ಅಮೆರಿಕದಲ್ಲಿ ವಿದ್ಯಾರ್ಥಿಯ ಪರ್ವತ ವಾಸ…

ಪಾಲಹಳ್ಳಿ ವಿಶ್ವನಾಥ್

ಭೌತವಿಜ್ನಾನದಲ್ಲಿ ಪಿ.ಎಚ್.ಡಿ ತೆಗೆದುಕೊಳ್ಳಲು ನಾನು 1968ರ ಜನವರಿಯಲ್ಲಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದ ಆನ್ ಆರ್ಬರ್ ನಗರಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಶುರುಮಾಡಿದೆ. ಇದಕ್ಕೆ ಮೊದಲು ಮುಂಬಯಿಯ ಟಾಟಾ ಮೂಲಭೂತ ಸಂಸ್ಥೆಯಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದರಿಒಂದ ನನಗೆ ಮಿಶಿಗನಿ ನಲ್ಲೂ ಸಂಶೋಧನಾ ಸಹಾಯಕನ ಕೆಲಸ ಸಿಕ್ಕಿ ( ತಿಂಗಳಿಗೆ 300 ಡಾಲರು ಸಂಬಳ ) ದ್ದು ಜೀವನೋಪಾಯಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ಸಹಾಯವಾಯಿತು. ವಿದ್ಯಾಭ್ಯಾಸವೆಂದರೆ ಅಂದರೆ ಕೋರ್ಸಗಳನ್ನು ತೆಗೆದುಕೊಳ್ಳುವುದು : ಕ್ಲಾಸಿಗೆ ಹೋಗಿ ಪಾಠಗಳನ್ನು ಕೇಳಿಸಿಕೊಂಡು ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲು ಪ್ರಯತ್ನಿಸುವುದು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಒಂದು ಸೆಮೆಸ್ಟರಿಗೆ ( ~ 4 ತಿಂಗಳುಗಳು) 3-4 ಕೋರ್ಸ ತೆಗೆದುಕೊಳ್ಳುತ್ತಿದ್ದರು. ನಾನು ಸೇರಿದ ಕೆಲವು ದಿನಗಳನಂತರ ನನ್ನ ಮಾರ್ಗದರ್ಶಿ (ಗೈಡ್) ಕರೆದು ‘ನಮ್ಮ ಪ್ರಯೋಗ ನಡೆಯುತ್ತಿರುವುದು ಕೊಲರಾಡೊನಲ್ಲಿ . ನೀನು ಆಗಾಗ್ಗೆ ಅಲ್ಲಿಗೆ ಹೋಗಲು ಇಷ್ಟಪಡಬಹುದು “ ಎಂದರು. ನನಗೆ ಆಶ್ಛರ್ಯವಾಯಿತು. ‘ ಕೋರ್ಸ್ಗಳು ನಡೆಯುತ್ತಿರುತ್ತಲ್ಲಾ” ಎಂದು ಪ್ರಶ್ನಿಸಿದಾಗ “ ಸೋ .. ಅದು ನಿನ್ನ್ನ ವೈಯುಕ್ತಿಕ ವಿಷಯ. ಓದಿನಲ್ಲಿ  ಸ್ವಲ್ಪ ಹೆಚ್ಚು ಶ್ರಮ ಪಡಬೇಕಾಗಬಹುದು .ಅಷ್ಟೇ … ‘ ಎಂದು ಹೇಳಿ ಹೊರಟುಹೋದರು. ಅವರು ಯಾವಾಗಲೂ ‘ ನೀನು ಮಾಡಲು ಇಷ್ಟಪಡಬಹುದು ( ಯು ಮೇ ಲೈಕ್ ಟು ಡೂ ಇಟ್’)’ ಎಂದು ಹೇಳುತ್ತಿದ್ದರು. ನಾನು ಮೊದಲು ಒಂದೆರಡುಬಾರಿ ಅಪಾರ್ಥ ಮಾಡಿಕೊಂಡಿದ್ದೆ; ನನಗೆ ಅದು ಇಷ್ಟವಿಲ್ಲ ಎಂದು ಮಾಡಲಿಲ್ಲ. ಆದರೆ ಅದರ ನಿಜ ಅರ್ಥ ‘ ನೀನು ಇದನ್ನು ಮಾಡಲೇಬೇಕು ‘ ಎಂದು ಅರಿವಾಯಿತು! 

  ಒಂದು ಕಣ ಇನ್ನೊಂದು ಕಣವನ್ನು ತಾಡಿಸಿದಾಗ ಏನಾಗುತ್ತದೆ ಎಂಬುದು ನಮ್ಮ ಗುಂಪಿನ ಸಂಶೋಧನೆಯ ಉದ್ದೇಶವಾಗಿತ್ತು. ಕಣ ಎಂದರೆ ಎಲೆಕ್ಟ್ರಾನ್, ಪ್ರೋಟಾನ್ ಇತ್ಯಾಧಿ ಕಣಗಳು ( ನಾನು 10 ವರ್ಷಗಳ ಹಿಂದೆ ಬರೆದಿದ್ದ ‘ ಕಣ ಕಣ ದೇವಕಣ’ ಪುಸ್ತಕದ ಶೀರ್ಷಿಕೆಯನ್ನು ನೋಡಿದ ಒಬ್ಬ ಸಾಹಿತಿ ತಮಾಷೆಗೋ ಏನೋ ‘ ರವಿಕೆ ಕಣವಾ?’ ಎಂದು ಕೇಳಿದ್ದರು !) ಕಣಗಳಿಗೆ ಎಲ್ಲಿ ಹೋಗೋಣ ಆದಷ್ಟೂ ಮೇಲೆ ಹೊದರೆ ಹೆಚ್ಚು ಕಣಗಳನ್ನು ಹಿಡಿಯಬಹುದು. ಆದ್ದರಿಂದ ಪರ್ವತ ಪ್ರದೇಶಗಳಲ್ಲಿ ಈ ಪ್ರಯೋಗಳನ್ನು ನಡೆಸುತ್ತಾರೆ. ಭಾರತದಲ್ಲೂ ಊಟಿಯಂತಹ ಎತ್ತರದ ಸ್ಥಳದಲ್ಲಿ ಈ ಫ್ರಯೋಗಗಳು ನಡೆದವು.  ಅಮೆರಿಕದ ಪಶ್ಚಿಮದ ಕೊಲರಾಡೊ ಪ್ರಾಂತ್ಯದಲ್ಲಿ ಅನೇಕ ಪರ್ವತ ಪ್ರದೇಶಗಳಿದ್ದು ( ಇಡೀ ಪ್ರಾಂತ್ಯದ ಸರಾಸರಿ ಎತ್ತರ 3000 ಅಡಿಗಳು) ಬಹಳ ಹಿಂದೆಯೇ ~10500 ಅಡಿಗಳು ಎತ್ತರದಲ್ಲಿದ್ದ ‘ ಎಕೋ ಲೇಕ್ ‘ ಎಂಬ ಸರೋವರದ ಹತ್ತಿರ ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿದ್ದರು. ಭೌತವಿಜ್ನಾನದ ಹಲವಾರು ಮುಖ್ಯ ಪ್ರಯೋಗಗಳು ಅಲ್ಲಿಯೇ ನಡೆದಿದ್ದವು. ಎಕೊ ಲೇಕ್ ಎತ್ತರ ಸುಮಾರು ಲಡಾಕಿನ ಲೇಹ್ ನಗರದಷ್ಟೇ ! ಎಕೊ ಲೇಕಿನ ಬಳಿ ಬೇಕಾದಷ್ಟು ಪೈನ್ ಮರಗಳಿದ್ದವು; ಒಟ್ಟಿನಲ್ಲಿ ಬಹಳ ಹಸಿರು ಪ್ರದೇಶ. ಆದರೆ ಲೇಹ್ ಬೋಡು ! ಎತ್ತರಕ್ಕೆ ಹೋದಂತೆ ಸಸ್ಯಗಳು ಕಡಿಮೆಯಾಗುವುದಕ್ಕೆ (‘ಟ್ರೀಲೈನ್’) ಸ್ಥಳೀಯ ಹವವೇ ಮುಖ್ಯ ಕಾರಣವೆಂದು ಹೇಳುತ್ತಾರೆ. ಎಕೊಲೇಕಿನಿಂದ ಇನ್ನೂ ಮೇಲೆ ಹೋದಲ್ಲಿ ಉತ್ತರ ಅಮೆರಿಕ ಖಂಡದ ಉನ್ನತ ಶಿಖರಗಳಲ್ಲಿ ಒಂದಾದ ಎವನ್ಸ ಪರ್ವತ (14500 ಅಡಿ) ಸಿಗುತ್ತದೆ. ಅಲ್ಲೂ ಹಿಂದೆ ಹಲವಾರು ವಿಶ್ವಕಿರಣಗಳ ಪ್ರಯೋಗಗಳು ನಡೆದಿದ್ದವು.


ಚಿತ್ರ: ಎಕೋಲೇಕ್ ಸರೋವರ ಮತ್ತು ಮೌಂಟ್ ಎವನ್ಸ ಪರ್ವತ 

ಎಕೋ ಲೇಕಿನಲ್ಲಿ ರಸ್ತೆಗೆ 5 ನಿಮಿಷ ದೂರದಲ್ಲಿ ಒಂದು ಲಾಗ್ ಕ್ಯಾಬಿನ್ (ಮರದ ತುಂಡುಗಳಿಂದ ಕಟ್ಟಿದ ಮನೆ) ಇದ್ದಿತು. ಅದರಲ್ಲೇ ಪುಟ್ಟ ಪುಟ್ಟ ಕೋಣೆಗಳಲ್ಲಿ ವಾಸ; ಅಲ್ಲೇ ವರ್ಕ್ ಶಾಪ್ ಇತ್ಯಾದಿ. ಹತ್ತು ನಿಮಿಷಗಳ ದೂರದಲ್ಲಿ ಮತ್ತೊಂದು ಕಟ್ಟಡ;ಹಿಂದೆ ಎನಾಗಿತ್ತೋ, ಈಗಂತೂ ಹೊಟೇಲು; ಇದು ಬರೇ ಬೇಸಿಗೆಯಲ್ಲಿ ಕೆಲಸ ಮಾಡುತ್ತಿತ್ತು. ಒಟ್ಟಿನಲ್ಲಿ 20-30 ಕಿಮೀ ಚದುರ ಕಿಮೀ ವಿಸ್ತೀರ್ಣದಲ್ಲಿ ಬೇರೆ ಯಾವ ವಾಸಸ್ಥಾನವೂ ಇರಲಿಲ್ಲ. ಆದರೆ ಎಕೋಲೇಕಿಗೆ ಬರುವುದು ಹೇಗೆ? 

  ಕೊಲೊರಾಡೊವಿನ  ದೊಡ್ಡ ಊರು ‘ಮೈಲ್ ಹೈ ಸಿಟಿ’ ಎಂದು ಹೆಸರು ಗಳಿಸಿದ್ದ  ~5000 ಅಡಿ ಎತ್ತರದಲ್ಲಿದ್ದ ಡೆನ್ವರ್ ನಗರ.  3 ದಶಕಗಳ ನಂತರ ನಾನು ಅಲ್ಲಿಗೆ ಹೋಗಿದ್ದರೆ ಅಲ್ಲಿ ಸ್ವಲ್ಪ ಕಾಲ ನೆಲಸಿದ್ದ ಮಾಧುರಿ ದೀಕ್ಷಿತ್ ರನ್ನು ಸಂಧಿಸಬಹುದಿತ್ತೋ ಏನೋ! ಆನ ಆರ್ಬರಿನಿಂದ ಡೆನ್ವರ್ ~2000 ಕಿಮೀ (~ ಬೆಂಗಳೂರು-ದೆಹಲಿ) ದೂರ. ಮೊದಲು 65 ಕಿಮೀ ದೂರದಲ್ಲಿದ್ದ ಡೆಟ್ರಾಯಿಟ್ ನ ವಿಮಾನ ನಿದಾಣಕ್ಕೆ ಹೋಗಬೇಕಿತ್ತು.ಅಲ್ಲಿಂದ ಶಿಕಾಗೋಗೆ ಹೋಗಿ (ಒಂದು ಗಂಟೆಯ ಪ್ರಯಾಣ) ಅಲ್ಲಿಂದ ಇನ್ನೊಂದು ವಿಮಾನ ಹಿಡಿಯಬೇಕಿತ್ತು. ರಾತ್ರಿಯಲ್ಲಿ ಪ್ರಯಾಣ ಮಾಡಲು ಚಿಕ್ಕವರು ಮುಂದೆ ಬರಬೇಕು ಎಂದು ಹಿರಿಯರು ಸುಳುವು ಕೊಟ್ಟು ‘ಸಾಹಸ ಜೀವನ’ ಎಂದು  

  

ಚಿತ್ರ 2 :ನಮ್ಮ ಡಾರ್ಮಿಟೊರಿ – ವಾಸ, ವರ್ಕಶಾಪ್ ಎಲ್ಲಾ ಅಲ್ಲೇ  

ಹುರಿದುಂಬಿಸುತ್ತಿದ್ದರು. ‘ಸಾಹಸ’ ಎಂಬ ಪದಕ್ಕೆ ಮಾರು ಹೋಗಿ ಮೊದಲ ಕೆಲವು ಬಾರಿ ವಿದ್ಯಾರ್ಥಿಗಳು ಕೂಡ ಖುಷಿಯಿಂದ ಮುಂದೆ ಬರುತ್ತಿದ್ದರು: ಆದರೆ ಹಿರಿಯ ವಿಜ್ನಾನಿಗಳು ಮಾತ್ರ ಈ ಸಾಹಸ ಜೀವನದಿಂದ ದೂರವಿರುತ್ತಿದ್ದರು. ಬಹಳ ಸಮಯದ ಮೇಲೆ ರಾತ್ರಿಯಲ್ಲಿ ವಿಮಾನದರಗಳು ಕಡಿಮೆ ಎಂದು ನಮಗೆ ತಿಳಿಯಿತು !

  ಆಗಿನ ಕಾಲದಲ್ಲಿ ಶಿಕಾಗೋ ಪ್ರಪಂಚದಲ್ಲೆಲ್ಲಾ ಬಹಳ ಬ್ಯುಸಿ ಮತ್ತು ದೊಡ್ಡ ವಿಮಾನ ನಿಲ್ದಾ ಣವಾಗಿದ್ದು . ರಾತ್ರಿಯೂ ಬೇಕಾದಷ್ಟು ಯಾತ್ರಿಗಳು ಓಡಾಡುತ್ತಿದ್ದರು. ಆದ್ದರಿಂದ,ಅಲ್ಲಿ ಇಲ್ಲಿ ಓಡಾಡುತ್ತಾ ಅವರಿವರನ್ನು ನೋಡುತ್ತಾ 3-4 ಗಂಟೆಗಳನ್ನು ಕಳೆಯುವುದು ಕಷ್ಟವೇನಿರಲಿಲ್ಲ. ಅಲ್ಲಿಂದ ಡೆನ್ವರ್ 2 ಗಂಟೆಯ ಪ್ರಯಾಣ. ಅಲ್ಲಿ ಸೇರುವಾಗ ~ 5 ಗಂಟೆ. ಏನೇ ಮಾಡಿದರೂ ನಿದ್ರೆ ಆವರಿಸುತ್ತಿದ್ದರಿಂದ ಅಲ್ಲೇ ಯಾವುದಾದರೂ ಕುರ್ಚಿಯ ಮೆಲೆ ಕುಳಿತು 2-3 ಗಂಟೆ ನಿದ್ರೆ ಮಾಡುತ್ತಿದ್ದೆವು.. 

  ಡೆನ್ವರಿನಿಂದ ಎಕೊಲೇಕ್ 55 ಮೈಲಿ ದೂರ. ಡೆನ್ನರಿನಲ್ಲಿ ಇಳಿದಾಗ ಕೆಲವು ವಿಜ್ನಾನಿಗಳು ಯಾವುದಾದೂ ಕಾರನ್ನು (ಏವಿಸ್ , ಹರ್ಟಸ್ , ಬಡ್ಜೆಟ್,ಇತ್ಯಾದಿ) ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅವರೆಲ್ಲಾ ಬರುತ್ತಿದ್ದದ್ದು 3-4 ದಿನಗಳಿಗೆ ಮಾತ್ರ; ವಾಪಸ್ಸು ಹೋಗುತ್ತ ಕಾರನ್ನು ವಿಮಾನನಿಲ್ದಾಣದಲ್ಲಿ ಕೊಟ್ಟು ಹೋಗುತ್ತಿದ್ದರು. ಜಾಸ್ತಿ ಸಮಯ ಕೆಲಸಮಾಡಲು ಹೋಗುತ್ತಿದ್ದ ನನ್ನ0ತಹ ವಿದ್ಯಾರ್ಥಿಗಳು ಬಸ್ ಹತ್ತುತ್ತಿದ್ದೆವು; ಕೆಲವು ಬಾರಿ ಏನಕ್ಕಾದರೂ ಡೆನ್ವರಿಗೆ ಬಂದಿದ್ದ ಉಸ್ತುವಾರಿ ವ್ಯಕ್ತಿ ರಾಲ್ಫ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅವರೇ ಮೊದಲ ಬಾರಿ 1968ರಲ್ಲಿ ನನ್ನನ್ನು ಡೆನ್ವರ್ ವಿಮಾನನಿಲ್ಧಾಣದಲ್ಲಿ ನೋಡಿದ್ದು. ನನ್ನನ್ನ್ನು ಹೇಗೆ ಗುರುತಿಸುವುದು ಎಂದು ಅವರು ಕೇಳಿದಾಗ “ 5 ಅಡಿ ಉದ್ದ, 5 ಅಡಿ ಅಗಲ ಇರುವ ವ್ಯಕ್ತಿಗೆ ಹುಡುಕಿ ‘ ಎಂದು ಉತ್ತರ ಬಂದಿದ್ದಂತೆ!. ಡೆನ್ವರಿನಿಂದ ಐ70 ಎಂಬ ಹೆದ್ದಾರಿಯಲ್ಲಿ ನಾವು ಪಶ್ಚಿಮಕ್ಕೆ ಹೋಗಬೇಕಿತ್ತು 

  ಎಕೊಲೇಕಿಗೆ ಹೋಗುವ ಮೊದಲು ಐಡಾಹೊ ಸ್ಪ್ರಿಂಗ್ಸ್ಎಂಬ ಪುಟ್ಟ ಊರು ( ಎತ್ತರ ~ 2300 ಮೀ/7500 ಅಡಿ) ಸಿಗುತ್ತದೆ. ಅದು ಪರ್ವತಕ್ಕೆ  ಹೋಗುವವರಿಗೆ ಮೊದಲ ಹಂತದ ( ಬೇಸ್ ಕ್ಯಾಂಪ್) ತರಹ . ಅಲ್ಲಿಯೇ ನಾವು ಆಹಾರ ಸಾಮಗ್ರಿಗಳನ್ನು ಖರೀದಿಮಾಡಿ ಮೇಲೆ ತೆಗೆದುಕೊಂಡು ಹೋಗಬೇಕು. ಮಧ್ಯೆ ಬೇರೆ ಯಾವ ಮನೆಯೂ ಇಲ್ಲ,ಅಂಗಡಿಯೂ ಇರಲಿಲ್ಲ.ನನ್ನಂತಹ ಹೆಚ್ಚು ಸಮಯ ಕಳೆಯಬೇಕಾದವರು 2-3 ವಾರಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಕೆಲವರು ಸರಿಯಾಗಿ ಯೋಜನೆ ಮಾಡುತ್ತಿರಲಿಲ್ಲ ; ಅಥವಾ ಯಾವುದೋ ತರಹದ ಸೋಮಾರಿತನ. ಆಗಾಗ್ಗೆ ಅಡುಗೆಮನೆಯಿಂದ ನಾವು ತಂದಿದ್ದ ವಸ್ತುಗಳು ಮಾಯವಾಗುತ್ತಿದ್ದವು !  

  ಐಡಾಹೊ ಸ್ಪ್ರಿಂಗ್ಸ ನಿಂದ  ಎಕೊಲೇಕ್ 20ಕಿಮೀ; ಪರ್ವತ ರಸ್ತೆಗಳಾದ್ದರಿಂದ ಒಂದು ಗಂಟೆಯಾದರೂ ಬೇಕಾಗಿತ್ತು.  ಬಯಲು ಪ್ರದೇಶಗಳಿಂಳಿದ ಎಕೊಲೇಕಿನಂತಹ ಪರ್ವತ ಪ್ರದೇಶಗಳಿಗೆ  ಹೋಗವವರಲ್ಲಿ  ಕೆಲವರಿಗೆ ಆ ಎತ್ತರ ತಡೆಯುತ್ತಿರಲಿಲ್ಲ. ಆಕ್ಸಿಜೆನ್ ಕಡಿಮೆಯಾದ್ದರಿಂದ ( ಸಮುದ್ರ ತೀರದ ಮೌಲ್ಯಕ್ಕಿಂತ ~ 60 % ) ಉಸಿರಾಡುವುದು ಕಷ್ಟವಾಗುತ್ತಿತ್ತು. .ಅಂತಹವರು ಎಕೋಲೇಕಿಗೆ ಬಂದರೆ ಮಾರನೆಯ ದಿನವೇ ವಾಪಸ್ಸು ಹೋಗುತ್ತಿದ್ದರು. ( ನಾನು ಲಡಾಖಿನ (2002-2011) ಲೇನಲ್ಲಿ ಕೆಲಸ ಮಾಡುತ್ತಿದ್ದಾಗ ದೇಹಕ್ಕೆ ಕಡಿಮೆ ಆಕ್ಸಿಜೆನ್ ಅಭ್ಯಾಸವಾಗಲಿ ಎಂದು ಮೊದಲ ಎರಡು ದಿನಗಳು ಏನೂ ಮಾಡದೆ ಮಲಗಿರುತ್ತಿದ್ದೆವು. ಇದರ ಬಗ್ಗೆ ನಾನು ಅನೇಕ ವರ್ಷಗಳ ನಂತರ  ಅಮೆರಿಕದ ನಮ್ಮ ಪ್ರೊಫೆಸರನ್ನು ಕೇಳಿದಾಗ “ ಸ್ವಲ್ಪ ಯೋಚಿಸಿದ್ದೆವು. ಆದರೆ ಅದರ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇರಲಿಲ್ಲ” ಎಂದರು. ಏನೇ ಇರಲಿ, ಚಿಕ್ಕವರಾಗಿದ್ದು ನಮಗೆ ಎತ್ತರ ತಟ್ಟಲಿ99ಲ್ಲವೋ ಏನೋ ) . ಅಲ್ಲಿ ಎಲ್ಲಕ್ಕಿಂತ ಮುಖ್ವವಾದದ್ದು ಪ್ರಯೋಗವನ್ನು ನಡೆಸಿಕೊಂಡು ಹೋಗುವುದಾದರೂ ಕೆಲವರು ಬೇರೆ ಬೇರೆ ಹವ್ಯಾಸವನ್ನೂ ಇಟ್ಟುಕೊಂಡಿದ್ದರು. ಮೊದಲನೆಯದು ‘ ಸ್ಕೀ” (ski) ಮಾಡುವುದು. ಸುಮಾರು ಹತ್ತಿರದಲ್ಲೆ ಉತ್ತಮ ಸ್ಕೀ ಜಾಗಗಳಿದ್ದವು. ಕೆಲವು ವಿಜ್ನಾನಿಗಳು ಸ್ಕೀ ಮಾಡಲೆಂದೇ ಬಂದು ಹೋಗುತ್ತಿದ್ದರೆಂದು ಗಾಳಿಸುದ್ದಿಯೂ ಇದ್ದಿತು. ನಾನು ಸ್ಕೀ ಕಲಿಯಲಿಲ್ಲ ಎನ್ನುವುದು ನನ್ನ ಹಲವಾರು ಪಶ್ಚಾತ್ತಾಪಗಳಲ್ಲಿ ಒಂದು. ನಾಯಿಕೊಡೆಗಳಿಗೆ ಹುಡುಕುವುದು ಮತ್ತೊಂದು ಹವ್ಯಾಸವಾಗಿತ್ತು. ಕೆಲವರು ಅಲ್ಲಿ ಇಲ್ಲಿ ಓಡಾಡಿ ವಿವಿಧ ಆಕಾರದ ವಿವಿಧ ಬಣ್ಣಗಳ ನಾಯಿಕೊಡೆಗಳನ್ನು ತರುತ್ತಿದ್ದರು. ಕೆಲವಂತೂ ಬಹಳ ಸುಂದರವಾಗಿದ್ದವು. ಆದರೆ ಅವುಗಳಲ್ಲಿ ಕೆಲವು ವಿಷ ಎಂದು ಬಿಸಾಕುತ್ತಿದ್ದರು ಕೂಡ. ನಾನು ಅಲ್ಲಿಗೆ ಹೋದ ಮಾರನೆಯ ದಿನವೇ ಉಸ್ತುವಾರಿ ವ್ಯಕ್ತಿ ರಾಲ್ಫ ಬೆಳಿಗ್ಗೆಯೇ ಯಾರಿಗೋ ನಿನ್ನೆ ರಾತ್ರಿ ಕರಡಿ ಬಂದು ಹೋಯಿತು ಎಂದು ಹೇಳುತ್ತಿದ್ದರು. ಇಂಡಿಯದಿಂದ ಬಂದದ್ದು ಇದಕ್ಕಾ ಎಂದು ಒಂದು ನಿಮಿಷ ಅಂದುಕೊಂಡೆ. ಹೆದರಿದಂತೆ ಕಂಡ ನನ್ನನ್ನು “ ಚಿಂತೆ ಬೇಡ. ವಾರಕ್ಕೆ ಒಂದೆರಡುಬಾರಿ ಬರುತ್ತವೆ. ಕಸದ ಡಬ್ಬವನ್ನು ಉರುಳಾಡಿಸಿ ಸಿಕ್ಕಿದ್ದನ್ನು ತಿಂದುಕೊಂಡು ಹೋಗುತ್ತವೆ. ಅಷ್ಟೆ .ರಾತ್ರಿ ಹೊರಗೆ ಓಡಾಡಬೇಡ” ಎಂದು ಸಮಾಧಾನ ಪಡಿಸಿದರು !

  ಕೆಲವು ಬಾರಿ ಹಲವಾರು ವಿಜ್ನಾನಿಗಳು ಅಲ್ಲಿ ಒಟ್ಟಿಗೆ ನೆರೆದಾಗ ಪ್ರಯೋಗದ ಬಗ್ಗೆ ಚರ್ಚೆಗಳು ಇರುತ್ತಿದ್ದವು. ಆಡಳಿತಕ್ಕೆ ಸಂಬಧ ಪಟ್ಟ ಚರ್ಚೆಗಳಿಗೆ ವಿದ್ಯಾರ್ಥಿಗಳನ್ನು ಕರೆಯುತ್ತಿರಲಿಲ್ಲ. ಆದರೆ ವಿಜ್ನಾನದ ಷರ್ಚೆಗಳಲ್ಲಿ ಎಲ್ಲರೂ ಇರುತ್ತಿದ್ದೆವು. ವಿರಾಮದ ಸಮಯದಲ್ಲಿ, ಅಥವಾ ಪ್ರಯೋಗದಲ್ಲಿ ಉಪಕರಣಗಳೆಲ್ಲಾ ಸಹಕರಿಸುತ್ತಿದ್ದಾಗ , ಬೇರೆಯ ಚರ್ಚೆಗಳೂ ಇರುತ್ತಿದ್ದವು. ಅದು ಅಮೆರಿಕದ ಜೀವನದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿದ್ದ ಸಮಯ; ಸ್ವಲ್ಪ ಅಲ್ಲೋಲಕಲ್ಲೋಲ ಸಮಯವೆಂದೂ ಹೇಳಬಹುದು. ಬೇರೆ ಜೀವನ ಶೈಲಿಗಳತ್ತ ಯುವಜನತೆ ನೋಡಲು ಶುರು ಮಾಡಿತ್ತು. . ಕಾಲೇಜು ಕ್ಯಾಂಪಸುಗಳಲ್ಲಿ ಹಿಪ್ಪಿಗಳೂ ಹೆಚ್ಚಾಗುತ್ತಿದ್ದರು. ಸ್ತ್ರೀವಾದವೂ ಮೇಲೇಳುತ್ತಿತ್ತು.

ಚಿತ್ರ 3: ನಮ್ಮ ಲ್ಯಾಬ್ : ಶೆಡ್ಡಿನಲ್ಲಿ ಉಪಕರಣಗಳು ಮತ್ತು
ಪಕ್ಕದ ಟ್ರೈಲರಿನಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳು 

ಆದರೆ ಬಿಳಿ-ಕಪ್ಪು ಜನರ   ಘರ್ಷಣೆಗಳು ಇದ್ದೇ ಇದ್ದವು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅನೇಕರು, ಅದೂ ವಿದ್ಯಾರ್ಥಿಗಳು, ವಿಯಟ್ನಾಮಿನಲ್ಲಿ ಅಮೆರಿಕದ ಯೋಜನೆಗಳನ್ನು ವಿರೋಧಿಸುತ್ತಿದ್ದರು. ಸಾಮಾನ್ಯವಾಗಿ ಭೌತವಿಜ್ನಾನಿಗಳು ಉದಾರವಾದಿಗಳಾಗಿದ್ದು ವಿಯಟ್ನಾಮ್ ಬಗ್ಗೆ ಸರ್ಕಾರದ ಟೀಕೆ ಬಹಳವೇ ಇರುತ್ತಿತ್ತು, ಈ ವಿಷಯಗಳ ಬಗ್ಗೆ ಹೊರಬನಾದ ನನಗೆ ಹೆಚ್ಚು ಮಾಹಿತಿಯೂ ಸಿಕ್ಕಿ ಆಸಕ್ತಿಯೂ ಹೆಚ್ಚಾಯಿತು. ಸಾಮಾನ್ಯವಾಗಿ ವಿದ್ಯಾರ್ಥಿಗಳನ್ನು ರಾತ್ರಿ ಕೆಲಸಕ್ಕೆ ಹಚ್ಚುತ್ತಿದ್ದರು. ಅದಕ್ಕೆ ಗ್ರೇವ್ ಯಾರ್ಡ ಶಿಫ್ಟ ( ‘ ರಾತ್ರಿ ಸ್ಮಶಾನ ಕಾಯುವ ಸಮಯ’ ) ಎಂದು ಕರೆಯುತ್ತಿದ್ದರು. ಬೆಳಗಿನ ಹೊತ್ತು ಬೇರೆ ವಿಷಯಗಳಿಗೆ ಗಮನ ಕೊಡಬಹುದಾದ್ದರಿಂದ ಒಂದು ರೀತಿಯಲ್ಲಿ ನಮಗೆ ಇದು ಚೆನ್ನಾಗಿಯೆ ಇದ್ದಿತು. ಮೂಂದೆ ನಾನು ಖಗೋಳ ವಿಜ್ನಾನಿಯಾದಾಗ ರಾತ್ರಿಯೆಲ್ಲಾ ಎದ್ದಿರಲು ಇದು ಒಂದು ತರಹದ ತರಬೇತಿಯೂ ಆಯಿತು. 

ಚಿತ್ರ 4: ಎಕೊಲೇಕ್ ಬಳಿಯ ಪರ್ವತ ರಸ್ತೆ 

1969. ಮೇ ತಿಂಗಳು. ಸಾಮಾನ್ಯವಾಗಿ ಹಿಮ ಕಡಿಮೆಯಾಗುವ ತಿಂಗಳು. ಆದರೆ ಆ ಮೇ ತಿಂಗಳಿನಲ್ಲಿ ಹಿಮ ಒಂದೇ ಸಮ ಸುರಿಯಿತು. ಮೊದಲು ವಿದ್ಯುತ್ ಸಂಪರ್ಕ ಕಡಿದು ಹೋಯಿತು. ನಂತರ ಟೆಲೆಫೋನ್ ಸಂಪರ್ಕವೂ ಹೋಯಿ ತು.. ವಿದ್ಯುತ್ಛಕ್ತಿ  ಇಲ್ಲದಿದ್ದರಿಂದ ಮನೆಯ ಶಾಖ ಕಡಿಮೆಯಾಗತೊಡಗಿ ಒಳಗಡೆಯೂ ನಾವು ನಡುಗಲಾರಂಭಿಸಿದೆವು.ನೀರನ್ನು ಪಂಪ್ ಮಾಡಲೂ ಅಗದಿದ್ದರಿಂದ ಕುಡಿಯುವ ನೀರಿಗೆ ತೊಂದರೆ ಬಂದಿತು. ಸದ್ಯ , ಗ್ಯಾಸ್ ಸ್ಟೋವ್ ಕೆಲಸ ಮಾಡುತ್ತಿದ್ದರಿಂದ ಹಿಮವನ್ನು ಕಾಯಿಸಿ ನೀರು ಮಾಡಿಕೊಂಡೆವು. ದೈನಿಕ ಸ್ನಾನವನ್ನು ಮುಂದೂಡಿದೆವು. ಇದ್ದವರು ಮೂರು ಜನ – ಜಾನ್ ಲರ್ನೆಡ ಮತ್ತು ಎರಿಕ್ಸನ ಎಂಬ ವಿಜ್ನಾನಿಗಳು, ವಿದ್ಯಾರ್ಥಿ ನಾನು . ಉಸ್ತುವಾರಿಯಾಗಿದ್ದ (ಕೇರ ಟೇಕರ್) ರಾಲ್ಫ್ ಸ್ವಲ್ಪ ದೂರದ ಟ್ರೈಲರಿನಲ್ಲಿದ್ದರು ಎಲ್ಲರೂ ಬೆವರಿನ ವಾಸನೆಯನ್ನು ಹೊರಸುಸುತ್ತಿದ್ದರಿಂದ ಯಾರೂ ಇನ್ನೊಬ್ಬರ ಹತ್ತಿರ ಹೋಗುತ್ತಿರಲಿಲ್ಲ. ನಮ್ಮ ಮಿಶಿಗನ್ ಪ್ರೊಫೆಸರು ಹ್ಯಾಮ್ ರೇಡಿಯೊ ಮೂಲಕ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಂಡರು. ಎಲ್ಲರೂ ಸುಸ್ತಾಗಿಬಿಟ್ಟಿದ್ದೆವು. ಸಾಮಾನ್ಯವಾಗಿ ಸೌಮ್ಯದಿಂದ ಇರುತ್ತಿದ್ದ ಕೆನ್ ಕೂಡ ಕಂಡಕಂಡಿದ್ದಕ್ಕೆ ಇಂಗ್ಲಿಷಿನ ನಾಲ್ಕು ಅಕ್ಷರಗಳ ಪದವನ್ನು ಬಳಸಿಕೊಂಡು ರೇಗುತ್ತಿದ್ದರು. ಹೇಗೋ 4-5 ದಿನ ಕಳೆದ ನಂತರ ಹಿಮ ನಿಂತು ಕಡೆಗೂ ಸೂರ್ಯ ಹೊರಬಂದ. ಆದರೆ ಹಿಮದಿಂದ ಪ್ರತಿಫಲಿಸುತ್ತಿದ್ದ ಬಿಸಿಲು ಕಣ್ಣಿಗೆ ಹೊಡೆಯುತ್ತಿತ್ತು. ಈಗ ಎಲ್ಲರಿಗೂ ಪ್ರಶ್ನೆ ಹುಟ್ಟಿತು. ಎಷ್ಟು ಹಿಮಪಾತ ವಾಯಿತು? ಒಬ್ಬೊಬ್ಬರು ಒಂದೊಂದು ಸಂಖ್ಯೆಯನ್ನು ಹೇಳಿದರು. ಆದರೆ ಪ್ರಾಯೋಗಿಕ ವಿಜ್ನಾನಿಗಳಲ್ಲವೆ ? ಒಂದು ಹಳ್ಳ ತೋಡಿಬಿಡೋಣ ಎಂಬ ಸಲಹೆ ಎಲ್ಲ ಕಡೆಯಿಂದಲೂ ಬಂದಿತು. ಸರಿ, ನಮ್ಮೆಲ್ಲರ ಶ್ರಮದಾನದಿಂದ  ಲ್ಯಾಬಿನ ಪಕ್ಕವೇ ಹಳ್ಳ ತೋಡಿಯಾಯಿತು. ಆದರೆ ಅಳತೆ? ಅಷ್ಟು ಉದ್ದದ ಇಂಚುಪಟ್ಟಿ ಇರಲಿಲ್ಲ. ಯಾರನ್ನಾದರು ಇಳಿಬಿಡಬಹದಲ್ಲ ? ಯಾರನ್ನು? ನಿಧಾನವಾಗಿ ಎಲ್ಲರೂ ನನ್ನ ಕಡೆ ನೋಡಲಾರಂಭಿಸಿದರು. “ವಿಶ್ ಇಳಿದರೆ ಚೆನ್ನಾಗಿರುತ್ತೆ. ಬಹಳ ಹಿಮ ಬಿದ್ದಿತು ಎಂದು ನೋಡಿದವರು ತಿಳಿದು ಕೊಳ್ಳುತ್ತಾರೆ ‘ಎಂದು ಜಾನ್ ನಗುತ್ತಾ ಹೇಳಿದರು. ಎಲ್ಲರೂ ಒಪ್ಪಿದರು. ಸರಿ.ಎಲ್ಲಾ ಚಪ್ಪಾಳೆ ಹೊಡೆಯಲು ಶುರುಮಾಡಿದರು. ನಾನೂ ನಿಧಾನವಾಗಿ ಇಳಿದೆ. ಹಿಮ ನನ್ನ ಕಿವಿಯ ತನಕ ಬಂದಿತ್ತು.ನಾನು 5 ಅಡಿ 2 ಇಂಚು (ಆಗ) . ನಾಲ್ಕೂ ಮುಕ್ಕಾಲು ( 4 ¾ ) ಅಡಿಯಾದರೂ ಆಳವಿರಬೇಕು ಎಂದು ಮಾತಾಡಿಕೊಳ್ಳುತ್ತ ಹಳ್ಳದಲ್ಲಿ ನಿಂತಿದ್ದ ನನ್ನನ್ನು ಸ್ವಲ್ಪಕಾಲ ಮರೆತರು. ಸರಿ ಫೋಟೋ ತೆಗೆದುಕೊಂಡು ನನ್ನನ್ನು ಮೇಲೆ ಎಳೆದುಕೊಂಡರು. ಫೋಟೋ ಅಲ್ಲಿ ಇಲ್ಲಿ ಪ್ರಕಟವಾಯಿತು ಎಂದು ಕೇಳಿದೆ. ಅದರೆ ನಾನು ಅದನ್ನು ನೋಡಿಲ್ಲ. ಕನ್ನಡದಲ್ಲಿ ಒಂದು ಗಾದೆ ಇದೆಯಲ್ಲವೆ: ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದರಂತೆ ಅಂತ! 

(“The one incident which caused greatest concern was a freak snowfall in May 1969 when about four feet of very heavy, wet snow fell…we were snow bound briefly, but more seriously the electric power was off for four days…”( The History, Highlights, and outcome of the Michigan-Wisconsin Echo Lake Cosmic Ray Program, 1965-1972: an Informal Review) 

ಕೆಳಗೆ ಅಂತರಜಾಲದಿಂದ ಒಂದು ಚಿತ್ರ . ನನ್ನ ಅನುಭವವೂ ಸುಮಾರು ಇದೇ ರೀತಿ ಇತ್ತು ! 

‍ಲೇಖಕರು Admin

October 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: