‘ಇದು Best Production’ ಎಂದರು ರವಿ ಬೆಳೆಗೆರೆ

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಒಂದು ದಿನ ‘ಹಾಯ್ ಬೆಂಗಳೂರು’ ಆಫೀಸಿನಿಂದ ಭಾವನಾ ಪ್ರಕಾಶನದ ಪುಸ್ತಕ ವಹಿವಾಟು ನೋಡಿಕೊಳ್ಳುವ ರವಿ ಕರೆಮಾಡಿ “ಬಾಸ್ ನಿಮ್ಮ ಜೊತೆ ಒಂದು ಬುಕ್ ಪ್ರಿಂಟಿಂಗ್ ಸಲುವಾಗಿ ಮಾತಾಡಬೇಕಂತೆ, ಮಧ್ಯಾಹ್ನ ಫ್ರೀ ಇರ್ತಾರೆ, ಬರ್ತೀರಾ?” ಎಂದು ಕರೆದರು.

ನಾನು ರವಿ ಅಣ್ಣನನ್ನು ಅನೇಕ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ದೆ, ಪರಿಚಯವು ಆಗಿತ್ತು. ಆದರೆ ಅವರ ಕಚೇರಿಗೆ ಹೋಗಿ ಹತ್ತಿರದಿಂದ ಮಾತನಾಡುವಂತಹ ಅವಕಾಶ ನನಗೆ ಸಿಕ್ಕಿರಲಿಲ್ಲ. ಬಹಳ ಸಂತೋಷದಿಂದ ಮಧ್ಯಾಹ್ನ ನನ್ನ ಅತ್ಯಂತ ಆತ್ಮೀಯ ಗೆಳೆಯ ಗೋವಿಂದರೆಡ್ಡಿ ಜೊತೆ ಪದ್ಮನಾಭನಗರದ ‘ಹಾಯ್ ಬೆಂಗಳೂರು’ ಆಫೀಸ್‍ಗೆ ಹೋದೆ.

ಅಲ್ಲಿ ಮ್ಯಾನೇಜರ್ ಉಮೇಶ್ ಹೆಗಡೆ ಅವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಅವರು ರವಿ ಅಣ್ಣನ ಕೊಠಡಿಗೆ ನಮ್ಮನ್ನು ಕರೆದೊಯ್ದರು. ಅಲ್ಲಿ ಹಾಡು ಕೇಳುತ್ತಾ ಬರೆಯುತ್ತಾ ಕೂತಿದ್ದ ರವಿ ಅಣ್ಣ ಅವರ ಮುಂದೆ ನಿಂತಾಗ ಸಾಕ್ಷಾತ್ ತಿರುಪತಿ ತಿಮ್ಮಪ್ಪನ ಮುಂದೆ ನಿಂತಷ್ಟು ಖುಷಿ? ನನ್ನನ್ನು ಅವರ ಮುಂದೆ ಕೂರಿಸಿಕೊಂಡು “ಜ್ಯೂಸ್ ಕುಡಿತಿಯೇನೋ?” ಎಂದರು.

“ಇಲ್ಲ ಅಣ್ಣ, ಈಗ ಊಟ ಆಯ್ತು ಏನೂ ಬೇಡ” ಎಂದರೂ ಒಂದು ಕಪ್ ಟೀ ತರಿಸಿಕೊಟ್ಟು, ಅಲ್ಲೇ ಇದ್ದ ನಿವೇದಿತ ಮೇಡಂ ಅವರನ್ನು ಪರಿಚಯಿಸಿ, “ಇವನದು ಯಾವ ಊರು ಕೇಳು” ಎನ್ನುತ್ತಾ ಯಶೋಮತಿ ಮೇಡಂ ಹಾಗೂ ವೀರೇಶನಿಗೂ ಪರಿಚಯಿಸಿದರು.

ಹೀಗೆ ಮಾತನಾಡುತ್ತಲೇ ಅವರ ಬಳಿ ಇದ್ದ ಒಂದು ಇಂಗ್ಲಿಷ್ ಬುಕ್ಕನ್ನು ನನ್ನ ಮುಂದೆ ಇಟ್ಟು, “ನನ್ನ ಮಹತ್ವಾಕಾಂಕ್ಷೆಯ ಒಂದು ಪುಸ್ತಕ ಇದೆ, ಅದನ್ನು ಇದೇ ರೀತಿ ಪ್ರಿಂಟ್ ಮಾಡಬೇಕು” ಎಂದರು.

“ಆ ಪುಸ್ತಕ ವಿಶೇಷ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಆತ್ಮೀಯರಿಗೆ ಕೊಟ್ಟರೆ, ತೆಗೆದುಕೊಂಡವರು ಮೊದಲ ನೋಟದಲ್ಲೇ ಅಚ್ಚರಿಯಿಂದ, ಖುಷಿ ಖುಷಿಯಾಗಿ, ಪ್ರೀತಿಯಿಂದ, ಪುಸ್ತಕವನ್ನು ಎತ್ತಿಟ್ಟುಕೊಂಡು, ಹಿಂದೆ ಮುಂದೆ ನೋಡುತ್ತಾ ತಿರುವಿ ಹಾಕುತ್ತಿರಬೇಕು. ಅವರ ಬಳಿ ಆ ಪುಸ್ತಕ ಸ್ಥಿರವಾಗಿ ಬಹುದಿನಗಳ ಕಾಲ ನಿಲ್ಲಬೇಕು. ಆದ್ದರಿಂದ ವಿಶೇಷ ಕಾಗದ, ವಿಶೇಷ ಮುದ್ರಣ, ವಿಶೇಷ ಮುಖಪುಟ, ವಿಶೇಷ ಬೈಂಡಿಂಗ್ ಹೀಗೆ ಈ ಪುಸ್ತಕದ ಎಲ್ಲವೂ ವಿಶೇಷವಾಗಿ ಇರಬೇಕು. ಈ ಪುಸ್ತಕದ ಮುದ್ರಣ ನೀನು ಮಾಡ್ತೀ ಏನೋ?” ಎಂದಾಗ, ನನಗೆ ಅವರು ಮಾಡಿದ ವರ್ಣನೆಯನ್ನು ಕೇಳಿಯೇ ಒಳಗೊಳಗೆ ಭಯ ಶುರುವಾಗಿತ್ತು.

ಅಣ್ಣ ಹೇಳುವ ರೀತಿಯ ಕಾಗದ ನಮ್ಮ ಮುದ್ರಣ ಯಂತ್ರದಲ್ಲಿ ಅಲ್ಲಿಯವರೆಗೂ ಮುದ್ರಣವೇ ಆಗಿರಲಿಲ್ಲ. ವಿಭಿನ್ನ ಅಳತೆ ಬೇರೆ, ಐದು ಸಾವಿರ ಪ್ರತಿಗಳ ಮುದ್ರಣವಾಗಬೇಕು. ಬಿಡುಗಡೆಗೆ ನೂರೋ ಇನ್ನೂರೋ ಪ್ರತಿಗಳನ್ನು ಕೊಟ್ಟು ಆಮೇಲೆ ನೋಡಿಕೊಳ್ಳೋಣ ಎನ್ನುವಂತಿಲ್ಲ..!

ರವಿ ಅಣ್ಣನ ಪುಸ್ತಕಗಳು ಮಾರುಕಟ್ಟೆಯಲ್ಲಿ ಬಿಸಿಬಿಸಿ ದೋಸೆಯಂತೆ ಬಿಕರಿಯಾಗಿ ಬಿಡುತ್ತವೆ… ಹೀಗೆ ಮನಸ್ಸಿನಲ್ಲಿ ಏನೇನೋ ಆಲೋಚನೆ. ಆದರೂ ಮನಸ್ಸಿನಲ್ಲಿ ಧೈರ್ಯ ತೆಗೆದುಕೊಂಡು, ಅಳುಕಿನ ಆದರೆ ದೃಢವಾದ ಧ್ವನಿಯಲ್ಲಿ “ನಿಮ್ಮ ನಿರೀಕ್ಷೆಗಿಂತ ಚೆನ್ನಾಗಿ ಮುದ್ರಿಸಿ ಕೊಡುವೆ” ಎಂದು ಒಪ್ಪಿಕೊಂಡುಬಿಟ್ಟೆ.

ಮಾರನೆಯ ದಿನವೇ ಯಶೋಮತಿ ಮೇಡಂ ಪುಸ್ತಕ ವಿನ್ಯಾಸದ ಸಿಡಿ ಹಿಡಿದು ನಮ್ಮ ಮುದ್ರಣಾಲಯಕ್ಕೆ ಬಂದೇ ಬಿಟ್ಟರು. ಸಿಡಿ ಓಪನ್ ಮಾಡಿ ನೋಡಿದರೆ ರವಿಯಣ್ಣನೇ ದಾಂಡೇಲಿಯ ಕಾಡಿನಲ್ಲಿ ತೆಗೆದ ಬಿದಿರು ಮೆಳೆ, ಹೂಗಳ ಚಿತ್ರಗಳನ್ನು ಬಳಸಿಕೊಂಡು, ರವಿ ಅಜ್ಜೀಪುರ ಅವರು ತುಂಬಾ ಕಲಾತ್ಮಕವಾಗಿ ಒಳಪುಟ ಹಾಗೂ ಮುಖಪುಟವನ್ನು ವಿನ್ಯಾಸಗೊಳಿಸಿದ್ದರು.

ಮೊದಲು ಎಂಟು ಪುಟಗಳ ಒಂದು ಪ್ಲೇಟ್ ಮಾಡಿಕೊಂಡು, ಅಣ್ಣ ಹೇಳಿದ ರೀತಿಯ ವಿಶೇಷ ಕಾಗದ ತರಿಸಿ, ನಮ್ಮ ಯಂತ್ರದಲ್ಲಿ ಮುದ್ರಣ ಮಾಡಿ ನೋಡಿದೆವು. ಯಾವುದೇ ತೊಂದರೆ ಇಲ್ಲದೆ ಆ ಕಾಗದದ ಮೇಲೆ ಚೆನ್ನಾಗಿ ಮುದ್ರಣವಾಗಿತ್ತು. ತಕ್ಷಣ ವಿಶೇಷ ಕಾಗದ ತರಿಸಿ ಮುದ್ರಣ ಶುರುಮಾಡಿಬಿಟ್ಟೆವು..!!

ಮುದ್ರಣ ಮುಗಿದ ಕೂಡಲೇ ಒಂದಿಪ್ಪತ್ತು ಪುಸ್ತಕಗಳನ್ನು ವಿಶೇಷವಾದ ಮುಖಪುಟದೊಂದಿಗೆ ಬೈಂಡ್ ಮಾಡಿಕೊಂಡು ಹೋಗಿ ರವಿ ಅಣ್ಣನ ಮುಂದೆ ಇಟ್ಟೆ. ಅವರು ಅಚ್ಚರಿಯಿಂದ ಪುಸ್ತಕ ಎತ್ತಿಕೊಂಡು ತಮ್ಮ ಕಣ್ಣುಗಳನ್ನು ದೊಡ್ಡವು ಮಾಡಿ ಅದರ ಹೊಳಪನ್ನು ನನ್ನ ಕಡೆ ಬೀರುತ್ತಾ “ಎಕ್ಸಲೆಂಟ್..! ನನ್ನ ನಿರೀಕ್ಷೆಗಿಂತ ಚೆನ್ನಾಗಿ ಬಂದಿದೆ. ನಾನು ಈವರೆಗೆ ಪ್ರಕಟಿಸಿದ ಎಲ್ಲಾ ಪುಸ್ತಕಗಳಿಗಿಂತ ಅದ್ಭುತವಾಗಿ ಮುದ್ರಣವಾಗಿದೆ” ಎಂಬ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

ನಾನು – “ಅಣ್ಣ ನೀವು ಹೇಳಿದ ಮಾತುಗಳನ್ನು ಒಂದು ಪುಸ್ತಕದಲ್ಲಿ ಬರೆದು ಕೊಡಿ” ಎಂದು ಕೇಳಿಕೊಂಡಾಗ ಖುಷಿಯಾಗಿ ಬರೆದುಕೊಟ್ಟರು.

ರವಿ ಅಣ್ಣನ ದೈತ್ಯ ಬರವಣಿಗೆ ಬಗ್ಗೆ ಕೇಳಿದ್ದೆ, ಓದಿದ್ದೆ. ಆದರೆ ‘ಉಡುಗೊರೆ’ ಪುಸ್ತಕ ಮುದ್ರಣ ಸಂಬಂಧ ಮಾತುಕತೆಗಾಗಿ ನಾಲ್ಕೈದು ದಿನಗಳು ರವಿ ಅಣ್ಣನೊಂದಿಗೆ ಕಳೆದಾಗ ಮೂರೇ ಮೂರು ದಿನದಲ್ಲಿ ‘ಅಮ್ಮ ಸಿಕ್ಕಿದ್ಲು’ ಕಾದಂಬರಿಯನ್ನು ಬರೆದದ್ದನ್ನು ಕಂಡು ನಾನು ಮೂಕವಿಸ್ಮಿತನಾದೆ.

ರವಿಯಣ್ಣನು ಮಾಯಾನಗರಿಯಲ್ಲಿ ಬದುಕು ಕಟ್ಟಿಕೊಂಡ ಸಾಹಸಗಾಥೆ ಎಲ್ಲ ಯುವಪೀಳಿಗೆಗೆ ಯಾವತ್ತೂ ಮಾದರಿ. ಬೆಂಗಳೂರಿನಂಥ ಮಹಾನಗರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿ, ಶ್ರೀಮಂತರ ಮಕ್ಕಳೊಂದಿಗೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟ ಹೃದಯವಂತ. ಹೊರ ಊರುಗಳಿಂದ ಬರುವ ಗ್ರಾಮೀಣ ಯುವ ಸಮೂಹವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ವಿಶೇಷ ಗುಣವಿರುವ ರವಿಯಣ್ಣ, ನಾವು ಮುದ್ರಿಸಿದ ‘ಉಡುಗೊರೆ’ ಪುಸ್ತಕದ ಬಗ್ಗೆ `ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಪ್ರಶಂಸಿಸಿ ಬರೆದರು. ಅನಂತರ ನಮ್ಮ ಮುದ್ರಣ ಸಂಸ್ಥೆಯ ಬಗ್ಗೆಯೂ ಒಂದು ಸುದೀರ್ಘ ಲೇಖನ ಪ್ರಕಟಿಸಿ ನಮ್ಮನ್ನು ಪ್ರೋತ್ಸಾಹಿಸಿದರು.. ಇವೆಲ್ಲಾ ನೆನಪಿನಲ್ಲಿ ಸದಾ ಉಳಿಯುವ ಸಂಗತಿಗಳು.

September 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: