ಕಾಡುವ ಜೋಗಿನ್ಮನೆ ಕಥನ ಕೌಶಲ

ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.

ಈ ಕೃತಿಗೆ ಮಲ್ಲೇಪುರಂ ವೆಂಕಟೇಶ್ ಅವರು ಬರೆದ ಮುನ್ನುಡಿ ಇಲ್ಲಿದೆ 

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ 

ಶ್ರೀ ರಾಜಶೇಖರ ಜೋಗಿನ್ಮನೆ, ಕಳೆದ ಇಪ್ಪತ್ತು ವರ್ಷಗಳಿಂದ ಬರೆದ, ಅಲ್ಲಲ್ಲಿ ಪ್ರಕಟವಾದ ಹನ್ನೆರಡು ಕತೆಗಳನ್ನು ಕೂಡಿಸಿ ನಮ್ಮ ಎದುರಿಗೆ ಇಟ್ಟಿದ್ದಾರೆ. ಅವು ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ’ ಶೀರ್ಷಿಕೆಯನ್ನು ಹೊತ್ತು ನಮ್ಮ ಮುಂದಿವೆ. ಅವರ ಕಥೆಗಳು ನನ್ನೊಡನೆ ಒಂದು ತಿಂಗಳಿನಿಂದ ಪ್ರಯಾಣ ಮಾಡಿವೆ. ಜೋಗಿನ್ಮನೆ ಅವರ ಕಥಾ ಸಂವಿಧಾನ ಮತ್ತು ನಿರೂಪಣೆ ವಿಶಿಷ್ಟವಾಗಿದೆ. ಈ ಹನ್ನೆರಡು ಕತೆಗಳಲ್ಲೂ ಅವರ ಕಥಾ ಸಂವಿಧಾನದ ಕಥನಕೌಶಲವನ್ನು ಕಂಡು ನಾನು ನಿಬ್ಬೆರಗಾಗಿದ್ದೇನೆ. ಇಲ್ಲಿಯ ಕತೆಗಳು ಉತ್ತರಕನ್ನಡದ ಪ್ರಾದೇಶಿಕ ನೆಲೆ-ನಿಲುಮೆಗಳನ್ನು ಹೊತ್ತಿವೆ. ಇಲ್ಲಿಬರುವ ಪ್ರಾದೇಶಿಕ ವಿವರಗಳು ಕ್ವಚಿತ್ತಾಗಿದ್ದರೂ ಮನಸ್ಸನ್ನು ಹಿಡಿದು ಸೆಳೆಯುತ್ತವೆ. ಇಲ್ಲಿಯ ಕಥೆಗಳಲ್ಲಿ ವ್ಯಕ್ತವಾಗುವ ಮಾನವಸ್ವಭಾವ-ಪ್ರಕೃತಿಯಾಟ-ಬದಲಾಗುತ್ತಿರುವ ಕಾಲಸನ್ನಿವೇಶ-ಇವುಗಳನ್ನು ಕಥೆಗಾರರು ಬಲು ಸೂಕ್ಷ್ಮವಾಗಿ ಹಿಡಿದಿರುವುದು ಗಮನಿಸತಕ್ಕ ಅಂಶ.

ಈಚಿನ ಕತೆಗಾರರು ವರ್ತಮಾನದ ಸಂಕೀರ್ಣಗತಿಯನ್ನು ಚಿತ್ರಿಸುತ್ತಿದ್ದಾರೆ. ಅವರು ವಿಶೇಷವಾಗಿ ಜಾಗತೀಕರಣದ ಪ್ರಲೋಭನೆಗೆ ಒಳಗಾಗಿರುವ ಸಂಗತಿಯತ್ತ ಹೆಚ್ಚು ಮುಖ ಮಾಡಿದ್ದಾರೆ. ಹೀಗಾಗಿ, ಅವರ ಕಥೆಗಳು ‘ನವ್ಯಾತಿನವ್ಯ’ ಧಾಟಿಗಳನ್ನು ಹಿಡಿದಿವೆ. ಅಲ್ಲಿ ಮಾನುಷಸ್ವಭಾವದ ಪರಿವೇಶಕ್ಕಿಂತ ಯಾಂತ್ರಿಕ ಪರಿವೇಶವೇ ಹೆಚ್ಚು ವಿಜೃಂಭಿಸುವುದನ್ನು ನಾವು ಕಾಣುತ್ತೇವೆ. ಅಲ್ಲಿ ಮಾನವನಿರ್ಮಿತ ವಸ್ತುಕೇಂದ್ರವೇ ಪ್ರಾಧಾನ್ಯ. ಆದರೆ, ಜೋಗಿನ್ಮನೆ ಅತ್ತ ಕಡೆ ಸುಳಿಯದೆ, ತಮ್ಮ ‘ನೈಜಾನುಭೂತಿ’ಗೆ ಸಿಲುಕಿದ ಸಂಗತಿಗಳನ್ನು ಕತೆಯನ್ನಾಗಿಸಲು ತೊಡಗಿದ್ದಾರೆ. ಸಮಕಾಲೀನ ಬರೆಹಗಾರರು ನಗರಕೇಂದ್ರಿತ ಬದುಕಿನ ‘ಯುಟೋಪಿಯಾ’ದ ಕಡೆ ನಡೆದಿದ್ದಾರೆ. ಇದು ರಾಜಶೇಖರ ಜೋಗಿನ್ಮನೆ ಅವರಿಗೆ ತಿಳಿಯದಿರುವ ಸಂಗತಿಯೇನೂ ಅಲ್ಲ. ಆದರೆ, ಆ ‘ಅನುಭವಲೋಕ’ಕ್ಕಿಂತ ತಮ್ಮ ಉತ್ತರಕನ್ನಡದ ‘ಅನುಭವಲೋಕ’ವೇ ಪರಮ ಸತ್ಯವಾಗಿ ಜೋಗಿನ್ಮನೆ ಹಿಡಿದುಕೊಂಡಿದ್ದಾರೆ. ಇದು ಸೃಜನಶೀಲತೆಯ ಪ್ರಶ್ನೆ ಎನ್ನಿಸುತ್ತದೆಯಾದರೂ ರಾಜಶೇಖರರು ಮಾನವಮನಸ್ಸಿನ ‘ಶೋಧನೆ’ಯ ಕಡೆಗೆ ತೊಡಗಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲವು ಕತೆಗಳನ್ನು ಕುರಿತು ಚಿಂತಿಸಬಹುದು. ಈ ಸಂಕಲನದ ಮೊದಲನೆಯ ಕತೆಯೇ ‘ಒಂದೆಲಗದ ತಂಬುಳಿ’. ‘ಒಂದೆಲಗದ ತಂಬುಳಿ’ ಕನ್ನಡದಲ್ಲೇ ಬಂದಿರದ ಆಶಯವೊಂದನ್ನು ಇಟ್ಟುಕೊಂಡಿದೆ. ಕರುಣಾಕರ ಎಂಬುವನ ಸುತ್ತ ಇಲ್ಲಿಯ ಕತೆ ಬೆಳೆಯುತ್ತದೆ. ಚಿಕ್ಕಂದಿನಿಂದಲೇ ತಾಯಿ ‘ಒಂದೆಲಗ’ ಕೊಡುತ್ತಾಳೆ. ಅವನ ನಾಲಗೆ ಕಾಲಕ್ರಮೇಣ ಸರಿಹೋಗುತ್ತದೆ. ಓದಿನಲ್ಲಿ ಬುದ್ಧಿವಂತ. ಆದರೆ, ಮುಂದಿನ ವ್ಯಾಸಂಗ ಮಾಡದೆ, ವ್ಯಾಪಾರಕ್ಕೆ ಕೈಹಚ್ಚುತ್ತಾನೆ. ಅವನು ಬೆಳೆದು, ತನ್ನ ಬಳಿ ಬಂದ ಇನ್ನಿತರರನ್ನೂ ಬೆಳೆಸಿ ಕಾರುಣ್ಯಮಯಿ ಆಗುತ್ತಾನೆ. ಕಿಟ್ಟಣ್ಣ ಮತ್ತು ರಾಧಕ್ಕ ದಂಪತಿಗಳ ಮಗ ಕರುಣಾಕರ ಮುಂದೆ ದೊಡ್ಡವ್ಯಕ್ತಿ ಆಗುತ್ತಾನೆ. ಶಹರದಲ್ಲಿ ದೊಡ್ಡ ಮನೆಕಟ್ಟಿಸಿ ಸಾಮಾಜಿಕರಿಂದಲೂ ಗೌರವಗಳಿಸುತ್ತಾನೆ. ತಂದೆ-ತಾಯಿ ಇಬ್ಬರೂ ತೀರಿಕೊಂಡ ಮೇಲೆ ಹಳೆಯ ನೆನಪುಗಳು ಬಂದು ಕೂರುತ್ತವೆ. ಅಜ್ಜ ಕಳೆದುಕೊಂಡದ್ದನ್ನು ತಾನು ಸಂಪಾದಿಸಿದ್ದು ನೆನಪಿಗೆ ಬರುತ್ತದೆ. ಉಳಿಯುವುದು ಕಳೆದುಕೊಳ್ಳುವ ಕ್ರಿಯೆಯ ಆವರ್ತನವನ್ನು ಈ ಕತೆ ನಿರುಂಬಳವಾಗಿ ಚಿತ್ರಿಸುತ್ತದೆ. ತಲೆಮಾರುಗಳ ನಡುವಣ ಸಂಕೀರ್ಣತೆ, ವೈಯಕ್ತಿಕ ಅಭಿಲಾಷೆಗಳು, ಸಾಮಾಜಿಕ ಜವಾಬ್ದಾರಿ ಮುಂತಾದವು ಇಲ್ಲಿಯ ಮುಖ್ಯ ಆಶಯಗಳಾಗಿ ಅಭಿವ್ಯಕ್ತಗೊಂಡಿವೆ.

ಸಂಕಲನದ ಇನ್ನೊಂದು ಕಥೆ ‘ಆತ’. ಇದರ ಬಂಧ ತುಂಬಾ ಸಂಕೀರ್ಣ. ಕತೆಗಾರರು ‘ಆತ’ನ ಮೂಲಕ ಏನನ್ನೊ ಹೇಳಲು ಹೊರಟಿದ್ದಾರೆ. ಆದರೆ, ಅದು ಪರಿಣಾಮಕಾರಿಯಾಗಿ ಸಂವಹನ ಆಗುವುದಿಲ್ಲ. ಇಲ್ಲಿ ‘ಆತ ’ಎಂಬುದು ಸರ್ವನಾಮ. ವ್ಯಕ್ತಿಯೊಬ್ಬ ವ್ಯಕ್ತಿತ್ವವನ್ನು ಕಳಚಿಕೊಂಡ ಸ್ಥಿತಿಯನ್ನು ಈ ಕಥೆ ಅಭಿವ್ಯಂಜಿಸುತ್ತಿದೆಯೆಂದು ನನಗೆ ತೋರುತ್ತದೆ. ಆದರೆ, ‘ಮುತ್ತಜ್ಜನ ಊರುಗೋಲು’ ಹಾಗೂ ‘ನಾಟಕದ ಮಾರನೇ ದಿನ’-ಇವೆರಡು ಕತೆಗಳು ಸಂಗೀತ, ಕಲೆಗೆ ಸಂಬಂಧಿಸಿವೆ. ಮೊದಲನೆಯ ಕತೆಯಲ್ಲಿ ಮೊಮ್ಮಗ-ಅಜ್ಜನ ಅಪೇಕ್ಷೆಯನ್ನು ಮುಂದುವರಿಸುತ್ತಾನೆ. ಎರಡನೆಯ ಕತೆಯಲ್ಲಿ ಮನೆಬಿಟ್ಟುಹೋದ ಯುವಕ ಉತ್ತಮ ಕಲಾವಿದನಾಗಿ ಹೊರಬರುತ್ತಾನೆ. ಕಲೆಯು ಕೈಹಿಡಿದವನ ಸ್ವತ್ತು-ಎಂಬುದನ್ನು ಇದು ಪ್ರತಿಮಿಸುತ್ತದೆ. ‘ಮುತ್ತಜ್ಜನ ಊರುಗೋಲು’ವಿನ ಮನು ಮತ್ತು ನಾಟಕದ ಮಾರನೇ ದಿನದ  ಮಹೇಶ ಇವರ ಪಾತ್ರಗಳು ಇಲ್ಲಿ ಸಹಜವಾಗಿ ಮೂಡಿ ಬಂದಿವೆ. ಕಲೆಯು ವ್ಯಕ್ತಿಯೊಬ್ಬನಲ್ಲಿ ಅಂತಃಶಕ್ತಿಯಾಗಿ ಹೊರಹೊಮ್ಮುವ ವಿಧಾನವನ್ನು ಜೋಗಿನ್ಮನೆ ಸಹಜವಾಗಿಯೇ ಕಟ್ಟತೊಡಗುತ್ತಾರೆ. ಇಲ್ಲಿಯ ‘ಕಥಾಸಂವಿಧಾನ’ ನೂತನವೂ ನಿತ್ಯಕ್ರಿಯಾವಿಧಾನವೂ ಆಗಿರುವುದು ಮೆಚ್ಚತಕ್ಕ ಸಂಗತಿ! ‘ಮನು’ ಅಜ್ಜನ ಕಲೆಯನ್ನು ಮುಂದುವರಿಸುತ್ತಾನೆ. ಮಹೇಶ ತನ್ನ ಕಲೆಯನ್ನು ಉದ್ಭೂತಗೊಳಿಸಿಬಿಡುತ್ತಾನೆ. ಇವೆರಡು ಕತೆಗಳಲ್ಲಿ ಕಾಣ ಬರುವ ಕಥಾಸಂವಿಧಾನ ಮತ್ತು ಕಲೆಯ ಸದಭಿರುಚಿಯ ನೆಲೆಗಳು ಕಥೆಗಾರರ ಆಶಯವನ್ನು ಪರ್ಯಾಯವಾಗಿ ಪ್ರತಿನಿಧಿಸುತ್ತವೆ.

ಕನ್ನಡಿಗರಿಗೆ ‘ಗೋವಿನ ಹಾಡು’ ಇಷ್ಟವಾದುದೇ ಸರಿ. ಈ ಹಾಡಿನಲ್ಲಿ ಬರುವ ‘ವ್ಯಾಘ್ರ’ವನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಚಂಡವ್ಯಾಘ್ರ’ ಎಂಬ ಕತೆಯೊಂದು ಇಲ್ಲಿ ರೂಪು ಪಡೆದಿದೆ. ಕೆಂಪಿ ಎಂಬ ಹಸು, ಗಿರಿಜೆ ಎಂಬ ಹುಡುಗಿ, ಕೃಷ್ಣ ಎಂಬ ಕೇರಿಯ ಹುಡುಗನ ಸುತ್ತ ಕತೆಯು ಬೆಳೆಯುತ್ತದೆ. ಕಾಡಿನ ಹುಲಿಯೊಂದು ಹೊಂಚುಹಾಕಿ ಕೆಂಪಿಯನ್ನು ತಿನ್ನುತ್ತದೆ. ಇತ್ತ ಕಡೆ ಹೈಸ್ಕೂಲಿನ ಕೊನೆಯ ವರ್ಷದಲ್ಲಿ ಓದುತ್ತಿದ್ದ ‘ಗಿರಿಜೆ’ಯನ್ನು ಕೃಷ್ಣ ಎಂಬ ವ್ಯಾಘ್ರನು ಲೈಂಗಿಕವಾಗಿ ಕೊಲ್ಲುತ್ತಾನೆ. ಆಕೆ ಕಾಲಕ್ರಮೇಣ ಉತ್ಸಾಹ ಕಳೆದುಕೊಂಡು ನೇಣಿಗೆ ಶರಣಾಗುತ್ತಾಳೆ. ಇಂಥ ಕತೆಯನ್ನು ಕತೆಗಾರರು ನಿರ್ವಹಿಸಿರುವ ರೀತಿಗೆ ಯಾರಾದರೂ ಸರಿ ಬೆರಗಾಗಲೇಬೇಕು. ಕತೆಯಲ್ಲಿ ಹರಿಯುವ ವಿಷಾದದ ಸ್ವರೂಪ ನಮಗೆ ಬೆರಗನ್ನು ಉಂಟು ಮಾಡುತ್ತದೆ. ಇಲ್ಲಿ ಬಳಸಿರುವ ಭಾಷೆ, ಪಾತ್ರವನ್ನು ಹಿಡಿದಿಟ್ಟಿರುವ ರೀತಿ, ಉತ್ತಮ ಕಥನಕೌಶಲ್ಯ ಹಾಗೂ ಕತೆಗಾರರ ಪ್ರತಿಭೆಗೆ ಓದುಗರು ಮಣಿಯಬೇಕು.

‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕತೆಯ ಎಳೆ ಚಿಕ್ಕದು. ಆದರೆ, ತಂದೆಯ ಆಶಯದಂತೆ ವಿಗ್ರಹಾನ್ವೇಷಣೆಗೆ ತೊಡಗಿದಾಗ, ಅಲ್ಲಿ ನೀರಿನ ಬುಗ್ಗೆ ಉಕ್ಕುತ್ತದೆ. ಪ್ರಕೃತಿಯ ಜೀವರಾಶಿಗಳಿಗೆ ಇದರಿಂದ ಅನುಕೂಲವಾಗುತ್ತದೆ. ಇದಿಷ್ಟು ಕತೆ. ಆದರೆ, ಈ ಕಥೆಯಲ್ಲಿ ಬರುವ ಮಾನವೀಯ ಸಂವೇದನೆ, ಪ್ರಕೃತಿಯ ಆಲಾಪ-ವಿಲಾಪ, ಒಟ್ಟು ಕತೆಯ ಆಶಯ ನಮ್ಮನ್ನು ವಿಸ್ಮಯಗೊಳಿಸಿ ಬಿಡುತ್ತದೆ. ಕತೆಯಲ್ಲಿ ಬರುವ ಭೂಮಿ, ಕಾನನ, ವನ್ಯಪ್ರಾಣಿ, ಪಕ್ಷಿಗಳ ವಿವರಗಳು ಕತೆಯ ಓಟಕ್ಕೂ ನಿರೂಪಣೆಗೂ ಸಾಂಕೇತಿಕ ಮುಖಾಮುಖಿ ಅಭಿವ್ಯಕ್ತಿಯಾಗುತ್ತವೆ. ಜೋಗಿನ್ಮನೆ ಅವರ ಕಥನಶಕ್ತಿಯು ಸೇಂದ್ರಿಯ ಪ್ರಜ್ಞೆಯಾಗಿ ಹೊರಹೊಮ್ಮವುದನ್ನು ಇಲ್ಲಿ ಕಾಣಬಹುದು. ಈ ಸಂಕಲನದ ‘ಸ್ವಯಂಭೂ’ ಎಂಬ ಕತೆಯಂತೂ ಅತ್ಯಂತ ವಿಲಕ್ಷಣವಾಗಿದೆ. ವ್ಯಕ್ತಿ-ಸಮಾಜ-ಸಮುದಾಯಗಳು ಒಂದು ಸಂಗತಿಯನ್ನು ಪರಿಭಾವಿಸುವ ರೀತಿಯನ್ನು ನಮ್ಮ ಮುಂದಿರಿಸುತ್ತದೆ. ವಾಸ್ತವ ಸಂಗತಿಯು ಹೇಗೆ ಮಿಥಿಕ್ ಆಗಿಬಿಡಬಹುದೆಂಬುದು ಇಲ್ಲಿ ಚಿತ್ರಿತವಾಗಿದೆ.

ಈ ಸಂಕಲನದ ‘ಪ್ರಜಾಪ್ರಭುತ್ವದ ಬೆಂಕಿ’ ಕತೆಯಲ್ಲಿ ರಾಮಚಂದ್ರ ಎಂಬ ವ್ಯಕ್ತಿಯು ತಲಾಂತರದಿಂದ ಬಂದ ಜಮೀನನ್ನು ತನ್ನ ಹೆಸರಲ್ಲಿ ಮಾಡಿಕೊಳ್ಳಲು ಹೆಣಗುವ ಪರಿ ಚಿತ್ರಿತವಾಗಿದೆ. ಪ್ರಜಾಪ್ರಭುತ್ವದ ಅಣಕು ವ್ಯಾಪಾರ ಇಲ್ಲಿದೆ. ವ್ಯಕ್ತಿಯ ಒಳತಳಮಳಗಳು ಇಲ್ಲಿ ಗಾಢವಾಗಿ ಚಿತ್ರಿತವಾಗಿವೆ. ಅದೇ ರೀತಿ ‘ಲಾಟೀನು’ ಎಂಬ ಕತೆಯು ಚಿದಾನಂದ ಎಂಬುವನ ಇತಿವೃತ್ತದ ಸುತ್ತ ಬೆಳೆಯುತ್ತದೆ. ರಮಾಕಾಂತ ಎಂಬುವನು ದುರಾಸೆಗೆ ಬಿದ್ದ ಪರಿಯೂ ಕತೆಯ ಒಳಗೆ ಸುಳಿಯುತ್ತದೆ. ಕತೆಗಾರರು ಚಿದಾನಂದನ ಮೂಲಕ ಸಾಮಾಜಿಕ ವ್ಯವಸ್ಥೆ, ಕಳ್ಳವ್ಯಾಪಾರ ಮುಂತಾದವುಗಳನ್ನು ಚಿತ್ರಿಸುತ್ತಾರೆ. ಇಲ್ಲಿ ವ್ಯಕ್ತಿ ಸ್ವಭಾವಗಳ ಪರಿಕ್ರಮ ಚಿತ್ರಿತವಾಗಿದೆ. ಅಂಗಡಿಯ ಯಜಮಾನ, ಕಳ್ಳ ವ್ಯಾಪಾರಿಗಳು, ಪೊಲೀಸಿನವರು ಗುಂಭವಾಗಿ ಇಲ್ಲಿ ಚಿತ್ರಿತರಾಗಿದ್ದಾರೆ. ಕಥೆಯ ಆಶಯ ಸರಳವಾಗಿದ್ದರೂ ನಿರೂಪಣಾ ವಿಧಾನ ಸಂಕೀರ್ಣವೂ ಗಾಢವೂ ಆಗಿದೆ.

ರಾಜಶೇಖರ ಜೋಗಿನ್ಮನೆ ಅವರು ಬರೆದಿರುವ ಎಲ್ಲಾ ಕತೆಗಳು ಹಳ್ಳಿಯ ಪಡಿಪಾಟಲನ್ನೂ ಇತ್ತ ನಗರದ ಉಪದ್ವಾೃಪಗಳನ್ನೂ ಚಿತ್ರಿಸುತ್ತವೆ. ಉತ್ತರಕನ್ನಡ ಮಣಿ ್ಣನ ವಾಸನೆಯೂ ವರ್ತಮಾನಕಾಲದ ಆರ್ಥಿಕ ಸಾಮಾಜಿಕ ಸಂಗತಿಗಳೂ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಸಂಕಲನದಲ್ಲಿ ಮೂಡಿನಿಂತಿದೆ. ಕಥೆಗಾರರು ವಸ್ತುವನ್ನು ಕೇಂದ್ರೀಕರಿಸುತ್ತಲೇ ಸಂಕಲನದ ಕತೆಗಳು ಬೆಳೆಯುತ್ತವೆ. ಕತೆಗೆ ಬೇಕಾದ ಕಥನಭಾಷೆ, ಕಥಾಸಂವಿಧಾನ, ಕಥಾಪರಿಸರ ಸಾಂದ್ರವಾಗಿ ರೂಪುಗೊಳ್ಳುತ್ತದೆ. ಇಂಥ ಉತ್ತಮ ಕಥಾಸಂಕಲನವನ್ನು ಕನ್ನಡ ಕಥಾಲೋಕಕ್ಕೆ ನೀಡಿದ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕತೆಗಾರರನ್ನು ಓದುಗರ ಪರವಾಗಿ ನಾನು ಅಭಿನಂದಿಸುತ್ತೇನೆ. ರಾಜಶೇಖರ ಜೋಗಿನ್ಮನೆ ತಾನೊಬ್ಬ ‘ವಿಶಿಷ್ಟ ಕತೆಗಾರ’ಎಂಬುದನ್ನು ಇಲ್ಲಿಯ ಕೆಲವು ಕಥೆಗಳ ಮೂಲಕ ಸ್ಥಾಪಿಸಿಕೊಂಡಿದ್ದಾರೆ.

‍ಲೇಖಕರು avadhi

January 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: