ಮೇಘನಾ ಸುಧೀಂದ್ರ ಅಂಕಣ – ಅಲ್ಲಾ.. ನಿಂಗೆ ಒಂದು ಚೂರೂ ಕರ್ಟೆಸಿ ಇಲ್ವಾ,

6

ಅಲ್ಲಾ ನಿಂಗೆ ಒಂದು ಚೂರೂ ಕರ್ಟೆಸಿ ಇಲ್ವಾ, ನನ್ನನ್ನ ಒಬ್ಬಳನ್ನೇ ಬಿಟ್ಟು ಆ ಹುಡುಗರ ಜೊತೆ ಹೋದ್ಯಲ್ಲಾ, ನಂಗೇನಾದರೂ ಆಗಿದ್ರೆ, ಸ್ವಲ್ಪವಾದರೂ ಜವಾಬ್ದಾರಿ ಇಲ್ಲ ನಿಂಗೆ ಎಂದು ಗೌಹರ್ ಬೈಯುತ್ತಲೇ ಇದ್ದಳು.

ಹುಡುಗಿಗೆ ಬಂದ ಊರಿನ ಚರಿತ್ರೆ ತಿಳಿದುಕೊಳ್ಳೋಕೆ ಹೋಗಿ ತನ್ನ ಮೈಮೇಲಿನ ಎಚ್ಚರ ಮತ್ತು ಗೆಳತಿಯ ರಕ್ಷಣೆಯನ್ನ ಮರೆತಿದ್ದಕ್ಕೆ ಬಹಳ ಖೇದವಾಯಿತು. ಸಾಕಿನ್ನು ಈ ಕಥೆ, ನಮ್ಮ ದೇಶದ ಚರಿತ್ರೆಯೇ ನನಗೆ ಸರಿಯಾಗಿ ಗೊತ್ತಿಲ್ಲ, ಕಂಡೋರ ಮನೆ ಕಥೆ ತಿಳಿದುಕೊಂಡು ನಾನೇನು ಮಾಡಲಿ ಎಂದು ಸುಮ್ಮನೆ ಗೌಹಾರ್ ಜೊತೆ ಹೆಜ್ಜೆ ಹಾಕಿದಳು.

ಪಕ್ಕದಲ್ಲಿ ಮನೆಯೊಡತಿ ಮಾತ್ರ, ನನ್ನ ಮಗಳನ್ನೂ ಹೀಗೆ ಹೊರಗೆ ಕರೆದುಕೊಂಡು ಹೋಗಿ ಹೀಗೆಲ್ಲಾ ಮಾಡಬೇಡ. ನಿನ್ನಿಂದ ನನಗೆ ತೊಂದರೆ ಆಗುತ್ತದೆ ಎಂದು ಏನೇನೋ ಬಡಬಡಿಸುತ್ತಿದ್ದಳು. ಮನೆಯೊಡತಿಗೆ ಇಡೀ ಕತಲೂನ್ಯಾದ ಪ್ರಾಬ್ಲಂ ಹುಡುಗಿಯಿಂದಲೇ ಆಗಿದೆ ಅನ್ನೋ ಹಾಗೆ ಕಂಡ ಕಂಡಲ್ಲೆಲ್ಲಾ ತಪ್ಪು ಕಂಡುಹಿಡಿಯೋದಕ್ಕೆ ಶುರು ಮಾಡಿದ್ದಳು.

ಅವತ್ತು ಮನೆಗೆ ಹುಡುಗಿ ಬಂದು ರಪರಪನೆ ತಣ್ಣೀರು ಎರಚಿಕೊಂಡು ಊಟವನ್ನೂ ಮಾಡದೇ ಮಲಗಿದಳು. ಒಂದು ನಿಮಿಷ ಆಚೆ ಈಚೆ ನೋಡಿದ್ದರೆ ತೀರ ಗೌಹಾರ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿರಲ್ಲಿಲ್ಲ. ಎಂಥಾ ತಪ್ಪು ಮಾಡಿದೆ, ನನ್ನ ಕಥೆಯ ಹುಚ್ಚು ಒಬ್ಬರ ಜೀವನಕ್ಕೆ ಇಷ್ಟು ಮಾರಕವಾಗುತ್ತಿತ್ತಲ್ಲ ಎಂದು ಬೇಜಾರು ಮಾಡಿಕೊಂಡೇ ಮಲಗಿದಳು. ಇನ್ನು ಮುಂದೆ ಸುಮ್ಮನೆ ಕಾಲೇಜು, ಮನೆ ಎಂದು ಆರಾಮಾಗಿ ಇರುವೆ ಎಂದು ಪಣತೊಟ್ಟು ದೀಪ ಆರಿಸಿದಳು.

ಬೆಳಗ್ಗೆ ಎದ್ದು ರೆಡಿಯಾಗಿ ಕಾಲೇಜಿಗೆ ಹೊರಟಳು. ಜೊತೆ ಇಂಡಿಯನ್ ಹುಡುಗರೂ ಒಟ್ಟಿಗೆ ನಡೆದುಕೊಂಡು ಹೋಗುವಾಗ, ಏನು ನೆನ್ನೆ ಕ್ರಿಮಿನಲ್ ಆಗಿದ್ಯಂತೆನೀನು ಎಂದು ಕೇಳಿದಾಗ ಸುಮ್ಮನಿರಿ, ಸಾಕು ಎಂದು ಬೈದು ದಬದಬನೆ ನಡೆದುಕೊಂಡು ಕಾಲೇಜಿಗೆ ಹೋದಳು. ಅಲ್ಲಿ ಎಲೆನಾಳ ಲ್ಯಾಬಿಗೆ ಬಂದಳು ಅಲ್ಲಿ ಅವಳಿರಲ್ಲಿಲ್ಲ. ಅವಳನ್ನ ಇನ್ನೂ ಜೈಲಿನಿಂದ ಬಿಟಿಲ್ಲ ಎಂದೇನೋ ಯಾರೋ ಮಾತಾಡಿಕೊಂಡಿದ್ದನ್ನ ಕೇಳಿಸಿಕೊಂಡು ಬೇಜಾರು ಮಾಡಿಕೊಂಡಳು. ಯಾಕಿಷ್ಟು ಆಕ್ರೋಶ ಇವಳಿಗೆ ಎಂದುಕೊಂಡು ತನ್ನ ಕ್ಲಾಸುಗಳಲ್ಲಿ ತಲ್ಲೀನಳಾದಳು ಹುಡುಗಿ.

ಒಂದಾದ ಮೇಲೆ ಒಂದು ಕ್ಲಾಸು ಬ್ರೇಕಿಲ್ಲದೇ ನಡೆಯುತ್ತಿತ್ತು. ಇಲ್ಲಿ ಯಾರೂ ಯಾರ ಒತ್ತಾಯಕ್ಕಾಗಿ ಯೂನಿವರ್ಸಿಟಿ ಸೇರೊಲ್ಲ. ಅವರಿಗೆ ಇಷ್ಟವಾದರೇ ಸೇರುತ್ತಾರೆ.

ಇಷ್ಟವಿದ್ದರೆ ಕ್ಲಾಸಿನಲ್ಲು ಕೂರುತ್ತಾರೆ. ಬೋರ್ ಹೋಡೀತಂದ್ರೆ ಪಾಠ ಮಾಡುವವರ ಮುಂದೆಯೆ ಎದ್ದು ಹೋಗುತ್ತಾರೆ. ಯಾರಿಗೂ ಈಗೋ ಹರ್ಟ್ ಆಗುವುದಿಲ್ಲ.

ಅವಳು ಓದಿದ್ದ ಬೆಂಗಳೂರಿನಲ್ಲಿ ಇವೆಲ್ಲಾ ಇರಲ್ಲಿಲ್ಲ. ಕಡ್ಡಾಯವಾಗಿ ಕ್ಲಾಸಿನಲ್ಲಿ ಕೂರಬೇಕಿತ್ತು. ಗೆಟ್ ಔಟ್ ಎಂದಾಗ ಎದ್ದು ಹೋದರೆ ಅದೊಂದು ದೊಡ್ಡ ರಂಪವಾಗುತ್ತಿತ್ತು.

ಎಲ್ಕ್ಟ್ರಿಕಲ್ ಡ್ರಾಯಿಂಗ್ ಕ್ಲಾಸಿನಲ್ಲಿ ಒಮ್ಮೆ ಹೀಗೆ ಮಾಡಿ ಕೆಟ್ಟದಾಗಿ ಬೈಸಿಕೊಂಡಿದ್ದಳು. ಗೆಟ್ ಔಟ್ ಅಂದಾಕ್ಷಣ ಎದ್ದು ಹೋಗಿದ್ದಕ್ಕೆ ಅವರಪ್ಪನನ್ನೂ ಬೈಗುಳದಲ್ಲಿ ಎಳೆದು ತಂದಿದ್ದರು ಅವಳ ಸೋ ಕಾಲ್ಡ್ ಗುರುಗಳು.

ಆದರೆ ಇಲ್ಲಿ ಪೂರ್ತಿ ಉಲ್ಟಾ ಆಯಿತು. ಸರ್ ಎನ್ನುವ ಹಾಗಿರಲ್ಲಿಲ್ಲ, ಹುಡುಗರ ಜೊತೆ ಬಿಯರ್ ಕುಡಿಯೋಕೆ ಬರೋರು, ಶುಕ್ರವಾರ ರಾತ್ರಿ ಪಾರ್ಟಿ ಇದ್ದರೆ ಬರೋರು, ಮತ್ತೆ ಪಾಠದ ಆಚೆ ಯಾವ ಪ್ರಶ್ನೆ ಕೇಳಿದರೂ ಯಾವುದೇ ಧಿಮಾಕು ಇಲ್ಲದೇ ಉತ್ತರ ಕೊಡುತ್ತಿದ್ದರು. ಇಲ್ಲಿನ ಪಾಠದ ವಾತಾವರಣ ಬಹಳ ಭಿನ್ನವಾಗಿತ್ತು. ಇವೆಲ್ಲವನ್ನು ನೋಡಿ ಪದೇ ಪದೇ ಇವಳು ಬಂದಿರೋದು ಈ ಊರಿನಲ್ಲಿ ಓದೋದಕ್ಕೆ ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು.

ಆಫ್ಟರ್ ಏ ವೆರಿ ಲಾಂಗ್ ಡೇ ಬಾರ್ಸಿಲೊನಾಟಾ ಬೀಚಿಗೆ ಹೋಗೋಣ ಎಂದು ತನ್ನ ಇಂಡಿಯನ್ ಗೆಳಯರಿಗೆ ಹೇಳಿದಳು. ಹುಡುಗರು ನೋಡೋಣ ನೋಡೋಣ ಎಂದು ಆದಷ್ಟು ಅವಳನ್ನ ಇಗ್ನೋರ್ ಮಾಡುತ್ತಿದ್ದರು. ಅದೇನು ಇಂತಹ ತಿಳಿ ಸಂಜೆಯಲಿ ಮುಂಚೆ ಎಲ್ಲಾ ಹುಡುಗಿಯನ್ನ ಅವರೇ ಕರೆಯುತ್ತಿದ್ದರಲ್ಲಾ ಈಗೇನಾಯಿತು ಎಂದು ಅವಳು ಯೋಚಿಸುತ್ತಿರುವಾಗಲೇ ಒಬ್ಬ ಹುಡುಗ ಮೆಲ್ಲನೆ ಬಂದು ಅದು ಬಾರ್ಸಿಲೋನಾಟಾ ನ್ಯೂಡ್ ಬೀಚ್ ಅಂದ.

ಒಂದು ನಿಮಿಷ ತಲೆ ಗಿರ್ರೆಂದು ತಿರುಗಿ, ಆ ಅದಕ್ಕೇನಿವಾಗ, ಅಲ್ಲಿ ಹೋದವರಿಗೇನಾದರೂ ಡ್ರೆಸ್ ಕೋಡ್ ಇಲ್ಲವಲ್ಲ ಎಂದು ಪೆದ್ದುಪೆದ್ದಾಗಿ ಹೇಳಲು ಶುರುಮಾಡಿದಳು. ಹುಡುಗರಿಗೆ ಅರ್ಧ ನಗು, ಅರ್ಧ ಕೀಟಲೆ ಮಾಡುವ ಮುಖಚರ್ಯೆ ತೋರಿಸಿಕೊಂಡು ಇದ್ದರು. ಹುಡುಗರು ಅವರ ಪ್ರೈವೇಟ್ ಸಮಯ ಕಳೆಯಲು ಅಲ್ಲಿ ಹೋಗುತ್ತಿದ್ದರು, ಮತ್ತೆ ಅವರದ್ದೇನೇನೋ ಆಸೆಗಳು. ಆ ಸಮಯದಲ್ಲಿ ಹುಡುಗಿ ಇದ್ದರೆ ಅವರಿಗೇನೋ ಮುಜುಗರ. ಆದಷ್ಟು ಅವಳನ್ನ ಅವರ ಜೊತೆ ಬರದೇ ಇರೋ ಹಾಗೆ ನೋಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು.

ಆದರೂ ಇವಳಿಗೆ ಅರ್ಥವಾಗದೇ ನಾನು ಬೀಚಿಗೆ ಹೋಗುತ್ತೇನೆ, ಬೇಕಾದರೇ ಬನ್ನಿ ಎಂದು ಬ್ಯಾಗ್ ಹಿಡಿದುಕೊಂಡು ಅವಳ ಪಾಡಿಗೆ ಹೋದಳು. ಅಲ್ಲಿ ಬೀಚಿನಲ್ಲಿ ಥೇಟ್ ಸುದೀಪ್ ಬಂದು ಮಾತಾಡು ಮಾತಾಡು ಮಲ್ಲಿಗೆ ಸಿನೆಮಾದಲ್ಲಿ ತತ್ವ ಹಾಡುವ ಹಾಗೆ ಯಾರೋ ಅಷ್ಟೇ ಚೆಲುವನೊಬ್ಬ ಒಂದು ತಮಟೆ ಹಿಡಿದು ಹಾಡುತ್ತಿದ್ದ. ಓಹ್ ಹಿಪ್ಪಿಯಿರಬೇಕು ಎಂದುಕೊಂಡು ಆಮೇಲೆ ತಕ್ಷಣ ಥತ್ ಇದು ಗೋಕರ್ಣ ಅಲ್ಲ ಎಂದು ಸುಮ್ಮನಾಗಿ ಹಾಡನ್ನ ಕೇಳಲು ಶುರು ಮಾಡಿದಳು. ಅದು ಕ್ಯಾಚಿಯಾಗಿತ್ತು.

ಎಷ್ಟು ಚೆನ್ನಾಗಿ ಹಾಡುತ್ತಾನಲ್ಲಾ ಎಂದು ಚಪ್ಪಾಳೆ ತಟ್ಟುತಿದ್ದಳು. ಒಂದಾಯಿತು, ಎರಡಾಯಿತು, ಮೂರಾಯಿತು, ಸೂರ್ಯ ಇಳಿಯುವವರೆಗೂ ಹಾಡು ಮುಗಿಯುತ್ತಲೇ ಇರಲ್ಲಿಲ್ಲ. ಒಂದೊಂದು ಹಾಡು ತನ್ನ ಜನಪದದ ಮಾಯಾದಂಥ ಮಳೆ ಬಂತಣ್ಣ, ಮೂಡಲ್ ಕುಣಿಗಲ್ ಕೆರೆಯ ರಾಗವನ್ನ ನೆನಪಿಸುತ್ತಿತ್ತು. ಕತಲಾನ್ ಭಾಷೆಯ ಹಾಡೇ ಎಂದುಕೊಂಡು ಅಸ್ವಾದಿಸುತ್ತಿದ್ದಳು.

ಓಲಾ ಮೇಡಾಮ್ ಎಂದು ಆ ಹಾಡುಗಾರ ಕೂಗಿದ. ಹಾಡಿನ ಮಧ್ಯದ್ದೇ ಯಾವುದೋ ನುಡಿ ಎಂದುಕೊಂಡು ತಿರುಗಿದರೆ ಅವನ ಕಛೇರಿ ಮುಗಿದಿತ್ತು. ನಾ ಹಾಡಿದೆಲ್ಲಾ ನಿಮಗೆ ಅರ್ಥವಾಯಿತಾ, ತುಂಬಾ ಆಸ್ವಾದಿಸುತ್ತಿದ್ದಿರಿ ಎಂದ. ಇಲ್ಲಾ ಅರ್ಥವಾಗಲ್ಲಿಲ್ಲ ಆದರೆ ರಾಗ ಚೆನ್ನಾಗಿತ್ತು, ಕತಲಾನ್ ಅಷ್ಟು ಚೆನ್ನಾಗಿ ಬರುವುದಿಲ್ಲ, ಬಟ್ ಚೆನ್ನಾಗಿ ಹಾಡಿದ್ದೀರ ಎಂದು ಕೈಕುಲುಕಿ ಎದ್ದೇಳಲು ಹೋದಳು.

ನಾನು ಸ್ಟುವರ್ಟ್, ನಾನು ಕತಲಾನಿನ ಸ್ವಾತಂತ್ರ್ಯದ ಹಾಡು ಹಾಡುತ್ತಿದ್ದೆ ಎಂದನು. ಅಯ್ಯೋ ನಿನ್ನ ಸಹವಾಸವೇ ಬೇಡ ಎಂದು ಬೇಗ ಎದ್ದುಹೋಗಲು ಅಣಿಯಾದಳು. ನಿನಗೆ ಗೊತ್ತಾ ಈ ಕಡಲಿನ ಕಣಕಣವೂ ಕೆಂಪು ಹಳದಿಯನ್ನ ನೋಡಲು ಇಚ್ಚಿಸಿದೆ, ಅಲ್ಲಿರುವ ಮೀನಿನ ಉಸಿರಾಡುವ ಗುಳ್ಳೆಯೂ ಸ್ವಾತಂತ್ರ್ಯಕ್ಕಾಗಿ ಹಪಹಪಿಸುತ್ತಿದೆ ಎಂದಾಗ ಸಾಕು, ನನಗಿದರಲ್ಲೆಲ್ಲಾ ಆಸಕ್ತಿ ಇಲ್ಲ, ಬಿಟ್ಟುಬಿಡು ನನ್ನನ್ನ, ನನ್ನ ದೇಶಮ್ ನನ್ನ ಇತಿಹಾಸ ಸಾಕು ಎಂದು ಚಪ್ಪಲಿ ಹಾಕಿಕೊಂಡು ನಡೆಯಲು ಶುರು ಮಾಡಿದಳು.

ಅವನು ಅವಳ ಕೈಹಿಡಿಡು ತಡೆದು, ಇದು ನಿನ್ನ ದೇಶವೇ, ನೀನು ಎಲ್ಲಿ ಇದೆಯೋ ಅದೇ ನಿನ್ನ ದೇಶ, ಎಷ್ಟು ಸಂಪತ್ತಿತ್ತು ಗೊತ್ತಾ ಈ ದೇಶದಲ್ಲಿ, ಇಂಡಸ್ಟ್ರಿಯಲೈಸೇಶನ್ ಯುಗದಲ್ಲಿ ಒಳ್ಳೆ ತೆರಿಗೆ, ಅಮೆರಿಕಾದ ಜೊತೆ ಮತ್ತೆ ವ್ಯಾಪಾರ, ಎಲ್ಲವೂ ಸುಭಿಕ್ಷವಾಗಿತ್ತು. ರೀಪ್ರ್ಸ್ ಯುದ್ಧದಿಂದ ಚೇತರಿಸಿಕೊಂಡು ದೇಶ ಚೆನ್ನಾಗಿಯೇ ಇತ್ತು.

೧೭೯೦ರಲ್ಲಿ ಫ್ರೆಂಚ್ ಕ್ರಾಂತಿಯಾಯಿತಲ್ಲ ಆಗ ಅವರ ರಾಜ ಲೂಯಿಯನ್ನ ಗಲ್ಲಿಗೇರಿಸಿ ಮತ್ತೆ ಗಲಭೆ ಶುರುವಾಯಿತು. ಮತ್ತೆ ಫ್ರಾನ್ಸ್ ಸ್ಪೇನಿನ ಮೇಲೆ ಯುದ್ಧ ಸಾರಿತು. ಇಲ್ಲಿನ ರಕ್ತ ಬಹಳ ಕಾಸ್ಟ್ಲಿ ಆಯಿತು. ೧೦ ವರ್ಷ ಯುದ್ಧ ನಾಲ್ಕು ವರ್ಷ ಶಾಂತಿ ಇದು ಕತಲೂನ್ಯಾದ ಕಥೆಯಾಯಿತು. ಗುವೆರಾ ಗ್ರಾನ್ ಎಂದು ಕರೆಯಲ್ಪಡುವ ಪೆರನೀಸ್ ಯುದ್ಧ ಒಂದು ಕೆಟ್ಟ ಪರಿಣಾಮ ದೇಶದ ಮೇಲೆ ಬೀರಿತ್ತು.

ಪೈರನೀಸ್ ಕಾಡು ಯುರೋಪಿನ ಸುಂದರ ಕಾಡು, ಅದು ಎಷ್ಟೊಂದು ದೇಶದ ಮಧ್ಯೆ ಹಾದುಹೋಗುತ್ತದೆ. ಅಲ್ಲಿ ಫ್ರೆಂಚಿನವರು ಗೆರಿಲ್ಲಾ ಯುದ್ಧ ಮಾಡಿ ಮತ್ತೆ ಸ್ಪೇನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇಲ್ಲಿ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂದ ಹಾಗೆ ಯಾವುದೇ ಯುದ್ಧವಾದರೂ ಸರಿ ಮೊದಲು ಹೊಡೆತ ಬೀಳುತ್ತಿದ್ದದ್ದು ನಮ್ಮವರಿಗೇ , ನಮ್ಮ ಭಾಷೆಯ ಮೇಲಾಗುತ್ತಿದ್ದ ದೌರ್ಜನ್ಯ ಯಾವ ಹೆಣ್ಣು ಮಗುವಿನ ಮಾನಭಂಗಕ್ಕಿಂತ ಕಡಿಮೆಯಲ್ಲ ಎಂದು ಹೇಳುತ್ತಿದ್ದಾಗ ಹುಡುಗಿ ಒಂದು ನಿಮಿಷ ತಡೆದು, ಯಾಕೆ ಯಾವಗಲೂ ನೀವು ಬಲಿಪಶುವಾಗಿಯೇ ಇರುತ್ತೀರಾ ಎಂದು ಪ್ರಶ್ನೆ ಮಾಡಿದಳು.

ಬಲಿಪಶು ಅಲ್ಲಾ ನಾವು ಸರ್ವೈವರ್ಸ್. ಆದರೆ ನೆಪೋಲಿಯನ್ ಎಂಬ ಕ್ರೂರಿ ಬಂದ ನಂತರ ನಮ್ಮ ಕಥೆ ಇನ್ನೂ ಅಧೋಗತಿಯಾಯಿತು. ಎಂಥಾ ಕರ್ಮ ನಮ್ಮದು ಎಂದು ಹೇಳಿ ಗಿಟಾರ್ ಎತ್ತುಕೊಂಡು ಹೊರಟುಹೋದ.

ಕಣ್ಣಿಗೆ ಕಾಣದಷ್ಟು ದೂರ ಹೋದ ಹಾಡುಗಾರ, ಆದರೆ ಈ ನೆಪೋಲಿಯನ್ ಮತ್ತು ಬಾರ್ಸಿಲೋನಾಗೂ ಏನು ಸಂಬಂಧ ಎಂದುಕೊಂಡು ಮತ್ತೆ ತಲೆಗೆ ಹುಳುಬಿಟ್ಟವನ್ನನ್ನು ಶಪಿಸುತ್ತಾ ಮತ್ತೆ ಲೈಬ್ರರಿಗೆ ಹೋಗೋಣ ಎಂದು ತಯಾರಾದಳು. ಮಧ್ಯದಲ್ಲಿ ಹುಡುಗರು ಸಿಕ್ಕು ಓಹ್ ಜಾಲಿ ಎಂದರು. ಮುಖಕ್ಕೆ ಮರಳೆಸೆದು ಓಡಿದಳು.

ನೆಪೋಲಿಯನ್ ಕತಲನ್ನರಿಗೆ ಏನು ಮಾಡಿದ ಎಂಬ ಪ್ರಶ್ನೆ ಅವಳ ತಲೆಯಲ್ಲಿ ಕೊರೆಯುತ್ತಲೇ ಇತ್ತು…

‍ಲೇಖಕರು

December 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: