’ಮಾಯದಂಥ ಮಾಯವ್ವ..’ – ರಾಘವೇಂದ್ರ ಜೋಶಿ ನೆನಪು

ರಾಘವೇಂದ್ರ ಜೋಶಿ

ಮಾಯವ್ವ.
ಒಂದು ಕಾಲದಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕಪ್ಪು ಮೈಬಣ್ಣದ ಮಾಮೂಲಿ ಹೆಣ್ಣುಮಗಳು. ನಮ್ಮನೆಯಲ್ಲಿ ಕಸ,ಮುಸುರೆಯನ್ನು ಮಾಡಿಕೊಂಡಿದ್ದಳು. ಚಂದ್ರಾಮ ಅವಳ ಗಂಡ. ನರಪೇತಲ.
ಇದೊಂದು ಬಡತನದ ಜೋಡಿಯಾಗಿತ್ತು. ಸಾಮಾನ್ಯವಾಗಿ ಬಡತನಕ್ಕೂ ಮತ್ತು ಮಕ್ಕಳ ಸಂಖ್ಯೆಗೂ ಇರಬಹುದಾದ ಒಂದು ಅವಿನಾಭಾವ ಸಂಬಂಧದಂತೆ ಮಾಯವ್ವಳಿಗೆ ಕೂಡ
ಹೊಟ್ಟೆತುಂಬ ಮಕ್ಕಳಿದ್ದವು. ಹುಟ್ಟಿದ ಹನ್ನೊಂದು ಮಕ್ಕಳಲ್ಲಿ ಏಳು ಬದುಕಿದ್ದವು. ಅವಳ ಗಂಡ ಪೀಚಲು ಚಂದ್ರಾಮ ಎಂಥದೋ ಎಣ್ಣೆ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ. ಖಾಕಿಡ್ರೆಸ್ಸಿನಲ್ಲಿ ಸೈಕಲ್
ಓಡಿಸಿಕೊಂಡು ಹೋಗುತ್ತಿದ್ದ ಆತ, ಎಣ್ಣೆ ಮಿಲ್ಲಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಅಂತ ಕಾಣುತ್ತದೆ. ವಿಚಿತ್ರವೆಂದರೆ ಆತ ಸೈಕಲ್ ಹತ್ತಿದ್ದನ್ನು ನಾವ್ಯಾರೂ ಒಮ್ಮೆಯೂ ನೋಡಲಿಲ್ಲ.
ಸುಮ್ಮನೇ ಸೈಕಲ್ಲನ್ನು ತಳ್ಳಿಕೊಂಡು ಹೋಗುತ್ತಿದ್ದ,ಬರುತ್ತಿದ್ದ ಅಷ್ಟೇ! ಹತ್ತಲಾಗದ,ಓಡಿಸಲಾಗದ ನಿನಗೆ ಸೈಕಲ್ಲಾದರೂ ಯಾಕೆ ಬೇಕು ಅಂತ ಯಾರಾದರೂ ಕೇಳಿದರೆ,ಏನೋ ಒಂದು ಪ್ಯಾಲಿ
ನಗೆ ಬೀರಿ ನಡೆದು ಬಿಡುತ್ತಿದ್ದ.
 
ಹೀಗಿದ್ದ ಚಂದ್ರಾಮ ಹಾಗೆ ಎಣ್ಣೆಮಿಲ್ಲಿನಿಂದ ರಾತ್ರಿಹೊತ್ತು ಕಂಟ್ರಿ ಸಾರಾಯಿ ಕುಡಿದು ಜೋಲಿ ಹೊಡೆಯುತ್ತ,ಸೈಕಲ್ಲು ತಳ್ಳಿಕೊಂಡು ಮನೆಗೆ ಬರುತ್ತಿದ್ದ. ಬರುತ್ತಿದ್ದಂತೆಯೇ ಹೆಂಡತಿಯ ಮೇಲೆ
ಜೋರು ಮಾಡುತ್ತಿದ್ದ. ವಾರದಲ್ಲಿ ನಾಲ್ಕು ಸಲ ಇದು ನಡದೇ ನಡೆಯುತ್ತಿತ್ತು. ಮನೆ ಹೊರಗಡೆ ನಿಂತು ಇದೆಲ್ಲ ತಮಾಷೆ ನೋಡುತ್ತಿದ್ದ ನಮಗೆಲ್ಲ ಸಿಕ್ಕಾಪಟ್ಟೆ ಗೊಂದಲವಾಗುತ್ತಿತ್ತು.
ಯಾಕೆಂದರೆ ಅಲ್ಲಿ ಯಾರು,ಯಾರಿಗೆ,ಏನು ಮಾಡುತ್ತಿದ್ದಾರೆ ಅನ್ನುವದು ನಮ್ಮಂಥ ಚಿಳ್ಳೆಗಳ ಮೆದುಳಿಗೆ ಅರ್ಥವಾಗದ ನಿಗೂಢ ಸೂತ್ರವೊಂದು ಅಲ್ಲಿ ನಿಧಾನವಾಗಿ ಅರಳುತ್ತಿರುತ್ತಿತ್ತು.
ಚಂದ್ರಾಮ ಹೆಂಡತಿಗೆ ಜೋರುಧ್ವನಿಯಲ್ಲಿ ರೇಗುತ್ತಿದ್ದ. ಆಕೆ ಸುಮ್ಮನಿರುತ್ತಿದ್ದಳು. ಮಧ್ಯೆಮಧ್ಯೆ ಅಲ್ಲಲ್ಲಿ ಧೊಪ್ಪೆಂದು ನೆಲಕ್ಕೆ ಬಿದ್ದ,ಪಾತ್ರೆ ಅಪ್ಪಳಿಸಿದ ಸದ್ದು ಕೇಳಿ ಬರುತ್ತಿತ್ತು. ಆದರೆ ಒಳಗಡೆ
ಮಾಯವ್ವ ತನ್ನ ಗಂಡನಿಗೆ ಸರಿಯಾಗಿ ತದುಕುತ್ತಿದ್ದಳೆಂಬ ವಾಸ್ತವ ನಮ್ಮ ಕಲ್ಪನೆಗೆ ನಿಲುಕುವಂತಿರಲಿಲ್ಲ!
ಯಾಕೆಂದರೆ ಬೆಳಿಗ್ಗೆ ಎದ್ದು ನೋಡಿದರೆ,ಇದೇ ಮಾಯವ್ವ ಅದೇ ಚಂದ್ರಾಮನಿಗೆ ಊಟದ ಬುತ್ತಿ ಕೈಗಿಡುತ್ತ ಗಂಡನನ್ನೂ,ಆತನ ಸೈಕಲ್ಲನ್ನೂ ಬೀಳ್ಕೊಡುತ್ತಿದ್ದಳು..

ಕಲೆ : ಕೆ ಕೆ ಮಕಾಳಿ
ಇಂತಿಪ್ಪ ಮಾಯವ್ವ ದಾರಿಯಲ್ಲಿ ಯಾರಾದರೂ ಹೆಣ್ಣುಮಕ್ಕಳಿಗೆ ಚುಡಾಯಿಸಿದ ವಿಷಯ ಕಿವಿಗೆ ಬಿತ್ತೆಂದರೆ ಸಾಕು: ಅಂಥ ಹುಡುಗರನ್ನು ಹಣ್ಣುಗಾಯಿ-ನೀರುಗಾಯಿ ಮಾಡುತ್ತಿದ್ದಳು.
ಭಗವಂತ ಈ ಹೆಂಗಸಿನಲ್ಲಿ ಘಾಟಿತನವನ್ನೂ, ಮೃದುತ್ವವನ್ನೂ, ಸಮಯಪ್ರಜ್ಞೆಯನ್ನೂ ಸಮಸಮ ಪ್ರಮಾಣದಲ್ಲಿ ಬೆರೆಸಿ ಕಳಿಸಿದ್ದ. ಪ್ರೈಮರಿಯಲ್ಲಿ ಓದುತ್ತಿದ್ದ ನಾವುಗಳು ಪೊರಕೆಕಡ್ಡಿಯ
ಬಿಲ್ಲು,ಬಾಣಗಳನ್ನು ಹಿಡಿದು ಯುದ್ಧ ಮಾಡುವ ಭರದಲ್ಲಿರುತ್ತಿದ್ದೆವು. ಆಟದ ಅವಸರದಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ತಿಂದು ವಾಂತಿ ಮಾಡಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಹೊಟ್ಟೆಕೆಟ್ಟು ಭೇದಿ
ಶುರುವಾಗಿ ಬಹಿರ್ದೆಸೆಗೆ ಅಂತ ಓಡಾಡಿ ಕಾಲುನೋವು ಬಂದು ಬಂದು ಬಿಡುತ್ತಿತ್ತು. ಆಗೆಲ್ಲ ಇದ್ದ ಕೆಲಸವನ್ನೆಲ್ಲ ಬಿಟ್ಟು, ಸೆರಗು ಸೊಂಟಕ್ಕೇರಿಸಿಕೊಂಡ ಮಾಯವ್ವ ಎಂಥದೋ
ಎಣ್ಣೆಬಟ್ಟಲು ಹಿಡಿದುಕೊಂಡು ಸೀದಾ ನಮ್ಮ ಮನೆಯಲ್ಲಿ ಪ್ರತ್ಯಕ್ಷಳಾತ್ತಿದ್ದಳು. ನನ್ನನ್ನು ಚೆಡ್ಡಿಬಿಚ್ಚಿಸಿ ಎದುರಿಗೆ ನಿಲ್ಲಿಸಿಕೊಂಡು ಪಾದ,ಮೀನಖಂಡ,ತೊಡೆ ಅಂತೆಲ್ಲ ಎಣ್ಣೆಹಚ್ಚಿ ಮಸಾಜ್
ತಿಕ್ಕುತ್ತಿದ್ದಳು. ಅವಳ ಕೈಬೆರಳ ಹೊಡೆತಕ್ಕೆ ನಾನು ಲಬೋಲಬೋ ಅಂತ ಬಾಯಿ ಬಡಿದುಕೊಳ್ಳುತ್ತಿದ್ದರೆ,ಮಾಯವ್ವ ಮಾತ್ರ ಅರ್ಧ ಸಿಟ್ಟಿನಿಂದ,ಇನ್ನರ್ಧ ಕುಶಾಲಿನಿಂದ,
“ಅಯ್ಯೋ ರಾಯ,ಈಗಲೇ ಇಷ್ಟು ಬಡ್ಕೊಂತೀಯ..ನಾಳೆ ಮದುವೆ ಆದ್ಮೇಲೆ ಅದಿನ್ನೆಷ್ಟು ಹೊಡ್ಕಂತೀಯೋ ಏನೋ..ಸುಮ್ಮನೇ ನಿಂತ್ಕ!” ಅಂತ ಕಾಲು ತಿಕ್ಕುತ್ತ,
ವರ್ತಮಾನದ ನೋವಿನ ಜೊತೆಜೊತೆಗೇ ಭವಿಷ್ಯದ ಭಯವನ್ನೂ ನನ್ನ ತಲೆಗೆ ತುಂಬುತ್ತಿದ್ದಳು..

*

ಮಹಿಳಾ ದಿನಾಚರಣೆ ಬರುತ್ತಿದೆ. “ಸ್ತ್ರೀ ಅಂದರೆ..” ಅನ್ನುವ ಥೀಮ್ ಇಟ್ಟುಕೊಂಡು ನಿಮ್ಮ ಬದುಕಿನಲ್ಲಿ ಬಂದಂಥ ಅವ್ವ,ತಂಗಿ,ಗೆಳತಿ,ಪ್ರೇಮಿ- ಹೀಗೆ ಯಾರಾದರೂ ಹೆಣ್ಣುಮಕ್ಕಳ
ಬಗ್ಗೆ ಬರೆದುಕೊಡಲು ಸಾಧ್ಯವೇ ಅಂತ ‘ಅವಧಿ’ಯವರು ಕೇಳಿದಾಗ ನನಗೆ ನೆನಪಿಗೆ ಬಂದಿದ್ದು ಕೇವಲ ಈ ಮಾಯವ್ವ. ಅವಳ ಮನೆಗೆ ಹೋದಾಗಲೆಲ್ಲ ತನ್ನ ಅಂಥ ಕಡುಬಡತನದಲ್ಲೂ
ಬಿಸಿಬಿಸಿ ರೊಟ್ಟಿಗೆ ಕೆಂಪುಚಟ್ನಿ ಸವರಿ,ಸುರುಳಿ ಸುತ್ತಿ ಕೊಡುತ್ತ,ಖಾರವೆನಿಸಿದರೆ ಮಧ್ಯೆಮಧ್ಯೆ ತಿನ್ನಲು ಎಳೆ ಸೌತೇಕಾಯಿ ಕೊಡುತ್ತಿದ್ದ ಈ ಮಾಯವ್ವ ಈಗ ಎಲ್ಲಿರುವಳೋ ಗೊತ್ತಿಲ್ಲ.
ಅಸಲಿಗೆ ಬದುಕಿರುವಳೋ ಇಲ್ಲವೋ ಅದೂ ಗೊತ್ತಿಲ್ಲ. ಇವತ್ತಿನ ಸ್ತ್ರೀವಾದ,ಸ್ತ್ರೀ ಧೋರಣೆ,ಸ್ತ್ರೀ ಸಂವೇದನೆ,ಫೆಮಿನಿಸ್ಟು ಎಂಬ ಪದಗಳ ವಿಸ್ತಾರತೆ,ವೈಶಾಲ್ಯತೆ ಮತ್ತು ಅದರ
ಹೃದಯವಂತಿಕೆಯ ಬಗ್ಗೆ ಹಲವಾರು ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತಿರುವಾಗ ಇವೆಲ್ಲದರ ಒಟ್ಟು ಮೊತ್ತದಂತೆ ಈ ಮಾಯವ್ವ ಇವತ್ತು ನೆನಪಿಗೆ ಬರುತ್ತಾಳೆ. ಯಾವತ್ತೂ ಶಾಲೆಯ
ಮೆಟ್ಟಿಲನ್ನು ಹತ್ತದ, ಪುಸ್ತಕದ ವಿಚಾರಧಾರೆಗಳಿಂದ ದೂರವೇ ಉಳಿದು ಹೋದ ಈಕೆ ನನಗೆ ಅಮ್ಮನಾಗಲಿಲ್ಲ ಅಂತೆಲ್ಲ ಹೇಳುವದು ಕ್ಲೀಷೆಯಾಗುತ್ತದೆ. ಹಾಗಂತ ಗೆಳತಿಯೂ ಆಗಲಿಲ್ಲ;
ಪ್ರೇಮಿಯೂ ಆಗಲಿಲ್ಲ. ಈಕೆ ಏನಿದ್ದರೂ ನನಗೆ ಬರೀ ಮಾಯವ್ವ. ನಶ್ವರ ಬದುಕಿನ ಮುಸುಕಾಗುವ ನೆನಪುಗಳಲ್ಲಿ ಎಂದೂ ಮಾಯವಾಗದ,ಮಾಯದೇ ಉಳಿದುಹೋದ ಸಿಹಿ ಗಾಯ ಈ ಮಾಯವ್ವ.
ಹಾಗಾಗಿ ಈಕೆ ಮಾಯದಂಥ ಮಾಯವ್ವ!

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. VidyaShankar

    ಹಾಗೇ ಕಾಲು ತಿಕ್ಕುವುದನ್ನು ಬಟ್ಟು ಬಿಡಿಸುವುದು ಅಂತಾರೆ ನಮ್ಮ ಕಡೆ… ಒಳ್ಳೆ ಬರಹ ಜೋಷಿಯವರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: