’ಮುಂಗಾರಿನ ಮೋಡಗಳು ಮತ್ತು ವಾಚ್ ಮನ್ನಮ್ಮನ ಸಂಸಾರ’ – ಚಂದ್ರಶೇಖರ ಆಲೂರ್


ಎಷ್ಟೋ ದಿನಗಳಾಗಿತ್ತು ಮನೆಯ ಟೆರೇಸಿನ ಮೇಲೆ ಹೋಗಿ . ಮೊನ್ನೆ ಭಾನುವಾರ ನೀರಿನ ಟ್ಯಾಂಕ್ ಯಾವ ಸ್ಥಿತಿಯಲ್ಲಿದೆ ನೋಡೋಣ ಅಂದುಕೊಂಡು ಹೋದೆ. ಮೇಲೆ ಹೋಗುತ್ತಿದ್ದಂತೆ ವಿಷಯವೇ ಮರೆತು ಹೋಯಿತು . ಮೂರು ದಿನದಿಂದ ಆಕಾಶದ ನೀಲಿಯೂ ಕಾಣದಷ್ಟು ಮೋಡ ಮುಚ್ಚಿಕೊಂಡಿದ್ದರೂ ಅದು ಅಷ್ಟಾಗಿ ಅರಿವಿಗೆ ಬಂದಿರಲಿಲ್ಲ . ಈಗ ನೋಡುತ್ತೇನೆ , ಸಮಯ ಹತ್ತು ಗಂಟೆ ದಾಟಿದ್ದರೂ ಹೊರಗೆ ಇಣುಕಲು ಸೂರ್ಯ ತಿಣುಕಾಡುತ್ತಿದ್ದ . ಆಗಸದಲ್ಲಿ ಮೋಡಗಳ ಜೂಜಾಟ . ಒಂದನ್ನೊಂದು ಹಿಡಿಯಲು ಬಾಜಿ ಕಟ್ಟಿದ ಹಾಗೆ ಓಡುತ್ತಿರುವ ಮೋಡಗಳು. ಮೋಡಗಳೆಂದರೆ ಕಪ್ಪು ಹೆಬ್ಬಂಡೆಯಂಥಹ ಕಾರ್ಮುಗಿಲುಗಳಲ್ಲ, ಪುಟಿಯುವ ಉತ್ಸಾಹದ ಮಕ್ಕಳಂಥ ಮೋಡಗಳು . ಅದು ಈ ಜ್ಯೇಷ್ಠ -ಆಷಾಢ ಹೊಮ್ಮಿಸುವ ಸೊಗಸು ಮತ್ತು ವಿಷಾದ .
ಎಷ್ಟೋ ಹೊತ್ತು ಆಕಾಶದಲ್ಲಿ ದಿಟ್ಟಿ ನೆಟ್ಟಿದ್ದವನು ನಿಧಾನಕ್ಕೆ ಕೆಳಗಿಳಿಸಿ ಸುತ್ತ ಮುತ್ತ ನೋಡಿದೆ. ಡೈನೋಸಾರ್ ಗಳಂತೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಅಪಾರ್ಟ್ ಮೆಂಟ್ ಗಳು . ಅರೆರೆ ! ನಮ್ಮ ಮನೆಯ ಹಿಂಭಾಗದ ನಿವೇಶನದಲ್ಲಿದ್ದ ವಾಚ್ ಮನ್ ಶೆಡ್ ಮಾಯವಾಗಿತ್ತು. ಮೊನ್ನೆ ಮೊನ್ನೆ ನೋಡಿದ ನೆನಪು. ಅದ್ಯಾವಾಗ ನೆಲಸಮವಾಯ್ತು .ನೋಡಿದರೆ ಆ ಶೆಡ್ ನ ಎದುರಿನ ಮನೆ ‘ಗೃಹ ಪ್ರವೇಶ ‘ವಾದಂತಿತ್ತು. ಎದುರಿನ ಪುಟ್ಟ ಚಪ್ಪರ ಇನ್ನೂ ಒಣಗಿರಲಿಲ್ಲ . ಜನ ಗಿಜಿ ಗಿಜಿ ಓಡಾಡುತ್ತಿದ್ದರು . ಆದ್ದರಿಂದಲೇ ಆ ಮನೆ ಕತ್ತಲು , ಕಾಯಲು ಬಂದಿದ್ದ ವಾಚ್ ಮನ್ನನ ಸಂಸಾರ ಮಾಯವಾಗಿದೆ .
ಸುಮಾರು ಒಂದು ವರ್ಷದ ಹಿಂದೆ: ಆ ದಿನ ಇನ್ನೂ ಚೆನ್ನಾಗಿ ನೆನಪಿದೆ . ಅಂದು ಭಾನುವಾರವಾದರೂ ಹೊತ್ತಿಗೆ ಮುಂಚೆ ಎದ್ದು ಒಂದು ಬೇವಿನ ಕಡ್ಡಿ ಹಿಡಿದು ಹಲ್ಲುಜ್ಜುತ್ತಾ ಮೇಲೆ ನಿಂತಿದ್ದೆ . ನಮ್ಮ ಮನೆಯ ಹಿಂದಿನ ನಿವೇಶನವನ್ನು ನಾಲ್ವರು ಕ್ಲೀನ್ ಮಾಡುತ್ತಿದ್ದರು.ಕಡೆಗೂ ಯಾರೋ ಪುಣ್ಯಾತ್ಮರು ಮನೆ ಕಟ್ಟಲು ಬರುತ್ತಿದ್ದಾರೆ ಎಂದುಕೊಂಡು ಕೆಲಸಗಾರರನ್ನು ವಿಚಾರಿಸಿದೆ .” ಇಲ್ಲ ಸಾಮಿ, ಇದು ವಾಚ್ ಮನ್ ಶೆಡ್ ಗೆ, ಎದುರುಗಡೆ ಸೈಟಿನಲ್ಲಿ ಬಿಲ್ಡಿಂಗ್ ಬರತ್ತೆ…” ಎಂದೊಬ್ಬ ಹೇಳಿದ ಬಿಲ್ಡಿಂಗ್ ಕೆಲಸ ಶುರು ಮಾಡೋಕ್ಕೆ ಮುಂಚೆನೇ ವಾಚ್ ಮನ್ ಗೆ ಕಟ್ಟುತಿದ್ದೀರೆನಯ್ಯ ಎಂದು ತಮಾಷೆ ಮಾಡಿದ್ದೆ.

ಅವರೆಲ್ಲ ಸೈಟ್ ಹಸನು ಮಾಡಿ ಒಂದಡಿ ಪಾಯ ತೋಡುವಷ್ಟರಲ್ಲಿ ಸಿಮೆಂಟ್ ಬ್ಲಾಕ್ ಗಳು ಬಂದವು. ಅದರ ಹಿಂದೆ ಕೆಮ್ಮಣ್ಣು . ನೋಡ ನೋಡುತ್ತಿದ್ದಂತೆಯೇ ಶೆಡ್ ಕಟ್ಟಡ ಆರಂಭವಾಗಿಯೇ ಬಿಟ್ಟಿತು. ಸ್ನಾನ , ತಿಂಡಿ ಮುಗಿಸಿ ಎರಡನೆ ರೌಂಡ್ ಕಾಫಿ ಹಿಡಿದು ಮೇಲೆ ಬಂದೆ. ಸಾಕಷ್ಟು ದೊಡ್ಡದಾದ ಶೆಡ್ . ನಾನು ತಮಾಷೆ ಮಾಡಿದಂತೆ ಪುಟ್ಟ ಮನೆಯಂತೆಯೇ ಇತ್ತು. ಅದರಲ್ಲಿ ಎರಡು ಭಾಗ . ಒಂದು ವಾಚ್ ಮನ್ ವಾಸಕ್ಕೆ,ಮತ್ತೊಂದು ಸಿಮೆಂಟ್ ಮೂಟೆ, ಗಾರೆ ಕೆಲಸದ ಸಾಮಾನು ಸರಂಜಾಮು ಇಟ್ಟುಕೊಳ್ಳುವ ಗೋಡಾನ್. ಒಂದು , ಎರಡು,ಮೂರು……ಆಗಲೇ ನಾಲ್ಕು ಇಟ್ಟಿಗೆ ಪಾಯ ಕಟ್ಟಡದ ಕೆಲಸ ಮುಗಿದೇ ಹೋಯ್ತು . ಅವರು ಕಟ್ಟುವ ಕೈಚಳಕ ವನ್ನು ನಾನು ತದೇಕಚಿತ್ತದಿಂದ ನೋಡುತ್ತಾ ನಿಂತುಬಿಟ್ಟೆ . ನನಗೆ ಬಾಲ್ಯದಿಂದಲೂ ಈ ಕಟ್ಟುವ ಕೆಲಸ . ಏನನ್ನಾದರೂ ನಿರ್ಮಿಸುವ ಕೆಲಸ ನೋಡುವುದೆಂದರೆ ಅದೊಂದು ಹುಚ್ಚು .
ನಾವು ಕೊಡಗನೂರಿನಲ್ಲಿದ್ದಾಗ, ರೈಲ್ವೆ ಸ್ಟೇಶನ್ ನಿಂದ ಶಾಲೆಗೆ ಹೋಗುವ ಹಾದಿಯಲ್ಲಿ ಒಂದು ಕುಂಬಾರರ ಮನೆಯಿತ್ತು . ಶಾಲೆಯಿಂದ ಬರುವಾಗ ಹಾಗೂ ರಜಾ ದಿನಗಳಂದು ನಾನು ಅವರ ಮನೆ ಅಂಗಳದಲ್ಲಿ ಹೋಗಿ ನಿಂತುಬಿಡುತ್ತಿದ್ದೆ . ಮಣ್ಣನ್ನು ಹದ ಮಾಡಿ , ಚಕ್ರದಲ್ಲಿ ಮಡಿಕೆ, ಕುಡಿಕೆಯನ್ನು ಹೂ ಎತ್ತಿದಷ್ಟು ಸಲೀಸಾಗಿ ಇಳಿಸುತ್ತಿದ್ದ ಬಗೆ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ . ಎಷ್ಟೋ ಸಲ ತಂಗಿಯರು ನನ್ನನ್ನು ಸ್ಟೇಶನ್ , ಆಟದ ಮೈದಾನಗಳಲ್ಲಿ ಹುಡುಕಿ ನಾನಿರುವ ಕುಂಬಾರರ ಹಟ್ಟಿಗೆ ಬರುತ್ತಿದ್ದರು . ಚನ್ನಪಟ್ಟಣದಲ್ಲಿ ಕಾಲೇಜು ಓದುವಾಗ ಕೂಡಾ ಈ ಹುಚ್ಚು ನನ್ನನ್ನು ಬಿಟ್ಟಿರಲಿಲ್ಲ . ರೈಲ್ವೆ ಸ್ಟೇಶನ್ ನ ಆಸುಪಾಸಿನಲ್ಲಿ ಹಲವು ಮನೆಗಳಲ್ಲಿ ಗೊಂಬೆ ಮಾಡುವ ಸಣ್ಣ ಪುಟ್ಟ ಕೈಗಾರಿಕಾ ಘಟಕಗಳಿದ್ದವು. ಮೂಲತಃ ಸಂಕೋಚ ಪ್ರವೃತ್ತಿಯವನಾದ ನಾನು ಯಾವುದೇ ನಾಚಿಕೆ ಮುಜುಗರ ಇಲ್ಲದೇ ಇಂಥ ಮನೆಗಳ ಮುಂದೆ ಹೋಗಿ ನಿಲ್ಲುತ್ತಿದ್ದೆ . ಗಂಡ-ಹೆಂಡತಿ-ಮಕ್ಕಳು, ಹುಲಿ ,ಸಿಂಹ, ಆನೆ, ರಾಧೆ-ಕೃಷ್ಣ , ಗಣೇಶ …. ಹೀಗೆ ಮನುಷ್ಯರು , ಪ್ರಾಣಿಗಳು, ದೇವತೆಗಳನ್ನು ಏಕಕಾಲಕ್ಕೆ ಸೃಷ್ಟಿಸುತ್ತಿದ್ದ ಪರಿಯನ್ನು ನಾನು ನಿಬ್ಬೆರಗಾಗಿ ನೋಡುತ್ತಾ ನಿಲ್ಲುತ್ತಿದ್ದೆ . ಅಷ್ಟೇಕೆ , ನಮ್ಮ ಮನೆ ಕಟ್ಟುವಾಗ , ನಮ್ಮೂರಿನವರೇ ಆದ ಡಗ್ಗಿ ಸೋಮಾಚಾರ್ ಮಾಡುವ ಪ್ರತಿಯೊಂದು ಮರಗೆಲಸವನ್ನೂ ನೋಡುತ್ತಾ ಕೂರುತ್ತಿದ್ದೆ .
ನನ್ನ ಬಾಲ್ಯ ಕಾಲದ ಹೀರೋಗಳಲ್ಲಿ ಒಬ್ಬ ಮೋಹನ ಎಂಬ ಹುಡುಗ . ಬೇಸಿಗೆ , ದಸರಾ ರಜಾ ದಿನಗಳಲ್ಲಿ ನಾನು ಕಬಿನಿಯಲ್ಲಿದ್ದ ಸರೋಜಕ್ಕನ ಮನೆಗೆ ಹೋದಾಗ , ಅವನು ಬೆಂಗಳೂರಿನಿಂದ ಅಲ್ಲಿದ್ದ ಅವರ ಕಮಲಕ್ಕನ ಮನೆಗೆ ಬರುತ್ತಿದ್ದ . ಹೊರಗೆ ಬಂದರೆ ಆ ವಯಸ್ಸಿಗೆ ಕೂಲಿಂಗ್ ಗ್ಲಾಸ್ ಹಾಕುತ್ತಿದ್ದ ಅವನಿಂದ , ಬೆಂಗಳೂರಿನ ವಿಚಾರ ತಿಳಿಯುತ್ತಿತ್ತು . ಅಂದರೆ ಬೆಂಗಳೂರಿನಲ್ಲಿ ತಮಿಳು-ತೆಲುಗು-ಮಲಯಾಳಿಗಳ ಪ್ರಾಬಲ್ಯದ ಬಗ್ಗೆ , ಆ ಸಿನೆಮಾಗಳೇ ಹೆಚ್ಚು ಬಿಡುಗಡೆಯಾಗುವ ಬಗ್ಗೆ ಚಿತ್ರ ವತ್ತಾದ ಮಾಹಿತಿ ಒದಗಿಸುತ್ತಿದ್ದ .( ಕಬಿನಿಯ ಕಾಡು ಮಾಯವಾಗಿ ಡ್ಯಾಂ ಆದ ಬಗೆಯನ್ನು ನಾವೆಲ್ಲಾ ಕಣ್ಣಾರೆ ಕಂಡವರು ಇದನ್ನು ಮುಂದೆ ತಿಳಿಸುತ್ತೇನೆ) ಡ್ಯಾಂ ಸೈಟಿಗೆ ಬಂದು ಬೀಳುತ್ತಿದ್ದ ಮರಳಿನ ಬೆಟ್ಟದಲ್ಲಿ ಆಡುವಾಗ ನಮಗೆ ಸಾಕಷ್ಟು ಜೇಡಿ ಮಣ್ಣು ಸಿಕ್ಕುತ್ತಿತ್ತು . ಅದರಲ್ಲಿ ಆತ ಕ್ಷಣಾರ್ಧದಲ್ಲಿ ದೇವಾನು ದೇವತೆಗಳನ್ನೆಲ್ಲ ಮಾಡಿ ಉಡುಗೊರೆಯಾಗಿ ಕೊಡುತ್ತಿದ್ದ . ಆಗಲೂ ನಾನು ಅವನ ಬೆರಳು ಮಣ್ಣಿನಲ್ಲಿ ನರ್ತಿಸುವ ಬಗೆಯನ್ನು ಮರಳ ಮೇಲೆ ಕುಳಿತು ಕುತೂಹಲ -ಆಸಕ್ತಿಯಿಂದ ನೋಡುತ್ತಿದ್ದೆ . ಆಕಾಶದ ತುಂಬೆಲ್ಲ ತೊನೆದಾಡುತ್ತಿರುವ ಮೋಡಗಳಂತೆ ಏನೇನೋ ನೆನಪುಗಳು ಉಕ್ಕುತ್ತಿವೆ . ಮರಳಿ ವಾಚ್ ಮನ್ ಶೆಡ್ ಗೆ ಬರುವುದಾದರೆ.
ಅಂದೇ ಸಂಜೆ ನಾಲ್ಕರ ವೇಳೆಗೆ ಶೀಟುಗಳು ಬಂದವು. ಅವನ್ನು ಕಟ್ಟಡದ ಮೇಲೆ ಹೊಡೆಸಿ, ದಪ್ಪ ದಪ್ಪ ಸೈಜುಗಲ್ಲುಗಳನ್ನು ಜೋಡಿಸುವುದರೊಂದಿಗೆ ಒಂದು ಮನೆ ಸಿದ್ಧವಾಗಿಯೇ ಹೋಯ್ತು . ಅದಾದ ಸ್ವಲ್ಪ ಸಮಯಕ್ಕೆ ಒಂದು ಸ್ಟೀಲ್ ಟ್ರಂಕು , ತುಂಬಿದ ಗೋಣಿ ಚೀಲ ಹೊತ್ತುಕೊಂಡು ವಾಚ್ ಮನ್ ಹಾಗೂ ಆತನ ಸಂಸಾರ ( ಗಂಡ -ಹೆಂಡತಿ-ಹದಿಮೂರು , ಹದಿನಾಲ್ಕರ ಮಗಳು) ಬಂತು. ಕೊಂಚ ಅಡ್ಡಗಾಲು ಹಾಕಿ ನಡೆಯುತ್ತಿದ್ದ ಅಣ್ಣಾತೆ ಯಂತಿದ್ದ ವಾಚ್ ಮನ್ ಕುಡುಕನಂತೆಯೂ ಕಾಣುತ್ತಿದ್ದ.( ಮುಂದೆ ವೀಕೆಂಡುಗಳಲ್ಲಿ ಇವನ ಗಾನ-ನರ್ತನವನ್ನೆಲ್ಲ ಕೇಳಿ, ನೋಡಬೇಕಾಯ್ತು) ಆಕೆ ಕಂದು ಬಣ್ಣದ ಹೆಂಗಸು. ವಯಸ್ಸು ಸುಮಾರು ಮೂವತ್ತು ಮೂವತ್ತೈದು ಇರಬಹುದೇನೋ.ಕಪ್ಪು ನೈಲಾನ್ ಸೀರೆ, ಅದಕ್ಕೆ ಮ್ಯಾಚಿಂಗ್ ರವಿಕೆ ಧರಿಸಿ ಮೂರು ಮೊಳ ಹೂ ಮುಡಿದಿದ್ದಳು . ಅವರ ಮಗಳು ಯಾವುದೋ ಶುಭ ಕಾರ್ಯಕ್ಕೆ ಬಂದವಳಂತೆ ರೇಷ್ಮೆ ಲಂಗ ಧರಿಸಿದ್ದಳು . ಬಂದ ಕೂಡಲೇ ಕೆಲಸ ಆರಂಭಿಸುವವಳಂತೆ , ಸೀರೆಯನ್ನು ಸ್ವಲ್ಪವೇ ಎತ್ತಿಕಟ್ಟಿ ತನ್ನೊಡನೆ ತಂದಿದ್ದ ನಾಲ್ಕಾರು ಸಣ್ಣ ಹಲಗೆಗಳನ್ನು ಗೋಡೆಗೆ ಬಡಿಸಿ ಒಂದು ಸ್ಟ್ಯಾಂಡ್ ನಿರ್ಮಿಸಿದಳು . ನಂತರ ಟ್ರಂಕನ್ನು ತೆಗೆಯದೆ ಚೀಲದಲ್ಲಿದ್ದ ಸಾಮಾನುಗಳನ್ನೆಲ್ಲ ಹರವಿಕೊಂಡು ಒಂದೊಂದಾಗಿ ಜೋಡಿಸಿಕೊಂಡಳು . ಪಾತ್ರೆ , ಪಡಗಗಳು, ಪ್ಲಾಸ್ಟಿಕ್ ಡಬ್ಬಿಗಳು , ಒಂದು ದೇವರ ಫೋಟೋ , ಕನ್ನಡಿ ಮುಂತಾಗಿ ಒಂದು ಪುಟ್ಟ ಸಂಸಾರಕ್ಕೆ ಬೇಕಾದ ಎಲ್ಲ ಸಾಮಾನು ಸರಂಜಾಮು ಅಲ್ಲಿದ್ದಂತಿತ್ತು . ನಂತರ ಆಕೆ ದೂರದಲ್ಲಿ ಹಸು ಕಟ್ಟುತ್ತಿದ್ದವರ ಮನೆಗೆ ಹೋಗಿ ಒಂದು ಬಕೆಟ್ ನಲ್ಲಿ ಸಗಣಿ ತುಂಬಿಕೊಂಡು ಬಂದಳು . ಮೊದಲಿಗೆ ಸ್ವಲ್ಪ ಸಗಣಿ ನೀರನ್ನು ಅಂಗಳದಲ್ಲಿ ಚಿಮುಕಿಸಿದಳು ,ಬಹುಶಃ ಧೂಳು ಏಳದಿರಲಿ ಎಂದು . ಅದಾದ ಮೇಲೆ ತನ್ನ ಗೂಡನ್ನು ಎರಡು ಮೂರು ಬಾರಿ ಒಪ್ಪವಾಗಿ ಸಾರಿಸಿದಳು . ಮಗಳ ಕೈಯಲ್ಲಿ ಮತ್ತಷ್ಟು ಸಗಣಿ ತರಿಸಿ ಮನೆಯ ಅಂಗಳವನ್ನು ವಿಸ್ತರಿಸಿಕೊಂಡು ಹೊಳೆಯುವ ಗಾರೆ ನೆಲ ಕಾಣುವಂತೆ ಮಾಡಿಕೊಂಡಳು . ಗಂಡನಿಂದ ನಾಲ್ಕಾರು ಇಟ್ಟಿಗೆ ತರಿಸಿ ಮನೆಯ ಮುಂದೆ ಒಂದು ಸೌದೆ ಒಲೆಯನ್ನು ಹಾಕಿಸಿಕೊಂಡಳು . ಈಗ ಟ್ರಂಕನ್ನು ತೆಗೆದುಕೊಂಡು ಹೋಗಿ ಒಳಗೆ ಇಟ್ಟು ಬಾಗಿಲನ್ನು ಮುಂದೆ ಸರಿಸಿದಳು . ಮನೆಗೆಲಸವನ್ನೆಲ್ಲ ಮುಗಿಸಿದ ಮೇಲೆ ರಂಗೋಲಿ ಪುಡಿ ಡಬ್ಬಿ ತಂದು ಶೃದ್ಧೆ ಹಾಗೂ ತನ್ಮಯತೆಯಿಂದ ತನ್ನ ಹೊಸ ಮನೆಯ ಮುಂದೆ ಒಂದು ದೊಡ್ಡ ರಂಗೋಲಿಯನ್ನು ಬಿಡಿಸಿದಳು .ಹೊಸಿಲ ಬಳಿ ಎರಡು ಸಗಣಿ ಮುದ್ದೆ ಇಟ್ಟು ನಮ್ಮ ಹಿತ್ತಲಿನಲ್ಲಿದ್ದ ದಾಸವಾಳದ ಗಿಡದಿಂದ ಎರಡು ಹೂ ಕಿತ್ತುಕೊಂಡು ಅದಕ್ಕೆ ಸಿಕ್ಕಿಸಿದಳು . ಎಲ್ಲ ಕೆಲಸ ಮುಗಿಸಿ , ಅಲ್ಲಿಯೇ ಇದ್ದ ಒಣಗಿದ ಬೇಲಿ ಗಿಡಗಳನ್ನು ಮುರಿದು ಸೌದೆ ಒಟ್ಟು ಮಾಡಿಕೊಂಡು ಒಲೆ ಹಚ್ಚಲು ಕುಳಿತಾಗ ನಾನು ಆಕೆಯನ್ನು ಗಮನಿಸಿದೆ . ಆಕೆಯ ಕಣ್ಣುಗಳು ಅದೇ ತಾನೆ ತೊಳೆದ ಕೆಂಡದಂತೆ , ಕಪ್ಪು ಇದ್ದಿಲಿನಂತೆ ಹೊಳೆಯುತ್ತಿದ್ದವು . ಎರಡೂ ಕೈ ತುಂಬಾ ಹಸಿರು ಬಳೆ ಹಾಕಿಕೊಂಡಿದ್ದಳು . ಮುಡಿದ ಹೂವು ಇನ್ನೂ ಬಾಡಿರಲಿಲ್ಲ . ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ತೊಳೆದು ಅನ್ನಕ್ಕೆ ಇಡುತ್ತಿದ್ದಂತೆಯೇ ನಾನು ಕೆಳಗಿಳಿದು ಬಂದೆ .
ಇದಾದ ಮೂರು-ನಾಲ್ಕು ದಿನಕ್ಕೆ ಒಂದು ಸಂಜೆ ನಾನು ಕಚೇರಿಯಿಂದ ಹೋಗುವ ಸಮಯಕ್ಕೆ ನಮ್ಮ ಮನೆಯ ಗೇಟಿನ ಬಳಿ ಆ ಹೆಂಗಸು ಕಾಯುತ್ತಿದ್ದಳು . ನಾನು ಕಾರು ನಿಲ್ಲಿಸಿ ಆಕೆಯನ್ನು ಪ್ರಶ್ನಾರ್ಥಕವಾಗಿ ನೋಡಿದಾಗ ತೆಂಗಿನ ಮರದ ಕಡೆ ಬೆರಳು ತೋರುತ್ತಾ ‘ನಾಲ್ಕು ಗರಿ ಬೇಕು ಸಾಮಿ’ ಎಂದಳು. ಯಾಕೆ, ಏನು ಕೇಳದೆ ನಾನು ಹುಂ ಎಂದು ಕಾರ್ ಶೆಡ್ ತೆಗೆದು ಕಾರು ನಿಲ್ಲಿಸಿ ಮನೆಯ ಒಳಗೆ ಹೋದೆ. ನಂತರ ಎಳೆಯ ಗರಿಗಳನ್ನು ಕಡಿದು ಬಿಡುತ್ತಾಳೆ ಎಂಬ ಆತಂಕದಿಂದ ಮತ್ತೆ ಹೊರಬಂದೆ . ಅಷ್ಟರಲ್ಲಿ ಆಕೆ ಒಂದು ಏಣಿ ತಂದು ಸಾಕಷ್ಟು ಬಲಿತ , ಬೀಳುವಂತಿದ್ದ ಗರಿಗಳನ್ನು ಎಳೆದುಕೊಂಡು ಹೋಗುವಾಗ ಆಕೆಯನ್ನು ದಿಟ್ಟಿಸಿ ನೋಡಿದೆ . ಕೆಲಸ ಕೈ ಬಿಡುವ ಮುನ್ನವೇ ಬಂದಿದ್ದರೂ ಆಕೆಯ ಮುಖದಲ್ಲಿ ತುಸುವೂ ದಣಿವಿರಲಿಲ್ಲ. ಇಂದೂ ಕೂಡ ಅದೇ ಬಗೆಯಾಗಿ ಅಚ್ಚು ಕಟ್ಟಾಗಿ ಡ್ರೆಸ್ ಮಾಡಿ ಕೊಂಡಿದ್ದಳು . ಹಸಿರು ಪಾಲಿಸ್ತರ್ ಸೀರೆ , ಮ್ಯಾಚಿಂಗ್ ರವಿಕೆ , ಎಣ್ಣೆ ಹಚ್ಚಿ ಸರಿಯಾಗಿ ಹೆಣೆದ ಜಡೆಯಲ್ಲಿ ಮೂರು ಮೊಳ ಹೂವು . ಈಕೆ ಕೆಲಸ ಕದಿಯುವ ಶೋಕಿಲಾಲ್ ಇರಬೇಕು ಅಂದುಕೊಂಡೆ . ಮರುದಿನ ಮುಂಜಾವಿನಲ್ಲಿ ಹಿತ್ತಲಿನಲ್ಲಿದ್ದ ಪರಂಗಿ ಗಿಡದಲ್ಲಿ ಪಪ್ಪಾಯ ಕಿತ್ತುಕೊಂಡು ಬರುವಾಗ ನೋಡಿದೆ . ನಿನ್ನೆ ಸಂಜೆ ತೆಗೆದುಕೊಂಡು ಹೋದ ತೆಂಗಿನ ಗರಿಗಳನ್ನು ಹೆಣೆದು ಅದರಲ್ಲಿ ಆಕೆ ಒಂದು ಸ್ನಾನದ ಕೋಣೆಯನ್ನು ಕಟ್ಟಿಕೊಳ್ಳುತ್ತಿದ್ದಳು . ಅಣ್ಣಾತೆ ಮಗಳೊಂದಿಗೆ ಹರಟುತ್ತಾ ಕಂಬಳಿ ಕವುಚಿಕೊಂಡು ಕುಳಿತಿದ್ದ . ನಂತರದ ದಿನಗಳಲ್ಲಿ ಹಲವು ಬಾರಿ ಆಕೆಯನ್ನು ಗಮನಿಸಿದೆ : ಆ ಹೆಂಗಸು ಗಂಡಾಳಿಗಿಂತಲೂ ಮಿಗಿಲಾಗಿ ಸೈಜುಗಲ್ಲು ಗಳನ್ನು ತಲೆಯ ಮೇಲೆ ಹೊತ್ತು ಹೋಗುವುದನ್ನು ಬಾಂಡ್ಲಿಯ ತುಂಬಾ ಇಟ್ಟಿಗೆಗಳನ್ನು ತುಂಬಿ ಸಾಗಿಸುವುದನ್ನು … ಆಕೆ ನಿಜಕ್ಕೂ ಶ್ರಮಜೀವಿ . ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಆಕೆಗಿದ್ದ ಶೃದ್ಧೆ ನನ್ನಲ್ಲಿ ಆಕೆಯ ಬಗ್ಗೆ ಅಕ್ಕರೆ ಬೆರೆತ ಗೌರವ ಭಾವನೆ ಮೂಡುವಂತೆ ಮಾಡಿತು . ಆಕೆಯ ಬಳಿ ಇದ್ದದ್ದು ನಾಲ್ಕೇ ಸೀರೆ . ಕೆಂಪು, ಹಳದಿ,ಹಸಿರು ,ನೀಲಿ. ಅವನ್ನೇ ಆಕೆ ಹೊಸದೆಂಬಂತೆ ಉಡುತ್ತಿದ್ದ ರೀತಿ ,ನೀಟಾಗಿ ಧರಿಸುತ್ತಿದ್ದ ಮ್ಯಾಚಿಂಗ್ ರವಿಕೆ, ಸದಾ ಹೆಣೆದುಕೊಂಡ ನೀಳ ಜಡೆ , ಮುಡಿಗೆ ಎಂದೂ ತಪ್ಪಿಸದ ಹೂವು . ಇದರೊಂದಿಗೆ ನಮ್ಮ ಮನೆಯ ಕರಿಬೇವಿನ ಸೊಪ್ಪಿನಲ್ಲಿ ಆಕೆ ಹಾಕುತ್ತಿದ್ದ ಒಗ್ಗರಣೆಯ ಘಮ ಘಮ, ವಾರಕ್ಕೊಮ್ಮೆಯಾದರೂ ತಪ್ಪಿಸದೇ ಬಿಡುತ್ತಿದ್ದ ದೊಡ್ಡ ರಂಗೋಲಿ .
ಇಟ್ಟಿಗೆ, ಸೈಜುಗಲ್ಲು, ಮರಳು ,ಜಲ್ಲಿ ಹೊರಲು ಹೋಗುವ ಮುನ್ನ ಇಷ್ಟೊಂದು ತನ್ಮಯತೆಯಿಂದ , ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗಲು ಆಕೆಗೆ ಹೇಗೆ ಸಾಧ್ಯ ಎಂದು ಅಚ್ಚರಿ ಪಟ್ಟಿದ್ದೇನೆ .ನಾನು ಹಲವು ಕಛೇರಿಗಳಲ್ಲಿ , ಸಿಗ್ನಲ್ ಗಳಲ್ಲಿ ಗಮನಿಸಿದ್ದೇನೆ ಹಲವು ಮಹಿಳೆಯರ Bra strap ಬಿಟ್ಟು ಹೋಗಿರುತ್ತದೆ ,ಕೆಲವರದ್ದು ರವಿಕೆಯಿಂದ ಕೆಳಗೆ ಇಣುಕುತ್ತಿರುತ್ತದೆ , ಇನ್ನೂ ಹಲವರ ಸೀರೆ ಎಷ್ಟು ಮುದುಡಿರುತ್ತದೆಯೆಂದರೆ ನೇರವಾಗಿ ಹಾಸಿಗೆಯಿಂದ ಎದ್ದು ಬಂದವರಂತೆ ಕಾಣುತ್ತದೆ . ಕೆಲವರು ತಲೆಗೂದಲಿನ ಸಿಕ್ಕನ್ನೇ ಬಿಡಿಸಿರುವುದಿಲ್ಲ , ಕೆಲವರ ಪೆಟಿಕೋಟ್ ಸೀರೆಯಿಂದ ಕೆಳಗೆ ಇಣುಕುತ್ತಾ Sunday is longer than Monday ಎಂಬಂತಿರುತ್ತದೆ.. ಇನ್ನೂ ಕೆಲವರು ಚೂಡಿದಾರ್ ಮೇಲೆ ಕೈಗೆ ಸಿಕ್ಕ ದುಪ್ಪಟ್ಟಾ ಹೊದ್ದುಕೊಂಡು ಬಂದಿರುತ್ತಾರೆ . ಟ್ರಿಮ್ ಆಗಿ ಡ್ರೆಸ್ ಮಾಡುತ್ತಿದ್ದ ಯುವತಿಯರು ಕೂಡ ಮೂವತ್ತೈದು ದಾಟುತ್ತಿದ್ದಂತೆಯೇ ದೇಹದ ಮೇಲಿನ ಪರಿವೆಯನ್ನೇ ಕಳೆದುಕೊಂಡವರಂತೆ ಕಾಣುತ್ತಾರೆ . ಕೆಲವರಿಗೆ ಇದು ಭಿನ್ನ ರೀತಿಯಲ್ಲಿಯೂ ಅನ್ವಯಿಸುತ್ತದೆ!.
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆಯನ್ನು , ಆಸಕ್ತಿಯನ್ನು, ಅಭಿರುಚಿಯನ್ನು ಉಳಿಸಿಕೊಂಡು ಹೋಗುವುದು ದಿನಗಳೆದಂತೆ ನಮಗೆ ಕಷ್ಟವಾಗುತ್ತಾ ಹೋಗುತ್ತದೆ.ಇದಕ್ಕೆ ಕಾರಣವನ್ನು ಮಕ್ಕಳ ಮೇಲೆ, ಕಚೇರಿಯ ಮೇಲೆ , ಸಿಕ್ಕದ ಆಟೋ , ಬಸ್ಸಿನ ಮೇಲೆ ಹೊರಿಸಿ ಹಗುರವಾಗಿ ಬಿಡುತ್ತೇವೆ . ಆದರೆ ನಮ್ಮ ವಾಚ್ ಮನ್ನಮ್ಮ ಮಾತ್ರ ಇದಕ್ಕೆಲ್ಲ ಹೊರತಾಗಿದ್ದಳು ಆಕೆಯನ್ನು ಎನ್ ವಾಚ್ ಮನ್ನಮ್ಮ ಮನೆ ಎಲ್ಲಿಗೆ ಬಂತು ಯಾವಾಗಲಾದರೂ ಎದುರಿಗೆ ಸಿಕ್ಕಾಗ ಕೇಳಿದರೆ ಖುಷಿಯಾಗುತ್ತಿತ್ತು . ಖುಷಿ-ವಾಚ್ ಮನ್ನಮ್ಮ ಎಂದು ಗೌರವದಿಂದ ಕರೆದ ಕಾರಣಕ್ಕೆ .
ಚಲಿಸುವ ಮೋಡಗಳಂತೆ ವಾಚಮನ್ನಮ್ಮನ ಸಂಸಾರ ಕೂಡ ಎಲ್ಲೋ ದೂರ ಹೋಗಿದೆ . ಮತ್ತೆಲ್ಲೋ ಆಕೆ ಹೀಗೆಯೇ ಸಗಣಿಯಲ್ಲಿ ನೆಲ ಸಾರಿಸುತ್ತಾ , ರಂಗೋಲಿ ಬಿಡುತ್ತಾ , ತೆಂಗಿನ ಗರಿಯಲ್ಲಿ ಬಾತ್ ರೂಮ್ ಹೆಣೆದು ಕೊಳ್ಳುತ್ತಾ , ನೀಟಾಗಿ ಡ್ರೆಸ್ ಮಾಡಿ ಹೂ ಮುಡಿದುಕೊಂಡು , ಮಾತಾಡುತ್ತಲೋ , ಹಾಡುತ್ತಲೋ ತಲೆಯ ಮೇಲೆ ಸೈಜುಗಲ್ಲು , ಇಟ್ಟಿಗೆ , ಜಲ್ಲಿ….ಸಾಗಿಸುತ್ತಿರಬಹುದು . ಆಕೆಯ ನೆತ್ತಿ ತಂಪಗಿರಲಿ.
ಮುಂಗಾರಿನ ಮೋಡಗಳು ಸೂರ್ಯನನ್ನು ಇನ್ನೂ ಸತಾಯಿಸುತ್ತಿದ್ದವು, ಮತ್ತಷ್ಟು ನೆನಪುಗಳು ಒತ್ತರಿಸಿಕೊಂಡು ನುಗ್ಗುತ್ತಿದ್ದವು .
 

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Sukhesh M.G.

    ಮನ ಮುಟ್ಟುವ ಬರಹ.
    ಇಂತಹ ಹಲವು ವಾಚ್ ಮನ್ನಮ್ಮಂದಿರು ದಿನವೂ ನಮ್ಮೆದುರು ಹಾದು ಹೋಗುತ್ತಲೇ ಇರುತ್ತಾರೆ. ನೋಡುವ ತಾಳ್ಮೆ, ಆಸಕ್ತಿ ನಮಗಿರುವುದಿಲ್ಲ ಅಷ್ಟೆ.

    ಪ್ರತಿಕ್ರಿಯೆ
  2. Ramakant

    ಚನ್ನಾಗಿ ಬರೆದಿದೀರ. ಅಭಿನಂದನೆಗಳು.

    ಪ್ರತಿಕ್ರಿಯೆ
  3. Gururaja kathriguppe

    After almost 10 years I am reading it again, ellu nimma lekhana haleyadu annisalilla, matthe, matthe, odisikolluva ‘freshness’ hageye ittu,
    Hosa prabandha galigagi kayuthale iddene,
    Anda hage, nimma lekhana odida nanthara elladaru ‘wachman shed’ sikkidare, alli 5 nimisha ninthu noduva, avarannu matanadisi avara ooru, keri, bagge vicharisuva ‘ketta chata’ suruvagide. nannannu halu madiddakke danyavadagalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: