ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಜಾನೆಯ ಅಜಾನ್ ಕರೆ..

ಸೋನು ನಿಗಮ್ ಮಸೀದಿಯ ಅಜಾನ್ ಹಿನ್ನೆಲೆಯಲ್ಲಿ ಮಾಡಿದ ಟ್ವೀಟ್

ಷ್ಟೊಂದು ಕಲರವ ಉಂಟುಮಾಡಿದೆ..

“ಅಲ್ಲಾಹು ಅಕ್ಬರ ” ಎಂಬ ಬೆಳಗಿನ ಕೂಗಿಗೆ ಅಮ್ಮನಿಗೆ ಎಚ್ಚರ ಮಧ್ಯಾನ್ಹ ಒಂದು ಗಂಟೆಗೆ ಸರಿಯಾಗಿ
ತಲೆ ಮೇಲೆ ಹೊತ್ತ ಹೊರೆಯ ಇಳಿಸಿ ಊಟ ಮಾಡುವ ಹೊತ್ತು
ಸಂಜೆ ಐದರ ಅಜಾನು ಕೂಗಿಗೆ ಹಸು ಕರೆಯುವ ಅವಸರ
ಗಡಿಯಾರದ ಮುಖ ನೋಡಿದರೂ ಅವಳಿಗೆ ಸಮಯ ತಿಳಿಯುತ್ತಿರಲ್ಲಿಲ್ಲ
ಹೀಗಾಗಿ ಹೊತ್ತು ಹೊತ್ತಿಗೆ ಬರುತಿದ್ದ ನಮಾಜಿನ ಕೂಗು
ಅಮ್ಮನ ನಿಜ ಗಡಿಯಾರ.

~ಲಕ್ಷ್ಮಣ್

 

ವಿದ್ಯುತ್ ಕೈ ಕೊಟ್ಟಿತ್ತು
ಮುಂಜಾನೆಯ ಅಜಾನ್ ಕರೆ
ಮಸೀದಿಯ ನಾಲ್ಕು ಗೋಡೆಯನ್ನು
ದಾಟಲಿಲ್ಲ….
ಹಕ್ಕಿಗಳ ಚಿಲಿಪಿಲಿ ಕರೆ
ನನ್ನನ್ನು ತಟ್ಟಿ ಎಬ್ಬಿಸಿತು

ಎಂದೂ ಇಲ್ಲದ
ಉತ್ಸಾಹದಿಂದ ಅಂದು
ನನ್ನ ದೊರೆಗೆ ಬಾಗಿದೆ!
(ನನ್ನ ಮಸೀದಿಯ ಧ್ವಂಸ ಗೈದವರಿಗೆ ಕೃತಜ್ಞ – ಕೃತಿಯಿಂದ)

-ಬಿ ಎಂ ಬಷೀರ್ 

1998ರಲ್ಲಿ ಆರು ತಿಂಗಳು ನಾನು ಚಿಕ್ಕಮಗಳೂರಿನಲ್ಲಿದ್ದೆ. ಪಕ್ಕದ ಮಸೀದಿಯೊಂದರ ಆಜಾನ್ (ಬಾಂಗ್) ಕೇಳಲು ಮುಂಜಾನೆ 5 ಗಂಟೆಗೇ ಎದ್ದು ಕುಳಿತುಕೊಳ್ಳುತ್ತಿದ್ದೆ. ಯಾವ ಹಿಂದೂಸ್ತಾನಿ ಗಾಯನಕ್ಕೂ ಕಮ್ಮಿಯಿಲ್ಲದ ಆ ಮಧುರ ಕಂಠಕ್ಕೆ ಕಿವಿಯಾಗಿ ಮತ್ತೆ ನಿದ್ರೆ ಹೋಗುತ್ತಿದ್ದೆ. ಅಷ್ಟು ಸೊಗಸಾದ ಆಜಾನ್ ಅದಾಗಿತ್ತು.

ಇಂಪಾದ ಹಾಡುಗಳಿಂದಲೇ ನಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿರುವ ಸೋನು ನಿಗಂ ಅವರು ಆಜಾನ್ ಗದ್ದಲದಲ್ಲಿ ಸಿಲುಕಿದಾಗ ಇದು ನೆನಪಾಯಿತು.

ಎಂದಾದರೂ ಇನ್ನೊಮ್ಮೆ ಅಂಥ ಮಾಧುರ್ಯಭರಿತ ಆಜಾನ್ ಕೇಳುವ ಸೌಭಾಗ್ಯ ಸಿಕ್ಕೀತೇ?

-ಅನಂತ ಹುಡಿಗಂಜೆ

ನಮ್ಮೂರಲ್ಲೂ ಮನೆ ಸಮೀಪವೇ ಮಸೀದಿ.. ನಿತ್ಯ ಎರಡು ಹೊತ್ತು ಕೇಳಿ ಖುಷಿಯಿಂದ ನಾವೂ ಉಚ್ಚರಿಸಿದ ಎಷ್ಟೋ ದಿನಗಳಿವೆ. ಆಸ್ವಾದಿಸುವ ಕನಸಿನ ಮೇಲೆ ಸಂಗೀತ, ಧಾರ್ಮಿಕ ಪಠಣ ರುಚಿಸುತ್ತದೆ…

-ಕುಂದೂರು ಉಮೇಶ ಭಟ್ಟ 

ನಮಗೆ ಧರ್ಮಗಳನ್ನು ನೋಡಲು ಕಲಿಸಿರುವ ಕ್ರಮದಲ್ಲಿಯೇ ಸಮಸ್ಯೆಗಳಿವೆ…

ನಮ್ಮ ತಲೆಮಾರಿಗೆ ಧರ್ಮ ಪರಿಚಯವಾಗಿರುವುದು/ಆಗುತ್ತಿರುವುದು ಮೂಲಭೂತವಾದಿ ದೃಷ್ಟಿಕೋನದಿಂದಲೇ ಹೊರತು ಈ ನೆಲದ ಸಾಮರಸ್ಯದ ತಿಳಿವಿನಿಂದಲ್ಲ…

ಆ ಕಾರಣಕ್ಕೆ ಇಂದು ಮಸಿದಿಯ ಅಜಾನ್, ದೇವಸ್ತಾನದ‌ ಸುಪ್ರಭಾತ, ಚರ್ಚಿನ ಘಂಟಾನಾಧ ಮೂಲಭೂತವಾದಿಗಳ ಬಂಡವಾಳವಾಗಿ ಬದಲಾಗಿವೆ….

ನಾನು ಸಣ್ಣವನಿದ್ದಾಗ ಸಂಜೆ ಮಸಿದಿಯ ಅಜಾನ್ ಕೇಳಿದ ತಕ್ಷಣ ನಮ್ಮ ಮನೆಯಲ್ಲಿ ಅಲ್ಲಾ ಅಕ್ಬರಲ್ಲಾ ಕಿಣ್ಣಿ (ಮನೆಯಲ್ಲಿ ಕರೆಯುವ ಹೆಸರು) ಊಟ ಮಾಡಪ್ಪ ಅನ್ನುತ್ತಾ ನನ್ನ ಊಟದ ಸಮಯ ನೆನಪಿಸುತ್ತಿದ್ದರು.

ಎಷ್ಟೊ ಜನ ಅದು ಕೇಳಿದ ತಕ್ಷಣ ದೇವರೆ ಕಾಪಾಡಪ್ಪ ಎಂದು ನಿಟ್ಟುಸಿರಾಗುತ್ತಿದ್ದರು, ನಮ್ಮೂರ ದಾರಿಯಲ್ಲಿ ಸಿಗುವ ದರ್ಗ ದಾಟುವಾಗ ಬಹುತೇಕರು ಕೈ ಮುಗಿದು ಅಲ್ಲಿಂದ ಹೊಮ್ಮುವ ಗಾಢ ಸಾಂಬ್ರಾಣಿ ವಾಸನೆಯನ್ನು ತಮ್ಮ ಮನಸ್ಸಿಗೆ ತುಂಬಿಕೊಳ್ಳುತ್ತಿದ್ದರು…

ಇಂದು ಓದಿದವರಲ್ಲಿ, ತಿಳಿದವರೆಂದು ಕರೆದುಕೊಳ್ಳುವವರಲ್ಲಿ ಎಲ್ಲಿ ಹೋಯಿತು ಈ ತಿಳಿವು ಅರ್ಥವಾಗುತ್ತಿಲ್ಲ ಅದಕ್ಕೆ ಹೇಳಿದ್ದು ನಮಗೆ ಧರ್ಮಗಳನ್ನು ತಪ್ಪಾಗಿ ಕಲಿಸಲಾಗಿದೆ ಎಂದು….

-ಕಿರಣ್ ಎಂ ಗಾಜನೂರು

ನಾನು ಹುಟ್ಟಿ ಬೆಳೆದದ್ದು ಹೊಸಪೇಟೆ. ಅಲ್ಲಿ ಬೆಳಗಿನ ಜಾವ ಮಸ್ಜೀದಿ ಕೂಗೂ ಇತ್ತು, ದೇಗುಲದ ಗೀತೆಯೂ. ಈ ಕ್ಷಣದವರೆಗೂ ಯಾವುದೂ ನಂಗೆ ಡಿಸ್ಟರ್ಬ್ ಅನ್ನಿಸಿಲ್ಲ. ಬೆಳಗ್ಗೆ ನಾಲ್ಕಕ್ಕೆ ಗದ್ದೆ ಕೆಲ್ಸಕ್ಕೆ ಹೊಟೆಲ್ ಗಲಾಟೆ ಅಲರಾಂ. ನನ್ನ ಮೋರಿಗೇರಿಯಲಿ ಕಲ್ಲಪ್ಪನ ಗುಡಿಯಲ್ಲಿ ಬೆಳಗಿನ 5:30 ಕ್ಕೆ ಶುಕ್ಲಾಂ ಭರಧರಂ, ಎದ್ದೇಳು ಮಂಜುನಾಥಾ, ಹಾಡದೇ ಇದ್ದುದಕ್ಕೆ ನಮ್ಮ ಬೆಟ್ಟನ ಗೌಡ ದೊಡ್ಡಪ್ಪ ಹೊಸಾ ಮೈಕ್ ಸೆಟ್ ಕೊಡಿಸಿದ್ದ. ನಮಗಾರಿಗೂ ಆಗದ ಡಿಸ್ಟರ್ಬ್ ಕೆಲವರಿಗೆ ಆಗಬಿಡುತ್ತೆ. ಇದಲ್ವಾ ರಾಜಕೀಯ?

-ಶಿವೂ

ನಮ್ಮೂರಲ್ಲಿ ದಿನಾ ಮಸೀದಿಯಲ್ಲಿ ಬೆಳಗಿನ ಜಾವ ಐದು ಗಂಟೆಗೆ ಅಜಾನ್ ಕೇಳಿಸುತ್ತೆ. ಒಂದಿನಾನು ನಮ್ಮ ನಿದ್ದೆ ಹಾಳಾಗಲಿಲ್ಲ. ಅಷ್ಟೆ ಅಲ್ಲ ನಮ್ಮನೆ ಇರೋದು ಮಸೀದಿ ಹತ್ತಿರವೇ ‌ ಇನ್ನೂ ಜೋರಾಗಿ ಕೇಳಿಸುತ್ತೆ ಸ್ಪೀಕರ್ ಸೌಂಡು. ಆದ್ರೆ ನಿದ್ದೆಗೆಟ್ಟಿಲ್ಲ ನಾವು. ಬದ್ಲಾಗಿ ಬೆಳಿಗ್ಗೆ ಆಗ್ತಿದೆ ಅಂತ ಗೊತ್ತಾಗ್ತಿತ್ತು. ಯಾಕೆಂದ್ರೆ ನಸುಕಿನ ಐದರ ಸಮಯದಲ್ಲಿ ಇನ್ನೂ ತುಸು ಕತ್ತಲಿರುತ್ತೆ. ನಮ್ಮಪ್ಪ ಇದೇ ಅಜಾನ್ ಸ್ಪೀಕರ್ ಸೌಂಡಿನಿಂದ ಎದ್ದು ನಮ್ಮ ಗುಡಿಗೆ ಪೂಜೆ ಮಾಡೋಕೆ ಹೋಗ್ತಿದ್ರು. ನಮ್ಮನೆಗಳಲ್ಲಿ ಅಲಾರಮ್ ಇರಲಿಲ್ಲ. ಈ ಅಜಾನ್ ನಮ್ಮ ಅಲಾರಮ್. ಹಾಗೇನೆ ಶ್ರೀಮಂತರ ಮನೆಗೆ ದುಡಿಯೋಕೆ ಹೋಗೋ ಆಳು ಮಂದಿ ಕೂಡ ಈ ಅಜಾನ್ ಸೌಂಡು ಕೇಳಿದಾಗಲೇ ಎದ್ದು ಹೋಗ್ತಿದ್ದದ್ದು.

-ಶರಣ್ ಹೂಗಾರ

ಮಸೀದಿಯ ಅಲ್ಲಾಹೋ ಅಕ್ಬರವಾದರೂ ಸರಿಯೇ… ದೇವಸ್ಥಾನದ ಸುಪ್ರಭಾತ-ಮಂತ್ರವಾದರೂ ಸರಿಯೇ… ಚರ್ಚಿನ ಮಾಸ್ ಪ್ರೇಯರ್ ಆದರೂ ಸರಿಯೇ.. ನನಗೇನೂ ಅನಿಸುವುದಿಲ್ಲ…
ಆದರೆ ಇಂತಹಾ ನನಗೂ ಏನೇನೋ ಅನಿಸಿ ಇದ್ದವರನ್ನೆಲ್ಲಾ ಚಚ್ಚಿ ಹಾಕೋಣ ಎಂಬಲ್ಲಿವರೆಗೆ ಹೋಗುವುದಿದೆ, ಗಣೇಶೋತ್ಸವಕ್ಕೆ ಗಣಪನನ್ನು ಕೂರಿಸಿ ಎದುರುಗಡೆ ಮೈಕಿನಲ್ಲಿ ಕೆಟ್ಟದಾಗಿ ಟಪಾಂಗುಚ್ಚಿ ಸಿನಿಮಾ ಸಾಂಗು ಹಾಕಿಕೊಂಡು ಪಡ್ಡೆ ಹುಡುಗರು ಯಡ್ರಪಡ್ರ ಕುಣಿಯುವುದು ನೋಡಿದಾಗ.

-ಶ್ರೀದೇವಿ ಡಿ ಎನ್ 

ಸಹ್ಯ ಸಹಜೀವನ ಸಹಜವಾಗಿಯೇ ಆದರೆ ಸಂಬಂಧ ಸಾವಯವ ಆಗುತ್ತದೆ. ಮಸೀದಿಯ ಬಾಂಗ್, ದೇವಾಲಯದ ಘಂಟೆನಾದ ಕಿವಿಗೆ ಅಪ್ಯಾಯಮಾನ ಆಗುತ್ತಿದ್ದ ದಿನಗಳು ಉರುಳುತ್ತಿವೆ ಅನ್ನಿಸತ್ತೆ. ಪೈಪೋಟಿ ನಡುವೆ ಕೃತಕತೆ ಮನೆ ಮಾಡಿ ಮಣ್ಣಿನಲ್ಲಿ ಅಡಗಿರುವ ಸೂಕ್ಷ್ಮಜೀವಿಗಳು ನಾಶವಾದಂತೆ ಸಾವಯವ ಸಂಬಂಧಗಳು ಬೆಸೆಯುತ್ತಿಲ್ಲ ಅನ್ನಿಸುತ್ತಿದೆ.

-ಹಿರೇಹಳ್ಳಿ ದೇವರಾಜ್ 

 

 

‍ಲೇಖಕರು avadhi

22 April, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading