ಮೊನ್ನೆ ಆರೇ ಕಾಲನಿಯಲ್ಲಿ…

ಆರೇ ಕಾಲನಿಯ ಆರ್ತನಾದ!

ರಾಜೀವ ನಾರಾಯಣ ನಾಯಕ

ಮುಂಬೈಗೆ ಕಾಂಕ್ರೀಟ್ ಕಾಡು ಎಂಬ ಅಪಖ್ಯಾತಿಯಿದ್ದರೂ ಇಲ್ಲಿಯ ಇಕ್ಕಟ್ಟು ಜಾಗಗಳಲ್ಲಿಯೂ ಉಸಿರಾಡುವ ಸಾವಿರಾರು ಗಿಡಮರಗಳಿವೆ; ಹಾರಾಡುವ ಪಕ್ಷಿಗಳಿವೆ. ಬಹುಮಹಡಿ ಕಟ್ಟಡಗಳ ಸಾಲಿನಲ್ಲಿ ಮರಗಳು ಕುಬ್ಜವಾದಂತೆ ಕಂಡರೂ ತಮ್ಮ ಪಾಡಿಗೆ ನೆರಳಾಗುತ್ತ, ಸೀಸನ್ನಿನಲ್ಲಿ ಕಣ್ಣಿಗೆ ತಂಪೆನಿಸುವಂತೆ ಹೂ ಹೇರಿಕೊಳ್ಳುತ್ತ, ಅಳಿಲು ಗಿಳಿಗಳಂಥ ಜೀವಿಗಳಿಗೆ ಆಶ್ರಯವಾಗುತ್ತ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಮುಂಬೈನಲ್ಲಿರುವ  ಹಲವಾರು ಗಾರ್ಡನ್ನುಗಳು, ಖಾಡಿಯ ಕಿನಾರೆಗಳಲ್ಲಿರುವ ಕಾಂಡ್ಲಾ ವನ, ಉಪನಗರಗಳಲ್ಲಿ ವಿಸ್ತರಿಸಿಕೊಂಡಿರುವ ಕೆಲವು ಉದ್ಯಾನವನಗಳು, ವನ್ಯ ಜೀವಿಗಳ ತಾಣವೂ ಆಗಿರುವ ಸಂಜಯ್ ಗಾಂಧಿ ನ್ಯಾಶನಲ್ ಪಾರ್ಕ್, ಸಲೀಂ ಅಲಿಯಂತವರು ಕಸದ ಗುಡ್ಡೆಯ ಜಾಗವನ್ನೇ ಅರಣ್ಯವಾಗಿ ಬೆಳೆಸಿದ ಮಾಹಿಮ್ ನೇಚರ್ ಪಾರ್ಕ್-ಇವೆಲ್ಲವು ಈ ಮಹಾನಗರಿಯ ಕಾಂಕ್ರೀಟ್ ಸ್ವರೂಪಕ್ಕೆ ತುಸು ಮರ್ಯಾದೆ ನೀಡಿರುವುದು ನಿಜವಾದರೂ ಮನುಷ್ಯ ಕೇಂದ್ರಿತ ಅಭಿವೃದ್ಧಿ ಕಾರ್ಯಗಳು, ಆಧುನಿಕ ಯೋಜನೆಗಳು ಇವುಗಳನ್ನೆಲ್ಲ ಒತ್ತುವರಿ ಮಾಡುವ, ಅತಿಕ್ರಮಿಸುವ ಹುನ್ನಾರದಲ್ಲಿವೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಮೆಟ್ರೋಲೈನ್-3 ಯೋಜನೆಯ ಭಾಗವಾಗಿ ಮುಂಬೈನ ಪ್ರಸಿದ್ಧ ಆರೇ ಕಾಲನಿಯ ಜಾಗವನ್ನು ಕಬ್ಜಾ ಮಾಡಿ ಸಾವಿರಾರು ಮರಗಳನ್ನು ಕತ್ತರಿಸಿದ್ದು!

ಏನಿದು ಮೆಟ್ರೋಲೈನ್-3?

ಲೋಕಲ್ ಟ್ರೇನುಗಳು ಮುಂಬೈನ ಜೀವನಾಡಿಯಾಗಿರುವುದೇನೋ ನಿಜ!  ಆದರೆ ಅವು ಮುಕ್ಕಾಲು ಕೋಟಿ ಸಂಖ್ಯೆಯಲ್ಲಿ ನಿತ್ಯ ತಿರುಗಾಡುವ ಪ್ರಯಾಣಿಕರನ್ನು ಹೊರಲಾಗದೇ, ಮುಂಬೈಕರರ  ಜೀವಹಿಂಡುವುದರಿಂದ ಬದಲಿ ವ್ಯವಸ್ಥೆಗಳಾದ ಮೆಟ್ರೋ, ಮೊನೋ ರೇಲ್ ಬಂದರೂ ಅವು ಪರಿಸ್ಥಿಯನ್ನು ಸುಧಾರಿಸುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ. ಅದಕ್ಕಾಗಿಯೇ ಸುರಂಗ ಮಾರ್ಗವಾಗಿ ಸಾಗುವ ಮೆಟ್ರೋಲೈನ್-3  ಯೋಜನೆ ಈಗಾಗಲೇ ಕಾರ್ಯ ಪ್ರವ್ರತ್ತವಾಗಿದೆ. ಮುಂಬೈನ ದಕ್ಷಿಣ ತುದಿ ಕೊಲಾಬಾದಿಂದ ಬಾಂದ್ರಾ ಮೂಲಕ ಸೀಪ್ಜ್ ತಲುಪುವ ಈ ಯೋಜನೆಗೆ ಇಪ್ಪತೈದು ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಬಹು ಭಾಗ ನೆಲದೊಳಗೇ ಸಾಗುವುದರಿಂದ ಹೆಚ್ಚು ಭೂಮಿ ಸ್ವಾಧೀನ ಮಾಡಬೇಕಾದ ಪ್ರಮೇಯವಿಲ್ಲ. ನಡುವೆ ಬರುವ ಮಿಥಿ ನದಿಯನ್ನೂ ಅದರ ಒಡಲಿನಾಳದಿಂದಲೇ ದಾಟಲಿದೆ.

ಈಗಾಗಲೇ ದೇಶ ವಿದೇಶಗಳ ಹಲವಾರು ಕನಸ್ಟ್ರಕ್ಷನ್ ಕಂಪನಿಗಳು ಭರದಿಂದ ನೆಲದಾಳವನ್ನು ಅಗೆಯುವ ಕಾರ್ಯ ಶುರುಮಾಡಿವೆ. ಅಂದುಕೊಂಡಂತೆ ಮುಗಿದರೆ 2021 ರಲ್ಲಿ ಈ ಮೆಟ್ರೋ ಲೈನ್ ಕಾರ್ಯಾರಂಭಗೊಳ್ಳಬಹುದು. ಒಮ್ಮೆ ಪ್ರಾರಂಭವಾಗಿ ಜನ ಮೆಟ್ರೋಲೈನ್ ಬಳಸಲು ಶುರುವಾದರೆ ರಸ್ತೆಯಲ್ಲಿ ಲಕ್ಷಾಂತರ ವಾಹನಗಳ ಸಂಖ್ಯೆ ಕಡಿಮೆಯಾಗಿ ಅಷ್ಟು ಪ್ರಮಾಣದಲ್ಲಿ ಕಾರ್ಬನ್ ಉಗುಳುವಿಕೆ ನಿಂತು ಮಹಾನಗರದ ಸ್ವಾಸ್ಥ್ಯ ಸುಧಾರಿಸಬಹುದು ಎನ್ನಲಾಗುತ್ತಿದೆ. ಈಗ ಮುಖ್ಯವಾಗಿ ಸಮಸ್ಯೆ ಎದುರಾಗಿರುವುದು ಮೆಟ್ರೊ ಕಾರ್ ಶೆಡ್ ಗೆ ಅಗತ್ಯವಿರುವ ಸುಮಾರು ಎಂಬತ್ತು ಎಕರೆ ಜಾಗದ ಬಗ್ಗೆ. ಮೆಟ್ರೋ ಕಾರ್ ಡಿಪೋಗಾಗಿ ಮತ್ತು ಪೂರ್ತಿ ಮೆಟ್ರೋ ನಿಯಂತ್ರಣದ ಕೇಂದ್ರಸ್ಥಾನಕ್ಕಾಗಿ ಈಗಾಗಲೇ ಮುಂಬೈ ಉಪನಗರಿ ಗೋರೆಗಾಂವ್ ಪಕ್ಕದಲ್ಲಿ ವಿಸ್ತಾರವಾಗಿ ಚಾಚಿರುವ ಆರೇ ಕಾಲನಿಯ ಕಾಡನ್ನು ಕತ್ತರಿಸಿ ಜಾಗ ನೀಡಲಾಗಿದೆ.

ಆರೇ ಕಾಲನಿ ಎಂಬ ಅಪ್ಸರೆ!

ಸುಮಾರು ಮೂರು ಸಾವಿರ ಎಕರೆ ಜಾಗದಲ್ಲಿ ವಿಸ್ತರಿಸಿಕೊಂಡಿರುವ ಆರೇ ಕಾಲನಿಯು ಪ್ರದೂಷಣೆಯಿಂದ ಏದುಸಿರು ಬಿಡುವ ಮುಂಬೈಗೆ ಒಂದಿಷ್ಟು ನಿರಾಳವಾಗಿ ಉಸಿರಾಟದ ಅನುಭವ ನೀಡುವ ತಾಣವಾಗಿದೆ. ಇದು ಅರಣ್ಯದ ವ್ಯಾಖ್ಯೆಯ ಪ್ರಕಾರ ಅಥವಾ ಸರಕಾರಿ ದಾಖಲೆಯ ಪ್ರಕಾರ ಅರಣ್ಯ ಪ್ರದೇಶವಲ್ಲವಂತೆ. ಆದರೆ ಸ್ವರೂಪದಲ್ಲಿ ಯಾವ ಅರಣ್ಯಕ್ಕೂ ಕಡಿಮೆಯಿಲ್ಲ.

ಎಪ್ಪತ್ತು ವರ್ಷಗಳಷ್ಟು ಹಿಂದೆ ಇಲ್ಲಿ ಅರಣ್ಯವನ್ನು ಬೆಳೆಸುವ ಮತ್ತು ಮುಂಬೈನ ಹೈನ್ಯೋದ್ಯಮವನ್ನು ಇಲ್ಲಿಗೆ ವರ್ಗಾಯಿಸಿ ಅದಕ್ಕೆ  ನೆರವಾಗುವಂತೆ ಪಶುಶಾಲೆಗಳನ್ನು ನಿರ್ಮಿಸುವ, ಹುಲ್ಲುಗಾವಲನ್ನು ಬೆಳೆಸುವ ಪ್ರಯತ್ನದ ಫಲವಾಗಿ ಈ ಪ್ರದೇಶವು ಇಂದು ವಿಶಿಷ್ಟ ತಾಣವಾಗಿ ರೂಪಗೊಂಡಿದೆ. ಪೂರ್ವಕ್ಕೆ ಪೊವಾಯಿ ಲೇಕ್ ವರೆಗೆ ಮತ್ತು ಉತ್ತರಕ್ಕೆ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಅಂಚಿಗೆ ಚಾಚಿಕೊಂಡಿರುವ ಆರೇ ಕಾಲನಿಯಲ್ಲಿ ನಡೆದಾಡಿದರೆ ಸನಿಹದಲ್ಲೇ ಇರುವ ಮಹಾನಗರದ ಜಂಜಾಟಗಳು ಮರೆತುಹೋಗುತ್ತವೆ. ಎತ್ತರಕ್ಕೆ ಚಾಚಿಕೊಂಡಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ಮರಗಳು, ಹಸಿರು ಹುಲ್ಲುಗಾವಲು,  ಅಕಸ್ಮಾತ್ತಾಗಿ ಎದುರುಗೊಳ್ಳುವ ಪ್ರಾಣಿಪಕ್ಷಿಗಳು, ಕೆಲವೊಮ್ಮೆ ಪಕ್ಕದ ಸಂಜಯ್ ಗಾಂಧಿ ವನ್ಯ ಸಂರಕ್ಷಿತ ಪ್ರದೇಶವನ್ನು ದಾಟಿ ಬರುವ ಚಿರತೆಗಳು- ಆರೇ ಕಾಲನಿ ಒಂದು ಅರ್ಬನ್ ಫಾರೆಸ್ಟ್ ಎಂದು ಅನಿಸುವಂತೆ ಮಾಡುತ್ತದೆ. ಆದರೆ  ಈ ವಿಶಾಲ ಪ್ರದೇಶದ ಮೇಲೆ ಅಭಿವೃದ್ಧಿಯನ್ನು ಜಪಿಸುವವರ, ಬಿಲ್ಡರುಗಳ, ಅಕ್ರಮ ಅತಿಕ್ರಮಣದಾರರ ವಕ್ರದ್ರಷ್ಟಿ ಇದ್ದೇ ಇದೆ. ಆರೇ ಕಾಲನಿಯ ಅಂಚಿಗೆ ಜಗಮಗಿಸುವ ಫಿಲ್ಮ್ ಸಿಟಿ ಸಾಕಷ್ಟು ಜಾಗವನ್ನು ಈಗಾಗಲೇ ಕತ್ತರಿಸಿಕೊಂಡಿದೆ.

ಪರಿಸರ ಮತ್ತು ಕಾನೂನು ಹೋರಾಟ

ಕಾರ್ ಶೆಡ್ ಗೆ ಆರೇ ಕಾಲನಿಯ ಜಾಗವನ್ನು ಕೊಟ್ಟರೆ ಸುಮಾರು ಐದು ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಹಿನ್ನಲೆಯಲ್ಲಿ ಪರಿಸರವಾದಿಗಳು ಕಾನೂನು ಹೋರಾಟ ಕೈಗೊಂಡರೂ ಅಷ್ಟು ಯಶಸ್ಸು ಕಾಣಲಿಲ್ಲ. ಸರಕಾರಿ ಸಂಸ್ಥೆಗಳು, ಅರಣ್ಯ ಇಲಾಖೆಯ ಮತ್ತು ರಾಷ್ಟ್ರೀಯ ಗ್ರೀನ್ ಟ್ರಿಬ್ಯುನಲ್ ನ ನಿಲುವುಗಳು ಕಾಡನ್ನು ಉಳಿಸಿಕೊಳ್ಳುವ ಧ್ವನಿಗೆ ಹೆಚ್ಚಿನ ಬಲ ನೀಡಲಿಲ್ಲ. ಮೆಟ್ರೋ ಪಿತಾಮಹ ಇ. ಶ್ರೀಧರ್ ನಂತ ಹಲವು ಮಹನೀಯರು ಮಹಾನಗರದ ಸಾರಿಗೆ ಒತ್ತಡ ನಿವಾರಣೆಗೆ ಮೆಟ್ರೋ ಅನಿವಾರ್ಯ; ಕಡಿದ ಮರಗಳ ಬದಲಿಗೆ ಬೇರೆಡೆ ಸಸಿಗಳನ್ನು ನೆಟ್ಟು ಬೆಳೆಸಬಹುದು ಎಂಬ ನಿಲುವು ತಳೆದಿದ್ದಾರೆ.  ನ್ಯಾಯಾಲಯವು ಕೂಡ “ಮನುಷ್ಯ ಜನ್ಮ ಮುಖ್ಯವೋ ಅಥವಾ ಮರಗಳದ್ದೋ” ಎಂದು ತೂಗಿ ನೋಡುವಲ್ಲಿ ಸಹಜವಾಗಿ ಮನುಷ್ಯ ಪರವೇ ವಾಲಿದಂತಿದೆ. ಈ ವಿಷಯವು ಈಗ ಸರ್ವೋಚ್ಚ ನ್ಯಾಯಾಲಯವನ್ನೂ ತಲುಪಿದೆ.

ಮರಗಳ ಮಾರಣ ಹೋಮ

ಮುಂಬೈ ಮಹಾನಗರ ಪಾಲಿಕೆಯು ಆರೇ ಕಾಲನಿಯಲ್ಲಿ ಮುಂಬೈ ಮೆಟ್ರೋ ರೇಲ್ ಕಾರ್ಪೊರೇಶನ್ನಿನವರಿಗೆ ಎರಡು ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ನೀಡಿದ್ದ ಪರಿವಾನಿಗೆಯ ವಿರುದ್ಧ ಪರಿಸರಪ್ರೇಮಿಗಳು ಬಾಂಬೇ ಹೈ ಕೋರ್ಟಿನಲ್ಲಿ ದಾಖಲಿಸಿದ್ದ ವ್ಯಾಜ್ಯಗಳು ವಜಾಗೊಳ್ಳುತ್ತಿದ್ದಂತೆಯೇ ಭಾರೀ ಯಂತ್ರಗಳಿಂದ ಸನ್ನದ್ಧಗೊಂಡ ಸರಕಾರಿ ಪಡೆ ರಾತ್ರೋ ರಾತ್ರಿ ಆರೇ ಕಾಲನಿಯನ್ನು ಅತಿಕ್ರಮಿಸಿ  ಮರಗಳನ್ನು ಕಡಿದುರಿಳಿಸಿತು.

ಐವತ್ತು ವರ್ಷಗಳಿಗೂ ಹೆಚ್ಚುಕಾಲ ತಲೆ ಎತ್ತಿ ನಿಂತಿದ್ದ ವೃಕ್ಷಗಳನ್ನು ಆಧುನಿಕ ಕರಗಸಗಳು  ಎರಡೇ ನಿಮಿಷಗಳಲ್ಲಿ ನೆಲಕ್ಕುರುಳಿಸಿದವು. ರಾತ್ರಿ ಬೆಳಗಾಗುವುದರಲ್ಲಿ ಎರಡು ಸಾವಿರ ಮರಗಳ ಮಾರಣ ಹೋಮವಾಯಿತು. ಆ ಮರಗಳ ಮೇಲೆ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಮಾಡಿದ್ದ ಪಕ್ಷಿಗಳು, ಅನ್ಯ ಜೀವಿಗಳು ಕತ್ತಲಲ್ಲಿ ಕಂಗಾಲಾಗಿ ಎಲ್ಲಿ ಹೋದವೋ! ಹಗಲಲ್ಲಾದರೆ ಕನಿಷ್ಠ ಜೀವ ಉಳಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡುತ್ತಿದ್ದವಲ್ಲ! ನಗರಪಾಲಿಕೆಯ ಇಂಥ ಅಸೂಕ್ಷ್ಮ ಕ್ರಮವನ್ನು  ವ್ಯಾಪಕವಾಗಿ ಖಂಡಿಸಲಾಯಿತು. ಮಹಾರಾಷ್ಟ್ರ ವಿಧಾನ ಸಭೆಯ ಚುನಾವಣೆಯ ನಶೆಯಲ್ಲಿದ್ದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪರಸ್ಪರ ಅರಚಾಟದಲ್ಲಿ ಈ ವಿಷಯದಲ್ಲಿ ನಿಜವಾದ ಕಳಕಳಿಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲದ ಮಾತಾಗಿತ್ತು.

ಸ್ಪಂದಿಸಿದ ವಿದ್ಯಾರ್ಥಿಗಳು

ಎರಡು ಕೋಟಿ ಜನಸಂಖ್ಯೆಯ ಮಹಾನಗರದ ಅಸಹನೀಯ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದನ್ನು ಯಾವ ಮುಂಬೈಕರನೂ ವಿರೋಧಿಸಲಾರ. ಆತನಿಗೆ ಒಂಚೂರು ಆರಾಮಾಗಿ ಓಡಾಟ ನಡೆಸುವುದು ಸಾಧ್ಯವಾದರೆ ಅದಕ್ಕಿಂತ ಬೇರೆ ಬೇಕಿಲ್ಲ. ಹೀಗಾಗಿ ಪರಿಸರವು ಆತನ ಆದ್ಯತೆಯೇನೂ ಅಲ್ಲ. ಹಾಗೆ ನೋಡಿದರೆ ಮಹಾನಗರದ ಸ್ಪೋಟಕ ಪರಿಸ್ಥಿಗೆ ತನ್ನ ವಲಸೆಯೂ ಕಾರಣ ಎನ್ನುವುದು ಆತನಿಗೆ ಗೊತ್ತು. ಆ ಕಾರಣಕ್ಕಾಗಿಯೇ ಸಾವಿರಾರು ಮರಗಳ ಮಾರಣ ಹೋಮವನ್ನು ತಪ್ಪಿಸಿ ಆರೇ ಕಾಲನಿಯ ವಿಶಿಷ್ಟತೆಯನ್ನು  ಉಳಿಸಿಕೊಳ್ಳುವ ಹೋರಾಟವು ಒಂದು ಆಂದೋಲನವಾಗಲು ಸೋತಿರಬಹುದು. ಆದರೆ ಇಡೀ ವಿದ್ಯಮಾನದಲ್ಲಿ ಕಂಡುಬಂದ ಒಂದು ಸಮಾಧಾನದ ಸಂಗತಿಯೆಂದರೆ ವಿದ್ಯಾರ್ಥಿಗಳು ಆರೇ ಕಾಲನಿಯ ಅನನ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿದ ರೀತಿ ಮತ್ತು ಮರಗಳನ್ನು ನಿರ್ದಯವಾಗಿ ಕತ್ತರಿಸುತ್ತಿದ್ದಾಗ ಕಳಕಳಿಯಿಂದ ಸ್ಪಂದಿಸಿದ ರೀತಿ!

ಭೇಜ್ನಾ ಹೈ ಕ್ಯಾ?

ಹತ್ತಾರು ವರ್ಷಗಳ ಹಿಂದೆ ಈ ಆರೇ ಕಾಲನಿಯ ಪಕ್ಕದಲ್ಲೇ ರೂಮ್ ಮಾಡಿದ್ದ ನಾನು ವಾರಾಂತ್ಯದಲ್ಲಿ ಆರೇ  ಕಾಡಿನಲ್ಲಿ ನಿರುದ್ಧಿಶ್ಯವಾಗಿ ಅಲೆದಾಡುತ್ತಿದ್ದೆ. ಇಲ್ಲಿಯ ಬ್ರಹತ್ ಮರಗಿಡಗಳು, ಗಿಳಿ ಕೋಗಿಲೆಗಳು ಊರ ನೆನಪಿನಿಂದ ನನ್ನನ್ನು ಒಂದಿಷ್ಟು ಸಂತೈಸುತ್ತಿದ್ದವು. ಹುಲ್ಲುಗಾವಲು, ಪಶುಶಾಲೆಗಳು, ಗೊಲ್ಲರ ಕೇರಿಗಳನ್ನು ದಾಟಿ ಇನ್ನೂ ಮುಂದೆ ಹೋದರೆ ತುತ್ತತುದಿಯಲ್ಲಿ ಒಂದು ಚಿಕ್ಕ ಗ್ರೌಂಡು. ಅಲ್ಲಿ ಒಂದು ಮುಂಜಾನೆ ಪಕ್ಕದ ಐಐಟಿಯಲ್ಲಿ ಓದುತ್ತಿರುವ ಕಿಶೋರರು ತಾವೇ ತಯಾರಿಸಿದ ಚಿಕ್ಕ ವಿಮಾನಗಳನ್ನು ತಂದಿದ್ದರು. ತಾವು ಕಲಿತ ಏರೋಡೈನಾಮಿಕ್ಸ್, ಪ್ರಾಪಲ್ಶನ್ ಸಿಸ್ಟಮ್ಸ್ ಇತ್ಯಾದಿ ಜ್ಞಾನವನ್ನು ಬಳಸಿ ತಯಾರಿಸಿದ ಆ ಪ್ರೋಟೋಟೈಪ್ ಏರೋಪ್ಲೇನುಗಳ ಹಾರಾಟದ ಪರೀಕ್ಷೆ ನಡೆಸಿದ್ದರು.

ಕೆಲವು ಸುತ್ತು ಹಾಕಿದ ಆ ಮರಿ ವಿಮಾನಗಳನ್ನು ಕೆಳಗಿಳಿಸಿ ಇಂಧನ ತುಂಬಿ ಮತ್ತೆ ಮೇಲೆ ಬಿಡುತ್ತಿದ್ದರು. ಇದನ್ನು ನೋಡುವುದೇ ಒಂದು ಥ್ರಿಲ್ ಆಗಿ ನಾನು ಮೈ ಮರೆತು ಅಲ್ಲಿಯೇ ನಿಂತಿದ್ದೆ. ವಾಕಿಂಗಿಗೆ ಬಂದ ಇತರರೂ ನಿಬ್ಬೆರಗಾಗಿ ಮಕ್ಕಳ ಕುಶಲತೆಯನ್ನು ಕೊಂಡಾಡುತ್ತಾ ನಿಂತಿದ್ದರು. ವಿಮಾನವನ್ನು ಕೆಳಗಿಳಿಸಿ ಇಂಧನ ತುಂಬುತ್ತಿದ್ದಾಗ ಅವರ ಬಳಿ ಹೋದ ವಾಕಿಂಗ್ ಗೆ ಬಂದಿದ್ದ ಟೊಣಪನೊಬ್ಬ ಕಿಸೆಯಲ್ಲಿ ಕೈ ಹಾಕುತ್ತಾ “ಯೇ ಭೇಜನೇ ಕಾ ಹೈ ಕ್ಯಾ? ” ಎಂದ. ವಿದ್ಯಾರ್ಥಿಯೊಬ್ಬ ತಕ್ಷಣವೇ “ಯೇ ಉಡಾನೇಕಾ ಹೈ ಅಂಕಲ್ ” ಎಂದ. ಇಂಥ ಅನಿರೀಕ್ಷಿತ ಮತ್ತು ಅಸಂಗತ ಪ್ರಶ್ನೆಗೆ ಉತ್ತರಿಸುವಾಗ ಆತನ ಕಣ್ಣುಗಳಲ್ಲಿ ಅಸಹನೆ ಮತ್ತು ಸಿಟ್ಟಿತ್ತು.   ತಾವು ಕೈಯಾರೆ ತಯಾರಿಸಿದ ವಿಮಾನವು ನೆಲಬಿಟ್ಟು ಸ್ವತಂತ್ರವಾಗಿ ಹಾರುವುದರ ರೋಮಾಂಚನವನ್ನು ಮಾರುಕಟ್ಟೆಯ ಸರಕಾಗಿಸಿದ್ದು  ವಿದ್ಯಾರ್ಥಿಗಳಿಗೆ ಇಷ್ಟವಾಗಿರಲಿಲ್ಲ.

ಮೊನ್ನೆ ಆರೇ ಕಾಲನಿಯಲ್ಲಿ ಪೋಲೀಸರ ರಕ್ಷಣೆಯಲ್ಲಿ ಸಾವಿರಾರು ಮರಗಳು ಉರುಳುತ್ತಿದ್ದಾಗ ವಿದ್ಯಾರ್ಥಿಗಳು ತೋರಿದ ಇಂಥದ್ದೇ ಸಾತ್ವಿಕ ಸಿಟ್ಟು ಮತ್ತು ನಿಜ ಕಳಕಳಿಯ ಪ್ರತಿಭಟನೆಯನ್ನು ಕಂಡಾಗ ಭವಿಷ್ಯದ ಬಗ್ಗೆ ಒಂದಿಷ್ಟು ಭರವಸೆ ಉಳಿಯುತ್ತದೆ!

 

‍ಲೇಖಕರು avadhi

October 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಮನುಷ್ಯನ ದಾಹಕ್ಕೆ ಅದೆಷ್ಟು ಬಲಿಯೋ….

    ಪ್ರತಿಕ್ರಿಯೆ
  2. T S SHRAVANA KUMARI

    ಮನುಷ್ಯನ ಮಿತಿಮೀರಿದ ದಾಹಕ್ಕೆ ಅದೆಷ್ಟು ಬಲಿಯೋ….

    ಪ್ರತಿಕ್ರಿಯೆ
  3. ತಮ್ಮಣ್ಣ ಬೀಗಾರ

    ಆರೇ ಕಾಲನಿಯ ಕಥೆ ಎಲ್ಲ ಕಡೆ ನಡೆಯುವ ಪರಿಸರ ದೌರ್ಜನ್ಯ ದ ಕಥೆಯಾಗಿ ವಿಸ್ತರಿಸುತ್ತದೆ. ಯಾವುದೇ ಯೋಜನೆ ಮಂಜೂರಾದ ತಕ್ಷಣ ಮೊದಲು ಮರ ಕಡಿಯುವ ಕಾರ್ಯಮುಗಿದು ಹೋಗುತ್ತದೆ. ಪರಿಸರ ಪ್ರೀತಿಯಿಂದ ಯೋಚಿಸುವ ಮನಸ್ಸುಗಳದೇ ಕೊರತೆಯಾಗಿದೆ. ಪರಿಸರ ಕಾಳಜಿ ಅಂದರೆ ಆಧುನಿಕತೆಗೆ ಅಡ್ಡಗಾಲು ಎನ್ನುವ ಭಾವ ಬಹುಜನರಲ್ಲಿದೆ.ಆಪ್ತ ಬರಹ.ಇಂತಹ ಬರಹಗಳು ಒಂದಿಷ್ಟು ಬೆಳಕು ಮೂಡಿಸಲಿ.ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: