ಕರೋನಾ ಕಾಲದಲ್ಲಿ
-ಸಿಂಧುಚಂದ್ರ ಹೆಗಡೆ
ಮುಸುಕು ಧರಿಸಿ
ಓಡಾಡುವ
ಕಾಲದಲ್ಲಿ ನಾವು ಸಂಧಿಸಿದೆವು
ಅವನ ನಗು ನನಗೆ, ನನ್ನ
ನಗು ಅವನಿಗೆ ಕಾಣಿಸಲಿಲ್ಲ
ನಡುವೆ ಸಾಕಷ್ಟು ಅಂತರ
ಆದರವನು
ಹತ್ತಿರತ್ತಿರಕ್ಕೆ ಬರುತ್ತಲೇ ಹೋದ
ಬೇಸಿಗೆಯ ಮಳೆಯಂತೆ
ಪ್ರೀತಿ…
ಎಲ್ಲವೂ
ಮುಗಿಯಿತೆಂದುಕೊಳ್ಳುವ-
-ಷ್ಟರಲ್ಲಿ ಮತ್ತೆ ಆರಂಭ
ಮುಚ್ಚಿದ ಮುಖ ಮಾತ್ರ
ತೆರೆದುಕೊಂಡಿರಲಿಲ್ಲ ಪೂರಾ
ಹಳಹಳಿಸುತ್ತಾ ಒಂದಷ್ಟು ಕನಸು
-ಗಳ ನೆತ್ತಿ ಸವರುತ್ತಾ ಇಬ್ಬರೂ
ಒಂದೇ ಆಕಾಶದ ಚುಕ್ಕೆಯಂತೆ
ಲೆಕ್ಕ ತಪ್ಪಿದ್ದೇವೆ….
ರಾತ್ರಿಯ ನೀರವತೆಯಲ್ಲಿ ಹೆಸರಿಲ್ಲದ
ಹೂವಿನ ಪರಿಮಳ
ಮತ್ತೇರಿಸಿದೆ

ಮಾತಲ್ಲೇ ಮುತ್ತು ,ಮೌನ
ದಲ್ಲೇ ಅಪ್ಪುಗೆ ಮುಂದುವರಿದಿದೆ
ಎಲ್ಲೆಡೆ ಹಬ್ಬಿರುವ ರೋಗಾಣು
ಮುಸುಕು ತೊಡದೇ
ವಿಹರಿಸುತಿದೆ
ಮಾತು, ಮುಖದ ಜೊತೆಗೆ ಮನಸಿಗೂ
ಇದ್ದ ಕವಚ ಅವಿಚುಕೊಂಡಿದೆ
ಬರಗಾಲದಲ್ಲಿ ಹಸಿವೆ!
ಹೇಳಬೇಕಿದೆ ಅವನಿಗೆ ಸಾರಿ ಸಾರಿ
ಕೂಡಿ ಉಸಿರಾಡಲಾಗದ
ರೋಗಗ್ರಸ್ತ ಘಳಿಗೆ
ತೊಲಗಬಹುದೇ
ಕರೋನಾ
ಅವನು ಬರುವ
ಮುನ್ನ.






0 Comments