ಮೇಘನಾ ಸುಧೀಂದ್ರ ಕಾಲಂ: ಬಿಲ್ಲಿನಂತೆ ಹುಬ್ಬು ನೋಡು ಲಕ್ ದೆ, ಲಕ್ ದೆ..

“ಬಿಲ್ಲಿನಂತೆ ಹುಬ್ಬು ನೋಡು ಲಕ್ ದೆ, ಲಕ್ ದೆ, ಬಾಣದಂತೆ ನೋಟ ನೋಡು ಲಕ್ ದೆ ಲಕ್ ದೇ” ಎಂದು ಸಿಕ್ಕಾಪಟ್ಟೆ ಜೋರಾಗಿ ಭಾರತದ ಹುಡುಗರ ಅಪಾರ್ಟ್ಮೆಂಟಿನಲ್ಲಿ ಹಾಡು ಕೇಳುತಲಿತ್ತು. “ಕನ್ನಡದ ಹುಡುಗರ್ಯಾರೂ ನಮ್ಮ ಜೊತೆ ಇಲ್ಲವೇ ಇಲ್ಲ, ಹೀಗಿದ್ದಾಗ ಇದ್ಯಾವುದು ಹೊಸ ಹುಚ್ಚು ಎಂದು ಹುಡುಗಿ ಬೆಲ್ ಮಾಡಿದಳು. ನೋಡಿದರೆ ಅಲ್ಲಿ ಹುಡುಗರ ಪಾರ್ಟಿಯೇ ನಡೆಯುತ್ತಿತ್ತು. “ಸಮೋಸಾ” ಎಂದು ಹುಡುಗಿ ಟೇಬಲ್ ಮೇಲೆ ಇಟ್ಟಾಗಲೇ, “ವಾವ್ ಯಾರ್ ಅಚ್ಚಾ ಖಾನಾ” ಎಂದು ತಿನ್ನೋದಕ್ಕೆ ಶುರುಮಾಡುವಾಗಲೇ ಅವಳಿಗೆ ಚೋಲೆ ಮಸಾಲೆಯ ವಾಸನೆ ಘಮ್ಮೆಂದು ಬಂದಿದ್ದು.

ಹುಡುಗಿಯ ಕ್ಲಾಸಿನ ಭಾರತದ ಹುಡುಗರ ಮನೆ ದಿನಾಗಲೂ ಒಂದೊಂದು ಏನೇನೋ ಅಡುಗೆ ಇದು ಅದು ಮಾಡಿಕೊಂಡು ಖುಷಿಯಾಗಿರುವವರು. ಒಂದು ದಿನ ರಾಜಸ್ಥಾನಿ ಅಡುಗೆ, ಒಂದು ದಿವಸ ಒರಿಸ್ಸಾ ಖಾದ್ಯ, ಮತ್ತೊಂದು ದಿವಸ ಉತ್ತರ ಪ್ರದೇಶದ್ದು ಹೀಗೆ ಥರಾವರಿ ಅಡುಗೆ ಮಾಡಿ ಅದನ್ನ ಒಂದು ಡಬ್ಬಿಗೂ ಹಾಕಿ ಆಗಾಗ ಹುಡುಗಿಗೆ ಕೊಡುವವರು. ಹುಡುಗಿ ಮಾತ್ರ ತಿಂಗಳಿಗೊಮ್ಮೆ ಬಿಸಿಬೇಳೆಭಾತ್ ಮಾಡಿ ಕೈಮುಗಿಯುತ್ತಿದ್ದಳು. ರಾಗಿ ಮುದ್ದೆ, ಜೋಳದ ರೊಟ್ಟಿ ಎಲ್ಲ ಅವಳ ಕೈಗೆ ನಿಲುಕದ ನಕ್ಷತ್ರ. “ಏನ್ರೋ ಕನ್ನಡ ಹಾಡು ಹಾಕಿಕೊಂಡಿದ್ದೀರ, ಏನ್ ಸಮಾಚಾರ” ಎಂದರೆ “ಈ ಭಾನುವಾರ ನಿನ್ನ ಅಡುಗೆ ಬಿಸಿಬೇಳೆಭಾತ್ ಮಾಡಬೇಕು ಎಂದು ನಮ್ಮ ಪೀಠಿಕೆ ಹಾಗೂ ಅದೇನೋ ಸೇಂಟ್ ಜಾರ್ಡಿ ಅಂತೆ ಇಲ್ಲಿ, ಅದಕ್ಕೆ ನಾವೂ ಹಬ್ಬ ಮಾಡೋಣ ಇಲ್ಲಿ ಅಂತ” ಎಂದು ಹೇಳಿದರು.

ಕಾಲೇಜಿನ ಕ್ಯಾಲೆಂಡರಿನಲ್ಲಿ ಅದು ಇತ್ತು. ಇಲ್ಲಿ ಅಷ್ಟೊಂದು ಹಬ್ಬ ಇಲ್ಲ, ಇದ್ದರೂ ಜನ ರಜ ತೆಗೆದುಕೊಳ್ಳಲ್ಲ. ಜನರಿಗೆ ಬೇಕಾದರೆ ರಜೆ ತೆಗೆದುಕೊಳ್ಳುವ ಸೌಕರ್ಯ ಇತ್ತು. ಡಿಸೆಂಬರಿನಲ್ಲಿ ೧೫ ದಿವಸ, ಆಗಸ್ಟಿನ ಒಂದು ತಿಂಗಳು ಜಪ್ಪಯ್ಯ ಅಂದರೂ ಯೂನಿವರ್ಸಿಟಿಯ ಬಾಗಿಲು ತೆರೆಯಲ್ಲ. ಅಲ್ಲಿನ ಆಫೀಸುಗಳು ತೆರೆಯೋದಿಲ್ಲ. ಸಂಜೆ ೫.೩೦ ನಂತರ ಕೆಲಸವನ್ನೂ ಮಾಡುವುದಿಲ್ಲ. ಇಲ್ಲಿಗೆ ಬರುವ ಏಷಿಯನ್ನರನ್ನ ಕಂಡರೆ ಆಗದಿರೋದಕ್ಕೆ ಒಂದು ಕಾರಣ ಎಂದರೆ ನಾವೂ ಮತ್ತು ಚೈನೀಸ್ ಇಬ್ಬರೂ ಸಂಜೆ ಕೆಲಸದ ಸಮಯವಾದ ಮೇಲೂ ಮ್ಯಾನೇಜರನ್ನ ಮಸ್ಕಾ ಮಾಡಿಕೊಂಡು ಇರೋದು, ೯ ಘಂಟೆ ಕೆಲಸ ಎಂದರೆ ೧೧ ಘಂಟೆ ಮಾಡೋದು, ಆಫೀಸಿಗೂ ಮನೆಗೂ ಏನೂ ವ್ಯತ್ಯಾಸವಿಲ್ಲದೆ ತಮ್ಮ ಹೊಟ್ಟೆಯನ್ನ ಬೆಳಿಸಿಕೊಂಡೇ ಇರುವುದು, ಹೆಣ್ಣುಮಕ್ಕಳನ್ನ ಇನ್ನೂ ನಾನ್ ಪ್ರೈಮರಿ ಬ್ರೆಡ್ ವಿನ್ನರ್ಸ್ ಮಾಡುವ ವಿಧಾನದಲ್ಲಿ ನಮ್ಮವರು ನಿಸ್ಸೀಮರು. ಇಲ್ಲಿನ ಜನ ೯ ಘಂಟೆಯಿಂದ ೫.೩೦ ಅಷ್ಟೇ ಕೆಲಸ ಮಾಡೋದು. ಸಾಫ್ಟ್ವೇರಿನಲ್ಲಿ ಕ್ರಿಟಿಕಲ್ ಬಗ್ ಎಂಬುದನ್ನ ಅವರು ಒಪ್ಪದೇ ಇರುವುದು, ಕ್ರಿಟಿಕಲ್ ಬರಿ ಆಸ್ಪತ್ರೆ ಡಾಕ್ಟರಿಗೆ ಸೀಮಿತ ಎಂದು ಹೇಳುವ ಇವರಿಗೆ ಭಾರತ ಮತ್ತು ಚೈನೀಸ್ ಜನರ ಹುಚ್ಚು ಕೆಲಸದ ಬಗ್ಗೆ  ತಾತ್ಸಾರ ಇದೆ. ಕಡಿಮೆ ಸಂಬಳಕ್ಕೂ ೧೬ ಘಂಟೆ ಕೆಲಸ ಮಾಡುವ ಹುಚ್ಚುತನಕ್ಕೇ ಧಿಕ್ಕಾರ ಇದೆ.

ರೆಸಿಡೆಂಟ್ ಪರ್ಮಿಟ್ ಸಿಕ್ಕಾಗ ಎಸ್ ಎಸ್ ಎಲ್ಸಿ ಯಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸ್ ಬಂದಷ್ಟೆ ಸಂತೋಷ ಪಡುವ ಭಾರತೀಯರನ್ನು ನೋಡಿ ಅವರ ದಿನಪತ್ರಿಕೆಯಲ್ಲಿ ಖಾಯಂ ಕಾರ್ಟೂನ್ ಆಗಿ ಒಬ್ಬ ಬ್ರೌನ್ ಮ್ಯಾನ್ ಇರುತ್ತಾನೆ. ಸರ್ಕಾರದ ಎಲ್ಲಾ ವಿಷಯಗಳನ್ನ ಸಮರ್ಥಿಸಿಕೊಳ್ಳುವ ಬ್ರೌನ್ ಮ್ಯಾನ್, ತನ್ನ ದೇಶದಲ್ಲಿ ನಡೆಯುವ ಯಾವ ವಿಷಯಕ್ಕೂ ಪ್ರತಿಕ್ರಿಯೆ ಕೊಡುವುದಿಲ್ಲ. ಅವನ ನೀಲಿ ಪಾಸ್ಪೋರ್ಟ್ ಮರೂನ್ ಆಗಬೇಕು ಅಷ್ಟೆ. ಅದಕ್ಕೆ ಎಷ್ಟು ಬೇಕೋ ಅದಕ್ಕಿಂತ ಜಾಸ್ತಿ ಸ್ಪಾನಿಷ್ ಆಗಲು ಹವಣಿಸುತ್ತಾನೆ.

ಭಾಷೆಯನ್ನ ಜಿದ್ದಿಗೆ ಬಿದ್ದು ಕಲಿಯುತ್ತಾನೆ, ಅವರ ಹಬ್ಬಗಳನ್ನ ಮನೆಯಲ್ಲಿ ಆಚರಣೆ ಮಾಡಿ ಲೋಕಲ್ ಮುನಿಸಿಪಾಲಿಟಿಗೆ ಮಾಹಿತಿ ಕೊಡುತ್ತಾನೆ, ಮತ್ತೊಂದು ಬ್ರೌನ್ ಮ್ಯಾನ್ ಗೆ ಯಾವ ಕಾರಣಕ್ಕೂ ಸಹಾಯ ಮಾಡಲ್ಲ, ಆದಷ್ಟು ಇರುವ ಸರ್ಕಾರದ ಸರ್ವಾಧಿಕಾರ ಧೋರಣೆಯನ್ನು ಬೆಂಬಲಿಸಿ ತನ್ನ ದೇಶಕ್ಕೂ ರವಾನೆ ಮಾಡುತ್ತಾನೆ. ಇದೇ ಥರಹ ಈ ಹುಡುಗರದ್ದೂ ಕಥೆಯಾ ಎಂದು ಮನಸಿನಲ್ಲೇ ಹುಡುಗಿ ಅಂದುಕೊಂಡು ಚೋಲೆ ಮಸಾಲಾ ತಿನ್ನುತಲಿದ್ದಳು.

“ನಾವ್ಯಾಕೆ ಸೇಂಟ್ ಜಾರ್ಡಿ ಹಬ್ಬ ಮಾಡ್ಬೇಕು, ರಾಶಿ ಅಸೈನ್ಮೆಂಟ್ ಇಲ್ವಾ “ ಎಂದು ತಕರಾರು ತೆಗೆದ್ದದ್ದು ಇವಳು ಮಾತ್ರ. “ಅಲ್ಲಾ ಗುರು ನಮ್ಮ ಮನೆಯಲ್ಲಿ ನಡೆಯುವ ಹಬ್ಬಗಳನ್ನೆಲ್ಲಾ ಸಿಲ್ಲಿ ಅಂದು ಇಲ್ಲಿ ಅದೇನೋ ಬುಕ್ಕು ಮತ್ತು ರೆಡ್ ರೋಸ್ ಕೊಟ್ಟರೆ ಏನು ಪ್ರಯೋಜನ, ನಂಬದಿದ್ದರೆ ಯಾವ ದೇವರನ್ನು ನಂಬಬಾರದು ದೇಶಿ ಆಗಲಿ ವಿದೇಶಿ ಆಗಲಿ” ಎಂದು ಕೀಟಲೆ ಮಾಡುತ್ತಿದ್ದಳು. ಇಲ್ಲಿ ಏಪ್ರಿಲ್ ೨೩ರಂದು ಸೇಂಟ್ ಜಾರ್ಡಿ ಅಥವಾ ಸೇಂಟ್ ಜಾರ್ಜಸ್ ಡೇ ಎಂದು ನಡೆಯುತ್ತದೆ. ಅದು ಒಂದು ರೀತಿ ಧಾರ್ಮಿಕ ಮತ್ತು ಸೋಷಿಯಲ್ ಹಬ್ಬ.

ಇದು ಕತಲನ್ನರ ವ್ಯಾಲೆಂಟೈನ್ಸ್ ಹಬ್ಬವೂ ಸರಿ. ಇಲ್ಲಿ ಪ್ರೀತಿ ಮಾಡುವವರು ಹುಡುಗನಿಗೆ ಪುಸ್ತಕ, ಹುಡುಗಿಗೆ ರೋಸ್ ಕೊಡುವ ಸಂಪ್ರದಾಯವಿದೆ. “ಈ ಜನಾನೂ ಹೆಣ್ಣುಮಕ್ಕಳ ಕಿವಿ ಮೇಲೆ ಹೂ ಇಟ್ಟುಬಿಟ್ಟರು” ಎಂದು ಕಿಸಕಿಸನೆ ನಗುತ್ತಿದ್ದಳು ಹುಡುಗಿ. ಒಟ್ಟಿನಲ್ಲಿ ಎಲ್ಲಾ ಧರ್ಮ, ಸಂಪ್ರದಾಯಗಳಲ್ಲೂ ಹೆಣ್ಣು ಗಂಡಿಗಿಂತ ಕಡಿಮೆ ಬುದ್ಧಿವಂತೆ ಎಂದು ಬಿಂಬಿಸಿ ಅವಳನ್ನ ಅಂದ ಅಲಂಕಾರಕ್ಕೆ ಸೀಮಿತಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ಹೀಗಿದ್ದಾಗ ಇಲ್ಲೂ ಇವರದ್ದೇನು ಕಥೆ ಎಂದು ಅಂದುಕೊಂಡಾಗಲೇ ಪಕ್ಕದ ಮನೆಯವರಿಂದ ಬಾಗಿಲ ಸದ್ದಾಗಿದ್ದು.

ಹುಡುಗರು ಇರುವ ಕಾಂಪ್ಲೆಕ್ಸಿನಲ್ಲಿ ಜಾಸ್ತಿ ವಯಸ್ಸಾದವರೇ ಇರುವ ಕಾರಣ ಇವರ ಹುಚ್ಚಾಟಗಳಿಗೆ ಕೆಲವೊಮ್ಮೆ ಬೈಸಿಕೊಂಡಿರುವ ನಿದರ್ಶನಗಳಿರುವಾಗ ಇವತ್ತು ಶೆಲ್ಲಿ ಆಂಟಿ ಬಯ್ಯೋದಕ್ಕೆ ಬಂದಿದ್ದಾರೆ ಎಂದು ಬಾಗಿಲು ತೆರೆದರೆ ಶೆಲ್ಲಿ ಆಂಟಿ ನೇ ಒಂದು ದೊಡ್ಡ ಬಾಕ್ಸ್ ಹಿಡಿದುಕೊಂಡು ಬಂದಿದ್ದರು. “ಭಾನುವಾರದ ಜಾರ್ಡಿಗೆ ಈ ಪುಸ್ತಕಗಳು, ಬೇಕಾದರೆ ಎಲ್ಲರಿಗೂ ಹಂಚಬಹುದು” ಎಂದು ಹೇಳಿದಾಗ, “ಅಲ್ಲಾ ಬರೀ ಹುಡುಗರಿಗೆ ಮಾತ್ರ ಉಪಯೋಗ ಆಗುವ ಹಾಗೆ ಉಡುಗೊರೆ ತಂದಿದೀರಾ ಅಲ್ವಾ“ ಎಂದಾಗ “ಯಾವ ಕಾಲದಲ್ಲಿದ್ದೀರ ನೀವೆಲ್ಲಾ, ಹೋದ ವರ್ಷ ಕಲೌ ಬಾರ್ಸಿಲೋನಾದ ಮೇಯರ್ ಆದಾಗ ಮೊದಲು ಶುರು ಮಾಡಿದ್ದು ಈ ಜಾರ್ಡಿ ಹಬ್ಬದ ಕಥೆಯನ್ನ ಎಲ್ಲೂ ಹುಚ್ಚುಚಾಗಿ ಹೇಳಲ್ಲಿಲ್ಲ ಗೊತ್ತಾ ಸಂತ ಜಾರ್ಜ್ ಒಂದು ಹುಡುಗಿಯನ್ನ ಡ್ರಾಗನ್ ಇಂದ ರಕ್ಷಿಸಿ ಆ ದಿವಸವನ್ನ ಆಚರಣೆ ಮಾಡುವ ವಿಚಾರವನ್ನ ಶಾಲೆಯ ಮಟ್ಟದಲ್ಲೇ ತೆಗೆದು ಹಾಕಲಾಯಿತು, ಹೆಣ್ಣುಮಕ್ಕಳು ಇದನ್ನ ಕಲಿಯುವುದೇ ಇಲ್ಲ. ಇನ್ನು ಪುಸ್ತಕಗಳನ್ನು, ಇನ್ನೇನು ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಹೀಗಿದ್ದಾಗ ನೀನ್ಯಾಕೆ ನಮ್ಮದನ್ನ ಆಡಿಕೊಳ್ಳುತ್ತೀಯಾ? ಆಮೇಲೆ ಯಾವುದಾದರೂ ಧರ್ಮದಲ್ಲಿ ಹಾಗೆಲ್ಲ ಹೇಳಿದ್ದಾರೆ ಅಂತಲೇ ಅಂದುಕೊಂಡರೂ ನೀನ್ಯಾಕೆ ಅದನ್ನೆಲ್ಲ ಪಾಲಿಸಬೇಕು.

ಸರಿಯಿಲ್ಲದಿದ್ದರೆ ಅದನ್ನ ವಿರೋಧ ಮಾಡಬೇಕು ಎಲ್ಲವನ್ನು ಒಪ್ಪಬೇಕಂತಿಲ್ಲ ಇಲ್ಲಿ ಅಬಾರ್ಷನ್ ಅನೈತಿಕ ಎಂದು ಬಿಂಬಿಸಲಾಗಿತ್ತು, ಹೆಣ್ಣು ಮಕ್ಕಳಿಗೆ ಮತದಾನ ಮಾಡುವ ಹಕ್ಕು ನೀಡಿರಲ್ಲಿಲ್ಲ ಹೀಗೆಲ್ಲಾ ಇದ್ದಾಗ ನಾವೆಲ್ಲಾ ರಸ್ತೆಗೆ ಇಳಿದ್ದಿದ್ದೆವು, ೧೯೮೯ ರಲ್ಲಿ ನಮ್ಮಲ್ಲಿ ಇಷ್ಟು ಹೆಣ್ಣುಮಕ್ಕಳು ನಮ್ಮ ಬಾರ್ಸಾದ ನಗರ ಕೌನ್ಸಿಲಿನಲ್ಲಿ ಇರಲೇಬೇಕೆಂದು ಅವರಿಲ್ಲದಿದ್ದರೆ ಇದು ಪುರುಷ ಪ್ರಧಾನ ಸರ್ಕಾರವೆಂದೂ ನಾವೆಲ್ಲ ಗಲಾಟೆಯನ್ನೇ ಮಾಡಿದ್ದೆವು, ಮೊನ್ನೆ ಮೊನ್ನೆ ೨೦೨೩ರಲ್ಲಿ ಹೆಣ್ಣುಮಕ್ಕಳಿಗೆ ಅಬಾರ್ಷನ್ ಮಾಡಿಸಿಕೊಳ್ಳುವ ಹಕ್ಕಿಲ್ಲ ಎಂದೆಲ್ಲಾ ಹೊಸ ಲಾ ಪಾಸ್ ಮಾಡಿದ್ದರು, ಆ ಹುಚ್ಚು ಕೆಲಸವನ್ನ ಮಾಡಿದ್ದ ಸರ್ಕಾರ ೬ ತಿಂಗಳಲ್ಲೇ ಮಣ್ಣುಮುಕ್ಕಿತ್ತು, ಇವೆಲ್ಲಾ ಹೆಣ್ಣುಮಕ್ಕಳ ಪ್ರಯತ್ನ ಸಿಟ್ಟು ಹಠ” ಎಂದು ಶೆಲ್ಲಿ ಆಂಟಿ ಹೇಳುತ್ತಿದ್ದರು.

ಆಗಲೇ ಮತ್ತೊಂದು ಮನೆಯಲ್ಲಿದ್ದ ಸಾರಾ “ಈ ಬಿಳಿಯರ ಫೆಮಿನಿಸಮ್ ಬರಿ ಪಾರ್ಕಿನಲ್ಲಿ ಎದೆಹಾಲು ಕುಡಿಸುವುದು, ಹಾಗೂ ಗಂಡಸರ ವಿರುದ್ಧ ಅಷ್ಟೇ ಆಗಿದೆ, ಇಲ್ಲಿ ಬ್ರೌನ್ ಮತ್ತು ಕರಿ ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯಕ್ಕೆ ಇವರ್ಯಾಕೆ ಧ್ವನಿ ಎತ್ತೋದಿಲ್ಲ, ಬೇರೆ ದೇಶದಿಂದ ಬಂದ ಹೆಣ್ಣುಮಕ್ಕಳನ್ನ ಕೀಳಾಗಿ ಕಾಣೋದು ಇವರ ಕಣ್ಣಿಗೆ ಯಾಕೆ ಕಾಣೋದಿಲ್ಲ, ಯಾಕೆ ಇವರನ್ನ ರಕ್ಷಿಸೋದಿಲ್ಲ, ಹೇಳು? ಇವರೆಲ್ಲಾ ಕ್ಲಾಸೆಟ್ ರೇಸಿಸ್ಟ್ . ಅವರಿಗೆ ಹೆಣ್ಣು ಎಂದರೆ ಬಿಳಿಯ ಹೆಣ್ಣು ಮಕ್ಕಳು, ಇವರಿಗೆ ಶತ್ರುಗಳು ಕರಿಯ ಮತ್ತು ಕಂದು ಗಂಡಸರು. ಇನ್ನು ಕಂದು ಹೆಣ್ಣುಮಕ್ಕಳನ್ನ ಮನೆಯ ಕೆಲಸಕ್ಕೆ ಲಾಯಕ್ಕು ಎನ್ನುವವರು. ಇವರ ಹತ್ತಿರ ಫೆಮಿನಿಸಮ್ ಪಾಠ ಕಲಿಯಬೇಕಾ, ಅಥವಾ ಸಮಾನತೆ ಕಲಿಯಬೇಕಾ” ಎಂದು ಅಂದು ಸಾರಾ ಶೆಲ್ಲಿ ಆಂಟಿಯನ್ನ ಗುರಾಯಿಸಿ ಹೋದಳು.

ಹುಡುಗಿಯ ಚೋಲೆ ಮಸಾಲಾ ತಣ್ಣಗೆ ಆರಿ ಕೂತಿತ್ತು. ಹುಡುಗರು ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡನ್ನ ಆರಿಸಿ ಮೆಲ್ಲಗೆ ಭೀಮಸೇನ್ ಜೋಷಿಯ ಅಭಂಗ್ ಹಾಕಿ ಸುಮ್ಮನಾದರು. ಜಾರ್ಡಿ ದಿನಕ್ಕೆ ಪುಸ್ತಕ ತಂದ ಶೆಲ್ಲಿ ವಾಪಸ್ಸು ತೆಗೆದುಕೊಂಡು ಹೋದಳು, ಹಾಗೆ ಬಾಗಿಲು ರಪ್ಪಂತಲೂ ಹಾಕಿದಳು….

‍ಲೇಖಕರು nalike

May 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: