ಒರೆಯಿಂದ ಹೊರಬರುತ್ತವೆ ಕತ್ತಿಗಳು..

ಕು.ಸ.ಮಧುಸೂದನ

ಸತ್ಯ ಹೇಳಿದವರು ಅಮರರಾಗುತ್ತಾರೆಂಬ

ಅಮರಕಥಾಕೋಶದ ಕತೆಗಳಿಗೀಗ ಅಂತ ಮಾನ್ಯತೆಯೇನಿಲ್ಲ

ಸುಳ್ಳು ಹೇಳುವವರ

ರಾಜ್ಯದೊಳಗೆ

ಬಟ್ಟೆ ಹಾಕಿಕೊಂಡು ಬಡಿಸಿಕೊಳ್ಳುವುದು

ಅಚ್ಚರಿಯ ವಿಷಯವೇನಲ್ಲ

ಬದುಕಿರುವ ಗೆಳೆಯರ ಪ್ರಕಾರ ನಾವ್ಯಾರು ಸತ್ಯ ಹೇಳಿ

ಉಳಕೊಂಡವರಲ್ಲ

ಹಾಗಂತ ಸತ್ತವರೆಲ್ಲ ಸತ್ಯ ಹೇಳಿದವರೇ ಎನ್ನುವುದಕ್ಕೂ

ಪುರಾವೆಯಿಲ್ಲ!

 

ಎಲ್ಲರೂ ಸರಿಯಿದೆ ಎನ್ನುವಾಗ

ನಾನೊಬ್ಬ

ಸರಿಯಿಲ್ಲವೆಂದು ಕೊಂಕೊಂದ ತೆಗೆದಾಗ

ಒರೆಯಿಂದ ಹೊರಬರುತ್ತವೆ ಕತ್ತಿಗಳು

ಗೊಂದಲವಾಗೋದು ಆಗಲೇನೆ

ಯಾವುದನ್ನು ಉಳಿಸಿಕೊಳ್ಳೋದು

ಸತ್ಯವನ್ನ ಇಲ್ಲ ತಲೆಯನ್ನಾ?

ತಲೆ ಇರುವ ಯಾರೂ ಇಂತ ಪ್ರಶ್ನೆ

ಕೇಳುವುದಿಲ್ಲವೆಂಬುದು

ಸಮಾಜದ ಸಭ್ಯಸ್ಥರ ಅನಿಸಿಕೆ

 

ಬದಲಿಸಿಬಿಡ್ತೀನಿ

ಅಂತಾ ಹೊರಟವರೇ ಬದಲಾಗಿ

ಹೋಗಿರುವುದಕ್ಕೆ ಇತಿಹಾಸದ ಸಾಕ್ಷಿಗಳೇನು ಬೇಡ

ದುರ್ಬಲರಿಗೆ ಶಕ್ತಿ ತುಂಬುವ ಮಾತಾಡುತ್ತಲೇ

ತಾವು ಬಲಿಷ್ಠರಾಗಿ ಬಿಡುವುದನ್ನುಕಾಣುತ್ತಲೇ ಇದ್ದೇವೆ.

ಯಾವುದನ್ನು ಬದಲಾಯಿಸ್ತೀವಿ ಅಂತ ಹೊರಟಿರುತ್ತಾರೊ

ಅದನ್ನೇ ತಾವು ಮತ್ತೆ ಸೃಷ್ಠಿಸುತ್ತಾ ಹೋಗುವುದು

ನಿಸರ್ಗದ ಸಹಜ ಕ್ರಿಯೆ ಅಂತ ನಮ್ಮನ್ನು ನಂಬಿಸಲಾಗಿದೆ

ನಾವೋ ಪ್ರಶ್ನೆ ಮಾಡದೇಲೆ ಒಪ್ಪಿಕೊಳ್ಳುವುದಕ್ಕೆ

ಒಗ್ಗಿಹೋದ ಜನ!

ಸಂಖ್ಯಾಬಲ ಉಳ್ಳವರು ಹೇಳಿದ್ದೇ ಸರಿ

ಅಂತ ಒಪ್ಪೋಕೆ ಸಿದ್ದವಿರದೆ ಇದ್ದಾಗ

ಅದನ್ನು ನಿರಾಕರಿಸೋದೇನೊ ನಮ್ಮ ಹಕ್ಕು,ನಿಜ

ಆದರೆ ಅವರು ಅಷ್ಟಕ್ಕೆ ತಮ್ಮ ಅನಿಸಿಕೆಯನ್ನು

ಹಿಂದಕ್ಕೆ ಪಡೆಯಲ್ಲ, ಬದಲಿಗೆ ಅದನ್ನೇ ಮತ್ತೆ ಮತ್ತೆ

ಪುನರುಚ್ಚಾರ ಮಾಡ್ತಾಹೋಗುವಾಗ

ಸರಿಯಲ್ಲ ಅಂತ ವಾದಿಸಿದ ಮನಸುಗಳಿಗೂ

ಗೊಂದಲ ಶುರುವಾಗುತ್ತೆ

ಅದೇ ಸತ್ಯ ಇದ್ದರೂ ಇರಬಹುದೇನೊ ಅಂತ

ಹೀಗೆ ಶುರುವಾಗಿದ್ದರ ಪರಿಣಾಮ

ಬೆಳೆಗಿಂತ ಕಳೆಯೇ ಜಾಸ್ತಿಯಾಗುತ್ತ ಹೋಗುತ್ತೆ

 

ಸುಖವಾಗಿದ್ದವನಿಗೆ ಕಷ್ಟಬಂದರೆ

ಅದೇ ದೊಡ್ಡದೆನಿಸುತ್ತೆ

ಜನರೂ ಸಹ ಆ ನತದೃಷ್ಠ ಶ್ರೀಮಂತನಿಗಾಗಿ

ಹಲ್ಲಿಯಂತೆ ಲೊಚಗುಟ್ಟುತ್ತಾರೆ

ಹುಟ್ಟಿದಾಗಿಂದ ಸಂಕಷ್ಟದಲ್ಲೇ ಬೆಳೆದ ಜನರಿಗೆ

ಬಡತನ ಎಷ್ಟು ರೂಢಿಯಾಗಿ ಬಿಡುತ್ತದೆಯೆಂದರೆ

ಅವರು ತಮ್ಮ ಕಷ್ಟದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ

ಸಿರಿವಂತನ ಅರಮನೆಯ ವೈಭೋಗವನ್ನು ವರ್ಣಿಸುವುದರಲ್ಲಿಯೇ

ಮಗ್ನರಾಗಿ ಬಿಡುತ್ತಾರೆ.

 

ಇಂತಹ ಸನ್ನಿವೇಶದಲ್ಲಿ ಸಮಾನತೆಯ ಕೂಗುಗಳು ಕೇಳಲಾಗದಂತೆ

ದಣಿಗಳುಕಿವುಡರಾಗುತ್ತಾರೆ

ಜನ ಮೂಕರಾಗುತ್ತಾರೆ!

‍ಲೇಖಕರು

December 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: