ಮೇಘನಾ ಸುಧೀಂದ್ರ ಅಂಕಣ: 'ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?' ಎಂದು ಕೇಳಿದೆ..

ಈ ಬಾಸಿಲೋನಾ ಚರಿತ್ರೆಯಲ್ಲಿ ಮುಳುಗಿಹೋದವಳಿಗೆ ಇನ್ನು ಪರೀಕ್ಷೆ ಹತ್ತಿರ ಬರುತ್ತದೆಂದು ನೆನಪಾಯಿತು.. ಇನ್ನು ಮುಂದೆ ಬೇತಾಳದ ಹಾಗೆ ಕಂಡಕಂಡವರ ಹತ್ತಿರ ಹೋಗಿ “ಈ ನಗರಕ್ಕೆ ಏನಾಗಿದೆ” ಎಂದು ಕೇಳುವ ಹುಚ್ಚು ಬಿಡಬೇಕೆಂದು ನಿರ್ಧರಿಸಿ ಹುಡುಗಿ ತನ್ನ ಪಾಡಿಗೆ ಮನೆಗೆ ಹೋದಳು.

ಪಕ್ಕದ ರೂಮಿನ ಹುಡುಗಿ ಉದ್ದುದ್ದ ಸ್ಕರ್ಟಗಳನ್ನ ಹಾಕಿಕೊಂಡು ರೂಮಿನ ಒಳಗೆ ಹೊರಗೆ ಹೋಗಿ ಬರುತ್ತಿದ್ದಳು. ಒಮ್ಮೆ ಪಿಂಕ್, ಮತ್ತೊಮ್ಮೆ ಕೆಂಪು, ಮಗದೊಮ್ಮೆ ಹಳದಿ ಹೀಗೆ ಒಂದೊಂದೆ ಹಾಕಿಕೊಂಡು ಕನ್ನಡಿಯ ಮುಂದೆ ನಿಲ್ಲುತ್ತಿದ್ದಳು. “ಎಲ್ಲಾ ಸರಿಯಾಗೇ ಇದ್ದಳಲ್ಲ ಮನೆ ಬಿಟ್ಟಾಗ , ಇವಳ್ಯಾಕೆ ಹೀಗೆ ಒಂದೊಂದು ಲಂಗವನ್ನು ಹಾಕಿಕೊಂಡು ನೋಡುತ್ತಿದ್ದಾಳೆ” ಎಂದು ಹುಡುಗಿ ಮನಸಲ್ಲಿ ಅಂದುಕೊಂಡದನ್ನೇ ಮೆತ್ತಗೆ ಬೇರೆ ಥರ “ಯಾಕೆ ಫ್ಯಾಷನ್ ಶೋ ನಡೆಸುತ್ತಿದ್ದೀಯಲ್ಲಾ?” ಎಂದು ಕೇಳಿದರೆ, ಅದೇ ನಿಮ್ಮ ದೇಶದ್ದೇ ಪ್ರೋಗ್ರಾಂ ಅಂದಳು.

ತೀರ ಈಗೇನು ಸಂಕ್ರಾಂತಿಯ, ಯುಗಾದಿಯಾ, ದೀಪಾವಳಿಯಾ ಎಂದು ಅಜ್ಜಿ ಹೇಳಿಕೊಟ್ಟಿದ್ದ ಚೈತ್ರ, ವೈಶಾಖ ಹೇಳಿಕೊಂಡರೂ ಏನೂ ಸಿಗಲ್ಲಿಲ್ಲ. ಕಡೆಗೆ ಏನ್ ಗುರು ಎಂದು ಅವಳನ್ನೇ ಕೇಳಿದಾಗ , “ನಾಲ್ಕೈದು ತಿಂಗಳಾದ ಮೇಲೆ ಲೋರಿ ಸಮಯದಲ್ಲಿ ಹಿಂದಿ ದಿವಸ್ ಗೆ ನಾನು ಹಿಂದಿಯಲ್ಲಿ ಭಾಷಣ ಮಾಡಬೇಕು, ಅದಕ್ಕೆ ಭಾರತದ ರಾಷ್ಟ್ರ ಭಾಷೆ ಕಲಿಸುವ ಕ್ಲಾಸ್ ನಾಳೆ ಶುರುವಾಗುತ್ತದೆ , ಅದಕ್ಕೆ ಸ್ವಲ್ಪ ಭಾರತೀಯಳಾಗಿ ಹೋಗಬೇಕೆಂದುಕೊಂಡುದ್ದೀನಿ… ” ಇನ್ನೂ ಏನೋ ಹೇಳಬೇಕೆನ್ನುವಷ್ಟರಲ್ಲಿ “ಹಲೋ ಹಿಂದಿ ಭಾರತದ ರಾಷ್ಟ್ರ ಭಾಷೆ ಅಂತ ಯಾವ್ ಮಬ್ಬು ನನ್ಮಗ ನಿಂಗೆ ಹಾಗೆ ಹೇಳಿದ್ದು” ಎಂದು ಕನ್ನಡಲ್ಲೇ ಕೇಳಿದಾಗ, “ಓಹ್ ಮತ್ತೊಮ್ಮೆ ಹೇಳು, ನೀನು ನಿನ್ನ ಭಾಷೆಯಲ್ಲಿ ಅಬ್ಯೂಸ್ ಮಾಡ್ತಿದ್ಯಲ್ಲಾ , ಹೇಳು ಮತ್ತೊಮ್ಮೆ … ” ಎಂದು ಕೀಟಲೆ ಮಾಡಲಾರಂಭಿಸಿದ್ದಳು “ನಿನ್ನ ತಲೆ” ಎಂದು ಹೇಳಿ ಹುಡುಗಿ ತನ್ನ ರೂಮಿಗೆ ಹೋಗಿ ದಢಾರ್ ಎಂದು ಬಾಗಿಲು ಹಾಕಿಕೊಂಡಳು.

ಇವತ್ತು ಅವಳಿಗೆ ಎಲೆನಾ ಮೊದಲ ದಿವಸ ತಾನು ಕತಲಾನ್ ಬಗ್ಗೆ ಆಡಿದ ಮಾತು ನೆನಪಿಗೆ ಬಂತು. ಅವಳಿಗೆ ಸ್ಪೇನಿನಲ್ಲಿ ಎಲ್ಲರೂ ಸ್ಪಾನಿಷ್ ಮಾತಾಡುತ್ತಾರೆ ಎಂದರೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು. ಅವಳು ಒಂದು ಕಾಮನ್ ಸೆನ್ಸ್ ಇಲ್ವಾ ಜನಕ್ಕೆ, ಒಮ್ಮೆ ಗೂಗಲ್ ಮಾಡಿದರೆ ಗೊತ್ತಾಗತ್ತೆ ಸ್ಪೇನಿನಲ್ಲಿ ಜಾಸ್ತಿ ಜನ ಸ್ಪ್ಯಾನಿಷ್ ಮಾತಾಡುತ್ತಾರೆ, ಆದರೆ ಅಸ್ತೂರಿಯನ್, ಬಾಸ್ಕ್ ಮತ್ತು ಕತಲಾನ್ ಮಾತಾಡುತ್ತಾರೆ. ಯಾಕೆ ಜನಕ್ಕೆ ಅಷ್ಟನ್ನು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ನಮಗೆ ಅಲ್ಪಸಂಖ್ಯಾತರಾದಗಲೇ ಅವರ ನೋವು ಗೊತ್ತಾಗೋದು. ಬಹುಸಂಖ್ಯಾತ ಸಮಾಜದಲ್ಲಿ ಇವೆಲ್ಲ ಕಷ್ಟ. ಹೀಗೆ ಉದ್ದ ಭಾಷಣ ಮಾಡಿ ಹೋಗಿದ್ದಳು.

ಅವಳ ಮಾತು ಆಗ ಹುಡುಗಿಗೆ ಬಹಳ ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಇವತ್ತು ಅವಳಿಗೆ ಎಲೆನಾಳ ರೋಷದ ಒಂದೊಂದು ಕಿಡಿಯೂ ಆಳವಾಗಿ ತಾಗಿತ್ತು. ಒಂದು ಮನೆಯಲ್ಲಿ ಎಲ್ಲರ ಹತ್ತಿರ ದುಡ್ಡು ತೆಗೆದುಕೊಂಡು ಒಂದು ಮನುಷ್ಯನಿಗೆ ಮಾತ್ರ ಎಲ್ಲಾ ಸುಖಗಳನ್ನು ಕೊಟ್ಟಾಗ ಮನೆಯಲ್ಲಿ ಆಗುವ ಅಸಮತೋಲನ , ದ್ವೇಷ, ಅಸೂಯೆಗಳೇ ಇವಳ ದೇಶ ಮತ್ತು ನನ್ನ ದೇಶದಲ್ಲಿ ನಡೆಯುತ್ತಿದೆ. ಒಂದು ಭಾಷೆಯನ್ನು ಅದು ಆ ನೆಲದ ಭಾಷೆಯೆಂದು ತಪ್ಪುತಪ್ಪಾಗಿ ಬಿಂಬಿಸುವುದು, ಅದನ್ನೆ ಇಡೀ ವಿಶ್ವ ನಂಬುವುದು, ಆ ಭಾಷೆಯನ್ನ ಮಾತಾಡದವರು ಎರಡನೆ ದರ್ಜೆಯ ನಾಗರೀಕರು ಎಂದು ಹೇಳುವುದು, ಕನಿಷ್ಠ ಸೌಲಭ್ಯಗಳನ್ನೂ ಅವರ ಭಾಷೆಯಲ್ಲಿ ನೀಡದೇ ಇರುವುದು, ಬಹುಸಂಖ್ಯಾತರ ಭಾಷೆಯನ್ನು ಮಾತಾಡುವವರು ಅಕ್ಷರಸ್ಥರು, ಮಾತಾಡದೇ ಇರುವವರು ಅನಕ್ಷರಸ್ಥರು ಎಂದು ಷರಾ ಬರೆಯುತ್ತಿರುವ ಈ ಯುಗದಲ್ಲಿ ಅವಳಿಗೆ ಮೊದಲ ಬಾರಿಗೆ ತನ್ನ ಭಾಷೆಯ ನೋವು ಅದರ ಬಗೆಗಿನ ತಳಮಳ ಅರ್ಥವಾಯಿತು.

ಯಾಕೆ ಆಗಾಗ ಬೆಂಗಳೂರಿನ ಟೌನ್ ಹಾಲಿನ ಮುಂದೆ ಕೆಂಪು ಹಳದಿ ಶಾಲುಗಳು , ಬೇರೆ ಭಾಷೆಯ ಬೋರ್ಡಿಗೆ ಮಸಿ ಬಳಿಯುವ ಕಾರ್ಯದಲ್ಲಿ ಎಷ್ಟೋ ಜನ ತೊಡಗಿಸಿಕೊಂಡಿರುವರು ಎಂಬುದು ತಿಳಿದು ಖಿನ್ನಳಾದಳು.

ನನಗೆ ಈ ಬೇತಾಳದ ಕಥೆ ಬೇಡವಾದರೂ ತನ್ನ ಮನಸಿನಲ್ಲಿ ಅವಳ ಮನದಲ್ಲಿ ನಡೆಯುತ್ತಿರುವ ಕಥೆಗೊಂದು ತಾರ್ಕಿಕ ಅಂತ್ಯ ಕಾಣುವ ಉದ್ದೇಶದಿಂದ ಲೂಯಿಸ್ ಕಂಪಾನಿಸಿನ ಬಗ್ಗೆ ತಿಳಿದುಕೊಳ್ಳಲು ಯಾರಾದರೂ ವ್ಯಕ್ತಿಯನ್ನ ಕೇಳೋಣ ಎಂದು ನಿರ್ಧರಿಸಿದಳು.

ಮರುದಿವಸ ಯಥಾಪ್ರಕಾರ ಕಾಲೇಜಿಗೆ ಹೋದಾಗ, ಎಲೆನಾ ಯಾವುದೋ ಕೋಡಿಂಗ್ ಕಾಂಟೆಸ್ಟಿನ ಬಗ್ಗೆ ಹೇಳಿ, ಹೋಗೋಣ ಎಂದಳು. ಅದು ಇರೋದು ಮಾಂಟ್ ಜೂಯಿಕ್ ಹತ್ತಿರ , ಫುನಿಕ್ಯೂಲಾರ್ ರೇಲ್ವೆಯಲ್ಲಿ ಹೋಗಬೇಕು ಹೀಗೆ ಇಷ್ಟುದ್ದ ಹೇಳೋದಕ್ಕೆ ಶುರು ಮಾಡಿದಳು. “ಏನು ಕಾಂಟೆಸ್ಟ್” ಎಂದಾಗ, “ಮಾಂಟ್ ಜ್ಯೂಯಿಕ್ ಕೋಟೆಯಲ್ಲಿ ಸೌಂಡ್ ಆಂಡ್ ಲೈಟ್ ಶೋ ಮಾಡುತ್ತಾರೆ, ಅದಕ್ಕೆ ಸಿಂಥ್ ವಾಯ್ಸ್ ಬೇಕು, ಅದಕ್ಕೆ ನಾವು ಆ ಸಿಂಥ್ ವಾಯ್ಸಿಗೆ ಕೋಡ್ ಬರೆಯಬೇಕು” ಎಂದು ಹೇಳಿದಳು. “ಓಹ್ ಸಕ್ಕತ್” ಮಾಡೋಣ ಬಿಡು. “ಯಾವ ಥರಹದ ವಾಯ್ಸು” ಎಂದಾಗ ಒಂದು ಗಂಡಸಿನ ಧ್ವನಿಯನ್ನ ಹಾಕಿದಳು.

“ಯಾರು ಗೊತ್ತಾಯ್ತಾ” ಎಂದು ಕೇಳಿದಳು. ಇದು ಯಾರೋ ನಮ್ಮ ಮೊದಲ ಪ್ರಧಾನಿ ನೆಹರೂರವರ “At the stroke of the midnight hour, when the world sleeps, India will awake to life and freedom. A moment comes, which comes, but rarely in history, when we step out from the old to the new, when an age ends, and when the soul of a nation, long suppressed, finds utterance.” ಎನ್ನುವ ಹಾಗೆ ಯಾರೊ ಮಹಾನುಭಾವರ ಧ್ವನಿಯೆಂದೇ ಅಂದುಕೊಂಡು, ನಿಮಗೆ ಯಾರೂ ಫಾದರ್ ಆಫ್ ದಿ ನೇಷನ್ ಇಲ್ವಾ” ಎಂದಾಗ “ಇದ್ದಾನೆ ಕಂಪಾನಿಸ್” ಎಂದು ಸ್ವಲ್ಪ ಹೊತ್ತು ಬೇಜಾರು ಮುಖ ಮಾಡಿಕೊಂಡು ನಿಂತಳು. ತನಗಿಂತ ಎರಡು ಪೀಳಿಗೆ ಹಿರಿಯವರ ಹೆಸರನ್ನ ಕೇಳಿ ಭಾವುಕಳಾಗುವ ಎಲೆನಾ ಬಗ್ಗೆ ಚೆನ್ನಾಗಿ ತಿಳಿದಿದ್ದ ಹುಡುಗಿ ಶುರು ಮಾಡು ನಿನ್ನ ಕಥೆ ಎಂದಳು.

ಪ್ರಿಮಾ ದೊ ರಿವೆರಾ ಆದ ನಂತರ ಕತಲೂನ್ಯಾದ ಎಡ ಪಾರ್ಟಿಗಳೆಲ್ಲಾ ಸೇರಿ ಫ್ರಾನ್ಸೆಸ್ ಮಾಕಾಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಎಸ್ಕೆರಾ ರಿಪಬ್ಲಿಕಾನಾ ದೆ ಕತಲೂನ್ಯ ಸಮಾಜವಾದ, ಗಣತಂತ್ರ, ಮತ್ತು ಕತಲನ್ನರ ಸ್ವಾಭಿಮಾನವನ್ನ ಎತ್ತಿ ಹಿಡಿಯತೊಡಗಿತು. ಕಾರ್ಪೋರೇಷನ್ ಚುನಾವಣೆಯಲ್ಲೂ ಎಸ್ಕೆರಾ ಎಲ್ಲಾ ಕಡೆ ಜಯಭೇರಿ ಬಾರಿಸತೊಡಗಿತ್ತು. 1931ರಲ್ಲಿ ಎರಡನೇ ಕತಲೂನ್ಯಾ ಗಣತಂತ್ರವನ್ನ ಘೋಷಿಸಲಾಗಿತ್ತು. ಸ್ವಾಯತ್ತತೆಯನ್ನು ಘೋಷಿಸಿಕೊಂಡ ನಂತರ ಅವರದೇ ಸಂವಿಧಾನವನ್ನೂ ಬರೆಯಲಾಯಿತು. ಮುಂಚೆ ಹೆಣ್ಣುಮಕ್ಕಳಿಗೆ ಮತದಾನ ಮಾಡುವ ಅವಕಾಶವಿರಲ್ಲಿಲ್ಲ. ಎಲ್ಲಾ ಮನುಷ್ಯರು ಕತಲನ್ನರಿಗೆ ಅವರ ಸರ್ಕಾರ ಆರಿಸುವ ಹಕ್ಕು ಮತ್ತು ಅಧಿಕಾರ ಇದೆ ಎಂಬ ಘೋಷವಾಕ್ಯದೊಂದಿಗೆ ಸಂವಿಧಾನ ರಚನೆಯಾಯಿತು..

ಸ್ಪೇನಿನ ಸರ್ಕಾರ ಈ ಸಂವಿಧಾನವನ್ನ ಸಾರಾಸಗಟಾಗಿ ತಳ್ಳಿ ಹಾಕಿತ್ತು. ಕತಲೂನ್ಯ ಬೇರೆ ದೇಶ ಎಂದು ಘೋಷಿಸಿಕೊಂಡಿದ್ದಕ್ಕೆ, ಸ್ಪೇನಿನ ಅಡಿಯಾಳಾಗಿ ಇಲ್ಲದಿದ್ದಕ್ಕೆ. ಎರಡನೇ ಮಹಾಯುದ್ಧದ ಹತ್ತಿರಹತ್ತಿರ ಸ್ಪೇನ್ ವಿಶ್ವ ಚರಿತ್ರೆಯಲ್ಲಿ ಅತಿ ಅಪ್ರಸ್ತುತವಾಗಿ ಕಾಣಿಸತೊಡಗಿತ್ತು. ಫ್ರಾನ್ಸ್ ಮತ್ತು ಜರ್ಮನಿ ಇಬ್ಬರೂ ಇವರನ್ನ ಹುರಿದು ಮುಕ್ಕಲು ತಯಾರಾಗಿದ್ದರು,

ಕತಲೂನ್ಯದ ದುಡ್ಡು ಸ್ಪೇನಿಗೆ ಬೇಕಾಗಿತ್ತು. ರಾಜ ಮನೆತನದ ಲಾಲಸೆಯಿಂದ ಎಲ್ಲ ಕಳೆದುಕೊಂಡ ಮ್ಯಾಡ್ರಿಡ್ಡಿನ ಅಭಿವೃದ್ಧಿಗೆ , ಅವರ ಗಾಂಜಾದ ಅಮಲಿಗೆ ಬಾರ್ಸಾವೇ ದುಡ್ಡು ಕೊಡಬೇಕಿತ್ತು. ಇವರು ಸ್ವಾಯತ್ತೆ, ಸಂವಿಧಾನ ಎಂದರೆ ಮ್ಯಾಡ್ರಿಡ್ ಅಲ್ಲಾಡಿಹೋಗುತ್ತಿತ್ತು. ಸ್ವತಃ ದುಡ್ಡು ದುಡಿಯುವ ತಾಕತ್ತಿಲ್ಲ, ತಮ್ಮ ದಕ್ಷಿಣ ಭಾಗದವರಿಂದ ದುಡ್ಡು ಕಸಿದುಕೊಂಡು ದರ್ಪ ಮಾಡುತ್ತಿದ್ದವರಿಗೆ ಸಡನ್ನಾಗಿ ಈಗ ದುಡ್ಡಿನ ಅಭಾವ ಮತ್ತು ಅವರ ಸ್ವಾಭಿಮಾನ ಕುಗ್ಗಿಹೋಗುವಾಗಲೇ ಆರ್ಯರ ಕಲ್ಪನೆ ಯುರೀಪಿಗೆ ಕಾಲಿಟ್ಟು ಎಷ್ಟೋ ಬುದ್ಧಿವಂತ ಯಹೂದಿಗಳನ್ನ ಪೊಲಾಂಡಿಗೆ ನಾಝಿಗಳು ಸಾಗಿಸುತ್ತಿದ್ದರು. ಮ್ಯಾಡ್ರಿಡ್ದಿನ ಒನ ಹವೆ ಇದೆಲ್ಲಾದಕ್ಕೂ ಸಾಕ್ಷಿಯಾಗಿತ್ತು. ಹೇಗಾದರೂ ಮಾಡಿ ಈ ಸ್ವಾಭಿಮಾನದ ಕತಲನ್ನರನ್ನು ಒಡೆಯುವ ಕೆಲಸವನ್ನ ಮ್ಯಾಡ್ರಿಡ್ಡಿನವರು ಮಾಡುವ ಹುನ್ನಾರದಲ್ಲಿದ್ದರು.

ಬಾರ್ಸಾದ ವಿಷಯ ತೆಗೆದುಕೊಂಡು ಬಾಸ್ಕ್ ದೇಶದವರೂ ಸಹ ತಮ್ಮ ಸಂವಿಧಾನವನ್ನ ಬರೆದು ಅವರೂ ಸ್ವತಂತ್ರರಾದರು. ಸ್ಪಾನಿಷ್ ಭಾಷೆ ಇವರೆಡು ಪ್ರಾಂತ್ಯದಲ್ಲಿಯೂ ಎರಡನೇ ದರ್ಜೆಯ ಭಾಷೆಯಾಯಿತು…., ಒಟ್ಟಿನಲ್ಲಿ ಅವರ ಚಾಕು ಅವರಿಗೆ ಚುಚ್ಚಿದ ಹಾಗೆ ಆಯಿತು” ಎಂದು ಹೇಳಿ ಬಾ ಬಾ ಫುನಿಕ್ಯೂಲಾರ್ ರೇಲಿನ ಕ್ಯೂಗೆ ನಿಂತು ಮಾತಾಡೋಣ ಎಂದು ಎಳೆದಳು ಎಲೆನಾ …

ಕಂಪಾನಿಸ್ ಯಾರು ಎಂದು ಹುಡುಗಿ ಮನಸಿನಲ್ಲಿ ಅಂದುಕೊಳ್ಳುತ್ತಲೇ ಇದ್ದಳು….

‍ಲೇಖಕರು sreejavn

January 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: