ಮೂಲಾಧಾರ ಇಲ್ಲದ ಲಿಂಕಾಧಾರದ ಅಪಾಯಗಳು..

 

ದೇಶದ 130 ಕೋಟಿಯಷ್ಟು ಜನರಲ್ಲಿ 100  ಕೋಟಿ ಮಂದಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇವರಲ್ಲಿ 93% ಮಂದಿ ಪ್ರಾಪ್ತ ವಯಸ್ಕರು ಎಂದು ಹೇಳುತ್ತಿದೆ UIDAI  ಎಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆ. ಇಷ್ಟೊಂದು ಅಗಾಧ ಪ್ರಮಾಣದ ಡೇಟಾಬೇಸ್ ಹೊಂದಿರುವ ಸರಕಾರ ಸಹಜವಾಗಿಯೇ ತನ್ನ ತೆರಿಗೆ ಸಂಗ್ರಹದ ವ್ಯಾಪ್ತಿ ವಿಸ್ತರಿಸಿಕೊಳ್ಳುವ ಉದ್ದೇಶ ಈಡೇರಿಸಿಕೊಳ್ಳಲು ಆಧಾರ್ ಕಾರ್ಡ್ ಗಳನ್ನು PAN ಕಾರ್ಡ್ ಗಳಿಗೆ, ಬ್ಯಾಂಕ್ ಅಕೌಂಟ್ ಗಳಿಗೆ… ಹೀಗೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಲಿಂಕ್ ಮಾಡುತ್ತಾ ವಿಸ್ತರಿಸಿಕೊಳ್ಳುತ್ತಿದೆ.

ಡೇಟಾ ಅನಾಲಿಟಿಕ್ಸ್ ನ ಈ ಯುಗದಲ್ಲಿ ಆಡಳಿತದ ದ್ರಷ್ಟಿಯಿಂದ ಇದು ಸರಕಾರಕ್ಕೆ ಬಲವಾದ ಹಿಡಿತವನ್ನು ಒದಗಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ, ಇದು ಎರಡು ಅಲುಗಿನ ಕತ್ತಿ. ಇಂದು ಸರಕಾರದ ಕೈನಲ್ಲಿರುವ ಈ ಡೇಟಾ ಎಷ್ಟು ಸುರಕ್ಷಿತ? ಸಾಂವಿಧಾನಿಕವಾಗಿ ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಎಲ್ಲಿ ನಿಂತಿದ್ದೇವೆ? ಸರಕಾರ ನಡೆಸುತ್ತಿರುವ ಪಕ್ಷಗಳು, ಖಾಸಗಿ ವ್ಯಕ್ತಿಗಳು, ಕಾರ್ಪೋರೇಟ್ ಗಳ ಕೈಗೆ ಈ ಡೇಟಾ ಸಿಕ್ಕರೆ, ಅದರ ಪರಿಣಾಮಗಳೇನು? ಈ ಎಲ್ಲ ಪ್ರಶ್ನೆಗಳು ಈಗ ಹೆಡೆಯೆತ್ತಿನಿಂತಿವೆ.

ಐಟಿಗೆ ಹೆಸರುಮಾಡಿರುವ ನಮ್ಮ ದೇಶದಲ್ಲಿ ಇಂದಿಗೂ ಸ್ಪಷ್ಟವಾದ ಡೇಟಾ ಸಂರಕ್ಷಣಾ ವ್ಯವಸ್ಥೆಯನ್ನು ರೂಢಿಸಿಕೊಂಡಿಲ್ಲ. ಅಲ್ಲೋ ಇಲ್ಲೋ ಒಂದಿಷ್ಟು ತೇಪೆ ಕಾಮಗಾರಿ ಮಾತ್ರ ನಡೆದಿದೆ. ಕಳೆದೆರಡು ವರ್ಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನದಂತಹ ಭಾರತೀಯ ಪೀನಲ್ ಕೋಡಿನೊಳಗೂ ಒಗ್ಗಿಕೊಳ್ಳುವ ಪ್ರಕರಣಗಳನ್ನು ಹೊರತುಪಡಿಸಿದರೆ, ಡೇಟಾ ಬಳಕೆ-ಅಪಬಳಕೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಢಾಳಾಗಿ ಕಾಣಿಸುತ್ತಿದೆ.

ಸಂವಿಧಾನದ ಆರ್ಟಿಕಲ್ 21, ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಬಗ್ಗೆ ಹೇಳುತ್ತದೆ. ಈ ಚಾದರದಡಿಯಲ್ಲಿ ತರಲಾಗಿರುವ ಮಾಹಿತಿ ತಂತ್ರಜ್ನಾನ ಕಾಯಿದೆ 2000ದಲ್ಲಿ 43- A (ದತ್ತಾಂಶ ಸಂರಕ್ಷಣೆ ವೈಫಲ್ಯಕ್ಕೆ ಪರಿಹಾರ), 65 (ಸೋರ್ಸ್ ಕೋಡ್ ಸಂರಕ್ಷಣೆ), 66 (ಹ್ಯಾಕಿಂಗ್ ನಿಂದ ರಕ್ಷಣೆ), 70 (ಡೇಟಾ ಸಂಗ್ರಹ), 72-A(ಒಪ್ಪಂದ ಉಲ್ಲಂಘಿಸಿ ಮಾಹಿತಿ ಬಹಿರಂಗಕ್ಕೆ ಶಿಕ್ಷೆ) ಬಗ್ಗೆ ಹೇಳಲಾಗಿದೆ. ಇದಲ್ಲದೆ 2011, ಎಪ್ರಿಲ್ 13ರಂದು ಮಾಹಿತಿ ತಂತ್ರಜ್ನಾನ ನಿಯಮಗಳನ್ನು (Reasonable security practices and procedures and sensitive personal data or information) ಸರಕಾರ ರೂಪಿಸಿದೆ. ಆದರೆ, ಇವೆಲ್ಲ ಬಹುಅಂಶ ಐಟಿ ಕಂಪನಿಗಳ ವ್ಯವಹಾರಗಳನ್ನೇ ಗಮನದಲ್ಲಿರಿಸಿಕೊಂಡು ರೂಪಿಸಲಾದ ನಿಯಮಗಳು.

ಇವು ಪಾಸ್ ವರ್ಡ್, ಹಣಕಾಸು ವ್ಯವಹಾರ, ದೈಹಿಕ ಮಾನಸಿಕ ಆರೋಗ್ಯ ಮತ್ತು ದಾಖಲೆಗಳು, ಲೈಂಗಿಕ ಒರಿಯಂಟೇಷನ್, ಬಯೋಮೆಟ್ರಿಕ್ಸ್ ಗಳಂತಹ ಕೆಲವೇ ಪ್ರಿಮಿಟಿವ್ ಅಂಶಗಳನ್ನು ಮಾತ್ರ ಸಂರಕ್ಷಿಸುತ್ತವೆ.

ಆದರೆ ಈವತ್ತು ಡೇಟಾ ಮೈನಿಂಗ್, ಡೇಟಾ ಅನಾಲಿಸಿಸ್ ತಂತ್ರಗಳು ಬೆರಳು ತೋರಿಸಿದರೆ ಕೈಯನ್ನಲ್ಲ ಇಡಿಯ ಊರನ್ನೇ ನುಂಗುವ ಗಾತ್ರಕ್ಕೆ ಬೆಳೆದು ನಿಂತಿವೆ. ಈ ರಂಗವನ್ನು ನಿಯಂತ್ರಿಸಲು ಸದ್ಯಕ್ಕೆ ಸರಕಾರದ ಕೈಯಲ್ಲಿರುವ ನಿಯಂತ್ರಣ ಪರಿಕರಗಳು ಏನೇನೂ ಸಾಲವು. ಇದು ಹೀಗೇ ಇದ್ದರೆ ಲಾಭದಾಯಕ ಆಗಿರುವ ಕಾರಣಕ್ಕೆ ಸರಕಾರಗಳೂ ಕೂಡ ಈ ಡೇಟಾ ಸಂರಕ್ಷಣೆಯ ಬಗ್ಗೆ ಕಠಿಣವಾದ ನಿಲುವುಗಳನ್ನು ತಳೆಯಲು ಮನಸ್ಸು ಮಾಡುತ್ತಿಲ್ಲ.

ಸಣ್ಣ ಉದಾಹರಣೆ ಕೊಡುತ್ತೇನೆ. ಪ್ರಧಾನಮಂತ್ರಿಗಳು ಪ್ರತೀ ತಿಂಗಳು ನಡೆಸುವ ಮನ್ ಕೀ ಬಾತ್ ಬಗ್ಗೆ ಪ್ರತೀ ತಿಂಗಳಲ್ಲಿ ನನಗೆ ಅದು ಯಾವಾಗ ಇದೆ ಎಂಬ ಮೇಲ್ ಮತ್ತು ಅದು ಮುಗಿದ ಮೇಲೆ ಅವರು ಏನು ಹೇಳಿದರೆಂಬ ಮೇಲ್ ಸರಕಾರದ ಕಡೆಯಿಂದ ನನ್ನ ಮೇಲ್ ಬಾಕ್ಸಿಗೆ ಬಂದು ಬೀಳುತ್ತಿದೆ. ಇದಲ್ಲದೆ ನಡುವೆ ಅವರ ವಿದೇಶ ಪ್ರಯಾಣ ಸೇರಿದಂತೆ ಹಲವು ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಇ ಮೇಲ್ ಗಳು, ಮೊಬೈಲ್ ಸಂದೇಶಗಳು ಬರುತ್ತಿವೆ. ಈ ವೈಯಕ್ತಿಕ ಮೇಲ್ ವಿಳಾಸಗಳು ,ಮೊಬೈಲ್ ನಂಬರುಗಳು ಸರಕಾರಕ್ಕೆ ಸಿಕ್ಕಿದ್ದು ಹೇಗೆ? ಅದನ್ನು ಅವರ ಉದ್ದೇಶಗಳಿಗೆ ತಕ್ಕಂತೆ ಬಳಸಲು ಅನುಮತಿ ಕೊಟ್ಟವರು ಯಾರು? ಇದಕ್ಕೆ ಶಾಸನಾತ್ಮಕ ಉತ್ತರಗಳೇನಾದರೂ ಇವೆಯೇ?

ಸರಕಾರ ಬಿಡಿ, ನಮ್ಮೆಲ್ಲರ ಮೊಬೈಲುಗಳಿಗೂ ಪ್ರತಿದಿನ ನೂರಾರು ಮಾರ್ಕೆಟಿಂಗ್ ಎಸ್ಸೆಮ್ಮೆಸ್ ಗಳು ಬಂದು ರಾಶಿ ಬೀಳುತ್ತಿವೆ. ನಮ್ಮ ಮೊಬೈಲ್ ನಂಬರ್ ಗಳನ್ನು ಆ ಕಾರ್ಪೋರೇಟ್ ಗಳ ಕೈಗೆ ಕೊಟ್ಟವರು ಯಾರು?

ಬ್ಯಾಂಕಿಂಗ್ ವ್ಯವಹಾರಗಳು ಖಾಸಗಿ ವಿಚಾರ ಆಗಿದ್ದರೂ, ಈಗ ನಾವು ಸಾಲ ಪಡೆಯಲು ಖಾಸಗಿ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿದರೆ, ಅವರಿಗೆ ನಮ್ಮ CIBIL ರೇಟಿಂಗ್ ಗೊತ್ತಿರುತ್ತದೆ. ಅವರು ಅದರ ಆಧಾರದಲ್ಲೇ ನಮಗೆ ಸಾಲ ಕೊಡಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ. ಬಡ ರೈತರು, ಮಧ್ಯಮವರ್ಗದವರಿಗೆ ಇದು ಒಳ್ಳೆಯ ಸುದ್ದಿ ಅಲ್ಲ.

ನಾಳೆ, ನಮ್ಮ ಆಧಾರ್-ಪಾನ್ ಲಿಂಕ್ ಆದ ಮೇಲೆ, ನಮ್ಮ ತೆರಿಗೆ ವಿನ್ಯಾಸದಲ್ಲಿ ವಿಮೆಗೆ ಇನ್ನೊಂದಿಷ್ಟು ಜಾಗ ಉಳಿದಿದೆ ಎಂದಾದರೆ, ವಿಮಾ ಕಂಪನಿಯೊಂದು ಆ ಆಧಾರದಲ್ಲಿ ನಮ್ಮನ್ನು ಸಂಪರ್ಕಿಸಿ, ತನ್ನ ಪಾಲಿಸಿಯನ್ನು ನಮಗೆ ಮಾರ್ಕೆಟಿಂಗ್ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ?

ಇಂತಹ ಸಾವಿರ ಪ್ರಶ್ನೆಗಳು ಈಗ ಏಳಲಾರಂಭಿಸಿವೆ…

ಇಂತಹದೊಂದು ಸಮಗ್ರ ದ್ರಷ್ಟಿಕೋನ ಹೊಂದಿ ಐ.ಟಿ. ಕಾಯಿದೆಯನ್ನು ಸಮಗ್ರವಾಗಿ, ಸಾಂವಿಧಾನಿಕ ನೆಲೆಯಿಂದ ಬದಲಾಯಿಸಬೇಕಾಗಿರುವುದು ಈವತ್ತಿನ ತುರ್ತು. ಅದು ನಡೆಯದೇ ಆಧಾರ್ ಜೊತೆ ಉಳಿದೆಲ್ಲ ಗುರುತುಗಳ ಲಿಂಕ್ ನಡೆಯುವುದು ಮುಂದೊಂದುದಿನ ವಿನಾಶಕಾರಿಯಾಗಿ ಪರಿಣಮಿಸಬಹುದು.

ಹೆಚ್ಚಿನ ಓದಿಗಾಗಿ:

ದೇಶದಲ್ಲಿ 2015ರ ಸೈಬರ್ ಅಪರಾಧಗಳ ಅಂಕಿಅಂಶಗಳು ಇಲ್ಲಿವೆ: http://ncrb.nic.in/ StatPublications/CII/CII2015/ chapters/Chapter%2018-15.11. 16.pdf

ಆಧಾರ್ ಬಗ್ಗೆ UIDAI  ಇದೇ ಎಪ್ರಿಲ್ ನಲ್ಲಿ ಹೊರಬಿಟ್ಟಿರುವ ಪತ್ರಿಕಾ ಹೇಳಿಕೆ ಇಲ್ಲಿದೆ:  http://pib.nic.in/newsite/ PrintRelease.aspx?relid=138555

‍ಲೇಖಕರು avadhi

June 12, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. GNK

    ನಾಳೆ, ನಮ್ಮ ಆಧಾರ್-ಪಾನ್ ಲಿಂಕ್ ಆದ ಮೇಲೆ, ನಮ್ಮ ತೆರಿಗೆ ವಿನ್ಯಾಸದಲ್ಲಿ ವಿಮೆಗೆ ಇನ್ನೊಂದಿಷ್ಟು ಜಾಗ ಉಳಿದಿದೆ ಎಂದಾದರೆ, ವಿಮಾ ಕಂಪನಿಯೊಂದು ಆ ಆಧಾರದಲ್ಲಿ ನಮ್ಮನ್ನು ಸಂಪರ್ಕಿಸಿ, ತನ್ನ ಪಾಲಿಸಿಯನ್ನು ನಮಗೆ ಮಾರ್ಕೆಟಿಂಗ್ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ?

    WOW.. 😀 😀 yentha avasthe mare. Mosralli kallu sikthu kadegu. Adhbhutha aalochane, shabhash

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: