ಇಲ್ಲಿಂದ ಮುಂದೆ ಮಾತುಗಳಿಲ್ಲ ನನ್ನಲ್ಲಿ..

ಕಣ್ಣೆದುರು ಬೆಳಕೂ ಇಲ್ಲ, ಕತ್ತಲೆಯೂ ಇಲ್ಲ;
ಕಣ್ಣಲ್ಲಿ ನಿದ್ದೆಯೂ ಇಲ್ಲ, ಎಚ್ಚರವೂ ಇಲ್ಲ…

ಕಣ್ಣಿಗೆ ಕಾಣುವಷ್ಟು ದೂರ ದೂರ ಹಸುರೋ ಹಸುರು, ಸಾಗುವ ದಾರಿಯುದ್ದಕ್ಕೂ ನೆರಳೋ ನೆರಳು. ಕಿವಿಯ ಒಳಗೆ ತನ್ನ ಅರಿವು ತನಗೇ ಆಗುವಂತಹ ನಿಶ್ಯಬ್ಧ. ಅಲ್ಲೊಂದು ಮನೆ. ಮನೆಗೆ ಪೆಟ್ರೋಲ್ ಬಂಕ್ ಥರದ ಒಂದು ಚಾವಣಿ. ಪಾರದರ್ಶಕ ಗೋಡೆಗಳು. ಅಡುಗೆಗೆ ಬೇಕಾದ ತೀರಾ ಅವಶ್ಯ ಸಾಮಗ್ರಿಗಳು, ರಾಶಿ ಪುಸ್ತಕಗಳು.

ನನ್ನ ವೃತ್ತಿ-ಪ್ರವೃತ್ತಿ ಒಂದೇ ಆಗಿರುವ ಕಾರಣ ಎಷ್ಟೇ ಕೆಲಸ ಮಾಡಿದರೂ ಸುಸ್ತಾಯಿತು ಎಂಬ ಪದವನ್ನು ನಾನು ಆಡುವುದೇ ಇಲ್ಲ. ಆದರೆ ವ್ಯವಸ್ಥೆ ಜೊತೆ ಹೊಂದಿಕೊಳ್ಳಲಾಗದ ಕಾರಣಕ್ಕೆ ಉಂಟಾಗುವ ಭಾವ-ಬುದ್ಧಿಯ ನಡುವಿನ ಸಂಘರ್ಷದ ಹೈರಾಣದಿಂದ ಪಾರಾಗಲು ಮೇಲಿನಂತಹ ಹಗಲುಗನಸುಗಳನ್ನು ದಿನವೂ ಸೃಷ್ಟಿಸಿಕೊಳ್ಳುತ್ತಿರುತ್ತೇನೆ.

“ಇವತ್ತು ನಿಮ್ಮ ಪಿಕ್ ಅಪ್ ಗೆ ಡ್ರೈವರ್ ಬರ್ತಾ ಇದಾರೆ, ಆಫೀಸಿಗೆ ಬರ್ತಾ ಇದೀರಿ ತಾನೆ?” ಎಂದು ಎಚ್ ಆರ್ ಸೆಕ್ಷನ್ ನಿಂದ ಫೋನ್ ಬರುವವರೆಗೆ ನನಗೆ ಭಾರತ್ ಬಂದ್, ಕರ್ನಾಟಕ್ ಬಂದ್ ಇರುವುದು ಗೊತ್ತಿರುವುದಿಲ್ಲ ಎಂದರೆ ಅತಿಶಯ ಎನಿಸಬಹುದೇನೋ. ಆದರೆ ನಾನಿರುವುದೇ ಹೀಗೆ.

ನನ್ನ ಮನೆಯಲ್ಲಿ ಯಾವುದೇ ಸಮೂಹ ಸಂವಹನ ಮಾಧ್ಯಮಗಳಿಲ್ಲ. ಎಲ್ಲ ಸಂಪರ್ಕ ಮಾಧ್ಯಮಗಳಿಂದ ನಾನು ಸನ್ಯಾಸ ಸ್ವೀಕರಿಸಿದ್ದೇನೆ. ಆಪ್ತರು, “ತುಸು ಹೆಚ್ಚೇ ಎನ್ನುವಷ್ಟು ಭಾವುಕಳಾಗಿರುವ ನೀನು ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ, ಸಾಮಾಜಿಕ ಜೀವನ ಅಸ್ತವ್ಯಸ್ತವಾದಾಗ ಯಾಕೆ ಏನೂ ಪ್ರತಿಕ್ರಿಯಿಸುವುದಿಲ್ಲ” ಎಂದು ಕೇಳಿದಾಗಲೆಲ್ಲ ನಾನು ನಕ್ಕು ಸುಮ್ಮನಾಗುತ್ತೇನೆ.

ಆದರೆ ಮನಸ್ಸಲ್ಲೇ ಹೇಳಿಕೊಳ್ಳುತ್ತಿರುತ್ತೇನೆ, ‘ಭೂಕಂಪಕ್ಕಿಂತ ದೊಡ್ಡ ಕಂಪನವೊಂದು ನನ್ನ ಎದೆಯೊಳಗೆ ಸಂಭವಿಸುತ್ತಿರುತ್ತದೆ. ತೂಫಾನೊಂದು ನನ್ನ ಮಡಿಲಿನಿಂದಲೇ ಎದ್ದೇಳುತ್ತಿರುತ್ತದೆ,’ ಎಂದು. ಸುತ್ತಲಿನ ವ್ಯವಸ್ಥೆಯ ಅಸ್ತವ್ಯಸ್ತತೆಗೆ ದೇಹ, ಮನಸ್ಸನ್ನು ಒಗ್ಗಿಸಿಕೊಂಡು ಕೆಲಸ ಮಾಡುವುದು ಅಸಾಧ್ಯದ ವಿಷಯವಾಗಿರುವ ನನಗೆ ಬಾಹ್ಯ ಘಟನೆಗಳಿಗಿಂತ ಮನಸಿನ ಘಟನೆಗಳು ಹೆಚ್ಚಾಗಿ ಕಾಡುತ್ತವೆ.

ವರ್ಷದ ಗುತ್ತಿಗೆ ಮೇಲೆ ಕೆಲಸಕ್ಕೆಂದು ಬೇರೆ ದೇಶಕ್ಕೆ ಹೋದ ಸ್ನೇಹಿತ ಅಲ್ಲೇ ನೆಲೆ ನಿಲ್ಲುವ ನಿರ್ಧಾರ ಕೈಗೊಂಡ. ಇನ್ನೊಂದು ಸಲ ಯೋಚಿಸು ಎಂದವಳಿಗೆ, ‘ಅಪ್ಪನ ಸಂಬಳಕ್ಕಿಂತ ಬೇರೆ ಬೇರೆ ಮೂಲಗಳಿಂದ ಬರುತ್ತಿದ್ದ ಹಣದಲ್ಲೇ ನಾನು ಬೆಳೆದದ್ದು. ನನ್ನ ಜಾಣ್ಮೆ, ಸಾಧನೆಗಳನ್ನು ನೋಡಿದಾಗಲೆಲ್ಲ ಅಪ್ಪ, ಅಪ್ಪನ ಸ್ನೇಹಿತರು ಈ ಭ್ರಷ್ಟ ವ್ಯವಸ್ಥೆಯಲ್ಲಿ ನೀನು ಬದುಕುವುದು ಬೇಡ ಎಂದು ಪಣ ತೊಟ್ಟಂತೆ ನನ್ನನ್ನು ವಿದೇಶಕ್ಕೆ ಕಳುಹಿಸಿದರು.’

‘ಅವರು ತಮ್ಮ ತಮ್ಮ ಅಂತರಂಗವನ್ನು ಒಮ್ಮೆಯೂ ಕೇಳಿಕೊಳ್ಳಲಿಲ್ಲ, ‘ನಮ್ಮ ಮಕ್ಕಳೇ ಈ ವ್ಯವಸ್ಥೆಯಲ್ಲಿ ಬದುಕಲಾರದಷ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೇವೆ. ಇದು ತಪ್ಪಲ್ಲವೇ,’ ಎಂದು. ನಾನೇನು ಸುಖ ಅರಸಿ ಅಲ್ಲಿಗೆ ಹೋಗುತ್ತಿಲ್ಲ. ವ್ಯವಸ್ಥೆಯ ಜೊತೆ ಅಗತ್ಯಕ್ಕಿಂತ ಹೆಚ್ಚಿನ ರಾಜಿ ಮಾಡಿಕೊಂಡು ಎಲ್ಲ ಚೆನ್ನಾಗಿದೆ ಎಂದು ದೇಶಾವರಿ ನಗೆ ನಗುತ್ತ ಇಲ್ಲಿ ಸುಖವಾಗಿರದ ನಾನು ಅಲ್ಲಿಯೂ ನೆಮ್ಮದಿಯಿಂದ ಇರಲಾರೆ.

ಅಲ್ಲಿ ಪರದೇಶಿ, ಇಲ್ಲಿ ಅತಂತ್ರ ಎಂದವನಿಗೆ ವ್ಯವಸ್ಥೆ ಸರಿ ಪಡಿಸುವ ನಿರ್ಧಾರ ಕೈಗೊಂಡು ಇಲ್ಲೇ ಉಳಿದರೆ ಎಂದೆ. ನೂರು ವರ್ಷ ಕಳೆದರೂ ಅದು ಸಾಧ್ಯವಾ ನೀನೇ ಯೋಚಿಸು ಎಂದ. ಪ್ರಸಕ್ತ ಘಟನೆಗಳನ್ನು ಎಷ್ಟೇ ವಸ್ತುನಿಷ್ಠವಾಗಿ ನೋಡಬೇಕು ಅನಿಸಿದರೂ ವಲಸಿಗರ ಮಕ್ಕಳ ವಿಷಯಕ್ಕೆ ಬಂದಾಗ ನಾನು ತುಂಬಾ ಎಮೋಷನಲ್ ಆಗುತ್ತಿದ್ದೇನೆ. ವ್ಯವಸ್ಥೆ ಹುಟ್ಟು ಹಾಕುತ್ತಿರುವ ಅಸ್ಥಿರತೆಯಿಂದ ಆ ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮವನ್ನು ಯಾರಾದರೂ ಗಮನಿಸುತ್ತಿದ್ದಾರಾ? ಆ ಮಕ್ಕಳ ಮನಸ್ಥಿತಿ ಎಷ್ಟು ಪಕ್ಷುಬ್ಧಗೊಳ್ಳಬಹುದು ಎಂದು ಯೋಚಿಸಿದರೇ ಭಯವಾಗುತ್ತದೆ.

ಕಳ್ಳತನ, ದರೋಡೆ, ಭಯೋತ್ಪಾದನೆ ಮತ್ತೊಂದು, ಮಗದೊಂದು ಮನುಷ್ಯ ಸಹಜ ಸಣ್ಣತನ ಕೆಟ್ಟ ಬುದ್ಧಿಗಳಲ್ಲಿ ಒಂದು. ಅದು ಜಾತಿವಾರು ವಿದ್ಯೆಯಲ್ಲ. ಎಲ್ಲಿ ನೋಡಿದರೂ ಆ ಧರ್ಮ, ಈ ಜಾತಿ. ಮನುಷ್ಯರೆಲ್ಲ ಎಲ್ಲಿ ಹೋದರೋ ಕಾಣೆ! ಜನರನ್ನು ಧರ್ಮ, ಭೂಭಾಗದ ಮೇಲೆ ವಿಂಗಡಿಸಿದರೂ, ಭಾರತೀಯತೆ ಆಧಾರದಲ್ಲಿ ಒಂದಾಗಿಸುವ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವವರೆಗೆ ಈ ಗೊಂದಲಗಳಿಂದ ಬಿಡುಗಡೆ ಇಲ್ಲ ಎಂದು ಹೊರಟ.

ಊರಿನ ಬಗ್ಗೆ ನನಗಿಂತ ಹೆಚ್ಚೆ ಪ್ರೀತಿ ಅಭಿಮಾನ ಹೊಂದಿದ್ದವನು ಹೊರಡುವಾಗ ಚಾಚಿದ ಕೈಯ್ಯಲ್ಲಿ ಕೈಯಿಟ್ಟವಳ ಮುಂಗೈಗೆ ಒತ್ತಿದ ಮೌನಸ್ಪರ್ಶದಲ್ಲೇ ಗೊತ್ತಾಗುತ್ತಿತ್ತು ಈ ಮನಸಿನಲ್ಲಿದ್ದ ಸಂಕಟ. ನಮ್ಮ ತಲೆಮಾರಿನ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ. ನಮ್ಮ ಮನಸ್ಥಿತಿಯನ್ನು ಯಾರೂ ಒಂದು ಚೌಕಟ್ಟಿನಲ್ಲಿ ಇಟ್ಟು ನೋಡಲೂ ಸಾಧ್ಯವಿಲ್ಲ. ನಮ್ಮವು ಒಂದರಿಂದ ಇನ್ನೊಂದಕ್ಕೆ ವ್ಯತ್ಯಾಸಗಳೇ ಇಲ್ಲದ ದಿನಗಳು. ಅದೇ ನೋಟ, ಅದೇ ಊಟ. ಇರಳು-ಬೆಳಕಿಗೂ, ಸಾವು-ಬದುಕಿಗೂ ವ್ಯತ್ಯಾಸವಿಲ್ಲದ, ಸಂಯಮವಿಲ್ಲದ ಪ್ರತಿಕ್ರಿಯೆಗಳ ನಡೆ-ನುಡಿ, ನಾವು ನಾವೇ ಎಲ್ಲರ ಬಯಕೆಗಳ ಪ್ರತಿರೂಪ. ಒಂದು ಹೊತ್ತಿಗೆ ಕಾಲವನ್ನೇ ನಮ್ಮ ಕೈಗೆ ತೆಗೆದುಕೊಂಡು ಹರ್ಷಿಸಿದರೆ, ಮತ್ತೊಂದು ಹೊತ್ತಿಗೆ ನಮ್ಮನ್ನ ಕಾಡುವ ತಲ್ಲಣ, ಅನಾಥ ಪ್ರಜ್ಞೆ ಯಾರ ಊಹೆಗೂ ನಿಲುಕುವುದಿಲ್ಲ.

ನಮಗೆ ಎಲ್ಲವೂ ಇದೆ. ಆದರೆ ಏನೂ ಇಲ್ಲ ಎನ್ನುವಂತೆ ಬದುಕುತ್ತಿದ್ದೇವೆ. ಜಗತ್ತು ಯಾವುದನ್ನು ಸುಖ ಎನ್ನುತ್ತದೆಯೋ ಅದನ್ನೆಲ್ಲ ಸೂರೆ ಹೊಡೆದರೂ, ಯಾವುದೂ ಖುಷಿ ನೀಡುವುದಿಲ್ಲ. ಅಕಾರಣ ಹಿಂಸೆ ಮನಸ್ಸನ್ನು ಹಿಂಡಲು ಶುರುವಾಗುತ್ತದೆ. ನೋವನ್ನೇ ನೇಯುತ್ತಾ ನಿದ್ದೆಗೆ ಜಾರುವ ಪ್ರಯತ್ನ. ಕಣ್ಣೆದುರು ಬೆಳಕಿಲ್ಲದ, ಕತ್ತಲವಿಲ್ಲದ ಈ ಸ್ಥಿತಿಗೆ ಏನೆನ್ನಬೇಕು? ಕಣ್ಣಲ್ಲಿ ನಿದ್ದೆಯೂ ಇಲ್ಲದ ಎಚ್ಚರವೂ ಇಲ್ಲದ ಈ ಸ್ಥಿತಿ ಯಾವುದು ಎನ್ನುವುದೂ ಗೊತ್ತಾಗುತ್ತಿಲ್ಲ.

ಸದ್ದುಗದ್ದಲವಿಲ್ಲದೇ ಮುಗಿದು ಹೋಗಬೇಕಿದ್ದ ಸಾಹಿತ್ಯ ಸಮ್ಮೇಳನವೊಂದನ್ನ ವಿನಾಕಾರಣ ಸುದ್ದಿ ಮಾಡಿದ್ದು, ನೆಲಜಲ ಮುಗಿಲಿಗೂ ಹೊಡೆದಾಡುವುದು, ತೆನೆತುಂಬಿ ನಿಂತ ಹೊಲಗದ್ದೆ ಬದಿಗೆ ಹಸಿವಿಂದ ಸಾಯುವಂಥಹ ಪರಿಸ್ಥಿತಿ ತಂದುಕೊಳ್ಳುವ ಮನುಕುಲದ ಈ ಒಳರೋಗಕೆ ಕೊನೆಯೇ ಇಲ್ಲವೆ ಎನ್ನುವ ಯೋಚನೆ ಮೂಡಿದಾಗಲೆಲ್ಲ ಎದೆಯ ಮನೆಯಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ. ಮನಸು ಕುದಿವ ಕಡಲು.

ನವೀಕರಣಗೊಳಿಸಲಾಗದಂತ ಸಂಪನ್ಮೂಲಗಳಾದ ಬುದ್ಧ, ಏಸು, ಅಲ್ಲಮ, ಬಸವ, ಗಾಂಧಿ, ಪರಮಹಂಸ, ಚಿತ್ತರಂಜನ್ ದಾಸ್, ಲೋಹಿಯಾ ಆದರ್ಶಗಳ ಬೆಳಕಿನ ಸಾಲು ಒಂದು ಪೀಳಿಗೆಯ ನಂತರ ಮುಂದಿನ ಪೀಳಿಗೆಗೆ ವರ್ಗಾವಣೆಯಾಗದೆ ನೆನಪಿನಲ್ಲಿ ಕಂದಿ ಮಿಣುಗುತ್ತಿರುವುದು ಏಕೆ? ವರ್ತಮಾನದ ಘಟನೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯಲ್ಲೇ ಜೀವನ ಕಳೆದರೆ ಕ್ರಿಯೆಯಲ್ಲಿ ವ್ಯಯಿಸಬೇಕಾದ ಶಕ್ತಿ ವ್ಯರ್ಥ ಆದ ಹಾಗೇ ಎನ್ನುವುದು ದೊಡ್ಡವರಿಗೆ ಅರ್ಥವಾಗುತ್ತಿಲ್ಲವೆ ಎಂದು ಪ್ರಶ್ನಿಸಿಕೊಳ್ಳುತ್ತಿರುವ ಈ ಸರಿರಾತ್ರಿಯಲ್ಲಿ…

“ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೆಲ್ಲ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? ಆ ಪ್ರಶ್ನೆಗೆ ಉತ್ತರವಾಗಿ ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ ವ್ಯಕ್ತಿಯಿಂದ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ,” ಎಂದ ಶಿವರಾಮ ಕಾರಂತರ ಮಾತು…

“ನಮ್ಮ ಲಕ್ಷಾಂತರ ಯುವಕ ಯುವತಿಯರಿಗೆ ಭರವಸೆ ಕೊಡುತ್ತೇನೆ. ಈ ಪಿಶಾಚಿಗಳೆಲ್ಲ ಕುಣಿದು ನರ್ತನ ಮಾಡಿ ದೇಶವನ್ನೆಲ್ಲ ಸ್ಮಶಾನ ಮಾಡಿದ ಮೇಲೂ ನಮ್ಮ ಹೆಗಲಿಗೆ ಇಂದಲ್ಲ ನಾಳೆ ಮತ್ತೆ ಈ ಸ್ಮಶಾನವನ್ನು ಪುನರ್ ರೂಪಿಸುವ ಕೆಲಸ ಬಂದೇ ಬರುತ್ತದೆ. ಮತ್ತೆ ಇಲ್ಲಿ ನೆಮ್ಮದಿಯ ಬದುಕನ್ನು ಬದುಕಬಹುದು,” ಎಂದ ತೇಜಸ್ವಿ ಅವರ ಮಾತುಗಳು ವಿಪರೀತವಾಗಿ ಕಾಡುತ್ತಿವೆ. ಇಲ್ಲಿಂದ ಮುಂದೆ ಮಾತುಗಳಿಲ್ಲ ನನ್ನಲ್ಲಿ.

‍ಲೇಖಕರು sreejavn

January 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ನಿಜ ನೀವು ಹೇಳುತ್ತಿರುವುದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: