ಗಂಗಾಧರ ಕೊಳಗಿ ಕಥೆ: ಮಿಸ್ಡ್ ಕಾಲ್

  ಗಂಗಾಧರ ಕೊಳಗಿ
ಪರಮೇಶಿ ಮೊದಲಿನಿಂದಲೂ ವ್ಯಕ್ತಿಗಳ ಬಗ್ಗೆಯಾಗಲೀ, ವಸ್ತುಗಳ ಕುರಿತಾಗಲೀ ಹೆಚ್ಚೇ ಅನ್ನಿಸುವಷ್ಟು ನಿರ್ಲಿಪ್ತವಾಗಿಯೇ ಇರುತ್ತಿದ್ದ. ಮನುಷ್ಯರ ಬಗ್ಗೆ ಪ್ರೀತಿ ಅಥವಾ ದ್ವೇಷ, ತಾತ್ಸಾರ, ವಸ್ತುಗಳ ಮೇಲೆ ಹಪಹಪಿಕೆ, ಮೋಹ ಯಾವುದನ್ನೂ ಅತಿಯಾಗಿಯೂ, ತೀರಾ ಕಡಿಮೆಯಾಗಿಯೂ ತೋರಿಸುತ್ತಿದ್ದವನಲ್ಲ. ಅವನು ಅಂಥ ಧೋರಣೆಯನ್ನು ತಳೆಯಲಿಕ್ಕೆ ವೈರಾಗ್ಯವಾಗಲೀ, ಆಧ್ಯಾತ್ಮಿಕ ನಿಲುವಾಗಲೀ ಕಾರಣವಾಗಿರಲಿಲ್ಲ. ತನಗೆ ಆತ್ಮೀಯವಾದ ವ್ಯಕ್ತಿಯಿಂದಾಗಲೀ, ಇಷ್ಟಪಡುವ ವಸ್ತುವಿನಿಂದಾಗಲೀ ಎಲ್ಲಾದರೂ ಕುತ್ತಿಗೆಗೆ ಬರುವಂತಾದರೆ ಎನ್ನುವ ದೂರಾಲೋಚನೆಯೇ ಅವನ ಆ ಮನಸ್ಥಿತಿಗೆ ಕಾರಣವಾಗಿತ್ತು.
ಕೆಲವರನ್ನು ಹಚ್ಚಿಕೊಂಡಂತೇ ಕಂಡರೂ ಪರಮೇಶಿ ಅವರಿಗೆ ಅಂಟಿಕೊಳ್ಳದೇ ಕೆಸುವಿನ ಎಲೆಯ ಮೇಲಿನ ನೀರಿನಂತೆ ಜಾರಿಕೊಳ್ಳುತ್ತಲೇ ಇರುತ್ತಿದ್ದ. ತೀರಾ ಹತ್ತಿರವಾದರೆ ಯಾವಾಗಲಾದರೂ ಅವರಿಗಾಗಿ ದುಡ್ಡುಕಾಸು ಕೈಬಿಡಬೇಕಾದ ಸ್ಥಿತಿ ಎಲ್ಲಿ ಎದುರಾಗುತ್ತದೆಯೋ ಎನ್ನುವ ಆತಂಕ ಅವನನ್ನು ಯಾವಾಗಲೂ ಕಾಡುತ್ತಿತ್ತು. ತನ್ನ ಈವರೆಗಿನ ಬದುಕಿನಲ್ಲಿ ಯಾವುದಕ್ಕೂ ಅತಿಯಾಗಿ ಆಸೆಪಡದೇ ಇದ್ದ ಪರಮೇಶಿಗೆ ಇದ್ದಕ್ಕಿದ್ದಂತೆ ಅದ್ಯಾವ ಕಾರಣಕ್ಕೋ ಮೊಬೈಲ್ ಆ ಪರಿ ಕಾಡತೊಡಗಿತ್ತು.   ಅವನಿಗೆ ತಾನೂ ಒಂದು ಮೊಬೈಲ್ ಇಟ್ಟುಕೊಳ್ಳಬೇಕು ಎನ್ನುವ ಆಶೆ ತುರಿಕೆಯಂತೆ ಕಾಡತೊಡಗಿದ್ದು ವಿಸ್ಮಯವೇ ಆಗಿತ್ತು.
ತನ್ನ ಮನದಿಂಗಿತವನ್ನು ಪರಮೇಶಿ ಅವರಿವರ ಬಳಿ ಸಾಕಷ್ಟು ಸಾರಿ ಹೇಳಿಕೊಂಡ. ಅವರೇನಾದರೂ ದೊಡ್ಡ ಮನಸ್ಸು ಮಾಡಿ ತಮ್ಮಲ್ಲಿರುವ ಹಳತಾಗುತ್ತಿರುವ ಮೊಬೈಲ್‍ನ್ನೇ ‘ ‘ತಗಾ, ನೀನೇ ಇಟ್ಕೋ’ ಎಂದು ಕರುಣಿಸುತ್ತಾರೆನೋ ಎನ್ನುವ ಭರವಸೆಯಲ್ಲಿ ಆ ಆಪೇಕ್ಷೆಯನ್ನು ಅವರಲ್ಲಿ ತೋಡಿಕೊಳ್ಳುತ್ತಿದ್ದ.  ಪ್ರತಿಬಾರಿಯೂ ತನ್ನ ನಿರೀಕ್ಷೆ ಹುಸಿಯಾಗುತ್ತಿರುವದಕ್ಕೆ ಬೇಸರವಾದರೂ ಎಂದಾದರೂ ಫಲ ಕೊಟ್ಟೀತು ಎನ್ನುವ ಖಾತ್ರಿಯಲ್ಲಿ ಯಾರಿಂದಲಾದರೂ ಮೊಬೈಲ್ ಪುಕ್ಕಟೆಯಾಗಿ ಸಿಗಬಹುದಾದ ಪ್ರಯತ್ನವನ್ನ ಮುಂದುವರಿಸಿಯೇ ಇದ್ದ. ಪರಮೇಶಿಗೆ ಮನುಷ್ಯರ ಮನಸ್ಥಿತಿಯನ್ನು ಅಳೆಯುವ ವಿದ್ಯೆ ಕರತಲಾಮಲಕವಾಗಿತ್ತು. ಯಾರನ್ನು ಯಾವ ವೇಳೆಯಲ್ಲಿ ಓಲೈಸಬೇಕು, ಯಾವ ಸ್ಥಿತಿಯಲ್ಲಿ ಅವರ ಮನಸ್ಸನ್ನು ಕೆರಳಿಸಬೇಕು. ಎಲ್ಲಿ ಒತ್ತಿದರೆ ಎಲ್ಲಿ ಬಾಯಿ ಬಿಡುತ್ತದೆ ಎನ್ನುವದೆಲ್ಲ ಆತ ಚೆನ್ನಾಗಿಯೇ ಬಲ್ಲವನಾಗಿದ್ದ. ಅವನ ಬಳಿ ಯಾರಾದರೂ ಬೇರೊಬ್ಬ ವ್ಯಕ್ತಿಯ ಕುರಿತಾಗಿ ಅವನ ಮನಸ್ಸು ವಿಶಾಲವಾದದ್ದು, ಕೇಳಿದ್ದನ್ನು ಕೊಡುತ್ತಾನೆ ಎಂದೆಲ್ಲ ಹೊಗಳಿದರೆ ಪರಮೇಶಿ ಅದನ್ನು ಆ ವ್ಯಕ್ತಿಯ ದೌರ್ಬಲ್ಯ ಎಂದೇ ತಿಳಿಯುತ್ತಿದ್ದ. ಆಗೆಲ್ಲ ಪರಮೇಶಿ  ಮನಸ್ಸಿನಲ್ಲೇ ನಗುತ್ತಿದ್ದನೇ ಹೊರತು ತನ್ನ ಅನಿಸಿಕೆಯನ್ನು ಬಾಯಿ ಮಾತಿನಲ್ಲಿ ಹೊರಗೆಡವುತ್ತಿರಲಿಲ್ಲ.
ಹಲವು ದಿನಗಳ ನಂತರವೂ ಯಾರೊಬ್ಬರೂ ಮೊಬೈಲ್ ದಯಪಾಲಿಸುವ ದೊಡ್ಡತನ ತೋರಿಸದಿದ್ದಾಗ ಪರಮೇಶಿ ಸೆಕೆಂಡ್ ಹ್ಯಾಂಡ್ ಸೆಟ್ ಆದರೂ ಸರಿ, ಕಡಿಮೆ ದುಡ್ಡಿಗೆ ಖರೀದಿಸುವಾ ಎನ್ನುವ ತೀರ್ಮಾನಕ್ಕೆ ಬರಬೇಕಾಯಿತು. ಯಾಕೆಂದರೆ ಮೊಬೈಲ್ ಬಗೆಗಿನ ಗೀಳು ಅವನ ಒಳಗೆ ಉತ್ಪಾತವನ್ನೇ ಹುಟ್ಟಿಸುತ್ತಿತ್ತು. ಪ್ರಾಯದ ಹುಡುಗ, ಹುಡುಗಿಯರಿರಲಿ, ಚುಲ್ಟಾರಿ ಹುಡುಗರ, ಮುದುಕ, ಮುದುಕಿಯರ ಕೈಯಲ್ಲೂ ವಿಧ, ವಿಧ ನಮೂನೆಯ ಮೊಬೈಲ್ ಕಾಣುವಾಗ ‘ಥೂ, ನನಗೆ ಅಂಥದೊಂದು ಮೊಬೈಲ್ ಗತಿಯಿಲ್ಲವೇ?’ ಎನ್ನುವ ವೇದನೆಯಾಗುತ್ತಿತ್ತು. ಮೊಬೈಲ್ ಕುರಿತಾಗಿ ಅವನ ಕಾತರ ಹೆಚ್ಚಿದಂತೆ ಮೊಬೈಲ್ ಇಟ್ಟುಕೊಂಡವರ ಬಗ್ಗೆ ಅವನೊಳಗೆ ಸಣ್ಣಗೆ ದ್ವೇಷ ಹುಟ್ಟಿಕೊಳ್ಳತೊಡಗಿತು. ಸದಾಕಾಲ ಕಿವಿಗೆ ಮೊಬೈಲ್ ಅಂಟಿಸಿಕೊಂಡು ಸ್ಟೈಲ್ ಕೊಡುವ ಹುಡುಗಿಯರನ್ನು ಕಂಡಾಗಲಂತೂ ಸಿಟ್ಟಿನಿಂದ ಕಿಡಿಕಿಡಿಯಾಗುತ್ತಿದ್ದ. ಅಷ್ಟಾದರೂ ಒಂದು ಮೊಬೈಲ್ ಖರೀದಿಸಲು ಮುಂದಾಗದಿದ್ದುದು ಪರಮೇಶಿಯ ಜಿಗುಟುತನಕ್ಕೆ ಸಾಕ್ಷಿಯಾಗಿತ್ತು.

ಮೊಬೈಲ್ ಕುರಿತಾಗಿ ಅಂಥ ಕಾತರ, ಬೇಗುದಿಯಲ್ಲಿದ್ದಾಗ ಅವನ ಪರಿಚಯದವರ ಬಳಿ ಬಳಕೆ ಮಾಡದೇ ಮೂಲೆ ಸೇರಿದ್ದ ನೋಕಿಯಾ ಕಂಪನಿಯ ಸೆಟ್ ಇದೆ ಎನ್ನುವ ಮಾಹಿತಿ ದೊರೆತಿದ್ದೇ ಪರಮೇಶಿ ದುಂಬಾಲು ಬಿದ್ದು ಆ ಸೆಟ್‍ನ ವ್ಯವಹಾರಕ್ಕೆ ಮುಂದಾದ. ಆತನಿಂದ ಅದನ್ನು ಕೊಂಡುಕೊಂಡಿದ್ದ ಎನ್ನುವದಕ್ಕಿಂತ ಹೆಚ್ಚುಕಡಿಮೆ ಪುಕ್ಕಟೆಯಾಗಿ ಹೊಡೆದುಕೊಂಡಿದ್ದ ಎಂದರೆ ಸರಿಯೇನೋ? ಬ್ಯಾಟರಿ ಇಲ್ಲದೇ ಖಾಲಿಯಾಗಿದ್ದ ಅದಕ್ಕೆ ಹೊಸ ಬ್ಯಾಟರಿ ಹಾಕಿಕೊಟ್ಟರೆ ನಿಕ್ಕಿ ದರ ಕೊಡಲು ಅನುಕೂಲವಾಗುತ್ತದೆ ಎಂದು ಅವರಿಗೆ ಹವಾ ಹಾಕಿ ಹೊಸ ಬ್ಯಾಟರಿಯನ್ನೂ ಹಾಕಿಸಿ, ನಂತರದಲ್ಲಿ ಬಣ್ಣ ಮಾಸಿದೆ, ಬಟನ್ ಸರಿಯಿಲ್ಲ ಎಂದೆಲ್ಲ ತಿಣುಕಾಡಿ ಮುನ್ನೂರೋ, ನಾಲ್ಕು ನೂರೋ ರೂಪಾಯಿಗೆ ಅದನ್ನು ಕಿಸೆಗಿಳಿಸಿದ್ದ. ಪರಮೇಶಿಯ ಜಿಗುಟುತನ, ಅಳುಬುರುಕು ಮಾತು ಕೇಳಿ ರೋಸಿ ಹೋದ ಆ ಮೊಬೈಲ್ ಮಾಲೀಕನಿಗೆ ಇವನಿಂದ ಕಳಚಿಕೊಂಡರೆ ಸಾಕು ಅನ್ನಿಸಿಬಿಟ್ಟಿತ್ತು. ತನ್ನ ವರ್ತನೆಯ ಮೂಲಕ ಆತನನ್ನು ಆ ಮನಸ್ಥಿತಿಗೆ ತಂದ ಪರಮೇಶಿ ತಟ್ಟನೆ ಒಂದಿಷ್ಟು ನೋಟು ತೆಗೆದು ಅವನ ಕೈಯಲ್ಲಿಟ್ಟು ಮನಸ್ಸಿನಲ್ಲೇ ನಕ್ಕಿದ್ದ; ಬೆಳಗ್ಗೆ ಎದ್ದ ಘಳಿಗೆ ಒಳ್ಳೇದಿತ್ತು ಎಂದುಕೊಂಡ.
ಆ ಮೊಬೈಲ್‍ನ್ನು ಮನೆಗೆ ತಂದವನೇ ದೇವರ ಪೋಟೋದೆದುರು ಇಟ್ಟು ಕುಂಕುಮ ಹಚ್ಚಿ, ಊದುಕಡ್ಡಿ ಬೆಳಗಿದ. ಮರುದಿನ ಬಸ್ ಸ್ಟಾಂಡ್ ಬಳಿಯ ಹಣ್ಣಿನಂಗಡಿಯ ಫಾರೂಕ್ ಹತ್ತಿರ ‘ನೋಡೋ, ಎಂಥಾ ಸೆಟ್ ಹೊಡೆದೆ ಅಂತಾ, ಹೊಸ ಮೊಬೈಲ್ ಇದರ ಮುಂದೆ ಏನೂ ಅಲ್ಲ’ ಎಂದು ಕೊಚ್ಚಿಕೊಂಡ. ಪರಮೇಶಿಯ ಮೊಬೈಲ್ ಕೈಗೆತ್ತಿಕೊಂಡ ಫಾರೂಕ್ ‘ ಕ್ಯಾರೇ, ಇಸಕೋ ರಂಗ್…’ ಎಂದು ಅಚ್ಚರಿಪಟ್ಟಾಗ ‘ಹೋಗೋ, ನಿನ್ನಂಥ ಸಾಬಿಗೆ ಏನು ಗೊತ್ತು. ಇದು ದೇವರ ಕುಂಕುಮ. ಅದನ್ನ ಬಣ್ಣ ಅಂತೀಯಲ್ಲಾ’ ಎಂದು ರೇಗಿದ. ಮೊಬೈಲ್‍ಗೂ ಪೂಜೆ ಮಾಡೋದನ್ನ ಮೊದಲ ಬಾರಿ ಕೇಳಿದ ಫಾರೂಕ್ ಕಕ್ಕಾಬಿಕ್ಕಿಯಾಗಿದ್ದ. ‘ಇವೆಲ್ಲ ಬಾಳಾ ಇಂಪಾರ್ಟೆಂಟ್ ಇರ್ತಾವೋ, ಮುಂದೆ ಏನೂ ರಿಸ್ಕ ಆಗ್ಬಾರ್ದೂ ನೋಡು’ ಎಂದು ಪರಮೇಶಿ ತಾನು ಈ ಮೊಬೈಲ್ ಬಳಸುವ ಮುನ್ನ ಪೂಜೆ ಮಾಡಿದ್ದಕ್ಕೆ ವಿವರಣೆ ಕೊಟ್ಟ. ಹಾಗಂತ ಪರಮೇಶಿ ಮೊಬೈಲ್ ಕೊಂಡ ನಂತರ ಅದನ್ನ ಸದಾಕಾಲ ಬಳಸುತ್ತಿರಲಿಲ್ಲ. ಅಷ್ಟಕ್ಕೂ ಅವನ ಬಳಿ ಇದ್ದ ಆ ಮೊಬೈಲ್ ನೂರೆಂಟು ವಿಧದಲ್ಲಿ ಬಳಕೆಯಾಗುವ, ಸಾವಿರಾರು ರೂಪಾಯಿಗಳ  ದುಬಾರಿಯದ್ದೇನೂ ಆಗಿರಲಿಲ್ಲ. ಮೊಬೈಲ್ ಚಾಲ್ತಿಗೆ ಬಂದ ಪುರಾತನ ಕಾಲದ ಸೆಟ್ ಅದಾಗಿತ್ತು.  ಮೇಲ್ಭಾಗದ ಕವಚದ ಹೊಳಪು ಮಾಸಿದ್ದಕ್ಕೆ ಅದಕ್ಕೆ ಭದ್ರವಾದ ಪ್ಲಾಸ್ಟಿಕ್ ಕವರ್ ಹಾಕಿಸಿಕೊಂಡ ನಂತರ ನೀರಲ್ಲಿ ಬೀಳಲಿ, ಬಿಸಿಲಲ್ಲಿ ಕಾಯಲಿ, ಮೊಬೈಲಿಗೆ ಏನೂ ಆಗದು ಎನ್ನುವ ಅಚಲ ವಿಶ್ವಾಸ ಪರಮೇಶಿಗೆ ಬಂತು.
ಮೊಬೈಲ್‍ನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುವಾಗೆಲ್ಲ ಅವನೊಳಗೆ ಆತ್ಮವಿಶ್ವಾಸ ತುಂಬಿಕೊಂಡಿರುತ್ತಿತ್ತು. ಅದೊಂದು ಅಮೂಲ್ಯವಾದ ವಸ್ತುವೇನೋ ಅನ್ನುವಂತೇ ಜೋಪಾನವಾಗಿಟ್ಟುಕೊಂಡು ತನಗೆ ಕರೆ ಬಂದಾಗ, ಇಲ್ಲವೇ ತಾನು ಕರೆ ಮಾಡಬೇಕಾದಾಗಷ್ಟೇ ಅದನ್ನು ಹೊರತೆಗೆಯುತ್ತಿದ್ದ. ತನ್ನ ಮೊಬೈಲ್‍ನಿಂದ ಮಾಡುವ ಕರೆ ಬೇರೆಯವರಿಗೆ ಇರಲಿ, ತನಗೇ ಅಗತ್ಯವಾಗಿದ್ದರೂ ಕರೆ ಮಾಡಿ ಎರಡು ರಿಂಗ್ ಆಗುವಷ್ಟರಲ್ಲಿ ಕಟ್ ಮಾಡಿ ಬಿಡುತ್ತಿದ್ದ. ಆ ಮಿಸ್ಡ್ ಕಾಲ್ ನೋಡಿದ ಪುಣ್ಯಾತ್ಮರು ತಿರುಗಿ ಪರಮೇಶಿಗೆ ಕಾಲ್ ಮಾಡಬೇಕಿತ್ತು. ತನ್ನ ಮೊಬೈಲಿಗೆ ಕರೆ ಬಂದರೂ ಇದರಲ್ಲಿರುವ ಕರೆನ್ಸಿ ಖರ್ಚಾಗುತ್ತದೆ ಎಂದು ಯಾರು ನಂಬಿಸಿದ್ದರೋ, ಏನೋ? ಕೆಲವೊಮ್ಮೆ ಹೊರಗಿನಿಂದ ಬರುವ ಕರೆಗಳನ್ನು ಸ್ವೀಕರಿಸದೇ ಸುಮ್ಮನಿರುತ್ತಿದ್ದ. ಆಕಡೆಯಿಂದ ಕರೆ ಮಾಡುವವರು ಏನಾದರೂ ಅರ್ಜೆಂಟ್ ಇದ್ದು ಕರೆ ಮಾಡಿರಬೇಕು ಎನ್ನುವ ಆಲೋಚನೆ ಮಾಡುತ್ತಿರಲೇ ಇಲ್ಲ; ಏನಾದರೂ ಕೆಲಸ ಹೇಳಿಯಾರು ಎನ್ನುವದೂ ಅದಕ್ಕೆ ಕಾರಣವಾಗಿತ್ತು. ತನಗೆ ಬೇಕಾದಾಗ ಮಾತ್ರ ಕರೆ ಸ್ವೀಕರಿಸುವ, ಮಿಸ್ಡಕಾಲ್ ಕೊಟ್ಟು, ಆ ಜನ ತಿರುಗಿ ಕರೆ ಮಾಡಿದಾಗ ಮಾತನಾಡಿ ಹಣ ಉಳಿಸುವ ಚಾಣಾಕ್ಷತೆಗೆ ತನ್ನನ್ನ ತಾನೇ ಮೆಚ್ಚಿಕೊಳ್ಳುತ್ತಿದ್ದ. ಆ ಕಾರಣದಿಂದ ಅವನ ಬೆನ್ನ ಹಿಂದೆ ಮಿಸ್ಡ್ ಕಾಲ್ ಪರಮೇಶಿ ಎಂದು ಗೇಲಿ ಮಾಡುವುದು ಅವನಿಗೆ ಗೊತ್ತಿರಲೇ ಇಲ್ಲ.
ನೋಡಲು ನರಪೇತಲನಂತಿದ್ದು, ಪಾಪದವನಂತೆ ಮೇಲ್ನೋಟಕ್ಕೆ ಕಾಣುತ್ತಿದ್ದ ನಲವತ್ತರ ಆಸುಪಾಸಿನ ಪರಮೇಶಿ ಅಪರಿಮಿತ ಚುರುಕಿನ ವ್ಯಕ್ತಿತ್ವದವನಾಗಿದ್ದ. ಹಳೆಕಾಲದ ಮನೆ, ಸಾಕಷ್ಟು ಜಮೀನು ಅವನ ಕುಟುಂಬಕ್ಕಿದ್ದರೂ ಯಾವುದೋ ಕಾರಣದಿಂದ ಚಿಕ್ಕಂದಿನಲ್ಲೇ ನೂರಾರು ತಾಪತ್ರಯದಲ್ಲಿ ಒದ್ದಾಡಿದ್ದ. ಒಬ್ಬ ಅಣ್ಣ, ಇಬ್ಬರು ಅಕ್ಕಂದಿರಿದ್ದ ಅವನ ಕುಟುಂಬದಲ್ಲಿ ಇವರೆಲ್ಲ ಚಿಕ್ಕವರಾಗಿ, ಅಪ್ಪ, ಅವ್ವರಿಬ್ಬರಿಗೂ ವಯಸ್ಸಾದ ಕಾರಣ ಸಂಸಾರ ದುಸ್ಥಿತಿಗೆ ಬಂದಿತ್ತು. ಹೀಗಾಗಿ ಒಂದು ವರ್ಷವಷ್ಟೇ ಹೈಸ್ಕೂಲಿಗೆ ಮಣ್ಣು ಹೊತ್ತು, ನಂತರ ಪರಮೇಶಿ ಅದಕ್ಕೆ ಉದ್ದಂಡ ನಮಸ್ಕಾರ ಹಾಕಿದ್ದ. ಹಳ್ಳಿಯಲ್ಲಿ ಇದ್ದಿದ್ದರೇ ಕೂಲಿ ಕೆಲಸ ಮಾತ್ರ ಗತಿಯಾಗುತ್ತಿತ್ತೇನೋ? ಪೇಟೆ ಎಂದು ಕರೆಯಿಸಿಕೊಳ್ಳುವ ಆ ಸಣ್ಣ ಊರಿನಲ್ಲಿ ಮನೆಯಿದ್ದ ಕಾರಣ ಪರಮೇಶಿ ಯಾವುದಾದರೂ ಒಂದು ಕೆಲಸವನ್ನು ಹುಡುಕಿಕೊಳ್ಳುವ ಅವಕಾಶವಿತ್ತು. ಪರಮೇಶಿ ನಸುಕಿನಲ್ಲೇ ಎದ್ದು ದಿನಪತ್ರಿಕೆಗಳನ್ನು ಮನೆ, ಮನೆಗೆ ಹಾಕಿ ನಂತರ ಚಾ, ತಿಂಡಿ ಮುಗಿಸಿ ತರಕಾರಿ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಕೂರತೊಡಗಿದ. ಒಂದಿಷ್ಟು ದಿನಗಳ ನಂತರ ಅದನ್ನು ಬಿಟ್ಟು ಬಟ್ಟೆ ಅಂಗಡಿಯಲ್ಲಿ ಸಂಜೆಯವರೆಗೆ ಸೇಲ್ಸಮೆನ್ ಆಗಿ ದುಡಿಯತೊಡಗಿದ. ಬಟ್ಟೆ ಅಂಗಡಿಯವರ ಬಳಿ ಮೊದಲೇ ಮಾತನಾಡಿಕೊಂಡಂತೆ ಸಂಜೆ ಐದರ ನಂತರ ಆ ಊರಲ್ಲಿದ್ದ ಒಂದೇ ಒಂದು ಟೆಂಟ್ ಸಿನೆಮಾ ಟಾಕೀಸ್‍ನ ಟಿಕೇಟ್ ಕೌಂಟರ್‍ನಲ್ಲಿ ಕೂತು ಟಿಕೇಟ್ ಕೊಡುತ್ತಿದ್ದ; ವಿರಾಮಕ್ಕೆ ಬಿಟ್ಟಾಗ ಗೇಟ್ ಕೀಪರ್ ಆಗುತ್ತಿದ್ದ. ಬಟ್ಟೆ ಅಂಗಡಿಯವರ ಕಿರಿಕಿರಿ ಹೆಚ್ಚಾದಾಗ ಅಲ್ಲಿನ ಕೆಲಸವನ್ನು ಬಿಟ್ಟು ಯಾರದೋ ಆಟೋ ರಿಕ್ಷಾವನ್ನು ದಿನ ಬಾಡಿಗೆಗೆ ಓಡಿಸತೊಡಗಿದ. ಹಾಗೂ ಹೀಗೂ ಅ್ಟಷ್ಟಿಷ್ಟು ದುಡಿಯತೊಡಗಿದ. ಮೊದಲಿನಿಂದಲೂ ಹೆಚ್ಚೇ ಅನ್ನಬಹುದಾದಷ್ಟು ಜಿಪುಣನಾಗಿದ್ದ ಪರಮೇಶಿ ದುಡಿದದ್ದನ್ನೆಲ್ಲ ಪೈಸಾ,ಪೈ ಸೆ ಉಳಿಸಿ ಶೇಖರಿಸುತ್ತಿದ್ದ.
ಅವನ ಅಣ್ಣನೂ ಪದವಿಯವರೆಗೆ ಓದಿ ಹುಬ್ಬಳ್ಳಿಯಲ್ಲೋ, ಧಾರವಾಡದಲ್ಲೋ ಖಾಸಗಿ ಕಂಪನಿ ಕೆಲಸಕ್ಕೆ ಸೇರಿದ್ದ. ಏನೇನೋ ಒದ್ದಾಟ ಮಾಡಿ ಅಕ್ಕಂದಿರಿಬ್ಬರನ್ನು ಮದುವೆ ಮಾಡಿಕೊಟ್ಟ ಪರಮೇಶಿ ತಾನೊಂದು ಮದುವೆಯಾಗಬೇಕು ಎನ್ನುವದನ್ನು ಬೇಕೆಂತಲೇ ಮರೆತವನಂತಿದ್ದ. ಯಾರಾದರೂ ‘ವಯಸ್ಸಾಗುತ್ತ ಬಂತು, ಇನ್ಯಾವಾಗ ಮದುವೆ ಆಗ್ತೀ’ ಎಂದರೆ ಮದುವೆಯಾಗದೇ ಉಳಿದ ಅಣ್ಣನ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ. ಹಾಗೇ ತೇಲಿಸಿ ಮಾತನಾಡುತ್ತಿದ್ದರೂ ಅವನೊಳಗೇ ಸಣ್ಣಗೆ ಸಂಚಲನವಾಗುತ್ತಿತ್ತು. ಬಟ್ಟೆ ಅಂಗಡಿಗೆ ಬಂದ ಹುಡುಗಿಯರ ಕುಡಿಯೊಡೆಯುತ್ತಿರುವ ಮೊಲೆಗಳನ್ನು ಕದ್ದು ನೋಡಿದಾಗ ನವಿರಾದ ಭಾವನೆಗಳು ಕುಡಿಯೊಡೆಯುತ್ತಿದ್ದವು. ಬಿಡುವಿದ್ದಾಗ ನೋಡುತ್ತಿದ್ದ ಸಿನೆಮಾಗಳಲ್ಲಿನ ಕ್ಯಾಬರೆ ಡಾನ್ಸ ನರ್ತಕಿಯ ಮಜಬೂತಾದ ಮೊಲೆ, ತೊಡೆಗಳ ಕುಲುಕಾಟ ಕಾಣುವಾಗ ಮೈ, ಮನಸ್ಸು ತುಸುವೇ ಬಿಸಿಯಾಗುತ್ತಿತ್ತು. ಅಂಥ ಸಂವೇದನೆಗಳನ್ನು ಮರುಕ್ಷಣದಲ್ಲೇ ಮರೆತು ಮಾಮೂಲಿ ಜಗತ್ತಿಗೆ ಬಂದುಬಿಡುತ್ತಿದ್ದ ಪರಮೇಶಿ ಬೇಕೆಂತಲೇ ತನ್ನ ತಾರುಣ್ಯವನ್ನು ನಿರ್ಲಕ್ಷಿಸುತ್ತಿದ್ದ. ನಿಧಾನವಾಗಿ ಬದುಕಿನ ಬಂಡಿ ಹಳಿಯ ಮೇಲೆ ಸುಸೂತ್ರವಾಗಿ ಓಡುತ್ತಿದೆ ಎನ್ನುವ ಸಂದರ್ಭದಲ್ಲೇ ಪರಮೇಶಿಗೆ ಮೊಬೈಲಿನ ಮೋಹ ಮಾಯಾಂಗನೆಯಂತೆ ಕಾಡತೊಡಗಿದ್ದು.
ನೂರೆಂಟು ಉದ್ಯೋಗಗಳನ್ನು ಮಾಡುತ್ತ, ಬಿಡುತ್ತ ಇದ್ದ ಪರಮೇಶಿ ಸಿನೆಮಾ ಟಾಕೀಸಿನ ನಂಟನ್ನು ಮಾತ್ರ ಬಿಟ್ಟಿರಲಿಲ್ಲ. ಹಣಕಾಸಿನ ವಿಷಯದಲ್ಲಿ ತುಂಬಾ ಪ್ರಾಮಾಣಿಕನಾದ ಪರಮೇಶಿಯನ್ನು ಕಳೆದುಕೊಳ್ಳುವದು ಆ ಟಾಕೀಸಿನ ಮಾಲೀಕನಿಗೂ ಇಷ್ಟವಿರಲಿಲ್ಲ. ಟೆಂಟ್ ಟಾಕೀಸಿನಲ್ಲಿ ಸಂಜೆ ಐದೂವರೆಯಾಗುತ್ತಿದ್ದಂತೇ ಗಜಮುಖನೇ, ಗಣಪತಿಯೇ ಎನ್ನುವ ಪ್ರಾರ್ಥನೆಯಿಂದ ಶುರುಮಾಡಿ ಇದ್ದಬದ್ದ ಸಿನೆಮಾ ಹಾಡುಗಳನ್ನು ಮೈಕನಲ್ಲಿ ಕೂಗಿಸುವುದು ಇವತ್ತು ಸಿನೆಮಾ ಇದೆ ಎನ್ನುವುದನ್ನು ಖಾತ್ರಿ ಪಡಿಸುವುದರ ಜೊತೆಗೆ ಸಂಪ್ರದಾಯವೇ ಆಗಿಹೋಗಿತ್ತು. ಟಾಕೀಸು ಪಕ್ಕದ ಎತ್ತರದ ಮಾವಿನ ಮರಕ್ಕೆ ಕಟ್ಟಿದ ಮೈಕಿನಲ್ಲಿ ಹಾಡುಗಳು ಹೊರಹೊಮ್ಮತೊಡಗಿದ ಅರ್ಧಗಂಟೆಯಲ್ಲಿ ಪರಮೇಶಿ ಟಾಕೀಸಿನ ಒಳಬಂದು, ಮಾಲೀಕರಿಂದ ಟಿಕೇಟ್ ಬಾಕ್ಸ್ ಇಸಿದುಕೊಂಡು ಕೌಂಟರ್ ಹೊಕ್ಕು, ಎರಡು ಊದಿನಕಡ್ಡಿ ಹಚ್ಚಿ ಟಿಕೇಟ್ ಇಟ್ಟ ಕೌಂಟರಿಗೂ, ಅಲ್ಲಿದ್ದ ಒಂದೆರಡು ದೇವರ ಫೋಟೋಗಳ ಎದುರು ಆಡಿಸಿ ಟಿಕೇಟ್ ಕೊಡಲು ಕೂರುತ್ತಿದ್ದ. ಇದು ಅವನ ನಿತ್ಯದ ಬದುಕಿನ ಕರಾರುವಾಕ್ಕುತನಕ್ಕೆ ನಿದರ್ಶನವಾಗಿತ್ತು. ಮೊಬೈಲ್ ತೆಗೆದುಕೊಂಡ ನಂತರ ನಿಧಾನಕ್ಕೆ ಪರಮೇಶಿಯ ಚಹರೆಗಳು ಬದಲಾಗತೊಡಗಿದವು. ಒಂದು ಕ್ಷಣವೂ ಮೊಬೈಲ್ ತನ್ನ ಸನಿಹದಿಂದ ಬೇರ್ಪಟ್ಟಿರದಂತೆ ಅದರ ತುದಿಗೊಂದು ಹುರಿ ಹಾಕಿ ಕುತ್ತಿಗೆಗೆ ಜೋತು ಹಾಕಿಕೊಂಡಿರುತ್ತಿದ್ದ. ಈಗ ಮೊದಲಿನಂತೆ ಬೇರೆಯವರು ಕಿವಿಗೆ ಮೊಬೈಲ್ ಅಂಟಿಸಿಕೊಂಡು ಮಾತನಾಡುತ್ತಿದ್ದರೆ ಸಿಡಿಮಿಡಿಗೊಳ್ಳುತ್ತಿರಲಿಲ್ಲ. ಮೊದಲಿನಂತೆ ಕೀಳರಿಮೆ ಅನ್ನಿಸದೇ ತಾನೂ ಇತರರಂತೆ ಎನ್ನುವ ಭಾವನೆ ಅವನಲ್ಲಿ ಹುಟ್ಟಿಕೊಂಡಿತು. ತನ್ನ ಬಳಿ ಇರುವ ಮೊಬೈಲ್ ಹಳೆಯದಾದರೇನು? ‘ಯಾವತ್ತೂ ಓಲ್ಡ್ ಇಸ್ ಗೋಲ್ಡ್, ಇದರ ತಾಕತ್ತು ಹೊಸತಕ್ಕೆಲ್ಲಿ ಬಂದೀತು’ ಎಂದು ಆಗಾಗ್ಗೆ ಕೊಚ್ಚಿಕೊಳ್ಳುತ್ತಿದ್ದ. ಅವನ ಮೊಬೈಲ್ ರಿಂಗ್‍ಟೋನ್ ಆದಾಗೆಲ್ಲ ಅವನೊಳಗೆ ಖುಷಿ ಹರಡಿಕೊಳ್ಳುತ್ತಿತ್ತು. ಅದನ್ನು ಅನುಭವಿಸುತ್ತಲೇ ಠೀವಿಯಿಂದ ಅದನ್ನೆತ್ತಿಕೊಂಡು ‘ಹೇಳ್ರೀ’ ಎನ್ನುತ್ತಿದ್ದ.

ಒಂದು ಸಾರಿ ಅತ್ತ ಕಡೆಯಿಂದ ಕರೆ ಮಾಡಿದವರೊಬ್ಬರು ಪರಮೇಶಿ ಘನಗಾಂಭೀರ್ಯದಲ್ಲಿ ‘ಹೇಳ್ರಿ’ ಅಂದದ್ದಕ್ಕೆ ಸಿಟ್ಟಿಗೆದ್ದು ‘ಬೋಳಿಮಗನೇ, ಕೇಳೋದಕ್ಕೆ ಹೇಳ್ತಾ ಇರೋದು, ನಿಂದೆಂತ ಹೇಳ್ರಿ ಅನ್ನೋದು’ ಎಂದು ಬೆಂಡೆತ್ತಿದ ನಂತರದಲ್ಲಿ ಆ ಪದಪ್ರಯೋಗವನ್ನು ಬಿಟ್ಟು ಹಲೋ ಎನ್ನತೊಡಗಿದ. ಆಟೋ ಓಡಿಸುವಾಗ ಆಗಲಿ, ಸಿನೆಮಾ ಟಾಕೀಸಿನ ಟಿಕೇಟ್ ಕೊಡುವಾಗ ಇರಲಿ, ಎದುರಿದ್ದವರ ಬಳಿ ಯಾವ ಕಂಪನಿಯ, ಯಾವ ಗಾತ್ರದ, ಯಾವ ರೂಪದ ಮೊಬೈಲಿದೆ ಎನ್ನುವುದನ್ನು ಮೊದಲು ಗಮನಿಸುತ್ತಿದ್ದ. ಅವರ ಕರೆ ಮಾಡುವ ಕ್ರಮವನ್ನು, ಮಾತನಾಡುವ ಸ್ಟೈಲನ್ನು ಧ್ವನಿಯ ಏರಿಳಿತವನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಮೊದಲಿನಿಂದ ತನಗಿದ್ದ ಅನುಮಾನವನ್ನು ಪರಿಹರಿಸಿಕೊಳ್ಳಲೆಂಬಂತೆ  ಹುಡುಗಿಯರು ಕೂತಾಗ, ನಿಂತಾಗ, ನಡೆಯುವಾಗ ಓಲೆಯಂತೆ ಕಿವಿಗೆ ಮೊಬೈಲ್ ಸಿಕ್ಕಿಸಿಕೊಂಡದ್ದನ್ನು ಕಂಡಾಗ ಅವರು ಮಾತನಾಡುತ್ತಿದ್ದಾರೋ, ಅಥವಾ ಬರೇ ಪೋಸ್ ಕೊಡುತ್ತಿದ್ದಾರೋ ಎಂದು ಪತ್ತೇದಾರಿ ಮಾಡತೊಡಗಿದ. ಬಹುಪಾಲು ಹುಡುಗಿಯರ ಮೊಬೈಲ್ ಚಾಲೂ ಇರದೇ ಕೇವಲ ನೋಡುವವರಿಗೆ ಮಾತು-ಕತೆ ನಡೆಯುತ್ತಿದೆ ಎನ್ನುವ ಭ್ರಮೆ ಹುಟ್ಟಿಸುವುದನ್ನು ಕಂಡು ಹುಡುಗಿಯರ ಚಾಲಾಕಿಗೆ ಬೆರಗಾಗಿದ್ದ. ಮರುಕ್ಷಣ ಅವರ ಬಗ್ಗೆ ಖುಷಿಯೂ ಆಗಿತ್ತು. ಪೈಸಾ ಖರ್ಚಿಲ್ಲದೇ ಮೊಬೈಲ್‍ನಲ್ಲಿ ಮಾತನಾಡುವ ಸುಖವನ್ನು ಪಡೆಯುವುದನ್ನು ಕಂಡು ತಾನೂ ಅವರಂತೆ ಸುಮ್ಮಸುಮ್ಮನೆ ಮೊಬೈಲ್ ಕಿವಿಗೊತ್ತಿ ಯಾವುದೋ ಜಗತ್ತಿನ, ಯಾರೊಂದಿಗೋ ಮಾತನಾಡುತ್ತಿರುವಂತೆ ಅಭಿನಯಿಸತೊಡಗಿದ.
ಪರಮೇಶಿಯ ದಿನನಿತ್ಯದ ಬದುಕಿನ ಜೊತೆಗೆ ಮೊಬೈಲ್ ಜೊತೆಗಿನ ಗಾಢ ಆಪ್ತತೆಯೂ ಮುಂದುವರಿದುಕೊಂಡು ಬರುತ್ತಿದ್ದಂತೇ ಒಂದು ದಿನ ಅವನ ಮೊಬೈಲಿಗೆ ಕರೆಯೊಂದು ಬಂತು. ಕೇವಲ ನಂಬರುಗಳು ಮಾತ್ರ ಕಾಣಿಸಿದ್ದರಿಂದ ಯಾರೋ ಹೊಸಬರು ಎಂದು ಊಹಿಸಿ, ಕರೆ ಸ್ವೀಕರಿಸಿದ ಪರಮೇಶಿ ಒಂದು ಕ್ಷಣ ಸ್ತಂಭಿಭೂತನಾದ. ಅತ್ತಲಿಂದ ಕೇಳಿಸುತ್ತಿದ್ದ ಹೆಣ್ಣೊಂದರ ಮಧುರ ದನಿ ಅವನಲ್ಲಿ ಸೂಕ್ಷ್ಮ ಕಂಪನಗಳನ್ನು ಹುಟ್ಟಿಸಿತು. “ಹೇಗಿದ್ದೀರಾ?” ಎಂದು ಆ ಹೆಣ್ಣು ಮಾತು ಆರಂಭಿಸಿದ್ದಳು. ಅದಕ್ಕೆ ಏನು ಉತ್ತರಿಸುವುದೆಂದು ತೋಚದೇ ಪರಮೇಶಿ ಮೌನವಾಗಿಬಿಟ್ಟ. ಮತ್ತೆ ಆಕೆಯೇ “ಏನ್ರೀ, ನನ್ನ ಮೇಲೆ ಅಷ್ಟೊಂದು ಕೋಪಾನಾ? ಅವತ್ತಿನ ಸಿಟ್ಟು ಇನ್ನೂ ಇಳಿದಿಲ್ವಾ?” ಎಂದು ಮೋಹಕವಾಗಿ ರಾಗವೆಳೆದಳು. ಆಕೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಪರಮೇಶಿಯ ಮನಸ್ಸು ಗೊಂದಲದ ಗೂಡಾಯಿತು. ಅವ್ವ, ಅಕ್ಕಂದಿರ ಬಳಿ ಮಾತನಾಡಿದ್ದು ಬಿಟ್ಟರೆ ಉಳಿದ ಹೆಂಗಸರ ಜೊತೆ ಮಾತೇ ಆಡಿರದ ಪರಮೇಶಿಗೆ ಅವನ ಜೀವಮಾನದಲ್ಲಿ ಅಪರಿಚಿತ ಹೆಣ್ಣೊಬ್ಬಳಿಂದ ಕರೆ ಬಂದದ್ದು ಇದೇ ಮೊದಲಬಾರಿಗಾಗಿದ್ದ ಕಾರಣ ಅವನು ಅಚ್ಚರಿಗೆ ಒಳಗಾಗಿದ್ದ. ಯಾರು ಈಕೆ? ತುಂಬಾ ಪರಿಚಯವಿರುವಂತೆ ಮಾತನಾಡುವ ಈಕೆ ಎಲ್ಲಾದರೂ ಭೇಟಿಯಾದವಳೇ? ಎನ್ನುವ ಪ್ರಶ್ನೆಗಳು ಎದುರಾದವು. ಅವಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳೊಣವೆಂದರೆ ಅವಳ ಮಾದಕವಾದ ಸ್ವರ ಮನಸ್ಸಿಗೆ ಮತ್ತೇರಿಸುತ್ತಿತ್ತು.
ಅವನು ಅಂಥ ಉನ್ಮತ್ತ ಸ್ಥಿತಿಯಲ್ಲಿರುವಾಗ ಆಕೆ ಏಕಾಏಕಿ ತನ್ನ ಮಾದಕ ಸ್ವರವನ್ನು ಕುಗ್ಗಿಸಿ, ‘ಮನೆಯವರ್ಯಾರೋ ಬಂದ್ರೂ, ಮತ್ತೆ ಮಾತಾಡ್ತೀನಿ’ ಎಂದು ಪಿಸುಗುಟ್ಟಿ ಕರೆಯನ್ನು ಕಟ್ ಮಾಡಿಬಿಟ್ಟಳು. ಹೊಸತಾದ ಸುಖಾನುಭವದಲ್ಲಿ ತೇಲುತ್ತಿದ್ದ ಪರಮೇಶಿ ಇದು ಕನಸೋ, ನಿಜವಾಗಿ ನಡೆದಿದ್ದೋ? ಎಂದು ಗಲಿಬಿಲಿಗೊಂಡ. ನಿಜವೆನ್ನುವುದಕ್ಕೆ ಅವನ ಮೊಬೈಲಿನಲ್ಲಿ ದಾಖಲಾಗಿದ್ದ ನಂಬರು ಇತ್ತು. ಚಕ್ಕನೆ ಆ ನಂಬರನ್ನು ಸೇವ್ ಮಾಡಿಕೊಂಡು ಕಿರುನಗೆ ನಕ್ಕ. ಸ್ವಪ್ನದಂತೆ ಕ್ಷಿಪ್ರವಾಗಿ ಸರಿದುಹೋದ ಸಂದರ್ಭ ತನ್ನ ಒಳವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ ಎಂದು ಆಗ ಪರಮೇಶಿ ಅಂದುಕೊಂಡಿರಲೇ ಇಲ್ಲ. ಆ ಸ್ವಪ್ನಕನ್ನಿಕೆಯ ಸ್ವರ ಕೇಳಿಸಿಕೊಂಡ ನಂತರದಲ್ಲಿ ಪರಮೇಶಿಗೆ ಅದೇ ಕಾಡತೊಡಗಿತು. ಆ ಮಾದಕ ಸ್ವರ ಕಿವಿಯಲ್ಲಿ ಗುಂಯ್‍ಗುಡುತ್ತಿತ್ತು. ಆ ಸ್ವರದ ಮೂಲಕ ಅವಳ ರೂಪವನ್ನು ಕಟ್ಟಿಕೊಳ್ಳಲು ಪ್ರಯತ್ನಿಸತೊಡಗಿದ. ಯಾರಾದರೂ ಯುವತಿ ಕಂಡರೆ ಅವಳನ್ನೇ ನೋಡುತ್ತಾ ತಾನು ಕೇಳಿಸಿಕೊಂಡ ಸ್ವರದ ಮೂಲಕ ಆಕೆಯನ್ನು ಹುಡುಕುತ್ತಿದ್ದ. ಆ ಅದೃಶ್ಯ ಹೆಣ್ಣು ಇವರಲ್ಲೇ ಯಾರಾದರೂ ಆಗಿರಬಹುದೇ? ಎನ್ನುವ ಸಂಶಯ ಅವನಿಗೆ ಬರುತ್ತಿತ್ತು. ಪರಮೇಶಿಯ ಅಸಹಜ ವರ್ತನೆ ಕೆಲವರ ಗಮನಕ್ಕೂ ಬಂತು; ಹೆಂಗಸರ ಮುಖ ನೋಡಲೇ ಅಳುಕುವವನು ಈಗ ಹೆಣ್ಣು ಅಂತ ಕಂಡರೆ ಸಾಕು ದಿಟ್ಟಿಸಿ ನೋಡುತ್ತಾನಲ್ಲ! ಎನ್ನುವ ಸಂಶಯವೂ ಆಯ್ತು. ಒಂದಿಬ್ಬರು ‘ಏನೋ, ಚಿಗುರಾಕೆ ಹತ್ತೀಯಲ್ಲ’ ಎಂದು ಛೇಡಿಸಿದರು. ತನ್ನೊಳಗೇ ತನ್ಮಯನಾದಂತೇ ವರ್ತಿಸತೊಡಗಿದ ಪರಮೇಶಿಯ ಕುರಿತಾಗಿ ಪಿಸುಧ್ವನಿಗಳು ನಿಧಾನಕ್ಕೆ ಹರಡಿಕೊಳ್ಳತೊಡಗಿದವು.
ಇದ್ಯಾವುದರ ಪರಿವೆ ಇಲ್ಲದ ಪರಮೇಶಿಯ ಮನಸ್ಸಿನಲ್ಲಿ ವಸಂತ ಋತು ಪಲ್ಲವಿಸತೊಡಗಿತ್ತು. ದೇಹದೊಳಗೆ ಅಪರಿಚಿತ ಸಂಭ್ರಮವೊಂದು ತಂಗಾಳಿ ತೀಡಿದಂತೆ ಸರಿದಾಡತೊಡಗಿತು. ಅದರ ಜೊತೆಗೇ ಆ ಸ್ವರವನ್ನು ಮತ್ತೆ ಮತ್ತೆ ಕೇಳಬೇಕೆಂಬ, ಆ ಹೆಣ್ಣನ್ನು ನೋಡಬೇಕೆಂಬ ತಹತಹ ಹೆಚ್ಚತೊಡಗಿತು. ಸಿನೆಮಾ ಟಾಕೀಜಿನಲ್ಲಿ ಟಿಕೇಟ್ ಕೊಡುತ್ತಲೇ ಮೈಕಿನಲ್ಲಿ ಹೊಮ್ಮುತ್ತಿದ್ದ ಹಾಡುಗಳಲ್ಲಿ ಆ ಸ್ವರವನ್ನು ಅರಸತೊಡಗಿದ. ಕೌಂಟರಿನ ಕಬ್ಬಿಣದ ಬಲೆಗಳ ಕಿಟಕಿಯಾಚೆಗಿನಿಂದ ಬರುವ ಧ್ವನಿಗಳಲ್ಲಿ ಅದನ್ನು ಆಲಿಸತೊಡಗಿದ. ಆಕೆ ಮದುವೆಯಾಗಿರುವವಳೋ? ಅಥವಾ ಇನ್ನೂ ಹರಯದವಳೋ? ಎನ್ನುವ ಗೊಂದಲ ಪರಮೇಶಿಯನ್ನು ಹಣ್ಣಾಗಿಸತೊಡಗಿತು. ಕೆಲಸ ಮಾಡಿ ಸುಸ್ತಾಗಿ ಮಲಗಿದ ರಾತ್ರಿಗಳಲ್ಲೂ ವಿಚಿತ್ರ ಕಾಮನೆಗಳ ಕನಸುಗಳನ್ನು ಕಾಣತೊಡಗಿದ. ತಾನು ಕೇಳಿದ ಧ್ವನಿಯ ಮೂಲಕ ತನ್ನ ಜೊತೆ ಮಾತನಾಡಿದ ಹೆಣ್ಣಿನ ಮುಖ, ಶರೀರವನ್ನೆಲ್ಲ ಊಹಿಸಿಕೊಂಡು ರೋಮಾಂಚಿತಗೊಳ್ಳುತ್ತ ಆಕೆ ಮತ್ತೆ ಕರೆ ಮಾಡುವುದು ಖಂಡಿತವೆಂದು ಪರಮೇಶಿ ತನಗೇ ತಾನು ನಂಬಿಸಿಕೊಳ್ಳುತ್ತಿದ್ದ.
ಹತ್ತೆಂಟು ದಿನಗಳಾದರೂ ಆ ಅದೃಶ್ಯ ಹೆಣ್ಣಿನ ಕರೆ ಬರದೇ ಇದ್ದಾಗ ಪರಮೇಶಿ ಚಡಪಡಿಸತೊಡಗಿದ್ದ.  ದಾಖಲು ಮಾಡಿಟ್ಟುಕೊಂಡಿದ್ದ ಆಕೆಯ ಸಂಖ್ಯೆಗೆ ಕರೆ ಮಾಡುವ ಮನಸ್ಸು ಬಂತಾದರೂ ಸಣ್ಣದಾಗಿ ಭಯ ಹುಟ್ಟಿತು. ಏನಾದರೂ ಹೆಚ್ಚು ಕಡಿಮೆಯಾದರೆ? ಎನ್ನುವ ಊಹೆ ಸ್ವಭಾವತಃ ಪುಕ್ಕಲನಾದ ಅವನನ್ನು ಕಾಡಿತು. ಮತ್ತೆರಡು ದಿನ ಇದೇ ಥರ ಡೋಲಾಯಮಾನ ಮನಸ್ಥಿತಿಯಲ್ಲಿ ಒದ್ದಾಡಿದ ಪರಮೇಶಿ ಆಕೆಗೆ ಕರೆ ಮಾಡುವ ಗಟ್ಟಿಯಾದ ನಿರ್ಧಾರಕ್ಕೆ ಬಂದ. ಯಾವಾಗಲೂ ಮಿಸ್ಡ್ ಕಾಲ್ ಕೊಟ್ಟು ಮಾತ್ರ ಗೊತ್ತಿದ್ದ ಅವನ ಜೀವಮಾನದಲ್ಲಿ ಪ್ರಾಯಶಃ ಸ್ವಂತ ಹಣ ವೆಚ್ಚಮಾಡಿ ಮಾಡುತ್ತಿರುವ ಮೊದಲ ಕರೆ ಅದಾಗಿತ್ತು. ರಿಂಗ್ ಆಗುತ್ತಿದ್ದರೂ ಯಾರೂ ಸ್ವೀಕರಿಸದ ಆ ನಂಬರಿಗೆ ಎರಡು, ಮೂರು ಬಾರಿ ಕರೆ ಮಾಡಿದ. ಅವನೊಳಗಿದ್ದ ಉತ್ಸಾಹ ಕುಗ್ಗುತ್ತ ಬರುತ್ತಿದ್ದರೂ ಮತ್ತೆ ಕರೆ ಮಾಡಿದ. ಅವನ ಅದೃಷ್ಟಕ್ಕೆ ಎನ್ನುವಂತೆ ಆ ಕರೆ ಸ್ವೀಕಾರವಾಗಿಬಿಟ್ಟಿತು.
‘ಹಲೋ, ಯಾರೂ…’ ಅದೆಷ್ಟೋ ದಿನಗಳಿಂದ ಹಗಲು, ರಾತ್ರಿ ಕನಸುತ್ತಿದ್ದ ಸ್ವರ ಅವನ ಕಿವಿಗಳಲ್ಲಿ ಉಲಿದಿತ್ತು. ಕಳೆದು ಹೋದ ಅಮೂಲ್ಯ ವಸ್ತುವೊಂದು ಕೈಗೆ ಸಿಕ್ಕ ಸಡಗರದ ಜೊತೆಗೆ ಆ ಸ್ವರದ ಲಯ ಅವನಿಗೊಂಥರ ನಶೆ ತಂದಿತ್ತು. ಆಕೆಯ ಪ್ರಶ್ನೆಗೆ ಏನು ಹೇಳಬೇಕೆಂದು ತೋಚದೇ ಮೌನವಾದಾಗ ಮತ್ತೆ ಆ ಸ್ವರವೇ ‘ಹಲೋ, ಹೇಳಿ, ಯಾರು ಬೇಕಿತ್ತೂ.., ಯಾರ್ ನೀವೂ..?’ ಎಂದು ಪ್ರಶ್ನಿಸಿತು. ಏನೋ ಹೇಳಲು ಹೋದ ಪರಮೇಶಿಯ ಧ್ವನಿ ಗಂಟಲಿನಿಂದ ಹೊರಡಲೇ ಇಲ್ಲ. ಏನು ಉತ್ತರಿಸಬೇಕು ಎನ್ನುವದು ತೋಚದೇ ಅಯೋಮಯನಾಗಿರುವಂತೆಯೇ ‘ಥತ್’ ಎಂದು ಆ ಹೆಣ್ಣುಸ್ವರ ಕರೆಯನ್ನು ಸ್ಥಗಿತಗೊಳಿಸಿತ್ತು. ಮನಸ್ಸನ್ನೆಲ್ಲಾ ಮಂಕಾಗಿಸಿಕೊಂಡು ಪರಮೇಶಿ ಆ ದಿನವೆಲ್ಲ ಯೋಚಿಸಿದ. ಟಾಕೀಜಿನ ಮಾಲೀಕರಿಗೆ ಇವತ್ತು ಬರಲಾಗೋದಿಲ್ಲ ಎಂದು ಹೇಳಿ ಸಂಜೆ ಐಬಿ ಗುಡ್ಡದ ಮೇಲೆ ಕೂತು ಆಕೆಗೆ ನಾನೇಕೆ ಉತ್ತರಿಸಲಿಲ್ಲ? ಎಂದು ಹಳಹಳಿಸಿದ. ರಾತ್ರಿ ಊಟ ಮಾಡದೇ ಹೊರಳಾಡುತ್ತ ಮಲಗಿದವ ಏನೋ ನಿಶ್ಚಯಕ್ಕೆ ಬಂದು ‘ನಾಳೆ ಮತ್ತೆ ಕರೆ ಮಾಡಬೇಕು, ಹೇಳಬೇಕಾದದ್ದನ್ನು ಹೇಳಬೇಕು’ ಎಂದು ಚಾದರವನ್ನು ಮುಸುಗೆಳೆದು ಅದರಡಿಯ ಕತ್ತಲಲ್ಲಿ ಬಾಯಿಪಾಠ ಮಾಡತೊಡಗಿದ.
ಮರುದಿನವೂ ಮತ್ತೆ ಐಬಿ ಗುಡ್ಡ ಹತ್ತಿ ಯಾರೂ ಇಲ್ಲದ ಜಾಗದಲ್ಲಿ ಕುಳಿತು ಕರೆ ಮಾಡತೊಡಗಿದ. ಹತ್ತಾರು ಕರೆಗಳ ನಂತರ ಪರಮೇಶಿಯ ಕರೆಗೆ ಮೋಕ್ಷ ದೊರಕಿತು. ಮೈ, ಮನಸ್ಸುಗಳನ್ನು ಉತ್ತೇಜಿಸುವ ಅದೇ ಸ್ವರ ‘ಯಾರೂ..’ ಎನ್ನುತ್ತಿರುವಂತೇ ‘ಅದೇ ನಾನು, ನಿನ್ನೆ ಕರೆ ಮಾಡೀದ್ನಲ್ಲಾ, ಅವತ್ತು ನೀವು ನಂಗೆ ಕಾಲ್ ಮಾಡಿದ್ರಲ್ಲಾ’ ಎಂದು ಒಂದೇ ಉಸುರಿಗೆ ಹಿಂದಿನ ದಿನ ರಾತ್ರಿಯೆಲ್ಲ ಬಾಯಿಪಾಠ ಮಾಡಿಕೊಂಡ ಮಾತುಗಳನ್ನೆಲ್ಲ ಮರೆತು ಬಡಬಡಿಸಿದ. ಉದ್ವೇಗದಲ್ಲಿದ್ದ ಪರಮೇಶಿ ಆ ಸ್ವರಕ್ಕಾಗಿ ಚಡಪಡಿಸಿದ. “ಈ ನಂಬರ್ ಯಾರದ್ದೂಂತ ನಂಗೆ ಗೊತ್ತಿತ್ವಲ್ಲಾ? ರಾಂಗ್ ನಂಬರ್ ಇರ್ಬೇಕು ನೋಡಿ” ಎಂದು ಸಮಾಧಾನದಿಂದಲೇ ಹೇಳಿ ಆಕೆ ಕರೆಯನ್ನು ನಿಲ್ಲಿಸಿಬಿಟ್ಟಳು. ಏಕಾಏಕಿ ಪರಮೇಶಿಗೆ ರಸಭಂಗವಾಗಿಬಿಟ್ಟತು. ಹಲವು ದಿನಗಳಿಂದ ಕಟ್ಟಿಕೊಂಡ ಕನಸುಗಳೆಲ್ಲ ನುಚ್ಚುನೂರಾದಂತೆನ್ನಿಸಿ ಅಳು ಬಂದಂತಾಯಿತು. ತನಗಾದ ಸಂಕಟ, ಹತಾಶೆಗಳನ್ನು ಹತ್ತಿಕ್ಕಿಕೊಳ್ಳುವಷ್ಟರಲ್ಲಿ ಮನಸ್ಸಿನಲ್ಲಿ ಒಂದು ಹಠ ನಿಧಾನಕ್ಕೆ ಸಾಂದ್ರಗೊಳ್ಳತೊಡಗಿತು. ‘ನೋಡೇ ಬಿಡುವಾ, ಎಷ್ಟು ಸಲ ಕರೆ ಕಟ್ ಮಾಡ್ತಾಳೆ” ಎಂದುಕೊಳ್ಳುತ್ತ ಮತ್ತೆ ಆ ಸಂಖ್ಯೆಯ ಗುಂಡಿಯೊತ್ತಿದ. ರಿಂಗಾಗುತ್ತಿದ್ದ ಲೈನ್ ಮತ್ತೆ ಕಟ್ ಆಯಿತು. ಪುನಃ ಪ್ರಯತ್ನಿಸಿದ. ಅವನ ಹಠ ರೋಷವಾಗಿ ಮಾರ್ಪಾಡುಗೊಳ್ಳುತ್ತ ಹೋಯಿತು. ಕಟ್ ಆದಂತೆಲ್ಲ ಮತ್ತೆ, ಮತ್ತೆ ಕಾಲ್ ಮಾಡುತ್ತಿದ್ದ ಪರಮೇಶಿಯ ವ್ಯಾಮೋಹಕ್ಕೆ ಮೆಚ್ಚಿಕೊಂಡಂತೆ ಮತ್ತೆ ಆಕೆಯೇ ‘ಹಲೋ’ ಎಂದಳು.

ತಟ್ಟನೆ ಪರಮೇಶಿ ‘ಕಟ್ ಮಾಡ್ಬೇಡ, ಸ್ವಲ್ಪ ಮಾತಾಡೋದಿದೆ’ ಎಂದು ಗಡಬಡಿಸಿದ. ‘ನೀವು ಯಾರೋಂತ್ಲೇ ಗೊತ್ತಿಲ್ಲ. ನನ್ನ ಹತ್ರ ಏನು ಮಾತಾಡೋದಿದೆ’ ಎಂದು ಆಕೆ ಮೃದುವಾದ ದನಿಯಲ್ಲಿ ಕೇಳಿದಳು. ಪರಮೇಶಿಗೆ ಸಮಾಧಾನವೆನ್ನಿಸಿತು. ತನ್ನ ಮಾತಿಗೆ ಕೋಪಿಸಿಕೊಂಡರೆ ಎನ್ನುವ ‘ಏನಿಲ್ಲ, ಆ ದಿನ ನನಗೆ ಕಾಲ್ ಮಾಡೀದ್ರಲ್ಲಾ, ಅದಕ್ಕೆ ತಿರುಗಿ ಕಾಲ್ ಮಾಡ್ದೆ’ ಎನ್ನುವಷ್ಟರಲ್ಲಿ ಅವನಿಗೆ ಸಾಕುಬೇಕೆನ್ನಿಸಿತು. ಅಪರಿಚಿತತೆಯನ್ನು ಪರಿಚಯಕ್ಕೆ ತಿರುಗಿಸಿಕೊಳ್ಳುವ ಕಲೆ ಪರಮೇಶಿಗೆ ಇನ್ನೂ ಸಿದ್ಧಿಸಿರಲಿಲ್ಲದ ಕಾರಣಕ್ಕೇನೋ? ತನ್ನೊಳಗೆ ಮುದುಡಿಕೊಳ್ಳುತ್ತಿದ್ದ. ‘ಹೌದಾ, ನಾನೀಗ ಸ್ವಲ್ಪ ಬಿಜಿ ಇದ್ದೀನಿ. ನಂತರ ಮಾತನಾಡೋಣ ಆಗದಾ?’ ಎಂದಾಗ ‘ಹೂಂ’ ಎಂದು ಉಸಿರುಬಿಟ್ಟ. ಸಂಪರ್ಕವನ್ನು ಕಡಿದುಕೊಳ್ಳುವ ನಿಷ್ಠುರತೆ ತೋರಿಸದ ಅವಕಾಶದಿಂದಾಗಿ ಪರಮೇಶಿ ಆಕೆಯ ಜೊತೆಗಿನ ಮೊಬೈಲ್ ಸಖ್ಯವನ್ನು ವಿಸ್ತರಿಸಿಕೊಳ್ಳುತ್ತ ಹೋದ. ಒಂದೆರಡು ಬಾರಿ ತಡಬಡಾಯಿಸಿದರೂ ನಂತರದಲ್ಲಿ ಅವೆಲ್ಲ ಕರಗಿಹೋಯಿತು. ಎಷ್ಟೋ ದಿನದಿಂದ ಪರಿಚಯವಾದವರಂತೆ ಅದೂ, ಇದೂ ಮಾತನಾಡಿಕೊಳ್ಳುತ್ತ ತನ್ನ ಸಂಕೋಚವನ್ನ ಕಡಿಮೆ ಮಾಡಿಕೊಳ್ಳುತ್ತ ಬಂದ. ತನ್ನ ಮೊದಲಿನ ವ್ಯಕ್ತಿತ್ವವನ್ನು ಅವಳ ಜೊತೆ ಮಾತನಾಡುವಾಗಷ್ಟೇ ಬದಲಿಸಿಕೊಳ್ಳುವವನಂತೆ ವರ್ತಿಸುತ್ತಿದ್ದ. ಆಕೆಯೂ ಯಾವ ಸಿಗ್ಗಿಲ್ಲದೇ ಪರಮೇಶಿಯ ಜೊತೆ ಹರಟುತ್ತಿದ್ದಳು; ಅಷ್ಟಾದರೂ ತನ್ನ ಬಗೆಗಿನ ಯಾವ ವಿವರಗಳನ್ನು ನೀಡದೇ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಳು.
ಪರಮೇಶಿಗೆ ಆ ಹೆಣ್ಣಿನ ಜೊತೆ ಮಾತನಾಡುವುದು ಗೀಳಾಗಿಬಿಟ್ಟಿತು. ಒಂದುದಿನ ಆಕೆ ಕರೆಗೆ ಸಿಗದಿದ್ದರೆ ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸತೊಡಗಿದ. ಮನಸ್ಸು ಮುದುಡಿಸಿಕೊಂಡು ಕೆಲಸದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡ. ಆಕೆ ವಿವಾಹಿತಳೋ? ತರುಣಿಯೋ? ಎನ್ನುವ ಸಂದೇಹ ಆಗಾಗ್ಗೆ ಬರುತ್ತಿದ್ದರೂ ಅದನ್ನು ಪಕ್ಕಕ್ಕೆ ಸರಿಸಿ ಆಕೆಯನ್ನೇ ಧ್ಯಾನಿಸತೊಡಗಿದ. ದಿನಗಳೆದಂತೆ ಪರಮೇಶಿಯ ವ್ಯಾಮೋಹ ಹೆಚ್ಚತೊಡಗಿತು. ಕಣ್ಣಿಗೆ ಕಾಣಿಸಿಕೊಳ್ಳದೇ, ಅದ್ಯಾವುದೋ ನಿಗೂಢ ಸ್ಥಳದಲ್ಲಿ ಅಡಗಿ ತನ್ನನ್ನು ಸೆಳೆಯುತ್ತಿರುವ ಆಕೆಯನ್ನು ಒಮ್ಮೆಯಾದರೂ ಕಾಣಬೇಕೆಂಬ ಹಂಬಲ ಉಕ್ಕುತ್ತಿತ್ತು. ಆದರೆ ಅದಕ್ಕೆ ಆಕೆ ಆಸ್ಪದವೇ ಕೊಡದಂತೆ ತನ್ನ ಪತ್ತೆಯನ್ನ ಕೊಡದೇ ಜಾರಿಕೊಳ್ಳುತ್ತಿದ್ದಳು. ಗಟ್ಟಿಯಾಗಿ ಕೇಳಿಯೇ ಬಿಡೋಣ ಎಂದುಕೊಂಡಾಗೆಲ್ಲ ಅದಕ್ಕೆ ಬೇಸರಿಸಿಕೊಂಡು ಮಾತನಾಡುವದನ್ನ ನಿಲ್ಲಿಸಿಬಿಟ್ಟರೆ? ಎನ್ನುವ ಭಯ ಅವನನ್ನು ಕಾಡುತ್ತಿತ್ತು. ಸದ್ಯದಲ್ಲೇ ಆಕೆ ಪ್ರತ್ಯಕ್ಷಳಾದಾಳು ಎನ್ನುವ ಆಶಾಭಾವದಿಂದ ನಿರೀಕ್ಷೆಯಲ್ಲಿದ್ದ.
ಪರಮೇಶಿಯ ವ್ಯಕ್ತಿತ್ವ, ಅವನ ನಡವಳಿಕೆಗಳು ಅವನಿಗೆ ಅರಿವಾಗದಂತೆ ಬದಲಾಗತೊಡಗಿತು. ಸುತ್ತಲಿನ ಜನ ಆ ಎಲ್ಲ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈಗ ಮೊದಲಿನಂತೆ ಮಾಸಿದ, ಇಸ್ತ್ರಿಯಿಲ್ಲದ ಬಟ್ಟೆಗಳನ್ನ ತೊಡುವ ಬದಲು ಬಣ್ಣದ, ಗರಿ,ಗರಿ ಬಟ್ಟೆಗಳನ್ನ ಧರಿಸಿ ಟ್ರಿಂ ಆಗಿ ಓಡಾಡತೊಡಗಿ ಪರಿಚಯದವರ ಹುಬ್ಬುಗಳನ್ನ ಮೇಲೆ ಮಾಡಿದ್ದ. ಕಾಲಿಗೆ ಸವೆದ ಹವಾಯ್ ಚಪ್ಪಲಿ ಬದಲು ಹೊಸ ವಿನ್ಯಾಸದ ಚಪ್ಪಲಿ ಹಾಕಿಕೊಳ್ಳತೊಡಗಿ ಮನೆಯವರನ್ನ ಆಶ್ಚರ್ಯಕ್ಕೆ ಗುರಿ ಮಾಡಿದ. ವಾರಕ್ಕೊಮ್ಮೆ ನೀಟಾಗಿ ಕ್ರಾಪ್ ಮಾಡಿಸಿಕೊಳ್ಳತೊಡಗಿದ್ದು ಉಳಿದವರಿಗಿರಲಿ, ಖಾಯಂ ಹೋಗುತ್ತಿದ್ದ ಸೆಲೂನ್‍ನವನಿಗೇ ಅಚ್ಚರಿ ಹುಟ್ಟಿಸಿಬಿಟ್ಟಿತು. ತನ್ನ ವರ್ತನೆ, ಬದಲಾವಣೆಗಳಿಂದ ‘ಇದೇನಪ್ಪಾ ಇದು’ ಎಂದು ಸಾಕಷ್ಟು ಮಂದಿಗೆ ಬೆರಗು ಹುಟ್ಟಿಸಿದ ಪರಮೇಶಿ. ಆತನೊಳಗೊಂದು ತಂತು ತನ್ನಿಂದ ತಾನೇ ಶೃತಿಗೊಳ್ಳುತ್ತಿತ್ತು. ಆ ನಾದವನ್ನು ಆತನೊಬ್ಬನೇ ಕೇಳಿಸಿಕೊಳ್ಳಬಲ್ಲವನಾಗಿದ್ದ. ಹೊರಜಗತ್ತಿನಲ್ಲಿ ಪಡೆದುಕೊಳ್ಳಲಾಗದ ಸುಖವೊಂದು ಪರಮೇಶಿಯ ಅಂತರಂಗದ ಜಗತ್ತಿನಲ್ಲಿ ಲಭ್ಯವಾಗಿತ್ತು. ಭ್ರಮೆಯನ್ನು ಸತ್ಯವೆಂದು ಭಾವಿಸಿಕೊಳ್ಳುವ ಸಮ್ಮೋಹನದ ದಾರಿಯಲ್ಲಿ ಆತ ಸಾಕಷ್ಟು ದೂರ ಸಾಗಿಹೋಗಿದ್ದ.
ಈ ನಡುವೆ ಒಮ್ಮೆ ಆಕೆಯೊಂದಿಗೆ ಹರಟುತ್ತಿರುವಾಗ ಅತ್ತಕಡೆಯಿಂದ ಗಡಸುಸ್ವರವೊಂದು ಅಸ್ಪಷ್ಟವಾಗಿ ಕೇಳಿತ್ತು. ಆಕೆ ‘ಯಾರದ್ದೋ ಗೊತ್ತಿಲ್ರೀ, ರಾಂಗ್‍ನಂಬರ್ರು. ಎರಡು, ಮೂರು ಸಾರೆಯಾಯ್ತು’ ಎಂದು ಬೇಸರದ ಧ್ವನಿಯಲ್ಲಿ ಹೇಳಿದ್ದು ಕೇಳಿಸಿತು. ‘ಇಲ್ಕೊಡು, ಯಾರ ಬೇಕೂಂತ ಕೇಳ್ತೀನಿ?’ ಎಂದು ಆ ಧ್ವನಿ ಹೇಳುವಷ್ಟರಲ್ಲಿ ಪರಮೇಶಿ ಲೈನ್ ಕಟ್ ಮಾಡಿದ್ದ. ಆಗಲೇ ಅವನಿಗೆ ಬೆವರೊಡೆದು ಹೋಗಿತ್ತು. ಅಷ್ಟರ ನಂತರವೂ ಇಬ್ಬರ ಮಾತು-ಕತೆ ಅನವರತವಾಗಿ ಮುಂದುವರಿದಿತ್ತು. ಕದ್ದು ಮುಚ್ಚಿ ನಡೆಸುವ ಸಂಭಾಷಣೆ ಪರಮೇಶಿಯಲ್ಲಿದ್ದ ಆ ಅದೃಶ್ಯರೂಪಿಯನ್ನ ಕಾಣಬೇಕೆಂಬ ತಹತಹ ಅಲೌಕಿಕ ಸುಖ ಕೊಡುತ್ತಿತ್ತು. ಅವತ್ತು ಮಧ್ಯಾಹ್ನ ಮತ್ತು ಸಂಜೆಯ ನಡುವಿನ ಘಳಿಗೆಯಲ್ಲಿ ಐಬಿ ಗುಡ್ಡ ಹತ್ತಿ, ಆಕೆಗೆ ರಿಂಗ್ ಮಾಡಿದ. ತಡವಾಗಿ ಎತ್ತಿದರೂ ಯಾವುದೇ ಉತ್ತರವಿಲ್ಲ. ನಂತರದ ಕ್ಷಣ ಮೌನದಲ್ಲಿ ಏನೋ ಗುಸಪಿಸವೆಂದು ಅತ್ತಕಡೆ ಮಾತುಗಳು ಸಣ್ಣದಾಗಿ ಕೇಳಿಸಿದ ಬೆನ್ನಿಗೇ ‘ಯಾರು ಮಾತಾಡ್ತಿರೋದು?’ ಎನ್ನುವ ಗಂಡಸಿನ ಕಟು ಧ್ವನಿ ಕೇಳಿಸಿಕೊಂಡ ಪರಮೇಶಿ ಒಮ್ಮೆಲೇ ಬೆಚ್ಚಿದ. ಮೈ, ಮನಸನ್ನು ಸೂಕ್ಷ್ಮವಾಗಿ ಕೆರಳಿಸುವ, ಅವರ್ಚನೀಯ ಸುಖ ಕೊಡುವ ದನಿಗೆ ಕಾತರಿಸಿದ್ದ ಪರಮೇಶಿ ಕಂಗಾಲಾಗಿ ಮೂಕನಾಗಿಬಿಟ್ಟ. “ಯಾರೋ ನೀನು, ಆವಾಗನಿಂದ ಹೇಳ್ತಿದಾಳೆ, ಈ ನಂಬರ್ ನಂಗೊತ್ತಿಲ್ಲಾ ಅಂತಾ. ಮತ್ಯಾಕೋ ಕಾಲ್ ಮಾಡ್ತೀಯಾ’ ಎನ್ನುವ ಆ ಮಾತಿನ ತೀವ್ರತೆಗೆ ಪರಮೇಶಿಗೆ ಏನು ಹೇಳಬೇಕೆಂದೇ ತೋಚಲಿಲ್ಲ.
“ಏಯ್, ಬೇವರ್ಸಿ, ಹೆಣ್ಣುಮಕ್ಕಳ ನಂಬರ್ ಸಿಕ್ತೂಂದ್ರೆ ಸಾಕು, ಕಾಟ ಕೊಡ್ತೀಯಾ? ಮಿಸ್ ಕಾಲ್ ಕೊಡೋದು ಬೇರೆ. ಇನ್ನೊಂದ್ಸಲ ಕಾಲ್ ಮಾಡಿದ್ರೆ ಹೇಗೂ ನಂಬರ್ ಇದೆ. ಪೊಲೀಸಿಗೆ ಕೊಡ್ತೀನಿ’ ಎನ್ನುತ್ತಿರುವಂತೇ ಪರಮೇಶಿಗೆ ಮರ್ಮಾಘಾತವಾದಂತಾಯಿತು. ಏನೋ ಹೇಳಲು ಪ್ರಯತ್ನಿಸುತ್ತಿದ್ದನಾದರೂ ಅದಕ್ಕೆ ಆಸ್ಪದ ಕೊಡದಂತೇ ಲೈನ್ ಕಟ್ ಆಗಿಬಿಟ್ಟಿತು. ಕಣ್ಣು ಕತ್ತಲೆ ಬಂದಂತಾಗಿ ಎಷ್ಟೋ ಹೊತ್ತಿನ ತನಕ ಕಲ್ಲಾಗಿ ಕುಳಿತಿದ್ದ ಪರಮೇಶಿ. ಸುಧಾರಿಸಿಕೊಂಡು ಅಲ್ಲಿಂದ ಎದ್ದು ಬಂದನಾದರೂ ಅವನಿಗಾದ ಘಾಸಿ ಜರ್ಜರಿತಗೊಳಿಸಿಬಿಟ್ಟಿತ್ತು. ಯಾರ್ಯಾರೋ ಮಾಡುವ ಲಫಡಾಗಳನ್ನು ತನಗೆ ಅವನ್ನೆಲ್ಲ ಆರೋಪಿಸಿ ಬೈಯ್ದದ್ದು ಆತನನ್ನು ಕುಗ್ಗಿಸಿತ್ತು. ಆತನೆಲ್ಲಾದರೂ ತಲೆಕೆಟ್ಟು ಪೊಲೀಸಿಗೆ ಕಂಪ್ಲೇಟ್ ಮಾಡಿದರೆ ತನ್ನ ಮಾನ ಮಣ್ಣು ಪಾಲಾಗುವ ಭಯ ತಳಮಳ ಹುಟ್ಟಿಸಿತು. ಯಾಕಾದರೂ ಈ ಮೊಬೈಲ್ ಕೊಂಡೆನೋ? ಯಾವ ಕೆಟ್ಟ ಘಳಿಗೆಯಲ್ಲಿ ಆಕೆ ಕಾಲ್ ಮಾಡಿದಳೋ? ಅದೆಲ್ಲ ಸರಿ, ಯಾವುದೋ ಅಪ್ಪಿತಪ್ಪಿ ಬಂದ ಮಿಸ್ಡ್ ಕಾಲ್‍ಗೆ ನಾನೇಕೆ ಬೆನ್ನುಬಿದ್ದೆ? ಎನ್ನುವ ಪ್ರಶ್ನೆಗಳನ್ನು ತಲೆಗೆ ಹೊಕ್ಕಿಸಿಕೊಂಡವನಿಗೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎನ್ನುವ ದಿಗಿಲು ಹತ್ತಿಕೊಂಡಿತ್ತು. ರಾತ್ರಿ ನಿದ್ದೆಯಲ್ಲೂ ಬೆಚ್ಚಿಕೊಳ್ಳುತ್ತ ಎದ್ದು ಕೂರತೊಡಗಿದ. ಸೂಜಿಗಲ್ಲಿನಂತೆ ಆರ್ಕಸಿದ ಸ್ವರವನ್ನು ಇನ್ನು ಕೇಳಲಾಗದ ಕೊರಗು, ಇಷ್ಟು ದಿನಗಳ ಬದುಕಿನಲ್ಲಿ ಮೊದಲ ಬಾರಿಗೆ ಕಠೋರವಾಗಿ ಕೇಳಿಸಿಕೊಂಡ ಬೈಯ್ಗುಳದ ನೋವು, ಪೊಲೀಸಿನವರ ಭಯ ಇವೆಲ್ಲವೂ ಅವನನ್ನು ಹೈರಾಣಾಗಿಸತೊಡಗಿತು.
ಪರಮೇಶಿಯ ಮುಖಭಾವ, ದೇಹಸ್ಥಿತಿ ನೋಡಿ ವಿಚಾರಿಸಿದವರಿಗೆ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳತೊಡಗಿದ. ಅವನಾಳದ ಪ್ರಶ್ನೆಗಳ ಭಾರ ಒಂದು ರೀತಿಯ ಮಂಪರನ್ನು ಉಂಟುಮಾಡುತ್ತಿದ್ದ ಕಾರಣ ಸುತ್ತಮುತ್ತಲಿನ ಗಮನ ಇಲ್ಲದವರಂತೆ ತನ್ನೊಳಗೆ ಇಳಿದು ಬಿಟ್ಟಿರುತ್ತಿದ್ದ. ಇಂಥ ಸಂದರ್ಭದಲ್ಲೇ ಅವನ ಹಲವು ದಿನಗಳ ಒಡನಾಡಿಯಾದ ಮೊಬೈಲ್ ಹೇಗೋ, ಏನೋ ಕಳೆದು ಹೋಯಿತು. ಯಾರು ಎಗರಿಸಿದರೋ ಅಥವಾ ಎಲ್ಲಿ ಜೇಬಿನಿಂದ ಜಾರಿ ಬಿತ್ತೋ? ಒಟ್ಟಿನಲ್ಲಿ ಪರಮೇಶಿಯ ಆಗು ಹೋಗುಗಳಲ್ಲಿ ಪಾಲ್ಗೊಳ್ಳುತ್ತ ಆತ್ಮೀಯ ಸಖನಂತಿದ್ದ ಮೊಬೈಲ್ ಇದ್ದಕ್ಕಿದ್ದಂತೇ ನಾಪತ್ತೆಯಾಗಿದ್ದು ಅವನಲ್ಲಿ ಮಿಶ್ರ ಅನಿಸಿಕೆಯನ್ನು ಹುಟ್ಟಿಸಿತ್ತು. ಅವನ ಹತ್ತಿರದವರು ಯಾರಾದರೂ ನಾಪತ್ತೆಯಾಗಿದ್ದರೂ ಇಷ್ಟು ಸಂಕಟಪಡುತ್ತಿದ್ದನೋ, ಇಲ್ಲವೋ? ಮೊಬೈಲ್ ಬಗ್ಗೆ ವಿಚಿತ್ರವಾದ ವ್ಯಾಮೋಹವನ್ನು ಇಟ್ಟುಕೊಂಡಿದ್ದ ಪರಮೇಶಿ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದವನಂತೇ ಏಕದಂ ಚಿಂತಾಕ್ರಾಂತನಾದ. ಎಷ್ಟೊಂದು ಶ್ರಮದಿಂದ, ತನ್ನೆಲ್ಲ ಕಲೆಗಾರಿಕೆಯನ್ನು ವ್ಯಯಿಸಿ, ನೂರಾರು ರೂಪಾಯಿ ಕೊಟ್ಟುಕೊಂಡ ಮೊಬೈಲ್ ಈಗ ಹಠಾತ್ತನೇ ನಾಪತ್ತೆಯಾಗಿತ್ತು. ಅದು ಕಳೆದುಹೋದ ಸಂಕಟದ ಜೊತೆಗೆ ಅದು ಆಕಸ್ಮಿಕವಾಗಿ ಒದಗಿಸಿದ ಘಟನೆಯ ಶಾಕ್‍ಗೆ ಮಂಕಾಗಿಬಿಟ್ಟ. ಮೊಬೈಲ್ ಕಳೆದದ್ದಕ್ಕೆ ಒಂದು ಶನಿ ತೊಲಗಿತು ಎಂದು ಸಮಾಧಾನಪಡಬಹುದಿತ್ತೇನೋ? ಆದರೆ ಏನೂ ಯೋಚಿಸಲಾಗದ, ಯಾವ ಸಹಜ ಸ್ಪಂದನೆಗಳು ಆಗದ ನಿಷ್ಕ್ರಿಯ ಸ್ಥಿತಿಗೆ ಒಳಗಾದ ಪರಮೇಶಿಗೆ ಹಾಗನ್ನಿಸುವುದು ಸಾಧ್ಯವೂ ಇರಲಿಲ್ಲ. ತನ್ನ ಪಾಡಿಗೆ ತಾನಿದ್ದ ಪರಮೇಶಿಯ ಬದುಕಿನಲ್ಲಿ ಆ ಮೊಬೈಲ್ ಕಂಟಕವಾಗಿ ಕಾಡಿತ್ತು.
ವಿಷಾದ, ವಿರಹ, ಭೀತಿ ಎಲ್ಲವೂ ಸಮ್ಮಿಶ್ರಣಗೊಂಡಂತಿದ್ದ ವಿಹ್ವಲ ಸ್ಥಿತಿಯಲ್ಲಿ ಪರಮೇಶಿ ಮೌನಿಯಾಗತೊಡಗಿದ. ಮಾತುಗಳನ್ನೇ ಮರೆತು ಕೇವಲ ಕಳವಳ ತುಂಬಿಕೊಂಡ ಕಣ್ಣುಗಳಲ್ಲಿ ಯಾವುದೋ ನಿರೀಕ್ಷೆಯಲ್ಲಿ ಏನನ್ನೋ ಅರಸತೊಡಗಿದ. ಮೊಬೈಲ್ ಎಂಬ ಮಾಯಾವಿ ಪರಮೇಶಿಗೆ ಕೊಟ್ಟ ಘಾಸಿ ಯಾರ ಗಮನಕ್ಕೂ ಬಾರದೇ ಅವನೊಳಗೇ ಉಳಿದು ಬಿಟ್ಟಿತು.

‍ಲೇಖಕರು nalike

May 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: