ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುರಳಿ ಹತ್ವಾರ್ ಕವಿತೆ- ನಿನ್ನೆಗಳು…

ಮುರಳಿ ಹತ್ವಾರ್ 

ಹೀಗೆ ಕೆಲಸವಿಲ್ಲದ ಭಾನುವಾರ ಬೆಳಗ್ಗೆ
ಕನ್ನಡಿಯಲ್ಲಿ ಕಂಡ ಮುಖವೊಂದು
ತುಟಿಯೆಳೆದು ಮೀಸೆಗಂಟಿದ ಹಣ್ಣು
ಕೂದಲೊಂದನ್ನು ಮುಂದಿಟ್ಟು ಮಾತಿಗೆಳೆಯಿತು

ನೆನಪಿದೆಯೇ ನಿನಗೆ ನಾ ಮೊದಲು ಮೂಡಿದ ದಿನ?
ಅಂದು ನಿನ್ನಲ್ಲಿ ಓಡಿದ ಕನಸುಗಳ ಕ್ಷಣ?
ನೀನಂದು ಬಯಸಿದ ನಾಳೆ ಇದೇನಾ?
ಇಲ್ಲಾ, ನಾ ಸುಮ್ಮನೆ ಬೆಳೆ-ಬೆಳೆದು ಹಣ್ಣಾದೆನಾ?

ಸೇರಿಕೊಂಡವು ಇನ್ನುಳಿದ ಮುಖದ ಭಾಗಗಳು
ಕೋರಸ್ಸಿನಲ್ಲಿ ಉತ್ತರಕ್ಕೆ ಕಾಯುತ್ತಾ.
ಸುಯ್ಯೆಂದು ತೂರಿದ ಕಲ್ಲೊಂದು ಕಂಪಿಸಿದ
ಅಲೆಗಳಂತೆ ಮನಸು ಅಲ್ಲೋಲಕಲ್ಲೋಲ

ನೆನಪಿನ ಪದರ ಪದರ ಹುಡುಕಿ ಎಳೆದಷ್ಟೂ
ಬೇರೆ ಬೇರೆ ಉತ್ತರಗಳು
ಯಾವ ನಿನ್ನೆಯ ಉತ್ತರ ಸರಿ?
ಅಥವಾ, ಎಲ್ಲವೂ ಸುಳ್ಳು?

ನೆನಪುಗಳು, ಇಂದು ಬಯಸಿದಂತೆ
ಬದಲಾಗುವ ನಿನ್ನೆಗಳ ವ್ಯಾಖ್ಯಾನ
ಇಂದಿನದು ಇಂದಿಗಷ್ಟೇ ಸತ್ಯ,
ನಾಳೆಯದು, ಆ ನಾಳೆಯ ನಿನ್ನೆಗೆ!

ಅಂದು ಮೂಡಿದ ಚಿಗುರು ಮೀಸೆ
ಇಂದು ನಿನ್ನೆಗಳ ಪಾಕದಲ್ಲಿ ಮಿಂದ ಹಣ್ಣು
ಅದರ ಬಯಕೆಯ ನಿನ್ನೆಗಳು ಅದಕಿರಲಿ
ಮತ್ತೆ ಹೊಸ ನಿನ್ನೆಗಳು ಕೂಡುವವರೆಗೆ . . .

‍ಲೇಖಕರು Admin

4 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading