ಫಕೀರ
ಒಂದು ತರ್ಕ ನನ್ನೊಳಗೆ
ಮಂಥನವಾಗುತ್ತಲೇ ಇದೆ
ಅದು ಕಾಮದ ಮುಖವಾಡವನ್ನು
ಹೊತ್ತು ನಿಂತಿದೆ
ಅಂದ ಚೆಂದದ ದೇಹ ಎಲುಬಿನೊಳಗೆ
ಮೋಹದ ಗೂಡನು ಕಟ್ಟುತ್ತಿದೆ
ಸೂಜಿ ಮೊನೆಯ ಅಂಚಿನಲ್ಲಿ
ಆಸೆಯ ಕಣ್ಗಾವಲಿನೊಂದಿಗೆ

-೧-
ಏಕೋ ಏನೋ
ಮಿಥುನ ಕಾಲದ ಸೆರಗು ಹೊದ್ದಷ್ಟು
ಕಾವ ಬಿಸಿ ಏರುತ್ತಲೇ ಇದೆ
ಉಸಿರು-ದೇಹ ಮೀಟಿದಷ್ಟು
ಮನದ ಹಸಿವು ಮಣಿಯುತ್ತಲೇ ಇದೆ
ಕಾಮ-ಕಾಂಚನದ ನಂಟು ನಳಿಕೆಯಲ್ಲಿ
ಬಿಡದ ಮಾಯೆಯ ಸೆಳೆತವು
ಅಣುಕಿಸುತ್ತಿದೆ ಕಾರಣವಿಲ್ಲದೇ
ಬಿರುಸು ಗಾಯ ದೇಹದಲಿ ತರುಚಿದ ಕಲೆಯು
ರಕ್ತ ಜಿನುಗುವ ನೋವು
ಎದೆಯ ಮೇಲೆ- ನಾಭಿಯಲಿ- ತೊಡೆಯ ಸಂಧಿನಲಿ
ಕತ್ತಲೆಯ ಸಖನ ಮನದೊಳಗೆ
ಪ್ರಶ್ನೆ ಕೇಳಲೇ ನಾನು?
ಅಕ್ಷರಗಳು ಬಂಧಿಸಬಲ್ಲವೇ ಬದುಕನು
ನನ್ನ-ನಿನ್ನನು ಸೇರಿಕೊಂಡು
ಈ ಜಗವನು
ಮಾಯೆ ಮೋಡಿಯೊಳಗೆ ನಿನ್ನ
ಸಿಹಿಪದಗಳ ಅರ್ಪಣೆಯು
ಎಷ್ಟು ಸರಿ? ಎಷ್ಟು ಸಮ್ಮತ?
ದೇಹ ಕುಸುಮ
ಮನಸು ಮಲ್ಲಿಗೆ ತೋಟದಲಿ
ನೆನಪುಗಳ ಜೇನು ರಸವು ತುಂಬಿರಲು
ಮಿಂದೆದ್ದು ರಸಭಂಗವಾಗದಿರುವಂತೆ
ನಿನ್ನೆ ನೋಡುವೆ
ನನ್ನ ಒಳಗಣ್ಣಿನಲಿ

-೨-
ಮಿಥುನದ ಅನುಭವಕೆ ದಕ್ಕಲಾರವು
ಹಲವು ಭಾವನೆಗಳು
ಬಿಡದೆ ಉಸಿರೆಳೆದುಕೊಳ್ಳುತ್ತಿವೆ
ಕೆಲವೊಮ್ಮೆ ಕಾಡುತ್ತಲೇ ಇರುತ್ತವೆ
ಆಸೆಯ ಮಂಥನದೊಳಗಿನ
ಚಿಪ್ಪಿನ ಮುತ್ತುಗಳಂತೆ
ಕಡಲ ಕವಡೆಯೊಳಗೆ
ಆತ್ಮ-ದೇಹವು ಸೇರಿದೆನ್ನ ಪರಿಯಂತೆ
ಸಂಭ್ರಮದ ಘಳಿಗೆಯಲಿ
ಮನಸು ಸಿಹಿ ಉಂಡಕ್ಷಣವು
ದೇಹ ಬೇಸುಗೆಯಲಿ
ಹೊನ್ನ ಕಳಶವೇರಿದ ವಿಸ್ಮಯವು
ಮಾಯೆ-ಮುತ್ತು ಎಲ್ಲ ಹೊತ್ತು
ಬಿಡದ ಬಂಧನದ ಸುಳಿಯೊಳಗೆ
ಹಸಿಬಿಸಿ ದೇಹಗಳ
ನರ್ತನದಲಿ ಬಿಗಿದ ಪಾದಗಳು
ವಿಶ್ರಾಂತಿಗಾಗಿ
ಏದುಸಿರು ಬಿಡುತ್ತಿವೆ
ಮನದ ಕಲ್ಮಶವು ಬೆವರ ರೂಪದಲಿ
ಕಣ್ಣು ಮಿಟುಕಿಸಿ ಕೊಂಕು ನೋಟವ
ತೋರುತ್ತಿದೆ
ಅಂತೂ
ಕಾಲಗರ್ಭದಲ್ಲಿ ಸೇರಲಿದೆ
ದೇಹ ಬೆಸೆದು ಭಕ್ಷ್ಯ ಪರಮಾನ್ನವುಂಡ
ಸಂತಸವು
ಬಣ್ಣಿಸಲಾದೀತೆ? ಹೋಲಿಸಲಾದೀತೆ?
ಬಣ್ಣಿಸಿ ಚಿತ್ರಿಸಿ ಹೋಲಿಸಿದರೂ
ಕಳೆದ ಘಳಿಗೆಗಳನು
ಮತ್ತೆ ಅಂದಿನಂತೆ ರುಚಿಸಲಾದೀತೆ?
ಮನದ ರಸದೌತಣ ಅನುಭವಿಸಿದ
ಕ್ಷಣಗಳನು ಮತ್ತೆ ಬಿತ್ತುವುದೆಂದು
ಹೇಳಬಹುದೇ ನೀ ಧೈರ್ಯವಾಗಿ
ಎದೆಬಡಿತವ ಲೆಕ್ಕ ಹಾಕುತಾ
ಉಸಿರ ತೀವ್ರತೆಯ ರಗಳೆಯೊಂದಿಗೆ

-೩-
ಯಾವ ಕಾಲವಾದರೇನು?
ಏನಿತು ಕ್ಷಣದಲಿ
ಬೀಜ ಬಿತ್ತಿದರೇನು?
ದೇಹ-ಮಿಥುನ ಮನಸು ರಸಾಯನದಲಿ
ಪದಗಳು ಮಿಂದು ಪುಳಕಗೊಂಡಷ್ಟು
ಅರಗಿಸಿ ಸಿಹಿಯ ಸವಿದ ಸಮಯವು
ಮತ್ತೆ ಅರೆಕ್ಷಣ ಸಿಗಬಹುದೇ?
ಒಲುಮೆಯ ಚಿತ್ತಾರಕೆ ದೇಹವು
ಕನವರಿಸುತ್ತಿದೆ
ಕರೆದೊಯ್ಯು ಮತ್ತೆ ನನ್ನನು
ಆ ಸಿಹಿಯ ಘಳಿಗೆಗಳಿಗೆ
ಭೇಟಿ ಮಾಡಿಸು
ಆ ನಾಲ್ಕು ಗೋಡೆಗಳ ಹಳೆಯ
ಸ್ನೇಹಿತರನ್ನು
ಅಂತರಂಗದ ಮಂಥನ ಮುಂದುವರಿದಿತ್ತು…






Sundara abhivayakthi… Great…