ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು…

ವೆಂಕಟೇಶ್ ಪ್ರಸಾದ್

ಹೆಚ್.ವಿ.ವಿ. ಸರ್ ಇನ್ನಿಲ್ಲ. ಮನಸ್ಸು ಭಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರ ಜೊತೆ ಹೆಚ್ಚು ಒಡನಾಟವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕು ಮಾತಾಡುತ್ತಿದ್ದುದು ಮಾತ್ರ. ಆದರೆ ಅದಕ್ಕೆ ಮುಂಚೆ ಸುಮಾರು 10-12 ವರ್ಷಗಳ ಕಾಲ ನಾನು ಸಮುದಾಯದಲ್ಲಿ ನಟನಾಗಿ, ಸಂಘಟಕನಾಗಿ ಕೆಲಸ ಮಾಡುವಾಗ ಅವರ ಹತ್ತಿರದ ಒಡನಾಟದಲ್ಲಿದ್ದೆ. ನಾನು ಸಮುದಾಯ ಸೇರಿದಾಗ ಸಮುದಾಯದ ತೇರನ್ನು ದಶಕಗಳ ಕಾಲ ಎಳೆದ ಹಿರಿಯರಲ್ಲಿ ಹೆಚ್‌ವಿವಿ ಕೂಡ ಒಬ್ಬರು.

ಸಮುದಾಯ ಸಂಘಟನೆಗೆ ಅವರ ಕಾಣಿಕೆ ಅಪಾರ. ನಾವೆಲ್ಲ ಪ್ರತಿದಿನ ರಿಹರ್ಸಲ್ ಮಾಡುತ್ತಿದ್ದದ್ದೇ ನ್ಯಾಷನಲ್ ಕಾಲೇಜಿನಲ್ಲಿ. ಅವರು ಅಲ್ಲಿದ್ದ ಕಾರಣಕ್ಕಾಗಿ ನಮಗೆ ಸುಲಭವಾಗಿ ಜಾಗ ಸಿಗುತ್ತಿತ್ತು. ನಾವು ಮೀಟಿಂಗ್ ಮಾಡಲಿಕ್ಕೂ ಜಾಗ ವ್ಯವಸ್ಥೆ ಮಾಡುತ್ತಿದ್ದರು. ಸಮುದಾಯಕ್ಕೆ ಬಂದ ಹೊಸ ಕಲಾವಿದರಿಗೆಲ್ಲ ಸಮುದಾಯದ ಹುಟ್ಟು, ಆಶಯದ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದರು.

ಸಮುದಾಯದ ಹೊಸ ನಾಟಕಗಳು, ಆಯೋಜಿಸುತ್ತಿದ್ದ ವಿಚಾರ ಸಂಕಿರಣ, ಉತ್ಸವ ಇತ್ಯಾದಿ ಕಾರ್ಯಕ್ರಮಗಳು ಇವೆಲ್ಲದರಲ್ಲಿ ಅವರ ದೊಡ್ಡ ಪಾಲಿರುತ್ತಿತ್ತು. ಕೊನೆಗೆ ಕಾರ್ಯಕ್ರಮದ ಇನ್ವಿಟೇಷನ್ ಕಾರ್ಡಿನ ಡಿಸೈನ್ ಕೂಡ ಅವರದೇ. ಅವರು ಜಂಟಿಯಾಗಿ ನಿರ್ದೇಶಿಸಿದ ಕಲ್ಯಾಣದ ಕೊನೆಯ ದಿನಗಳು ನಾಟಕದಲ್ಲಿ ಬಸವಣ್ಣನ ಪಾತ್ರ ಮಾಡಿದ್ದೆ. ಅವರು ಇಬ್ಸನ್ನಿನ ಎನಿಮಿ ಆಫ್ ದಿ ಪೀಪಲ್ ನಾಟಕದ ಅನುವಾದ ‘ಸುತ್ತಿಕೊಂಡರೆ ಸರ್ಪ’ ನಾಟಕದಲ್ಲಿ ಮೇಯರ್ ಪಾತ್ರ ಮಾಡಿದ್ದೆ. ಅವರು ಜುಗಾರಿ ಕ್ರಾಸ್ ನಾಟಕಕ್ಕೆ ಬರೆದ ಕ್ರಾಸ್ ಕ್ರಾಸ್ ಹಾಡು ಇವತ್ತಿಗೂ ಸೂಪರ್ ಹಿಟ್ ಮತ್ತು ಅವರ ಹಾಡುಗಳೂ ಕೂಡ ನಾಟಕ ಯಶಸ್ವಿಯಾಗಲಿಕ್ಕೆ ದೊಡ್ಡ ಕಾರಣವಾಗಿತ್ತು. ಅವರ ಜೊತೆಯ ನೆನಪುಗಳು ಒಂದೇ ಎರಡೇ..ಶಿಸ್ತಾಗಿ ಡ್ರೆಸ್ ಮಾಡಿಕೊಂಡು ನ್ಯಾಷನಲ್ ಕಾಲೇಜಿನ ಕಾರಿಡಾರಿನಲ್ಲಿ ಪುಟಪುಟನೇ ಓಡಾಡುತ್ತಿದ್ದವರು.

ಸಂಜೆ 6 ಘಂಟೆಗೆ ಮಹಾಲಕ್ಷ್ಮಿ ಟಿಫನ್ ರೂಮಿನ ಖಾಲಿ ದೋಸೆ ಅವರ ಫೇವರೆಟ್. ನ್ಯಾಷನಲ್ ಕಾಲೇಜಿನಲ್ಲಿ ರಂಗಭೂಮಿಯ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಂಡವರು. ಹಲವು ದೇಶಗಳ ನಾಟಕಗಳನ್ನು ಓದಿಕೊಂಡಿದ್ದರು. ಅಪಾರವಾದ ಸಿನಿಮಾ ಪ್ರೇಮಿ. ತಮ್ಮ ಹೊಸ ಮನೆ ಕಟ್ಟಿದಾಗ ಅಲ್ಲಿ ಸಿನಿಮಾ ವೀಕ್ಷಣೆಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾಗ ಮಾಡಿದ್ದರು. ನಾಡಿನ ಎಲ್ಲ ಜನಪರ ಕಾರ್ಯಕ್ರಮಗಳಲ್ಲಿ, ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಇದೆಲ್ಲದರ ಜೊತೆಗೆ ಸಂಸ್ಕೃತದ ಮೇಷ್ಟ್ರು. ಸುಭಾಷಿತಗಳ ಕನ್ನಡ ವ್ಯಾಖ್ಯಾನದ ಪುಸ್ತಕ ಕೊಡಿ ಅಂತ ಕೇಳಿದ್ದೆ. ಕೊಡ್ತೀನಿ ಅಂದಿದ್ರು. ಸಿಕ್ಕಾಗಲೆಲ್ಲ ನಾನು ಕೊಡಲೇ ಇಲ್ಲ ಅಂತ ತಮಾಷೆ ಮಾಡುವುದು, ಅವರು ಕೊಡ್ತೀನಿ ಅಂತ ನಗುವುದು ಒಂದು ರೀತಿಯ formality ನಮ್ಮಲ್ಲಿ ಆಗೋಗಿತ್ತು.

ಸಂಸ್ಕೃತ ಮೇಷ್ಟರಾಗಿದ್ದರೂ ಸಂಸ್ಕೃತ ವಿವಿಗೆ ಸರ್ಕಾರ ಕೋಟ್ಯಾಂತರ ಹಣ ಮಂಜೂರು ಮಾಡಿದಾಗ ಅದರ ಅಗತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದರು. ಅಪಾರವಾದ ಓದು, ರಂಗಭೂಮಿ, ಸಿನಿಮಾಗಳ ಮೇಲಿನ ಪ್ರೀತಿ, ಸಮುದಾಯದ ಬಗೆಗಿನ ಅದಮ್ಯ ಬದ್ಧತೆ, ಪುಟಿಯುತ್ತಿತ್ತ ಕ್ರಿಯಾಶೀಲತೆ, ಕೆಲವೊಮ್ಮೆ ಅನಗತ್ಯವಾಗಿ ಸಿಟ್ಟಾಗಿ ಜಗಳವಾಗಿ, ಆಮೇಲೆ ದೋಸೆ ಕಾಫಿಯಲ್ಲಿ ಮುಗಿಸುತ್ತಿದ್ದ ಹಿರಿತನ, ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು..ಇವೆಲ್ಲ ನಾವು ಕಂಡ ಹೆಚ್‌ವಿವಿ ಸರ್..ಇಷ್ಟು ಬೇಗ ಹೊರಟುಬಿಡುತ್ತಾರೆಂದು ಯಾರಿಗೂ ಗೊತ್ತಾಗಲಿಲ್ಲ..

ಹೋಗಿ ಬನ್ನಿ ಸರ್..ಸ್ನೇಹಿತರ, ವಿದ್ಯಾರ್ಥಿಗಳ ಒಂದು ದೊಡ್ಡ ಬಳಗವನ್ನು ಬಿಟ್ಟು ಹೊರಟಿದ್ದೀರಿ. ಬೇಗ ಹೊರಟರೂ ಸಾರ್ಥಕ ಬದುಕನ್ನು ಬದುಕಿದಿರಿ..ಇನ್ನೂ ನೀವು ಮಾಡಬೇಕಿದ್ದ ಕೆಲಸಗಳು ಬಾಕಿಯಿತ್ತು. .ಆದರೇನು ಮಾಡುವುದು..ಧುತ್ತನೆ ಕಣ್ಮರೆಯಾದಿರಿ. ಪ್ರೀತಿಯ ವಿದಾಯ ಸರ್..ಹೋಗಿಬನ್ನಿ..ನಾವ್ಯಾರೂ ನಿಮ್ಮನ್ನು ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ.

‍ಲೇಖಕರು Admin

June 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: