ಇನ್ನಾದರೂ ಬಂದ್‍ಗಳು ತಮ್ಮ ರೂಪ ಬದಲಿಸಬೇಕಿದೆ..

ಸದಾಶಿವ್ ಸೊರಟೂರು

ಕಲ್ಲಿನ ಎಸೆತಕ್ಕೆ ಅಂಗಡಿ ಗಾಜು ಒಡೆದು ಪುಡಿಯಾಗಿ ರಸ್ತೆ ಸೇರಿದೆ. ಅಲ್ಲೆಲ್ಲೋ ಬಸ್‍ಗೆ ಬೆಂಕಿಹತ್ತಿಕೊಂಡು ಉರಿಯುತ್ತದೆ. ಇಲ್ಲೊಂದಿಷ್ಟು ಜನ ಬಲವಂತವಾಗಿ ಅಂಗಡಿಯ ಬಾಗಿಲುಗಳನ್ನು ಮುಚ್ಚಿಸುತ್ತಾರೆ. ಶಾಲಾ ಮಕ್ಕಳು ಜೀವ ಉಳಿಸಿಕೊಳ್ಳಲೋ ಎಂಬಂತೆ ಓಡುತ್ತವೆ. ಎಲ್ಲೋ ದೂರದ ಊರಿಂದ ಬಂದ ಮುದುಕ ಮುದುಕಿಯರು ಮೆಜೆಸ್ಟಿಕ್‍ನಲ್ಲಿ ಪರದಾಡುತ್ತಾರೆ. ಒಂದಿಷ್ಟು ರಕ್ತ, ಬೆವರು, ಕೂಗಾಟ, ಹೊಡೆದಾಟ. ಸಂಜೆ ಮಾಧ್ಯಮಗಳಲ್ಲಿ ಬಂದ್ ಯಶಸ್ವಿ ಎಂಬ ಬ್ರೇಕಿಂಗ್ ನ್ಯೂಸ್. ಸರ್ಕಾರ ಕರ್ಚಿಫ್ ತಗೆದು ಮುಖವರೆಸಿಕೊಂಡು ಪಕ್ಕಕಿಡುತ್ತದೆ. ಬಂದ್ ನಿಯಂತ್ರಿಸಲು ತಗೆದುಕೊಂಡ ನಿರ್ಧಾರಗಳ ಬಗ್ಗೆ ಅಧಿಕಾರಿಯೊಬ್ಬರು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಬಂದ್ ಮುಗಿಯುತ್ತದೆ. ಒಡೆದ ಗಾಜುಗಳು, ಚೆಲ್ಲಿದ ರಕ್ತ ಹಾಗೆ ಉಳಿದಿರುತ್ತದೆ ನಾಳೆಗೆ! ಯಾವುದು ಬದಲಾಗಲಿಲ್ಲ. ಬಂದ್ ಯಶಸ್ವಿ ಎಂದು ತೋರಿಸಿದ ಬ್ರೇಕಿಂಗ್ ನ್ಯೂಸ್ ಮರುದಿನ ಸೋತಿರುತ್ತದೆ.

ಈ ನಾಡು ಅದೆಷ್ಟು ಬಂದ್‍ಗಳಿಂದ ತತ್ತರಿಸಿ ಹೋಗಿದೆಯೋ! ಎಣಿಸಲು ಬೇಜಾರಾಗುತ್ತದೆ. ಬಂದ್ ಅಂದರೆ ಸಾಕು ಸಾರ್ವಜನಿಕ ‘ಛೇ! ಇದೆನಾಪ್ಪ ಗೋಳು’ ಅಂತಾನೆ ಅವನಿಗಿ ತನಗೆ ಏನಾಗಬೇಕಿದೆ ಅನ್ನುವುದರ ಬದಲಿಗೆ ಈ ಬಂದ್ ಗಳ ಸ್ವರೂಪ ನೋಡಿಯೇ ಅದರ ಬಗ್ಗೆ ಒಂದು ತಿರಸ್ಕಾರ ಮೂಡಿರುತ್ತದೆ. ಯಾಕೆಂದರೆ ತೀರ ಇತ್ತೀಚಿಗಂತೂ ಬಂದ್ ಗಳನ್ನು ನಿರ್ಧರಿಸುತ್ತಿರುವವರು ಕೇವಲ ಒಂದು ವ್ಯಕ್ತಿ ಇಲ್ಲವೇ ಒಂದು ಸಂಘಟನೆಯಾಗಿರುತ್ತದೆ. ಮತ್ತು ಅದನ್ನು ನಾಡಿನ ಪ್ರತಿಯೊಬ್ಬರ ಕೂಗು ಎಂಬುದಾಗಿ ಬಿಂಬಿಸಲಾಗುತ್ತದೆ. ನಿಜಕ್ಕೂ ಬಂದ್‍ಗಳು ಹುಟ್ಟಬೇಕಾಗಿರುವುದು ಜನರ ಮಧ್ಯೆ! ಅವನಿಗೆ ಬೇಕಾದದ್ದು ಆತ ಪಡೆಯಲು ಎದ್ದು ನಿಲ್ಲುವುದು.

ಅಷ್ಟಕ್ಕೂ ಬಂದ್ ಅಂದ್ರೆ ಏನು? ಹಿಂಸೆ? ಕೂಗಾಟ? ಸಾರ್ವಜನಿಕರಿಗೆ ತೊಂದರೆಕೊಡುವುದಾ? ಆ ಮೂಲಕ ಸರ್ಕಾರದ ಗಮನ ಸೆಳೆಯುವುದಾ? ಖಂಡಿತ ಅಲ್ಲ. ಆಡಳಿತ ವ್ಯವಸ್ಥೆಯ ನಿರ್ಧಾರಗಳ ನಮಗೆ ಸಮ್ಮತವಿಲ್ಲ ಎಂಬುದಾಗಿ ತೋರಿಸುವುದು, ಇನ್ನೇನೋ ಬೇಕು ಎಂದು ಅಸಹಕಾರ ತೋರಿಸಿ ಕೇಳುವುದು ಬಂದ್ ಎನ್ನಿಸುಕೊಳ್ಳುತ್ತದೆ. ಅದನ್ನು ಸರ್ಕಾರಕ್ಕೆ ಅರ್ಥ ಮಾಡಿಸಬೇಕಾಗಿರುವುದು ಬಂದ್‍ನ ಉದ್ದೇಶ! ಅದು ನಿಜಕ್ಕೂ ಸಾರ್ವಜನಿಕರ ಹಕ್ಕು. ಬಂದ್ ಅವರ ಹಕ್ಕು. ಆದರೆ ಬಂದ್‍ನ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳುಮಾಡುವುದು ಖಂಡಿತ ಅವರ ಹಕ್ಕಲ್ಲ, ಅದೊಂದು ಅಪರಾಧ!
ಜಪಾನ್ ದೇಶದ ಬಂದ್‍ನ ಸ್ವರೂಪ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಬೆಳಗ್ಗೆ ಒಂಭತ್ತಕ್ಕೆ ಆರಂಭಿಸಿ ಒಂಭತ್ತು ಮೂವತ್ತಕ್ಕೆಲ್ಲಾ ಮುಗಿಸಿ ಬಿಡುತ್ತಾರೆ. ರಸ್ತೆಯಲ್ಲಿ ನಿಂತು ಅರಚುವುದಿಲ್ಲ. ಒಂದು ಸಭಾಂಗಣದಲ್ಲಿ ಸಭೆ ಸೇರುತ್ತಾರೆ. ತಮ್ಮ ಅಸಹನೆ ವ್ಯಕ್ತಪಡಿಸುತ್ತಾರೆ. ಒಂಭತ್ತು ಮೂವತ್ತಕ್ಕೆ ಕೆಲಸಕ್ಕೆ ತೆರಳುತ್ತಾರೆ. ಮತ್ತೆ ಸಂಜೆ ಐದು ಮೂವತ್ತರಿಂದ ಎಂಟು ಮೂವತ್ತರವರೆಗೂ ಬಂದ್. ಒಂದೆರಡು ದಿನಗಳಲ್ಲಿ ಆಡಳಿತ ವ್ಯವಸ್ಥೆ ಸ್ಪಂದಿಸಿರುತ್ತದೆ. ನಂತರ ಎಲ್ಲವೂ ಸುಗಮ. ‘ಯಾಕೆ ಕೆಲಸ ಬಿಡದೇ ಹೀಗೆ ಬಂದ್ ಮಾಡುತ್ತೀರಿ!?’ ಅಂತ ಕೇಳಿದರೆ, ಕೆಲಸ ಮಾಡದೇ ಸುಮ್ಮನೆ ಇದ್ದರೆ ಪ್ರಪಂಚ ಆಗಲೇ ನಮ್ಮನ್ನು ಬಿಟ್ಟು ಒಂದು ದಿನ ಮುಂದೆ ಹೋಗಿರುತ್ತದೆ ಅನ್ನುತ್ತಾರೆ. ಅಷ್ಟು ದೂರವೇಕೆ? ಇಲ್ಲೇ ಪಕ್ಕದ ಕೇರಳದಲ್ಲಿ ನೋಡಿ ಬನ್ನಿ. ಬಂದ್ ನ ವಿಷಯದಲ್ಲಿ ನಮ್ಮ ನಾಡಿನಲ್ಲಿರುವಂತೆ ಭೀಕರತೆ ಇಲ್ಲ.


ನಮ್ಮಲ್ಲಿ ಬಂದ್ ಮಾಡುವವರು ಮತ್ತು ಸರ್ಕಾರ ಎರಡೂ ಕೂಡ ಎಲ್ಲೋ ಒಂದು ಸಮತೋಲನಕ್ಕೆ ಬರುವಲ್ಲಿ ವಿಫಲವಾಗುತ್ತಿವೆ ಎನಿಸುತ್ತಿದೆ. ನಮ್ಮ ಆಳುವ ವ್ಯವಸ್ಥೆ ಬಂದ್‍ಗಳ ಬಗೆಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಬಂದ್ ದಿನದಂದು ತಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಮುಂಜಾಗ್ರತೆ ವಹಿಸುತ್ತವೆ. ಅದೇ ಆಸ್ಥೆಯನ್ನು ಬಂದ್‍ನ ವಿಷಯಕ್ಕೆ ವಹಿಸಿದರೆ ಮರುದಿನವೇ ಸಮಸ್ಯೆ ಬಗೆಹರಿದೀತು. ಮಹಾದಾಯಿಗಾಗಿ ಅದೆಷ್ಟು ದಿನದಿಂದ ಹೋರಾಟ. ಇಂದಿಗೂ ಬರೀ ಹೋರಾಟವಾಗಿಯೇ ಸಾಗಿದೆ ಹೊರೆತು, ವ್ಯವಸ್ಥೆ ಕೈಚೆಲ್ಲಿದೆ. ಇದೊಂದೇ ಅಲ್ಲ ಬಂದ್‍ನಿಂದ ಯಾವುದಕ್ಕೂ ಸರಿಯಾದ ಪರಿಹಾರ ಸಿಕ್ಕಂತಿಲ್ಲ. ಅಷ್ಟೇ ಅಲ್ಲದೇ ಬಂದ್ ಮಾಡಿ ಸಾರ್ವಜನಿಕರ ಗಮನವನ್ನು ತಮ್ಮ ಕಡೆ ಸೆಳೆದುಕೊಂಡು ಕೆಲವರು ನಾಯಕರಾಗುವುದು, ಒಂಚೂರು ಹೆಸರು ಮಾಡಲು ಆರಂಭಿಸುತ್ತಾರೆ. ಬಂದ್ ಹೆಸರಲ್ಲಿ ತೊಂದರೆಗಳು ತಾಂಡವಾಡುತ್ತವೆ.
ಬಂದ್ ಅಂದ್ರೆ ಬಾಗಿಲು ಮುಚ್ಚಿಕೊಂಡು, ಕೆಲಸಬಿಟ್ಟು ನಿಂತುಕೊಳ್ಳುವುದೇ ಎಂದು ಭಾವಿಸಿದಂತಿದೆ. ಮೊನ್ನೆ ಮೊನ್ನೆಯಾದ ಮೆಡಿಕಲ್ ಶಾಪ್ ಬಂದ್ ನಿಂದ ಒಬ್ಬ ಮುದುಕ ಆ ಒಂದು ನಗರದಲ್ಲಿ ಕೇವಲ ಎರಡು ಮಾತ್ರೆಗೆ ಅದೆಷ್ಟು ಅಲೆದನೊ! ಪೆಟ್ರೋಲ್ ಬಂಕ್ ಬಂದ್ ನಿಂದ ಪೆಟ್ರೋಲ್ ಇಲ್ಲದೇ ಅವೆಷ್ಟು ಅನಾರೋಗ್ಯ ಜೀವಗಳು ಆಸ್ಪತ್ರೆ ತಲುಪದೇ ನೋವು ಉಂಡವೋ! ಬಂದ್ ನಿಂದ ಆಗಿದ್ದು ಸಾರ್ವಜನಕರಿಗೆ ನಷ್ಟ. ಬಂದ್‍ಗಳ ರೂಪ ಬದಲಾಗಬೇಕಿದೆ. ಜಪಾನ್‍ನಲ್ಲಿ ಎರಡು ಗಂಟೆ ಹೆಚ್ಚು ಕೆಲಸ ಮಾಡಿ ತಮ್ಮ ಅಸಹನೆ, ಕೋಪವನ್ನು ವ್ಯಕ್ತಪಡಿಸುತ್ತಾರೆ. ನಮ್ಮ ಅವಶ್ಯಕತೆ ನಿಮಗೆ ಎಷ್ಟಿದೆ ನೋಡಿ ಎಂದು ತೋರಿಸಿಕೊಡುತ್ತಾರೆ. ನಾವು ಆ ವಿಷಯದಲ್ಲಿ ಸೋಲುತ್ತೇವೆ. ಇನ್ನೆಷ್ಟು ದಿನಗಳ ಕಾಲ ಹೀಗೆ ಸೋಲುತ್ತಲೇ ಇರಬೇಕು?

 

‍ಲೇಖಕರು admin

June 12, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: