ಪೇಜಾವರರು ದಿರಿಸಿನ ಮಟ್ಟಿಗೆ ಗಾಂಧಿಯನ್ನು ಧರಿಸಿದರು. ದಾರಿಯಾಗಿ ಗಾಂಧಿಯನ್ನು ಒಳಗಿಳಿಸಿಕೊಂಡರೇ?

ಬಟ್ಟೆಯೆಂದರೆ ದಿರಿಸಷ್ಟೇ ಅಲ್ಲ; ದಾರಿ ಕೂಡಾ.

ಸುರೇಶ್ ಕಂಜರ್ಪಣೆ 

“ಪೇಜಾವರ – ಒಂದು ನೆನಪು. ನಾನು ಎಂದೂ ಅವರನ್ನು ಭೆಟ್ಟಿಯಾಗಲಿಲ್ಲ.”

ಪೇಜಾವರ ಶ್ರೀಗಳು ತೀರಿಕೊಂಡ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಟ್ರಿಬ್ಯೂಟ್ ಗಳು ಬಂದಿವೆ. ಸಹಜವೇ. ಸನ್ಯಾಸಿಯ ನಿರ್ಗಮನ ಒಂದರ್ಥದಲ್ಲಿ ಭೌತಿಕ ಕಣ್ಮರೆ.. ಅಷ್ಟೆ. ಆತ ಪ್ರಭಾವಿಸಿದ ಬಗೆ.. ಆತನ ಆಶಯಗಳು-  ಇವೆಲ್ಲಾ carry forward ಆಗುತ್ತಷ್ಟೆ.

ಪೇಜಾವರ ಶ್ರೀಗಳು ನೆನಪಿನಲ್ಲುಳಿಯುವುದು ಹಿಂದೂ ತೆಕ್ಕೆಯೊಳಗೆ ಎಲ್ಲ ಜಾತಿ ಸಮೂಹಗಳನ್ನು ಒಳಗೊಂಡ ಹಿಂದೂ ಸಮಾಜದ ಸೃಷ್ಟಿಗೆ ಶ್ರಮಿಸಿದರು ಎಂಬ ಕಾರಣಕ್ಕೆ. ಈ ಸಮಾಜದ ಸ್ವರೂಪದ ಕಾಣ್ಕೆ ಎಂಥಾದ್ದು? ಅದು ಮೂಲತಃ ವಿಹಿಂಪದ ಮ್ಯಾಪ್ ಅಷ್ಟೆ. 60ರ ದಶಕದಲ್ಲೇ ಪೇಜಾವರ ಶ್ರೀಗಳು ವಿಹಿಂಪದ ಮುಖ್ಯ ಚಾಲಕ ಶಕ್ತಿಗಳಲ್ಲೊಬ್ಬರಾಗಿದ್ದರು. ಕಾಶ್ಮೀರದ ಮಾಜೀ ದೊರೆಯೂ, ಕಾಂಗ್ರೆಸ್ಸಿನ ಪ್ರಮುಖರೂ ಆಗಿದ್ದ ಕರಣ್ ಸಿಂಗ್ ಈ ವಿಹಿಂಪದ ಅಧ್ಯಕ್ಷರೂ ಆಗಿದ್ದರು ಎಂಬುದು ಬಹುತೇಕರಿಗೆ ನೆನಪಿರಲಾರದು.. ಇರಲಿ.

ಈ ವಿಹಿಂಪ ಹಿಂದೂ ಸಮಾಜ ಪುರುಷನ ಪರಿಕಲ್ಪನೆ  ಮೇಲ್ನೋಟಕ್ಕೆ ಸರಳವಾದದ್ದು. ಹಿಂದೂ ಸಮಾಜದ ದೋಷ ಮತ್ತು ದೌರ್ಬಲ್ಯಗಳನ್ನು ತೊಡೆದು ಹಾಕಿ ಸಮಾನತೆಯ ಶಕ್ತ ಸಮಾಜ ನಿರ್ಮಿಸುವುದು ಅದರ ಘೋಷಿತ ಗುರಿ. ಅರ್ಥಾತ್ ಲಂಬವಾಗಿರುವ ಹಿಂದೂ ಸಮಾಜವನ್ನು ಅಡ್ಡವಾಗಿ (horizontal) ನಿರ್ಮಿಸುವುದು. ಇದರ ಕ್ರೂಡ್ ವಿನ್ಯಾಸ. ಚಾತುರ್ವರ್ಣದ ಪುರುಷರೂಪಿ ಅಂಗಾಲ ಕೆಳಗೆ ದಲಿತರಿದ್ದರಷ್ಟೇ. ಅವರ ನೆತ್ತರ ಕಲೆ ಅಂಗಾಲಿಗಂಟಿದ್ದನ್ನು ಮೊದಲು ಒಪ್ಪಿಕೊಂಡದ್ದು ಗಾಂಧಿ. ವಿಹಿಂಪ.. ಪೇಜಾವರರ ವೇಳೆಗೆ ಈ ಅಂಗಾಲಿನ ಕೆಳಗಿದ್ದ ದಲಿತರು ಒಡೆದ ಕನ್ನಡಿ ಚೂರುಗಳಂತೆ ಚುಚ್ಚಲಾರಂಭಿಸಿದಾಗ. ಈ ‘ಹಿಂದೂ ಪುರುಷ’ ದಲಿತ ಕಾಳಜಿ ವಹಿಸಿದ್ದು!!  survival response ಅದು.

ಮೂಲತಃ ದಲಿತರನ್ನು ಒಳಗೊಳ್ಳುವ  ಧೋರಣೆ  ಆತ್ಮ ನಿರೀಕ್ಷಣೆ ಮತ್ತು ಸಂಬಂಧಗಳ ಮರು ಕಟ್ಟುವಿಕೆ ಎಂದೇ ಪರಿಗಣಿತವಾಗಿತ್ತು. ಕುದ್ಮಲ್.. ನಾರಾಯಣಗುರು.. ಬಾಬಾ ಸಾಹೇಬರು.. ಗಾಂಧಿ ಸ್ಪಂದಿಸಿದ್ದು ಈ architecureನ ಪರಿಕಲ್ಪನೆಗೆ.

ಪೇಜಾವರ ಅವರೆದುರು ಇದ್ದ ಸವಾಲು ಅದು. ಬ್ರಾಹ್ಮಣ ಮಠ ಕೇಂದ್ರಗಳೇ ಉಳಿದ ವರ್ಣಗಳ ನಿರ್ದೇಶಕ ಶಕ್ತಿಗಳಷ್ಟೇ. ಈ ಹೊಸ ಸಮಾಜದ ಸೃಷ್ಟಿಗಾಗಿ ಮುರಿದು ಕಟ್ಟುವ ಕಲಸ ಮಾಡುವ ನೈತಿಕ ಹೊಣೆಗಾರಿಕೆ ಈ ಮಠಗಳ ಮೇಲೆ ಇತ್ತು. ಅವನ್ನು ಎಷ್ಟರ ಮಟ್ಟಿಗೆ ನಿರ್ವಹಿಸಿದವು ಎಂಬುದಷ್ಟೇ ಪ್ರಶ್ನೆ. ಶತಮಾನದ ಇತಿಹಾಸ ಇರುವ ಈ ನವ ಸಮಾಜದ ನೀಲ ನಕ್ಷೆ ಔಪಚಾರಿಕವಾಗಿ ಸಂವಿಧಾನದ ರೂಪ ತಳೆದಾಗಲೂ ಈ ಧಾರ್ಮಿಕ ಲಂಗರುಗಳ ರೆಸ್ಪಾನ್ಸ್ ಹೇಗಿತ್ತು?

ಕಾನೂನಾತ್ಮಕವಾಗಿ ಬಹಿರಂಗದ ಭೌತಿಕ ವರ್ತನೆಯಲ್ಲಿ ಎಲ್ಲರೂ ಸಮಾನರು ಎಂದಾಗಲೂ ಕರ್ತವ್ಯ ಚ್ಯುತಿಯ ಪಾಪಪ್ರಜ್ಞೆ ಈ ಎಲ್ಲ ಮಠಗಳನ್ನೂ ಕಾಡಿತ್ತು. ಕಳೆದ ವರ್ಷವಷ್ಟೇ ಅಸ್ಪೃಶ್ಯತೆ ಹೋಗಲಾಡಿಲು ಆಗಿಲ್ಲ ಎಂದು ಹಿಂದೂ ಸಮಾಜದ ಧುರೀಣರು ಇದೇ ಉಡುಪಿಯಲ್ಲಿ ಹೇಳಿದ್ದು ಗಮನಿಸಬೇಕು.

ಪೇಜಾವರ ಶ್ರೀಗಳು ಈ reluctance ಮತ್ತು ತಪ್ಪೊಪ್ಪಿಗೆಯ ಭಾಗ ಮತ್ತು ಪ್ರಾತಿನಿಧಿಕ ರೂಪ. ಈ ಮರು ಕಟ್ಟುವಿಕೆ ಯಾಕೆ ಸಾಧ್ಯ ವಾಗಲಿಲ್ಲ ಎಂಬ ಕಸಿವಿಸಿ ಪೇಜಾವರರನ್ನೂ ಬಾಧಿಸಿರಬಹುದು.
ದಲಿತರನ್ನು ಮುಟ್ಟುವ ಕ್ರಿಯೆಗಳೂ ಈ ಅರ್ಥದಲ್ಲಿ ತೀರ್ಥ ಸ್ವಿಕರಿಸಿದಂತೆ, ಸಾಂಕೇತಿಕ ಮತ್ತು ಆತ್ಮ ಸಾಂತ್ವನದ ಕ್ರಿಯೆ.

ಸಂಪ್ರದಾಯದ ಹಗ್ಗ ಹರಿಯದೇ ಹೊಸ ಮಜಲು ತಲುಪಲು ಸಾಧ್ಯವಿಲ್ಲ. ಕುದ್ಮಲ್,  ಗಾಂಧಿ ತಲುಪಿದ್ದು ಹೀಗೆ. ಮಠವೆಂಬ ಕೋಟೆ.. ಅದರ ಸುತ್ತ ಸಂಪ್ರದಾಯದ ಜಲ ಕಂದಕ.. ಅದರೊಳಗೆ ಈಜಬಿಟ್ಟಿರುವ ಆಚರಣೆಗಳೆಂಬ ಮೊಸಳೆಗಳು.. ಇದನ್ನು ಜಿಗಿಯಲು ಪೇಜಾವರ  ಹಿಂಜರಿದದ್ದು ಸಾಮಾನ್ಯ ಗೃಹಸ್ಥನ ಭಯದಿಂದ. ಕೃಷ್ಣನೂ ಸಾರಥಿ. ಆದರೆ ಉಳಿದ ಚಾಲಕರು ಯಜಮಾನ ಹೇಳಿದಲ್ಲಿಗೆ ರಥ ಹೊಡೆದರೆ..ಶ್ರೀಕೃಷ್ಣ.. ರಥಿಕನಿಗೇ ದಾರಿ ತೋರುವ ಸಾರಥಿ. ಸ್ವತಃ ಕೃಷ್ಣನನ್ನು ಆರಾಧಿಸುತ್ತಿದ್ದ ಪೇಜಾವರರಿಗೆ ಕೃಷ್ಣನ ಸಾರಥ್ಯದ ಸಾಂಕೇತಿಕತೆ ಅರ್ಥವಾಗಲಿಲ್ಲ. ಅಪಾರ ಸಾಧ್ಯತೆಗಳಿದ್ದೂ ಅದನ್ನು ಸಾಧಿಸದ ಸಾಮಾನ್ಯ ಋಜು ಮನುಷ್ಯರಾದರು ಪೇಜಾವರ.

ವೈಯಕ್ತಿಕ ದೊಡ್ಡತನಗಳ ಉದಾಹರಣೆ ಸ್ವಾಗತಾರ್ಹ. ಆದರೆ ಸಮಷ್ಠಿಯ ಬಾಳನ್ನು.. ಸಂಬಂಧಗಳನ್ನು ಉತ್ತಮಪಡಿಸುವ ಶಕ್ತಿಯನ್ನು ಸಾಂಸ್ಥಿಕವಾಗಿ ಪಡೆದ ವ್ಯಕ್ತಿ ಸಮುಷ್ಠಿಯಲ್ಲಿ ಉಳಿಸಿದ ಮೊಹರಿನ ಗುರುತೇನು ಎಂಬುದನ್ನು  ನಾವು ಚರ್ಚಿಸಬೇಕು.  ಸಮಷ್ಠಿಯಲ್ಲಿ ಶಾಶ್ವತ ಬದಲಾವಣೆ ತರಲಾಗದ ವ್ಯಕ್ತಿಯ ವೈಯಕ್ತಿಕ ಉದಾಹರಣೆಗಳು ಸಾಂತ್ವನದ ರೂಪಕಗಳಾಗುತ್ತವೆಯೇ ಹೊರತು ದಾರಿ ಸೂಚಿಗಳಾಗವು.

ಈ ಹಿಂದೂ ಸಮಾಜ ಪುರುಷನ ಎದೆಯೊಳಗೆ ಅಭದ್ರತೆ.. ಬಾಹ್ಶ ಶತ್ರುವಿನ ಭಯ, ಆತಂಕದ ಸ್ಥಾಯೀ ಮಾನಸಿಕತೆ ಹೇಗೆ ಸೃಷ್ಟಿಯಾಯಿತು, ಯಾರು ಸೃಷ್ಟಿ ಮಾಡಿದರು  ಎಂಬುದು ಎರಡನೇ ಪ್ರಶ್ನೆ. ಈ ಹಿಂದೂ ಪುರುಷ ಸದಾ ಅನ್ಯ ಧರ್ಮೀಯರನ್ನು Threat ಎಂದು ಭಾವಿಸುತ್ತಲೇ ತನ್ನ ರೆಸ್ಪಾನ್ಸುಗಳನ್ನು ರೂಪಿಸುವ ಎಂಜಿನಿಯರಿಂಗ್ ಮಾಡಿದ್ದು ವಿಹಿಂಪ. ಪೇಜಾವರರೂ ಈ ಲೋಕದೃಷ್ಟಿಯನ್ನು ರೂಪಿಸಿದ ಪ್ರಕ್ರಿಯೆಯಲ್ಲಿ ಪಾಲುದಾರರು .

ಹಿಂದೂ ಪರಂಪರೆಯ ಸ್ಮರಣೀಯರು ಯಾರೂ ಈ ಆತಂಕವನ್ನು ಎದೆಯೊಳಗೆ ಇಟ್ಟುಕೊಳ್ಳಲಿಲ್ಲ. ಹಿಂದೂ ಪುನರುತ್ಥಾನದ ನೀಲನಕ್ಷೆಯಲ್ಲಿ ದಲಿತ  ಘನತೆ, ಸಮಾನತೆಯೊಂದಿಗೇ ಅನ್ಯ ಧರ್ಮೀಯರೊಂದಿಗೆ ಸಂಭ್ರಮದ ಸಂವಾದ,  ಸಹಬಾಳ್ವೆಯೂ ಇತ್ತು.  ಅನ್ಯನೊಬ್ಬ ಆತಂಕ, ಅಪಾಯ, ಅಭದ್ರತೆಯ ಮೂಲವೆಂಬ ನಿಲುವು ಹರಡುತ್ತಾ ಹೋದಾಗ ಪೇಜಾವರರು ಅದನ್ನು endorse  ಮಾಡುತ್ತಾ ಹೋದರು. ತಮ್ಮದೇ ಜಿಲ್ಲೆಯಲ್ಲಿ ಈ ನಿಲುವು ಘನೀಭೂತವಾಗುತ್ತಾ ಬಂದಾಗಲೂ ಇದು ತಾತ್ವಿಕವಾಗಿಯೂ, ಲೌಕಿಕದ ಬಾಳುವೆಯ ದೃಷ್ಟಿಯಿಂದಲೂ ಎಷ್ಟು ಕ್ಷುದ್ರ ಎಂದು ಎಚ್ಚರಿಸಲು ಮರೆತರು. ಯಾರಿಗೆ ಏನನ್ನಾದರೂ ಮಾಡುವ ಶಕ್ತಿ ಇದ್ದಾಗ ಮಾಡದೇ ಇರುವುದೂ  ಸಮುದಾಯದ ನಿರೀಕ್ಷೆಗೆ ಬಗೆದ ದ್ರೋಹವೇ ಸರಿ.

ಪೇಜಾವರರು.. ನಮ್ಮ ನಿಮ್ಮಂಥಾ ಅಳುಕು, ಅಸಹಾಯಕತೆ ಇದ್ದ ಸಜ್ಜನ ಎನ್ನುವುದಾದರೆ ಸರಿ.. ಆಗ ಅವರು ದೃಷ್ಟಾರ ಸಂತನಾಗುವುದಿಲ್ಲ. ಕಾವಿಯೊಳಗೆ ಹುದುಗಿ ಚುಚ್ಚುತ್ತಿದ್ದ ಅಂತಸ್ಸಾಕ್ಷಿಗೆ ಆಗೀಗ ಸ್ಪಂದಿಸುತ್ತಿದ್ದ guilt ridden man ..Like us ಎನ್ನಬಹುದು. ಆದರೆ ಹಿಂದುತ್ವದ ಸಂಘಟನೆಗಳೊಂದಿಗೆ ಅವರಿಗಿದ್ದ ಆತ್ಮೀಯತೆ ಗಮನಿಸಿದರೆ ಅವರು ಇಷ್ಟು ಮುಗ್ಧರಾಗಿರಲು ಸಾಧ್ಯವಿಲ್ಲ. ಬಾಬರಿ ಮಸೀದಿ ಕೆಡವುವಾಗ ಅವರು ಸಿಟ್ಟಲ್ಲಿ ಬೈದರು ಎಂಬ ದೃಷ್ಟಾಂತದ ಕತೆ ಇದೆ.  ಗಾಂಧಿ ಚೌರೀಚೌರಾದ ಘಟನೆಗೆ ನೈತಿಕ ಜವಾಬ್ದಾರಿ ಹೊತ್ತರಲ್ಲ? ಅದು ಪೇಜಾವರರಿಗೆ ಗೊತ್ತಿಲ್ಲದಿರಲು ಸಾಧ್ಯವಿಲ್ಲ. ಖಾದಿ ಧರಿಸುತ್ತಿದ್ದರು ಎಂದು ಅವರ ಬಗ್ಗೆ  ಪ್ರಶಂಸೆ ಇದೆ. ಬಟ್ಟೆ ಎಂದರೆ ದಿರಿಸು ಮತ್ತು ದಾರಿ ಎಂಬ ಎರಡೂ ಅರ್ಥ ಇದೆ. ಪೇಜಾವರರು ದಿರಿಸಿನ ಮಟ್ಟಿಗೆ ಗಾಂಧಿಯನ್ನು ಧರಿಸಿದರು. ದಾರಿಯಾಗಿ ಗಾಂಧಿಯನ್ನು ಒಳಗಿಳಿಸಿಕೊಂಡರೇ?

ನಾನು ಅವರನ್ನು ಭೆಟ್ಟಿಯಾಗಿಲ್ಲ ಅಂದೆನಲ್ಲ. . ಸಮಷ್ಠಿಯ ಸಹಬಾಳ್ವೆಯ ದಿಕ್ಸೂಚಿ ಅವರಾಗಿದ್ದರೆ ಭೆಟ್ಟಿಯಾಗುತ್ತಿದ್ದೆನೋ ಏನೋ.

ಅವರ ಸರೀಕರಾಗಿದ್ದ ಪುತ್ತೂರಜ್ಜನ ಸಾಂಗತ್ಯದಲ್ಲಿ ನನಗೆ ಸಿಕ್ಕಿದ ದಾರಿ ಬೆಳಕು ನನಗೆ ಸಾಕು.

‍ಲೇಖಕರು avadhi

January 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: