ಮೊನ್ನೆ ಆ ಚಿತ್ರವನ್ನು ಮತ್ತೆ ನೋಡಿದೆ..

ನಾನು ಮೊದಲ ಸಲ ಆ ಪುಸ್ತಕವನ್ನು ಓದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ.

ಆಮೇಲೆ ಆ ಪುಸ್ತಕ ಚಲನಚಿತ್ರವಾಯಿತು.

ಹೆಸರು Memoirs of a Geisha.

ಆ ಕಾಲಕ್ಕೆ ಆ ಪುಸ್ತಕ ಓದುವಾಗ, ಸಿನಿಮಾ ನೋಡುವಾಗ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಮೊನ್ನೆ ಆ ಚಿತ್ರವನ್ನು ಮತ್ತೆ ನೋಡಿದೆ. ಭಾವನಾತ್ಮಕವಾಗಿ ಮೊದಲಿನಷ್ಟು ಪರಿಣಾಮ ಬೀರದಿದ್ದರೂ ಬೇರೆ ಬೇರೆ ಕಾರಣಗಳಿಗಾಗಿ ಆ ಚಿತ್ರ ಇಷ್ಟವಾಯಿತು.

ಚಿತ್ರದ ಬಗ್ಗೆ ಬರೆಯುವ ಮೊದಲು ಒಂದು ಸಣ್ಣ ಮುನ್ನುಡಿ. ಗೇಶಾ ಎರಡು ಜಪಾನಿ ಶಬ್ಧಗಳ ಸಂಗಮ. ’Gei’ ಎಂದರೆ ಕಲೆ ಮತ್ತು ‘sha’ ಎಂದರೆ ವ್ಯಕ್ತಿ. ಗೇಶಾ ಎಂದರೆ ಕಲೆಯನ್ನು ಅಭಿವ್ಯಕ್ತಿಸುವವರು, ಕಲಾವಿದರು. ಅವರು ಸಂಗೀತ, ನೃತ್ಯ, ಕಾವ್ಯಗಳಲ್ಲಿ ನುರಿತವರಾಗುತ್ತಾರೆ. ಮನಸ್ಸನ್ನು ಆಹ್ಲಾದಗೊಳಿಸುವಂತಹ ಸಂಭಾಷಣಾ ಚಾತುರ್ಯ ಹೊಂದಿರುತ್ತಾರೆ. ನಡೆ ನುಡಿಯಲ್ಲಿ ಘನತೆ ಇರುತ್ತದೆ. ಅವರನ್ನು ವೇಶ್ಯೆಯರು ಎನ್ನಲಾಗದು. ಏಕೆಂದರೆ ಸಾಧಾರಣವಾಗಿ ಅವರು ತಮ್ಮ ಸಾಹಚರ್ಯವನ್ನು ಮಾರುತ್ತಾರೆಯೇ ಹೊರತು ದೇಹವನ್ನಲ್ಲ. ಸಂಗೀತ ನೃತ್ಯ ಅಭ್ಯಾಸ ಮಾಡಿ ಪ್ರದರ್ಶನ ಕೊಡುತ್ತಿದ್ದ ’ದೇವದಾಸಿ’ಯರಿಗೆ, ಉತ್ತರ ಭಾರತದಲ್ಲಿನ ಕೋಠಾ ನರ್ತಕಿಯರಿಗೆ ಇವರನ್ನು ಹೋಲಿಸಬಹುದು. ಅಂತಹ ಒಬ್ಬ ಗೇಶಾ ತನ್ನ ಆತ್ಮಕಥೆಯನ್ನು ಬರೆದರೆ ಹೇಗಿರಬಹುದು?

ಆರ್ಥರ್ ಗೋಲ್ಡನ್ ಬರೆದ ಪುಸ್ತಕವನ್ನು ರಾಬ್ ಮಾರ್ಷಲ್ ಚಿತ್ರವನ್ನಾಗಿಸಿದ್ದಾರೆ. ಕೇವಲ ಒಬ್ಬ ಗೇಶಾ ಕಥೆಯನ್ನಾಗಿ ಇದನ್ನು ನೋಡದೆ ಜಪಾನಿನ ಒಂದು ಸಾಂಸ್ಕೃತಿಕ ಬದುಕಿನ ಚಿತ್ರಣವಾಗಿ ಈ ಚಿತ್ರವನ್ನು ನೋಡಬಹುದು.

ಚಿತ್ರ ಪ್ರಾರಂಭವಾಗುವುದು ಒಂದು ಭೀಕರ ತುಫಾನಿನಿಂದ. ಅದೊಂದು ಸಮುದ್ರ ತೀರದ ಹಳ್ಳಿ. ಅಲ್ಲೊಂದು ಬೆಸ್ತನ ಮನೆ, ಹೆಂಡತಿಗೆ ತೀವ್ರ ಅಸ್ವಾಸ್ಥ್ಯ, ಮನೆಯಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳು. ನಡುರಾತ್ರಿ ಇದ್ದಕ್ಕಿದ್ದಂತೆ ಮಲಗಿದ್ದ ಮಕ್ಕಳನ್ನು ಎಳೆದು ಎಬ್ಬಿಸಲಾಗುತ್ತದೆ, ಒಬ್ಬ ವ್ಯಕ್ತಿ ಅವರನ್ನು ಬಲವಂತವಾಗಿ ರೈಲು ಹತ್ತಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಎಲ್ಲಿಗೆ? ಗೊತ್ತಿಲ್ಲ, ಎಷ್ಟು ದಿನಕ್ಕೆ? ಗೊತ್ತಿಲ್ಲ, ಯಾರ ಮನೆಗೆ? ಗೊತ್ತಿಲ್ಲ. ಒಂದೇ ಕ್ಷಣದಲ್ಲಿ ಆ ಮಕ್ಕಳ ಜೀವನ ತೂಫಾನಿಗೆ ಸಿಕ್ಕಿದ ದೋಣಿಯಂತಾಗಿಬಿಡುತ್ತದೆ.

ಆ ಮಕ್ಕಳನ್ನು ಒಂದು ಗೇಶಾ ಗೃಹಕ್ಕೆ ಮಾರಾಟಕ್ಕೆ ತರಲಾಗುತ್ತದೆ. ಗೇಶಾ ಗೃಹವನ್ನು ’ಓಕಿಯಾ’ ಎನ್ನುತ್ತಾರೆ. ಅಲ್ಲಿ ತಂಗಿಯನ್ನು ಆಯ್ದುಕೊಳ್ಳಲಾಗುತ್ತದೆ. ಆಕೆಯ ಕಡಲಿನಂತಹ ಹಸಿರು ನೀಲಿ ಕಣ್ಣುಗಳು ಅವಳ ಆಕರ್ಷಣೆ. ದೊಡ್ಡ ಹುಡುಗಿಯನ್ನು ಒಂದು ವೇಶ್ಯಾಗೃಹಕ್ಕೆ ಮಾರಲಾಗುತ್ತದೆ. ಅಪರಿಚಿತ ಊರು, ಅಪರಿಚಿತ ಜನ, ತಾನು ಇದುವರೆವಿಗೂ ನೋಡಿರದಂತಹ ಮನೆ, ಈಗ ಅಕ್ಕ ಸಹ ಬೇರೆಯಾಗಿದ್ದಾಳೆ. ಒಂಬತ್ತರ ಬಾಲೆ ಕಿಯೋ ತತ್ತರಿಸಿ ಹೋಗುತ್ತಾಳೆ. ಆದರೆ ಅವಳಲ್ಲಿರುವ ಮನೋಶಕ್ತಿ ಎಂತಹುದೆಂದರೆ ಅವಳು ಸುಲಭಕ್ಕೆ ಸೋಲು ಒಪ್ಪುವವಳಲ್ಲ. ಆ ಮನೆಯಲ್ಲಿ ಹಟ್ಸುಮೊಮೋ ಎನ್ನುವ ಗೇಶಾ ಇದ್ದಾಳೆ, ಸುಂದರಿ, ಆ ಕಾರಣಕ್ಕೇ ಅಹಂಕಾರಿ. ಈ ಒಂಬತ್ತರ ಬಾಲೆಯಲ್ಲಿ ಅವಳಿಗೆ ಭವಿಷ್ಯದ ದಿನಗಳ ಪ್ರತಿಸ್ಪರ್ಧಿ ಕಾಣುತ್ತಾಳೆ. ಈ ಪುಟ್ಟ ಹುಡುಗಿಯನ್ನು ಹಣಿಯಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾಳೆ.

ಅಕ್ಕನನ್ನು ಹುಡುಕುವ ಪ್ರಯತ್ನದಲ್ಲಿ ಹೆಂಚಿನ ಮೇಲಿಂದ ಬೀಳುವ ಕಿಯೋ ಈಗ ತನ್ನ ಓಕಿಯೋದಲ್ಲಿ ಯಾರಿಗೂ ಬೇಡದವಳು. ಅವಳನ್ನು ಗೇಶಾ ಶಾಲೆಯಿಂದ ಬಿಡಿಸಿ ಮನೆ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ. ಅವಳ ನಾಳೆಗಳು ಖಾಲಿ ಖಾಲಿ. ಅಕ್ಕ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ, ಊರಿನಿಂದ ಪತ್ರ ಬಂದಿದೆ, ಅಮ್ಮ ಅಪ್ಪ ಇಬ್ಬರೂ ತೀರಿಕೊಂಡಿದ್ದಾರೆ. ಸಾಯುವವರೆವಿಗೂ ಕೆಲಸದವಳಾಗಿಯೇ ಬದುಕಬೇಕಿದೆ. ದುಃಖದಿಂದ ಒಂದು ಸೇತುವೆಯ ಬೊಂಬಿಗೆ ಒರಗಿ ನಿಂತವಳ ಹೆಗಲ ಮೇಲಿ ಒಂದು ಕೈ. ಆ ಸ್ಪರ್ಶ ಅವಳ ಜೀವನವನ್ನೇ ಬದಲಿಸುತ್ತದೆ. ತಲೆ ಎತ್ತಿ ನೋಡುವ ಹುಡುಗಿಯ ಎದುರಲ್ಲಿ ಒಬ್ಬ ಸ್ಪುರದ್ರೂಪಿ ಗಂಡು, ಆತನ ಜೊತೆಯಲ್ಲಿ ಒಬ್ಬ ಗೇಶಾ. ಈ ಹುಡುಗಿಯನ್ನು ಮಾತನಾಡಿಸುವ ಆತ ಒಂದು ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಯ ಚೇರ್ಮನ್. ಇವಳನ್ನು ಅಪಾರ ಕರುಣೆಯಿಂದ ಮಾತನಾಡಿಸುತ್ತಾನೆ, ಅವಳಿಗೆ ಐಸ್ ಗೋಲ ಕೊಡಿಸುತ್ತಾನೆ, ಒಂದಿಷ್ಟು ಚಿಲ್ಲರೆ ಹಾಕಿ, ತನ್ನ ಕರ್ಚೀಫ್ ಅವಳ ಕೈಲಿಟ್ಟು ಹೋಗುತ್ತಾನೆ.

ನಮ್ಮ ಆತ್ಮವಿಶ್ವಾಸ ಕುಸಿದಿರುವಾಗ, ಬದುಕಲ್ಲಿ ಸೋತೆ ಎಂದುಕೊಳ್ಳುವಾಗ ಯಾರೋ ಅಪರಿಚಿತರು ದಯಪಾಲಿಸುವ ಒಂದು ಸಣ್ಣ ಮುಗುಳ್ನಗು ನಮ್ಮಲ್ಲಿ ಮತ್ತೆ ಬದುಕುವ, ಮತ್ತಿಷ್ಟು ದೂರ ನಡೆಯುವ ಹುಮ್ಮಸ್ಸು ಹುಟ್ಟಿಸುತ್ತದಲ್ಲ ಹಾಗೆ ಈ ಭೇಟಿ ಅವಳ ಸೋತ ಹೆಗಲಿಗೆ ರೆಕ್ಕೆ ಮೂಡಿಸುತ್ತವೆ. ಕೂಡಲೆ ದೇವಸ್ಥಾನಕ್ಕೆ ಓಡುವ ಅವಳು ಕರ್ಚೀಫಿನಲ್ಲಿದ್ದ ಚಿಲ್ಲರೆಯನ್ನು ದೇವರಿಗೆ ಅರ್ಪಿಸುತ್ತಾಳೆ, ಆ ಕರ್ಚೀಫನ್ನು ಎದೆಗೊತ್ತಿಕೊಳ್ಳುತ್ತಾಳೆ. ಅವಳ ಸಧ್ಯದ ಜೀವನದಲ್ಲಿ ಅವಳಿಗೆ ಸಿಕ್ಕ ಒಂದೇ ಒಂದು ಕರುಣೆಯ ಸ್ಪರ್ಶ ಅದು. ೧೧-೧೨ರ ಬಾಲೆಗೆ ಹೇಗಾದರೂ ಆತನಿಗೆ ಹತ್ತಿರಾಗಬೇಕು. ಅವಳಿಗೆ ಕಾಣುವ ಒಂದೇ ದಾರಿ, ತಾನು ಗೇಶಾ ಆದರೆ ಅವನನ್ನು ಭೇಟಿ ಆಗಬಹುದು ಮತ್ತು ಆಗುತ್ತಲೇ ಇರಬಹುದು. ಆ ಪುಟ್ಟ ಹುಡುಗಿ ಅಲ್ಲಿಂದ ಮುಂದೆ ಇಡುವ ಪ್ರತಿ ಹೆಜ್ಜೆ, ಕಲಿಯುವ ಪ್ರತಿ ನೃತ್ಯ, ಹಾಡುವ ಪ್ರತಿ ಹಾಡು ಅವನ ಕಡೆಗೆ ಅವಳ ಪಯಣದ ಹೆಜ್ಜೆಯಾಗಿಬಿಡುತ್ತದೆ.

ಮೆಮೆಹಾ ಎನ್ನುವ ಆ ಕಾಲಕ್ಕೆ ಹೆಸರಾಂತ ಗೇಶಾ ಕಿಯೋಳನ್ನು ತನ್ನ ಶಿಷ್ಯೆಯನ್ನಾಗಿ ಸೇರಿಸಿಕೊಳ್ಳುತ್ತೇನೆ ಎಂದು ಮುಂದೆ ಬರುತ್ತಾಳೆ. ಕಿಯೋಳ ಗೇಶಾಗೃಹದ ಮಾಲಕಿ ಅವಳ ಮೇಲೆ ತಾನು ಮತ್ತೆ ದುಡ್ಡು ಹಾಕಲಾರೆ ಎಂದಾಗ ಆ ಜವಾಬ್ದಾರಿಯನ್ನೂ ಮೆಮೆಹಾ ತೆಗೆದುಕೊಳ್ಳುತ್ತಾಳೆ. ಕಿಯೋಳನ್ನು ಗೇಶಾ ಆಗಿ ತಯಾರು ಮಾಡುತ್ತಾಳೆ. ಕುಳಿತುಕೊಳ್ಳುವ, ಏಳುವ, ಟೀ ಬಗ್ಗಿಸುವ, ನರ್ತಿಸುವ, ವಾದ್ಯ ನುಡಿಸುವ, ಕಣ್ಣೋಟದಲ್ಲೇ ದಾರಿಹೋಕನನ್ನು ನಿಂತಲ್ಲೇ ನಿಲ್ಲಿಸುವ ಕಲೆ ಎಲ್ಲವನ್ನೂ ಕಲಿಸುತ್ತಾಳೆ. ಅವಳನ್ನು ತಂಗಿಯನ್ನಾಗಿ ಸ್ವೀಕರಿಸಿ ಅವಳಿಗೆ ’ಸಯೂರಿ’ ಎನ್ನುವ ಹೊಸ ಹೆಸರನ್ನು ಕೊಡುತ್ತಾಳೆ.

ಇವೆಲ್ಲದರ ನಡುವೆ ಹಟ್ಸುಮೊಮೊಳ ವೈರ ಸತ್ತಿರುವುದಿಲ್ಲ. ಅದೇ ಗೇಶಾ ಗೃಹದಲ್ಲಿದ್ದ ಮತ್ತೊಬ್ಬ ಹುಡುಗಿ ಪಂಪ್ಕಿನ್ ಳನ್ನು ತನ್ನ ಶಿಷ್ಯಳನ್ನಾಗಿ ತಯಾರು ಮಾಡುತ್ತಿರುತ್ತಾಳೆ. ಅವಳನ್ನು ದತ್ತು ತೆಗೆದುಕೊಳ್ಳಲು ಮಾಲಕಿಯನ್ನು ಒಪ್ಪಿಸಿಯೂ ಬಿಟ್ಟಿರುತ್ತಾಳೆ. ಆ ಮೂಲಕ ತನ್ನ ಸ್ಥಾನ ಭದ್ರ ಮಾಡಿಕೊಳ್ಳುವುದು ಅವಳ ಲೆಕ್ಕಾಚಾರ. ಸಯೂರಿಯ ಮೇಲೆ ಅಪಪ್ರಚಾರ ಪ್ರಾರಂಭಿಸುತ್ತಾಳೆ. ಅವಳನ್ನು ಸಡಿಲ ನಡತೆಯ ಹೆಣ್ಣಾಗಿ ಚಿತ್ರಿಸುತ್ತಾಳೆ. ಸಯೂರಿಯ ಗೆಲುವಿಗಾಗಿ ಮಮೆಹಾ, ಸೋಲಿಗಾಗಿ ಹಟ್ಸುಮುಮು ಚದುರಂಗದ ನಡೆಗಳನ್ನು ನಡೆಸುತ್ತಾ ಇರುತ್ತಾರೆ.

ದುರಂತವೆಂದರೆ ಈ ಆಟದಲ್ಲಿ ಸಯೂರಿ ಸಹ ಒಂದು ಪಗಡೆ ಆಟದ ಕಾಯಿ ಅಷ್ಟೆ. ಈ ಹಂತದಲ್ಲಿ ಮೆಮೆಹಾ ಸಯೂರಿಯನ್ನು ಒಂದು ಸುಮೋ ಪಂದ್ಯಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಸಯೂರಿ ಮತ್ತೆ ಚೇರ್ಮನ್ ನನ್ನು ಭೆಟ್ಟಿ ಆಗುತ್ತಾಳೆ, ಆತನ ಗೆಳೆಯ ನೋಬುವಿನ ಜೊತೆ. ತಾನಾಗಿಯೇ ತನ್ನ ಪರಿಚಯ ಹೇಗೆ ಹೇಳುವುದು, ಆತನಿಗೆ ತನ್ನ ನೆನಪಾದರೂ ಇದ್ದೀತೆ ಎಂದು ಸಯೂರಿ ಗೊಂದಲದಲ್ಲಿರುತ್ತಾಳೆ. ಮುಖದ ಒಂದು ಭಾಗ ಸುಟ್ಟ ನೋಬುವಿನ ಜೊತೆಗೆ ಆಕೆ ಕೂರಬೇಕಾಗುತ್ತದೆ. ಗೇಶಾಗಳೆಂದರೆ ಅಸಹನೆ ಹೊಂದಿದ್ದ ನೋಬುವಿಗೆ ಸಯೂರಿಯ ಮೃದುವಾದ ಮಾತು ಮನಸ್ಸನ್ನು ತಾಕುತ್ತದೆ. ಅವಳ ಬಗ್ಗೆ ಆಸಕ್ತಿ ಹೊಂದುತ್ತಾನೆ.

ಹಟ್ಸುಮೊಮೊ ಸಯೂರಿಯ ಬಗ್ಗೆ ಹರಡುತ್ತಿರುವ ಕೆಟ್ಟಮಾತುಗಳನ್ನು ತಡೆಯಲು ಮೆಮೆಹಾ ಒಂದು ಮಾಸ್ಟರ್ ಸ್ಟ್ರೋಕ್ ನಡೆ ನಡೆಸುತ್ತಾಳೆ. ಆ ಸಲದ ವಸಂತೋತ್ಸವದಲ್ಲಿ ಸಯೂರಿಯ ನರ್ತನ ಏರ್ಪಡಿಸುತ್ತಾಳೆ. ಇಡೀ ಚಿತ್ರದಲ್ಲಿನ ಅತ್ಯುತ್ತಮ ಭಾಗ ಎಂದರೆ ಈ ನೃತ್ಯ. ಸಯೂರಿ ನರ್ತಿಸುತ್ತಿರುವ ಕವಿತೆಯಂತೆ ಕಾಣುತ್ತಾಳೆ. ಆ ಸಂಗೀತ, ನೃತ್ಯ, ಅವಳ ತಾದಾತ್ಮ್ಯ, ಸಿನಿಮಾಟೋಗ್ರಫಿ ಎಲ್ಲವೂ ಸಿಂಫೋನಿಯಂತೆ ಹೊಂದಿಕೊಂಡಿದೆ. ಆ ಒಂದು ನೃತ್ಯ ಸಯೂರಿಯನ್ನು ಎಲ್ಲರ ಮನಸ್ಸಿನ ಮನಮೋಹಿನಿಯನ್ನಾಗಿಸಿ ಬಿಡುತ್ತದೆ.

ಈ ಹಂತದಲ್ಲಿ ಸಯೂರಿಯ ’ಗೆಜ್ಜೆಪೂಜೆ’ ಆಗಬೇಕಿರುತ್ತದೆ. ಜಪಾನ್ ಸಂಸ್ಕೃತಿಯಲ್ಲಿ ಅದನ್ನು ’ಮಿಜುವಾಗೆ’ ಎಂದು ಕರೆಯುತ್ತಾರೆ. ಅದೊಂದು ಹರಾಜು ಪ್ರಕ್ರಿಯೆ. ಇಲ್ಲಿ ಹರಾಜಾಗುವುದು ಗೇಶಾಳ ಕನ್ಯತ್ವ. ಅತ್ಯಂತ ಹೆಚ್ಚು ಹಣ ಬಿಡ್ ಮಾಡುವವನ ಪಾಲಿಗೆ ಗೇಶಾಳ ಮೊದಲ ರಾತ್ರಿ. ಬಿಡ್ ವಿಷಯಕ್ಕೆ ಬಂದರೆ ಸಯೂರಿ ಅಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದಿರುತ್ತಾಳೆ. ಅವಳ ಗೃಹದ ಯಜಮಾನಿ ಪಂಪ್ಕಿನ್ ಳನ್ನು ಬಿಟ್ಟು ಇವಳನ್ನೇ ದತ್ತು ತೆಗೆದುಕೊಳ್ಳುವುದಾಗಿ ಹೇಳುತ್ತಾಳೆ. ಪಂಪ್ಕಿನ್ ಮತ್ತು ಸಯೂರಿಯ ಸ್ನೇಹ ಮುರಿದುಬೀಳುತ್ತದೆ.

ಸಯೂರಿ ಚೇರ್ಮನ್ ನನ್ನು ಆರಾಧಿಸುತ್ತಿರುತ್ತಾಳೆ, ನೋಬು ಅವಳಿಗೆ ಹತ್ತಿರ ಆಗುತ್ತಿರುತ್ತಾನೆ. ಆ ಸಮಯದಲ್ಲಿ ದ್ವಿತೀಯ ಮಹಾಯುದ್ಧ ಶುರುವಾಗುತ್ತದೆ. ಗೇಶಾಗಳೆಲ್ಲಾ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಯುದ್ಧ ಮುಗಿಯುತ್ತದೆ. ಈಗ ಆರ್ಥಿಕ ಪರಿಸ್ಥಿತಿ ಬದಲಾಗಿದೆ. ಅಮೇರಿಕಾದ ಜನರಲ್ ಒಬ್ಬನಿಗೆ ಸಯೂರಿಯನ್ನು ಕಂಡರೆ ಹುಚ್ಚು. ಚೇರ್ಮನ್ ಮತ್ತು ನೋಬುಗೆ ಆತನಿಂದ ಕೆಲಸ ಆಗಬೇಕಿದೆ. ಅದರಲ್ಲಿ ನೆರವಾಗಲು ಅವರು ಸಯೂರಿಯ ನೆರವನ್ನು ಕೋರುತ್ತಾರೆ. ಸಯೂರಿ ಬರುತ್ತಾಳೆ.

ಇಷ್ಟು ವರ್ಷಗಳ ನಂತರ ಮತ್ತೆ ಆಕೆ ಚೇರ್ಮನ್ ಅನ್ನು ನೋಡುತ್ತಿದ್ದಾಳೆ. ಆದರೆ ಇದೇ ಸಮಯದಲ್ಲಿ ನೋಬುವಿಗೆ ಅವಳ ಮೇಲಿರುವ ಪ್ರೀತಿ ಅವಳಿಗೆ ಗೊತ್ತಾಗುತ್ತದೆ. ಗೇಶಾ ಪದ್ಧತಿಯಲ್ಲಿ ಯಾವುದೇ ಒಬ್ಬ ಧನಿಕ ಗೇಶಾ ಒಬ್ಬಳ ’ಧನ್ನಾ’ ಆಗಬಹುದು. ಅದಕ್ಕಾಗಿ ಆತ ಅವಳನ್ನು ನೋಡಿಕೊಳ್ಳುವ, ಅವಳಿಗೆ ಆರ್ಥಿಕ ಸುಭದ್ರತೆ ಕಲ್ಪಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ, ಬದಲಾಗಿ ಆ ಗೇಶಾ ಅವನವಳಾಗುತ್ತಾಳೆ. ತಾನವಳ ಧನ್ನಾ ಆಗಬೇಕು ಎಂದು ನೋಬು ಹೇಳಿದಾಗ ಸಯೂರಿಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದ ಹಾಗುತ್ತದೆ. ನೋಬುವಿಗೆ ಸೇರಿದವಳಾದರೆ ಇನ್ನೆಂದಿಗೂ ಅವಳ ಚೇರ್ಮನ್ ಹತ್ತಿರವಾಗುವಂತಿಲ್ಲ. ಗೇಶಾ ಗೆ ಪ್ರೀತಿಸುವ ಅಧಿಕಾರವಿಲ್ಲ. ಇವರು ಬೇಡ ಎಂದು ಹೇಳುವ ಅಧಿಕಾರ ಇಲ್ಲ. ತನ್ನ ಓಕಿಯೋದ ಯಜಮಾನಿ ಹೇಳಿದ ಹಾಗೆ ಕೇಳಬೇಕು.

ಅವಳಿಗೆ ತೋಚುವುದು ಒಂದೇ ದಾರಿ. ನೋಬುವಿಗೆ ತನ್ನ ಮೇಲಿರುವ ಪೊಸೆಸ್ಸಿವ್ ನೆಸ್ ಗೊತ್ತಿರುವ ಅವಳು ಒಂದು ಉಪಾಯ ಮಾಡುತ್ತಾಳೆ. ಒಂದು ವಿಹಾರಕ್ಕೆ ಹೋಗಿರುವಾಗ ಅಮೇರಿಕಾದ ಜನರಲ್ ಗೆ ಹತ್ತಿರವಾಗುತ್ತಾಳೆ. ಅವನೊಡನೆ ಏಕಾಂತದಲ್ಲಿರುವಾಗ ಅಲ್ಲಿಗೆ ನೋಬುವನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಪಂಪ್ಕಿನ್ ಗೆ ವಹಿಸುತ್ತಾಳೆ. ಪಂಪ್ಕಿನ್ ಅಲ್ಲಿಗೆ ಬರುತ್ತಾಳೆ, ಆದರೆ ಚೇರ್ಮನ್ ನನ್ನು ಕರೆತಂದಿರುತ್ತಾಳೆ. ಆ ರೀತಿಯಾಗಿ ಅವಳು ತನ್ನ ಸೇಡು ತೀರಿಸಿಕೊಂಡಿರುತ್ತಾಳೆ.

ಆ ನಂತರ ಚಿತ್ರ ಮತ್ತೊಂದು ತಿರುವು ತೆಗೆದುಕೊಳ್ಳುತ್ತದೆ. ಅದೆಲ್ಲಾ ಇರಲಿ, ನಾನು ಮೊದಲು ಈ ಚಿತ್ರ ನೋಡಿದಾಗ ನನ್ನನ್ನು ತಾಕಿದ್ದು ಆ ಪುಟ್ಟ ಹುಡುಗಿಯ ಕಷ್ಟ, ಅವಳ ಪ್ರೇಮ, ಅವಳ ತಪಸ್ಸು ಮಾತ್ರ. ಆದರೆ ವರ್ಷಗಳ ನಂತರ ಮತ್ತೆ ನೋಡಿದ ಈ ಚಿತ್ರ ಅನೇಕ ಪ್ರಶ್ನೆಗಳನ್ನು ನನ್ನಲ್ಲಿ ಎಬ್ಬಿಸುತ್ತಿದೆ.

ಮೊದಲು ಇದ್ದದ್ದು ಗಂಡು ಗೇಶಾಗಳು. ಅ ನಂತರ ನಡೆದ ಸ್ಥಿತ್ಯಂತರದಲ್ಲಿ ಹೆಣ್ಣು ಗೇಶಾ ಪದ್ಧತಿ ಪ್ರಾರಂಭವಾಗುತ್ತದೆ. ಈ ಪದ್ಧತಿಯಲ್ಲಿ ಗಂಡು ಹೆಂಡತಿಗೆ ನಿಷ್ಠನಾಗಿರಬೇಕಾದ ಅಗತ್ಯ ಇಲ್ಲ. ಅವನ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಹೆಂಡತಿಯ ಜವಾಬ್ದಾರಿ, ಕರ್ತವ್ಯ. ಗಂಡನ ಸಂಜೆಗಳ ಮೇಲೆ, ರಾತ್ರಿಗಳ ಮೇಲೆ ಅವಳಿಗೆ ಹಕ್ಕಿಲ್ಲ. ಗಂಡಿನ ಈಗೋ ತಣಿಸುವ, ಸುಖ ಹೆಚ್ಚಿಸುವುದಕ್ಕಾಗಿ ಗೇಶಾ ಪದ್ಧತಿ ಇದೆ. ಇಲ್ಲಿ ಆತ ಚೆಲ್ಲಬೇಕಿರುವುದು ಹಣ ಮಾತ್ರ.

 

ಗೇಶಾ ಆತನ ಮನಸ್ಸಿಗೆ ಸಂತಸವಾದದ್ದನ್ನೇ ಆಡುತ್ತಾಳೆ, ಅವನ ಮನಸ್ಸನ್ನು ಆಹ್ಲಾದಗೊಳಿಸಲೆಂದೇ ಹಾಡುತ್ತಾಳೆ, ಕುಣಿಯುತ್ತಾಳೆ, ಅವನಿಗೆ ಕುಡಿಯಲು ಕಂಪನಿ ಕೊಡುತ್ತಾಳೆ. ಅವಳು ಅವನಿಂದ ಹಣದ ಹೊರತು ಮತ್ತೇನನ್ನೂ ನಿರೀಕ್ಷಿಸುವಂತಿಲ್ಲ. ಅದಕ್ಕೆ ಮೀರಿ ಆಕೆಗೆ ಪ್ರೀತಿಯ ಒಂದು ತುಣುಕು ಸಿಕ್ಕರೂ ಅವಳು ಪುಣ್ಯವಂತೆ. ಇದನ್ನು ಒಂದು ಸಾಂಸ್ಕೃತಿಕ ಪದ್ಧತಿಯನ್ನಾಗಿ ಬೆಳೆಸುವ ಪೋಷಿಸುವ ಇಡೀ ವ್ಯವಸ್ಥೆಯ ಕ್ರೌರ್ಯಕ್ಕೇನು ಹೇಳಲಿ?

ಜಪಾನಿನ ಗೇಶಾ, ನಮ್ಮಲ್ಲಿನ ದೇವದಾಸಿಗಳು, ಉತ್ತರಭಾರತದ ಉಮ್ರಾವ್ ಜಾನ್… ಜಗತ್ತಿನ ಎಷ್ಟೆಲ್ಲಾ ಮೂಲೆಗಳು, ಆದರೆ ಕಥೆ ಮಾತ್ರ ಒಂದೇ. ಫೆಮಿನಿಸಂ ಬಗ್ಗೆ ನಂಬಿ ಮಾತನಾಡುವ ಅದರ ಆಚರಣೆಗಾಗಿ ಹೊಡೆದಾಡುವ ದಿನಮಾನದಲ್ಲಿ ಈ ಚಿತ್ರ ಇನ್ನೊಂದು ಬಗೆಯ ಪ್ರಶ್ನೆಗಳನ್ನು ನನ್ನಲ್ಲಿ ಬಿತ್ತಿತ್ತು. ಆ ಪದ್ಧತಿ ಮುಗಿಯಿತು ಎಂದು ನಿರಾಳವಾಗಿ ನಿಟ್ಟುಸಿರಿಡಲು ಸಾಧ್ಯವೆ? ಮತ್ತ್ಯಾವುದೋ ರೂಪದಲ್ಲಿ ಇದೇ ವ್ಯವಸ್ಥೆಯನ್ನು ನಾವು ಪೋಷಿಸುತ್ತಿಲ್ಲವೆ? ವಿಮೋಚನೆಯ ಫಲವನ್ನು ಉಣ್ಣುತ್ತಿರುವವರು ಯಾರು?

ಇಂದಿಗೂ ಗೇಶಾ ಹೆಸರನ್ನು ಹೊರದೆ ಅದೇ ರೀತಿಯಲ್ಲಿರುವ ’ಸಂಗಾತಿ’ಗಳ ನೋವು ನಮ್ಮನ್ನು ಯಾಕೆ ತಾಕುತ್ತಿಲ್ಲ? ಅವರೂ ಅಷ್ಟೇ, ಸಂಗಾತಿಗೆ ಹಿತವಾಗುವ ಹಾಗೆ ಮಾತನಾಡುತ್ತಾರೆ, ಹಿತವಾಗುವುದನ್ನು ಮಾತ್ರ ಮಾತನಾಡುತ್ತಾರೆ, ಇಲ್ಲದಿದ್ದರೆ ಅವರು ಕಾರಣವನ್ನೇ ಹೇಳದೆ ಎದ್ದು ನಡೆದುಬಿಡುತ್ತಾರೆ. ಹಾಗಾಗಿ ಇವರು ಕಾವ್ಯ ಸಂಗೀತ ನಾಟಕದ ಬಗ್ಗೆ ಚರ್ಚಿಸುತ್ತಾರೆ, ನಗುತ್ತಾರೆ, ನಗಿಸುತ್ತಾರೆ. ನಂತರ ಮನೆ ಮಡದಿ ಮಕ್ಕಳ ಬಳಿ ವಾಪಸ್ ಹೋಗುವ ’ಸಂಗಾತಿ’ಗೆ ಕೈ ಬೀಸುತ್ತಾ, ಕರವಸ್ತ್ರ ಎದೆಗೊತ್ತಿಗೊಳ್ಳುತ್ತಾರೆ. ಹೆಸರು ಮಾತ್ರ ಬದಲಾಗಿದೆ, ವ್ಯವಸ್ಥೆಯಲ್ಲ. ಹೆಣ್ಣಿನ ಆರ್ಥಿಕ ಸಬಲತೆ ತಂದಿರುವ ಒಂದು ಬದಲಾವಣೆ ಎಂದರೆ ಈಗ ಆತ ಆಕೆಯ ಆರ್ಥಿಕ ಜವಾಬ್ದಾರಿಯನ್ನು ಸಹ ಹೊರಬೇಕಾಗಿಲ್ಲ.

ಒಂದು ಚಿತ್ರ ಬದಲಾದ ಕಾಲಮಾನ, ವಯೋಮಾನಗಳಲ್ಲಿ ಹೇಗೆ ಬೇರೆ ಬೇರೆ ನೆಲೆಗಳಿಂದ ನಮ್ಮನ್ನು ತಾಕುತ್ತದೆ ಎನ್ನುವುದಕ್ಕೆ ಈ ಚಿತ್ರ ಒಂದು ಉದಾಹರಣೆ. ಚಿತ್ರದಲ್ಲಿ ಗಮನ ಸೆಳೆಯುವುದು ಕಲಾ ನಿರ್ದೇಶನ. ಜಪಾನ್, ಓಕಿಯೋ, ಸೆಣಬು, ಬಿದಿರಿನ ಮನೆಗಳು, ಕನಸಿನಂತಹ ಟೀ ಹೌಸ್ ಗಳು, ಕಿಮೋನೋಗಳು ಎಲ್ಲವನ್ನೂ ಚಿತ್ರ ಸುಂದರವಾಗಿ ಮರುನಿರ್ಮಿಸುತ್ತದೆ.

ಗಮನಿಸಲೇ ಬೇಕಿರುವ ಇನ್ನೊಂದು ನಟನೆ. ಎಲ್ಲರೂ ಇಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇಲ್ಲಿ ಜಪಾನ್ ಗೇಶಾಗಳ ಪಾತ್ರವನ್ನು ಚೀನಾದ ನಟಿಯರು ಮಾಡಿದ್ದಾರೆ ಎನ್ನುವ ತಕರಾರು ಸಹ ಎದ್ದಿತ್ತು. ಆದರೆ ನಮಗೆ ಆ ಯಾವ ವ್ಯತ್ಯಾಸ ಸಹ ಕಾಣುವುದಿಲ್ಲ. ನಮಗೆ ಕಾಣುವುದೆಲ್ಲಾ ಆ ಹೆಣ್ಣು ಜೀವಗಳ ಮಾತೇ ಆಗದ ಭಾವಗಳು ಮತ್ತು ಮಾತನಾಡುವ ಅವರ ಕಣ್ಣುಗಳು.

‍ಲೇಖಕರು avadhi

April 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: