ದ್ರೌಪದಿಯ ಸ್ವಗತ
ನಾ ದಿವಾಕರ
ಇವನೇನು ಜಗ್ಗುವವನಲ್ಲ
ಎಳೆಯುತ್ತಲೇ ಇರುವವನಲ್ಲ
ಶಾಸನಗಳ ಮೀರಿದ ದುಷ್ಟನ ದುಸ್ಸಾಹಸಕೆ
ಪ್ರತಿರೋಧವೇ ಇಲ್ಲ ;
ಏಕೆ ಹೀಗೆ ?
ಅದೋ ನೆರೆದಿದೆ
ರಾಜಸಭಾಂಗಣದಲಿ
ಸುತ್ತಲ ಸಮಾಜದ ಮುಖವಾಡಗಳು
ಮುಖವೇ ಇಲ್ಲದವರಂತೆ
ಶರಣಾಗಿವೆ ಮೌನಕೆ !
ಮಾತು ಮೌನವಾದರೇನು
ಮನಸು ಸೊರಗಿದೆಯೇ ಶೂರರಿಗೆ ?
ಅಯ್ಯೋ … ಎನಿತು ಹೇಳಲಿ
ಅಂತರಾಳದ ವೇದನೆ
ವಸ್ತ್ರ ಕಳಚುತಿದೆ ಅಂಗಾಂಗ
ಕಂಪಿಸುತಿದೆ ಸುಮ್ಮನಿರುವರಲ್ಲಾ
ಅಂಗ ರಕ್ಷಕರು ಏಕೆ ಕೃಷ್ಣಾ …
ಏಕೆ ? ಅಸಹಾಯಕತೆಯೇ
ಅಮಾಯಕತೆಯೇ
ನಿಷ್ಕಾಳಜಿಯೇ ಸ್ಥಾಪಿತ
ಸಂಸ್ಕೃತಿಯ ಸ್ಫೂರ್ತಿಯೇ ?

ಆಕ್ರಂದನದ ನೋಟ
ಯಾರ ಮನವನ್ನೂ ತಟ್ಟಲಿಲ್ಲವೇ
ವಿದುರ ಭೀಷ್ಮ ದ್ರೋಣಾದಿಗಳು
ಜಗವನ್ನೇ ಗೆಲ್ಲುವ ಪತಿ
ಪರಮೇಶ್ವರರು ಕೈಕಟ್ಟಿ ಕುಳಿತಿದ್ದಾರೆ
ಏಕೆ ಕೃಷ್ಣಾ ? ಮಂಕುಬೂದಿಯನೆರಚಿದವ
ನೀನೆಯೇ ? ಕ್ಷಣಮಾತ್ರದಲಿ
ಜಗವ ತೃಣವೆಂದೆಣಿಸಿ ಹೊಸಕಿಹಾಕುವ
ಭೀಮಾರ್ಜುನರೇಕೆ ಮೌನ
ಧೃತಿಗೆಟ್ಟರೇ ಸ್ಮೃತಿಗೆಟ್ಟರೇ
ಮತಿಗೆಟ್ಟರೇ !
ಅಗೋಚರ ಶಕ್ತಿಯೊಂದು
ಮಾನ ರಕ್ಷಣೆಗೆ ಧಾವಿಸಿದೆ
ಇರಲಿ ಬಿಡು ಕೃಷ್ಣ ನಿನ್ನದೇ ಲೀಲೆ ;
ನಗ್ನಳಾದದ್ದು ನಾನಲ್ಲ ಕೃಷ್ಣಾ
ನನ್ನ ಸುತ್ತಲಿನ ಸಮಾಜ
ಅದೋ ನೋಡು ನನ್ನ ವಿವಸ್ತ್ರತೆಯ
ವೀಕ್ಷಿಸುವ ಪೌರುಷ ಪ್ರಿಯರು ;
ಎಂತಹ ನಿರ್ಲಿಪ್ತತೆ
ಏನೆಂದು ಭಾವಿಸಲಿ
ಇದು ದುಷ್ಯಾಸನನ ಪೌರುಷವೋ
ಪುರುಷ ಸಮಾಜದ ಶಾಸನವೋ
ಮೊರೆ ಹೋಗದಿದ್ದರೆ
ರಕ್ಷಣೆ ಮರೀಚಿಕೆಯೇ ?
ನನ್ನೊಂದು ವಿಕಟ ನಗೆ
ಮುಳುವಾಯಿತೇ ಕೃಷ್ಣ ಅಪಮಾನದ
ಬೇಗೆಗೆ ಬಲಿಯಾಯಿತೇ ಈ ಜೀವ ;
ಅಪಮಾನಿತರಲ್ಲವೇ ಸೀತೆ ಮಂಡೋದರಿ
ಅಹಲ್ಯಾ ಮೇನಕೆಯರು ಕುಂತಿ ಗಾಂಧಾರಿಯರು ;
ಅಟ್ಟಹಾಸದ ನಗೆ ಬೀರಿದ ಪುರುಷತ್ವಕೆ
ಧಿಕ್ಕರಿಸಲಿಲ್ಲವೇಕೆ ಧರ್ಮ ಸೂಕ್ಷ್ಮರು ?
ಅಹುದು ಕೃಷ್ಣಾ
ನೀನಿತ್ತ ವಸ್ತ್ರ ಎನ್ನ ರಕ್ಷಿಸಿದೆ
ಒಮ್ಮೆ ಅತ್ತ ನೋಡು ಕೇಶವಾ
ಇಂದಿಗೂ ನನ್ನ ಸಂತತಿ
ಜೀವಂತ ; ದುಷ್ಯಾಸನನ ಸಂತತಿಯೂ !
ಕೃಷ್ಣಾ…. ಎಂಬ ಕೂಗು
ಕೇಳುತ್ತಿದೆಯೇ ದೇವಾ
ಶತಮಾನಗಳು ಕಳೆದರೂ ರಕ್ಷಣೆಗಾಗಿ
ಮೊರೆಯೇ ?
ವಿವಸ್ತ್ರರು ನಾನಲ್ಲ ನನ್ನ ಸಂತತಿಯಲ್ಲ
ನೀನೇ ಸೃಷ್ಟಿಸಿದ ಸಮಾಜ
ದಯಪಾಲಿಸವರಿಗೆ ಅಂಗವಸ್ತ್ರವ
ಅಪಮಾನಕ್ಕೀಡಾಗದಿರಲಿ
ವಿಕಟನಗೆ ಬೀರದಿರಲಿ !






Tumba Chennagide
nice..very nice..
Prastutha kaalakke Hidida kannadi ee kavite.chennagide