ರಾಜು ಸನದಿಯ 'ದುಗುಡದ ಕುಂಡ'

ಕುಮಾರ್ ಹೊನ್ನೇನಹಳ್ಳಿ
ಯೌವನಕೆ ಬರುತ್ತಿದ್ದಂತೆ ನಾವು ನಂಬಿರುವ ಆಚರಣೆಗಳು, ನಡೆದುಕೊಳ್ಳುತ್ತಿರುವ ರೀತಿ ನೀತಿಗಳು ನಮ್ಮೊಳಗೆ ಹಲವು ಪ್ರಶ್ನೆಗಳನ್ನು ಮೂಡಿಸಿ ಎದೆಯೊಳಗೆ ತಳಮಳ ಉಂಟುಮಾಡುತ್ತಿದ್ದರೆ, ಕವಿ ತಯಾರಾಗುತ್ತಿದ್ದಾನೆ ಎಂದರ್ಥ. ಅವುಗಳನ್ನು ಸಶಕ್ತವಾಗಿ ಪ್ರತಿಮೆ ರೂಪಕಗಳ ಮೂಲಕ ಅಕ್ಷರ ರೂಪಕ್ಕೆ ತರುತ್ತಿದ್ದಾನೆ ಎಂದರೆ ಕವಿ ಅರಳುತ್ತಿದ್ದಾನೆ ಎಂದರ್ಥ. ತನ್ನ ಕವನಗಳ ಮೂಲಕ ಸಲಹೆಗಳನ್ನು ನೀಡುತ್ತಿದ್ದರೆ ದೂಷಣೆಗಳನ್ನು ಮಾಡುತ್ತಿದ್ದರೆ ಕವಿಯಾಗಿ ಅರಳಲು ಇನ್ನೂ ಜೀವನಾನುಭವ ಸಾಲದು ಎಂದರ್ಥ. ಮೂಲತಃ ಕವಿಯೊಬ್ಬ ಅಂತರ್ ಮುಖಿ. ಏನನ್ನೂ ನೇರವಾಗಿ ಹೇಳಲಾರ. ಯಾರನ್ನೂ ದೂರಲಾರ, ಯಾರನ್ನೂ ಪರಿಗಣಿಸದೆ ಇರಲಾರ. ತನ್ನ ಅನುಭವಕ್ಕೆ ಬಂದಿದ್ದನ್ನ ನಿಮ್ಮ ಮುಂದೆ ಇಡದೆ ಇರಲಾರ.
ರಾಜು ಸನದಿ ಅಂತಹ ಸೂಕ್ಷ್ಮ ಕವಿಗಳಲ್ಲಿ ಒಬ್ಬರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. “ಅಕ್ಕ ಕಾಣೆಯಾಗಿದ್ದಾಳೆ” ಕವನದ ಮೂಲಕ ತಮ್ಮ ಕವಿತಾ ಶಕ್ತಿ ಮತ್ತು ಶೈಲಿಯ ಘನತೆಯ ಆರಂಭವನ್ನೇ ಮಾಡಿದ್ದಾರೆ. ರಚನೆ ಮತ್ತು ವಸ್ತು ನಿಸ್ಸಂದೇಹವಾಗಿ ಈ ಕವನವನ್ನು ಉನ್ನತ ಸಾಲಿನಲ್ಲಿ ನಿಲ್ಲಿಸುತ್ತದೆ.
ನನಗೇಕೆ ಕಾಣುವುದಿಲ್ಲ ಅಕ್ಕನ ನೆರಳು
ಕಪ್ಪು ನೆರಳು ಬೆನ್ನು ತುಂಬೆಲ್ಲಾ
ಕಪ್ಪು ಬಟ್ಟೆಯಲ್ಲೇ
ದಫನ್ ಆಗಿದೆ ಅಕ್ಕನ ಚೆಲುವು
ಬಯಲ ಆಲಯದ ಆಕೆಯ ಆಸೆಗೆ
ಮುಸುಕೆಂಬ ರೂಢಿಯ ಭಾಷೆ.

ಸಂಪ್ರದಾಯದ ಬುರ್ಕಾದೊಳಗೆ ಇರಬೇಕಾದ ಅನಿವಾರ್ಯತೆಯ ಅಕ್ಕನ ಬಗ್ಗೆ ಹೇಳುತ್ತ ಅವಳ ಎದೆಯೊಳಗಿನ ದುಗುಡದ ಕುಂಡವನ್ನು ಕೆಳಗಿಳಿಸಲು ಇರುವ ಅವಕಾಶಗಳ ಅಸಹಾಯಕತೆಯನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ.
ಎದೆ ಬ್ಯಾನಿಗೆ ನಿನ್ನ ಸ್ವಾತೀ ಮಳೆಯ 
ತಂಪಿನ ಜರೂರತ್ತಿನಲ್ಲಿದ್ದೇನೆ …
ಚಂದ್ರನ ನಗುವ ತೆಗೆದುಕೊಂಡು ಬಾ
ಎಂದು ಗೆಳತಿಯ ಕೇಳುವ ಇವರ ಕವನಗಳಲ್ಲಿ ಬದಲಾಗಬೇಕಿದೆ ಎಂಬ ಜರೂರತ್ತಿನ ತುಡಿತವನ್ನ ಗುರುತಿಸಬಹುದು.
ದೈವದ ಎದುರು ವಾದಿಸಲಿಕ್ಕಾಗದು
ಕೈಯೊಡ್ಡಿ ಕಣ್ಣೀರ ಸುರಿಸಿ
ಪ್ರಾರ್ಥಿಸಬಹುದಷ್ಟೆ… 
ಎಂಬ ಸಾಲುಗಳಲ್ಲಿ ನಾವೆಲ್ಲಾ ಹೇಗೆ ಸಂಪ್ರದಾಯಗಳೆಂಬ ಸಂಕೋಲೆಯಲಿ ಇದ್ದೇವೆ ಎಂಬುದನ್ನು ಸೂಚ್ಯವಾಗಿ ಹೇಳಿರುವುದನ್ನು ಕಾಣಬಹುದು. ಇಂತಹ ದುಗುಡಗಳನ್ನು ಈ ಸಂಕಲದುದ್ದಕ್ಕೂ ಕಾಣಬಹುದು. ತಮ್ಮ ಮನೆಯ ಸಂಪ್ರದಾಯದ ಹಾಗು ಸಮಾಜ ತನ್ನೊಡನೆ ನಡೆದುಕೊಳ್ಳುವ ರೀತಿ ನೀತಿಗಳ ವಿಚಾರಗಳು  ಬಂದಾಗ ಕವಿಯ ಕವನಗಳು ಅತ್ಯಂತ ಸಹಜ ಹೆಣಿಗೆಗಳಾಗಿ ಹೊರಹೊಮ್ಮಿವೆ.ಕವಿ ಸರಿಯಾದ ಹಾದಿಯಲ್ಲಿ ಇದ್ದಾರೆ. ಎದೆಯೊಳಗೆ ಎದ್ದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅವುಗಳೆಲ್ಲವೂ ಕವನದ ರೂಪು ತಾಳಿವೆ.
ಎಲ್ಲಾ ಯುವ ಕವಿಗಳಿಗೆ  ಕಾಡುವಂತಹ ಆದರ್ಶಗಳೂ ಕೂಡ ಕವನಗಳಾಗಿವೆ. ವರ್ತಮಾನದ ತುರ್ತಿಗೆ ಸ್ಪಂದಿಸಿದ ರಚನೆಗಳೂ ಇವೆ. ಆದರೆ ಮುಂದೆ ಸಾಗುವ ಹಾದಿ ಇನ್ನಷ್ಟು ಧ್ಯಾನವನ್ನು ಬೇಡುತ್ತದೆ. ದ್ವಾರಗಾಯಿ ಬದಲು ಪೂರಾ ಹಣ್ಣಗಳಾದ ಮೇಲೆ ಕೊಯ್ಲು ಮಾಡುವ ತಾಳ್ಮೆ ಇಟ್ಟುಕೊಂಡರೆ ಎಷ್ಟೋ ಕವನಗಳು ಮಾಗಿದ ಹಣ್ಣಿನಂತೆ ಕವನ ಆಸ್ವಾದಕರನ್ನು ಮುದಗೊಳಿಸುವುದರಲ್ಲಿ ಸಂಶಯವಿಲ್ಲ.  ಪಂಥ ಮತ್ತು ಹಳಹಳಿಕೆಗಳನ್ನು ಬಹಳ ದೂರದವರೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಆದರೆ, ನಿತ್ಯ ಸತ್ಯದೆಡೆಗಿನ ಕವನಗಳು ಶಾಶ್ವತ. ಇಂತಹ ಶಾಶ್ವತ ರಚನೆಗಳು ಈಗಾಗಲೇ ಆಗಿವೆ ಇನ್ನಷ್ಟು ನಿಮ್ಮವಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

January 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: