ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಕ್ಕಿ ಮುಗಿಸಿದ ಮೇಲೆ..

ಹಸಿವು!

ಎಂ ಆರ್ ಕಮಲ 

ಕಾಡು, ಗುಡ್ಡ, ಬೆಟ್ಟ ಎಲ್ಲದರ ಎದೆ, ಹೊಟ್ಟೆ
ಬಗೆದು ಸಿಗಿದು ರಕ್ಕಸರು ಮುಕ್ಕಿ ಮುಗಿಸಿದ ಮೇಲೆ…
ದೇವರಂಥ ಗಿರಿಬಾಲರು, ಬಾಲೆಯರು ನೆಲಕ್ಕಿಳಿದರು
ಗೆಡ್ಡೆ ಗೆಣಸುಗಳಿಲ್ಲ, ಹಣ್ಣುಹಂಪಲುಗಳಿಲ್ಲ
ಜೇನುಹುಟ್ಟಿ ಕಟ್ಟಿ `ಮಧು’ ತುಂಬಿಡಲು ಹೂವಿಲ್ಲ
ಮಕರಂದವರಸುವ ಮಧುಕರವೃತ್ತಿಯಿಲ್ಲ
`ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ
ವಿಷವೇರಿತ್ತಯ್ಯ ಆಪಾದಮಸ್ತಕಕ್ಕೆ’
ಹಸಿವಿಗನ್ನವನಿಕ್ಕಿ ವಿಷವನಿಳಿಸಲು ಬಂದವನ
ಸೆರೆಹಿಡಿದರು, ಬಡಿದು ಅಟ್ಟಹಾಸದಲಿ ಮೆರೆದರು
ಹಸಿವು ಸತ್ತರೂ ಸುತ್ತಲಿನವರ ವಿಷವಿಳಿಯಲಿಲ್ಲ

೨.

ಬೆಳಕು ಬೆಳದಿಂಗಳಲಿ ಕಣ್ಣು ಕೋರೈಸಿದ ಲಾಸ್ಯ
ವಿರಹಿಗಳಿಗೆ ಅದೆಂಥ ಸಿಂಗಾರ, ನವಿರು ಹಾಸ್ಯ
ಹಾಲ್ಗಡಲಲಿ ಮಿಂದ `ಸಿರಿದೇವಿ’ಯೇ ಇರಬೇಕು
ಅರಮನೆಯ ತುಂಬ ಬರಿಯ ಕನ್ನಡಿಯ ಬಿಂಬ
ಬೆಳ್ಳಿ, ಬಂಗಾರದ ತಟ್ಟೆಯಲಿ ಶಾಲ್ಯನ್ನ
ಮೃಷ್ಟಾನ್ನ ಭೋಜನ ಇದ್ದರೂ ಮುಟ್ಟುವಂತಿಲ್ಲ
ಶಾಪಗ್ರಸ್ತ ಗಂಧರ್ವೆ ಭೂಲೋಕ ಮುಟ್ಟಿದ
ಮೇಲೂ ಅಮೃತವ ಕುಡಿದಂತೆ ನಟಿಸಬೇಕು
ರನ್ನದೆರೆಯ ಮೇಲೆ ಹಂಸದಂತೆ ತೇಲಬೇಕು
ಕಂಡವರ ಕಂಗಳಲ್ಲಿ ಮಿಂಚು ಮೂಡಿಸಬೇಕು
ಹಸಿವಿಗನ್ನವನಿಕ್ಕಿ ವಿಷವಿಳಿಸಲಿಲ್ಲ, ಪ್ರಾಣ ಹಾರಿತಲ್ಲ!

‍ಲೇಖಕರು avadhi

26 February, 2018

4 Comments

  1. S.P.Vijaya lakshmi

    ಪ್ರಸ್ತುತ, ಚಂದದ ಕವಿತೆಗಳು ಕಮಲ…

    • M R kamala

      Thank you Vijayalakshmi

  2. Lalitha siddabasavayya

    ನಿಜ ಕಮಲಾ , ತಣಿಗೆ ತುಂಬ ಅನ್ನವಿದ್ದರೂ ತೂಕ ಮಾಡಿ ಮಾಡಿ ತುತ್ತೆಣಿಸುತ್ತಿದ್ದ ಶ್ರೀದೇವಿಯವರ ಸಾವು, ಹಸಿದ ಹೊಟ್ಟೆಯ ಮೇಲೆ ಹೊಡೆದು ಹೊಡೆದೂ ಕೊಂದುಹಾಕಿದರಲ್ಲ ಆ ಅಡವಿ ಹುಡುಗನನ್ನು, ಅವನ ಸಾವು ,,, ಎರಡೂ ಈ ದೇಶದಲ್ಲೆ

    • M R kamala

      Houdu Lalitha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading