ಮೇಘನಾ ಸುಧೀಂದ್ರ ಅಂಕಣ: ಪರಕೀಯಳು ಒಬ್ಬಳು ತನ್ನದೇನೋ ಹುಳ ಬಿಟ್ಟು ಹೋದಳಲ್ಲ..

ಅವತ್ತು ಹುಡುಗಿ ಮನೆಗೆ ನಡೆದುಕೊಂಡೇ ಹೋಗುತ್ತಿದ್ದಳು. ಕಂಡಲ್ಲಿ ಹಳದಿ ಮತ್ತು ಕೆಂಪು ಬಾವುಟಗಳು. ಒಂದು ಥರಹ ತಿರುಗಿಸಿದರೆ ಕತಲಾನ್ ಧ್ವಜ, ಮತ್ತೊಂದು ಥರಹ ತಿರುಗಿಸಿದರೆ ಅದು ಸ್ಪೇನಿನ ಧ್ವಜ. ಎರಡನ್ನೂ ಬೇಕಾದವರು ಬೇಕಾದಹಾಗೆ ಬಳಸಿಕೊಂಡಿದ್ದರು. ಈ ಹೋರಾಟಕ್ಕೆ ಅರ್ಥವೇನು, ಯಾರಿಗಾಗಿ ಇಷ್ಟೆಲ್ಲಾ ರಕ್ತ ಪಾತ ಮಾಡುತ್ತಿದ್ದಾರೆ ಎಂದು ಹುಡುಗಿ ಯೋಚಿಸುತ್ತಾ ನಡೆಯುತ್ತಿದ್ದಳು.

ಅಲ್ಲಲ್ಲಿ ಗ್ರಾಫಿಟಿಗಳನ್ನ ಮಾಡಿ ಎರಡರ ಪರ ಮತ್ತು ವಿರುದ್ಧ ಬರೆದಿದ್ದರು. ಕೆಲವೊಮ್ಮೆ ಆ ಗ್ರಾಫಿಟಿಗಳಲ್ಲಿ ನಗ್ನ ಹೆಣ್ಣು ಮಕ್ಕಳನ್ನೂ ಬಿಡಿಸಿದ್ದರು. “ಇದೊಂದು ಮಾತ್ರ ಯಾವ ದೇಶಕ್ಕೆ ಹೋದರೂ ಅಷ್ಟೆ, ಹೆಣ್ಣು ಮಕ್ಕಳನ್ನ ಒಂದು ಸರಕಿನ ಹಾಗೆ ಮಾರಾಟ ಮಾಡೋದು, ಬೇಡದ್ದಕ್ಕೆ ಬಳಸಿಕೊಳ್ಳೋದು…” ಎಂದು ಬೈದುಕೊಂಡೇ ದಬದಬ್ ಮುನ್ನಡೆಯುತ್ತಿದ್ದಳು. ಅಲ್ಲಿ ಎರಡು ಗುಂಪು ಇವಳ ಹತ್ತಿರವೇ ಬರುತ್ತಿದ್ದದ್ದನ್ನು ನೋಡಿ ಮತ್ತಷ್ಟು ವೇಗವಾಗಿ ಮುನ್ನಡೆಯುತ್ತಿದ್ದಳು. ಎಷ್ಟೇ ವೇಗವಾಗಿ ಹೋದರೂ ಅವರಿಬ್ಬರ ಮಧ್ಯ ಸಿಕ್ಕಿಹಾಕಿಕೊಂಡಳು. “ಯಾವ ಹಳದಿ ಮತ್ತು ಕೆಂಪನ್ನ ಆರಿಸಿಕೊಳ್ಳುತ್ತೀಯಾ, ಪಾಕಿ” ಎಂದು ಧ್ವಜವನ್ನ ಹಿಡಿದು ಅವಳ ಮುಖದ ಮುಂದೆ ಬೀಸಿದರು. ಹುಡುಗಿಗೆ ಎಲ್ಲಿತ್ತೋ ರೋಷ, “ನಿನ್ಗುನೋ ದೆ ಎಲ್ಲೋಸ್, ಸೊಲೊ ಕನ್ನದಾ” (ಎರಡೂ ಅಲ್ಲ ಬರೀ ಕನ್ನಡ) [ಸ್ಪೇನ್ ಮತ್ತು ಕತಲೂನ್ಯದವರಿಗೆ ಡ ಅಕ್ಷರ ಇಲ್ಲ, ಡ ನ ದ ಎಂದೇ ಅನ್ನುತ್ತಾರೆ] ಎಂದು ಹೇಳಿ ಅಲ್ಲಿಂದ  ಕಾಲ್ಕಿತ್ತಳು. ಮೊದಲೇ ಎರಡು ಬಣದವರ ಕಿತ್ತಾಟದಲ್ಲಿ ದೇಶ ಯಾವುದೋ ಅವಸ್ಥೆಯಲ್ಲಿತ್ತು, ಇಲ್ಲಿ ನೋಡಿದರೆ ಪರಕೀಯಳು ಒಬ್ಬಳು ತನ್ನದೇನೋ ಹುಳ ಬಿಟ್ಟು ಹೋದಳಲ್ಲ ಎಂದು ಅವಳ ಮೇಲೆ ಒಂದು ಕಣ್ಣಿಡಲು ಎರಡೂ ಬಣದವರು ನಿರ್ಧರಿಸಿದರು.

ಮನೆಗೆ ಬಂದು ಎಷ್ಟೋ ದಿನದಿಂದ ಮಾತಾಡದ್ದಿದ್ದ ತನ್ನ ಹುಡುಗನಿಗೆ ನೆನೆಸಿಕೊಂಡು ಫೋನ್ ಮಾಡಿದಳು. ಜಗತ್ತೇ ಬಿದ್ದು ಹೋದರೂ ಲಾಲ್ ಭಾಗಿನ ಕೆರೆಯಂತೆ ಶಾಂತವಾಗಿರುವ ಅವನು ಅವಳ ಬದುಕಿನ ತಿಳಿ ನೀಲಿಯ ಸರೋವರ. ಹೀಗೆ ಫೋನು ಮಾಡಿ ಅದು ಆಯ್ತು ಇದು ಆಯ್ತು ಹಾಗೆಲ್ಲ ಇಲ್ಲಿನ ಯುದ್ಧ ನನ್ನ ಮನಸ್ಸನ್ನ ಘಾಸಿಗೊಳಿಸಿದೆ ಎಂದು ಅವಳು ಉಸಿರು ತೆಗೆದುಕೊಳ್ಳದೇ ಹೇಳುತ್ತಿದ್ದದ್ದು ನೋಡಿ, “ಸಾಕು ಸಾಕು, ನೀ ಅಲ್ಲಿ ಹೋದ್ದದ್ದು ಓದೋದಕ್ಕೆ, ಅಷ್ಟನ್ನು ಮಾಡಿ ಬಾ, ಅಲ್ಲಿ ನಡೆಯುವ ವಿಷಯಗಳು ನಿನ್ನನ್ನ ಭಾವನಾತ್ಮಕವಾಗಿ ಯಾಕೆ ಕೆರಳಿಸಬೇಕು, ಹಾಗಾಗಿಯೂ ಕೆರಳಿಸಿದರೆ ಒಂದು ನೀನೂ ಆ ಸ್ಥಿತಿಯಲ್ಲಿ ಇದ್ದೀಯಾ, ಅಥವಾ ನಿನ್ನ ಪರಿಸ್ಥಿತಿಯೂ ಹಾಗೆ ಆಗುತ್ತಿದೆ” ಎಂದರ್ಥ ಎಂದು ಬಹಳ ಕೂಲಾಗಿ ಮಾತಾಡಿ ಹೇಳಿದ.

“ಹೌದು ಅದ್ಯಾಕೆ ನನಗೆ ಇವರ ಕಥೆಯ ಬಗ್ಗೆ ಇಷ್ಟೊಂದು ಇಮೋಷನ್ಸ್ ಉಂಟಾಗುತ್ತಿದೆ, ಕತಲಾನ್ ಭಾಷೆಯ ಹಾಗೆ ಆಸ್ಮಿತೆಗೆ ಹೋರಾಡಬೇಕಾದ ಪರಿಸ್ಥಿತಿ ನನ್ನ ಕನ್ನಡಕ್ಕೂ ಬರುತ್ತಿದ್ದೆಯೇ, ಅಕಸ್ಮಾತ್ ಹಾಗಾದ್ದಲ್ಲಿ ನನ್ನ ಬೆಂಗಳೂರಿನವರು ಹೀಗೆಲ್ಲಾ ಉಗ್ರ ಹೋರಾಟ ಮಾಡುತ್ತಾರಾ, ನಾನು ಅದರಲ್ಲಿ ಭಾಗಿಯಾಗುತ್ತೇನಾ… ” ಎಂದು ಏನೂ ಬೇಜಾರು ಮಾಡಿಕೊಂಡೆ ಇದ್ದಳು. ಹುಡುಗ ಮಾತ್ರ, “ಚಿಯರ್ ಅಪ್ ಮೈ ಗರ್ಲ್, ನಿನ್ನ ಕೆಲಸ ಎಷ್ಟು ಮಾಡಬೇಕೋ ಅಷ್ಟು ಮಾಡಿ ಬಾ, ಅಷ್ಟೇ, ಇಲ್ಲ ನಾನೇ ಅಲ್ಲಿ ಬಂದು ನಿನ್ನನ್ನ ಕಾಣುತ್ತೇನೆ, ಒಂಟಿತನ ನಿನಗೆ ಏನೇನೋ ಮಾಡಲು ಹವಣಿಸುತ್ತಿದೆ” ಎಂದು ವರ್ಚುಯಲ್ ಹಗ್ ಕೊಟ್ಟು ವಿಡಿಯೋ ಕಾಲ್ ಕಟ್ ಮಾಡಿದ…

ಇದು ಯಾಕೋ ಮನಸ್ಸಿಗೆ ಸಸಮಮಾಧಾನ ತರದ ವಿಷಯ ಎನಿಸಿ ಅಸೈನುಮೆಂಟುಗಳನ್ನು ಮಾಡಲು ಶುರುಮಾಡಿದಳು. ಇಲ್ಲಿನ ಹಾಗೆ ಯಾವುದೂ ಕಾಪಿ ಮಾಡುವ ಹಾಗಿರಲ್ಲಿಲ್ಲ. ಬಾರ್ಸಾದ ತಲೆನೋವಿಗಿಂತ ಈ optimization  problem ಬಹಳ ದೊಡ್ಡದಾಗಿ ಕಂಡಿತ್ತು. ಮತ್ತೆ ಫೋನ್ ರಿಂಗಾಯ್ತು. ನೋಡಿದರೆ ಎಲೆನಾ.

ಓಹ್ ಇನ್ನು ಇವಳ ಕಥೆ ಜಾಸ್ತಿ ಹೇಳುತ್ತಾಳೆ ಎಂದುಕೊಂಡು, ‘are you ok?” ಎಂದು ಹಲೋ ಎನ್ನದೇ ಕೇಳಿದಳು. “ನಾಳೆ ಸಿಗೋಣ” ಅನ್ನೋದಕ್ಕೆ ಫೋನು ಮಾಡಿದ್ದೇ ಎಂದು ಹೇಳಿ ಫೋನ್ ಇಟ್ಟಳು. ಪಟಪಟನೆ ಅಸೈನ್ಮೆಂಟ್ ಮಾಡಿ ಅದೇ ರೆಡಿ ಟು ಈಟ್ ಫುಡ್ಡನ್ನ ಬಿಸಿ ಮಾಡಿ ತಿಂದು ಮಲಗಿದರೆ ಅವಳ ಕನಸಿನಲ್ಲಿಯೂ ಬರೀ ಅದೇ ಅದೇ ಮಾತುಗಳು ತಲೆಯಲ್ಲಿ ಬರಲು ಶುರುವಾದವು. ಏನು ಮಾಡಲು ತೋಚದೆ ಬಾರ್ಸಿಲೋನಾದ ಬಗ್ಗೆಗಿನ ಪುಸ್ತಕಗಳನ್ನ ಹುಡುಕಿ ಕೂತಳು.

ಯಾವಾಗ ನಿದ್ದೆ ಬಂದಿತೋ ಗೊತ್ತಿಲ್ಲ ಆದರೆ ಬೆಳಗ್ಗೆದ್ದು ಕಾಲೇಜಿಗೆ ಹೋದಾಗ ಎಲೆನಾ ದಾರಿಯಲ್ಲೇ ಸಿಕ್ಕು ಮಾತಾಡಿಸಿದಳು. ಅವಳ ಜೈಲಿನ ಸಾಹಸಗಾಥೆಯನ್ನ ಹೇಳೋದಕ್ಕೆ ಶುರು ಮಾಡಿದ್ದಳು. “ನಿನಗೆ ಗೊತ್ತಾ ಲಿಬರ್ಲ್ಸ್ ನ ಜಾಸ್ತಿ ಎಲ್ಲಾ ಕಡೆ ಅಟ್ಯಾಕ್ ಮಾಡುತ್ತಾರೆ” ಎಂದು. “ನಿಮ್ಮ ಕಡೆಯೂ ಹಾಗೆಲ್ಲಾ ಇರ್ತಾರಾ ? ನಾನಂತೂ ಇಡೀ ವೆಸ್ಟ್ ಲಿಬರಲ್ಲಾಗಿದೆ ಎಂದು ಅಂದುಕೊಂಡಿದ್ದೆ” ಎಂದು ಹುಡುಗಿ ಆಶ್ಚರ್ಯವಾಗಿ ಕೇಳಿದಳು. “ಅಯ್ಯೋ  ಈ ಲಿಬರಲ್ಸ್ ಇಂದ ಒಂದು ದೊಡ್ಡ ಯುದ್ಧ ನಮ್ಮ ದೇಶದಲ್ಲಿ ಆಯಿತು ಗೊತ್ತಾ, ಒಮ್ಮೆ ಏನಾಯಿತು ಅಂದರೆ ಫ್ರಾನ್ಸಿನವರು ಮನಸ್ಸಿಗೆ ಬಂದ ಹಾಗೆ ನಮ್ಮ ದೇಶವನ್ನ ಅವರ ಆಡಳಿತಕ್ಕೆ ತಗೊಂಡ ಮೇಲೆ , ನಮ್ಮ ಭಾಷೆಯನ್ನೇ ನಮಗೆ ಓದಲು ಬಿಟ್ಟರೂ ಸಹ ಅಲ್ಲಿ ಏನೋ ಅಸಮಾಧಾನವಾಯಿತು.

ಸ್ಪೇನ್ ಮತ್ತು ಐಬಿರಿಯಾ ರಾಜಮನೆತನದ ಕಲಿಗಳು ಹಲ್ಲು ಕಿತ್ತ ಹಾವಾಗಿದ್ದರು, ಅಷ್ಟೊಂದು ವರ್ಷದ ಗದ್ದುಗೆಯನ್ನೇರಿ ಅಧಿಕಾರ ಅಭ್ಯಾಸ ಆಗಿ ಆಗಿ ಈಗ ಮತ್ತ್ಯಾರೋ ರಾಜಕೀಯ ಮಾಡುತ್ತಿದ್ದಾರೆ, ಇಲ್ಲಿನ ಸಾಮಾನ್ಯ ಜನರ ಮೇಲೆ ಅಷ್ಟೇನೂ ಒಲವಿಲ್ಲದ ಎರಡು ಕಡೆಯವರು ಸುಮ್ಮನೆ ಜನರನ್ನ ಉದ್ರೇಕಗೊಳಿಸಿ ಅವರಿಬ್ಬರ ಬೇಳೆ ಬೇಯಿಸುಕೊಳ್ಳುವ ಗುಂಪಿಗೆ ಇಲ್ಲಿ ಎರಡು ರಾಜ ಮನೆತನದವರು ಸೇರಿದ್ದರು. ಒಂದು ಕಡೆ ಬೌರ್ಬಾನ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ನಿಂತ ಕಾರ್ಲಿಸ್ಟ್ ಜನರು ಮತ್ತು ಲಿಬರಲ್ಲಿನ ಗುಂಪಿನ ಮಹಾರಾಣಿ ಇಸಬೆಲ್ಲಾ ನಡುವೆ ದೊಡ್ಡ ಯುದ್ಧವೇ ಆಯಿತು. ಕಾರ್ಲಿಸ್ಟರು ಇಸಬೆಲ್ಲಾ ಎಂಬ ಹೆಣ್ಣನ್ನ ರಾಜ್ಯದ ಒಡತಿ ಎಂದು ನಂಬೋದಕ್ಕೆ ತಯಾರಿರಲ್ಲಿಲ್ಲ, ಅವಳು ಹೆಣ್ಣಾದರಿಂದ ಅವಳಿಗೆ ರಾಜ್ಯವಾಳುವ ಬ್ಲೂ ಬ್ಲಡ್ ಇಲ್ಲ ಎಂದು ಸಣ್ಣ ಕಾರಣ ಕೊಟ್ಟು ಜನರನ್ನ ದಂಗೆಯೆಬ್ಬಿಸಿದ್ದರು.

ಒಟ್ಟಾಗಿ ಫ್ರೆಂಚರನ್ನ ಓಡಿಸಿ ಆಮೇಲೆ ಅವರವರೇ ಕಿತ್ತಾಡಿಕೊಳ್ಳಲು ಶುರು ಮಾಡಿದ್ದರು. ಇಸಬೆಲ್ಲಾ ಗೆದ್ದಳು. ಅವಳ ಆಳ್ವಿಕೆಯಲ್ಲಿ ಕರಪ್ಶನ್ ದೊಡ್ಡ ಮಟ್ಟದಲ್ಲಿತ್ತು. ಹಾಗಿದ್ದೂ ಭಾಷೆಯ ಕಾರಣ ಸುಮ್ಮನಿದ್ದರು. ಮತ್ತೆ ಈ ಲಿಬರಲ್ಸಿನಲ್ಲಿ ಹಿಂಸೆ ಮತ್ತು ಅಹಿಂಸೆ ಮಾಡುವರ  ಎರಡು ಗುಂಪಾಗಿ ಅಲ್ಲೂ ಕಚ್ಚಾಟ ಚೀರಾಟಗಳಾಗಿ ಮತ್ತೆ ಸ್ಪೇನಿನ ಜನ ಬಂದರು. ಒಂದು ಥರಾ ಟಾಮ್ ಆಂಡ್ ಜೆರ್ರಿ ಆಟ ಆಯ್ತಾ, ಮತ್ತೆ ಹಿಸ್ಪಾನಿಕ್ ಜನ ಮೊರಕ್ಕೋಗೆ ಹೋಗಿ ಅಲ್ಲಿ ಕಾಲೋನಿ ಮಾಡು ಅಲ್ಲಿನವರು ಯುದ್ಧ ಮಾಡಿ….. ಉಶಾಪ್ಪಾ ನಮ್ಮ ಧ್ವಜದಷ್ಟೇ ರಕ್ತ ನಮ್ಮ ದೇಶಕ್ಕೆ ಅಂಟಿಕೊಂಡಿದೆ ಸೆನೊರಿಟಾ, ೧೮೪೦ರ ಸಮಯದಲ್ಲಿ ನಮ್ಮ ದೇಶ ಪೂರ್ತಿ ರಕ್ತಮಯವಾಗಿತ್ತು. ಇಸಬೆಲ್ಲಾ ಮತ್ತೆ ರೊಚ್ಚಿಗೆದ್ದು ಗದ್ದುಗೆಯೇರಿದಳು, ಒಂದಷ್ಟು ವರ್ಷವಂತೂ ಮೊರಕ್ಕೋ ಮತ್ತು ಕ್ಯೂಬಾದ ವಸಾತುಶಾಹಿಗಳಿಗೋಸ್ಕರ ಕತಲಾನಿನ ಬಗ್ಗೆ ಯೋಚನೆಯನ್ನೆ ಸ್ಪೇನಿನವರು ಬಿಟ್ಟಿದ್ದರು, ಅಲ್ಲಿ ಅವರ ಆದಾಯ ಮತ್ತು ದರ್ಪ ದುಪ್ಪಟಾಗಿತ್ತು. ಇಸಬೆಲ್ಲಾ ತನ್ನ ಪಾಡಿಗೆ ತನ್ನ ಮನೆಯವರನ್ನೇ ಅಧಿಕಾರದಲ್ಲಿ ಇಟ್ಟು ತನ್ನ ಬ್ಲೂ ಬ್ಲಡ್ಡನ್ನ ಇನ್ನಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಳು.

ಕ್ಯೂಬಾ ಸ್ವತಂತ್ರವಾಯಿತು, ಸ್ಪೇನಿನವರಿಗೆ ಮತ್ತೆ ಜಗಳ ಕಾಯೋಕೆ ಯಾರೂ ಸಿಗಲ್ಲಿಲ್ಲ, ಮತ್ತೆ ನಮ್ಮನ್ನ ದಂಗೆಯೆಬ್ಬಿಸಿದ್ದರು. ಆದರೆ ಈ ಸಲ ಯಾವ ರಾಜರಿಗೂ ಗದ್ದುಗೆ ಬೇಡವೆಂದು ನಮ್ಮ ಜನಕ್ಕೆ ರಾಜ್ಯ ಬಿಟ್ಟುಕೊಡಿ ಎಂದು ದೊಡ್ಡ ಆಂದೋಲನ ಶುರುವಾಗಿತ್ತು. ಸ್ಪೇನಿನವರು ಕತಲಾನರಿಗೆ ಮಾಡಿದ ಒಂದೇ ಒಂದು ದೊಡ್ಡ ಉಪಕಾರ ನಮ್ಮ ಜನರಿಗೆ ಬ್ಲೂ ಬ್ಲಡ್ಡನ್ನು ಬಿಟ್ಟು ನಮ್ಮ ಕೆಂಪು ರಕ್ತವನ್ನ ನಂಬಿಕೊಳ್ಳಲಿ ಎಂಬ ಕನಸನ್ನ. ಮೊದಲ ಬಾರಿಗೆ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಶುರುವಾಯ್ತು. ಸೆಪ್ಟೆಂಬರ್ ಕ್ರಾಂತಿಯಿಂದ ಸೆಕ್ಸೇನಿಯೋ ದೆಮೋಕಾತಿಕೋ (ಆರು ವರ್ಷಗಳ ಪ್ರಜಾಪ್ರಭುತ್ವ) ಆಳ್ವಿಕೆ ಶುರುವಾಯಿತು. ೬ ವರ್ಷವಾದ ಮೇಲೆ ಅದೇ ಕೆಟ್ಟ ರಾಜಕೀಯ, ಅದೇ ಕೆಟ್ಟ ವ್ಯವಸ್ಥೆ ಹದಗೆಟ್ಟುಹೋಯಿತು ಈ ಕೆಟ್ಟ ಕಾಫಿ ಥರ” ಎಂದು ಅದನ್ನ ಅಲ್ಲೇ ಉಗಿದು ಕ್ಲಾಸಿಗೆ ಹೋದಳು.

ವಿದ್ಯಾಲಯದ ಮುಂದೆ ಇದ್ದ ಕೆಂಪು ಧ್ವಜ ಕಣ್ಣಿಗೆ ರಾಚುತ್ತಿತ್ತು. ಅದೆಷ್ಟು ನೆತ್ತರು ಹರಿದಿದೆ ತಾಯಿ ಈ ದೇಶದಲ್ಲಿ ಕಣಕಣದಲ್ಲೂ ಕ್ರಾಂತಿ ರೋಷ ಸಾವು.. ಯಾತಕ್ಕಾಗಿ ಇದು, ಯಾರಿಗಾಗಿ ಇದು…… ಯಾರಿಗೋಸ್ಕರ ಇದು… ?

 

‍ಲೇಖಕರು avadhi

January 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Dakshayani Nagaraj

    ಸೆಳೆತ ಇರುವ ಓದಿಕೊಂಡು ಹೋಗುವ ಅಂಕಣ ,,,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: