ಮುದಗೊಳಿಸುವ ಕತೆಗಳ ಸಂಕಲನ ʼಮಕ್ಕಳ ಹಿತೈಷಿʼ

ನಾಗರಾಜ ಎಂ ಹುಡೇದ

ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀಧರ ಗಸ್ತಿಯವರು ಪ್ರವೃತ್ತಿಯಿಂದ ಲೇಖಕ, ಕವಿ, ಗಾಯಕರಾಗಿದ್ದಾರೆ. ಇವರ ಅನೇಕ ಲೇಖನಗಳು, ಕವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಮಕ್ಕಳ ಹಿತೈಸಿ’ ಗಸ್ತಿಯವರ ಮೊದಲ ಪ್ರಕಟಿತ ಮಕ್ಕಳ ಕಥಾಸಂಕಲನವಾಗಿದೆ. ಇಲ್ಲಿಯ ಎಲ್ಲ ಕಥೆಗಳೂ ಪತ್ರಿಕೆಗಳಲ್ಲಿ ಬೆಳಕು ಕಂಡು ಎಲ್ಲರ ಮೆಚ್ಚುಗೆ ಗಳಿಸಿವೆ.

ಈ ಕೃತಿಯಲ್ಲಿ ಒ ಟ್ಟು ಇಪ್ಪತ್ಮೂರು ಕಥೆಗಳಿವೆ. ಶಾಲೆ, ಮನೆ, ಊರುಗಳಲ್ಲಿ ನಡೆದಿರುವ ವಾಸ್ತವ ಘಟನೆಗಳನ್ನು ಹದ ಬೆರೆಸಿ ಕಥೆಯಾಗಿಸಿದ್ದಾರೆ. ಓದುಗರಿಗೆ ನೀತಿ, ಪ್ರೀತಿ, ಸ್ಫೂರ್ತಿ ತುಂಬಬಲ್ಲ ಕಥೆಗಳಿವೆ.

ಕಥಾಸಂಕಲನದ ಮೊದಲ ಕಥೆ ’ಅಪ್ಪನ ಹಿರೋ ಸೈಕಲ್’ ಚಿನ್ನು ಎನ್ನುವ ಪುಟ್ಟಮಗು ತನ್ನ ಅಪ್ಪನನ್ನು ಬಹಳ ಹಚ್ಚಿಕೊಂಡಿರುತ್ತಾನೆ. ಒಮ್ಮಿಂದೊಮ್ಮೆಲೆ ಮಗುವಿನ ಮನಸ್ಸಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದು ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ನಂತರ ಮನೋತಜ್ಞರ ಸಲಹೆಯಂತೆ ಅವಳು ಇಷ್ಟ ಪಡುವ ವಸ್ತುಗಳನ್ನು ಮಗುವಿಗೆ ತಂದು ಕೊಡುತ್ತಾರೆ. ಆಗ ಸಹಜ ಸ್ಥಿತಿಗೆ ಬರುತ್ತದೆ ಎಂಬುದನ್ನು ಲೇಖಕರು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

’ಸೋತು ಗೆದ್ದ ರಶ್ಮಿ’ ಕಥೆಯಲ್ಲಿ ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೈತೊಳೆದುಕೊಳ್ಳೋದೊಂದೆ ಪಾಲಕರ ಯೋಚನೆಯಾಗಿರುತ್ತೆ. ಬಾಲ್ಯ ವಿವಾಹಕ್ಕೊಳಗಾಗಿ ದುರಂತಗಳ ಸರಮಾಲೆಗಳಿದ್ದರೂ ಅವುಗಳನ್ನೆಲ್ಲ ಮೆಟ್ಟಿನಿಂತು ಅಧಿಕಾರಿಯಾದ ರಶ್ಮಿ ನಮಗೆಲ್ಲ ಮಾದರಿಯಾಗಬಲ್ಲಳು.
’ಬೇಟಾ ಬೀಬಿಜಾನ್’ಳ ಕಥೆಯು ನಮ್ಮ ಮಧ್ಯೆಯೇ ಇರುವ ಅನೇಕ ಹುಡುಗಿಯರ ಸಮಸ್ಯೆಯೇ ಆಗಿದೆ. ಸಮಸ್ಯೆಗೊಂದು ಪರಿಹಾರ ಇದ್ದೇಇರುತ್ತದೆ. ಆ ಪ್ರಯತ್ನವನ್ನು ಬೀಬಿಜಾನ್‌ಳಂತೆ ಮಕ್ಕಳೂ ಮಾಡಬೇಕೆಂದು ಈ ಕಥೆ ಹುರುದುಂಬಿಸುತ್ತದೆ. ಹಾಗೆಯೇ ಲಾಲಿಪಪ್ ಲೈಲಾ, ಕಾಲ್ ಮೀ ೧೦೯೮, ಚಂದ್ರಿಕಾಳ ಕಿಡ್ನಾಪ್ ಇನ್ನೂ ಕೆಲವು ಕಥೆಗಳಲ್ಲಿ ಕೌಟುಂಬಿಕ ಕಲಹ, ಮೌಢ್ಯತೆ, ತಂದೆ-ತಾಯಿಗಳ ಅನಾರೋಗ್ಯ, ಬಡತನ, ದೈಹಿಕ ತೊಂದರೆಗಳು, ಅನಾಥರು ಮತ್ತು ತಿರಸ್ಕಾರಕ್ಕೊಳಗಾದ ಮಕ್ಕಳು ಅವುಗಳನ್ನು ಮೆಟ್ಟಿನಿಂತು, ಸಾಧನೆ ಮಾಡಿರುವಂತಹ ಅತ್ಯಂತ ಹೃದಯಸ್ಪರ್ಶಿ ಕಥೆಗಳನ್ನು ಶ್ರೀಧರ ಗಸ್ತಿಯವರು ಹೆಣೆದಿದ್ದಾರೆ.

ಶಿಕ್ಷಕ, ಶಿಕ್ಷಣ ನಮ್ಮೆಲ್ಲರ ಕಣ್ತೆರೆಸುವ ಪ್ರಮುಖ ಸಾಧನ ಎನ್ನುವುದು ಮಾರ್ಮಿಕವಾಗಿ ಅಭಿವ್ಯಕ್ತಪಡಿಸಿದ್ದಾರೆ. ಹಡೆದವ್ವಳ ಮಾತಿನ ಕಿರೀಟವೇ ಸ್ಪೂರ್ತಿ, ಐಕ್ಯತೆ ಮೂಡಿಸಿದ ಹೊರಸಂಚಾರ, ಪ್ರತಿಭೆ, ಕೀಟಲೆ ಮಕ್ಕಳು ಮುಂತಾದ ಕಥೆಗಳು ಗಮನ ಸೆಳೆಯುವಂತವುಗಳಾಗಿವೆ.

ಕಥೆಗಳಲ್ಲಿಯ ತಂತ್ರಗಾರಿಕೆ ಮತ್ತು ಗ್ರಾಮ್ಯ ಭಾಷೆ ಅದರಲ್ಲೂ ಮಕ್ಕಳ ಭಾಷಾ ಸೊಗಡು ಮತ್ತು ಸ್ಪಷ್ಟತೆ ಎಲ್ಲರಿಗೂ ಇಷ್ಟವಾಗುತ್ತವೆ.  ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಮೇಲಾಗಿ ಮಕ್ಕಳ ಮೇಲಿನ ಮಮಕಾರ, ಸಾಧಿಸುವ ಛಲ ಕಥೆಗಳಲ್ಲಿ ಹಾಸುಹೊಕ್ಕಾಗಿವೆ. ಒಟ್ಟಿನಲ್ಲಿ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ತಾವೂ ಈ ಕಥೆಗಳನ್ನು ಓದಿ, ತಮ್ಮ ಮಕ್ಕಳಿಗೂ ಹೇಳಬೇಕು. ಅವುಗಳಿಂದ ಸ್ಫೂರ್ತಿ ಪಡೆದರೆ ಲೇಖಕರ ಶ್ರಮ ಸಾರ್ಥಕ. ’ಮಕ್ಕಳ ಹಿತೈಷಿ’ ನಮ್ಮೆಲ್ಲರ ಹಿತೈಷಿಯಾಗುವುದರಲ್ಲಿ ಸಂದೇಹವೇ ಇಲ್ಲ.

 ಸುಂದರವಾದ ಮುಖಪುಟವಿನ್ಯಾಸ ಮಾಡಿರುವ ಶ್ರೀಧರ ಗಸ್ತಿಯವರ ಮಗ ಕಿರಣ ಗಸ್ತಿ, ಒಳಪುಟಗಳಲ್ಲಿ ಕಥೆಗಳಿಗೆ ಹೊಂದುವಂತ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಇವು ಮಕ್ಕಳ ಮನಸ್ಸನ್ನು ತಟ್ಟಬಲ್ಲವು. ಅಚ್ಚುಕಟ್ಟಾದ ಮುದ್ರಣವಿದೆ. ಹೆಸರಾಂತ ಮಕ್ಕಳ ಸಾಹಿತಿ ವೈ.ಜಿ.ಭಗವತಿಯವರು ಮುನ್ನುಡಿ ಬರೆದು ಹರಸಿ ಹಾರೈಸಿದ್ದಾರೆ. ಅವರು ಲೈಲಾ- ಲಲಿತಾಂಬೆ, ನಾಗವೇಣಿ, ವಿಶಾಲಕ್ಷ್ಮಮ್ಮ, ಸುನಿತಾ ಟೀಚರ್, ರಶ್ಮಿ, ವನಿತಾ ಮೆಡಂ, ಪ್ರತಿಭಾ, ಚಂದ್ರಿಕಾ, ರಾಜೇಶ್ವರಿ, ಬೇಬಿಜಾನ್ ಹೀಗೆ ಅನೇಕ ಬಾಲಕೀಯರ, ಮಹಿಳೆಯರ ಪಾತ್ರಗಳೇ ಈ ಕೃತಿಗೆ ಜೀವಾಳವಾಗಿವೆ. ಎಲ್ಲ ಸ್ತರಗಳ ಮಕ್ಕಳು ಈ ಕಥೆಗಳಲ್ಲಿ ಬಂದು ಹೋಗುತ್ತಾರೆ. ಬಹಳಷ್ಟು ಬಾಲಕೀಯರ ಸಂವೇದನೆಯಿರುವ ಕಥೆಗಳೇ ಈ ಕೃತಿಯ ವೀಶೇಷತೆ ಎನ್ನಬಹುದು. ಎಂದು ಮುನ್ನುಡಿಯಲ್ಲಿ ಬರೆದಿದ್ದಾರೆ.

‍ಲೇಖಕರು Admin

October 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: