ಮೂಡ್ನಾಕೂಡು.. ಬಿಳಿಮಲೆ.. ದಯಾನಂದ..

  ಅಗ್ರಹಾರ ಕೃಷ್ಣಮೂರ್ತಿ

ನೆನಪಿನ ಹಕ್ಕಿಯ ಹಾರಲು ಬಿಟ್ಟು.

ಗೆಳೆಯ ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಆತ್ಮಕಥನಕ್ಕೆ ಒಂದು ರೊಮ್ಯಾಂಟಿಕ್ ಶೀರ್ಷಿಕೆ ಕೊಟ್ಟಿದ್ದಾರೆ.  ತುಂಬ ಸುಂದರ ಮುಖಪುಟವಿದೆ.  ಶೀರ್ಷಿಕೆ ‘ ನೆನಪಿನ ಹಕ್ಕಿಯ ಹಾರಲು ಬಿಟ್ಟು.’  ತುಂಬ ಕಾವ್ಯಮಯವಾಗಿದೆ.

ಮೂಚಿ ಮೂಲತಃ ಕವಿ. ಆತ್ಮಕಥನದ ಮೊಟ್ಟ ಮೊದಲ ವಾಕ್ಯವೇ ‘ಮನುಷ್ಯ ಕಲ್ಪನಾಜೀವಿ. ‘ ಎಂಬುದು. ಕಲ್ಪನೆಯ ಅಂಶ ಕವಿಗಳಿಗೆ ಸ್ವಲ್ಪ ಮಟ್ಟಿಗೆ ಹೆಚ್ಚು ಎಂದೇ ಹೇಳಬೇಕು. ತಮ್ಮ ಕವಿತೆಗಳಲ್ಲಿ ದಲಿತ ಸಂವೇದನೆಗಳನ್ನು ಸೂಕ್ಷವಾಗಿಯೂ, ಕಲಾತ್ಮಕವಾಗಿಯೂ ಅಭಿವ್ಯಕ್ತಿಗೊಳಿಸಿದ ಕವಿ.  ಅದು ಮೊದಲ ತಲೆಮಾರಿನ ದಲಿತ ಕಾವ್ಯಾಭಿವ್ಯಕ್ತಿಯ ಲೆಕ್ಕದಲ್ಲಿ ಸ್ವಲ್ಪ ಭಿನ್ನ ಧ್ವನಿ.  ಅದೊಂದು ಬೆಳವಣಿಗೆಯೂ ಹೌದು. 

ಅದರ ಅರಿವು ಈ ಕವಿಗಿದೆ.  ಹಾಗಾಗಿಯೇ ಮೂಚಿಯವರಿಗೆ ತಮ್ಮ ಕಾವ್ಯದ ಬಗೆಗೆ ಹೆಚ್ಚಿನ ಒಲವು ಮತ್ತು ಅವರು ಅದನ್ನು ತೋರ್ಪಡಿಸುವಲ್ಲಿ ಹೆಚ್ಚುಗಾರಿಕೆಯನ್ನೂ, ಹೆಮ್ಮೆಯನ್ನೂ ಅನುಭವಿಸುತ್ತಾರೆ.  ತಾನು ಕಾವ್ಯದ ಬೆನ್ನು ಹತ್ತಿದವನು ಎಂಬುದಕ್ಕಿಂತ ಕಾವ್ಯವೇ ತನ್ನ ಕೈಹಿಡಿದಿದೆ ಎಂದು ನಂಬಿದಂತೆ ಕಾಣುತ್ತದೆ.  ಅದಕ್ಕೆ ಕಾರಣ ಕಾವ್ಯ ಇವರನ್ನು ದೂರದೂರದ ನಾಡುನುಡಿಗಳತ್ತ ಕರೆದೊಯ್ದಿದೆ.  ತಮ್ಮ ಕಾವ್ಯಯಾನ ಕುರಿತು ಬರೆಯುವಾಗ ನಾನು ಮೇಲೆ ಕಾಣಿಸಿದ ಈ ಅಂಶವನ್ನು ಆತ್ಮಕಥನದಲ್ಲಿ ಗುರುತಿಸಬಹುದು.  ಈ ಮಾತು ಹಾಗಿರಲಿ.

ಇದೊಂದು ಕವಿಯ ಆತ್ಮಥನವೂ ಹೌದು, ಇನ್ನೊಂದು ದಲಿತ ಆತ್ಮಕಥನವೂ ಹೌದು.  ಈಗ ಕೆಲವು ವರ್ಷಗಳಿಂದ ‘ದಲಿತ ಅನುಭವ’ ಇಂಡಿಯಾದ ಹೊರಗೆ  ವಿಶೇಷ ನಿರೀಕ್ಷೆಯಲ್ಲಿರುವ ವಸ್ತು.  ಮರಾಠಿ, ತಮಿಳು, ಹಿಂದಿ ಮುಂತಾದ ಭಾಷೆಗಳ ದಲಿತ ಆತ್ಮಕಥನಗಳು ಅನ್ಯ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಬಹು ಬೇಡಿಕೆಯುಳ್ಳ ಕೃತಿಗಳಾಗಿವೆ.  ಕೆಲ ಸಂದರ್ಭಗಳಲ್ಲಿ ಭಾರತೀಯ ದಲಿತ ಆತ್ಮಕಥನ ಭಾರತದ ಒಂದು ನಿರ್ದಿಷ್ಟ ಭಾಷೆಯಲ್ಲಿ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲು ವಿದೇಶಿ ಭಾಷೆಗಳಲ್ಲಿ ಪ್ರಕಟವಾಗಿ ಆನಂತರ ತಮ್ಮ ಭಾಷೆಯಲ್ಲಿ ಅಚ್ಚಾದ ಉದಾಹರಣೆಗಳುಂಟು. 

ದಲಿತ ಅನುಭವಗಳನ್ನು ಹೆಚ್ಚೆಚ್ಚು ಜನರು ಓದುತ್ತಾರೆ.  ಅವು ಹೆಚ್ಚು ಮುದ್ರಣಗಳನ್ನು ಕಾಣುತ್ತವೆ. ಆದರೆ ದುರಂತವೆಂದರೆ ಪ್ರತಿದಿನ ನಮ್ಮ ರಾಜ್ಯವನ್ನೂ ಒಳಗೊಂಡಂತೆ ಇಂಡಿಯಾದ ಎಲ್ಲಾ ಕಡೆ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ವರದಿಯಾಗುತ್ತಲೇ ಇರುತ್ತದೆ.  ಆದ್ದರಿಂದ ಸವರ್ಣೀಯರಿಗೆ ದಲಿತ ಅನುಭವ ಎಂಬುದು ಒಂದು ವಸ್ತು – commodity  ಆಗಿದೆ.  ಆತ್ಮಕಥನಗಳಲ್ಲಿ ಬರುವ ದಲಿತ ಅನುಭವಗಳನ್ನು ಆಸ್ವಾದಿಸುತ್ತಾ ಕಣ್ಣಮುಂದಿನ ಘಟನೆಗಳಿಗೆ ಕುರುಡಾಗುವ ಕೂಪದಲ್ಲಿ ನಾವಿದ್ದೇವೆ. ಸರಿಬಿಡಿ, ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ಹಕ್ಕಿಯ ಕಡೆ ನೋಡೋಣ. 

ಬಹಳ ಸಂತೋಷದ ಸಂಗತಿಯೆಂದರೆ ಮೂಚಿಯವರ ತಾಯಿ ವಿದ್ಯಾವಂತರು ! ತಂದೆ ಸರ್ಕಾರದ ಕೆಲಸವಿರುವ ಪೋಲೀಸರು.  ಸುಮಾರು ಅರವತ್ತು ವರ್ಷಗಳ ಹಿಂದಿನ ಈ ಚಿತ್ರಣ ಸಾಕು ಮೂಚಿಯವರ ದಲಿತ ಅನುಭವವು  commodity  ಸ್ವರೂಪ ಪಡೆಯದಿರುವುದಕ್ಕೆ !  ಹಾಗಾಗಿಯೇ ಇಲ್ಲಿಯ ದಲಿತ ಅನುಭವ ಭಿನ್ನವಾದುದು.  ಚಿನ್ನಸ್ವಾಮಿ  ಬಾಲ್ಯದಲ್ಲಿಯೇ ಒಂದು ಎಚ್ಚರದ ದನಿಯನ್ನು ಪ್ರಕಟಪಡಿಸುವ ಘಟನೆಗಳು ಇಲ್ಲಿವೆ. 

ಈ ಎಚ್ಚರದ ದನಿ ಎಚ್ಚರಿಕೆಯ ದನಿಯೂ ಆಗಿರುವುದನ್ನು ಈ ಕಥನದಲ್ಲಿ ಕಾಣಬಹುದು. ಅಸ್ಪೃಶ್ಯತೆಯ  ಕರಾಳತೆಯಿರುವ  ಪರಿಸರದಲ್ಲಿ  ರಕ್ತಸಂಬಂಧಿಗಳು ಮತಾಂತರವೆಂಬ ಮದ್ದನ್ನು ಕಂಡುಕೊಂಡಿರುವ ಒಂದು ಮನ್ವಂತರವನ್ನು ಈ ಆತ್ಮಕಥನಕಾರ ಬಾಲ್ಯದಲ್ಲೇ ಕಂಡವರಾಗಿದ್ದಾರೆ.  ಇವರ ತಾಯಿಯ ಅನಾರೋಗ್ಯಕ್ಕೆ ಅವರು ಹೆತ್ತ ಮಗುವೇ ಕಾರಣವೆಂದು  ಹೇಳುವ ಜ್ಯೋತಿಷಿಯೊಬ್ಬ  ಆ ಮಗುವನ್ನು  ಯಾರಿಗಾದರೂ ದಾನಕೊಟ್ಟುಬಿಡುವಂತೆ ಪರಿಹಾರ ಸೂಚಿಸುತ್ತಾನೆ. ಅದರಂತೆ ಚಿನ್ನಸ್ವಾಮಿಯವರ ತಾಯಿ ತಮ್ಮ ಕೈಯಾರೆ ಇವರ ಮುದ್ದಾದ ಅಮಾಯಕ ತಂಗಿಯನ್ನು ದಾನ ಕೊಟ್ಟುಬಿಡುತ್ತಾರೆ. ಇವರು ಬಿಕ್ಕಿ ಬಿಕ್ಕಿ ಅತ್ತೆ ಎಂದು ಬರೆಯುತ್ತಾರೆ.  ನಮ್ಮ ಕಣ್ಣಲ್ಲೂ ನೀರು ಜಿನುಗುತ್ತದೆ.  

ತಮ್ಮ ಶಾಲಾಕಾಲೇಜಿನ ದಿನಗಳಲ್ಲಿ ಕಂಡ ಜಾತಿ ವ್ಯವಸ್ಥೆಯ ಅವತಾರಗಳು ಬಾಧಿಸಿದ್ದರೂ ಇವರನ್ನು ಕುಂದಿಸಿಲ್ಲ.  ಅದು ಇವರ ಉದ್ಯೋಗ ಕ್ಷೇತ್ರದಲ್ಲಿ ಬಾಧಿಸಿದಾಗಲೂ ತಾಳ್ಮೆಯಿಂದ ಎದುರಿಸಿ ಯಶಸ್ಸು ಪಡೆದಿದ್ದಾರೆ. ನಾನು ಈಗಾಗಲೇ ಹೇಳಿದಂತೆ ಎಚ್ಚರವಿದ್ದಲ್ಲಿ ಎಚ್ಚರಿಕೆಯೂ ಇರುತ್ತದೆ. ಇಲ್ಲಿ ಸಂಘರ್ಷಕ್ಕೆ ಎಡೆಯಿಲ್ಲ.  ಸಂಧಾನ ಮತ್ತು ಸಾಮಯಿಕ ಅರಿವನ್ನು ತಮ್ಮ ಸುತ್ತಮುತ್ತಲಿನ ಜನರಲ್ಲಿ ಮೂಡಿಸುವಲ್ಲಿಯೂ ಗೆಲುವು ಸಾಧಿಸುತ್ತಾರೆ.   ಇಂಥ ಹೊತ್ತಲ್ಲಿ ಚಿನ್ನಸ್ವಾಮಿ ಒಬ್ಬ ಸಮಾಜವಿಜ್ಞಾನಿಯಂತೆ ಮೀಸಲಾತಿ, ಅಂಬೇಡ್ಕರ್ ವಿಚಾರಧಾರೆ, ಗಾಂಧೀಜಿಯ ತಪ್ಪುಗಳು ಇತ್ಯಾದಿ ವಿವರಗಳನ್ನು ನೀಡುತ್ತಾರೆ.   

ಇಂಡಿಯಾದ ಜಾತಿ ವ್ಯವಸ್ಥೆಯ ಗೊಂದಲ ಗೊತ್ತಿಲ್ಲದ ವಿದೇಶಗಳ ಯಾತ್ರೆಯಲ್ಲಿ ಚಿನ್ನಸ್ವಾಮಿ ತುಂಬ  comfortable  ಆಗಿರುವುದನ್ನು ಈ ಕಥನದಲ್ಲಿ ನಾವು ಗುರುತಿಸಬಹುದು.  ಆದರೆ ತಮ್ಮ ಐಕಾನ್ ಅಂಬೇಡ್ಕರ್ ಅವರ ಆದರ್ಶವನ್ನು ಇವರೂ ಪಾಲಿಸುತ್ತಾ ಕುಟುಂಬ ಸಮೇತ ಬೌದ್ಧ ಧರ್ಮಕ್ಕೆ ಸೇರುವುದರ ಮೂಲಕ ಒಂದು ಐತಿಹಾಸಿಕ ತೀರ್ಮಾನ ವನ್ನು ತೆಗೆದುಕೊಳ್ಳುತ್ತಾರೆ.  ಅದು ನಮಗೂ ನಿರಾಳವೆನಿಸುತ್ತದೆ.   ಯಾವುದೋ ವಿದೇಶದಲ್ಲಿನ ತಮ್ಮ ಸೆಮಿನಾರ್ ಬಗ್ಗೆ ತಿಳಿಸುತ್ತ ಇದ್ದಕ್ಕಿದ್ದಂತೆ  -abruptly  ಮುಗಿಸಿಬಿಡುತ್ತಾರೆ.  

ಓದಿ ಮುಗಿಸಿದ ಘಳಿಗೆಯಲ್ಲಿ ತಕ್ಷಣ ಅನಿಸಿದ ಕೆಲವು ಮಾತುಗಳನ್ನು ಹಂಚಿಕೊಂಡಿದ್ದೇನೆ.  ಇನ್ನೂ ಏನಾದರೂ ಬಾಕಿ ಇದ್ದರೆ ನೋಡುವಾ. ಇವರು ಹಾರಿಬಿಟ್ಟ ಹಕ್ಕಿ ಮತ್ತೆ ಇವರ ಎದೆಗೂಡಿಗೆ ಬಂದು ಸೇರಿಕೊಳ್ಳುತ್ತದೆ.  ಆಗ ಇನ್ನಷ್ಟು ಮಾತಾಡಲು ಅವಕಾಶ ಬಂದೀತು.  

ಕಾಗೆ ಮುಟ್ಟಿದ ನೀರು

ನನ್ನದೊಂದು ಥಿಯರಿ ಇದೆ. ಇದನ್ನ ಪದೇಪದೇ ಅನೇಕರ ಬಳಿ ಹೇಳಿದ್ದುಂಟು.  ಇಂಡಿಯಾದಲ್ಲಿ ಬಹುತೇಕ ಶೂದ್ರರು ಶಿಕ್ಷಿತರಾಗಿ ಮುಂದೆ ಬಂದು ಹೆಸರು ಗಳಿಸಿದ್ದರೆ ಅದೊಂದು ಆಕಸ್ಮಿಕವಾಗಿರುತ್ತದೆ. ಅದಕ್ಕೆ ಮತ್ತೊಬ್ಬರು ನನಗೆ ಉದಾಹರಣೆಯಾಗಿ ಸಿಕ್ಕರು. ಅವರು ಬಿಳಿಮಲೆ.

ಅವರು ಸಮರ್ಥ ಅರ್ಥದಾರಿಯೊಬ್ಬರ ಮಗ. ಪಂಚಾಂಗ ಹಿಡಿದು ಪರಿಕಿಸುವವರು. ಆ ಲೆಕ್ಕದಲ್ಲಿ ಬಿಳಿಮಲೆ ವಿದ್ಯಾವಂತರಾಗಿಯೇ ತೀರುತ್ತಿದ್ದರೆನಿಸುತ್ತದೆ.  ಅಲ್ಲದೆ ಅವರು  ಕನ್ನಡ ಜಿಲ್ಲೆಯ ಜನ.  ಅವರ ತಂದೆ ತಾಯಿಗಳ ದೃಷ್ಟಿಯಲ್ಲಿ ಮಗ ಸ್ಕೂಲ್ ಮಾಸ್ತರನಾದರೆ ವಿದ್ಯಾವಂತನಾದಂತೆಯೇ ಅಲ್ಲವೇ ?  ಅದಕ್ಕೆ ತಕ್ಕನಾದ ವ್ಯವಸ್ಥೆಯನ್ನು ಅವರ ತಂದೆ ಮಾಡಿಯೇ ಇದ್ದಾರೆ.  ಅವರ ಭವಿಷ್ಯ ಮಾಸ್ತರಿಕೆಗಷ್ಟೇ ನಿಲ್ಲುತ್ತಿರಲಿಲ್ಲವೆನಿಸುತ್ತದೆ.  ಜೊತೆಗೆ ಅವರೂ ಒಬ್ಬ ಯಶಸ್ವಿ ಅರ್ಥಧಾರಿಯೂ ಪಾತ್ರಧಾರಿಯೂ ಆಗುತ್ತಿರಲಿಲ್ಲ ಎಂದು ಹೇಳಲಾಗುವುದಿಲ್ಲ. 

ಅವರು ಅನೇಕ ಮೈಲುಗಳನ್ನು ಕಾಲ್ನೆಡೆಗೆಯಲ್ಲೇ ಕ್ರಮಿಸಿ ಶಾಲೆಗೆ ಹೋಗುತ್ತಿದ್ದ ಹುರುಪಿನಲ್ಲೇ ಮೈಲುಗಟ್ಟಲೆ ದೂರವಿದ್ದ ಊರುಗಳಲ್ಲಿ ರಾತ್ರಿಯಿಡೀ ನೆಡೆಯುತ್ತಿದ್ದ ಆಟಗಳನ್ನೂ ನೋಡಲು ಹೋಗುತ್ತಿದ್ದರು.  ಅದಕ್ಕೆ ಮನೆಯವರ ಅಡ್ಡಿಯಿರಲಿಲ್ಲ. ಇಲ್ಲಿರುವ ಸೌಂದರ್ಯವೇನಂದರೆ ಅವರ ಇಡೀ ಬಾಲ್ಯಕಾಲದ ಅನುಭವ ಚದುರಿ ಬಿದ್ದ ಆತ್ಮದ ತುಣುಕುಗಳನ್ನು ಆಯ್ದುಕೊಳ್ಳುವ ಹೊತ್ತಿಗೆ ಬಡತನ ಎನ್ನುವುದಕ್ಕಿಂತಲೂ ಹೆಚ್ಚಾಗಿ ಸಮೃದ್ಧ ಅನಿಸಿಬಿಡುವುದು. ಹಾಗಾಗಿ ಇದೊಂದು ಸುರಳೀತ ಬರವಣಿಗೆ. 

ಇವರು ಶಿಕ್ಷಕರ ತರಬೇತಿ ಶಾಲೆಯಿಂದ ಒಂದೇ ರಾತ್ರಿಯಲ್ಲಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಒಂದು ನಿಲುವಿಗೆ ಬಂದಾಗ ಸಹಾಯ ಮಾಡಿದ್ದು ಅದೇ ಸಂಸ್ಥೆಯ ಯಜಮಾನರು.  ಅಂಥದ್ದನ್ನೇ ನಾನು ಆಕಸ್ಮಿಕ ಎಂದು ಕರೆಯುವುದು.  That is the true beauty of this self narrative. ಆಮೇಲಿನ ಕೆಲವು ಏಳುಬೀಳುಗಳಿದ್ದರೂ ಬಿಳಿಮಲೆ ಹಿಂದೆ ತಿರುಗಿ ನೋಡಿದವರಲ್ಲ.  ಅವರ  academic  ಆಸಕ್ತಿ ಮತ್ತು ಶ್ರದ್ಧೆ, ಜಾನಪದ ಅಧ್ಯಯನ ಎಲ್ಲದಕ್ಕೂ ಬಾಲ್ಯದಿಂದಲೂ ಅವರಿಗಿದ್ದ ಯಕ್ಷಗಾನ ಕಲೆಯೇ ಇಂಬಾಗಿದೆ.  ಅದು ಅವರನ್ನು ಜಪಾನ್ ಮುಂತಾದ ದೇಶಗಳಿಗೆ ಕರೆದೊಯ್ದಿದೆ.

ಬಿಳಿಮಲೆ ಹೇಳಿದ್ದರು, ‘ ಇಲ್ಲಿ ಕಂಬಾರರೊಬ್ಬರೇ ಖಳನಾಯಕರು… ‘ ಅಂತ.  ಆ ಭಾಗ ಓದುವಾಗ ಯಕ್ಷಗಾನದಲ್ಲಿ ದಿಗಣ ಹಾಕಿ ಮರದ ಹಲಗೆ ಮುರಿಯುವ ಹಾಗೆ ಕುಣಿಯುವ ಪಾತ್ರವನ್ನು ನಿರೀಕ್ಷಿಸಿದ್ದೆ.  ಅಂಥದ್ದೇನೂ ನಡೆಯುವುದಿಲ್ಲ.   ವಿಶ್ವವಿದ್ಯಾಲಯವೊಂದರಲ್ಲಿ ಇಂಥವು ನೂರು ಅನ್ನುವುದನ್ನು ಬಿಳಿಮಲೆ ಈಗಿನ ಜೆ ಎನ್ ಯು ನಲ್ಲಿ ನೋಡಿರಲಿಕ್ಕೆ ಸಾಕು.  ಆಗಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಮಾನಗಳು ನೆಡೆದದ್ದುಂಟು.  ಅವುಗಳ ಹಿಂದು ಮುಂದು ಒಳಗುಗಳೇನಾದರೂ ಇದ್ದು ಖಳ ಪಾತ್ರಗಳು ವಿಜೃಂಭಿಸತ್ತವೆಂಬ ನಿರೀಕ್ಷೆ ಹುಸಿಯಾಗುತ್ತದೆ. 

ಆದರೆ ಎಲ್ಲವನ್ನೂ ಒದ್ದು ಹೊಸ ಬದುಕನ್ನೂ ಹೊಸ  carrier  ಅನ್ನೂ ಕಟ್ಟಿಕೊಳ್ಳಲು ದೂರದ ದಿಲ್ಲಿಗೆ ಹೋಗಿ ಗೆದ್ದದ್ದು ಮಾತ್ರ ತುಂಬ ಶ್ಲಾಘನೀಯವಾದದ್ದು.  ಬಿಳಿಮಲೆ ಅವರ ನೋವುಗಳನ್ನು ಹೇಳುವುದಕ್ಕಿಂತಲೂ ಹೆಚ್ಚು ಗೆಲುವು , ಯಶಸ್ಸನ್ನು – success – ಹೇಳಲೆಂದೇ ಈ ಕೃತಿಯನ್ನು ರಚಿಸಿದಂತಿದೆ.  ಇದೇ ಅನೇಕರು ಈಗಾಗಲೇ ಹೇಳಿದಂತೆ ಹೊಸ ತಲೆಮಾರಿನ ಯುವಕ ಯುವತಿಯರಿಗೆ ಅನುಕರಣೀಯ ಬದುಕು ಎಂಬುದು.  ಇವರು ಯಾವುದನ್ನಾದರೂ ಕಟ್ಟಬೇಕೆಂಬ ಮನಸ್ಸು ಮಾಡಿದರೆ ಅದರಲ್ಲಿ ಬಿಡದೆ ತೊಡಗಿಕೊಳ್ಳುವ ಗುಣವನ್ನು ಬಹುಶಃ ತಮ್ಮ ಬಾಲ್ಯಕಾಲದ ಜಿಗಣೆಗಳ ಸಹವಾಸದಿಂದಲೇ ಕಲಿತಿರಬೇಕು ! 

ಸಾವಿರಾರು ವರ್ಷಗಳಿಂದ ಸ್ಥಗಿತಗೊಂಡಂತಿದ್ದ ದೆಹಲಿ ಕನ್ನಡ ಸಂಘಕ್ಕೆ ಅಚ್ಚರಿ ಹುಟ್ಟಿಸುವಂಥ ಇಮೇಜನ್ನು ಸೃಷ್ಟಿಸಿದ್ದು ಸಣ್ಣ ಕೆಲಸವಲ್ಲ.  ಶ್ರದ್ಧೆ, ಪ್ರಾಮಾಣಿಕತೆ, ಕನ್ನಡ ಪ್ರೇಮ ಇಲ್ಲದಿದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ.  ಇದೇ ಕೆಲಸವನ್ನು ಅವರು ಜೆ ಎನ್ ಯು ಕನ್ನಡ ಪೀಠದಲ್ಲಿಯೂ ಮಾಡಿದ್ದಾರೆ.  ಆತ್ಮಕತೆಯ ಕೊನೆಕೊನೆಯ ಭಾಗದಲ್ಲಿ ಬದುಕಿನ ಬಗೆಗಿನ ತಮ್ಮ ಧೋರಣೆ ಮತ್ತು ನಂಬಿಕೆಗಳನ್ನು ಕುರಿತು ಬಿಚ್ಚು ಮನಸ್ಸಿನಿಂದ ಬರೆದಿದ್ದಾರೆ.  ಅದರಂತೆಯೇ ಅವರು ಬದುಕಿರುವುದನ್ನು ನಾವೆಲ್ಲ ಕಂಡಿದ್ದೇವೆ. 

ಬಾಲ್ಯದಿಂದಲೂ ಬುತ್ತಿ ಕಟ್ಟಿಕೊಂಡು ತಂದ ಅನಾರೋಗ್ಯವನ್ನು ಇದುವರೆಗಿನ ಜೀವನದವರೆಗೆ  ಗೊಣಗದೆ ಉಣ್ಣುತ್ತಿರುವ ಬಿಳಿಮಲೆ ಓರ್ವ ಅಪರೂಪದ ಸಾಹಸಿಯಂತೆ ಕಾಣುತ್ತಾರೆ.  ಪುಸ್ತಕದಲ್ಲಿರುವ ಎಲ್ಲ ಚಿತ್ರಗಳನ್ನೂ ಆಗೀಗ ಓದುವಾಗ ನೋಡಿದ್ದೆ.  ಪುಸ್ತಕ ಓದಿ ಮುಗಿಸಿದ ಮೇಲೆ ಕೆಳಗಿಡುವ ಮುನ್ನ ಇನ್ನೊಮ್ಮೆ ಹುಡುಕಿ ಅವರ ಬಾಳ ಸಂಗಾತಿಯ ಮುಖವನ್ನು ನೋಡಿ ಮನದಲ್ಲಿಯೇ ವಂದಿಸಿದೆ. 

ಹಾದಿಗಲ್ಲು

ಕೆ ಎ ದಯಾನಂದ ಅವರು ಒಂದು ಪತ್ರದ ಜೊತೆಗೆ ತಮ್ಮ ಆತ್ಮವೃತ್ತಾಂತದ ಮೊದಲ ಚರಣವಾದ ‘ ಹಾದಿಗಲ್ಲು ‘ ಕೃತಿಯ ಪ್ರತಿಯೊಂದನ್ನು ಕಳಿಸಿಕೊಟ್ಟಿದ್ದಾರೆ. ಪತ್ರದಲ್ಲಿ ತಾವು ವೃತ್ತಿಪರ ಬರಹಗಾರನಲ್ಲವೆಂದು, ‘ ಲೇಖಕರ ನುಡಿ ‘ ಯಲ್ಲಿ ಪೆನ್ನು ಹಿಡಿದು ಪೇಪರ್ ಮೇಲೆ ಬರೆಯುವ ಅಭ್ಯಾಸವೇ ಇಲ್ಲವೆಂದೂ ತಮ್ಮ ಕಚೇರಿ ಕೆಲಸಗಳಿಗಾಗಿ ಪ್ರಯಾಣ ಮಾಡುವ ಹೊತ್ತಿನಲ್ಲಿ ಮೊಬೈಲ್ ನಲ್ಲಿ ನೋಟ್ಸ್ ಮಾಡಿಕೊಂಡ ಬರಹಗಳನ್ನು ಕಲೆಹಾಕಿರುವುದಾಗಿ ತಿಳಿಸಿದ್ದಾರೆ. 

ಅವರು ವಿನಯಕ್ಕಾಗಿ ಈ ಮಾತುಗಳನ್ನಾಡಿರಬಹುದು.  ಓದುಗರ ಮಟ್ಟಿಗೆ ಇಲ್ಲಿನದು ಸುಲಲಿತವಾದ ಬರವಣಿಗೆ. ಅವರ ನೆನಪಿನ ಅನುಭವಗಳು 36 ಭಾಗಗಳಲ್ಲಿವೆ. ಸುಮಾರು 290 ಪುಟಗಳ ಆತ್ಮವೃತ್ತಾಂತ ಇದು.  ಈ ವಿವರಗಳ ಅಗತ್ಯವೇನಿಲ್ಲ. ದಯಾನಂದ ೧೯೭೬ ರಲ್ಲಿ ಜನಿಸಿದವರು. ಅವರು ಈಗಷ್ಟೇ ೪೫ ರ ಗಡಿಯನ್ನು ಮುಟ್ಟಿದ್ದಾರೆ. ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ ಐಎಎಸ್ ದರ್ಜೆಗೇರಿದವರು. ಸ್ವಲ್ಪ ಬೇಗಲೇ ಆತ್ಮವೃತ್ತಾಂತ ಬರೆದು ಬಿಟ್ಟಿದ್ದಾರೆ ಅನಿಸುವುದು ಸಹಜ. ಬರೆಯಬಾರದು ಎಂಬ ಕಟ್ಟುಗಳೇನಿಲ್ಲ. ಅದು ಹಾಗಿರಲಿ.

ದಯಾನಂದ ಅವರನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಲ್ಲಿ ಮೀಟಿಂಗಗಳಿಗೆ ಹೋದಾಗ ಒಂದೆರಡು ಬಾರಿ ಭೇಟಿಯಾಗಿದ್ದೆ.  ನಾನು ಐಎಎಸ್ ಅಧಿಕಾರಿಗಳನ್ನೊಳಗೊಂಡಂತೆ ನೂರಾರು ಅಧಿಕಾರಿಗಳನ್ನು ಕಂಡಿದ್ದೇನೆ.  ಕೆಲವರು ಬಿಂದಾಸ್ ಆಗಿರುತ್ತಾರೆ, ತಮ್ಮ ಮಿತಿಗಳನ್ನು ಅರಿತು ಒಳ್ಳೆಯ ಕೆಲಸ ಮಾಡುತ್ತಾರೆ.  ಕೆಲವರು ಯಾರನ್ನೂ ಹತ್ತಿರಕ್ಕೇ ಬಿಟ್ಟುಕೊಳ್ಳದ ಕೆಂಡದ ಉಂಡೆಗಳಾಗಿರುತ್ತಾರೆ. ಕೆಲವರು ಸದಾ ಶಿಸ್ತುಗಾರರಾಗಿರುತ್ತಾರೆ.  ಕೆಲವರು ಆಡಳಿತ ಪಕ್ಷಗಳಿಗೆ, ಅವುಗಳ ಮಂತ್ರಿಮಾನ್ಯರುಗಳಿಗೆ ಅನುಕೂಲಕರವಾಗಿ ಕಾನೂನುಗಳನ್ನು ಬಗ್ಗಿಸಿಯೂ ಹಿಗ್ಗಿಸಿಯೂ ನೆಡೆದುಕೊಳ್ಳುತ್ತಿರುತ್ತಾರೆ. ಬಹಳ ಅಪರೂಪಕ್ಕೆ ಕೆಲವರು ಜನಪರ ಅಧಿಕಾರಿಗಳಾಗಿರುತ್ತಾರೆ. 

ನಾನು ಕಂಡಾಗ ದಯಾನಂದ ಅವರು ಓರ್ವ ಅಪ್ಪಟ ಹಳ್ಳಿಗಾಡಿನ ಯುವಕರಂತೆ ಕಂಡಿದ್ದರು.  ಈ ಕೃತಿಯ ಮೂಲಕ ಅವರು ಜನಪರರಾಗಿದ್ದುದಾಗಿ ಅನೇಕ ಪ್ರಸಂಗಗಳನ್ನು ನಿರೂಪಿಸಿದ್ದಾರೆ.  ಹಲವು ಮಾನವೀಯ ತೀರ್ಮಾನಗಳನ್ನು ಕಾನೂನು ಪರಿಪಾಲನೆಯನ್ನು ಸ್ವಲ್ಪ ಹಿಂದೆ ಸರಿಸಿಯೂ ತೆಗೆದುಕೊಂಡಿದ್ದಾರೆ. 

ಆಡಳಿತ ಕ್ಷೇತ್ರದಲ್ಲಿದ್ದ ಅನೇಕರು ಈಗಾಗಲೇ ತಮ್ಮ ಆತ್ಮಕಥನಗಳನ್ನು ಅನುಭವ ಕಥನಗಳನ್ನು ಪ್ರಕಟ ಮಾಡಿದ್ದಾರೆ.  ಅವುಗಳ ಸಾಲಿಗೆ ದಯಾನಂದ ಅವರ ಹಾದಿಗಲ್ಲು ಒಂದು ಒಳ್ಳೆಯ ಸೇರ್ಪಡೆಯೆನ್ನಬಹುದು. ಈ ಕೃತಿ ನನಗೆ ತುಂಬ ಇಷ್ಟವಾದದ್ದಕ್ಕೆ ಕೆಲವು ಪ್ರಮುಖ ಕಾರಣಗಳನ್ನು ಕೊಡಬಹುದು.  ಕೆಲವರಿರುತ್ತಾರೆ, ಅವರು ಅವರ ಬಡತನ, ದುರ್ಬಲ ಆರ್ಥಿಕ ಹಿನ್ನೆಲೆಯಿಂದಾಗಿ ಸ್ವಲ್ಪ ಶಿಕ್ಷಣ ಪಡೆದಕೂಡಲೆ ಯಾವುದಾದರೂ ನೌಕರಿ ಹುಡುಕಿಕೊಂಡು ಹೊರಟುಬಿಡುತ್ತಾರೆ. ನೌಕರಿಯಲ್ಲಿದ್ದುಕೊಂಡೇ ಕ್ರಮಕ್ರಮೇಣ ಉನ್ನತ ಶಿಕ್ಷಣ ಪಡೆದುಕೊಂಡು ಅವುಗಳಿಗೆ ತಕ್ಕನಾದ ನೌಕರಿಗಳನ್ನು ಸಂಪಾದಿಸಿ ಯಶಸ್ವಿಯಾಗುತ್ತಾರೆ. 

ದಯಾನಂದ ಅಂಥ ಯಶಸ್ವೀ ಸಮುದಾಯಕ್ಕೆ ಸೇರಿದವರು.  ಹೀಗೆ ಉನ್ನತ ಸ್ಥಿತಿಗೇರುವವರಿಗೆ ವಿಭಿನ್ನ ಅನುಭವಗಳು, ಸಂದರ್ಭಗಳು ಮತ್ತು ಜನರ ಮುಖಾಮುಖಿಯಾಗುತ್ತವೆ. ಆ ಅನುಭವಗಳ ಹಿನ್ನೆಲೆ ತಾವು ಪ್ರಸ್ತುತ ಇರುವ ಅಧಿಕಾರಸ್ಥಾನಗಳ ಕೆಲಸಗಳನ್ನು ಗುಣಾತ್ಮಕವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ.  ಈ ಕೃತಿಯಲ್ಲಿ ನಾವು ಈ ಅಂಶವನ್ನು ಗಮನಿಸಬಹುದು. 

ಈ ಅತ್ಮಕಥನದಲ್ಲಿ ನಾವು ಒಂದು  grand narrative – ದೀರ್ಘ ನಿರೂಪಣೆಯನ್ನು ಕಾಣುವುದಿಲ್ಲ.   ದಯಾನಂದ ತಮ್ಮದೇ ಒಂದು ಶೈಲಿಯನ್ನು ಪಾಲಿಸುತ್ತಾರೆ.  ಪ್ರತಿಯೊಂದು ನೆನಪು ಅಥವಾ ಪ್ರಸಂಗವನ್ನು ನಿರೂಪಿಸುವಾಗ ತಮ್ಮ ವಿಷಯಕ್ಕೆ ಸಂಬಂಧಿಸಿದ ಒಂದು ಪುಟ್ಟ ಒಕ್ಕಣೆ ಹಾಕಿ ತಮ್ಮ ಪ್ರಸಂಗಕ್ಕೆ ತೊಡಗುತ್ತಾರೆ. ಕೊನೆಯಲ್ಲಿ ಅದಕ್ಕೆ ಅವರದೇ ಆದ ಒಂದು ಪುಟ್ಟ ಉಪಸಂಹಾರವನ್ನೂ ಕಾಣಿಸುತ್ತಾರೆ. ಈ ಶೈಲಿಯನ್ನು ಬಹುತೇಕ ಪ್ರಸಂಗಗಳಲ್ಲಿ ನಾವು ಕಾಣುತ್ತೇವೆ. 

ಈ ಕೃತಿಯ ಉತ್ಕೃಷ್ಟ ಭಾಗವೆಂದರೆ ಮೊದಲ ನೂರು ಪುಟಗಳಲ್ಲಿರುವ ವಿವಿಧ ಪ್ರಸಂಗಗಳು.  ದಯಾನಂದ ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದವರು.  ತಮ್ಮ ಅವಿಭಜಿತ ಮತ್ತು ವಿಭಜಿತ ಕುಟುಂಬದ ಕಷ್ಟ ಕಾರ್ಪಣ್ಯಗಳನ್ನು, ಬಡತನದ ಬೇಗೆಯನ್ನು, ಸಾಲಸೋಲಗಳನ್ನು, ದುಃಖ ದುಮ್ಮಾನಗಳನ್ನು ತುಂಬ ಸಹಜವಾಗಿ ಯಾವ ಭಿಡೆ ಸಂಕೋಚಗಳೂ ಇಲ್ಲದೆ ನಿರೂಪಿಸುತ್ತಾರೆ.  ತಮ್ಮ ತಂದೆ-ತಾಯಿ, ಒಡಹುಟ್ಟಿದವರು, ಬಂಧು ಬಳಗದವರ ಬಗೆಗೆ ಇವರು ನೀಡುವ ವಿವರಗಳು ಹೃದ್ಯವಾಗಿವೆ. ಬಾಲ್ಯಸಹಜ ಕೌತುಕಗಳು, ಆತಂಕಗಳನ್ನು, ತಾವು ಬಾಲ್ಯದಲ್ಲಿ ಕಂಡ ಜಾತ್ರೆ ಬೇಟೆ ಇತ್ಯಾದಿ ಗ್ರಾಮೀಣ ಬದುಕಿನ ಪರಂಪರೆ ಸಂಪ್ರದಾಯಗಳ ಪ್ರಾಮಾಣಿಕ ಚಿತ್ರಗಳನ್ನು ನೀಡುತ್ತಾರೆ. 

ಮಳೆಗಾಳಿಯ  ಬಗ್ಗೆ ಅವರು ಸದಾ ಇರಿಸಿಕೊಂಡಿದ್ದ ಭೀತಿಯಲ್ಲಿ ಅವರು ವಾಸವಿರುತ್ತಿದ್ದ ಬಡ ಸೋಗೆ ಗುಡಿಸಲು ಹಾರಿಹೋದೀತೆಂಬ ಕಾಳಜಿಯನ್ನು ನಾವು ಕಾಣುತ್ತೇವೆ. ತಾವು ಹುಟ್ಟಿಬಂದ ಕುರುಬ ಸಮುದಾಯದ ಕುರಿ ಸಾಕಾಣಿಕೆ, ಹೈನುಗಾರಿಕೆಯ ಲೋಕ ಸಂಸ್ಕೃತಿಯ ವಿವರಗಳನ್ನು ತಮ್ಮ ಬಾಲ್ಯದೊಂದಿಗೆ ಬೆಸೆಯುತ್ತಾರೆ.  ಆ ಮೂಲಕ ಪ್ರಾಣಿಪಶುಗಳ ಮತ್ತು ಅವುಗಳೊಡನೆ ಒಡನಾಡುವ ಮನುಷ್ಯ ಜೀವಿಗಳ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಆರ್ದ್ರವಾಗಿ ನಿರೂಪಿಸುತ್ತಾರೆ.  ಪ್ರಾಣಿ ಪಶುಪಕ್ಷಿಗಳ ಸಾಕುವಿಕೆ, ಅವುಗಳ ಸಾಂಗತ್ಯ ಮತ್ತು ಅವುಗಳಿಂದ ಸಿಗುವ ಆರ್ಥಿಕ ಬಲ ಇತ್ಯಾದಿಗಳನ್ನು ನಿರ್ಮಮಕಾರವಾಗಿ ಬರೆಯುತ್ತಾರೆ.

ಅದಕ್ಕೊಂದು ಉಜ್ವಲ ಉದಾಹರಣೆಯೆಂದರೆ  ‘ ಕಾಡಿದ ಕರಿ ಎತ್ತು ‘  ಎಂಬ ಪ್ರಸಂಗ.  ಕುರುಬ ಸಮುದಾಯದ ಸದಸ್ಯರು ಕುರಿಗಳ ಮಂದೆಯಲ್ಲಿ ತಮ್ಮ ಸ್ವಂತ ಕುರಿಗಳನ್ನು ಗುರುತಿಸುವ ಒಂದು ವಿಶೇಷ ಪರಿಣತಿ ಆಶ್ಚರ್ಯಕರವಾದುದು. ಆ ವಿವರಗಳು ಅಪಾರ ಕುತೂಹಲವನ್ನುಂಟುಮಾಡುತ್ತವೆ. ಕುರಿಮಂದೆ ಗುಂಪಿನಲ್ಲಿ ಮೇಯುವ ಮಲಗುವ, ಒಟ್ಟಾಗಿ ಇರುವುದು ಒಂದು ರೀತಿಯಲ್ಲಿ ಅವುಗಳ ಒಡೆಯರಿಗೆ ಒಂದು ಅಮೋಘ ಪಾಠವನ್ನೇ ಪರೋಕ್ಷವಾಗಿ ಕಲಿಸಿರುತ್ತವೆನಿಸುತ್ತದೆ.  ಎಲ್ಲರೊಡನೆ ಒಂದಾಗಿ ಬಾಳುವ ಗುಣ ಹುಟ್ಟಿನಿಂದಲೇ ಮೈಗೂಡಿ ಬರುತ್ತದೆನಿಸುತ್ತದೆ. ದಯಾನಂದ ಅವರ ಅಧಿಕಾರ ಶಾಹಿ ದಿನಗಳಲ್ಲಿನ ಅಂಥ ಅನುಭವಗಳನ್ನು ಓದುವಾಗ ಹಾಗೆನಿಸಿತು.

ತಮ್ಮ ತಂದೆ ತಾಯಿ, ಅಣ್ಣ ಮುಂತಾದವರ ಬಗ್ಗೆ ಬರೆಯುವಾಗ ಸಹಜವಾಗಿರುತ್ತಲೇ ಅವರ ವಿಶೇಷ ವ್ಯಕ್ತಿತ್ವಗಳನ್ನು ತಿಳಿಸುತ್ತಾರೆ.  ‘ ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ ‘  ಎಂಬ ಪ್ರಸಂಗದಲ್ಲಿ ತಮ್ಮ ಅಪ್ಪ ದಿನವೊಂದಕ್ಕೆ ಸರಾಸರಿ ಹದಿನೈದು ಕಿಲೋಮೀಟರ್ ಓಡಾಡುವರಾಗಿಯೂ ಚಪ್ಪಲಿ ಮೆಟ್ಟದ ಅವರ ಪಾದಗಳನ್ನು ವರ್ಣಿಸುತ್ತಾರೆ,  ” ಅಪ್ಪನ ಪಾದ ಹೇಗಿತ್ತೆಂದರೆ ಬರಗಾಲದಲ್ಲಿ ಒಣಗಿದ ಕೆರೆಯಂಗಳ ಸೀಳು ಬಿಟ್ಟಂತಿತ್ತು. ಕಪ್ಪನೆಯ ಕಬ್ಬಿಣದಂತೆ ಗಟ್ಟಿ ಪಾದಗಳಲ್ಲಿ ಮೃದುವೆಂಬುದು ನೋಡಲು ಸಾಧ್ಯವೇ ಇರಲಿಲ್ಲ. ಸೂಜಿಯಲ್ಲಿ ಚುಚ್ಚಿ ಕಿತ್ತರೂ ಚರ್ಮ ಕೀಳಲು ಸಾಧ್ಯವಾಗುತ್ತಿರಲಿಲ್ಲ”.

ದಯಾನಂದ ಅವರ ಅತ್ತೆಯವರ ಹೆಸರು ಹುಚ್ಚಮ್ಮ.  ಸರ್ಕಾರದ ಖಜಾನೆಯಲ್ಲಿ ಅಧಿಕಾರಿಯಾಗಿದ್ದ ಅವರು ತಮ್ಮ ವೈಯಕ್ತಿಕ ಬದುಕಿನ ಕಡೆ ಗಮನ ನೀಡದೆ ಅಣ್ಣ ತಮ್ಮಂದಿರ ಮಕ್ಕಳ, ಕೌಟುಂಬಿಕರ, ಬಂಧು ಬಳಗದವರ ಮಕ್ಕಳ ಶಿಕ್ಷಣದ ಉಸ್ತುವಾರಿಯನ್ನು ಹೊತ್ತು ಅವರೆಲ್ಲರ ಉನ್ನತಿಯನ್ನು ಗುರಿಯಾಗಿಟ್ಟುಕೊಂಡು ಬದುಕಿದ ಮಹಿಳೆ. ದಯಾನಂದ ಬರೆಯುವಂತೆ ಈ ಧ್ಯೇಯವನ್ನು ತಮ್ಮ ಹೆಸರಿಗೆ ಅನ್ವರ್ಥಕವಾಗಿರುವಂತೆ ನೆಡೆದವರು.  ಇದೊಂದು ಅಪೂರ್ವ ಜೀವಂತ ವ್ಯಕ್ತಿತ್ವದ ಚಿತ್ರಣ.  ಇಂಥ ಒಬ್ಬೊಬ್ಬ ಮಹಿಳೆ ಒಂದೊಂದು ಪರಿವಾರದಲ್ಲಿದ್ದುಬಿಟ್ಟರೆ ಸಾಕು ಆ ಪರಿವಾರಗಳು ಸರ್ವಕಾಲಕ್ಕೂ ಸುಶಿಕ್ಷಿತ ಮತ್ತು ಸ್ವಾವಲಂಬಿ ಪರಿವಾರಗಳಾಗಿಬಿಡುತ್ತವೆ.  ಅಂಥ ಸೋದರತ್ತೆಯನ್ನು ಪಡೆದ ದಯಾನಂದ ಹಾಗೂ ಅವರ ಹತ್ತಿರದವರು ನಿಜಕ್ಕೂ ಅದೃಷ್ಟಶಾಲಿಗಳು.

ಈ ಮೊದಲ ನೂರು ಪುಟಗಳ ನಂತರದ ಪ್ರಸಂಗಗಳು ಬಹುತೇಕ ಲೇಖಕರ ಆಡಳಿತಾನುಭವಗಳು. ಏಳುಬೀಳುಗಳನ್ನುಂಡೂ ವೈಯಕ್ತಿಕ ನೆಲೆಯಲ್ಲಿಯೂ ಸಾಮುದಾಯಿಕ ನೆಲೆಯಲ್ಲಿಯೂ ಒಳಿತನ್ನುಂಟು ಮಾಡಿದ ಮತ್ತು ಮಾಡಬೇಕೆಂಬ ಹಂಬಲದಿಂದ  ಬರೆದ ವಿವರಗಳಿವೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥರಾಗಿದ್ದ ಮತ್ತು ತಮಗೇ ಇದ್ದ ಆಸಕ್ತಿಯಿಂದಲೂ ಕರ್ನಾಟಕದ ಸಾಂಸ್ಕೃತಿಕ ವ್ಯಕ್ತಿಗಳ ಪರಿಚಯ ಒಡನಾಟಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇವರು ತಮ್ಮ ಆತ್ಮವೃತ್ತಾಂತವನ್ನು ಮೊದಲ ಚರಣವೆಂದು ಕರೆದಿದ್ದಾರೆ.  ಮುಂದಿನ ಚರಣಗಳಿಗಾಗಿ ಕನ್ನಡ ಓದುಗರರು ಇವರನ್ನು ಮುನ್ನೆಡೆಸಬೇಕು.  ಹಾಗೆ ಆಗಲಿ.


‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: