ ಡೌನ್ಲೋಡ್ ಮಾಡಿಕೊಂಡೆ. ಎಲ್ಲಿ ಪ್ರಯಾಣ ಮಾಡಬೇಕಾದರೂ ಒಂದೊಂದೇ ಘಟನೆಗಳನ್ನ ಟೈಪ್ ಮಾಡಿ ದಾಖಲು ಮಾಡ್ತಾ ಹೋದೆ. ಕೋವಿಡ್ ರಜೆಯಲ್ಲಿ ಅದನ್ನು ಪೂರ್ಣಗೊಳಿಸಿ ಪ್ರಕಟ ಮಾಡಿದ್ದೇನೆ.

ಏನಿದೆ ಪುಸ್ತಕದಲ್ಲಿ?

ಅದರಲ್ಲಿ ಜೀವನಾನುಭವ ಹಾಗೂ ಆಡಳಿತಾನುಭವ ಎರಡನ್ನೂ ಸೇರಿಸಿದ್ದೇನೆ. ಇದರಿಂದ ಹೊಸದಾಗಿ ಬರುವ ಅಧಿಕಾರಿಗಳಿಗೂ  ಸಹಾಯ ಆಗುತ್ತೆ. ನಾವು ಹೊಸದಾಗಿ ಬಂದಾಗ ನಮ್ಮ ಯೋಚನೆಗಳು, ನಂತರ ಆಗುವಂತಹ ಬದಲಾವಣೆಗಳು, ಯಾವ ಕಲ್ಪನೆ ಇಟ್ಟುಕೊಂಡು ಆಡಳಿತ ಮಾಡಿದಾಗ ಅನುಕೂಲ ಆಗುತ್ತೆ, ಯಾವ ಯಾವ ಘಟನೆಗಳು ನಮ್ಮಲ್ಲಿ ಬದಲಾವಣೆ ತರುತ್ತವೆ, ತೃಪ್ತಿ ತರುವಂತಹ ಘಟನೆಗಳು ಯಾವುವು ಅನ್ನುವುದನ್ನು ಬರೆದಿದ್ದೇನೆ

ಸಾಂಸ್ಕೃತಿಕ ಕ್ಷೇತ್ರಕ್ಕೆ ನಾವೆಂದೂ ಆದ್ಯತೆ ಕೊಡೋದೆ ಇಲ್ಲ. ಆದರೆ ಆಡಳಿತದಲ್ಲಿ ಸಾಂಸ್ಕೃತಿಕವಾದಂತಹ ಆಡಳಿತವೂ ಬಹಳ ಮುಖ್ಯ. ಪ್ರತಿಯೊಂದು ಜಿಲ್ಲೆಗೂ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇರುತ್ತೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಅಂತಹ ವಿಚಾರಗಳನ್ನ ಆಡಳಿತದಲ್ಲಿ ಅಳವಡಿಸಿಕೊಂಡು ಚಟುವಟಿಕೆಯನ್ನು ರೂಪಿಸಿದರೆ ಮಾತ್ರ ನಮ್ಮ ಸಂಸ್ಕೃತಿ ಸುಧಾರಣೆ ಆಗುತ್ತದೆ.

ಒಂದೇ ಪುಸ್ತಕಾನಾ..??

ಇದು ನನ್ನ ಮೊದಲ ಹೆಜ್ಜೆ. ಮುಂದೆಯೂ ಕೂಡ ಬರೆಯುತ್ತೇನೆ. ಬರೆದು ಪ್ರಕಟಣೆ ಮಾಡದೇ ಇರುವುದು ಸಾಕಷ್ಟು ಇದೆ. ದಿನದಿಂದ ದಿನಕ್ಕೆ ಅನುಭವಗಳು ಬದಲಾಗುತ್ತವೆ. ಆಡಳಿತದಲ್ಲಿನ, ಬಾಲ್ಯದಲ್ಲಿನ ಬಹಳಷ್ಟು ಅನುಭವಗಳನ್ನು ಬರೆಯಲು ಆಗಿಲ್ಲ. ಆ ಕಾಲಘಟ್ಟವನ್ನು ದಾಖಲು ಮಾಡುವುದು ಸೂಕ್ತ ಅನಿಸ್ತಿದೆ. ಅದನ್ನ ಮಾಡ್ತಾ ಇದೀನಿ. ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತೆ ಅಂತ ಬರೆದಿದ್ದೇನೆ. ಇದರ ಮೂಲ ಉದ್ದೇಶ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಛಲ, ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ತರಬೇಕು ಅನ್ನೋದು ನನ್ನ ಉದ್ದೇಶವಾಗಿದೆ.

‍ಲೇಖಕರು avadhi

August 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: