ಮೇಟಿ ಮಲ್ಲಿಕಾರ್ಜುನ
—–
ಭಾಗ – 01
ಮುನ್ನೋಟ :
ಪ್ರಸ್ತುತ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ದಲಿತ ಚಳುವಳಿಯ ತಾತ್ವಿಕ ವಿನ್ಯಾಸವನ್ನು ಕುರಿತು ಚರ್ಚಿಸುವುದು ಸೈದ್ಧಾಂತಿಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಒಂದು ಸವಾಲಿನ ಕೆಲಸವೇ ಸರಿ. ಏಕೆಂದರೆ ಜಾತಿ ಮತ್ತು ಧರ್ಮ ರಾಜಕಾರಣದ ಮೇಲಾಟದ ತೀವ್ರತೆ ಹಿಂದೆಂದಿಗಿಂತಲೂ ಇವತ್ತು ಹೆಚ್ಚು ಬಲಗೊಳ್ಳುತ್ತಿದೆ. ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ನಿಲುವುಗಳ ನಡುವಣ ಆಶಯಗಳಲ್ಲಿ ಕಂದಕ ಮತ್ತಷ್ಟು ಬಿಗಡಾಯಿಸುತ್ತಲೇ ಮುಂದುವರೆದಿದೆ. ಶಿಕ್ಷಣವು ಸಮೂಹಗಳ ಏಳ್ಗೆಯನ್ನು ರೂಪಿಸುವುದಕ್ಕೆ ಬೇಕಾದ ತಳಹದಿಯನ್ನು ಹಾಕುವ ಬದಲಾಗಿ ಧರ್ಮಾಂಧತೆ, ಸಾಮಾಜಿಕ ಅಪಮಾನ, ಸಾಂಸ್ಕೃತಿಕ ಬರ್ಭರತೆ ಹಾಗೂ ಮೇಲು ಜಾತಿಗಳ ರಾಜಕೀಯ ಯಜಮಾನಿಕೆಯ ಯಥಾಸ್ಥಿತಿಯನ್ನು ಕಾಪಾಡುವ ಅಸ್ತ್ರವಾಗಿ ಮಾರ್ಪಟ್ಟಿದೆ. ದಲಿತ ಮತ್ತು ದಮನಿತ ಸಮುದಾಯಗಳ ಬಿಡುಗಡೆಯ ನೆಲೆಯಾಗಿ ಒದಗಿ ಬರಬೇಕಿದ್ದ ಶಿಕ್ಷಣವು ಸಾಮಾಜಿಕ ಹಾಗೂ ರಾಜಕೀಯ ದಬ್ಬಾಳಿಕೆಯನ್ನು ಮೈಗೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತಿದೆ. ಅಂದರೆ ಸಾಮಾಜಿಕವಾಗಿ ತಾನು ಹೇಗೆ ಭಿನ್ನ ಮತ್ತು ವಿಶಿಷ್ಟ ಎನ್ನುವ ತರತಮ ಭಾವವನ್ನು ಶಿಕ್ಷಣವು ನಮ್ಮಲ್ಲಿ ವೈಚಾರಿಕ ನೆಲೆಯಲ್ಲಿ ಒಡಮೂಡಿಸುವ ಬದಲಾಗಿ ಅಂತಹದೊಂದು ತರತಮ ಭಾವವು ಸಹಜ ಮತ್ತು ನಿಸರ್ಗದತ್ತ ಆಗಿರುವಂತಹ ಮೌಲ್ಯವಾಗಿದೆ ಎಂಬ ಹುಸಿ ನಂಬಿಕೆಯನ್ನು ನಿರಂತರಗೊಳಿಸುವ ಆಯುಧವಾಗಿ ನೆಲೆನಿಂತಿದೆ. ಇಂತಹ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಶೈಕ್ಷಣಿಕ ಬಿಕ್ಕಟ್ಟುಗಳು ತಲೆಯೆತ್ತಿರುವ ಈ ಹೊತ್ತಿನಲ್ಲಿ ದಲಿತ ಚಳುವಳಿಯ ತಾತ್ವಿಕತೆಯ ವಿನ್ಯಾಸವನ್ನು ಹೇಗೆ ರೂಪಿಸಿಬೇಕು ಅನ್ನುವ ಸವಾಲನ್ನು ಈಗ ಅಡ್ರೆಸ್ ಮಾಡುವ ಜರೂರಿದೆ.
ದಲಿತರನ್ನು ಹಿಂಸಿಸುವ, ಅಪಮಾನಿಸುವ ಒಟ್ಟಾರೆ ದಲಿತರನ್ನು ಶೋಷಿಸುವ ಬಗೆಗಳನ್ನು ಕೇವಲ ಅಮಾನವೀಯ ನಿಲುವುಗಳು ಎಂದು ಮಾತ್ರ ಹೇಳಿದರೆ ಸಾಲದು. ಏಕೆಂದರೆ, ಇವತ್ತು ದಲಿತ ಸಮೂಹಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಭಿನ್ನ ಮಾದರಿಗಳನ್ನು ಗಮನಿಸಿದರೆ, ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತ ದೇಶದಲ್ಲಿ ಇಂತಹದೊಂದು ಘೋರ ಸಾಮಾಜಿಕ-ಸಾಂಸ್ಕೃತಿಕ ವಾತವರಣ ಹೇಗೆ ಮೈದೋರಿತು ಅನ್ನುವ ಸಂಗತಿಯೇ ನಮ್ಮನ್ನು ಇನ್ನಷ್ಟು ಮತಿಭ್ರಮಣೆಗೆ ಈಡುಮಾಡುತ್ತದೆ. ಕುಡಿಯುವ ನೀರಿಗೆ ಮಲ ಎರಚುವ, ದಲಿತ ವ್ಯಕ್ತಿಗಳ ಮೇಲೆ ಮೂತ್ರ ಹೊಯ್ಯುವ ಕೃತ್ಯಗಳು ಒಂದುಕಡೆಯಾದರೆ ಕುದುರೆ ಅಥವಾ ಬೈಕುಗಳ ಮೇಲೆ ಸವಾರಿ ಇಲ್ಲವೇ ಮೆರವಣಿಗೆ ಮಾಡುವುದೇ ತಪ್ಪು ಮತ್ತು ಅಪರಾಧವೆಂದು ದಲಿತರನ್ನು ಅಮಾನುಷವಾಗಿ ಕೊಲೆ ಮಾಡುವುದು ಮತ್ತೊಂದುಕಡೆ ನಿರಂತರವಾಗಿ ನಡೆಯುತ್ತಿದೆ.
ಭಾಗ – 02
ನಮ್ಮ ಬೆನ್ನಿಗಿರುವ ತಾತ್ವಿಕತೆಯ ವಿನ್ಯಾಸಗಳು:
ದಲಿತ ಚಳುವಳಿಯನ್ನು ರೂಪಿಸಲು ಬೇಕಾದ ತಾತ್ವಿಕ ಕಸುವು ಶತಮಾನಗಳಿಂದಲೂ ನಮ್ಮ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳಲ್ಲಿ ಮೈದೋರಿರುತ್ತದೆ. ಹೀಗೆ ವಿಕಾಸಗೊಂಡ ಚಿಂತನೆ ಹಾಗೂ ತಾತ್ವಿಕತೆಯು ಸಾಂದ್ರಗೊಂಡದ್ದು ಜ್ಯೋತಿರಾವ್ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವೈಚಾರಿಕ ಚಿಂತನೆಗಳಲ್ಲಿ ಅನ್ನುವುದನ್ನು ನಾವು ಈಗಾಗಲೇ ಮನಗಂಡಿರುತ್ತೇವೆ. ಹಾಗಾಗಿ ಈ ಇಬ್ಬರೂ ದಾರ್ಶನಿಕರ ವಿಚಾರಗಳ ಒಟ್ಟು ಆಶಯಗಳನ್ನು ಇಲ್ಲಿ ಮಂಡಿಸುವುದರ ಮೂಲಕ ದಲಿತ ಚಳುವಳಿಗೆ ದಕ್ಕಿದ ತಾತ್ವಿಕ ವಿನ್ಯಾಸಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ.
- ಜ್ಯೋತಿರಾವ್ ಫುಲೆ: ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು.
ಜ್ಯೋತಿರಾವ್ ಫುಲೆಯವರ ಚಿಂತನೆಗಳನ್ನು ಸಬಾಲ್ಟರ್ನ್ ಓದು ಕಣ್ನೋಟದಲ್ಲಿಟ್ಟು ನೋಡುವ ಕೆಲವು ಅಧ್ಯಯನಗಳು ಈಗಾಗಲೇ ಬಂದಿರುತ್ತವೆ. ಆದರೆ ಫುಲೆಯವರ ಚಿಂತನೆಯ ಸಾಧ್ಯತೆಗಳನ್ನು ಗುರುತಿಸುವುದಕ್ಕಿಂತ, ಅವುಗಳಲ್ಲಿ ಅಡಗಿರುವ ಎಪಿಸ್ಟಮಾಲಜಿಕಲ್ ಬಿಕ್ಕಟ್ಟುಗಳನ್ನು ಹಾಗೂ ತಾತ್ವಿಕ ಸಮಸ್ಯೆಗಳನ್ನು ಬಿಡಿಸಿ ನೋಡುವ ಪ್ರಯತ್ನವನ್ನು ಈ ಅಧ್ಯಯನಗಳಲ್ಲಿ ಮಾಡಲಾಗಿದೆ. ಹಾಗೂ ವಸಾಹತು ಪ್ರಭುತ್ವಕ್ಕೆ ಫುಲೆಯವರು ನಿಷ್ಠರಾಗಿದ್ದರು ಎಂಬ ಆರೋಪವನ್ನು ಇವರ ಮೇಲೆ ಹೇರಲಾಗಿದೆ. ಅದೇನೆಯಿರಲಿ, ‘ಬ್ರಾಹ್ಮಣಾಚ ಕಸಬ್ (1869), ‘ಗುಲಾಮಗಿರಿ (1873) ಮೊದಲಾದ ತಮ್ಮ ಬರಹಗಳಲ್ಲಿ ಫುಲೆಯವರು, ‘ಶೂದ್ರ-ಅತಿಶೂದ್ರ’ ಪ್ರಜ್ಞೆಯನ್ನು ಎಚ್ಚರಗೊಳಿಸುವ ಅತ್ಯಂತ ಮಹತ್ವದ ಕೆಲಸವನ್ನು ಇವರು ಮಾಡಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಬಾಲ್ಟರ್ನ್ ಓದಿನ ಪ್ರಾಥಮಿಕ ಕಣ್ನೋಟವೇ ಸಮೂಹ ಮತ್ತು ವ್ಯಕ್ತಿಪ್ರಜ್ಞೆಯನ್ನು ಜಾಗ್ರತಗೊಳಿಸುವುದು ಮತ್ತು ಆ ಮೂಲಕ ಅವರಲ್ಲಿ ಅವರವರ ಅಸ್ಮಿತೆ, ಅಸ್ತಿತ್ವ ಹಾಗೂ ರಾಜಕೀಯ ನಿಲುವುಗಳನ್ನು ಗುರುತಿಸುವ ಬಗೆಯಾಗಿರುತ್ತದೆ. ಏಕೆಂದರೆ, ಸಬಾಲ್ಟರ್ನ್ ಸಮೂಹಗಳೆಂದು ಇವತ್ತು ನಾವು ಗುರುತಿಸುವ ಬಹುತೇಕ ಸಮೂಹಗಳು ಪ್ರೀ-ಪೊಲಿಟಿಕಲ್ ನೆಲೆಯಲ್ಲಿರುತ್ತವೆ. ಇಂತಹ ನಿಲುವುಗಳನ್ನು ಪಲ್ಲಟಗೊಳಿಸುವ ಅತ್ಯಂತ ಮಹತ್ವದ ಕೆಲಸವು ಈ ಸಬಾಲ್ಟರ್ನ್ ಪ್ರಜ್ಞೆಯನ್ನು ಎಚ್ಚರಗೊಳಿಸುವ ಮೂಲಕ ನೆರವೇರುತ್ತವೆ ಎಂಬುದು ಗಮನಾರ್ಹ. ಇಂತಹವೊಂದು ಮಹತ್ವದ ಕೆಲಸವನ್ನು ಫುಲೆಯವರು ಮಾಡಿರುತ್ತಾರೆ ಅನ್ನುವುದು ವಿಶೇಷ.
19ನೇ ಶತಮಾನದ ಕಾಲ ಮತ್ತು ಚಾರಿತ್ರಿಕ ನಿಲುವುಗಳು ಕೇವಲ ‘ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತದಲ್ಲಿದ್ದವು. ಈ ನಿಲುವು ಇವತ್ತಿಗೂ ಬದಲಾಗಿರುವುದಿಲ್ಲ. ಇದೊಂದು ತಪ್ಪು ನಡೆಯೆಂದು ನಾನು ವಾದಿಸಲಾರೆ, ಆದರೆ ರಾಷ್ಟ್ರೀಯತೆಯ ಕಲ್ಪನೆಯು ಈ ದೇಶದ ಎಲ್ಲ ಸಮೂಹಗಳನ್ನು ಒಳ್ಗೊಂಡಿರುವ ಬಗೆಯಾಗಿ ಇವತ್ತಿಗೂ ಮುಂದೆ ಬರಲಿಲ್ಲ. ಹೊರತಾಗಿ ತಾರತಮ್ಯ ಮತ್ತು ಅಸಮಾನ ರಚನೆಗಳನ್ನೇ ನಿರಂತರಗೊಳಿಸುವ ಬಗೆಯಾಗಿ, ಇವತ್ತಿಗೂ ಇದು ಮುಂದುವರೆದಿದೆ. ಹಾಗಾಗಿ ಫುಲೆಯವರ ಚಿಂತನೆಗಳು ಸಬಾಲ್ಟರ್ನ್ ಅಧ್ಯಯನ ಸನ್ನಿವೇಶದಲ್ಲಿ ಮಹತ್ವವನ್ನು ಪಡೆಯುತ್ತವೆ. ಪರಿಣಾಮವಾಗಿ, ಫುಲೆಯವರ ತಿಳುವಳಿಕೆಗಳಲ್ಲಿ, ಈಗಾಗಲೇ ಚರಿತ್ರೆ, ಸಂಸ್ಕೃತಿ ಚಿಂತನೆಗಳಲ್ಲಿ ನೆಲೆನಿಂತಿರುವ ಏಕಾಕೃತಿಯ ನಿಲುವುಗಳಿಗೆ ಬದಲಾಗಿ, ಈ ದೇಶದ ಬಹುತ್ವದ ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸಗಳನ್ನು ಗುರುತಿಸುವ ಇರಾದೆಯನ್ನು ಕಾಣುತ್ತೇವೆ. ಅಂದರೆ ಶೂದ್ರ, ಅತಿಶೂದ್ರ ಪ್ರಜ್ಞೆಯ ಮೂಲಕ ಚರಿತ್ರೆಯೊಳಗೆ ಹುದುಗಿರುವ ಹಿಂಸೆ ಮತ್ತು ಯಜಮಾನಿಕೆಯ ವಿನ್ಯಾಸಗಳನ್ನು ಇವರು ಗುರುತಿಸಿರುತ್ತಾರೆ. ದಿಟ, ಫುಲೆಯವರು ತಳ/ದಲಿತ/ಶೂದ್ರ ಸಮೂಹಗಳಲ್ಲಿ ಸಬಾಲ್ಟರ್ನ್ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಫಲವಾಗಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತದೆ. ವಸಾಹತು ಪ್ರಭುತ್ವದ ಪ್ರಾಬಲ್ಯ ಮತ್ತು ಅಧಿಕಾರದ ಹಂಗಿನಲ್ಲಿದ್ದ ಸನ್ನಿವೇಶದಲ್ಲಿ ಫುಲೆಯವರು ರೂಪಿಸಿದ ಈ ಚಿಂತನೆಗಳಿಗೆ ಬಹದೊಡ್ಡ ವ್ಯಾಪ್ತಿಯಿದೆ. ಏಕೆಂದರೆ ಚಾರಿತ್ರಿಕ ವಾಸ್ತವಗಳು ಕೇವಲ ರಾಜಕೀಯವಾಗಿ ಮಾತ್ರ ಒಗ್ಗೂಡಿರುತ್ತವೆ ಹಾಗೂ ಪಳಗಿರುತ್ತವೆ ಎಂಬ ದಿಟವನ್ನು ನಾವು ಗಮನಿಸಬೇಕು. ‘ಸತ್ಯಶೋಧಕ ಸಮಾಜ’ದ ಮೂಲಕ ನಮ್ಮ ಬಹು ಸಮೂಹಗಳ ಸಾಮಾಜಿಕ ವಿನ್ಯಾಸಗಳಲ್ಲಿ ಹುದುಗಿರುವ ಪ್ರಾಬಲ್ಯ ಮತ್ತು ಅಧೀನತೆಯ ಸಂಬಂಧಗಳ ಮೂಲಗಳನ್ನು ಹುಡುಕುವ ಮಹತ್ವದ ಕೆಲಸವನ್ನೂ ಇವರು ಕೈಗೊಂಡಿದ್ದರು. ಎರಡು ಬಗೆಯಲ್ಲಿ ಸಮೂಹಗಳ ಪ್ರಜ್ಞೆಯನ್ನು ಎಚ್ಚರಗೊಳಿಸುವ ನಿಲುವುಗಳನ್ನು ಸತ್ಯಶೋಧಕ ಸಮಾಜದ ಮೂಲಕ ನೆರವೇರಿಸಲಾಗುತಿತ್ತು. ಒಂದು ಶಿಕ್ಷಣ ಮತ್ತೊಂದು ಸಾಮಾಜಿಕ-ರಾಜಕೀಯ ಪ್ರಜ್ಞೆ ಎಂದು ಈ ನಿಲುವುಗಳನ್ನು ಗುರುತಿಸಬಹುದು. ಈ ಎರಡೂ ನಿಲುವುಗಳು ಸಮೂಹಗಳ ಪ್ರತಿನಿಧೀಕರಣದ ಅಯಾಮಗಳನ್ನು ಖಚಿತಗೊಳಿಸುವುದಕ್ಕೇ ಅತ್ಯಂತ ಒತ್ತಾಸೆಯಾಗಿದ್ದವು. ರಾಜಕೀಯ-ಸಾಮಾಜಿಕ ಹಾಗೂ ನಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯವಾದ ಬಂಡಾಯದ ಮಾದರಿಗಳು ಫುಲೆಯವರ ಚಿಂತನೆಗಳಲ್ಲಿ ನಿಚ್ಚಳವಾಗಿ ಮೂಡಿಬಂದಿರುತ್ತವೆ.

ಅಂಬೇಡ್ಕರ್ ಅವರ ಪ್ರಭಾವ ಹಾಗೂ ಆಲೋಚನೆಗಳ ಪರಿಣಾಮವಾಗಿ, ಭಾರತ/ ಕರ್ನಾಟಕದಲ್ಲಿ ಪ್ರತಿರೋಧದ ಮಾದರಿಗಳನ್ನು ಮರು ವಿನ್ಯಾಸಗೊಳಿಸುವ ನಡೆಗಳು ಅತ್ಯಂತ ತೀವ್ರವಾಗಿ ನಡೆದಿರುವುದನ್ನು ನಾವು ಕಾಣುತ್ತೇವೆ. ದಿಟ, ಕರ್ನಾಟಕದ ಸಾಹಿತ್ಯ ಚರಿತ್ರೆಗಳನ್ನು ಗಮನಿಸಿದರೆ, ಹಲವು ಬಗೆಯ ಪ್ರತಿರೋಧದ ಮಾದರಿಗಳನ್ನು ನಾವು ಗುರುತಿಸುತ್ತೇವೆ. ಆದರೆ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿಯೂ ತಳ-ದಲಿತ-ಶೂದ್ರ ಸಮೂಹಗಳು ಯಾವ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತವೆ ಎಂಬುದನ್ನು ಮನಗಂಡಾಗ, ಅಂಬೇಡ್ಕರ್ ಮತ್ತು ಫುಲೆಯವರಂತವರು ರೂಪಿಸಿದ ಚಿಂತನೆಯ ಮಾದರಿಗಳು, ನಮ್ಮ ಸದ್ಯದ ಚರಿತ್ರೆ, ರಾಜಕಾರಣಗಳು ರೂಪಿಸುವ ಏಕಾಕೃತಿಯ ಮಾದರಿಗಳಿಗೆ ಪ್ರತಿರೋಧವನ್ನು ಒಡ್ಡುವಲ್ಲಿ ಸಂಘಟನೆಗಳು ಹೇಗೆ ಬೆಳೆದುಬಂದವು ಎಂಬುದನ್ನು ಕುರಿತು ಯೋಚಿಸುವ ಜರೂರಿದೆ. ಇಲ್ಲಿ ಇವತ್ತು ನಾವು ಚರ್ಚಿಸುತ್ತಿರುವ ಪ್ರತಿರೋಧದ ಈ ಮಾದರಿಗಳು ಸಾಮಾಜಿಕ ಮತ್ತು ರಾಜಕೀಯ ನೆಲೆಯಿಂದ ಪ್ರೇರಣೆಗಳನ್ನು ಪಡೆದಿರುತ್ತವೆ. ಸಾಮಾಜಿಕ ಪ್ರೇರಣೆಗಳು ರಾಜಕೀಯ ನೆಲೆಯಿಂದ ಪ್ರತಿರೋಧದ ಮಾದರಿಗಳನ್ನು ರೂಪಿಸುವುದಕ್ಕೆ ಕಾರಣವಾಗಿರುವಂತೆ, ಹಾಗೇನೇ ರಾಜಕೀಯ ಪ್ರೇರಣೆಗಳು ಸಾಮಾಜಿಕವಾಗಿ ಸಂಘಟನೆಗೊಳ್ಳಲೂ ಕಾರಣವಾಗಿರುತ್ತವೆ. ಅಂದರೆ, ಇವುಗಳ ನಡುವೆ ಅದಲು-ಬದಲು ಮಾಡಿಯೂ ನೋಡುವ ಸಾಧ್ಯತೆ ಇದೆ ಎಂಬಂಶವನ್ನು ನಾವಿಲ್ಲಿ ಮನಗಾಣಬೇಕಿದೆ.
ಈ ದೆಸೆಯಲ್ಲಿ ಪ್ರತಿರೋಧದ ಮಾದರಿಗಳನ್ನು ಚರ್ಚಿಸುವುದಾದರೆ, 1970ರ ದಶಕದಲ್ಲಿ, ಕರ್ನಾಟಕದಲ್ಲಿ ಮುಂಚೂಣಿಗೆ ಬಂದಂತಹ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ಬಿ, ಕೃಷ್ಣಪ್ಪ,) ಹಾಗೂ ‘ಬೂಸಾ ಚಳುವಳಿ’ಗಳ (ಬಿ.ಬಸವಲಿಂಗಪ್ಪನವರು) ಪರಿಣಾಮಗಳನ್ನು ಕುರಿತು ಇವತ್ತು ಯೋಚಿಸಿಬೇಕಿದೆ. ಆದರೆ ಇವುಗಳ ಬಗೆಗೆ ಇವತ್ತು ನಾವು ಹಲವು ರೀತಿಯ ಫಲಿತಗಳನ್ನು ಕಾಣುತ್ತೇವೆ. ಆದರೆ ಈ ಸಂಘಟನೆಗಳು ಹುಟ್ಟು ಹಾಕಿರುವ ವೈಚಾರಿಕ ವಿನ್ಯಾಸಗಳು ಮಾತ್ರ ಹಲವು ಸಾಮಾಜಿಕ-ರಾಜಕೀಯ ಪಲ್ಲಟಗಳಿಗೆ ಕಾರಣವಾಗಿರುತ್ತವೆ. ಅಂದ ತಕ್ಷಣವೇ, ಇವತ್ತು ಈ ಸಂಘಟನೆಯೊಳಗೆ ಏರ್ಪಟ್ಟಿರುವ ಬಿರುಕುಗಳನ್ನು ಮಾತ್ರ ದೊಡ್ಡದಾಗಿ ಬೆಟ್ಟುಮಾಡಿ ತೋರಿಸುವ ಧೋರಣೆಗಳನ್ನು ನೋಡುತ್ತೇವೆ. ಆದರೆ ಈ ಸಂಘಟನೆಗಳು ಉಂಟುಮಾಡಿರುವ ಪರಿಣಾಮಗಳು ನಗಣ್ಯವಾಗುತ್ತವೆ ಮತ್ತು ಚಾರಿತ್ರಿಕವಾಗಿ ಸೋಲೊಪ್ಪುವ ನೆಲೆಗಳಿಗೆ ಇವುಗಳನ್ನು ಗುರಿಮಾಡುತ್ತೇವೆ. ಇದಕ್ಕೆ ಎರಡು ಬಗೆಯ ಕಾರಣಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಇಂತಹ ಸಂಘಟನೆಗಳ ತಾತ್ವಿಕತೆ ಮತ್ತು ಪರಿಕರಗಳ ವಿನ್ಯಾಸದಲ್ಲಿಯೇ ಲೋಪಗಳಿವೆ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣವು, ಈ ಸಂಘಟನೆಯೊಳಗೆ ಸೇರಿರುವ ಜಾತಿ ಮತ್ತು ಒಳಪಂಗಡಗಳ ನಡುವಣ ಅಧಿಕಾರ ಸಂಬಂಧದ ನೆಲೆಗಳು ಎಂದೇ ಹೇಳಬಹುದಾಗಿದೆ. ಏಕೆಂದರೆ, ರಾಜಕೀಯ ಅಧಿಕಾರದ ಮೇಲಾಟದಲ್ಲಿ ಎದುರಾಗುವ ಪರಿಣಾಮಗಳು ಎಂತಹವು ಎಂಬುದನ್ನು ಇವತ್ತು ಊಹಿಸುವುದಕ್ಕೂ ಕಷ್ಟ. ಇವತ್ತು ಇಡೀ ಭಾರತದುದ್ದಕ್ಕೂ ಕಾಣುವ ರಾಜಕೀಯ ಧೃವೀಕರಣದ ಮಾದರಿಗಳನ್ನು ನೋಡಿದರೆ, ಈ ಕಷ್ಟದ ಹಿಂದಿನ ನೆಲೆಗಳು ನಮಗೆ ನಿಚ್ಚಳವಾಗಿ ತೋರುತ್ತವೆ.
ಯಾವ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ನಿಲುವುಗಳನ್ನು ವಿರೋಧಿಸಲೆಂದು ಈ ಸಂಘಟನೆಗಳು ಹುಟ್ಟಿಕೊಂಡಿದ್ದವೋ ಅದನ್ನೆಲ್ಲ ಮರೆತು ಅಧಿಕಾರದ ಅಧೀನತೆಗೆ ಒಳಗಾಗುತ್ತಿವೆ. ಅಂದರೆ ಇದು ದಲಿತ ಮತ್ತು ಹಿಂದುಳಿದ ಸಮೂಹಗಳಿಗೆ ಅಧಿಕಾರವನ್ನು ನಿರಾಕರಿಸುವುದಲ್ಲ. ಬದಲಾಗಿ, ಯಾರು ಇದುವರೆಗೂ ಅಧಿಕಾರ ಕೇಂದ್ರಗಳಲ್ಲಿ ನೆಲೆಗೊಂಡು, ತಳ-ದಲಿತ-ಶೂದ್ರ ಸಮೂಹಗಳನ್ನು ಶೋಷಣೆಗೆ ಈಡು ಮಾಡಿದ್ದವೋ, ಅಂತಹ ಸಮೂಹಗಳು ರೂಪಿಸುವ ರಾಜಕೀಯ ಅಧಿಕಾರಕ್ಕೆ ಈ ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಅಸ್ತ್ರಗಳಾಗಿ ಬಳಕೆಯಾಗುತ್ತವೆ. ಇವರಿಗೆ ಅಧಿಕಾರವೆಂಬುದು ಮಾಧ್ಯಮವಾಗಬೇಕು ಮತ್ತು ಸಾಮಾಜಿಕ ಸ್ವಾಯತ್ತತೆಯನ್ನು ತಂದುಕೊಡುವ ಸಾಮಾಜಿಕ ವಿನ್ಯಾಸವಾಗಬೇಕು. ಈ ಕಾರಣದಿಂದ ಈ ಎಲ್ಲ ಸಬಾಲ್ಟರ್ನ್ ಸಮೂಹಗಳಿಗೆ ಇವತ್ತು ಬೇಕಾಗಿರುವುದು ಹೊಸ ಸಾಮಾಜಿಕ ವ್ಯವಸ್ಥೆಯೇ ಹೊರತು, ಕೇವಲ ಅಧಿಕಾರವಲ್ಲ. ಅಂದರೆ, ಸಾಮಾಜಿಕ ರಚನೆಯಲ್ಲಿಯೇ ಶೋಷಣೆಯ ಮಾದರಿಗಳನ್ನು ಅಡಕಗೊಳಿಸುವಂತೆ, ಈ ಹೊಸ ಸಾಮಾಜಿಕ ವ್ಯವಸ್ಥೆಯಲ್ಲಿಯೇ, ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಹಸನಾಗಿ ಬದುಕುವುದಕ್ಕೆ ಬೇಕಾದ ಅಧಿಕಾರ ಮತ್ತು ಜ್ಞಾನಶಿಸ್ತುಗಳನ್ನು ನೆಲೆಗೊಳಿಸುವ ಅಗತ್ಯವಿದೆ. ಈಗಾಗಲೇ ಹೇಳಿದಂತೆ, ಚರಿತ್ರೆ, ಮೀಮಾಂಸೆಗಳಂತಹ ಜ್ಞಾನಶಿಸ್ತುಗಳನ್ನು ರೂಪಿಸುವ ನಿಟ್ಟಿನಲ್ಲಿ ಹೋರಾಟಗಳು ಇಲ್ಲವೇ ಚಳವಳಿಗಳು ತಲೆಯೆತ್ತಬೇಕಿದೆ. ಇವುಗಳು ಕೇವಲ ರಾಜಕೀಯ ಸರಿತನ ಇಲ್ಲವೇ ಕಾನೂನುಗಳನ್ನು ಜಾರಿಗೊಳಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುವುದು ಸರಿಯಾದ ನಿಲುವಲ್ಲ.
ಅದೇನೇ ಇರಲಿ, ದಲಿತ ಸಂಘರ್ಷ ಸಮಿತಿ ಮತ್ತು ಬೂಸಾ ಚಳುವಳಿಗಳು ಸಾಂಸ್ಕೃತಿಕ ಮೀಮಾಂಸೆ, ಚರಿತ್ರೆ, ರಾಜಕೀಯ ತತ್ವಗಳ ಮೂಲಭೂತವಾದವನ್ನು ಪಲ್ಲಟಗೊಳಿಸುವ ಕೆಲಸವನ್ನು ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಇವುಗಳು ಬೌದ್ಧಿಕ ಸ್ವಾಯತ್ತತೆಯನ್ನು ರೂಪಿಸುವಷ್ಟು ಬಲವಾಗಿ ಬೆಳೆದಿಲ್ಲವೆಂಬುದು ಕೂಡ ಅಷ್ಟೇ ದಿಟವಾದ ಸಂಗತಿಯಾಗಿದೆ. ಈಚೆಗೆ ನಡೆದ ಚಲೋ-ಉಡುಪಿಯಂತಹ ಹೋರಾಟಗಳೂ ಒಂದು ರಾಜಕೀಯ ಪರಿಣಾಮವನ್ನು ಬೀರಿರುತ್ತವೆ. ಆದರೆ ಈ ಪರಿಣಾಮವು ಕೇವಲ ಒಂದು ಚಾರಿತ್ರಕ ಬೆಳವಣಿಗೆಯಾಗಿ ಇರುತ್ತದೆಯೇ ಹೊರತು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಮತ್ತು ನಂಬಿಕೆಗಳನ್ನು ಪಲ್ಲಟಗೊಳಿಸುವಲ್ಲಿ ಅತ್ಯಂತ ಪ್ರಬಲವಾದ ವಿದ್ಯಮಾನವಾಗುವುದಿಲ್ಲ. ಏಕೆಂದರೆ ತಳ-ದಲಿತ-ಶೂದ್ರ-ಅಲ್ಪಸಂಖ್ಯಾತ ಸಮೂಹಗಳನ್ನು ಒಟ್ಟಾಗಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯನ್ನಾಗಿ ಪ್ರದರ್ಶಿಸುವುದಕ್ಕೆ ಬೇಕಾದ ಸಿದ್ಧತೆಗಳು ನಮ್ಮಲ್ಲಿ ಇನ್ನೂ ಸಜ್ಜುಗೊಂಡಿಲ್ಲ. ಇಂತಹ ವ್ಯವಸ್ಥೆಯು ಎರಡು ಬಗೆಯಲ್ಲಿ ನೆರವೇರುತ್ತದೆ. ಒಂದು ಬೌದ್ಧಿಕ ನೆಲೆಯಿಂದ ಮತ್ತೊಂದು ಸಾಮಾಜಿಕ-ರಾಜಕೀಯ ನೆಲೆಯಿಂದ ಎಂದು ಹೇಳಬಹುದು. ಇವೆರಡೂ ಪೂರಕವಾಗಿ ನಡೆಯುವ ಅವಶ್ಯಕತೆ ಇರುತ್ತದೆ. ಕೇವಲ ಬೌದ್ಧಿಕ ಇಲ್ಲವೇ ರಾಜಕೀಯ ಹೋರಾಟಗಳಿಂದ ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳನ್ನು ರೂಪಾಂತರಿಸುವ ಕೆಲಸವು ನಡೆಯಲಾರದು. ಬೌದ್ಧಿಕತೆ ಎಂಬುದು ಪರಮಸತ್ಯವಲ್ಲ ದಿಟ. ಆದರೆ ಬೌದ್ಧಿಕ ಕ್ರಿಯಾಶೀಲತೆಯು ನಮ್ಮ ಪ್ರಜ್ಞೆಯನ್ನು ಎಚ್ಚರಿಸಬಲ್ಲದು ಅನ್ನುವುದು ಮಾತ್ರ ದಿಟ. ಆದರೆ ಕರ್ನಾಟಕ ಇಲ್ಲವೇ ಒಟ್ಟಾರೆ ಭಾರತದಲ್ಲಿ ‘ನಿನ್ನೆಗಳ ಮರುರಚನೆ’ಯಲ್ಲಿ ಹುದುಗಿರುವ ತಾತ್ವಿಕ ಲೋಪಗಳಿಂದ, ಈ ಬೌದ್ಧಿಕತೆ ಎಂಬುದು ಕೇವಲ ಶೈಕ್ಷಣಿಕ ಕಸರತ್ತಾಗಿ ಕಂಡುಬಂದಿದೆ. ಹಾಗಾಗಿ ಕರ್ನಾಟಕದ ನಿನ್ನೆಗಳ ಮರುರಚನೆಯ ವಿನ್ಯಾಸಗಳನ್ನು ಕುರಿತು ಇಂದು ವಿಶ್ಲೇಷಿಸುವ ಜರೂರಿದೆ.
- ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ. ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ. ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ. ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ. ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ. ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು. ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ.
ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ. ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚಳುವಳಿಯ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ. ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಭಾಗ -03
ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಥನಗಳು: ದಲಿತ ಚಳುವಳಿಯ ತಾತ್ವಿಕ ವಿನ್ಯಾಸಗಳು
ಈಗಾಗಲೇ ಚರ್ಚಿಸಿದಂತೆ, ದಲಿತ ಚಳುವಳಿಗೆ ಪೂರಕವಾದ ತಾತ್ವಿಕ ನಿಲುವುಗಳು ಪ್ರಾಚೀನ ಸಾಹಿತ್ಯದಿಂದ ಮೊದಲುಗೊಂಡು ಭಕ್ತಿ ಪರಂಪರೆ ಹಾಗೂ ಸಾಮಾಜಿಕ ಸುಧಾರಣೆಯ ಆಂದೋಲನಗಳಲ್ಲಿ ಅನುರಣಿಸಿರುವುದನ್ನು ನೋಡುತ್ತೇವೆ. ಹೀಗೆ ಅಡಕಗೊಂಡ ಈ ಬೀಜರೂಪಿ ವಿಚಾರ ಇಲ್ಲವೇ ಚಿಂತನೆಗಳು ಸಾಂದ್ರಗೊಂಡು ಒಂದು ನಿರ್ದಿಷ್ಟ ವಿಚಾರಧಾರೆಯ ಸ್ವರೂಪವನ್ನು ಪಡೆದುಕೊಂಡಿರುವುದು 19ನೇ ಶತಮಾನದ ಮಾರ್ಗದರ್ಶಿ ಚಿಂತಕ ಫುಲೆ ಅವರಿಂದ ಶುರುವಾಗಿ 20ನೇ ಶತಮಾನದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಾತ್ವಿಕ ವಿನ್ಯಾಸಗಳಲ್ಲಿ ಒಂದು ಸ್ಪಷ್ಟ ವಿಚಾರಧಾರೆಯಾಗಿ ಹೊರಹೊಮ್ಮಿರುವುದನ್ನು ನೋಡುತ್ತೇವೆ. ಪರಿಣಾಮವಾಗಿ ಎಪ್ಪತ್ತರ ದಶಕದಲ್ಲಿ ಫುಲೆ-ಅಂಬೇಡ್ಕರ್ ಅವರ ವಿಚಾರಗಳು ಚಳುವಳಿ ಅಥವಾ ಆಂದೋಲನಕ್ಕೆ ಸ್ಪಷ್ಟ ರೂಪವನ್ನು ಒದಗಿಸಿಕೊಟ್ಟಿರುವುದಕ್ಕೆ ಚಾರಿತ್ರಿಕ ಸಾಕ್ಷಿಗಳು ಇಂದಿಗೂ ನಮ್ಮ ಕಣ್ಮುಂದಿವೆ. ಭಾರತ ಹಾಗೂ ಕರ್ನಾಟಕದಲ್ಲಿ ಎಪ್ಪತ್ತರ ದಶಕ ಅನ್ನುವುದು ಕ್ರಾಂತಿಕಾರಿ ನಿಲುವುಗಳಿಗೆ ಕಾರಣವಾಗುವುದಕ್ಕೆ ನಮ್ಮ ಬೆನ್ನ ಹಿಂದಿನ ತಾತ್ವಿಕತೆಯೇ ಮುಖ್ಯ ಕಾರಣ. ಫುಲೆ, ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರು, ಲೋಹಿಯಾ, ಕುವೆಂಪು ಮೊದಲಾದ ಚಿಂತಕರ ಆಲೋಚನಾ ಕ್ರಮಗಳು ನಮ್ಮ ಅಸ್ಮಿತೆ ಹಾಗೂ ಪ್ರಜ್ಞೆಯನ್ನು ರೂಪಿಸುವುದಕ್ಕೆ ಒತ್ತಾಸೆಯಾಗಿರುತ್ತವೆ.
ಸಾಮಾಜಿಕ ಅನ್ಯಾಯ, ಸಾಂಸ್ಕೃತಿಕ ಅಪಚಾರ, ರಾಜಕೀಯ ಭೇದಭಾವ ಹಾಗೂ ಆರ್ಥಿಕ ಅಸಮಾನತೆಗಳನ್ನು ಕುರಿತು ಶತಮಾನಗಳ ಉದ್ದಕ್ಕೂ ಪ್ರತಿರೋಧವನ್ನು ಒಡ್ಡುವ ಇಲ್ಲವೇ ಪ್ರತಿಭಟಿಸುವ ನಿಲುವುಗಳು ಪ್ರಕಟವಾಗುತ್ತಲೇ ಬಂದಿರುವುದು ದಿಟ. ಇಂತಹ ಪ್ರಕಟಿತ ನಿಲುವುಗಳು ಬಹುತೇಕವಾಗಿ ವ್ಯಕ್ತಿ ನೆಲೆಯಲ್ಲಿ ನಡೆದಿರುವುದೇ ಹೆಚ್ಚು. ಆದರೆ ವ್ಯಕ್ತಿನೆಲೆಯ ಈ ಪ್ರಕ್ರಿಯೆ ಕಾಲಕ್ರಮೇಣ ಸಾಮೂಹಿಕ ಪ್ರಕ್ರಿಯೆಯಾಗಿ ಹೊರಹೊಮ್ಮುತ್ತದೆ ಎನ್ನುವುದಕ್ಕೆ ದಲಿತ ಚಳುವಳಿ ಹಾಗೂ ಇತರೇ ಸಾಮಾಜಿಕ ಚಳುವಳಿಗಳು ಸಾಕ್ಷಿಯಾಗಿರುತ್ತವೆ. ಹಾಗಾಗಿ ಚಳುವಳಿ ಅಥವಾ ಆಂದೋಲನ ಎನ್ನುವುದು ಒಂದು ಪ್ರಕ್ರಿಯಾತ್ಮಕ ಕ್ರಿಯೆಯೇ ಹೊರತು ಯಾವತ್ತೋ ಒಂದುದಿನ ಇಲ್ಲವೇ ಸನ್ನಿವೇಶದಲ್ಲಿ ದಿಢೀರಣೆ ಮೈದೋರುವ ಘಟನೆಯಲ್ಲ. ಅಂದರೇನಾಯಿತು ದಲಿತ ಚಳುವಳಿ, ರೈತ ಚಳುವಳಿ, ಭಾಷಾ ಚಳುವಳಿ, ಮಹಿಳಾ ಚಳುವಳಿ ಇಲ್ಲವೇ ಪರಿಸರ ಚಳುವಳಿಗಳು ನಡೆಯುವುದಕ್ಕೆ ಧೀರ್ಘ ಕಾಲದ ಅನುಭವ ಮತ್ತು ವೈಚಾರಿಕ ನಿಲುವುಗಳು ಕಾರಣವಾಗುತ್ತವೆ.
ಕನ್ನಡ ಸಾಹಿತ್ಯದ ಪ್ರಮುಖ ಲೇಖಕರ ಸಾಮಾಜಿಕ ದೃಷ್ಟಿಕೋನವು ಕೂಡ ದಲಿತ ಪಾತ್ರಗಳ ಬಿಡುಗಡೆಯ ದಾರಿಗಳನ್ನು ಕಂಡುಕೊಳ್ಳುವ ಇರಾದೆಯನ್ನು ಕಾಣುವುದು ದುಸ್ತರವೇ ಸರಿ. ಉದಾ.ಗೆ ಚೋಮನ ದುಡಿ ಕಾದಂಬರಿಯಲ್ಲಿ ಕಾರಂತರ ಸಹಾನುಭೂತಿ ಭೂಮಾಲೀಕರ ಕಡೆ ಇದೆ ಎನ್ನುವ ಅಭಿಪ್ರಾಯಗಳು ಅತ್ಯಂತ ಗಟ್ಟಿಯಾಗಿಯೇ ಇದೇ ಎಪ್ಪತ್ತರ ದಶಕದಲ್ಲಿ ತಲೆಯೆತ್ತಿರುವುದನ್ನು ಕಾಣಬಹುದು. ಕ್ರಿಶ್ಚಿಯನ್ ಆಗಲು ಹೊರಟ ಚೋಮ ಭೂತಕ್ಕೆ ಹೆದರಿ ತನ್ನ ನಿರ್ಧಾರವನ್ನು ಬದಲಾಯಿಸುವ ಬಗೆಯೂ ಕೂಡ ಕಾರಂತರ ಮಧ್ಯಸ್ಥಿಕೆಯನ್ನೇ ಸೂಚಿಸುತ್ತದೆ ಎನ್ನುವ ಅಭಿಪ್ರಾಯಗಳು ಅತ್ಯಂತ ಗಟ್ಟಿಯಾಗಿಯೇ ಕೇಳಿಬಂದವು. ಕುವೆಂಪು ತಮ್ಮ ಕಾದಂಬರಿಗಳಲ್ಲಿ ದಲಿತ ಪಾತ್ರಗಳ ಪರವಾದ ಗ್ರಹಿಕೆಯನ್ನು ಹೊಂದಿದ್ದರೂ, ಆ ಪಾತ್ರಗಳ ಬಿಡುಗಡೆಗೆ ಯೋಗ್ಯವಾದ ಮತ್ತು ಸ್ವಾಯತ್ತತೆಯ ದಾರಿಗಳನ್ನು ಇವರ ಕಾದಂಬರಿಯಲ್ಲಿಯೂ ಕಾಣುವುದು ಅಸಾಧ್ಯವೇ ಆಗಿದೆ ಅನ್ನುವ ಅಭಿಪ್ರಾಯಗಳು ಕೂಡ ಅಷ್ಟೇ ತೀವ್ರವಾಗಿ ಬಂದಿರುವುದಕ್ಕೂ ನಮ್ಮಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.
ಭಾಗ -04
ಬಿಡುಗಡೆಯ ದಾರಿಗಳು ಮತ್ತು ಬಿಕ್ಕಟ್ಟುಗಳು
ದಲಿತರ ವಿಮೋಚನೆ ಅಥವಾ ಬಿಡುಗಡೆಯ ದಾರಿಗಳನ್ನು ಕಂಡುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ತಾತ್ವಿಕ ಚೌಕಟ್ಟುಗಳು ಕಾಲದ ಮನೋಧರ್ಮಕ್ಕೆ ಇಲ್ಲವೇ ಆಯಾ ಯುಗಕ್ಕೆ ಸಹಜವಾದ ಸುಧಾರಣಾವಾದಿ ತಾತ್ವಿಕ ಚೌಕಟ್ಟುಗಳಿಗೆ ಮಾತ್ರ ಹೊಂದಿಕೊಳ್ಳುವ ವಿದ್ಯಮಾನಗಳನ್ನಾಗಿ ಬಿಂಬಿಸಲಾಗಿದೆ. ಉದಾ.ಗೆ ಗಾಂಧಿಜೀ ಅವರ ಸುಧಾರಣೆಯ ನಿಲುವುಗಳ ದೃಷ್ಟಿಕೋನದಲ್ಲಿ ದಲಿತರನ್ನು ‘ಹರಿಜನ’ ಎಂದು ಉನ್ನತೀಕರಿಸುವ ಕ್ರಮವನ್ನು ಮಾತ್ರ ಕಾಣಬಹುದಾಗಿದೆ ಹೊರತು ದಲಿತರ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಅಗತ್ಯವಾದ ಮಾದರಿಗಳನ್ನು ಮಂಡಿಸಿದಂತೆ ಕಾಣುವುದಿಲ್ಲ. ಹಾಗಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತ ಸಮೂಹಗಳ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬಿಡುಗಡೆಗಾಗಿ ಮತ್ತು ಸಬಲೀಕರಣಕ್ಕಾಗಿ ರೂಪಿಸುತ್ತಿದ್ದ ತಾತ್ವಿಕ ಮಾದರಿಗಳನ್ನು ಗಾಂಧಿಜೀ ಅವರು ಒಪ್ಪುತ್ತಿರಲಿಲ್ಲ. ಈ ವಾದವನ್ನು ಇಲ್ಲಿ ಸಮರ್ಥಿಸಲು ‘ಪೂನಾ ಪ್ಯಾಕ್ಟ್’ ಬಗೆಗಿನ ವಿದ್ಯಮಾನಗಳನ್ನು ಬಿಡಿಸಿ ನೋಡಿದರೆ, ದಲಿತರ ಬಿಡುಗಡೆಯ ಬಗೆಗೆ ಗಾಂಧಿಜೀ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೊಂದಿದ್ದ ಧೋರಣೆಗಳ ನಡುವಣ ಅಂತರಗಳನ್ನು ಬಹಳ ಸೂಕ್ಷ್ಮವಾಗಿ ಅರಿಯಬಹುದಾಗಿದೆ.
ಭಾರತದ ಸಮಾಜಗಳಲ್ಲಿ ನೆಲೆನಿಂತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಸೀಳುಗಳಿಗೆ ಚರಿತ್ರೆಯು ಸಾಕ್ಷಿಯಾಗಿದೆ. ಅಂದರೆ ಜಾತಿ, ಮತ, ಧರ್ಮ ಹಾಗೂ ಲಿಂಗ ಮೊದಲಾದ ಸಾಮಾಜಿಕ ವಿನ್ಯಾಸಗಳ ಮೂಲಕ ಈ ಬಿರುಕುಗಳನ್ನು ಕಾಣಬಹುದಾಗಿದೆ. ಇಂತಹ ಬಿರುಕುಗಳ ಮೂಲಕವೇ ಭಾರತದ ಸಾಮಾಜಿಕ ವಿನ್ಯಾಸಗಳ ನಡುವಣ ಅಸಮಾನತೆಯ ನಿಲುವುಗಳನ್ನು ಮನಗಾಣಬೇಕಿದೆ. ಯಾವುದೇ ಒಂದು ದೇಶದ ಸಾಮಾಜಿಕ ಅಥವಾ ಸಾಂಸ್ಕೃತಿಕ ಬಹುತ್ವವನ್ನು ಒಡಕಲು ಬಿಂಬದಂತೆ ನಿರೂಪಿಸಲು ಕೂಡ ಈ ಬಿರುಕುಗಳೇ ರಾಚನಿಕ ವಿನ್ಯಾಸಗಳಾಗಿ ಒದಗಿಬಂದಿವೆ. ಹಾಗಾಗಿ ಶೋಷಿತ ಸಮೂಹಗಳಾದ ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಇವತ್ತಿಗೂ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಾಗಿಯೇ ಮುಂದುವರೆಯುತ್ತಿವೆ. ಸ್ವಯಂ ಘೋಷಿತ ಮೇಲ್ವರ್ಗಗಳು ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ದಬ್ಬಾಳಿಕೆ ಇಂದಿಗೂ ಹಾಗೇ ನಿರಂತರಗೊಂಡಿರುವುದನ್ನು ಗಮನಿಸಬಹುದು. ಚರಿತ್ರೆಯ ಅನುಭವಗಳು ಕೇವಲ ಚಾರಿತ್ರಿಕ ಸಾಕ್ಷಿಗಳಾಗಿ ಮಾತ್ರ ಉಳಿದುಕೊಂಡಿಲ್ಲ ಬದಲಾಗಿ ವರ್ತಮಾನದ ಶೋಷಕರ ಆಯುಧಗಳಾಗಿ ಮುಂದುವರೆದಿರುತ್ತವೆ.
ಭಾಗ-05
ಬಲಿಪಶುತನ ನಿಲುವುಗಳು: ಸಾಮಾಜಿಕ ಗುರುತು ಮತ್ತು ಘನತೆಯ ಪ್ರಶ್ನೆಗಳು
ದಲಿತರು ಅಂದರೆ ‘ಶೋಷಣೆಯ ಪರಂಪರೆ’ಗೆ ಸಾಕ್ಷಿಯಾಗಿದ್ದಾರೆ. ಶತಮಾನಗಳಿಂದಲೂ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕವಾಗಿ ರೂಢಿಸಿಕೊಂಡು ಬಂದಂತಹ ಅನಾಚಾರಗಳನ್ನು ಕಾಲಕ್ರಮೇಣ ಬಲಪಡಿಸುವ ‘ಸಾಮಾಜಿಕ ರೂಢಿಗಳು, ನೀತಿಗಳು, ಆಚರಣೆಗಳಾಗಿ’ ಮೈದೋರಿರುತ್ತವೆ. ಪರಿಣಾಮವಾಗಿ ಅಸ್ಪೃಶ್ಯತೆ ಯಥೇಚ್ಛವಾಗಿ ಇಂದಿಗೂ ನಡೆಯುತ್ತಿದೆ. ಏಕೆಂದರೆ ಮೇಲ್ವರ್ಗಗಳು ಇಂತಹ ದಬ್ಬಾಳಿಕೆಯ ನೆಲೆಗಳನ್ನು ತಮ್ಮ ಸಾಮಾಜಿಕ ರೀತಿ ನೀತಿಗಳನ್ನಾಗಿ (ಸೋಶಿಯಲ್ ಆರ್ಡರ್) ಆಚರಿಸುವುದಕ್ಕೆ ಕಾರಣವಾಗಿದೆ. ದಲಿತರ ವಿಮೋಚನೆ ಅಥವಾ ಬಿಡುಗಡೆಯ ಪ್ರಶ್ನೆಗಳು ಕೇವಲ ಬಡತನ ನಿರ್ಮೂಲನಕ್ಕೆ ಮಾತ್ರ ಸಂಬಂಧಿಸಿದ ಸಂಗತಿಗಳಾಗಿಲ್ಲ. ಬದಲಾಗಿ ಸಾಮಾಜಿಕ ಘನತೆ ಮತ್ತು ವ್ಯಕ್ತಿ ಘನತೆಗಳನ್ನು ಕಡೆಗಣಿಸುವ ವಿನ್ಯಾಸಗಳಾಗಿಯೂ ರೂಪುಗೊಂಡಿವೆ. ಅಂದರೆ ದಲಿತ ಸಮೂಹಗಳ ಚಾರಿತ್ರಿಕ ವಿದ್ಯಮಾನಗಳನ್ನು ಅರಿಯುವುದೆಂದರೆ, ಅಪಮಾನ, ಬಹಿಷ್ಕಾರ ಹಾಗೂ ಅಮಾನುಷ ಕೃತ್ಯಗಳಿಗೆ ಬಲಿಯಾಗುತ್ತಲೇ ಬಂದಿರುವ ಬಲಿಪಶುತನದ ಚರಿತ್ರೆಯನ್ನು ಮರುಪರಿಶೀಲಿಸುವ ಬಗೆಯಾಗಿದೆ. ಆದ್ದರಿಂದ ಇಂತಹ ಬಲಿಪಶುತನದ ಪರಿಣಾಮವು ಅಸಮಾನ ಭಾರತದ ಅಸಮಾನ್ಯ ಲಕ್ಷಣವೇ ಆಗಿರುವುದು ಕೂಡ ಚಾರಿತ್ರಿಕ ವ್ಯಂಗ್ಯವೇ ಸರಿ. ಸಾಮಾಜಿಕ ಘನತೆ ಮತ್ತು ಬದುಕಿನ ಹಕ್ಕನ್ನು ಪಡೆಯುವುದರ ಮೂಲಕವೇ ಇಂತಹ ಬಲಿಪಶುತನದಿಂದ ಬಿಡುಗಡೆಯನ್ನು ಹೊಂದಲು ಸಾಧ್ಯ. ಡೆರಿಡಾ ಅವರ ಪ್ರಕಾರ ಮಾನವ ಹಕ್ಕು ಅನ್ನುವುದು ಸಾಮಾಜಿಕ ಗುರುತಿಸುವಿಕೆ (ಸೋಶಿಯಲ್ ರೆಕಗ್ನಿಶಿನ್)ಗೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ. ಈ ಸಾಮಾಜಿಕ ಗುರುತನ್ನು ಪಡೆಯುವ ಮೂಲಕವೇ ಸಾಮಾಜಿಕ ಮತ್ತು ವ್ಯಕ್ತಿ ಘನತೆಯನ್ನು ಹೊಂದುವುದಕ್ಕೆ ಇಂಬು ದೊರೆಯುತ್ತದೆ. ದಲಿತ ಚಳುವಳಿಯ ಪ್ರಾಥಮಿಕ ಆಶಯವೇ ಈ ಸಾಮಾಜಿಕ ಗುರುತು ಮತ್ತು ಘನತೆಯನ್ನು ಪಡೆಯುವ ಆಂದೋಲನವಾಗಿದೆ.
ವರ್ಣಾಶ್ರಮ ಸಿದ್ಧಾಂತ ಮತ್ತು ಬಹಿಷ್ಕೃತ ಆಚರಣೆಗಳು ದಲಿತ ಸಮೂಹಗಳನ್ನು ಸಮಾನತೆ ಮತ್ತು ಘನತೆಯಿಂದ ಬದುಕಲು ಬಿಡುತ್ತಿಲ್ಲ. ಸಮಾನತೆಯ ಕಲ್ಪನೆಯನ್ನು ಮನವರಿಕೆ ಮಾಡಲು ಹಾಗೂ ಸಾಮಾಜಿಕ ಗುರುತಿಸುವಿಕೆಯ ಸ್ವರೂಪವನ್ನು ಅರ್ಥಮಾಡಿಸಲು ಭಾರತದಲ್ಲಿ ದಲಿತ ಸಂಘಟನೆಗಳ ಆಂದೋಲನ ಶುರುವಾದದ್ದು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಮಾತ್ರ ಪ್ರತಿಭಟಿಸುವ ಬದಲಾಗಿ ಸಾಮಾಜಿಕ ಘನತೆ ಮತ್ತು ಮಾನವ ಹಾಗೂ ಬದುಕಿನ ಹಕ್ಕುಗಳ ಮಹತ್ವವನ್ನು ಅರಿಯುವಂತೆ ಮಾಡುವ ಚಳುವಳಿಯೇ ಈ ದಲಿತ ಚಳುವಳಿಯಾಗಿದೆ. ಹಾಗಾಗಿ ದಲಿತ ಚಳುವಳಿಯನ್ನು ಮೇಲ್ಜಾತಿಗಳ ಸಾಮಾಜಿಕ, ಸಾಂಸ್ಕೃತಿಕ ಪ್ರಾಬಲ್ಯವನ್ನು ಎದುರಿಸುವ ಬಗೆಯನ್ನಾಗಿ ಮಾತ್ರ ಪರಿಗಣಿಸುವಂತಿಲ್ಲ. ಅಂದರೆ ದಲಿತ ಚಳುವಳಿ ಅನ್ನುವುದು ದಲಿತ ಸಮೂಹಗಳ ಸಾಮಾಜಿಕ ಘನತೆ ಮತ್ತು ವ್ಯಕ್ತಿ ಘನತೆಯ ವಿನ್ಯಾಸಗಳನ್ನು ಮರುರೂಪಿಸುವ ಹಾಗೂ ಮರು ಸಂಪಾದಿಸುವ ಪ್ರತಿರೋಧದ ಮಾದರಿಯಾಗಿದೆ.
ಅಸ್ಪೃಶತೆಯ ಆಚರಣೆಯನ್ನು ವರ್ಣಾಶ್ರಮ ಸಿದ್ಧಾಂತವು ಹಾಗೂ ಮೇಲ್ಜಾತಿಗಳ ಪ್ರಾಬಲ್ಯವು ‘ಸಾಂಸ್ಥೀಕರಣ’ಗೊಳಿಸಿದ್ದವು. ಇದೊಂದು ಅನಧಿಕೃತವೂ ಮತ್ತು ಅಸಂವಿಧಾನತ್ಮಕವೂ ಆಗಿರುವಂತಹ ಈ ಸಾಂಸ್ಥೀಕರಕ್ಕೆ ವಿರೋಧವಾಗಿ ದಲಿತ ಚಳುವಳಿಯೆಂಬ ಆಂದೋಲವು ಹೊರಹೊಮ್ಮಿತು. ದಲಿತ ಚಳುವಳಿಯ ಮೊದಲ ಆಶಯವೇ ಅನಧಿಕೃತ ಮತ್ತು ಅಸಂವಿಧಾನಾತ್ಮಕವಾಗಿ ನೆಲೆನಿಂತಿದ್ದ ಅನಿಷ್ಠ ಆಚರಣೆಗಳನ್ನು ಬುಡಸಮೇತ ಕಿತ್ತೆಸೆಯಲು ಬೇಕಾದ ತಾತ್ವಿಕ ವಿನ್ಯಾಸಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜ್ಯೋತಿರಾವ್ ಫುಲೆ ಅವರ ಚಿಂತನೆಗಳ ಮೂಲಕ ದಲಿತ ಆಂದೋಲನ ಅಥವಾ ಚಳುವಳಿಯ ತಾತ್ವಿಕತೆಯನ್ನು ಪ್ರೊ. ಬಿ ಕೃಷ್ಣಪ್ಪ ಮತ್ತು ಅವರ ಜೊತೆಗಾರರು ಸೇರಿ ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿ ಬೆಳೆಸಿದರು. ಈ ಸಂಘಟನೆಯು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವುದಷ್ಟೆ ಅಲ್ಲದೇ, ಸಹಜೀವನ ಮತ್ತು ಸಾಮರಸ್ಯದ ಬದುಕನ್ನು ಕಟ್ಟುವ ದೂರದೃಷ್ಟಿಯ ಗುರುಗಳನ್ನು ಈ ಚಳುವಳಿಯ ಒಡಲಲ್ಲಿ ಕಾಣಬಹುದಾಗಿದೆ.






0 Comments