ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

ಬಿ ಶ್ರೀನಿವಾಸ

ತೊಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಒಂದು ರೀತಿ ಅಭಿವ್ಯಕ್ತಿಯ ಶೂನ್ಯತೆಯೇ ಆವರಿಸಿಬಿಟ್ಟಿದೆಯೇನೋ ಎಂಬಂಥ ಕಾಲಘಟ್ಟದಲ್ಲಿ ಸಮಾನಮನಸ್ಕರೆಲ್ಲ ಸೇರಿ, ಜನ ಸಾಹಿತ್ಯ ಸಮಾವೇಶ ಆರಂಭಿಸಿದಾಗ ಇದು ಬಂಡಾಯ ಸಂಘಟನೆಯ ಮುಂದುವರಿದ ಭಾಗ – ಎಂಬರ್ಥದ ಮಾತುಗಳು ಕೇಳಿಬಂದವು. ಅದು ಸತ್ಯ ಕೂಡ ಆಗಿತ್ತು. ಯಾಕೆಂದರೆ ಬಹುತೇಕರು ಬಂಡಾಯ ಸಾಹಿತ್ಯ ಸಂಘಟನೆ ಎಂಬ ತಾಯಿ ಗರ್ಭದಿಂದ ಬಂದವರೇ ಆಗಿದ್ದರು. ಕ್ರಮೇಣ ಸಾಹಿತ್ಯ ಸಂಭ್ರಮ, ನುಡಿಸಿರಿ, ಜೈಪುರ ಲಿಟರರಿ ಫೆಸ್ಟ್‌ಗಳಂಥ ಸಮ್ಮೇಳನಗಳೂ ದೇಶದಲ್ಲಿ ಬಹು ಅದ್ದೂರಿಯಾಗಿ ಆರಂಭಗೊಂಡಾಗಿತ್ತು. ಆಯೋಜನೆಯ ಅತಿಯಾದ ಶಿಸ್ತು ಸಾಹಿತ್ಯದ ಕಾರ್ಪೋರೇಟಿಕರಣದ ಕುರಿತಾದ ತಕರಾರುಗಳು, ಜನರಿಂದ ವಿಮುಖವಾದ ಸೈದ್ಧಾಂತಿಕತೆಯ ಚರ್ಚೆಗಳು ಅಲ್ಲಲ್ಲಿ ಶುರುವಾಗಿದ್ದವು. ಇಂಥದ್ದೇ ಸಂದರ್ಭದಲ್ಲಿ ಜನಪರವಾದ ಸಾಹಿತ್ಯಿಕ ಸಂಘಟನೆಯ ಕಾಲದ ಅಗತ್ಯವನ್ನು ಮೇ ಸಾಹಿತ್ಯ ಮೇಳ ಪೂರೈಸಿತು ಎಂದೇ ಹೇಳಬಹುದು. ಅಂದಿನಿಂದ ಮೇ ಮೇಳ ತನ್ನ ಪರಿಧಿಯನ್ನು ವಿಸ್ತರಿಸುತ್ತಲೇ ನಡೆದಿದೆ. ಮೊದಮೊದಲು ಜ್ಞಾನ ಪ್ರಸಾರದಂತೆ ಗೋಚರಿಸುತ್ತಿದ್ದ ಗೋಷ್ಠಿಗಳು, ಈಗೀಗ ಜ್ಞಾನ ಸೃಷ್ಟಿಯ ಗೋಷ್ಠಿಗಳಾಗಿ ಪರಿವರ್ತಿತವಾಗಿವೆ. ಕರ್ನಾಟಕದ ಮಟ್ಟಿಗೆ ಹತ್ತು ಹಲವು ಪ್ರಗತಿಪರರನ್ನು ಒಂದೆಡೆ ಕೂಡಿಸುವ, ಚಿಂತನ ಮಂಥನ ಮಾಡುವ ಇಂಥದೊಂದು ವೇದಿಕೆ ನಿರ್ಮಾಣವಾಗಿದ್ದು, ಸಂವೇದನೆಯನ್ನು ಕಳೆದುಕೊಂಡಿರುವ ಈ ಹೊತ್ತಿನ ರಾಜಕಾರಣವು ವೋಟ್ ಬ್ಯಾಂಕ್ ರಾಜಕಾರಣವಾಗಿ, ಧರ್ಮಾಧಾರಿತವಾಗಿ, ಹಿಂದುತ್ವದ ರಾಜಕಾರಣವಾಗಿ ಬದಲಾಗಿರುವ ವಿಚಿತ್ರ  ಸನ್ನಿವೇಶದಲ್ಲಿ, ಇದೊಂದು ನೈತಿಕ ಪ್ರಜಾಪ್ರಭುತ್ವದ ರೂಪಕದಂತೆ ಕಾಣಿಸುತ್ತಿದೆ.

ಈ ದೇಶದ ಮಣ್ಣು, ನೀರು ಅರ್ಥವಾದರೆ ಸಾಕು. ಈ ದೇಶದ ವಿವಿಧ ಜನರ ಭಾಷೆ, ಆಚರಣೆಗಳು ಅರ್ಥವಾದರೆ ಭಾರತವೂ ಅರ್ಥವಾದಂತೆ. ಈ ನಾಡಿನ ಬಿಜಾಪುರದ ಜೋಳ, ಮೈಸೂರು ಸೀಮೆಯ ರಾಗಿ, ರಾಯಚೂರು ಕಡೆಯ ಭತ್ತ, ಚಿತ್ರದುರ್ಗ ಕಡೆಯ ನವಣೆ, ಸಜ್ಜೆ, ತಿಪಟೂರಿನ ತೆಂಗು ಅರ್ಥವಾದರೆ ಭಾರತವೂ ಅರ್ಥವಾದೀತು.

ಅಂಥದೊಂದು ಭಾರತವನ್ನು ಪುನರ್‌ ಶೋಧಿಸುವ, ನಾವೆಲ್ಲರೂ ಹುಡುಕಬೇಕಾಗಿರುವ ಶಾಂತಿಯ ನೆಲೆ… ಖಂಡಿತವಾಗಿಯೂ ಮೇ ಮೇಳ ಆಗಿದೆ. ಸಾಹಿತ್ಯವನ್ನು ರಾಜಕೀಯ ಹಿಡಿತಗಳಿಂದ ಹೊರತಂದು ಬದುಕಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊತ್ತು ಸಾಗಿದಾಗ ಸಾಹಿತ್ಯದಿಂದೇನು ಸಾಧಿಸುತ್ತೀರಿ? ಎಂದವರಿಗೆ ಸಾಹಿತ್ಯದ ಬೆಳಕಿನಿಂದ ಜಾತಿ ಗೋಡೆಗಳನ್ನು ಬೀಳಿಸಲಾಗದು ಎಂಬುದೇನೋ ನಿಜ, ಆದರೆ… ತನ್ನನ್ನು ತಾನು ನೋಡಿಕೊಂಡು ಅಸಹ್ಯಪಡುವ ಹಾಗೆ ನಾಚಿ ಮುದುರಿಕೊಳ್ಳುವಂತೆ ಮಾಡಬಹುದು. ಆ ಕೆಲಸವನ್ನು ಮೇ ಮೇಳ ಮಾಡುತ್ತಿದೆ ಎಂಬ ಉತ್ತರವನ್ನು ಹಾವೇರಿ, ಧಾರವಾಡ, ಗದಗ ಮತ್ತು ದಾವಣಗೆರೆಗಳಲ್ಲಿ ನಡೆದ ಎಂಟು ಮೇಳಗಳಿಂದ ನೀಡುತ್ತಲೇ ಬಂದಿದೆ.

ಮೇ ಮೇಳದ ಆಳದಲ್ಲಿ ದಲಿತರ ಸಂಕಟಗಳಿವೆ, ಎದೆಯಲ್ಲಿ ಅಲ್ಪಸಂಖ್ಯಾತರ ಪರದೇಸಿತನದ ಪ್ರಜ್ಞೆಯ ನೋವಿದೆ, ರೈತ, ಕಾರ್ಮಿಕ, ಮಹಿಳೆಯರೂ ಸೇರಿದಂತೆ ಈ ನೆಲದ ದನಿಗಳಿವೆ. ಹೀಗೆ ದನಿಗಳ ಸೇರುವಿಕೆಯ ಹಿಂದೆ ಕನ್ನಡನಾಡಿನ ಹಲವಾರು ಸಾಕ್ಷಿಪ್ರಜ್ಞೆಗಳ ಶ್ರಮವಿದೆ. ಕನ್ನಡದ ಮೂಲಕ ದ್ವೇಷರಹಿತ ದೇಶವನ್ನು ಕಟ್ಟುವ ನೂರಾರು ಮನಸ್ಸುಗಳ ಸಂಗಮದಂತೆ ಮೇಳ ಕಾಣಿಸುತ್ತಿದೆ. ಮೇ ಮೇಳಕ್ಕೆ ಆಗಮಿಸುವವರೆಲ್ಲ ಕನ್ನಡದ ನೆಲದ ದನಿಗಳಾದ, ನಾವು ನಮ್ಮಲ್ಲಿ, ಜನನುಡಿಯಲ್ಲಿ, ಆದಿಮದಲ್ಲಿ, ಕೋಮುಸೌಹಾರ್ದ ವೇದಿಕೆಗಳಲ್ಲಿ, ಬಂಡಾಯ ಸಾಹಿತ್ಯದ ಸಂಘಟನೆಗಳಲ್ಲಿ ಹೀಗೆ ಹತ್ತು ಹಲವು ಪ್ರಗತಿಪರ ವೇದಿಕೆಗಳಲ್ಲಿ ಮತ್ತೆ ಮತ್ತೆ ಸೇರಿದವರೇ ಆಗಿರುತ್ತಾರೆ ಎಂಬ ಅಪವಾದಗಳನ್ನೂ ಮೀರಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು, ಯುವಜನತೆಯನ್ನೂ ಒಳಗೊಳ್ಳಲೇಬೇಕಾದ ಸವಾಲುಗಳಿವೆ. ಇದು ಮೇಳದ ದೌರ್ಬಲ್ಯವೂ ಕೂಡ ಅಹುದು. ಆದಾಗ್ಯೂ, ಮೇಳದಿಂದ ಮೇಳಕ್ಕೆ ಹೊಸ ಹೊಸ ಮುಖಗಳು, ಹೊಸ ಸಂವೇದನೆಗಳು, ಸೇರುತ್ತಿರುವ ಕಾರಣ ಮೇಳದ ತಾತ್ವಿಕತೆಯ ಧಾರೆ ವಿಸ್ತಾರವಾಗುತ್ತಲೇ ಸಾಗಿದೆ. ರಾಜಕಾರಣಿಗಳು, ಪತ್ರಕರ್ತರು, ಜನಸಾಮಾನ್ಯರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಚಿಂತಕರು, ಸಾಹಿತಿಗಳು… ಹೀಗೆ ಭಿನ್ನವಲಯಗಳ, ಭಿನ್ನವಿಚಾರಗಳ ಜನರನ್ನು ಒಂದೆಡೆ ಕೂಡಿಸುವುದು ಅಷ್ಟು ಸುಲಭದ ಮಾತಲ್ಲ. ಎಡಪಂಥೀಯ ಚಿಂತನೆಯುಳ್ಳವರು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದವರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡವರು, ಹೀಗೆ ಅನೇಕ ಸಂಘಟನೆಗಳಲ್ಲಿ ಹರಿದುಹಂಚಿ ಹೋದವರು, ಒಬ್ಬರು – ಮತ್ತೊಬ್ಬರ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಇರುವಂಥ ಸ್ಥಿತಿಯಲ್ಲಿ, ದೇಶದ ಆಶಯದ ದೃಷ್ಟಿಯಿಂದ ಮೇ ಸಾಹಿತ್ಯ ಮೇಳದಲ್ಲಿ ಮಾತ್ರ ಪ್ರೀತಿಯಿಂದ ಎಲ್ಲರೂ ಭಾಗವಹಿಸುವುದು ಹೆಗ್ಗಳಿಕೆ ಎಂದೇ ಹೇಳಬೇಕಾಗುತ್ತದೆ. ಆ ಕೆಲಸವನ್ನು ಮೇ ಸಾಹಿತ್ಯ ಮೇಳ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದೆ. ಕಳೆದ ಎಂಟು ಮೇಳಗಳಲ್ಲಿ ನಗ್ನಮುನಿ, ಶಿವಾರೆಡ್ಡಿ, ಶಿವಶಂಕರ್, ವೋಲ್ಗಾ, ಬೆಜವಾಡ ವಿಲ್ಸನ್, ಗೀತಾ ಹರಿಹರನ್, ಅಂಬೇಡ್ಕರ್ವಾದಿ ಚಿಂತಕ ಆನಂದ್ ತೇಲ್ ತುಂಬ್ಡೆ, ಭಾಷಾತಜ್ಞ  ಗಣೇಶ್ ಎನ್ ದೇವಿ, ಮಾಧುರಿ ಕೃಷ್ಣಸ್ವಾಮಿ, ಜೆಎನ್‌ಯು ವಿದ್ಯಾರ್ಥಿಗಳಾದ ಶೆಲ್ಲಾ ರಶೀದ್, ಉಮರ್, ತಮಿಳುನಾಡಿನ ಜೈಭೀಮ್ ಖ್ಯಾತಿಯ ಜಸ್ಟೀಸ್ ಚಂದ್ರು, ಪತ್ರಕರ್ತರ ಸಾಕ್ಷಿಪ್ರಜ್ಞೆಯಂತಿರುವ ಪಾಮುಲಪರ್ತಿ ಸಾಯಿನಾಥ್, ದೆಹಲಿಯ ಹೋರಾಟಗಾರ್ತಿ ಕವಿತಾ ಕೃಷ್ಣನ್, ಉತ್ತರ ಭಾರತದ ಚಿಂತಕ ಅಸ್ಗರ್ ಅಲಿ ಇಂಜಿನಿಯರ್, ಗೋರಂಟಿ ವೆಂಕಣ್ಣ, ಅನಿರ್ಬನ್ ಭಟ್ಟಾಚಾರ್ಯ, ಚಮನಲಾಲ್, ಸಾಹಿತಿ ರೆಹಮಾನ್, ಮುಕ್ತಾರ್ ಅಲಿ, ಕನ್ನಡದವರೇ ಆದ, ಕಲಬುರ್ಗಿ, ಚಂಪಾ, ರಂಜಾನ್ ದರ್ಗಾ, ಕುಂವೀ, ಹೆಚ್.ಎಸ್.ಶಿವಪ್ರಕಾಶ್, ರಹಮತ್ ತರೀಕೆರೆ, ಎಸ್.ಜಿ. ಸಿದ್ದರಾಮಯ್ಯ, ಬಾನು ಮುಷ್ತಾಕ್, ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ್ ಬೂದಾಳು, ಬಂಜಗೆರೆ ಜಯಪ್ರಕಾಶ್, ಶೈಲಜಾ ಹಿರೇಮಠ, ಮಾಲತಿ ಪಟ್ಟಣಶೆಟ್ಟಿ, ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಚಿಂತಕರ ವಿಷಯಗಳ  ಮಂಡನೆಗೆ ಎರಡು ದಿನಗಳ ಅವಧಿಯು ಏನೇನೂ ಸಾಲದಾಗಿ, ಸಮಯದ ಕೊರತೆಯಿಂದ ಸಂವಾದಗಳಿಲ್ಲದೇ ಕೆಲವೊಮ್ಮೆ ಗೋಷ್ಠಿಗಳು ಸೊರಗುವುದುಂಟು. ಈ ಕೊರತೆಯನ್ನು ನೀಗಿಸಲು ಮೇ ಮೇಳವನ್ನು ಮೂರು ದಿನಗಳವರೆಗೆ ವಿಸ್ತರಿಸುವ ಬಗ್ಗೆಯೂ ಕೂಡ  ಯೋಚಿಸಬಹುದಾಗಿದೆ.

ಪ್ರಜಾತಂತ್ರವೆಂದರೆ ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆಯ ಮುಖಾಂತರ ಎಲ್ಲರನ್ನೂ, ಎಲ್ಲವನ್ನೂ ತಣ್ಣಗಾಗಿಸಿ ಸೌಹಾರ್ದವನ್ನು ಖಚಿತಪಡಿಸುವ ಒಂದು ವ್ಯವಸ್ಥೆಯಾಗಬಹುದು. ಅದು ಈಗ  ಭಾರತದ ಕೆಲವು ‘ರಾಜ್ಯಗಳ ಮಾದರಿ’

(…Model) ಆಡಳಿತವಾಗಿ ಕೂಡ ಪ್ರಚಲಿತದಲ್ಲಿದೆ. ಮಿಲಿಟರಿ ಬಲ, ಪೊಲೀಸ್ ಬಲ ಮತ್ತು ಎನ್ಕೌಂಟರ್‌ಗಳ ಮೂಲಕ ಕಾಪಾಡುವ ಶಾಂತಿಯ ನಾಟಕಗಳ ಅಪಾಯಗಳನ್ನು ಮೀರಿ ಪ್ರಜಾತಂತ್ರವನ್ನು ಕಾಪಾಡುವ ಸವಾಲುಗಳು ಈ ಹೊತ್ತು ನಮ್ಮ ಮುಂದೆ ಇವೆ. ಜೊತೆಗೆ ಪ್ರಜಾತಂತ್ರದ ಉಳಿವ‌ಷ್ಟೇ ಮುಖ್ಯವಲ್ಲ, ಉಳಿವು ಯಾತಕ್ಕಾಗಿ? ಅದನ್ನು ಉಳಿಸುವುದಾದರೂ ಹೇಗೆ? ಎಂಬ ಗುರುತರವಾದ ಪ್ರಶ್ನೆಗಳ ತಾತ್ವಿಕತೆಯನ್ನೇ ಅಂತರ್ಧಾರೆಯನ್ನಾಗಿಟ್ಟುಕೊಂಡು ಒಂಬತ್ತನೇ ಮೇ ಸಾಹಿತ್ಯ ಮೇಳ ಇದೇ ತಿಂಗಳು ೨೭, ೨೮ನೇ ತಾರೀಖಿನಂದು ಬಿಜಾಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ. ದೇಶದ ಹತ್ತು ಹಲವು ಮೂಲೆಗಳಿಂದ, ವಿವಿಧ ರಂಗಗಳಲ್ಲಿ ಅಸಾಧಾರಣ ಕಾರ್ಯನಿರ್ವಹಿಸಿದ ವಿದ್ವಾಂಸರು, ಚಿಂತಕರ ದಂಡೇ ಆಗಮಿಸಲಿದೆ. ಈ ಬಾರಿಯೂ ಜ್ಞಾನ ಶಿಖರವೇ ಆದ ಭಾರತದ ಐಕಾನ್ ಬಾಬಾ ಸಾಹೇಬ ಅಂಬೇಡ್ಕರರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ತನ್ನನ್ನು ತಾನು ಸಂವಿಧಾನದ ಕಾಲಾಳು ಎಂದು ಹೇಳಿಕೊಳ್ಳುವ ಸಂವಿಧಾನ ರಕ್ಷಣೆಗಾಗಿ ಹೋರಾಡುತ್ತಿರುವ ತೀಸ್ತಾ ಸೆಟಲ್ವಾಡ್‌, ದಿಟ್ಟ ಕವಯತ್ರಿ ಸುಕೀರ್ತರಾಣಿ, ಪುರುಷೋತ್ತಮ ಬಿಳಿಮಲೆ, ಬೋಳುವಾರು ಮೊಹಮ್ಮದ್ ಕುಂಞಿ, ಕಮಲಾ ಹಂಪನಾ, ಎ. ನಾರಾಯಣ, ರವಿವರ್ಮಕುಮಾರ್, ಮಹರಾಷ್ಟ್ರದ ನೀರಜ್ ಜೈನ್, ರೈತ ಮುಖಂಡ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವಾರು ಚಿಂತಕರು ವಿಷಯಗಳನ್ನು ಮಂಡಿಸಲಿದ್ದಾರೆ. ಇದೊಂದು ಕೇವಲ ಲಿಟರರಿ ಹಬ್ಬ ಮಾತ್ರವಲ್ಲ, ನಮ್ಮ – ನಿಮ್ಮ ಬದುಕಿನ ರೂಪವೂ, ರೂಪಕವೂ ಹೌದು.

ಜನರ ಬಹುದೊಡ್ಡ ಸಾಮಾಜಿಕ ಪ್ರತಿರೋಧದ ಬಲ ʻಮೇ ಸಾಹಿತ್ಯ ಮೇಳʼ

 

ಕಳೆದ ಎಂಟು ಮೇ ಸಾಹಿತ್ಯ ಮೇಳಗಳಲ್ಲೂ ಒಂದೊಂದು ಬಾರಿ, ಒಂದೊಂದು ಪ್ರಯೋಗಗಳನ್ನು ಮಾಡಲಾಗಿದೆ. ದೇಶಕ್ಕೆ ವ್ಯಾಪಿಸುತ್ತಿರುವ ಫ್ಯಾಸಿಸಂ ಚಹರೆಗಳನ್ನೇ ಫೋಕಸ್ ಮಾಡಿ ಆಯೋಜಿಸಿದರೆ, ಮತ್ತೊಮ್ಮೆ ದಲಿತ ಭಾರತವನ್ನು ಕೇಂದ್ರವಾಗಿಟ್ಟು ಭಾರತವನ್ನು ನೋಡುವ ಕ್ರಮವನ್ನಾಗಿ, ಒಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚು ಚರ್ಚೆಗಳಾದರೆ, ಇನ್ನೊಮ್ಮೆ ಭಾರತದ ಜೀವಾಳವಾದ ಬಹುತ್ವ ಭಾರತವನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿತ್ತು. ಮತ್ತೊಮ್ಮೆ ಅಭಿವೃದ್ಧಿ ಭಾರತದ ಹೆಸರಿನಲ್ಲಿ ಒಟ್ಟಾರೆ ಭಾರತದ ಬದುಕನ್ನು ಅವಲೋಕಿಸುವ ಕ್ರಮವನ್ನು ಅನುಸರಿಸಲಾಗಿತ್ತು.

ಮತ್ತೊಮ್ಮೆ ದಾವಣಗೆರೆಯಲ್ಲಿ ನೆಲದ ದನಿಗಳನ್ನು ಆಲಿಸುವ, ಭಾರತ ಸ್ವಾತಂತ್ರ್ಯ೭೫: ದಕ್ಕಿದ್ದೇನು? ಸಾಧ್ಯತೆಗಳೇನು ಎಂಬುದನ್ನು ಮುಖ್ಯವಾಗಿಟ್ಟುಕೊಂಡು ಮೇಳ ಆಯೋಜಿಸಲಾಗಿತ್ತು. ಇದೇ  ಮೇ ತಿಂಗಳು ೨೭ ಮತ್ತು ೨೮ರಂದು ವಿಜಯಪುರದಲ್ಲಿ ಪ್ರಜಾತಂತ್ರದ ಸವಾಲುಗಳು ಮೀರುವ ಬಗೆಗಳ ಕುರಿತಂತೆ ವೈವಿಧ್ಯಮಯ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಾಹಿತ್ಯಕ್ಕಷ್ಟೇ ಸೀಮಿತವಾಗದೆ ಸಾಹಿತ್ಯದ ಅಸಲಿ ಕಸುಬು ಆದ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ಮೇ ಬಳಗ ನಿರಂತರವಾಗಿ ಮಾಡುತ್ತಲೇ ಬಂದಿದೆ.

\ಬಹುತ್ವವನ್ನೇ ಉಸಿರಾಡುವ ಜನರೆಲ್ಲ ಸೇರುವ  ಆ ಎರಡು ದಿನಗಳು ಭಾರತದ ನಿಜ ಹಬ್ಬವಾಗುತ್ತದೆ. ರಾಗಿ ಮುದ್ದೆ ಉಣ್ಣುವವರು, ಅನ್ನ ಉಣ್ಣುವವರು, ಗೋಧಿ ಚಪಾತಿ, ಬಿಜಾಪುರದ ಜೋಳದ ರೊಟ್ಟಿ ಮುರಿಯುವವರೆಲ್ಲ ಒಂದೆಡೆ ಸೇರಿ ಚರ್ಚಿಸುವಾಗ, ಇಡೀ ಭಾರತದ ವೈವಿಧ್ಯತೆಯ ವೈಭವ ಕಣ್ಣಿಗೆ ರಾಚುತ್ತದೆ. ಇದು ನಿಜವಾಗಿಯೂ ಗಾಂಧಿ – ಅಂಬೇಡ್ಕರ್ ಬಯಸಿದ ಭಾರತ. ಹಿಂದೂ. ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್ಖರನ್ನೊಳಗೊಂಡ ಸ್ಪೃಶ್ಯ, ಅಸ್ಪೃಶ್ಯತೆಗಳ ಸೋಂಕಿಲ್ಲದೆ ಒಂದೇ ತಟ್ಟೆಯಲ್ಲಿ ಕುಂತು ಉಣ್ಣುವ ದೃಶ್ಯಗಳೂ ಇಲ್ಲಿ ಕಾಣಸಿಗುತ್ತವೆ. ಗಾಂಧಿಗೆ ಭಾರತವೆಂದಿಗೂ ನೇಷನ್ ಆಗಿ ಕಾಣಲಿಲ್ಲ. ಹಲವು ಧರ್ಮಗಳ, ಹಲವು ಆಚರಣೆಗಳ, ಹಲವು ಬಗೆಯ ಆಹಾರಗಳ, ಉಡುಪುಗಳ, ಹಲವು ಭಾಷೆಗಳ ವೈವಿಧ್ಯಮಯ ವಿಸ್ಮಯಕಾರಿ ಭಾರತ, ಒಂದು ನಾಗರಿಕತೆಯಾಗಿ ಗೋಚರಿಸಿತು. ಗಾಂಧಿಗೆ ಒಂದೇ ಜನಾಂಗ, ಒಂದೇ ಭಾಷೆಯ ನೇಷನ್ಗಳು, ಬಡಿದಾಡಿಕೊಂಡು ಹಾಳಾಗಿ ಹೋದ ಚರಿತ್ರೆ ಗೊತ್ತಿತ್ತು. ಹಾಗೇನೆ ಮಹಾಯುದ್ಧದಲ್ಲಿ ಜರ್ಮನ್ನರು ಬ್ರಿಟಿಷರನ್ನು ಸಾಯಿಸಿದರೆ, ಮತ್ತೊಂದು ಮಹಾಯುದ್ಧದಲ್ಲಿ ಅದೇ ಬ್ರಿಟಿಷರು, ಜರ್ಮನ್ನರನ್ನು ಕೊಂದರು. ಗಾಂಧಿಗೆ ಇಂತಹ ನೇಷನ್ ಬೇಕಾಗಿರಲಿಲ್ಲ. ಭಾರತ ಎಂಬ ನಾಗರಿಕತೆ ಬೇಕಾಗಿತ್ತು. ಅಂಥದೊಂದು ಪ್ರಯೋಗಕ್ಕೆ ಮತ್ತು ಅದಕೊಂದಿಷ್ಟು ಮಾರ್ಕ್ಸ್‌, ಲೋಹಿಯಾರ ತತ್ವಗಳನ್ನು ಸೇರಿಸಿಕೊಂಡು, ಅಂಬೇಡ್ಕರರ ಬೆಳಕಿನಲ್ಲಿ ಜನರ ಮುಂದೆ ಇಡುತ್ತಾ ಮೇ ಮೇಳ ಸಾಗಿದೆ. ಆಹಾರದ ರಾಜಕಾರಣದ ವಿಷಯವು ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಇಂಥ ಮೇಳಗಳಲ್ಲಿ ಮನುಷ್ಯನ ಆಹಾರ ವೈವಿಧ್ಯತೆಯನ್ನು  ತುಂಬಾ ಸಹಜವಾಗಿಯೆಂಬಂತೆ ಮಾಂಸಹಾರವನ್ನೂ ಪರಿಚಯಿಸಲಾಗಿದೆ. ಆ ಮೂಲಕ ತುಂಬಾ ಪ್ರ್ಯಾಕ್ಟಿಕಲ್ ಆದಂತಹ ಉತ್ತರಗಳನ್ನು ಆಗಾಗ ಕೊಡುತ್ತಾ ಬಂದಿದೆ. ಅಂದರೆ ಈ ಮೇ ಸಾಹಿತ್ಯ ಮೇಳಕ್ಕೆ ಆಗಮಿಸುವವರು ದೇವಸ್ಥಾನಕ್ಕೆ ಹೋಗುವವರು, ಹೋಗದವರು ಮತ್ತು ಮಸೀದಿಗೆ ಹೋಗಿ ನಮಾಜು ಮಾಡುವ ಮತ್ತು  ಮಾಡದವರು, ಹಾಗೂ ಚರ್ಚಿಗೆ ಹೋಗುವವರು, ಹೋಗದವರೂ ಇದ್ದಾರೆ. ಒಟ್ಟಾರೆ ದೇವರನ್ನು ನಂಬುವವರು, ನಂಬದವರೂ ಸೇರಿದಂತೆ, ಮನುಷ್ಯರಾಗಿ ಎಲ್ಲರೂ ಕೂಡುವ ಬಹುತ್ವ ಭಾರತ – ಗಾಂಧಿಯ ಮಾತಲ್ಲಿ ಹೇಳುವುದಾದರೆ ‘ನಾಗರಿಕತೆಯ ಮೇಳ’ವನ್ನು ಸಂಘಟಿಸಲಾಗುತ್ತಿದೆ. ಭಾರತಕ್ಕೆ ಬಹುತ್ವ ಹೇಗೆ ಶಕ್ತಿಯೋ, ಹಾಗೆಯೇ ಮೇ ಸಾಹಿತ್ಯ ಮೇಳಕ್ಕೂ ಸಹ ವೈವಿಧ್ಯತೆಯೇ ಶಕ್ತಿ.

ಮನುಷ್ಯ ಬೀದಿಯಲ್ಲಿ ಸಾಯುತ್ತಿರುವ ಹೊತ್ತಿನಲ್ಲಿ, ಧರ್ಮಗಳು ಗಹಗಹಿಸಿ ನಗುತ್ತಿರುವ ಹೊತ್ತಿನಲ್ಲಿ ಇದೇನಿದು ಸಾಹಿತ್ಯ ಮೇಳ ಎಂದು ಯಾರೂ ಮೂಗು ಮುರಿಯುವಂತಿಲ್ಲ. ಯಾಕೆಂದರೆ ಮೇ ಗೆಳೆಯರ ಬಳಗ ಸಾಹಿತ್ಯದಾಚೆಗೂ ಸಾಮಾಜಿಕವಾಗಿಯೂ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಬಳಗದ ಗೆಳೆಯರ ಪರಸ್ಪರ ವೈಯಕ್ತಿಕ ಸ್ಪಂದನೆಗಳೂ ಸಹ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಸಾಗಿದೆ. ಈ ಹಿಂದೆ ಗದಗ ಜಿಲ್ಲೆಯ ಹಳ್ಳಿಗುಡಿ ರೈತರ ಫಲವತ್ತಾದ ಭೂಮಿಯನ್ನು ಪೋಸ್ಕೋ ಕಂಪೆನಿಯ ಕಾರಖಾನೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸರ್ಕಾರದ ಕ್ರಮ ವಿರೋಧಿಸಿ, ಹೋರಾಟ ರೂಪಿಸಿ ಯಶಸ್ವಿಯಾಗಿದ್ದು ಈಗ ಇತಿಹಾಸ. ಭಾವಸಂಗಮ ವೇದಿಕೆಯ ಮೂಲಕ ಅಂತರ್‌ಜಾತೀಯ, ಅಂತರಧರ್ಮೀಯ ವಿವಾಹಗಳನ್ನು ಸಂವಿಧಾನದ ಸಾಕ್ಷಿಯಾಗಿ ಮಾಡುವುದರ ಮೂಲಕ ಅಂಬೇಡ್ಕರರ ಜಾತಿ ವಿನಾಶದ ಆಶಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಕಾಶನವೂ ಸಹ ಮೇ ಮೇಳದ ಅವಿಭಾಜ್ಯ ಅಂಗವೇ ಆಗಿರುವುದರಿಂದ ನೂರಾರು ವೈಚಾರಿಕ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ.

ಇಂಥದೊಂದು ಮೇಳದಲ್ಲಿ ಭಾಗವಹಿಸುವುದಲ್ಲದೆ, ತಮ್ಮದೇ ದುಡಿಮೆಯ ಅಲ್ಪ ಹಣವನ್ನೂ ಸಭೆಯ ಯಶಸ್ಸಿಗೆ ಹಾಕಿ, ತೃಪ್ತಿಯಿಂದ ಹೊರಡುವ ಪರಿಯೇ ಚೆಂದ. ನೆಚ್ಚಿನ ಬರಹಗಾರರು, ಸೇರಿದಂತೆ ಮೇಳದಲ್ಲಿ ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುವ ಪರಿಯೂ ಅನನ್ಯ. ಮೇಳವೊಂದರಲ್ಲಿ ಭಾಗವಹಿಸಿದ್ದ ಒಬ್ಬ ಬಡ ವಿಧವೆ ತನ್ನ ಒಂದು ತಿಂಗಳ ವಿಧವಾವೇತನವನ್ನು ಪ್ರತಿ ವರ್ಷ  ನೀಡುತ್ತಿರುವುದು ಮೇಳ ತಲುಪಿರುವ ಯಶಸ್ಸಿನ ಗ್ರಾಫ್‌ ಅನ್ನು ತೋರಿಸುತ್ತದೆ. ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ ಎಂಬ ಕುವೆಂಪುರವರ ಮಾತು ಅನುರಣಿಸುತ್ತಿರುವ ಹಾಗೆ ತೋರುತ್ತದೆ. ಯಾವ ಸರ್ಕಾರದ ಅನುದಾನಗಳಿಲ್ಲದೆ, ಕಾರ್ಪೋರೇಟ್ ಕಂಪೆನಿಗಳ ಸಹಕಾರವಿಲ್ಲದೆ, ಸಮಾನಮನಸ್ಕರನ್ನೇ ನೆಚ್ಚಿ ಮಾಡುವ ಮೇ ಸಾಹಿತ್ಯ ಮೇಳ ಹಲವರ ಗಮನ ಸೆಳೆದಿದೆ. ಮೇ ಮೇಳ ಮುಗಿದ ಹದಿನೈದು ದಿನಗಳಲ್ಲಿ ಖರ್ಚು ವೆಚ್ಚಗಳ ಕುರಿತು ಲೆಕ್ಕ ಒಪ್ಪಿಸುವ  ಸಂಘಟಕರ ಪಾರದರ್ಶಕ ನಡೆ ಕೂಡ  ಅನುಕರಣೀಯ.

ವಿವಿಧ ಚಿಂತಕರ ಗೋಷ್ಠಿಗಳು, ಚರ್ಚೆಗಳು, ಸಂವಾದಗಳು, ಜಗಳಗಳು, ತಿದ್ದುಪಡಿಗಳು, ಪುಸ್ತಕಗಳನ್ನೊಳಗೊಂಡ ಮನುಷ್ಯರ ಮಹಾಸಂಗಮವಾಗಿ, ಮೇ ಮೇಳ ನಾಳೆಗಳ ಭರವಸೆಯಂತೆ ತೋರುತ್ತದೆ. 

ಮೇ ಸಾಹಿತ್ಯ ಮೇಳವೊಂದರಲ್ಲಿ ಭಾಗವಹಿಸಿದ್ದ ಕೋಲಾರದ ಡಾ. ಬಿ. ಗಂಗಾಧರಮೂರ್ತಿ, ಆಯೋಜನೆಯ ಯಶಸ್ಸನ್ನು ಕಂಡು “ಇನ್ನು ತಾನು ನೆಮ್ಮದಿಯಿಂದ ಸಾಯಲು ಅಡ್ಡಿಯಿಲ್ಲ” ಎಂದು ಹೇಳಿ ಗಾಬರಿ ಮೂಡಿಸಿದ್ದರು! ಸದಾ ಭಾರತದ ಜನತಂತ್ರ ಮತ್ತು ಸಮಸಮಾಜದ ಕನಸು ಹೊತ್ತು ನಾಡು ಸುತ್ತುತ್ತಿದ್ದ ಗಂಗಾಧರಮೂರ್ತಿಯವರಿಗೆ, ಅಂದು ಮೇ ಮೇಳದಲ್ಲಿ ಸೇರಿದ್ದ ಯುವಚಿಂತಕರ ಸಮೂಹವನ್ನು ಕಂಡು, ಭಾರತ ಎಂಬ ಕ್ಯಾರವಾನ್ ಮುನ್ನಡೆಸಲು ಇನ್ನು ಯಾವ ಚಿಂತೆಯೂ ಇಲ್ಲ ಎಂಬರ್ಥದಲ್ಲಿ ಅಂದು, ಆ ಮಾತನ್ನು ಆಡಿದ್ದರು! ಅವರ ಮಾತು, ಈ ಹೊತ್ತು ರೂಪಕದಂತೆ ಕಾಣುತ್ತಿರುವುದೂ ಸೋಜಿಗದ ಸಂಗತಿಯೇನಲ್ಲ.

ಸರ್ವಜನಾಂಗದ ಶಾಂತಿಯ ತೋಟದ ಕನಸು ಕಂಡ ಕುವೆಂಪು, ಕಾರಂತ, ಕಟ್ಟಿಮನಿ, ನಿರಂಜನ, ತೇಜಸ್ವಿ, ಡಿ.ಆರ್. ನಾಗರಾಜ್, ಎಂ.ಡಿ. ನಂಜುಂಡಸ್ವಾಮಿ, ಲಂಕೇಶ್, ಅನಂತಮೂರ್ತಿ, ಕಲಬುರ್ಗಿ, ಚಂಪಾ, ರಾಮದಾಸರೂ ಇದ್ದಿದ್ದರೆ ಈ ಹೊತ್ತು ಮೇ ಬಳಗದಲ್ಲಿ ಕ್ರಿಯಾಶೀಲವಾಗಿ ಇರುತ್ತಿದ್ದರು. ಅವರ ಚಿಂತನೆಯ ಬೆಳಕಿನಲ್ಲಿ ಮೇ ಮೇಳ ಸದ್ದಿಲ್ಲದೆ ಪಸರಿಸುತ್ತಿದೆ. ಸೌಹಾರ್ದ ಭಾರತದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯನೂ ನಿಸ್ಸಂಶಯವಾಗಿ ಭಾಗವಹಿಸಬಹುದಾದ ಅಪ್ಪಟ ಚಿಂತನ ಮೇಳ – ಮೇ ಸಾಹಿತ್ಯ ಮೇಳ. ಜೊತೆಗೆ ಇದೊಂದು ‘ಸಮ್ಮೇಳನ’ ಆಗದಂತೆ ‘ಜನಸಾಮಾನ್ಯರ ಮೇಳ’ ಆಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಭಾಗವಹಿಸುವ ಪ್ರಜ್ಞಾವಂತರ ಮೇಲಿದೆ. ಇಂಥದನ್ನು ಆಗುಮಾಡಿದ ಲಡಾಯಿ ಪ್ರಕಾಶನದ ಬಸೂ ಮತ್ತವರ ಶ್ರಮಿಕ ತಂಡಕ್ಕೆ ನಾವೆಲ್ಲರೂ ಕೃತಜ್ಞರಾಗಿರಬೇಕಾಗುತ್ತದೆ.

‍ಲೇಖಕರು avadhi

May 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: