ಮಾಯಿನ್ ನದಿಯ ದಂಡೆಯಲ್ಲಿ ….

ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ.ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. ಮಾಯಿನ್ ನದಿಗೆ ಅಡ್ಡಲಾಗಿ ಇರುವ, ನಗರದ ಎರಡು ಪಕ್ಕಗಳನ್ನು ಜೋಡಿಸುವ ಐದು ಸೇತುವೆಗಳು ಇವೆ . ಇವುಗಳಲ್ಲಿ ಅತಿ ಹಳೆಯದು ಮತ್ತು ಪ್ರವಾಸಿಗಳ ಆಕರ್ಷಣೆಯದ್ದು -‘ ಹಳೆಯ ಮಾಯಿನ್ ಸೇತುವೆ’ ( Alte Main Brucke ). ಅದರ ಮುಂದೆ ಇರುವ ಇನ್ನೊಂದು ಸೇತುವೆ -‘ ಶಾಂತಿ  ಸೇತುವೆ ‘ ( Friedensbrucke ). ಈ ‘ಹಳೆ ಮಾಯಿನ್ ಸೇತುವೆ ‘ ಮತ್ತು ‘ಶಾಂತಿ ಸೇತುವೆ’ಗಳ ನಡುವಿನ ಮಾಯಿನ್ ನದಿ ದಂಡೆಯ ಪ್ರದೇಶ ,ಅಗಲ ಕಿರಿದಾದ ಮತ್ತು ಸಣ್ಣ  ಪಾರ್ಕ್ ರೀತಿಯ ವಿಹಾರ ತಾಣ. ಇದರಲ್ಲಿ’ ಮೈನ್ಕೈ’ ಮತ್ತು  ‘Kranenkai’ ಸೇರಿವೆ.ಜರ್ಮನ್ ಭಾಷೆಯಲ್ಲಿ  ‘Kai’ ಅಂದರೆ ನದಿಯ ಬದಿಯಲ್ಲಿ ಕಲ್ಲಿನಿಂದ ನಿರ್ಮಿಸಿದ ದಂಡೆ.  ‘ Kranen’ ಅಂದರೆ ‘ಕ್ರೇನ್’. ಇಲ್ಲಿ ವಿಹಾರದ ಸಣ್ಣ ಹಡಗುಗಳು ಬಂದು ತಂಗುತ್ತವೆ .ಇದರ ಪಕ್ಕದಲ್ಲಿ ಹಳೆಯ ಕ್ರೇನ್ ಒಂದರ ಅವಶೇಷ ಇದೆ. ಈ ದಂಡೆಯನ್ನು ‘ಮಾಯಿನ್ -ಕ್ರೇನ್ ದಂಡೆ’ಎಂದು ಕರೆಯಬಹುದು.

ಈ ಮಾಯಿನ್-ಕ್ರೇನ್ ದಂಡೆಯ ಬದಿಯಲ್ಲಿ  ಕೆಲವು ಬೆಂಚುಗಳು ಇವೆ.ಸಂಜೆಯ ವೇಳೆಗೆ ಇಲ್ಲಿಗೆ ಬರುವವರಲ್ಲಿ ಯುವಕ ಯುವತಿಯರು  ಜಾಸ್ತಿ.ಕೆಲವು ಮುದುಕರು ಮಧ್ಯ ವಯಸ್ಕರು ಏಕಾಂಗಿಗಳು ಬಂದು ಕುಳಿತು ಕೊಳ್ಳುವುದುಂಟು.ಇಲ್ಲಿಗೆ ಬರುವ ಬಹಳ ಮಂದಿ ವಿರಾಮವಾಗಿ ಕುಳಿತುಕೊಂಡು ಬಾಟಲಿಗಳಿಂದ ಬೀರ್ ಕುಡಿಯುತ್ತಾರೆ.ಬೀರ್ ಬಾಟಲಿಗಳ ದೊಡ್ಡ ಕೇಸ್ ಗಳನ್ನು ಹೊತ್ತುಕೊಂಡು ತಂದು ಬೀರ್ ಕುಡಿಯುತ್ತಾ ಹೊತ್ತು ಕಳೆಯುತ್ತಾರೆ.ಮೋಜಿಗಾಗಿ,ಚಟಕ್ಕಾಗಿ ,ನೋವು ಮರೆಯಲು,ಏಕಾಂಗಿಯಾಗಿ ಧ್ಯಾನಿಸಲು- ಹೀಗೆ ಹತ್ತು ಹಲವು ಬಗೆಯ ಪ್ರವೃತ್ತಿಯವರು ಇಲ್ಲಿ ಸೇರಿದಾಗ ಬೀರ್ ಬಾಟಲಿಗಳ ಕಣಕಣ ಸದ್ದು ಅತ್ತಲಿಂದ ಇತ್ತಲಿಂದ ಕೇಳಿಸುತ್ತಿರುತ್ತದೆ.ಇಲ್ಲಿಗೆ ಬರುವ ಇನ್ನೊಂದು ವರ್ಗವೆಂದರೆ -ಈ ಬೀರ್ ಬಾಟಲಿಗಳನ್ನು ಹೆಕ್ಕುವವರು.ಹರಕು ಬಟ್ಟೆಯ ,ಮಾಸಿದ ದೇಹದ ,ಜೋಳಿಗೆ ಚೀಲ ಹೊತ್ತ ನಡುವಯಸ್ಸಿನ ಮತ್ತು ವಯಸ್ಸು ಮೀರಿದ ಜನ -ಬಾಟಲಿ ಹೆಕ್ಕುವ ಮಂದಿ.

ಬಹಳ ದಿನಗಳಿಂದ ಇಲ್ಲಿ ನಾನು ಕಾಣುತ್ತಿರುವ ಒಬ್ಬಳು ಹೆಂಗಸು ಎಮ್ಲಿನ್. ಅವಳ ಪೂರ್ಣ ಹೆಸರು ಎಮ್ಮಲಿನ್ .ಸುಮಾರು ಎಪ್ಪತ್ತು ದಾಟಿರಬಹುದು.ಮುಖದ ಮೇಲಿನ ನೆರಿಗೆಗಳು ,ಎಳೆದುಕೊಂಡು ಹೋಗುವ ಕಾಲುಗಳು,ಬಾಗಿದ ಬೆನ್ನು -ಹೇಳುತ್ತಿವೆ  ವಯಸ್ಸು ಇನ್ನೂ ಸ್ವಲ್ಪ ಜಾಸ್ತಿ ಆಗಿರಬಹುದು ಎಂದು. ಎಮ್ಲಿನ್ ಆಸೆಗಣ್ಣುಗಳಿಂದ ನೋಡುವುದು ಬಾಟಲಿಗಳನ್ನು ಎತ್ತಿ ಎತ್ತಿ ಬೀರ್ ಕುಡಿಯುವ ಬೀರ್ ಬಲರನ್ನು. ಆದರೆ ಬೀರ್ ಕುಡಿಯುವ ಆಸೆ ಅವಳಿಗೆ  ಅಲ್ಲ. ಅವಳದ್ದು ಬೀರಿನ ಖಾಲಿ ಬಾಟಲಿ ಪಡೆಯುವ ಕಾತರ.ತನ್ನ ಹಾಗೆ ಖಾಲಿ ಬಾಟಲಿ ಹೆಕ್ಕುವ ಬೇರೆ ಮಂದಿ ಬರುವ ಮೊದಲೇ ಅದನ್ನು ಕಸಿದುಕೊಳ್ಳುವ ತವಕ ತಲ್ಲಣ. ಎಮ್ಲಿನ್ ತರುಣ ತರುಣಿಯರ ಒಂದು ಗುಂಪಿನ ಬಳಿ ಹೋಗಿ ನಿಲ್ಲುತ್ತಾಳೆ. ಅವರ ಮಾತು ನಗು ಕೇಕೆ ಮಾಯಿನ್ ನದಿಯ ಅಲೆಗಳ ಜೊತೆಗೆ ತೇಲುತ್ತಿರುತ್ತದೆ. ‘ಕುಡಿದು ಆಯಿತೇ? ಬಾಟಲಿ ಇದೆಯೇ ? -‘ಎಮ್ಲಿನ್ ಳದು ಗಂಟಲಿನ ಒಳಗಿನಿಂದ ದೈನ್ಯದ ಕ್ಷೀಣ ದ್ವನಿ .ಅವರಲ್ಲಿ ಯಾವಳೋ ಒಬ್ಬಳು ಕೇಳಿಸಿಕೊಳ್ಳುತ್ತಾಳೆ. ನಾಲ್ಕೋ ಐದೋ ಬಾಟಲಿ ಕೆಳಗೆ ಬಿದ್ದಿವೆ. ಅದನ್ನು ತೋರಿಸಿ ‘ಯಾ ‘ಎನ್ನುತ್ತಾಳೆ. ಎಮ್ಲಿನ್ ಳ ಕಣ್ಣಲ್ಲಿ ಸಂಜೆಯ ಸೂರ್ಯನ ಕಿರಣದ ಹೊಳಪು.ಬಾಗಿ ಕುಳಿತುಕೊಂಡು ಆ ಖಾಲಿ ಬಾಟಲಿಗಳನ್ನು ಆತುರ ಆತುರವಾಗಿ ಹೆಕ್ಕಿಕೊಂಡು ತನ್ನ ಗೋಣಿ ಚೀಲದಲ್ಲಿ ತುಂಬಿಸುತ್ತಾಳೆ. ಅಲ್ಲಿಂದ ಮುಂದೆ ಹೋದರೆ ಅಲ್ಲಿ ಬೆಂಚಿನಲ್ಲಿ ಒಬ್ಬನೇ  ಕುಳಿತು ಕೊಂಡವನೊಬ್ಬ ಬೀರ್ ಬಾಟಲಿಗಳ ರಾಶಿ ಹಾಕಿಕೊಂಡು, ಕಿವಿಗೆ ರೆಕಾರ್ಡ್ ಸಿಕ್ಕಿಸಿಕೊಂಡು ಕುಡಿಯುತ್ತಿದ್ದಾನೆ. ಎಮ್ಲಿನ್ ಅವನ ಹತ್ತಿರ ಹೋಗಿ ಖಾಲಿ ಬಾಟಲಿ ಇದೆಯೇ ಎಂದು ಕೇಳಿದರೆ ಅವನಿಗೆ ಕೇಳಿಸುವುದು ಅವನದ್ದೇ ಜಗತ್ತಿನ ಸಂಗೀತ. ಹೆಕ್ಕೋಣ ವೆಂದರೆ ಆತ ಬಾಟಲಿಗಳಲ್ಲಿ ಅರ್ಧ ಕುಡಿದು,ಹಾಗೆಯೇ ಬಿಟ್ಟು ಮತ್ತೆ ಬೇರೆ ಬಾಟಲಿ ತೆರೆದು ,ಕುಡಿಯುತ್ತಿದ್ದ.ಅರ್ಧ ಕುಡಿದ ಬಾಟಲಿಗಳೇ  ಅಲ್ಲಿ ಸಾಕಷ್ಟು ಇದ್ದುವು.ಅವನ್ನು ಹೇಗೆ ಹೆಕ್ಕುವುದು?ಅವನನ್ನು ಕೇಳದೆ ಅವನ್ನು  ಮುಟ್ಟುವಂತಿಲ್ಲ. ಅವನೋ ಎಲ್ಲ ರೀತಿಯಲ್ಲೂ ಅರೆ ಅವಸ್ಥೆಯಲ್ಲೇ ಇದ್ದ.ಕೊನೆಗೂ ಎಮ್ಲಿನ್ ಳನ್ನು ನೋಡಿ , ಬಾಟಲಿ ತೆಗೆದುಕೊಳ್ಳಲು ಹೇಳಿದ,ಮತ್ತೆ ತನ್ನ ಕುಡಿತ ಮತ್ತು ಹಾಡಿನಲ್ಲಿ ಮುಳುಗಿದ.ಎಮ್ಲಿನ್ ಅ ಬಾಟಲಿಗಳನ್ನು ಎತ್ತಿಕೊಂಡಳು.ಅವಳು ಕುಡಿತ ಬಿಟ್ಟು ವರ್ಷಗಳೇ ಸಂದಿವೆ.ಬಾಟಲಿಗಳಲ್ಲಿ ಅರ್ಧ ತುಂಬಿದ್ದ ಬೀರನ್ನು ಪಕ್ಕದಲ್ಲಿದ್ದ ಕಸದ ತೊಟ್ಟಿಗೆ ಚೆಲ್ಲಿದಳು.ಖಾಲಿ ಬಾಟಲಿಗಳನ್ನು ತನ್ನ ಗೋಣಿ ಚೀಲಕ್ಕೆ ತುಂಬಿದಳು.

ಅಷ್ಟರಲ್ಲಿ ಮೂವರು ಸುಂದರ ಹುಡುಗಿಯರು ಅಲ್ಲಿ ಕಾಣಿಸಿದರು.ಎಲ್ಲರದ್ದು ಯುನಿಫಾರ್ಮ್ ಡ್ರೆಸ್.ಬಿಳಿ ಪ್ಯಾಂಟ್ ಮತ್ತು ಬಿಳಿ ಬನಿಯನ್.ಬನಿಯನಿನ ಎದೆಯಲ್ಲಿ JIM BEAM ಎಂಬ ಮುದ್ರೆ ಅಚ್ಚು ಇತ್ತು.ಎಲ್ಲರ ಹೆಗಲಿನಲ್ಲಿ ಕೆಂಪು ಬಣ್ಣದ ಸಣ್ಣ ಬ್ಯಾಗ್ .ಎಮ್ಲಿನ್ ಳ ಮುಖ ಅರಳಿತು.ಈ ಹುಡುಗಿಯರಿಂದ  ಕೆಲವಾದರೂ ಬಾಟಲಿ ಸಿಗಬಹುದು ಎನ್ನುವ ಬಯಕೆ ಅವಳದ್ದು..ಆ ಮೂವರು ಮಹಾಶ್ವೇತೆಯರು ಅಲ್ಲಿ ಕುಳಿತವರ ಬಳಿ ಹೋಗಿ ಏನೋ ಪಿಸುಗುಟ್ಟಿದರು.ಕೆಲವು ತರುಣರು ತಲೆ ಅಲ್ಲಾಡಿಸಿದರು.ಆಗ ಈ ತರುಣಿಯರು ತಮ್ಮ ಕೆಂಪು ಬ್ಯಾಗ್ ತೆರೆದು ಅದರಿಂದ ಬೀರ್ ಟಿನ್ ಗಳನ್ನು ತೆಗೆದುಕೊಟ್ಟರು.ಅವರಿಂದ ಹಣ ಪಡೆದರು.ಅವರು  ಟಿನ್  ಬೀರ್ ಕಂಪೆನಿಯ ಮಾರಾಟದ ಹುಡುಗಿಯರು.ಎಮ್ಲಿನ್ ನೋಡುತ್ತಾಳೆ – ಅವೆಲ್ಲ ಟಿನ್ ಬೀರ್.ಅಲ್ಲಿ ಬಾಟಲಿ ಇಲ್ಲ .ಅವರು ಎಷ್ಟು ಬೀರ್ ಕುಡಿದರೂ ಅವಳಿಗೆ ಖಾಲಿ ಬಾಟಲಿ ಸಿಗುವುದಿಲ್ಲ.ಕಂಪೆನಿಯವರಿಗೆ ಭರ್ಜರಿ ವ್ಯಾಪಾರ .ಎಮ್ಲಿನ್ ಮುಖ ಕಂದಿತು.ಮಾಯಿನ್ ನದಿಯ ನೀರಿನಲ್ಲಿ ಬಾತುಕೋಳಿಯೊಂದು   ಒಂಟಿಯಾಗಿ ತೇಲುತ್ತಾ ಮುಳುಗುತ್ತಾ ಇತ್ತು.ಸೂರ್ಯ ಆಯಾಸಗೊಂಡು ಮನೆಗೆ ತೆರಳಿದ ಎನ್ನುವುದಕ್ಕೆ  ಸಾಕ್ಷಿಯಾಗಿ  ಮಾಯಿನ್ ನದಿಯ ಅಲೆಗಳು ಕೆಂಬಣ್ಣದ ತೆರೆ ಎಳೆದವು.ಎಮ್ಲಿನ್ ನಿದಾನವಾಗಿ ಬಾಟಲಿ ಹೊರೆ ಹೊರುತ್ತಾ ಅಲ್ಲಿಂದ ಹೊರಟಳು.ನಾನೂ ಅಲ್ಲಿಂದ ಹೊರಟೆ.

ಅತಿಥಿಗೃಹಕ್ಕೆ ಹೋಗುವ ಮೊದಲು ಕುಡಿಯುವ ನೀರು ಕೊಳ್ಳಲೆಂದು ನನ್ನ ಎಂದಿನ  ಸೂಪರ್ ಮಾರ್ಕೆಟ್ ‘ತೆಗುತ್ ‘ಗೆ ಹೋದರೆ, ಅಲ್ಲಿ ಎಮ್ಲಿನ್ ಇದ್ದಾಳೆ.ಖಾಲಿ ಬಾಟಲಿಗಳ ಗೋಣಿ ಚೀಲದ ಹೊರೆ ಹೊತ್ತುಕೊಂಡು ,ಖಾಲಿ ಬಾಟಲಿಗಳನ್ನು ತುಂಬಿಸುವ ಯಂತ್ರದ ಬಳಿಗೆ ಸಾಗುತಿದ್ದಾಳೆ.ಈ ದಿನದ ಅವಳ ಸಂಪಾದನೆಯ ಎಲ್ಲ ಖಾಲಿ ಬಾಟಲಿಗಳಿಗೆ ಎಷ್ಟು ಸಿಗಬಹುದು ಎಂದು ಲೆಕ್ಕಹಾಕುತ್ತಿದ್ದಾಳೆ.ಬಾಯಿಯಲ್ಲಿ ಮಣಮಣ ಕೇಳಿಸುತ್ತಿದೆ. ಬೀರಿನ ಒಂದು ಚಿಕ್ಕ ಬಾಟಲಿಗೆ ಎರಡು ಸೆಂಟ್ಸ್ ಆದರೆ ,ಈ ದಿನ ಒಟ್ಟು ಎಷ್ಟು ಯೂರೋ ಎಷ್ಟು ಸೆಂಟ್ಸ್  ಸಿಗಬಹುದು ? ಯಂತ್ರವನ್ನೇ ಕೇಳಬೇಕು.ಅವಳ ಪಾಲಿಗೆ ಅದೊಂದು ಕಾಮಧೇನು . ಬಾಟಲಿ ನುಂಗುವ ಆ ಕಾಮಧೇನುವಿನ ಬಳಿಗೆ ಹೋದವಳೇ ಎಮ್ಲಿನ್ ,ಗೋಣಿಚೀಲದಿಂದ ಒಂದು ಬಾಟಲಿ ತೆಗೆದು ,ಅದರ ಬಾಯಿಯೊಳಗೆ ತುರುಕಿಸಿದಳು. ಅದು ಪಥ್ಯವಾಗಲಿಲ್ಲವೋ ಏನೋ ಹಾಗೆಯೇ   ಹೊರಕ್ಕೆ ಬಂತು.ಅವಳು ಮತ್ತೆ ಮತ್ತೆ ಒಳಕ್ಕೆ ತೂರಿದಳು . ಅದು ಮತ್ತೆ ಮತ್ತೆ ಹೊರಕ್ಕೆ ತಳ್ಳುತಿತ್ತು. ಅವಳು ಆತಂಕ ಉದ್ವೇಗ ದಿಂದ ತಲೆ ಎತ್ತಿ ಮೇಲೆ ನೋಡಿದರೆ ,ರಟ್ಟಿನ ತುಂಡಿನಲ್ಲಿ ಒಂದು ಬರಹ ನೇತಾಡುತ್ತಿತ್ತು-‘ ಈ ಯಂತ್ರ ಹಾಳಾಗಿದೆ. ನಾಳೆ ಬನ್ನಿ.’ ಆಗ ರಾತ್ರಿ ಗಂಟೆ ಎಂಟು. ಇಲ್ಲಿ ಎಲ್ಲ ಸೂಪರ್ ಮಾರ್ಕೆಟ್ ಗಳು ಮುಚ್ಚುವುದು ರಾತ್ರಿ ಎಂಟು ಗಂಟೆಗೆ. ಅಂದ ಹಾಗೆ ‘ ಎಮ್ಲಿನ್ ‘ ಅಥವಾ ‘ಎಮ್ಮಲಿನ್ ‘ ಎನ್ನವ ಹೆಸರಿಗೆ  ಜರ್ಮನ್ ಭಾಷೆಯಲ್ಲಿ ‘ಕೆಲಸ ‘ ಎಂದು ಅರ್ಥ. 

ಇಲ್ಲಿ ಕೊಟ್ಟಿರುವ ಚಿತ್ರಗಳು ನಾನು ನಿನ್ನೆ ಸಂಜೆ ( ಜುಲೈ ೨೬ ) ‘ಮಾಯಿನ್ -ಕ್ರೇನ್ ದಂಡೆ’ಯಲ್ಲಿ ತೆಗೆದವು. ಇದರಲ್ಲಿ ಎಮ್ಲಿನ್ ಇಲ್ಲ. ನಿನ್ನೆ ಅವಳು ಬಂದಿರಲಿಲ್ಲ. ಎಮ್ಲಿನ್ ಎಲ್ಲಿ ಇದ್ದಾಳೆ ಎನ್ನುವುದು ನಮ್ಮ ಒಳಗಿನ ಪ್ರಶ್ನೆ. ಎರಡು ಪಾರಿವಾಳಗಳು ಮಾಯಿನ್ ನದಿಯ ದಂಡೆಯಲ್ಲಿ ಕುಳಿತಿವೆ. ಅವು ಹೇಗೆ ಕುಳಿತಿವೆ ಗಮನಿಸಿ. ಎರಡು ಬಾತುಕೋಳಿಗಳು ಮಾಯಿನ್ ನದಿಯ ನೀರಿನ ಒಳಗೆ ಈಜುತ್ತಿವೆ .ಒಟ್ಟಿಗೆ ಈಜಬೇಕಾದ ಅವು ಬೇರೆ ಬೇರೆಯಾಗಿ ಈಜುತ್ತಿವೆ.ಒಂದು ಬಾತುಕೋಳಿ ಮಾತ್ರ ಎಮ್ಲಿನ್ ಳಂತೆ ಒಂಟಿಯಾಗಿಯೇ ಈಜುತ್ತಿದೆ.ಒಂಟಿಯಾಗಿ ಇರುವ ಇಬ್ಬರು ವ್ಯಕ್ತಿಗಳ  ಚಿತ್ರಗಳಿಗೂ  ಈ ಬರಹಕ್ಕೂ ನೇರ ಸಂಬಂಧ ಇಲ್ಲ.ಆದರೆ ಈ ಬರಹವನ್ನು ಸಂದರ್ಭದಾಚೆ ನೋಡಲು ಅವನ್ನು ಗಮನಿಸಬಹುದು.

 

‍ಲೇಖಕರು avadhi

July 28, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nadashetty

    naanu europina kasada bagge andukondaddakkuu niivu baredaddakkuu antha vyatyasa illa. nimma baravanige maatra chanda

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: