ಮೈಕ್‌ ಬಿಟ್ಟು ಮೌನಕ್ಕೆ ಜಾರಿದ ಸುಮಂಗಲಾ…

ನಾಗೇಶ ಹೆಗಡೆ

ನಿನ್ನೆ ಬೆಳಿಗ್ಗೆ (12 ಮಾರ್ಚ್‌) ಕನ್ನಡದ ಪ್ರಮುಖ ವಿಜ್ಞಾನ ಲೇಖಕರ ಒಂದು ವಿಷಣ್ಣ ಸಮಾವೇಶ ಬೆಂಗಳೂರಿನಲ್ಲಿ ಜರುಗಿತು. ಹಠಾತ್‌ ನಿಧನರಾದ ಶ್ರೀಮತಿ ಸುಮಂಗಲಾ ಎಸ್‌ ಮುಮ್ಮಿಗಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಯಿತು. ಆನ್‌ಲೈನ್‌ ಮತ್ತು ಆಫ್‌ಲೈನ್‌ಗಳಲ್ಲಿ ನುಡಿನಮನಗಳು ಹನಿಗೂಡಿದವು.

ಸುಮಂಗಲಾ ಬೆಂಗಳೂರು ಆಕಾಶವಾಣಿಯಲ್ಲಿ ವಿಜ್ಞಾನ ಸಂವಹನಕಾರ್ತಿಯಾಗಿದ್ದರು. ಅವರ ಪತಿ ಶಶಿಕಾಂತ ಮುಮ್ಮಿಗಟ್ಟಿಯ ಜೊತೆ ಸೇರಿ ಬೆಂಗಳೂರಿನ ಆಕಾಶವಾಣಿಯನ್ನು ರಾಷ್ಟ್ರಮಟ್ಟಕ್ಕೆ, ಅಂತರರಾಷ್ಟ್ರೀಯ ಮಟ್ಟಕ್ಕೂ ಏರಿಸಿದವರು ಅವರು.

ಸದಾ ಉತ್ಸಾಹದ ಚಿಲುಮೆ. ನಾಡಿನ ಎಲ್ಲ ವಿಜ್ಞಾನ ಲೇಖಕರನ್ನೂ ಎಲ್ಲ ಕನ್ನಡ ವಿಜ್ಞಾನಿಗಳನ್ನೂ ಸ್ಟೂಡಿಯೊಕ್ಕೆ ಕರೆಸಿ ಮೈಕ್‌ ಮುಂದೆ ಕೂರಿಸಿದವರು. ಡ್ಯೂಟಿಯ ನಂತರದ ಬಿಡುವಿನ ಸಮಯದಲ್ಲಿ ಮೈಕ್‌ ಬದಿಗಿಟ್ಟು ಪೆನ್‌ ಎತ್ತಿಕೊಂಡು ನಾಡಿನ ಎಲ್ಲ ಹೆಸರಾಂತ ಪತ್ರಿಕೆಗಳಿಗೆ ಲೇಖನ ಬರೆಯುತ್ತ, ಎಲ್ಲ ವಿಜ್ಞಾನ ಸಮಾವೇಶಗಳಿಗೆ ಹಾಜರಾಗುತ್ತ, ಮಹತ್ವದ ವಿಜ್ಞಾನಿಗಳ ಕುರಿತು ಪುಸ್ತಕ ಬರೆಯುತ್ತ, ಇಂಗ್ಲಿಷ್‌ ಭಾಷೆಯಲ್ಲಿನ ಮಹತ್ತದ ವಿಜ್ಞಾನ ಸಾಹಿತ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತ…
ಒಬ್ಬ ಮಹಿಳೆ ಮೂರು ಜನ್ಮಕ್ಕಾಗುವಷ್ಟು ಕೆಲಸ ಮಾಡಿ, ನಿವೃತ್ತಿಗೆ ಎರಡು ವರ್ಷ ಮೊದಲೇ ವಿದಾಯ ಹೇಳಿದ್ದಾರೆ.

ವಿಜ್ಞಾನ ಕಾರ್ಯಕ್ರಮಗಳ ಮಟ್ಟಿಗೆ ಬೆಂಗಳೂರಿನ ಆಕಾಶವಾಣಿಗೆ ರಾಷ್ಟ್ರಮಟ್ಟದ ಖ್ಯಾತಿ ಇದೆ. ಅದನ್ನು ಅಷ್ಟೆತ್ತರಕ್ಕೆ ಏರಿಸಿದವರು ಗೆಳೆಯ ಡಾ. ಎಚ್‌ ಆರ್‌ ಕೃಷ್ಣಮೂರ್ತಿ, ನಮಗೆಲ್ಲರಿಗೆ ಎಚ್ಚಾರ್ಕೆ. (ಫಿಸಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಕೃಷ್ಣಮೂರ್ತಿ ಆಕಾಶವಾಣಿಗೆ ಬಂದು ಮೈಕ್‌ ಹಿಡಿದಿದ್ದು, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದ ಉಲ್ಲಾಸ ಕಾರಂತ್‌ ವನ್ಯಲೋಕವನ್ನು ಪ್ರವೇಶಿಸಿ ದುರ್ಬೀನು ಹಿಡಿದಿದ್ದು, ನಾನು ಜೆಎನ್‌ಯು ಬಿಟ್ಟು ಪೆನ್‌ ಹಿಡಿದಿದ್ದು- ಎಲ್ಲ ಏಕಕಾಲಕ್ಕೆ ಅನ್ನಬೇಕು. ನಾವು ಮೂವರು ಹುಟ್ಟಿದ್ದೂ 1948ರಲ್ಲಿ. ಅವರಿಬ್ಬರೂ ಪಿಎಚ್‌ಡಿ ಪ್ರಬಂಧ ಬರೆದು ಡಾಕ್ಟರೇಟ್‌ ಪಡೆದರೆ ನಾನು ಬರಿದೇ ಬರೆಯುತ್ತಲೇ ಉಳಿದೆ -ಅದು ಬೇರೆ ಮಾತು). ಎಚ್‌ಆರ್‌ಕೆಯ ಮಾರ್ಗದರ್ಶನದಲ್ಲಿ ಸುಮಂಗಲಾ ಸಮರ್ಥ ವಿಜ್ಞಾನ ಸಂವಹನಕಾರ್ತಿಯಾಗಿ ರೂಪುಗೊಂಡರು.

ಸುಮಂಗಲಾ ನಡೆಸಿಕೊಟ್ಟ ಸರಣಿ ಕಾರ್ಯಕ್ರಮಗಳೂ ಕ್ರಮೇಣ ಇತರ ಭಾಷೆಗಳಿಗೂ ಮಾದರಿ ಎನ್ನಿಸತೊಡಗಿದವು. ಅದು ಜೀವಿವೈವಿಧ್ಯ ಇರಲಿ, ಜಲಪರಿಸರ ಇರಲಿ, ಹವಾಮಾನ ಇರಲಿ, ಪರಿಸರ ಮಾಲಿನ್ಯ ಇರಲಿ- ಒಂದೊಂದಕ್ಕೂ ಕೇಳುಗರಿಂದ ಸಿಕ್ಕ ಸ್ಪಂದನೆ ಅಚ್ಚರಿ ಹುಟ್ಟಿಸುವಂತಿತ್ತು. ಅದಕ್ಕೆ ಅವರು ಹಾಕುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲೇ ನೆಲೆಸಿದ ಖ್ಯಾತ ವಿಜ್ಞಾನಿಗಳಲ್ಲಿ ಅನೇಕರಿಗೆ ಕನ್ನಡವನ್ನು ಸಲೀಸಾಗಿ ಮಾತಾಡಲು ಬರುವುದಿಲ್ಲ. ಅವರು ಕನ್ನಡ ಮಾತಾಡುವಂತೆ ಉತ್ತೇಜಿಸಬೇಕು. ಅಥವಾ ಅವರ ಇಂಗ್ಲಿಷ್‌ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಅವರದೇ ಧ್ವನಿಯ ಮೇಲೆ ಓವರ್‌ಲ್ಯಾಪ್‌ ಮಾಡಬೇಕು. ಕೇಳುಗರಿಂದ ಬಂದ ಪತ್ರಗಳಿಗೆ ಉತ್ತರಿಸಬೇಕು. ಅಂಥ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರಗಳನ್ನೆಲ್ಲ ಪುಸ್ತಕ ರೂಪದಲ್ಲಿ ಎಡಿಟ್‌ ಮಾಡಿ, ಪ್ರಕಾಶಕರನ್ನು ಹುಡುಕಿ ಪ್ರಕಟಿಸಬೇಕು.

“ಭುವಿಯೊಂದೇ ಭವಿಷ್ಯವೊಂದೇ” “ಪೃಥ್ವಿಗೀಗ ಪರ್ವಕಾಲ”, “ನಮ್ಮ ಭೂಮಿ, ನಮ್ಮ ಪರಿಸರ” ಮುಂತಾದ ಪುಸ್ತಕಗಳು ಬಂದಿದ್ದು ಹೀಗೇ. ಈ ನಡುವೆ ಅದು ಹೇಗೆ ಸಮಯ ಹೊಂದಿಸಿಕೊಳ್ಳುತ್ತಿದ್ದರೊ.
ವಿಜ್ಞಾನ ಪ್ರಸಾರದಲ್ಲಿ ಅಷ್ಟೆಲ್ಲ ಕೊಡುಗೆ ನೀಡಿದ ಸುಮಂಗಲಾಗೆ ರಾಷ್ಟ್ರೀಯ ಪ್ರಶಸ್ತಿ ಬಂತು (ಡಾ. ಎಚ್‌ಆರ್‌ಕೆ ಅವರಿಗೆ ಈ ಮೊದಲೇ ಈ ಪ್ರಶಸ್ತಿ ಬಂದಿತ್ತು.)

ಅಂದಹಾಗೆ, ಅತಿ ಹೆಚ್ಚು ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದು ಕನ್ನಡಕ್ಕೇ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ, ವಿಜ್ಞಾನ ಪ್ರಸಾರದ ಅತಿ ಹೆಚ್ಚು ಸಂಖ್ಯೆಯ 8ಕ್ಕೂ ಹೆಚ್ಚು ರಾಷ್ಟ್ರಪ್ರಶಸ್ತಿಗಳೂ ಕನ್ನಡಕ್ಕೇ ಬಂದಿವೆ).

ಒಮ್ಮೆ ಹೀಗಾಯಿತು: “ಹವಾಗುಣ ಬದಲಾವಣೆ ಮತ್ತು ರೈತರ ಬದುಕು ಕುರಿತು ಒಂದು ಕಾರ್ಯಕ್ರಮ ಮಾಡಬೇಕು, ನೀವು ಟೈಟಲ್‌ ಕೊಡಿ, ಸ್ಕ್ರಿಪ್ಟ್‌ ಕೊಡಿ” ಎಂದು ಸುಮಂಗಲಾ ನನ್ನನ್ನು ಕೇಳಿದರು. ಕೊಟ್ಟೆ. ಅದನ್ನು ಆಧರಿಸಿ ಬೇರೆಬೇರೆ ತಜ್ಞರನ್ನು ಮಾತಾಡಿಸಿದರು. “ಅದರ ಕೆಲವು ಭಾಗ ನಿಮ್ಮ ಧ್ವನಿಯಲ್ಲೇ ಬರಬೇಕು” ಎಂದರು. ನನಗೆ ಮಾತಾಡೋಕೆ ಬರೋದಿಲ್ಲ ಅಂದರೆ ಕೇಳಬೇಕಲ್ಲ. ಹಠ ಹಿಡಿದು ಹಿಂದೆಯೂ ನನ್ನನ್ನು ಕೂರಿಸಿ ಅದೆಷ್ಟೊ ಸಂವಾದಗಳನ್ನು ರೆಕಾರ್ಡ್‌ ಮಾಡಿಸಿಕೊಂಡಿದ್ದರು. ಅದ್ಯಾರಾರದೋ ಜೊತೆ ನನ್ನನ್ನು ಕೂರಿಸಿ ಸಂವಾದವನ್ನೂ ಮಾಡಿಸಿದ್ದರು. ಈಗ ಬಿಸಿಭೂಮಿಯ ಸ್ಕಿಪ್ಟನ್ನು ಇಂಗ್ಲಿಷ್‌ನಲ್ಲೂ ಮಾಡಿಕೊಡಿ ಎಂದರು. Farming in a warming planet ಎಂದು ಹೆಸರು ಕೊಟ್ಟೆ. ನೀವೇ ಬಂದು ಓದಿ ಎಂದರು. ಓದಿದೆ. ನನ್ನಂತೇ ಅವರು ಇತರ ರಂಗಗಳ ಪರಿಣತರ ಮಾತುಗಳನ್ನೂ ಒಟ್ಟಿಗೆ ಸೇರಿಸಿದರು.

ಇಂಗ್ಲಿಷ್‌ನ ಆ ಕಾರ್ಯಕ್ರಮ “ಎಲ್ಲ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಪ್ರಸಾರ ಆಗುತ್ತದೆ ಕೇಳಿ” ಎಂದರು. ಕೇಳಿದೆ. “ಅದಕ್ಕೆ ರಾಷ್ಟ್ರಪ್ರಶಸ್ತಿ ಬಂತು” ಎಂದರು. ಶಾಭಾಸ್‌ ಎಂದೆ. ಅದಕ್ಕೆ ಇರಾನ್‌ ದೇಶದವರು ನೀಡುವ “ರೇಡಿಯೊ ಆಸ್ಕರ್‌” ಇಂಟರ್‌ನ್ಯಾಶನಲ್ಲಿ ಪ್ರಶಸ್ತಿ ಬಂತು ಎಂದರು. ದಂಪತಿ ಇರಾನ್‌ ರಾಜಧಾನಿ ಟೆಹ್ರಾನ್‌ಗೆ ಹೋಗಿ ಪ್ರಶಸ್ತಿಯನ್ನು ಪಡೆದು ಬಂದರು. ಅಭಿನಂದಿಸಿದೆ.

ಆಕಾಶವಾಣಿ ಕೇಂದ್ರದಲ್ಲೇ ಒಂದು ಸ್ನೇಹಕೂಟವನ್ನು ಇಟ್ಟು ನಮ್ಮನ್ನೆಲ್ಲ ಕರೆಸಿ ಸಿಹಿ ಹಂಚಿದರು. ಎಲ್ಲ ಮುಗಿಸಿ ಹೊರಡುವ ಹೊತ್ತಿಗೆ ನನಗೆ ಮತ್ತು ಡಾ. ಕೆ.ಎನ್‌. ಗಣೇಶಯ್ಯನವರಿಗೆ ಒಂದು ಲಕೋಟೆಯನ್ನು ಕೊಟ್ಟರು. ನನ್ನ ಲಕೋಟೆಯಲ್ಲಿ ಕೆಲವು ಡಾಲರ್‌ ನೋಟುಗಳು ಇದ್ದವು. “ಯಾಕಮ್ಮಾ ಇದು? ನನಗೆ ಆಗಲೇ ಸಂಭಾವನೆ ಕೊಟ್ಟಿದೀರಲ್ಲ?” ಎಂದೆ. “ತಗೊಳ್ಳಿ ಸರ್‌, ಪ್ರಶಸ್ತಿಯಲ್ಲಿ ನಿಮ್ಮ ಪಾಲೂ ಇದೆ” ಎಂದರು. ನನಗೆ ಅದು ಅನಿರೀಕ್ಷಿತವಾಗಿತ್ತು. ಅದು ಡಾಲರ್‌ ರೂಪದಲ್ಲಿ ಇದ್ದುದರಿಂದ ನನಗೂ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಂತೆನಿಸಿತ್ತು.

ಸುಮಂಗಲಾರ ಸಾಧನೆಯ ಒಂದು ವಿಶಿಷ್ಟ ಮೈಲುಗಲ್ಲು ಏನೆಂದರೆ , 400ಕ್ಕೂ ಹೆಚ್ಚು ಪಕ್ಷಿಗಳ ಇಂಚರದ ಧ್ವನಿಮುದ್ರಣವನ್ನು ಮಾಡಿಸಿದ್ದು. ಕೆಲವನ್ನು ಇವರೇ (ಡಾ. ಎಚ್‌ಆರ್‌ಕೆ ಜೊತೆ ಸೇರಿ) ನೇರವಾಗಿ ಬೆಟ್ಟ, ಕಾಡುಮೇಡುಗಳಲ್ಲಿ ಸುತ್ತಿ ಧ್ವನಿಗ್ರಹಣ ಮಾಡಿದ್ದು; ಇನ್ನು ಕೆಲವನ್ನು ಸ್ಟೂಡಿಯೋ ದಾಖಲೆಗಳಿಂದಲೇ ಹೆಕ್ಕಿ ಜೋಡಿಸಿದ್ದು. “ತುಂಬ ಸೆಟಿಸ್ಫಾಯಿಂಗ್‌ ಕೆಲಸ ಸರ್‌; ಎಷ್ಟೊಂದು ಅಂಧಮಕ್ಕಳು ಈ ಧ್ವನಿಗಳನ್ನು ಕೇಳಿ ಪಕ್ಷಿಗಳನ್ನೇ ಮುಟ್ಟಿ ನೋಡಿದಷ್ಟು ಆನಂದಪಟ್ರು” ಎಂದು ಒಮ್ಮೆ ಹೇಳಿದ್ದರು.

ಕೇಳುಗರಿಗೆಂದು ಅವರು ನಡೆಸಿಕೊಟ್ಟ ನಕ್ಷತ್ರ ವೀಕ್ಷಣೆ ಸರಣಿ ಕಾರ್ಯಕ್ರಮವನ್ನು ಅನೇಕರು ಈಗಲೂ ನೆನಪಿಸಿಕೊಳ್ಳಬಹುದು. ಅದಕ್ಕೆಂತಲೇ ಸೂಕ್ತ ಲೊಕೇಶನ್‌ ಹುಡಕಿದ್ದೇನು; ಪ್ರತಿ ವಾರವೂ ಕತ್ತಲ ರಾತ್ರಿಯಲ್ಲಿ ಹೊಸಕೋಟೆಯ ಬಳಿಯ ಎತ್ತರದ ಗೋಪುರವನ್ನೇರಿ ರೆಕಾರ್ಡಿಂಗ್‌ ಸಾಮಗ್ರಿಗಳನ್ನು ಸೆಟಪ್‌ ಮಾಡುವುದೇನು; ಡಾ. ಎಚ್‌ಆರ್‌ಕೆಯವರ ನೆರವಿನಿಂದ ನಾಡಿನ ಸುಪ್ರಸಿದ್ಧ ತಾರಾತಜ್ಞರನ್ನು (ಹಿರಿಯರಾದ ಜಿಟಿಎನ್‌ ಅವರನ್ನೂ) ಕರೆಸಿ ಗೋಪುರ ಏರಿಸಿದ್ದೇನು; ರಾಜ್ಯದ ಯಾವು ಯಾವುದೋ ಜಿಲ್ಲೆಯಲ್ಲಿ ರೇಡಿಯೊ ಹಚ್ಚಿ ಕತ್ತಲಲ್ಲಿ ಕೂತವರಿಗಾಗಿ ಆ ತಜ್ಞರು ದುರ್ಬೀನ್‌ ಹಿಡಿದು ನಕ್ಷತ್ರಪುಂಜಗಳ ನೇರ ವೀಕ್ಷಕ ವಿವರಣೆ ಕೊಟ್ಟಿದ್ದೇನು. ರಾಷ್ಟ್ರದ ಬೇರೆ ಬೇರೆ ಆಕಾಶವಾಣಿ ನಿಲಯಗಳಲ್ಲೂ ಕರ್ನಾಟಕದ ಈ ಅನನ್ಯ ಸಾಹಸದ ಬಗ್ಗೆ ಶ್ಲಾಘನೆ ಬಂದಿದ್ದೇನು….

ಇದನ್ನೆಲ್ಲ ಸಾಧ್ಯವಾಗಿಸಿದ ಸುಮಂಗಲಾ ಈಗ ತಾವೇ ನಕ್ಷತ್ರ ಲೋಕಕ್ಕೆ ತೆರಳಿದರು.

ಅವರ ಕೆಲಸದ ವೈಖರಿಯ ಒಂದು ಉದಾಹರಣೆ ಹೀಗಿದೆ: ಕನ್ನಡ ಸಂಸ್ಕೃತಿ ಇಲಾಖೆಗೆಂದು “ಮನೆಯಂಗಳದಲ್ಲಿ ವಿಜ್ಞಾನ” ಹೆಸರಿನ ಸರಣಿ ಪುಸ್ತಕ ತಯಾರಿಸಲೆಂದು ಕನ್ನಡದ ವಿಜ್ಞಾನ ಲೇಖಕರನ್ನು ಒಂದೆಡೆ ಸೇರಿಸಿದ್ದೆವು. ಎಲ್ಲರೂ ಒಂದೊಂದು ಟೈಟಲ್‌ ಬರೆದುಕೊಡಬೇಕು ಎಂದಾಗ ಎಲ್ಲರಿಗಿಂತ ಮುಂಚೆ ಸುಮಂಗಲಾ ಒಂದಲ್ಲ, ಎರಡು ಪುಸ್ತಕಗಳನ್ನು ಬರೆದು ನನಗೆ ಕಳಿಸಿದರು. ಇವೆರಡು ಸಿದ್ಧವಾಗುವ ವೇಳೆಗೆ ಮೂರನೆಯದನ್ನೂ ಬರೆದು ಕಳಿಸಿದ್ದರು. ಸಂಪಾದಕನಾದ ನಾನು ಸುಸ್ತು!

ಇವರಿಗೆ ಸುಸ್ತು ಅನ್ನೋದೇ ಇಲ್ಲವೆ ಎಂದು ನನಗೆ ಅನೇಕ ಬಾರಿ ಅನ್ನಿಸಿದ್ದುಂಟು. ಅಂಡಮಾನ್‌ ಆದಿವಾಸಿಗಳ ಅವಸಾನ ಕುರಿತು ಪಂಕಜ್‌ ಶೇಖ್ಸಾರಿಯಾ ಬರೆದ ಇಂಗ್ಲಿಷ್‌ ಕಾದಂಬರಿಯನ್ನು “ಕೊನೆಯ ಅಲೆ” ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿ ನವಕರ್ನಾಟಕ ಪ್ರಕಾಶನದ ಮೂಲಕ ಪ್ರಕಟಿಸಿದರು.

ಅಂಡಮಾನ್‌ ದ್ವೀಪಸಮೂಹಕ್ಕೆ ಕುಟುಂಬದ ರಜೆಗೆ ಹೋಗಿ ಅಲ್ಲಿನ ಜೀವಾವಾಸದ ಬಗ್ಗೆ ಪುಸ್ತಕ ಬರೆದರು. ಇಸ್ರೊ ವಿಜ್ಞಾನಿಗಳ ಸಾಹಸವನ್ನು ಕುರಿತು “ಚಂದ್ರ ಶೋಧನೆ” ಎಂಬ ಪುಸ್ತಕ ಬರೆದರು. ಆರ್ಕಿಮಿಡೀಸ್‌, ಟಾಲೆಮಿ, ಫ್ರಾಂಕ್ಲಿನ್‌, ಕೆಪ್ಲರ್‌, ಕೊಪರ್ನಿಕಸ್‌, ನಮ್ಮ ಆರ್‌ಎಲ್‌ಎನ್‌, ಡಾ. ಉಲ್ಲಾಸ ಕಾರಂತ ಇವರೆಲ್ಲರ ಬಗ್ಗೆ ಸುಮಂಗಲಾ ಬರೆದ ಪುಸ್ತಕಗಳು ನವರ್ಕಾಟಕ ಪ್ರಕಾಶನದಲ್ಲಿ ಸಿಗುತ್ತವೆ.

ನಾವಿಬ್ಬರೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗ್ರತಿ ಸಮಿತಿಯ ಸದಸ್ಯರಾಗಿದ್ದಾಗ, ನಾನು ಕೊಡುವ ಲಿಖಿತ ಸಲಹೆಗಳಿಗಿಂತ ಐದು ಪಟ್ಟು ಹೆಚ್ಚು ಸಲಹೆಗಳನ್ನು ಇವರೇ ಸಿದ್ಧಮಾಡಿಕೊಂಡು ಸಭೆಗೆ ತರುತ್ತಿದ್ದರು.

ಒಂದು ದಿನ ಫೋನ್‌ನಲ್ಲಿ ಮಾತಾಡುತ್ತಿದ್ದಾಗ, ಯುವಾಲ್‌ ನೋವಾ ಹರಾರಿ ಬರೆದ “ಸೇಪಿಯನ್‌” ಹೆಸರಿನ ಅಷ್ಟು ಬೃಹದ್‌ ಗ್ರಂಥವನ್ನು “ತರ್ಜುಮೆ ಮಾಡಿ ಮುಗಿಸಿದೆ” ಎಂದರು.

ನನಗೆ ಆಶ್ಚರ್ಯ. “ಅದಕ್ಕೆ ಲೇಖಕರ ಅನುಮತಿ ಪಡೆದುಕೊಂಡ್ರಾ? ನಾನು ಕೇಳಿದ್ದೆ ಆದರೆ ನನಗೆ ಕೊಡಲಿಲ್ಲ” ಎಂದೆ.

ಸುಮಂಗಲಾ ಕೂಲಾಗಿದ್ದರು. “ಇಲ್ಲ ಸಾರ್‌ ಕೇಳಲಿಲ್ಲ. ಪುಸ್ತಕ ಚೆನ್ನಾಗಿದೆ ಅನ್ನಿಸ್ತು. ತರ್ಜುಮೆ ಮಾಡಿ ಆಮೇಲೆ ಕೇಳೋಣ ಅಂದ್ಕೊಂಡು ಮಾಡಿಬಿಟ್ಟೆ. ನವಕರ್ನಾಟಕದವರು ಅನುಮತಿ ಕೇಳಿದರೆ ಕೊಟ್ಟಾರು” ಎಂದರು. ಅರೆ! ಸತತ ವರ್ಷಗಟ್ಟಲೆ ಕೂತು ಹಾಕಿದ ಶ್ರಮವೆಲ್ಲ ವ್ಯರ್ಥವಾದರೆ?

ಅವರ ದುರದೃಷ್ಟಕ್ಕೆ ಕೊನೆಗೆ ಹಾಗೇ ಆಯ್ತು ಅನ್ನಿ….

ಸುಮಂಗಲಾರ ಶ್ರಮಶಕ್ತಿಯನ್ನು ಪರೀಕ್ಷೆ ಮಾಡಿಯೇ ನೋಡೋಣವೆಂದು ವಿಧಿಯೂ ಟೊಂಕ ಕಟ್ಟಿತ್ತೇನೊ. ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿ ಏನೆಲ್ಲ ಶಿಕ್ಷೆ ಅನುಭವಿಸಿದರು. “ಗೆದ್ದು ಬಂದೆ ಕೊನೆಗೂ” ಎಂದು ಅವರು ಹೇಳುವಷ್ಟರಲ್ಲಿ ಕೊರೊನಾ ಬಾಗಿಲು ತಟ್ಟಿತ್ತು.

ಅದರಿಂದಲೂ ಪಾರಾಗಿ ಕಚೇರಿಗೆ ಬಂದು ಒಂದು ದಿನ ಫೋನ್‌ ಮಾಡಿ, “ದೊಡ್ಡ ಪ್ರಾಜೆಕ್ಟ್‌ ಸಿಕ್ಕಿದೆ; ನಿಮ್ಮೆಲ್ಲರ ಸಹಕಾರ ಬೇಕು” ಎಂದರು. ದಿನವೂ ವಿಜ್ಞಾನದ ಒಂದೊಂದು ವಿಷಯದ ಬಗ್ಗೆ ಐದು ನಿಮಿಷಗಳ ಟಿಪ್ಪಣಿ- “ಇದು ಮೂರು ವರ್ಷಗಳ ಪ್ರಾಜೆಕ್ಟ್‌; ದಿಲ್ಲಿಯಿಂದ ಅನುಮತಿ ಸಿಕ್ಕಿತು” ಎಂದರು. ಅದೇನು ಸುಲಭದ ಕೆಲಸವೆ? ಒಂದು ದಿನವೂ ಬಿಡದಂತೆ ನಾಡಿನ ಬೇರೆ ಬೇರೆ ವಿಜ್ಞಾನ ಕ್ಷೇತ್ರಗಳಿಂದ ಪರಿಣತರ ಕಿರು ಉಪನ್ಯಾಸಗಳನ್ನು ತರಿಸಿ ಪರಿಷ್ಕರಿಸಿ ಪ್ರಸಾರ ಮಾಡುವುದು?

“ಮಾಡೋಣ ಸಾರ್‌, ಎಷ್ಟೊಂದು ಹೊಸ ವಿಷಯಗಳನ್ನು ಕೇಳುಗರಿಗೆ ತಲುಪಿಸಬಹುದು, ಎಷ್ಟೊಂದು ವಿಜ್ಞಾನ ಸಂವಹನಕಾರರನ್ನು ಪಳಗಿಸಬಹುದು” ಎಂದರು.

ಧ್ವನಿಯಲ್ಲಿ ಬಳಲಿಕೆ ಇದ್ದರೂ ಉಸಿರಿನಲ್ಲಿ ಆತ್ಮವಿಶ್ವಾಸವಿತ್ತು.

“ಎಷ್ಟು ಕೆಲಸ ಮಾಡ್ತೀರಮ್ಮಾ? ರಾಷ್ಟ್ರಪ್ರಶಸ್ತಿ ಪಡೆದಿರಿ, ವಿದೇಶೀ ಪ್ರಶಸ್ತಿ ಪಡೆದಿರಿ, ಇನ್ನಾದರೂ ತುಸು ವಿಶ್ರಾಂತಿ ಪಡೆಯಿರಿ” ಎಂದೆ. ಪತಿ ಶಶಿಕಾಂತ್‌ ಜೊತೆ ಇದ್ದಷ್ಟು ಹೊತ್ತೂ ಇವರಿಗೆ ಎಕ್ಸ್‌ಟ್ರಾ ಭುಜಬಲ ಬಂದಿರುತ್ತಿತ್ತು. ಈಗಂತೂ ಮಗ ಸುಚೇತನ್‌ ವೈಮಾನಿಕ ಇಂಜಿನಿಯರಿಂಗ್‌ ಓದಿ ವಿದೇಶದಲ್ಲಿ ವಿಶೇಷ ಪದವಿ-ಪ್ರಶಸ್ತಿ ಪಡೆದು ಬೆಂಗಳೂರಿನಲ್ಲೇ ಏರ್‌ಬಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ʼಇನ್ನೇನೂ ಚಿಂತೆಯಿಲ್ಲ ಸಾರ್‌ʼ ಎಂದಿದ್ದರು. “ನಿತ್ಯ ವಿಜ್ಞಾನ” ಕಾರ್ಯಕ್ರಮಕ್ಕೆ ನಿತ್ಯವೂ ವಿಜ್ಞಾನ-ತಂತ್ರಜ್ಞಾನದ ಹಿರಿಯರನ್ನು, ಹೊಸಮುಖಗಳನ್ನು ಕರೆತರುವ ಅಭಿಯಾನ ಆರಂಭವಾಯಿತು.

ಅವರೆಲ್ಲ ಇಂದು ಒಂದೆಡೆ ನೆರೆದಿದ್ದರು. ಅನೇಕರು ಆಫ್‌ಲೈನಲ್ಲಿ, ಇನ್ನು ಕೆಲವರು ಆನ್ಲೈನಲ್ಲಿ.

ಡಾ. ಎಚ್ಚಾರ್ಕೆ, ಡಾ. ನಾ. ಸೋಮೇಶ್ವರ, ಡಾ. ಅನಂತರಾಮು, ಡಾ. ವಸುಂಧರಾ ಭೂಪತಿ, ಡಾ. ಶರಣ್‌ ಅಂಗಡಿ, ಡಾ. ವೈ. ಸಿ ಕಮಲಾ, ಕೆಎಸ್‌ ನಟರಾಜ್‌, ಕೊಳ್ಳೇಗಾಲ ಶರ್ಮಾ, ಗುರುರಾಜ ದಾವಣಗೆರೆ…. ವಿಜ್ಞಾನ ಸಂವಹನ ಕ್ಷೇತ್ರದ ಇನ್ನೂ ಎಷ್ಟೋ ಪರಿಚಿತರೆಲ್ಲ ನೆರೆದಿದ್ದರು.

ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ನೂರಿನ್ನೂರು ವಿಜ್ಞಾನಿಗಳನ್ನು ಮತ್ತು ಬೆಂಗಳೂರಿನ ಬಹುತೇಕ ಎಲ್ಲ ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳ ಮುಖ್ಯಸ್ಥರನ್ನು ಆಕಾಶವಾಣಿ ಸ್ಟೂಡಿಯೊಕ್ಕೆ ಕರೆಸಿ ಮೈಕ್‌ ಎದುರು ಕೂರಿಸಿ ಅವರನ್ನು ಕನ್ನಡಿಗರಿಗೆ ಪರಿಚಯಿಸಿದ (ಮುಮ್ಮಿ)ಗಟ್ಟಿ ಧ್ವನಿ ಇಂದು ಅಸ್ತಂಗತವಾಯಿತು. ಆಕಾಶವಾಣಿಯ ವಿಜ್ಞಾನ ವಿಭಾಗದ ಏಕೈಕ ಸ್ಥಾನ ಇಂದು ಅಕ್ಷರಶಃ ಶೂನ್ಯಕ್ಕಿಳಿಯಿತು.

ಚಾಮರಾಜಪೇಟೆಯ ರುದ್ರಭೂಮಿಗೆ ನಾವು ಹೋಗಿ ಸಮಾಧಿಯೆದುರು ತಲೆಬಾಗಿಸುವಾಗ ನೀರವ ಶಾಂತಿ ನೆಲೆಸಿತ್ತು. ಅಲ್ಲಿನ ನಿಬಿಡ ಗಿಡಮರಗಳಲ್ಲಿ ಪಕ್ಷಿಗಳ ಇಂಚರ ಮಾತ್ರ ಕೇಳಬರುತ್ತಿತ್ತು.

ತಮ್ಮೆಲ್ಲರ ಧ್ವನಿಗ್ರಹಣ ಮಾಡಿಟ್ಟು ಮಣ್ಣಾದ ಜೀವಕ್ಕೆ ಈ ಪಕ್ಷಿಗಳು ನುಡಿನಮನ ಸಲ್ಲಿಸುತ್ತಿದ್ದುವೆ?

‍ಲೇಖಕರು avadhi

March 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: