ಮೇಘನಾ ಸುಧೀಂದ್ರ ಅಂಕಣ: ನಾನೇನು ಅತಿಲೋಕ ಸುಂದರಿಯಾ..

7

ಲೈಬ್ರರಿಗೆ ಬಂದ ಹುಡುಗಿ ತನ್ನ ಐಡಿ ಕಾರ್ಡಿಗಾಗಿ ತಡಕಾಡಿದಳು. ಅದು ಕಾಣಿಸಲೇ ಇಲ್ಲ. ಎಲ್ಲಿ ಬಿಟ್ಟು ಬಂದೆ ಎಂದು ಯೋಚಿಸುತ್ತಾ ಹೋದಳು. ಮನೆ, ಪೊಲೀಸ್ ಸ್ಟೇಷನ್, ಬೀಚ್ ಹೀಗೆ ಎಲ್ಲೆಲ್ಲಿ ನೆನೆಸಿಕೊಂಡರೂ ಅದು ಅಲ್ಲಿ ಬಿಟ್ಟುಬಂದಿರುವುದಕ್ಕೆ ಸಾಧ್ಯವೇ ಇಲ್ಲ ಎಂದೂ ಯೋಚಿಸಿ ಅಲ್ಲಿ ನಿಂತಳು. ಕಾರ್ಡ್ ಇಲ್ಲ ಎಂದರೆ ಒಳಗೆ ಹೋಗೋದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಯಾರೂ ಅವಳನ್ನ ಕಂಡುಹಿಡಿಯುವುದಿಲ್ಲ, ಒಂದು ಐಡಿ ಕಾರ್ಡ್ ಮಾತ್ರ ಅವಳು ಈ ಜಾಗದವಳು ಎಂದು ಗುರುತಿಸುವ ವ್ಯವಸ್ಥೆಗೆ ಧಿಕ್ಕಾರ ಹಾಕಿಕೊಂಡಳು. ಅವಳ ಐರಿಸ್ ಮತ್ತು ಫಿನ್ಗರ್ ಪ್ರಿಂಟ್ ಇನ್ನು ಡೇಟಾ ಬೇಸಿನಲ್ಲಿ ಇರದ ಕಾರಣ ಯಾವ ಕಾರಣಕ್ಕೂ ಲೈಬ್ರರಿಯ ಬಾಗಿಲು ತೆರೆಯುವುದಿಲ್ಲ ಎಂದು ಅರ್ಥವಾಯಿತು.
ನಾನು ಒಂದು ಕಾರ್ಡು ಇಲ್ಲದೆ ಐಡೆಂಟಿಟಿಯೇ ಇಲ್ಲದ ವ್ಯವಸ್ಥೆಯ ಬಗ್ಗೆ ಖೇದ ವ್ಯಕ್ತಪಡಿಸುತ್ತಾ ತನ್ನ ಕಾಲೇಜು ಐಡಿ, ತನ್ನ ರೆಸಿಡೆನ್ಸಿ ಪರ್ಮಿಟ್, ಪಾಸ್ ಪೋರ್ಟ್ ಎಲ್ಲವನ್ನು ತೆಗೆದರೂ ಆ ಮೆಷಿನ್ ರೀಡ್ ಮಾಡಲೇ ಇಲ್ಲ. ತನ್ನ ಹತ್ತಿರ ಇರುವ ಯಾವ ದಾಖಲೆಯೂ ಅವಳನ್ನ ಅವಳ ಜಾಗದವಳಾಗಿ ಮಾಡಲೇ ಇಲ್ಲ. ಇನ್ನೇನು ಮಾಡುವುದು ಸರಿ ಎಂದು ಕಾರ್ಡು ಕಳೆದುಕೊಂಡಿರುವವರ ಗ್ರೀವಿಯನ್ಸ್ ಸೆಲ್ಲಿಗೆ ಬಂದಳು. ಅಲ್ಲಿ ಅಷ್ಟುದ್ದ ಸಾಲು. ಇವತ್ತು ಕೆಲಸ ಆದಂಗೆ ಎಂದುಕೊಂಡು ಸಾಲಿನಲ್ಲಿ ನಿಂತಳು. ಕೆಲವೊಂದು ಮುಖಗಳು ಆ ಪ್ರತಿಭಟನೆಯಲ್ಲಿ ಕಂಡಿದ್ದಳು. ಕೆಲವರು ಪೊಲೀಸ್ ಸ್ಟೇಷನ್ನಿನಲ್ಲಿ. ಪರವಾಗಿಲ್ಲ ಕ್ರಾಂತಿಕಾರಿ ಕಾಲೇಜನ್ನೇ ಸೇರಿಕೊಂಡಿದ್ದೀನಿ ಎಂದು ಖುಷಿ ಪಟ್ಟಳು.

ನಮ್ಮ ಕಾಲೇಜುಗಳಲ್ಲಿ ಇಷ್ಟೊಂದೆಲ್ಲಾ ರಾಜಕೀಯ ಅರಿವು ಯಾಕಿಲ್ಲ, ಯಾಕೆ ನಮ್ಮ ಭಾಷೆ, ಪ್ರಾಂತ್ಯ ಎಂದಾಗ ಬಾಯಿ ಮುಚ್ಚಿಕೊಂಡು ಕೂತಿರುತ್ತೇವೆ ಎಂದು ಅಂದುಕೊಂಡೆ ಇದ್ದಳು. ಮೆತ್ತಗೆ ನಮ್ಮ ನಮ್ಮಲ್ಲಿ ಹಿಂದಿಂದೆ ಮಾತಾಡಿಕೊಳ್ಳೋದು ನಮ್ಮ ಜಾಯಮಾನ ಎಂದು ಬೇಜಾರು ಪಟ್ಟುಕೊಳ್ಳುತ್ತಾ ಮುಂದೆ ನಡೆಯುತ್ತಿದ್ದಾಗ. ಹಿಂದಿನಿಂದ ಒಂದು ಹುಡುಗನ ಧ್ವನಿ ಕೇಳಿತ್ತು. “ನಿನ್ನನ್ನ ಆ ಪ್ರತಿಭಟನೆಯಲ್ಲಿ ನೋಡಿದ್ದೇ, ಬೇರೆ ದೇಶದವಳಾಗಿದ್ದರೂ , ಡಿಪೋರ್ಟ್ ಆಗುವ ಭಯವಿದ್ದರೂ ನನ್ನ ದೇಶಕ್ಕಾಗಿ ನೀನು ಎಂಥ ರಿಸ್ಕ್ ತಗೊಂಡೆ ” ಎಂದು ಹೊಗಳುತ್ತಾ ಹೋದ ಸೆಕ್ಯೂರಾ. ಹುಡುಗಿಯರ ತಲೆ ಎಂಬ ಡೇಟಾ ಬೇಸಿನಲ್ಲಿ ಅವರನ್ನ ಆಗಾಗ ಗುರಾಯಿಸುವ, ಅವರಿಗೆ , ಅವರ ಬಗ್ಗೆ ವಿಶೇಷ ಆಸಕ್ತಿ ಇರುವ ಹುಡುಗರ ಪ್ರತಿಯೊಂದು ಡೀಟೇಲು ಇರುತ್ತದೆ. ಈ ಸೆಕ್ಯೂರಾ ಒಮ್ಮೆ ರಾಜ್ಹ್ಮತಾಜ್ಹ್ ಬಾರಿನಲ್ಲಿ ಇವಳಿಗೆ ಅಂತಾನೆ ಕಾವಾ ಕಳಿಸಿದ್ದು, ಇವಳು ಬೇಡ ಅಂದಿದ್ದು, ಆಗಾಗ ಅವಳನ್ನ ಲೈಬ್ರರಿಯಲ್ಲಿ ಗುರಾಯಿಸುವುದು, ಎಲ್ಲವನ್ನು ಗಮನಿಸಿದ್ದ ಹುಡುಗಿ ಅವನ ಮುಂದೆ ಮಾತ್ರ ಬೇಕಂತಲೇ “ಒಹ್ ಹೌದಾ ನೀನು ಇದ್ದೆಯಾ ಅಲ್ಲಿ, ಗೊತ್ತಿರಲಿಲ್ಲ” ಎಂದು ಅಂದಳು. “ಕಾರ್ಡು ಕಳೆದಿದೆಯಾ” ಎಂದು ಕೇಳಿದ. “ಲೈಬ್ರರಿ ಗ್ರೀವಿಯನ್ಸ್ ಸೆಲ್ಲಿಗೆ ಏನು ಪಾರ್ಟಿ ಮಾಡೋದಕ್ಕೆ ಬರ್ತಾರಾ” ಎಂದು ತನ್ನ ಧಿಮಾಕನ್ನ ತೋರಿಸಿದಳು.
“ಓಕೆ” ಎಂದು ಅವನು ಸುಮ್ಮನಾದ. ಎಷ್ಟೇ ಆಗಲಿ ಅಲ್ಲಿನ ಲೋಕಲ್ಸ್ ನ ಎದುರು ಹಾಕಿಕೊಳ್ಳೋದು ಒಳ್ಳೆಯದಲ್ಲ ಎಂಬ ಸಣ್ಣ ಅರಿವೂ ಅವಳಿಗಿಲ್ಲದೇ ಅವಳದ್ದೇ ವಿಚಿತ್ರ ದೃಷ್ಟಿಕೋನದಲ್ಲಿ ಇದ್ದಳು. ಅಂತೂ ಅವಳ ಸರತಿ ಬಂದಾಗ, ಅಲ್ಲಿ ಗ್ರೀವಿಯನ್ಸ್ ನಲ್ಲಿ ಕೂತವಳು ಶುದ್ಧ ಕತಲಾನಿನಲ್ಲಿಯೇ ಮಾತಾಡುತ್ತಿದ್ದಳು. ಅವಳಿಗೆ ಅದು ಹಳೆಗನ್ನಡದ ಹಾಗೆ ಕೇಳಿಸುತ್ತಿತ್ತು. ಅವಳಿಗೆ ಎಷ್ಟೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದರೂ ಅರ್ಥವಾಗಲೇ ಇಲ್ಲ. ಕಡೆಗೆ ಪಾಸ್ ಪೋರ್ಟ್ ನೋಡಿ, ಎಂಬೆಸ್ಸಿ ಎಂಬೆಸ್ಸಿ ಎಂದು ಬೊಬ್ಬೆ ಹೊಡೆದಳು. ಸೆಲ್ಲಿನಲ್ಲಿದ್ದ ಅರ್ಧಂಬರ್ಧ ಇಂಗ್ಲೀಷ್ ಮಾತಾಡುವ ಹುಡುಗ “ಇಂಟರ್ ನ್ಯಾಷನಲ್ ಸ್ಟೂಡೆಂಟ್ಸ್ ಈ ಥರಹ ಎಲ್ಲೆಲ್ಲೋ ಡೆಮಾನ್ಸ್ಟ್ರೇಷನ್ ಮಾಡಿದರೆ ಅವರು ಬೇರೆ ದೇಶದ ರಾಜಕೀಯದಲ್ಲಿ ಜಾಸ್ತಿ ಇಂಟರ್ಫಿಯರ್ ಆದ್ರೆ ಅವರ ಹೆಸರನ್ನು ಅವರ ಎಂಬೆಸ್ಸಿಗೆ ಕೊಡತಕ್ಕದ್ದು” ಎಂಬ ಹೊಸ ನಿಯಮ ತಂದಿದ್ದರು. ಇನ್ನು ಅವಳಿಗೆ ಇದೆಲ್ಲಾ ಹೇಗೆ ಬರದಿರೋ ಭಾಷೆಯಲ್ಲಿ ಹೇಳೋದು ಎಂದೆಲ್ಲಾ ಯೋಚಿಸುವಾಗಲೇ ಸೆಕ್ಯೂರಾ ಅದೇನೋ ಪಟಪಟ ಎಂದು ಹೇಳಿ, ಆ ಹುಡುಗಿ “ಪರ್ದೋನಾ ಪರ್ದೋನಾ” ಎಂದು ಹೇಳಿ ಅವಳಿಗೆ ಹೊಸ ಕಾರ್ಡ್ ಕೊಟ್ಟಳು.
“ಥೂ ನಾನೇನು ಅತಿಲೋಕ ಸುಂದರಿಯಾ, ಅದೇಕೆ ನನ್ನನ್ನ ಮಾತಾಡಿಸಿದ ಹುಡುಗರೆಲ್ಲಾ ನನಗೆ ಲೈನ್ ಹೊಡಿತಾರೆ, ಮಣ್ಣು ಈ ಸಿನೆಮಾ ನೋಡಿ ನೋಡಿ ನನ್ನ ತಲೆ ಹಾಳಾಯ್ತು” ಎಂದು ಸೆಕ್ಯೂರಾ ಬಳಿ ಸಾರಿ ಹೇಳೋಣ ಎಂದು ಹೋದಳು. “ಸಾರಿ ನಾನು ಸ್ವಲ್ಪ ಒರಟಾಗಿ ಮಾತಾಡಿಬಿಟ್ಟೆ, ಅದು ನಮ್ಮ ಸಿನೆಮಾದಲ್ಲೆಲ್ಲಾ ಹಾಗೆ …. , ಅಯ್ಯೋ ಸಾರಿ.. ಥ್ಯಾಂಕ್ಸ್” ಎಂದು ಬೆಬೆಬೆ ಎಂದು ಬೊಬ್ಬೆಹಾಕಿ ಕಣ್ಣುಕಣ್ಣುಬಿಡುತ್ತಿದ್ದಳು. ಅವನು “ನೋ ಪ್ರಬ್ಲಾಮಾ, ಎಲ್ಲಿ ಲೈಬ್ರರಿಗೆ ಹೋಗೋದಾ, ನಾನು ಬರ್ತೀನಿ” ಅಂದ. “ಆಯ್ತು” ಎಂದು ಅವನೊಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಳು.” ಇಷ್ಟೊತ್ತಲ್ಲಿ ಏನು ಲೈಬ್ರರಿಯಲ್ಲಿ” ಎಂದಾಗ ಇವಳ ಬಾರ್ಸಿಲೋನಾ ಚರಿತ್ರೆಯ ಬಗ್ಗೆ ಆಸಕ್ತಿ ಇದೆಯೆಂದು ಹೇಳಿದಳು. “ಓಹ್ ಎಲ್ಲಿಗೆ ನಿಂತಿದೆ, ನಿಮ್ಮ ಕಥೆ” ಎಂದು ಕೇಳಿದ. ಅದೇ ಈ ನೆಪೋಲಿಯನ್ ಏನೋ ನಿಮ್ಮ ದೇಶಕ್ಕೆ ಏನೋ ಮಾಡಿದನಂತೆ, ಒಬ್ಬ ಸಂಗೀತಗಾರ ಹೇಳಿದ ಎಂದಳು.

ಅವನು ಪಕ ಪಕ ನಕ್ಕು, “ಅದೇನು ನಾಳೆ ಸುಭಾಷ್ ಚಂದ್ರ ಬೋಸ್ ಬಂದಿದ್ದರು ಎಂದರೂ ನಂಬಿಬಿಡುತ್ತೀಯಾ ನೀನು” . “ನೆಪೋಲಿಯನ್ ಅಲ್ಲ,  ನೆಪೋಲಿಯನಿಕ್ ವಾರ್ ಎಂದು ಚರಿತ್ರೆಯಲ್ಲಿ ದೊಡ್ಡ ಭಾಗವೇ ಇದೆ. ನೆಪೋಲಿಯನ್ ಇಂದ ಕೆಲವು ಯುದ್ಧಗಳಾಯ್ತು, ಅವನ ಜನರಲ್ಲುಗಳು ಇಲ್ಲಿ ಬಂದು ಏನೇನೋ ಗಬ್ಬೆಬ್ಬಿಸಿದರು, ಅದು ಕಥೆ. ನೆಪೋಲಿಯನ್ ಎಲ್ಲಾ ಕಡೆ ಬರೋಕಾಗತ್ತಾ ಹೇಳು ನೀನೆ” ಎಂದನು. “ಓಹ್ ಎಷ್ಟು ದಡ್ಡಿ ನಾನು” ಎಂದು ಮನಸ್ಸಿನಲ್ಲಿಯೇ ಅಂದುಕೊಂಡು, “ಮುಂದೆ ಏನು” ಎಂದು ಕೇಳಿದಳು. “ಓನ್ಲಿ ಇಫ್ ಯೂ ಹಾವ್ ಸರ್ವೆಸಾ ವಿಥ್ ಮಿ” ಎಂದು ಕಣ್ಣು ಹೊಡೆದ. ಇದು ಪಕ್ಕಾ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾ ಸೀನ್ ಎಂದು ಮನಸಿನಲ್ಲಿಯೇ ಬೈದುಕೊಂಡು “ಓಕೆ ಕೆಫೆ ಕಾನ್ ಲೆಚೆ, ಐ ವಿಲ್ ಪೇ” ಎಂದು ಕಾಫಿ ಹಿಡಿದು ಕೂತರು.
ಅವನು ನೆಪೋಲಿಯನ್ ಯುದ್ಧಗಳಾದಾಗ ಒಂದು ಲೋಕಲ್ ಸೈನ್ಯ ನೆಪೋಲಿಯನ್ ಪುಟ್ಟ ತುಕಡಿಯನ್ನು ಸೋಲಿಸಿ ತನ್ನ ಸ್ವತಂತ್ರ್ಯ ಘೋಷಣೆ ಮಾಡಿಕೊಂಡಿತು. ಆಗ ನೆಪೋಲಿಯನಿಗೆ ಸುದ್ದಿ ಹೋಯಿತು. ಒಂದು ಸಣ್ಣ ತುಕಡಿಯನ್ನ ಸೋಲಿಸಲಾಗದ ತನ್ನ ಸೈನ್ಯದ ಮೇಲೆ ಉರಿದುಬಿದ್ದು ತಲೆ ಮೇಲೆ ತಲೆ ಬಿದ್ದರೂ ಸರಿಯೇ ಆ ಜಿರೋನಾ ಪ್ರಾಂತ್ಯ ನನಗೆ ಬೇಕು” ಎಂದು ಘೋಷಣೆ ಮಾಡಿದ್ದಕ್ಕೆ ಮತ್ತೆ ಯುದ್ಧವಾಯಿತು. ಅಷ್ಟರಲ್ಲಿ ಜಿರೋನಾದಿಂದ ಸ್ಫೂರ್ತಿ ತೆಗೆದುಕೊಂಡು ಸಣ್ಣ ಸಣ್ಣ ಜನತಾಗಳನ್ನ ಪ್ರತಿಷ್ಟಾಪಿಸಿಕೊಂಡು ಬಾರ್ಬನ್ ಮನೆತನಕ್ಕೆ ಬದ್ಧರಾಗಿದ್ದೇವೆ ಎಂದು ಮತ್ತೂ ಘೋಷಣೆ ಮಾಡಿದ್ದರು.
ಇದರಿಂದ ಮತ್ತೆ ಕುಪಿತಗೊಂಡ ನೆಪೋಲಿಯನ್ ತನ್ನ ದೊಡ್ಡ ಸೈನ್ಯವನ್ನ ಕಳುಹಿಸಿ ಸ್ಪೇನಿನ ಆಡಳಿತದಲ್ಲಿದ್ದ ಕತಲೂನ್ಯವನ್ನ ಫ್ರಾನ್ಸಿಗೆ ವರ್ಗಾಯಿಸಿಕೊಂಡು ತನ್ನ ದೇಶದ ಗಡಿಯನ್ನ ವಿಸ್ತರಿಸಿಕೊಂಡ. ಆದರೆ ಭಾಷೆಯನ್ನ ಮಾತ್ರ ಬದಲಾಯಿಸದೆ ನಿಮ್ಮ ಭಾಷೆಯನ್ನ ಮಾತಾಡಿಕೊಳ್ಳಿ ಎಂದು ಬಿಟ್ಟ. ಇದು ಒಂಥರಾ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಂಗೆ. ಗಡಿಯೂ ವಿಸ್ತಾರವಾಯಿತು, ಅವರ ಭಾಷೆಯೂ ಅವರಿಗೆ ಸಿಕ್ಕಿತು” ಎಂದು ಮತ್ತೆ ಅವಳ ಕಡೆ ನೋಡಿದ.

ಬಾರ್ಸಿಲೋನಾದ ಬೇರೆ ಪ್ರಾಂತ್ಯಗಳಾದ ಮಾಂಟ್ಸೆರಾಟ್, ಟೆರ್ ಮತ್ತು ಸೆಗ್ರೆ ಎಲ್ಲವನ್ನೂ ಕತಲೂನ್ಯ ಎಂದು ಘೋಷಿಸಿ ಎಲ್ಲಾ ಹಬ್ಬಗಳು, ಸಂಸ್ಕೃತಿ ಭಾಷೆಯನ್ನೂ ತಮ್ಮ ಪಾಡಿಗೆ ತಾವಿರಲಿ ಎಂದು ಬಿಟ್ಟುಬಿಟ್ಟ. ಹೀಗೆ ನಿಮ್ಮ ಭಾಷೆ ಇರಲಿ ನಿಮ್ಮ ಸಂಸ್ಕೃತಿ ಇರಲಿ, ಎಂದು ಸಣ್ಣ ಮಕ್ಕಳಿಗೆ ಅತ್ತಾಗ ಪೀಪಿ ಕೊಟ್ಟ ಹಾಗೆ ಕೊಟ್ಟು ದೇಶದ ಎಲ್ಲಾ ತೆರಿಗೆಯನ್ನು ತಾನೆ ನುಂಗಿಕೊಂಡ ಭೂಪ ಈ ನೆಪೋಲಿಯನ್ ಎಂದು  ಹೇಳಿ ಸರ್ವೇಸಾ ಮುಗಿಸಿದ. ಅವಳ ಕಾಫಿ ಮಾತ್ರ ತಣ್ಣಗಾಯಿತು. ಹೇಗೆ ವಿಶ್ವಾಸ ಘಾತುಕರ ಕೈಗೆ ಸಿಕ್ಕಿದ ದೇಶವಿದು ಎಂದು ಬೇಜಾರುಮಾಡಿಕೊಂಡಳು. ಅಷ್ಟರಲ್ಲಿ ಅವನು “ನಾನು ಹೊರಡುತ್ತೇನೆ” ಎಂದು ಅವರ ಸ್ಟೈಲಿನಲ್ಲಿ ಹಗ್ ಮಾಡಿದ. ಅವಳು “ಏನು ಹೇಳಿ ನನ್ನ ಕಾರ್ಡ್ ಕೊಡಿಸಿದೆ” ಎಂದಾಗ, ಅವನು, “ಅದು ಆ ಹುಡುಗಿ ಚೆನ್ನಾಗಿ ಪರಿಚಯ ನನಗೆ, ಐ ಜಸ್ಟ್ ಸೆಡ್ ಶಿ ಇಸ್ ಮೈ ಗರ್ಲ್” ಎಂದು ಹೇಳಿ ಹೋದ. “ವಿಶ್ವಾಸ ಘಾತುಕರು , ಛೆ” ಎಂದು ಕಾಫಿ ಚೆಲ್ಲಿ ಹೋದಳು…
 

‍ಲೇಖಕರು avadhi

December 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: