
ಮಾರುತಿ ದಾಸಣ್ಣವರ
ನೀ…..
ದುಮುಗುಡುತ
ಮಾತಿಗೆ ಹಗೆ ತುಂಬಿ
ಧಗೆ ಹೊದಿಸಿ, ಮೂಟೆ ಕಟ್ಟಿ
ಹೊತ್ತು ಹೈರಾಣಾಗುವೆ.
ನಾ.. .. ..
ಗದ್ದಕ್ಕೆ ಕೈಯೂರಿ ಕೂತು
ಬರೆ ಬರೆದು ಭಾರ
ನೀಗಿಕೊಳ್ಳುವೆ.
ನೀ.. .. ..
ಪದಗಳ ಮಸೆ ಮಸೆದು
ಹರಿತಗೊಳಿಸಿ,
ದರ್ಪವ ಝಳಪಿಸುತ
ಕತ್ತರಿಸಿ ಉತ್ತರಿಸುವೆನೆಂದು
ಏದುಸಿರುಬಿಡುವೆ.

ನಾ.. .. ..
ಪದಗಳ ಮೈದಡವಿ
ಮೌನಕ್ಕೆ ಮುಡಿಸಿ
ನಕ್ಕುಬಿಡುವೆ.
ನೀ.. .. ..
ಸೇಡನ್ನು ಹೊತ್ತಿಸಿ
ಯಾರನ್ನೋ ಸುಟ್ಟೆನೆಂಬ
ಭ್ರಮೆಯಲ್ಲಿ ನೀನೇ
ಬೂದಿಯಾಗುವೆ
ನಾ.. ..
ಆ ಬೂದಿಯ ಲೇಪಿಸಿಕೊಂಡು
ಸಂತನಾಗುವೆ






0 Comments