ಮಾತನ್ನುಣ್ಣಲು ಗಾದೆಯೇ ಎಲೆ..

ಗಾದೆಗಳು ಹೇಗೆ ರಚನೆಗೊಂಡವು ಅಂತ ಒಬ್ಬರ ಪ್ರಶ್ನೆ…

ಜೆ ವಿ ವಿ ಮೂರ್ತಿ

ಉದ್ಧಾಮ ಪಂಡಿತ ದಿವಂಗತ ಶ್ರೀ ಎ.ಕೆ.ರಾಮಾನುಜನ್ ಒಂದು ಕಡೆ ವ್ಯಕ್ತಪಡಿಸಿದಂತೆ ‘ಗಾದೆಗಳು ಬಾಯಲ್ಲಿ ಹಾದು ಮರೆಯುವ ಮಾತು’… ಗಾದೆಗಳು ಅನುಭವದ ನುಡಿಗಳು… ಮೌಖಿಕ ರೂಪದಲ್ಲೇ ಶತಶತಮಾನಗಳಿಂದ ಬಳಕೆಯಲ್ಲಿದ್ದು ನೆನಪಿನಲ್ಲಿ ಉಳಿಸಿಕೊಂಡು ತಲೆಮಾರುಗಳು ಅವನ್ನು ಆಡುಮಾತಲ್ಲೇ ವರ್ಗಾಯಿಸಿಕೊಂಡು ಬಂದಿವೆ…

ಗಾದೆ ಎಂದರೇನು? ಅನ್ನುವುದಕ್ಕೆ ಸೂತ್ರರೂಪದ ಉತ್ತರವೂ ಇಲ್ಲ… ಒಂದೊಂದು ದೇಶದಲ್ಲಿ ಒಂದೊಂದು ಭಾಷೆಯಲ್ಲಿ ಅವರವರದೇ ಅರ್ಥ ನೀಡಿದ್ದಾರೆ… ಆಫ್ರಿಕಾದಲ್ಲಿನ ಗಾದೆಯ ಬಗೆಗಿನ ಮಾತು- ‘ಮಾತನ್ನುಣ್ಣಲು ಗಾದೆಯೇ ಎಲೆ, ಎರಡು ಅರ್ಥವಿಲ್ಲದ ಗಾದೆಯೇ ಇಲ್ಲ, ಗಾದೆ ತಿಳಿದ ವಿವೇಕಿ ಜಗಳ ಬಿಡಿಸುತ್ತಾನೆ…’

ಕನ್ನಡದಲ್ಲಿ ನಾವು ಗಾದೆಯನ್ನು ನಾಣ್ಣುಡಿ, ನಾಡನುಡಿ ಅಂದಿದ್ದೇವೆ… ಗ್ರೀಕರು ಬೀದಿಯಲ್ಲಿ ಕೇಳಿದ ಮಾತು ಅಂತ ಕರೆದಿದ್ದಾರೆ… ಇಂಗ್ಲೀಷಿನಲ್ಲಿ ಗಾದೆಗಳೆಂದರೆ ಬೀದಿಯಲ್ಲಿ ಸಿಕ್ಕುವ ವಿವೇಕ ಎಂದು ಹೇಳಿದೆ… ಇಟಲಿಯಲ್ಲಿ ಗಾದೆಯೆಂದರೆ ಸಿದ್ಧಿಸಿದ ನುಡಿ… ಲ್ಯಾಟಿನ್ ಭಾಷೆಯಲ್ಲಿ ಗಾದೆ ಜನವಾಣಿಯೆಂಬ ದೇವವಾಣಿ… ಹೀಗೆ ವಿವಿಧ ಹೇಳಿಕೆಗಳು… ಅಂದರೆ ಗಾದೆ ಹೇಗೆ ರಚನೆಗೊಂಡವು ಅನ್ನುವ ಪ್ರಶ್ನೆಗೆ ಕುರುಡರು ಆನೆಯನ್ನು ಬೇರೆ ಬೇರೆ ಕಡೆ ಮುಟ್ಟಿ ಬೇರೆ ಬೇರೆ ರೀತಿಯಲ್ಲಿ ವರ್ಣಿಸುವಂತೆ ಗಾದೆಗಳು ಹೀಗೆ ರಚನೆಗೊಂಡವು ಎಂಬ ನಮ್ಮ ಉತ್ತರವೂ ಅಷ್ಟೇ ವಿವಿಧ ರೀತಿಯದಾಗುವುದೇ ಹೊರತು ‘ಏಕೈಕ ಸೂತ್ರ’ದಲ್ಲಿ ಗಾದೆಯನ್ನು ಹಿಡಿದಿಡುವುದಕ್ಕಾಗುವುದಿಲ್ಲ!

ಗಾದೆ ಯಾರೋ ಅನಾಮಧೇಯನ ಮನಸ್ಸಿನಲ್ಲಿ ತಟ್ಟನೆ ಹಾರಿದ ಕಿಡಿನುಡಿ…. ಬೇರೆ ಬೇರೆ ಸಂಸ್ಕೃತಿ, ಸಮಾಜ, ಜೀವನಶೈಲಿ, ಪರಿಸರ, ಜೀವಾನಾನುಭವಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ತನ್ನದೇ ವಿಶಿಷ್ಟವಾದ ಆಡು ಮಾತುಗಳಿಗೆ ಜನ್ಮ ನೀಡಿವೆ…

ಪುರಾಣಗಳೂ ಗಾದೆಗಳ ಹುಟ್ಟಿಗೆ ಪ್ರೇರಕ… ಉದಾ:

ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ
ಅಳಿಲ ಭಕ್ತಿ ಮಳಲ ಸೇವೆ
ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು
ಉತ್ತರನ ಪೌರುಷ ಒಲೇ ಮುಂದೆ
ಮಣ್ಣಿನಿಂದ ಕೌರವ ಕೆಟ್ಟ ಹೆಣ್ಣಿನಿಂದ ರಾವಣ ಕೆಟ್ಟ
ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆ
ಪಗಡೆಯಾಡಿ ಕೌರವರು ಕೆಟ್ಟರು ಕವಡೆಯಾಡಿ ಹೆಣ್ಣುಮಕ್ಕಳು ಕೆಟ್ಟರು
ಭೀಮನಿರುವ ಸ್ವರ್ಗ ಬೇಡ ರಂಗನಿರುವ ವಠಾರ ಬೇಡ…

ಈ ಕೊವಿಡ್ ಪಿಡುಗಿನ ಹಾವಳಿಯ ಒಂದು ವರ್ಷದಲ್ಲಿ ಅನೇಕ ಹೊಸ ಗಾದೆಗಳು ಜನ್ಮ ತಾಳಿವೆ… ಅದೇ ರೀತಿ ಈ ತಾಂತ್ರಿಕ ಯುಗದ ಹಲವು ವಿರೋಧಾಭಾಸಗಳು ಬೇರೆ ಬೇರೆ ಆಡುಮಾತುಗಳು ಉದ್ಭವಿಸಲು ಪೂರಕವಾಗಿವೆ…

ಬಹಳ ಹಿಂದೆ ಕೇಳಿದ ಒಂದು ಹೇಳಿಕೆ-ಗಾದೆಗಳೆಂದರೆ ಅಜ್ಞಾತಕವಿಯ ಅಮರವಾಣಿಗಳು!… ಅದರ ಜನ್ಮ ಮತ್ತು ರಚನೆ ನಿಗೂಢ, ಕೌತುಕ!…

(ಆಧುನಿಕ ಅಮೇರಿಕನ್ನಡ ಗಾದೆಗಳು!… ಸಂಗ್ರಹ: ಡಾ.ಮೈ.ಶ್ರೀ.ನಟರಾಜ್)

  1. ಹತ್ತು ವರ್ಷಕ್ಕೆ ನನ್ನ ಮಗ ‘ಮುತ್ತು’ ಅಂದ
  2. ಹೋಗಾಕ್ ಹಿಲರಿ, ಬರಾಕ್ ಒಬಾಮ
  3. ಬಿಳೀ ಮನೇಲ್ ಕರೀ ಮನ್ಷಾ (ಒಬಾಮ ಅಧ್ಯಕ್ಷನಾದರೆ)
  4. ಬಾಯಿದ್ದವನು ಡಿಬೇಟ್ ಗೆದ್ದ, ದುಡ್ಡಿದ್ದವನು ಎಲೆಕ್ಷನ್ ಗೆದ್ದ
  5. ಮಕ್ಳನ್ ಕಟ್ಕೊಂಡು ಮಾಲ್‌ಗೆ ಹೋಗ್ಬೇಡ, ಗಂಡನ್‌ಕಟ್ಕೊಂಡ್ ಇಂಡ್ಯಾಗ್‌ಹೋಗ್ಬೇಡ
  6. ಒಂದೊಂದ್ ವರ್ಷಕ್ ಕೆಲ್ಸಾ ಬದ್ಲಾಯ್ಸು
    ಮೂರ್ಮೂರ್ ವರ್ಷಕ್ ಕಾರ್ ಬದ್ಲಾಯ್ಸು
    ಐದೈದ್ ವರ್ಷಕ್ ಮನೆ ಬದ್ಲಾಯ್ಸು
    ಏಳೇಳ್ ವರ್ಷಕ್ ಗಂಡನ್ ಬದ್ಲಾಯ್ಸು
  7. ಬಾಸಿನ್ ಮುಂದೆ ಬಾಯ್ಮುಚ್ಕೊಂಡಿರು
  8. ಡೇಟಿಂಗ್ ಮಾಡ್‌ದೇ ಮದ್ವೇ ಇಲ್ಲ, ಮದ್ವೆ ಆದ್ರೆ ಡೇಟಿಂಗ್ ಇಲ್ಲ
  9. ಫೆಡರಲ್ ಟ್ಯಾಕ್ಸನ್ನೇ ಕೊಡದವ್ನು ಸ್ಟೇಟ್ ಟ್ಯಾಕ್ಸ್ ಕೊಡ್ತಾನಾ
  10. ಕತ್ತರಿಸಿದಷ್ಟೂ ಹುಲ್ಲು, ಕಟ್‌ದಷ್ಟೂ ಬಿಲ್ಲು
  11. ಒಂದೊಂದೇ ಬೀರ್ ಕುಡಿಯೋನ್ ಯೋಗಿ, ಅವನ್ ತಂಟೇಗ್ ಹೋಗ್‌ಲೇಬೇಡಿ
    ಎರಡೆರಡ್ ಕುಡಿಯೋನ್ ಭೋಗಿ, ಅವನ್ ಕಡೆ ಕೊಂಚ ನಿಗಾ ಇಡಿ
    ಮೂರ್‍ಮೂರ್ ಕುಡಿಯೋನ್ ರೋಗಿ, ಅವನ್ನ ಡ್ರೈವಿಂಗ್ ಮಾಡಕ್ ಬಿಡ್‌ಬೇಡಿ!
    ನಾಕ್‌ನಾಕ್ ಕುಡಿಯೋನ್ನ ಆಚೆ ಕರ್‍ಕೊಂಡ್‌ಹೋಗಿ, ಮನೇಲ್‌ಕೂಡ್‌ಹಾಕ್‌ಬಿಡಿ!
  12. ಕೆಲ್ಸಾ ಮಾಡಿ–ಬಿಡಿ, ಟೈಮಿಗ್ ಸರಿಯಾಗ್ ಹಾಜರ್ ಆಗ್‌ಬಿಡಿ
  13. ಪಾರ್ಟಿಗಳಿಗ್ ಹೋಗ್ವಾಗ ಪಾಯಸವನುಂಡಂತೆ
    ಪಾರ್ಟಿಗರು ಬಂದು ಹಿಂತಿರುಗಿ ಕರೆಯೆಂದಾಗ
    ಪಕ್ಕೆಲುಬು ಮುರಿದು ಬಿದ್ದಂತೆ ಸ್ವಲ್ಪಜ್ಞ
  14. ಯೌವನ ಇದ್ದಾಗ್ ಪುರುಸೊತ್ತಿಲ್ಲ, ಪುರುಸೊತ್ತಿದ್ದಾಗ್ ಯೌವನ ಇಲ್ಲ
    ಸಮಯ ಇದ್ದಾಗ ದುಡ್ಡಿಲ್ಲ, ದುಡ್ಡಿದ್ದಾಗ ಸಮಯ ಇಲ್ಲ
  15. ಗಂಡ ಇಂಡಿಯಾ ಅಂದ್ರೆ, ಹೆಂಡ್ತಿ ಅಮೆರಿಕಾ
    ಹೆಂಡ್ತಿ ಇಂಡಿಯಾ ಅಂದ್ರೆ, ಗಂಡ ಅಮೆರಿಕಾ
  16. ಮುವ್ವತ್ತಾದ್ರೂ ಮದ್ವೆ ಇಲ್ಲ, ಅರವತ್ತಾದ್ರೂ ಪೆಂಷನ್ ಇಲ್ಲ
  17. ಹೋದ್ಯಾ ಒಸಾಮಾ ಅಂದ್ರೆ ಬಂದೇ ಒಬಾಮ ಅಂದನಂತೆ
  18. ಹೋದ್ಯಾ ಹಿಲರಿ ಅಂದ್ರೆ ಬಂದೆ ಬರಾಕ್ ಅಂದಹಾಗೆ
  19. ಅಂತೂ ಇಂತೂ ಡೆಮೋಕ್ರ್ಯಾಟಿಕ್ ಪಾರ್ಟಿಗೆ ರಾಜ್ಯವಿಲ್ಲ
  20. ಇದ್ರೆ ಹಿಲರಿ, ಬಿದ್ರೆ ಬಿಲರಿ
  21. ಪಾಕೀಸ್ತಾನದಲ್ಲಿದ್ರೆ ಮುಷರ್ರಾಫ್, ಅಮೇರಿಕಾಕ್ ಬಂದ್ರೆ ಬುಷರ್ರಾಫ್
  22. ಬೆಂಗ್ಳೂರಲ್ಲಿ ಇಂಗ್ಲೀಷು, ಅಮೇರಿಕದಲ್ಲಿ ಕನ್ನಡ
  23. ಬೆಂಗ್ಳೂರಿಗ್‌ಹೋದ್ರೂ ಪೀಟ್ಜಾ ತಪ್ಲಿಲ್ಲ
  24. ಕಾರಿದ್ರೆ ಫ್ಲೈಓವರ್ರು, ಕಾಲಿದ್ರೆ ಕ್ರಾಸ್‌ಓವರ್ರು!
  25. ಮನೇ ಮಾರೋ ಕಾಲಕ್ಕೆ ಬೆಲೆ ಇಳೀತು
    ರಿಟೈರಾಗೋ ಕಾಲಕ್ಕೆ ಡಾಲರ್ ಇಳೀತು
  26. ಹಂದಿಯ ತುಟಿಗೆ ಬಣ್ಣದ ಲಿಪ್‌ಸ್ಟಿಕ್
    ಸುಂದರಿಯೊಬ್ಬಳು ಪ್ರತ್ಯಕ್ಷ
    ಮಂದಮತಿಗಳೋ ಡೆಮೋಕ್ರ್ಯಾಟರು
    ಬಂದನು ರಿಪಬ್ಲಿಕನ್ ಅಧ್ಯಕ್ಷ!
  27. ಶಾಮಲವರ್ಣದ ಬರಾಕನ ಜೊತೆಗೆ
    ಸಾಮಾನ್ಯರ ಮಗ ಬೈಡಣ್ಣ
    ರೋಮವು ನೆರೆತಿಹ ಮೆಕೇನನೊಂದಿಗೆ
    ಕೋಮಲೆಯೊಬ್ಬಳು ನೋಡಣ್ಣ!
  28. ಅಲಾಸ್ಕಾದಿಂದ ಪೇಲಿನ್ನು, ಅರಿಜೋನಾದಿಂದ ಮೆಕ್ಕೇನು
  29. ಇರಾಕ್‌ನಲ್ಲಿ ಬಾಂಬ್ ಇರ್ತೈತಾ ಅಂದ್ರೆ, ಇರಾಕಿಲ್ಲಾ ಅಂದನಂತೆ
    ಇರಾನ್‌ನಲ್ಲಿ ಬಾಂಬ್ ಇರ್ತೈತಾ ಅಂದ್ರೆ, ಇರಾಣಿಲ್ಲ ಅಂದನಂತೆ
  30. ಒಸಾಮನ್ನ ಹಿಡ್ಯೋಕೆ ಒಬಾಮ ಬಂದ
    ಒಬಾಮನ್ನ ಹಿಡಿಯೋಕೆ ಮೆಕ್ಕೇನ್ ಬಂದ

‍ಲೇಖಕರು Avadhi

April 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: