'ಮೂಢ ನಂಬಿಕೆ : ನಾವೇಕೆ ಬೆಚ್ಚಿಬೀಳಬೇಕು?' ಜಿ ಪಿ ಬಸವರಾಜು ಕೇಳುತ್ತಾರೆ

ಜಿ ಪಿ ಬಸವರಾಜು

ಮೂಢ ನಂಬಿಕೆ ಎಂದ ಕೂಡಲೇ ನಮ್ಮಲ್ಲಿ ಅನೇಕರು ಬೆಚ್ಚಿಬೀಳುತ್ತಾರೆ. ಮೂಢ ನಂಬಿಕೆ ಮತ್ತು ನಂಬಿಕೆಗಳ ನಡುವಣ ವ್ಯತ್ಯಾಸದ ಬಗ್ಗೆ ವ್ಯಾಖ್ಯಾನವನ್ನು ಆರಂಭಿಸುತ್ತಾರೆ. ‘ಇದು ಕಷ್ಟ, ಜನರಲ್ಲಿ ನಂಬಿಕೆಗಳು ಬಹಳ ಆಳವಾಗಿ ಬೇರೂರಿಬಿಟ್ಟಿವೆ; ನಿಷೇಧಿಸುವುದು ಕಷ್ಟ’ ಎಂದು ಅಸಹಾಯಕತೆಯನ್ನೂ ತೋರಿಸುತ್ತಾರೆ. ಸಿದ್ಧರಾಮಯ್ಯನವರ ಸಕರ್ಾರ ಮೂಢ ನಂಬಿಕೆಗಳನ್ನು, ಅದರ ಫಲವಾಗಿ ಹುಟ್ಟಿಕೊಂಡಿರುವ ಅಮಾನವೀಯ ಆಚರಣೆಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಯೋಚಿಸುತ್ತಿದ್ದಂತೆಯೇ ಇಂಥ ಹಲವಾರು ಪ್ರತಿಕ್ರಿಯೆಗಳು ಕಾಣಿಸಿಕೊಂಡಿವೆ.
ಇದು ಸಹಜ. ಯಾಕೆಂದರೆ ಮೂಢ ನಂಬಿಕೆ ಎನ್ನುವುದು ಯಾವುದೇ ಒಂದು ಧರ್ಮಕ್ಕೆ, ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ. ಹಾಗೆಯೇ ಅಕ್ಷರ ಬಲ್ಲವರು ಮತ್ತು ಅಕ್ಷರ ಗೊತ್ತಿಲ್ಲದವರಿಗೂ ಸೀಮಿತವಾಗಿಲ್ಲ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಕ್ಷೇತ್ರಗಳಿಗೂ ಸೀಮಿತವಾಗಿಲ್ಲ. ಮೂಢ ನಂಬಿಕೆಯ ಬೇರುಗಳು ಎಲ್ಲೆಲ್ಲೂ ಇವೆ; ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಹಬ್ಬಿಕೊಂಡಿವೆ. ಅಕ್ಷರದಿಂದ, ವಿದ್ಯೆಯಿಂದ ವೈಚಾರಿಕ ತಿಳುವಳಿಕೆ ಬರುತ್ತದೆ. ಈ ತಿಳುವಳಿಕೆ ಅರ್ಥವಿಲ್ಲದ, ತಳಹದಿಯಿಲ್ಲದ ನಂಬಿಕೆಗಳನ್ನು ದೂರಮಾಡುತ್ತದೆ ಎಂದು ನಂಬಿಕೊಳ್ಳಲಾಗಿತ್ತು. ಆದರೆ ನಮ್ಮಲ್ಲಿರುವ ಅಕ್ಷರಬಲ್ಲವರನ್ನು, ವಿದ್ಯೆ ಕಲಿತು ಉನ್ನತ ಹುದ್ದೆಗಳಲ್ಲಿರುವವರನ್ನು ನೋಡಿದರೆ ಈ ನಂಬಿಕೆ ಎಷ್ಟು ಸುಳ್ಳು ಎಂಬುದು ತಿಳಿಯುತ್ತಿದೆ. ಮಂಗಳಯಾನ ಕೈಗೊಂಡ ವಿಜ್ಞಾನಿಗಳಿಗೂ ತಿರುಪತಿ ತಿಮ್ಮಪ್ಪನ ಆಶೀವರ್ಾದ ಬೇಕು. ಕ್ಷಿಪಣಿ ಯಶಸ್ವಿಯಾಗಿ ಹಾರಬೇಕಾದರೆ ತಿಮ್ಮಪ್ಪ ಏನು ಮಾಡಬೇಕು? ನಂಬಿಕೆ ಎನ್ನುವುದರಲ್ಲಿ ಇಂಥ ಪ್ರಶ್ನೆಗಳಿಗೆ ಅವಕಾಶವಿರುವುದಿಲ್ಲ. ಆದರೆ ನಂಬಿಕೆ ವೈಯಕ್ತಿಕ ನೆಲೆಯಲ್ಲಿದ್ದರೆ ಯಾರಿಗೂ ತೊಂದರೆ ಇಲ್ಲ. ಇದು ಸಾರ್ವತ್ರಿಕ ನೆಲೆಗೆ ವಿಸ್ತರಿಸಿದರೆ ಕಷ್ಟಗಳು ಆರಂಭವಾಗುತ್ತವೆ. ಮನುಕುಲದ ಸಾಮಥ್ರ್ಯವನ್ನು, ಸಾಧನೆಯನ್ನು, ಬುದ್ಧಿಮತ್ತೆಯನ್ನು ಕಡೆಗಣಿಸಿ, ಒಂದು ರಾಷ್ಟ್ರದ ಸಂವಿಧಾನದ ಚೌಕಟ್ಟನ್ನು ನಿರಾಕರಿಸಿ ನಂಬಿಕೆಗಳು ಆಚರಣೆಗೆ ಬಂದಾಗ ಹಲವು ಪ್ರಶ್ನೆಗಳು ಏಳುತ್ತವೆ. ಇವನ್ನು ಎದುರಿಸಬೇಕಾದದ್ದು ಎಲ್ಲ ಪ್ರಜೆಗಳ ಹೊಣೆಗಾರಿಕೆ.
ಮೂಢ ನಂಬಿಕೆಯನ್ನು ಮತ್ತು ಅದರ ಫಲವಾದ ದುಷ್ಟ ಆಚರಣೆಗಳನ್ನು, ಮನುಷ್ಯ ಮನುಷ್ಯನನ್ನು ಶೋಷಿಸುವ, ಮನುಷ್ಯನ ಘನತೆಗೆ ಕುಂದುತರುವ ಆಚರಣೆಗಳನ್ನು ಕೊನೆಗಾಣಿಸಬೇಕೆಂಬ ಚಿಂತನೆ ಆರಂಭವಾಗಿರುವುದು ಈಗಿನ ರಾಜ್ಯ ಸಕರ್ಾರಕ್ಕೆ. ಇದು ಹಿಂದುಳಿದ ವರ್ಗದಿಂದ ಬಂದಿರುವ ಸಿದ್ಧರಾಮಯ್ಯ ಅವರ ನೇತೃತ್ವದ ಸಕರ್ಾರಕ್ಕೆ. ಎಡೆಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧವನ್ನು ಯಜ್ಞಕುಂಡವಾಗಿ ಮಾಡಲಾಗಿತ್ತು. ಅವರ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾಲದಲ್ಲೂ ಯಜ್ಞಯಾಗಗಳು ವಿಧಾನಸೌಧವನ್ನು ಬಿಟ್ಟಿರಲಿಲ್ಲ. ಅಷ್ಟೇಕೆ ಕಾಂಗ್ರೆಸ್ನಲ್ಲೂ ಇಂಥ ನಂಬಿಕೆಗಳ ನಾಯಕರು ಹಲವರಿದ್ದಾರೆ. ಮೌಢ್ಯ ಎನ್ನುವುದು ಯಾವುದೇ ರಾಜಕೀಯ ಪಕ್ಷದ ಸ್ವಂತ ಆಸ್ತಿಯಲ್ಲ. ಯಾವುದೇ ಪಕ್ಷದ ಒಳ ಹೊರಗನ್ನು ಸೂಕ್ಷ್ಮವಾಗಿ ನೋಡಿದರೆ ಈ ಅಂಶ ತಿಳಿದುಹೋಗುತ್ತದೆ.
ಸಿದ್ಧರಾಮಯ್ಯ ಅವರ ಸಕರ್ಾರ ಈ ಚಿಂತನೆಯನ್ನು ನಡೆಸಿರುವುದೇ ಒಂದು ಪ್ರಗತಿಪರ ನೋಟವನ್ನು ಹೇಳುತ್ತದೆ. ಇನ್ನೂ ಕರಡು ಸಿದ್ಧವಾಗಿಲ್ಲ. ಸಲಹೆಗಳು ಮಾತ್ರ ಸಕರ್ಾರದ ಮುಂದಿವೆ. ಅವು ಎಂಥ ಸಲಹೆಗಳು, ಸಕರ್ಾರ ಯಾವ ರೀತಿಯ ಕರಡನ್ನು ಸಿದ್ಧಪಡಿಸುತ್ತದೆ, ಕರಡು ತಯಾರಿಸಲು ಸಮಿತಿಯನ್ನು ರಚಿಸುತ್ತದೆಯೇ- ಇಂಥ ಹಲವಾರು ಪ್ರಶ್ನೆಗಳು ಉತ್ತರ ಕಾಣದೆ ಇರುವ ಈ ಸಂದರ್ಭದಲ್ಲಿಯೇ ಹಲವರು ತಮ್ಮ ಕುಣಿತ ಆರಂಭಿಸಿದ್ದಾರೆ. ಬಿಜೆಪಿ ಈ ಕರಡನ್ನು (ಅದೆಂಥದು ಎಂದು ಕಾಣಿಸದಿದ್ದರೂ) ತಾನು ವಿರೋಧಿಸುವುದಾಗಿ ಹೇಳಿದೆ. ಬಿಜೆಪಿ ಪ್ರತಿನಿಧಿಸುವ ವರ್ಗವನ್ನು ಬಲ್ಲವರಿಗೆ ಬಿಜೆಪಿಯ ಈ ವಿರೋಧದಲ್ಲಿ ಅಸಹಜತೆಯೇನೂ ಕಾಣಿಸುವುದಿಲ್ಲ. ಪೀಠದ ಸ್ವಾಮಿಯೊಬ್ಬರು ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ತಮ್ಮಂಥ ಮಠಪತಿಗಳನ್ನು ಸಂಘಟಿಸಿ ವಿರೋಧಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಜನರ ಮೌಢ್ಯಗಳ ಮೇಲೆ ಸವಾರಿ ಮಾಡುವ ಮಠಗಳಿಗೆ ಇಂಥ ಪ್ರಯತ್ನವನ್ನು ವಿರೋಧಿಸುವುದು ಅನಿವಾರ್ಯವಾಗುತ್ತದೆ.
ವ್ಯಂಗ್ಯ ಎಂದರೆ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲೊಬ್ಬರಾಗಿರುವ ಜನಾರ್ದನ ಪೂಜಾರಿ ಈ ಕರಡನ್ನು ಮಂಡಿಸಬಾರದೆಂದು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದ್ದಾರೆ. ಕಾಂಗ್ರೆಸ್ಸಿನ ಅಜೆಂಡಾದಲ್ಲಿ ಈ ಅಂಶ ಇರಲಿಲ್ಲ ಎಂದೂ ಅವರು ಹೇಳಿದ್ದಾರೆ.

ಜನಾರ್ದನ ಪೂಜಾರಿಯವರ ದಕ್ಷಿಣ (ಅವಿಭಜಿತ) ಕನ್ನಡ ಜಿಲ್ಲೆಯನ್ನೇ ನೋಡಿ. ಅಲ್ಲಿ ‘ಅಜಲುಪದ್ಧತಿ’ ಎಂಬ ಮೂಢ ನಂಬಿಕೆಯ ಆಚರಣೆಯೊಂದು ಈಗಲೂ ಜೀವಂತವಾಗಿದೆ. ಅದು ಅತ್ಯಂತ ಹೀನವಾದ, ಮನುಕುಲವೇ ತಲೆತಗ್ಗಿಸಬೇಕಾದ ಆಚರಣೆ. ಇನ್ನೂ ವಿವಾದದ ಸುಳಿಯಲ್ಲೇ ತಿರುಗುತ್ತಿರುವ ‘ಮಡೆಸ್ನಾನ’ ನಡೆಯುವುದೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ. ಮುಜರಾಯಿ ಇಲಾಖೆಗೆ ಸಂದಾಯವಾಗಬೇಕಾದ ಕೊಟ್ಯಂತರ ರೂಪಾಯಿಯ ಆದಾಯವನ್ನು ತಾವೇ ನುಂಗಿ ಹಾಕುತ್ತಿರುವ ಮಠಗಳು, ಧರ್ಮಕ್ಷೇತ್ರಗಳೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟಿವೆ. ಅಲ್ಲಿ ಜಾತಿಪದ್ಧತಿಯನ್ನು ಪೋಷಿಸುವ, ಮನುಷ್ಯನ ಘನತೆಗೆ ಕುಂದುತರುವ ಹಲವು ಆಚರಣೆಗಳು ಇವತ್ತಿಗೂ ಉಳಿದುಕೊಂಡು ಬಂದಿವೆ.
ಇಡೀ ರಾಜ್ಯದಲ್ಲಿ ಇಂಥ ನೂರಾರು ಆಚರಣೆಗಳಿವೆ. ಇಂಥ ಆಚರಣೆಯ ಕೇಂದ್ರಗಳಿಗೆ ಹೋದಾಗಲೆಲ್ಲ ನಮ್ಮ ಪ್ರಜಾಪ್ರಭುತ್ವ, ಸಮಾನತೆಯ ಕಲ್ಪನೆ, ನಮ್ಮ ಸಂವಿಧಾನ ಒತ್ತುಕೊಟ್ಟಿರುವ ವೈಜ್ಞಾನಿಕ ಮನೋಧರ್ಮ ಇತ್ಯಾದಿ ಯಾವುದಕ್ಕೂ ಬೆಲೆ ಇಲ್ಲವೇನೋ ಎನ್ನಿಸುತ್ತದೆ. ಇಂಥ ಆಚರಣೆಗಳಿಂದಾಗಿ, ಆತ್ಮಗೌರವ ಇರುವ ಅನೇಕರು ಅನುಭವಿಸುವ ಮಾನಸಿಕ ಯಾತನೆ ಹೇಳಿಕೊಳ್ಳಲಾಗದಷ್ಟು ಘೋರವಾಗಿರುತ್ತದೆ. ಪುರೋಹಿತಶಾಹಿ ಎನ್ನುವುದು ಕೊನೆಯನ್ನೇ ಕಾಣದಂಥ ನಿರಂತರ ಶೋಷಕ ವ್ಯವಸ್ಥೆಯನ್ನು ಈ ದೇಶದಲ್ಲಿ ರೂಪಿಸಿದೆಯಲ್ಲಾ ಎಂದು ವ್ಯಥೆಯಾಗುತ್ತದೆ.
ಮನುಷ್ಯನ ನಂಬಿಕೆಯ ಪ್ರಶ್ನೆ ಬಹಳ ಸೂಕ್ಷ್ಮವಾದದ್ದು. ಅದು ನಿಖರವಾದ ಮೌಲ್ಯಮಾಪನಕ್ಕೆ, ವಿಶ್ಲೇಷಣೆಗೆ ಸಿಕ್ಕುವುದಿಲ್ಲ. ರಾಹುಕಾಲ ಗುಳಿಕಕಾಲಗಳನ್ನು ನೋಡದೆಯೇ ಮನೆಯಿಂದ ಹೊರಹೊರಡದವರೂ ಇದ್ದಾರೆ. ಅಷ್ಟರಮಟ್ಟಿಗೆ ನಂಬಿಕೆ ಎನ್ನುವುದು ಅವರನ್ನು, ಅವರ ಬುದ್ಧಿಮತ್ತೆಯನ್ನು ಕಟ್ಟಿಹಾಕಿದೆ. ಆದರೆ ನಂಬಿಕೆ ಎನ್ನುವುದು ವೈಯಕ್ತಿಕ ನೆಲೆಯಲ್ಲಿ ಇರಬೇಕೇ ಹೊರತು, ಅದು ಸಾರ್ವಜನಿಕ ಬದುಕಿಗೆ ವಿಸ್ತಾರವಾಗಬಾರದು. ಬಸ್ಸು, ರೈಲು, ವಿಮಾನಗಳನ್ನು ಓಡಿಸುವ ಚಾಲಕರು ರಾಹುಕಾಲ ಗುಳಿಕಕಾಲಗಳನ್ನು ನೋಡುತ್ತ ಕುಳಿತರೆ ಏನಾಗಬಹುದು?
ಇನ್ನೊಂದು ಮುಖ್ಯವಾದ ಅಂಶವೂ ಇದೆ: ಮೌಢ್ಯವನ್ನು ಆಧರಿಸಿದ ನಮ್ಮ ಬಹುಪಾಲು ಆಚರಣೆಗಳಲ್ಲಿ ತಲೆಕೊಡುವವರು ಯಾರು ಎನ್ನುವುದನ್ನು ನೋಡಿ. ಶತಮಾನಗಳಿಂದ ಮಾತನ್ನೇ ಕಳೆದುಕೊಂಡಿರುವವರು; ಜಾತಿ, ವರ್ಗಗಳ ಕಾರಣದಿಂದಾಗಿ ಪ್ರತಿಭೆ, ಪರಿಶ್ರಮಗಳಿದ್ದೂ ಮುನ್ನೆಲೆಗೆ ಬಾರದಿರುವವರು; ತಮ್ಮ ನೋವನ್ನು ಹೇಳಿಕೊಳ್ಳಲಾಗದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಬದುಕುತ್ತಿರುವ ಕೋಟ್ಯಂತರ ಜನರು. ಎಲ್ಲ ಬಗೆಯ ಆಚರಣೆಗಳಲ್ಲೂ ಶೋಷಣೆಗೆ ಒಳಗಾಗುತ್ತಿರುವವರು ಇವರೇ. ಇಂಥ ಜನರ ಪ್ರತಿನಿಧಿಯಂತೆ ಬಂದಿರುವ ಸಿದ್ಧರಾಮಯ್ಯ ಸಹಜವಾಗಿಯೇ ಈ ಮೌಢ್ಯವನ್ನು ಆಧರಿಸಿದ ಆಚರಣೆಗಳನ್ನು ಕೊನೆಗಾಣಿಸಲು ಚಿಂತಿಸಿದ್ದಾರೆ. ಅವರ ಸಕರ್ಾರದಲ್ಲಿರುವ ತಂಡವೂ ಇದನ್ನು ಬೆಂಬಲಿಸಿರುವಂತೆ ಕಾಣುತ್ತಿದೆ. ಇಂಥ ಚಿಂತನೆಗಳು ಚಿಗುರೊಡೆಯದಂತೆ, ಆರಂಭಿಕ ಹಂತದಲ್ಲಿಯೇ ಹತ್ತಿಕ್ಕಲು ಹೊರಟಿರುವ ಮನಸ್ಸುಗಳ ಸ್ವರೂಪ ಎಂಥದಿರಬೇಕು?
ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ನಡೆಯುತ್ತಿದ್ದಾಗ, ಅದನ್ನು ಕೊನೆಗಾಣಿಸಲು ಸಕರ್ಾರ ಹೊರಟ ಸಂದರ್ಭದಲ್ಲಿಯೂ ಇಂಥದೇ ವಿರೋಧ ವ್ಯಕ್ತವಾಗಿತ್ತು. ಆಗ ‘ಬೆತ್ತಲೆಸೇವೆ ಯಾಕೆ ಕೂಡದು?’ ಎಂಬ ಬೌದ್ಧಿಕ ಚಚರ್ೆಗಳೂ ನಡೆದಿದ್ದವು. ಬಿಜೆಪಿ ಮತ್ತು ಪರಿವಾರ ಸಂಘಟನೆಗಳು ಬೆತ್ತಲೆ ಸೇವೆಯನ್ನು ನಿಲ್ಲಿಸಕೂಡದೆಂದು ಒತ್ತಾಯಿಸಿದ್ದವು. ಬೆತ್ತಲೆ ಸೇವೆಯನ್ನು ವಿರೋಧಿಸಲು ಹೊರಟಿದ್ದ ದಲಿತರು ಮತ್ತು ರೈತರ ಮೇಲೆ ಹಲ್ಲೆಯನ್ನು ಕೂಡಾ ಮಾಡಲಾಗಿತ್ತು. ಹಲ್ಲೆ ನಡೆಸಿದವರು ಯಾರು, ಹಲ್ಲೆಗೆ ಒಳಗಾದವರು ಯಾರು, ಬೆತ್ತಲೆ ಸೇವೆ ಮಾಡುತ್ತಿದ್ದವರು ಯಾರು, ನೋಡಿ ಸುಖಿಸುತ್ತಿದ್ದವರು ಯಾರು ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಬೆತ್ತಲೆ ಸೇವೆ ಈಗಿಲ್ಲ; ಅದು ಇತಿಹಾಸವಾಗಿದೆ.
ನಂಬಿಕೆಯ ಹೆಸರಿನಲ್ಲಿ ನಡೆಯುವ ಅತ್ಯಂತ ಕ್ರೂರ ಆಚರಣೆಗಳು ಒಂದೊಂದಾಗಿ ಕಾಲ್ತೆಗೆಯುತ್ತಿವೆ. ಅವು ತಾವಾಗಿಯೇ ಹೊರಟು ಹೋದದ್ದಲ್ಲ. ಅವುಗಳ ಹಿಂದೆ ಅನೇಕರ ಚಿಂತನೆ, ಕಾಳಜಿ, ಕ್ರಿಯಾಶೀಲತೆ ಇವೆ. ನಾವು ರೂಪಿಸಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಂಬಲವೂ ಇದೆ. ಸಿದ್ಧರಾಮಯ್ಯ ಅವರ ಸಕರ್ಾರದ ಚಿಂತನೆ ಯಾವ ದಿಕ್ಕಿನಲ್ಲಿ ಹರಿದಿದೆ, ಯಾವ ಮೌಢ್ಯವನ್ನು ಅದು ನಿಷೇಧಿಸುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವಷ್ಟಾದರೂ ನಮಗೆ ಸಹನೆ ಬೇಕು. ಸಹನೆ ಇಲ್ಲದಿದ್ದರೆ ಪ್ರಜಾಪ್ರಭುತ್ವವೇ ಇಲ್ಲ.
(ಸೌಜನ್ಯ: ಸಂಯುಕ್ತ ಕರ್ನಾಟಕ)
 

‍ಲೇಖಕರು G

November 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. srinivasamurthy

    ಕವಿ/ಲೇಕಕ/ಹಾಡುಗಾರ… ಇವರು ಯಾವುದರ ಸಲುವಾಗಿ ಇದ್ದಾರೆ? ಒಂದು ತಮ್ಮ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳಲಿಕ್ಕೆ. ಮತ್ತೊಂದು ನೊಂದವರನ್ನು/ಸಮಾಜವನ್ನು ಸ್ಪೂರ್ತಿಯಾಗಿಸಲಿಕ್ಕೆ ತಾನೆ?
    ಇವರು ಮಾಡಿದ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನು ಇಲ್ಲವಲ್ಲ? ಅಶ್ಟಕ್ಕೂ ಕವಿ/ಲೇಕಕ/ಹಾಡುಗಾರ… ಗಳವರು ಮಾಡಿದ ಪ್ರಯತ್ನಗಳನ್ನು ಆಸ್ವಾದಿಸುವವರಿಗೇನೇ ಬಿಡುವಂತೆ ವಿಜ್ಞಾನಿಗಳು ತಮ್ಮ ಪ್ರಯತ್ನದ ಶ್ರಮದ ಒತ್ತಡದಿಂದ ಹೊರಬರಲು ಕಣ್ಣಿಗೆ ಕಾಣದ ಶಕ್ತಿಯ ಮೊರೆ ಹೋಗುವುದರಲ್ಲಿ ತಪ್ಪು ಇಲ್ಲವೇ ಇಲ್ಲ.
    ನೀವು ಶಿಕ್ಶಕರಾಗಿ ಈ ಹಿನ್ನಲೆಯಲ್ಲಿ ಯೋಚಿಸಿ ನೋಡಿ. ನೀವು ತರಗತಿಯಲ್ಲಿ ಪಾಟ ಎಶ್ಟೇ ಉತ್ತಮವಾಗಿ ಮಾಡಿರಬಹುದು. ಆದರೆ, ಈ ನಿಮ್ಮ ಪಾಟ ಎಲ್ಲಾ ವಿದ್ಯಾರ್ತಿಗಳ ಮಾನಸಿಕ ವಾತಾವರಣದಲ್ಲಿ ಸಮವಾಗಿ ಉಳಿದುಕೊಳ್ಳುತ್ತದೆಯೇ?
    ಮಾನವನ ಮಾನಸಿಕ ಸ್ತಿತಿ ಹೇಗಿದೆ ಎಂದರೆ,
    ಯುಕ್ತಿ ಇಲ್ಲವೆ/ಒಟ್ಟಿಗೆ ಶಕ್ತಿ ಮೂಲಕ
    “ಸಮರ್ತನೆಗೊಂದು ಸಮರ್ತನೆ. ತೆಗಳಿಕೆಗೊಂದು ತೆಗಳಿಕೆ. ಇವುಗಳಲ್ಲಿ ಪೈಪೋಟಿಗೆ ಇಳಿಯುವುದೇ ಆಗಿದೆ.”
    “ಕಾನೂನು ದರ್ಮವಾಗಿ ರಾಜಕೀಯ ಇದರ ಆದ್ಯಾತ್ಮವಾಗಿರಲಿ” ಎಂದುಕೊಂಡಿರುವವರು ಕಾಣುತ್ತಿರುವ ಸಮಾನತೆಯ ಕಲ್ಪನೆಯೇ ಮೂಡನಂಬಿಕೆ ತಾನೆ? ನಿಗಮ..ಆಯೋಗ ಪರಿಶತ್ತು ಹಾಗೂ ಇಲಾಕೆ ಈ ವ್ಯವಸ್ತೆಯಲ್ಲಿ ತಮ್ಮವರ ಪರವಾಗಿ ಲಾಬಿ ಮಾಡುವ ರೂಡಿ ಇದೆ. ಸರ್ಕಾರದ ವ್ಯವಸ್ತೆಯಲ್ಲಿ ಆಡಳಿತವನ್ನು ನಡೆಸಬೇಕಾಗಿರುವುದು ರಾಜಕೀಯ ಪಕ್ಶ ಇದು ಸರಿಯಾಗಿಯೇ ಇದೆ. ಆದರೆ ನಿಗಮ..ಪರಿಶತ್ತು ಈ ವ್ಯವಸ್ತೆಯನ್ನೇ ನೋಡಿ ಎಶ್ಟು ತಪ್ಪುಗಳಿವೆ. ಮೊದಲು ಅಂತಹ ತಪ್ಪುಗಳನ್ನು ಇಲ್ಲವಾಗಿಸಬೇಕಲ್ಲವೆ?
    ದರ್ಮವೇನೋ ಮೊದಲು ಅನಕ್ಶರಸ್ತರಿಂದ ಅಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಇದರಲ್ಲಿ ತಪ್ಪುಗಳು ಇವೆ. ಆದರೆ ಕಾನೂನು ಅಕ್ಶರಸ್ತರಿಂದ ರೂಪಿಸಲ್ಪಟ್ಟು ಅನಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಲಿಕಿತದಲ್ಲಿದ್ದಾಗ್ಯೂ ಕಾನೂನನ್ನು ತಮ್ಮವರಿಗೆಂದು ತಿರಿಚಿಕೊಳ್ಳುವ ಹಿಂದಿನ ಗುಟ್ಟು ಕ್ಶಮಿಸಲಾರದ ತಪ್ಪು. ಕಾನೂನು ಹಾಗೂ ದರ್ಮಗಳೆರಡೂ ಹತೋಟಿಯ ತಂತ್ರಗಳೆ ತಾನೆ?
    CBI ವಿಚರವನ್ನೇ ನೋಡಿ. ಲಿಕಿತದ ಪುರಾವೆ ಇದ್ದಾಗ್ಯೂ ನ್ಯಾಯಾಲಯಗಳು ಎರಡೆರಡು ತೆರನ ತೀರ್ಪನ್ನು ಕೊಡುತ್ತವೆ.
    ಹೀಗೇನೆ ದರ್ಮದಲ್ಲೂ ಆಯಾ ಗುಂಪಿನವರಿಗೆ “ಅವರೇ ಹೇಳಿದ್ದು ಅವರಿಗೆ ಸರಿ” ಎನ್ನುವ ಮನಸ್ತಿತಿ ಇದೆ. ಕಾನೂನು ಯಾಕೆ ದೇಶ/ಬಾಶೆ/ವರ್ಗಕ್ಕೆ ಬೇರೆಬೇರೆ ಇದೆ? ಇದರ ರಚನೆಯೂ ಒಂದು ಮಾನಸಿಕ ಸ್ತಿತಿಗನುಗುಣವಾಗಿಯೇ ಇರೋದು ತಾನೆ?
    ಗಲ್ಲು ಶಿಕ್ಶೆಗೆ ಸಂಬಂದಪಟ್ಟಂತೆ ಕಾನೂನಿನಲ್ಲಿರುವವರೇ ಬೇರೆಬೇರೆ ನಿಲುವನ್ನು ತಾಳುತ್ತಾರೆ. ಒಂದು ತಪ್ಪು ಆಗಿದೆ ಎಂದ ಮೇಲೆ ಆ ತಪ್ಪನ್ನು ಇಲ್ಲವಾಗಿಸಬೇಕು ಅಲ್ಲವೆ? ಕಂಪ್ಯೂಟರ್ನಲ್ಲಿ ವೈರಸ್ ಇದೆ. ಅದನ್ನು ಡಿಲಿಟ್ ಮಾಡದೆ ಕೇವಲ ಹತೋಟಿ ಮಾಡಿದರೆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತದೆಯೇ?
    ಹೀಗೇನೆ, ಸಮಾಜವೆಂಬ ಕಂಪ್ಯೂಟರ್ನಲ್ಲಿ ಡಿಲಿಟ್ ಇರಬೇಕು ಜೊತೆಗೆ ನಿಯಂತ್ರಣವೂ ಇರಬೇಕು.
    ಮೂಡನಂಬಿಕೆ ಮತ್ತು ನಂಬಿಕೆಗೆ ಈ ಗಾದೆಮಾತನ್ನು ತುಸು ನೆನಪಿಗೆ ತಂದುಕೊಳ್ಳಿ.
    “ಬೆರ್ಕೆ ಸೊಪ್ಪಿನ್ ಸಾರ್ ಚೆಂದ ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
    ಇದರಲ್ಲಿ ಎಲ್ಲರೂ
    “ಬೆರ್ಕೆ ಸೊಪ್ಪಿನ್ ಸಾರ್ ಚೆಂದ”
    ಎಂಬುವುದನ್ನು ಯಾವ ವಾದವಿಲ್ಲದೆ ಒಪ್ಪಿಬಿಡುತ್ತಾರೆ.
    ಆದರೆ
    “ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
    ಎಂಬುವುದನ್ನು ದರ್ಮ ಒಪ್ಪಲಾರದು ಆದರೆ ದರ್ಮದೊಳಗಿರುವ ತೀರಾ ಕಡಿಮೆ ಮಂದಿ ಒಪ್ಪುವರು ಇದ್ದಾರೆ. ಈ ಗಾದೆಯನ್ನು ಒಬ್ಬ ವ್ಯಕ್ತಿ ಆಯಾ ವಯೋಗನುಗುಣವಾಗಿ ಸಮರ್ತನೆ ನೀಡುತ್ತಾನೆ. ಯುವಕರಾದ ನಮ್ಮಂತವರಿಗೆ ಆಶ್ಚರ್ಯ/ಒಪ್ಪಲಾರದ/ೊಪ್ಪುವ/ ನಗೆಯ ಸಾಲು. ಇನ್ನು ಮದುವೆಯಾದವರಿಗೆ ಅನುಮಾನ, ವೃದ್ದರಿಗೆ ಬುದ್ದಿ ಮಾತನ್ನು ಹುಟ್ಟಿಸುವ ಸಾಲು.
    ಕಾನೂನಿನಲ್ಲಂತೂ ಗೊಂದಲ. ಒಂದು ದೇಶದಲ್ಲಿ ನಿಯಂತ್ರಣ ಮತ್ತೊಂದರಲ್ಲಿ ವಯಕ್ತಿಕ ನೆಲೆಯದ್ದು ಆಗಿದೆ.
    ಗಾದೆ ಮಾತುಗಳಲ್ಲಿ ಈ ಮೇಲೆ ಬರೆದ ಗಾದೆಯನ್ನು ಸಮರ್ತಿಸುವ ಇನ್ನುಳಿದ ಗಾದೆಗಳು ಇವೆ. ಅಂತೆಯೇ ಈ ಗಾದೆಯನ್ನು ನಿಯಂತ್ರಿಸುವ ಗಾದೆ ಮಾತುಗಳೂ ಇವೆ.
    ನನ್ನ ಪ್ರಕಾರ ಮೂಡನಂಬಿಕೆ ಎಂದರೆ,
    ಪರ ಹಾಗೂ ವಿರೋದದ ನಂಬಿಕೆಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ವರ್ತನೆಯೇ ‘ಮೂಡನಂಬಿಕೆ’ ಯಾಗಿದೆ.
    ಕೊನೆಯದಾಗಿ,
    ಒಂದು ದೃಶ್ಟಿಕೋನವನ್ನು ನಂಬುವುದನ್ನೋ/ಪ್ರಶ್ನಿಸುವುದನ್ನೋ ಯಾರು ಮಾಡುತ್ತಿರುತ್ತಾರೋ ಅವರು ಅಶ್ಟೇ ಬೌದ್ದಿಕ ಕುಬ್ಜರಾಗುತ್ತಾರೆ. ಅಂತವರು ಈ ಬೌದ್ದಿಕ ಕುಬ್ಜರಾಗದಿರಲು ಇರುವ ಒಂದೆ ಮಾರ್ಗವೆಂದರೆ
    ಎಲ್ಲಾ ತೆರನ ವೈವಿದ್ಯತೆಗೆ ತೆರೆದುಕೊಳ್ಳಬೇಕು ಮತ್ತು ವಿಶಾಲವಾಗಿ ಯೋಚಿಸುವುದನ್ನು ಮಾಡಬೇಕು. ಅದಕ್ಕೂ ಮುನ್ನ ಸಮಾನತೆಯ ಕಲ್ಪನೆಯನ್ನು ಬಿಟ್ಟು ಅಸಮಾನತೆಯ ನಿಯಂತ್ರಣಕ್ಕೆ ಪ್ರಯತ್ನಿಸುವ ಆಲೋಚನೆಯನ್ನು ಮಾಡಬೇಕು.
    ‘ಸಮಾನತೆ’ ಇದು ಪರಿಪೂರ್ಣದ ಸಂಕೇತ. ಆದರೆ ಪ್ರಕೃತಿ ನಿರ್ಮಿತದಲ್ಲಿ ಸಮಾನತೆಯೇ ಇಲ್ಲ. ಮಾನವ ಈ ಪ್ರಕೃತಿಯ ಅಸಮಾನತೆಯನ್ನು ತನ್ನ ಜಾಣ್ಮೆಯಿಂದ ಇಲ್ಲವಾಗಿಸಲು ಯತ್ನಿಸುತ್ತಿದ್ದಾಗ್ಯೂ ಪ್ರಾಕೃತಿಕ ಕಾರಣಗಳಿಂದಾಗ್ಇ ಸಮಾನತೆಯನ್ನು ಗಳಿಸಲು ಆಗುತ್ತಿದೆಯೇ?
    ಇನ್ನು ಮಾನವನೇ ಒಂದು ವಿಚಿತ್ರ. ಮನಸ್ಸಿಗೆ ಚಿತ್ರಿಸಿಕೊಂಡದ್ದನ್ನು ಬೇರೆಯವರ ಮೇಲೆ ಗೀಚುವ ಹಂಬಲದವನೂ. ಇಂತಹ ಮನಸ್ತಿತಿಯ ಮನುಶ್ಯನಿಂದ ಸಮಾನತೆಯನ್ನು ಗಳಿಸಲು ಆಗುವುದೇ?

    ಪ್ರತಿಕ್ರಿಯೆ
  2. ಅಶೋಕವರ್ಧನ

    ಮೂಢ ನಂಬಿಕೆ ವಿರೋಧೀ ಪಿಲ್!
    “ಗ್ರಹ ನಕ್ಷತ್ರಾದಿಗಳು ವ್ಯಕ್ತಿ ಜೀವನದಲ್ಲಿ ಸರಿ, ಬೆಸ ಎಂದು ಪಗಡೆಯಾಡುತ್ತವೆ”. “ಮನುಷ್ಯ ಜನ್ಮ ವ್ಯರ್ಥ. ಇಲ್ಲಿನ ಕೆಲಸಗಳೇನಿದ್ದರೂ ಇನ್ನೊಂದೇ ಲೋಕದ ಸ್ಥಳ ಕಾಯ್ದಿರಿಸುವ ಪ್ರಯತ್ನ”. “ದೇವರು ಪ್ರಾಕೃತಿಕ ಸಲಕರಣೆಗಳಲ್ಲಿ ಮನುಷ್ಯನನ್ನು ಸಲಹುತ್ತಾನೆ; ಸ್ತುತಿಪಾಠಕರಿಗೆ ಸ್ವರ್ಗ, ನಿಂದಕರಿಗೆ ನರಕ ಖಾತ್ರಿ.” ಇತ್ಯಾದಿ ಇತ್ಯಾದಿ ಸಾರ್ವಜನಿಕರಂಗದಲ್ಲಿ ಮೆರೆಯುವ ಮೂರ್ಖಮತಿಗಳಿಗೆ (ವೈಯಕ್ತಿಕ ಮತ್ತು ಸಮಾಜವಿರೋಧಿಯಲ್ಲದ ಪ್ರಾಮಾಣಿಕ ನಂಬಿಕೆಗಳಿಗಲ್ಲ) ಶಾಸನರೂಪದಲ್ಲಿ ಕಡಿವಾಣವಿಕ್ಕುವ ಮಾತು ಇಂದು ಬಹು-ಪ್ರಚಾರದಲ್ಲಿದೆ. ಸುಮಾರು ಏಳು ದಶಕಗಳ ಹಿಂದೆಯೇ ಅಂಥವನ್ನು ಧಿಕ್ಕರಿಸಿದ ನಡೆಗಿಳಿದವರು ಜಿಟಿ ನಾರಾಯಣರಾವ್; ನನ್ನ ತಂದೆ. ಹುಟ್ಟು, ಕುಟುಂಬ, ಸ್ಥಳ, ಸಮಯ ಇತ್ಯಾದಿ ಆಕಸ್ಮಿಕಗಳಿಗೆ ಸಂಪ್ರದಾಯ, ಧರ್ಮ ಮುಂತಾದ ಕಾರ್ಯಕಾರಣ ಸಂಬಂಧವಿಲ್ಲದ ಆಚರಣೆಗಳ ತೊಡವೇರಿಸಿ ಹೊರಟ ತನ್ನ ಜೀವನ ರಥವನ್ನು ಬುದ್ಧಿಬಲಿತ ತಾರುಣ್ಯದಲ್ಲೇ ವಿವೇಚನಾ ಹಳಿಗಳ ಮೇಲೆ ತಂದ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ವೈಜ್ಞಾನಿಕ ಮನೋಧರ್ಮದ ಗಟ್ಟಿ ನೆಲೆಗಾಣಿಸಿದವರು ಇವರು. ಜ್ಯೋತಿರ್ವಿಜ್ಞಾನದ ಉಲ್ಲೇಖ ಬಂದಲ್ಲೆಲ್ಲಾ ಅನಿವಾರ್ಯ ಅಂಗವಾಗಿ ಫಲಜ್ಯೋತಿಷ್ಯವನ್ನು ಸ್ಪಷ್ಟ ಮಾತುಗಳಲ್ಲಿ ‘ಸೂಳೇಗಾರಿಕೆ ಎಂದೇ ಇವರು ಖಂಡಿಸುತ್ತಿದ್ದರು. ಮತ್ತದು ಆಳವಿಲ್ಲದ ಹೇಳಿಕೆಗಳ ಬೂಟಾಟಿಕೆಯಾಗದಂತೆ ಜ್ಯೋತಿಷ್ಯದ ‘ಭದ್ರ ಬುನಾದಿಯ ಹುಸಿ ಇಟ್ಟಿಗೆಗಳನ್ನು ಪ್ರತ್ಯೇಕಿಸಿ ಪುಡಿಗುಟ್ಟುತ್ತಿದ್ದರು. ಪ್ರಾಸಂಗಿಕವಾಗಿ ಭಾಷಣ, ಲೇಖನ ಮತ್ತು ಕಿರುಹೊತ್ತಗೆಗಳ ಮಟ್ಟದಲ್ಲೇ ಚದುರಿ ಹೋಗಿದ್ದ ಇವರ ವಾದಗಳನ್ನು ಇನ್ನೂ ಹೆಚ್ಚಿನ ಅಂಶಗಳ ಸೇರ್ಪಡೆಯೊಡನೆ ಸ್ವತಂತ್ರ ಪುಸ್ತಕವಾಗಿಯೇ ಕೊಡಬೇಕೆಂದು ಜಿಟಿನಾರಿಗೆ ಪ್ರೇರಣೆ ಮತ್ತು ಒತ್ತಾಯ ಹೇರಿದವರು ಬಿವಿ ಕಕ್ಕಿಲ್ಲಾಯ. ಹೀಗೆ ‘ವೈಜ್ಞಾನಿಕ ಮನೋಧರ್ಮ ಜಿಟಿ ನಾರಾಯಣ ರಾವ್ ೧೯೯೦ರಲ್ಲಿ (ನವಕರ್ನಾಟಕ ಪಬ್ಲಿಕೇಶನ್ಸ್) ಪ್ರಕಟಿಸಿದರು. ಸುಮಾರು ನೂರೈವತ್ತು ಪುಟಗಳ ಆ ಹೊತ್ತಗೆ ಇಂದು ಎಂಟನೇ ಪರಿಷ್ಕೃತ ಆವೃತ್ತಿಯಲ್ಲಿ (೨೦೧೧, ರೂ ೮೫) ಮಾರಿಹೋಗುತ್ತಲೇ ಇದೆ. ಶಾಸನ ಸಭೆಗಳಲ್ಲಿ ಎಂದೋ ಯಾವುದೋ ರೂಪದಲ್ಲಿ ಬರಬಹುದಾದ ಮೂಢನಂಬಿಕೆಗಳ ವಿರೋಧೀ ಬಿಲ್ ಇಲ್ಲದೆಯೂ ಸಾಮಾಜಿಕ ಆರೋಗ್ಯಕ್ಕೆ ಅತ್ಯುತ್ತಮ ಪಿಲ್ ಈ ವೈಜ್ಞಾನಿಕ ಮನೋಧರ್ಮ!
    ಮೈಸೂರಿನ ಉದ್ಯಮಿ ಪ್ರಭಾನಂದ ಅತ್ತಾವರ ಮಂಗಳೂರಿನ ಕಾಲೇಜು ದಿನಗಳಲ್ಲಿ ಜಿಟಿನಾರವರ ಶಿಷ್ಯರಾಗಿದ್ದರು. ಆದರೆ ವ್ಯಾಸಂಗಾವಧಿಯ ಪ್ರಾಸಂಗಿಕ ಗುರುತ್ವವನ್ನು ಆಜೀವ ಗೌರವಕ್ಕೇರಿಸಿ ನಡೆಸಿಕೊಂಡ ಹಲವರಲ್ಲಿ ಪ್ರಭಾನಂದರು ಪ್ರಮುಖರು. ಇವರು ಪುಸ್ತಕೋದ್ಯಮಕ್ಕೆ ಏನೇನೂ ಸಂಬಂಧಿತರಲ್ಲವಾದರೂ ವೈಜ್ಞಾನಿಕ ಮನೋಧರ್ಮ ಪುಸ್ತಕದ ಪ್ರತಿಗಳನ್ನು ನೂರರ ಲೆಕ್ಕದಲ್ಲಿ ನವಕರ್ನಾಟಕದವರಿಂದ ಕೊಂಡು ತನ್ನ ಸಂಪರ್ಕಕ್ಕೆ ಬಂದೆಲ್ಲರಿಗೂ (ಕೊಂಡು) ಓದಲು ಬಲವತ್ತರವಾದ ಪ್ರೇರಣೆ ನೀಡುತ್ತಿದ್ದರು (ಧಾರಾಳವಾಗಿ ಉಚಿತ ಪ್ರತಿಗಳನ್ನು ವಿತರಿಸಿದ್ದೂ ಇತ್ತು). ಅವರ ಉಗ್ರ ಮತಾಂತರ ಉಮೇದಿಗೆ ಎಷ್ಟೋ ಬಾರಿ ಕನ್ನಡ ಭಾಷೆ ಅಡ್ಡಿಯಾಗುವುದಿತ್ತು. ಆಗೆಲ್ಲಾ ಇವರ ಸಾತ್ತ್ವಿಕ ಕ್ರೋಧ ಗುರುವಿನ ಮೇಲೇ ಎರಗುವುದಿತ್ತು. ನೀವಿದನ್ನು ಬರಿಯ ಕನ್ನಡದಲ್ಲಿ ಬರೆದರಾಗಲಿಲ್ಲ, ಇಂಗ್ಲಿಶ್ ಓದುಗರಿಗೂ ನೀವೇ ಕೊಡಬೇಕು. ಮುಂದುವರಿದು ಅಯಾಚಿತವಾಗಿ, ಇಂಗ್ಲಿಶ್ ಪುಸ್ತಕಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವಂತೆ ನೀವು ಬರೆದು, ಪ್ರಕಟಿಸಿ, ಐನೂರಕ್ಕೆ ಕಡಿಮೆಯಿಲ್ಲದಂತೆ ಪ್ರತಿಗಳನ್ನು ಕೊಂಡು, ಊರೂರು ತಿರುಗಿ ಮಾರುವ ಜವಾಬ್ದಾರಿ ನನ್ನದು. ಈ ಪ್ರೀತಿ, ಒತ್ತಡಗಳಿಗೆ ಮಣಿದು ಜಿಟಿನಾ ಸ್ವತಂತ್ರವಾಗಿ (ಕನ್ನಡ ಪುಸ್ತಕದ ಅನುವಾದವಲ್ಲ) ಇಂಗ್ಲಿಷಿನಲ್ಲಿ ಬರೆದು, ನಾನು (ಅತ್ರಿ ಬುಕ್ ಸೆಂಟರ್) ಪ್ರಕಟಿಸಿದ ಪುಸ್ತಕ Scientific Temper.
    Scientific Temper (೧೯೯೭) ಪುಸ್ತಕ ನೂರಾಹತ್ತಕ್ಕೂ ಮಿಕ್ಕು ಪುಟಗಳ ಪುಸ್ತಕವಾದರೂ ಸಾರ್ವಜನಿಕರಿಗೆ ಸುಲಭ ಬೆಲೆಯಲ್ಲಿ ಒದಗಬೇಕೆನ್ನುವ ಏಕೈಕ ಉದ್ದೇಶದಿಂದ ಕೇವಲ ರೂ ಹದಿನೈದರ ಬೆಲೆಯನ್ನು ನಿಗದಿಗೊಳಿಸಿದ್ದೇನೆ. ಸದ್ಯ ‘ಅತ್ರಿಯ ಮಳಿಗೆ, ಪ್ರಕಾಶನಗಳೆರಡೂ ಮುಚ್ಚಿರುವುದರಿಂದ ನನ್ನಲ್ಲುಳಿದ ಕೆಲವೇ ಪ್ರತಿಗಳನ್ನು ಈಗ ಹಳೆ ಬೆಲೆಗೇ ಮಾರಿ ಮುಗಿಸುತ್ತಿದ್ದೇನೆ. ಮತ್ತು ಮುಂದೆ ಇದನ್ನು ಪುಸ್ತಕ ರೂಪದಲ್ಲಿ ಮರುಮುದ್ರಿಸುವ ಯೋಜನೆ ಇಟ್ಟುಕೊಂಡಿಲ್ಲ ಎಂದೂ ತಿಳಿಸಲಿಚ್ಛಿಸುತ್ತೇನೆ.
    ಆಸಕ್ತರು ಕೂಡಲೇ ರೂ ಹದಿನೈದನ್ನು ನನ್ನ ಹೆಸರು, ವಿಳಾಸಕ್ಕೆ ಮನಿಯಾರ್ಡರ್ ಮಾಡಿದರೆ ರೂ ಮೂರರ ಅಂಚೆಚೀಟು ಹಚ್ಚಿ ಸಾದಾ ತೆರೆದಂಚೆಯಲ್ಲಿ ಕಳಿಸುವ ಜವಾಬ್ದಾರಿ ನನ್ನದು.
    ಅಶೋಕವರ್ಧನ, ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೩

    ಪ್ರತಿಕ್ರಿಯೆ
    • Anand Patil

      I have read the book by prof. GTN. It simply reproduces the dominant hegemonic view point of the science fiefdom while not giving credence to subaltern views of science. Gtn had a romantic conception of science as a pure pursuit of knowledge. But the history of science is not so simplistic.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: