ಮಹಾರಾಜ ಕಾಲೇಜಿನಲ್ಲಿ ಅನಂತಮೂರ್ತಿ

ಯು ಆರ್ ಅನಂತಮೂರ್ತಿ ಅವರ ಸಮಕಾಲೀನ ಚಿಂತನೆಗಳ ಪ್ರಖರತೆ ಗೊತ್ತಾಗಬೇಕಾದರೆ ಅವರ ಬ್ಲಾಗ್- ‘ಋಜುವಾತು’ಗೆ ಭೇಟಿ ಕೊಡಬೇಕು.
ಅಭಿನವದ ರವಿಕುಮಾರ್ ಅನಂತಮೂರ್ತಿ ಅವರಿಂದ ಹೆಕ್ಕಿ ತೆಗೆಸಿದ ಮಹಾರಾಜ ಕಾಲೇಜಿನ ನೆನಪುಗಳು ಇಲ್ಲಿವೆ-

ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು

ನನ್ನ ತಂದೆಯವರು ಮೈಸೂರಿಗೆ ನನ್ನನ್ನು ಕರೆದುಕೊಂಡು ಬಂದರು. ಹಾಸ್ಟೆಲ್‌ನಲ್ಲಿ ನನ್ನನ್ನು ಓದಿಸುವುದು ಅವರಿಗೆ ಸಾಧ್ಯವಿರಲಿಲ್ಲವಾದ್ದರಿಂದ ಮಹಾರಾಜಾ ಕಾಲೇಜಿಗೆ ಹತ್ತಿರದಲ್ಲೇ ಇದ್ದ ಒಂದು ಮನೆಯಲ್ಲಿ ಸ್ವತಃ ಅಡುಗೆ ಮಾಡಿಕೊಂಡು ಓದುವ ಏರ್ಪಾಡನ್ನು ಅವರೇ ಓಡಾಡಿ ಮಾಡಿದರು. ನನಗಾಗ ಸಿಕ್ಕ ರೂಮು ಯಾರ ಮನೆಯದು ಎಂದು ನೆನೆದರೆ ಈಗ ಆಶ್ಚರ್ಯವಾಗುತ್ತದೆ. ನಾನು ಓದಿದ ಶರಶ್ಚಂದ್ರರ ಎಲ್ಲ ಕಾದಂಬರಿಗಳನ್ನು ಅನುವಾದ ಮಾಡಿದ ಹಿರಿಯರೊಬ್ಬರ ಮನೆ ಅದು. (ನನಗೀಗ ಥಟ್ಟನೆ ಅವರ ಹೆಸರು ನೆನಪಾಗುತ್ತಿಲ್ಲ) ಇಂಟರ್‌ ಮೀಡಿಯೆಟ್‌ನಲ್ಲಿ ನಾನು ಫೇಲಾದ ವರ್ಷವೇ ಇಂಗ್ಲಿಷ್‌ನಲ್ಲಿ ಫಸ್ಟ್‌ ಕ್ಲಾಸ್‌ ಅಂಕಗಳನ್ನು ಪಡೆದಿದ್ದೆ. ಆದ್ದರಿಂದ ಇಂಗ್ಲಿಷ್‌ ಆನರ್ಸ್‌ನಲ್ಲಿ ಸೀಟು ಸಿಗುವುದು ಕಷ್ಟವಲ್ಲದಿದ್ದರೂ ನನ್ನ ಸಮಾಜವಾದೀ ಸಂಬಂಧದಿಂದಾಗಿ ಸ್ನೇಹಿತರಾಗಿದ್ದ ಡಿ.ಆರ್‌.ಕೃಷ್ಣಮೂರ್ತಿ ಎಂಬ ಧೀರೋದಾತ್ತ ಕಮ್ಯುನಿಸ್ಟ್‌ ಕಾರ್ಯಕರ್ತರ ತಮ್ಮ ರಾಜಗೋಪಾಲ್‌ ಎನ್ನುವವರು ನನ್ನನ್ನು ಪ್ರೊ.ಭರತ್‌ರಾಜ್‌ ಸಿಂಗ್‌ ಎಂಬುವರ ಬಳಿ ಕರೆದುಕೊಂಡು ಹೋದರು. (ಡಿ.ಆರ್‌. ಕೃಷ್ಣಮೂರ್ತಿಯವರು ನಡೆಸುತ್ತಿದ್ದ ಅತ್ಯಂತ ಅಪರೂಪದ ಪುಸ್ತಕಗಳು ಸಿಗುತ್ತಿದ್ದ `ಪೀಪಲ್ಸ್‌ ಬುಕ್‌ ಹೌಸ್‌’ ನಮಗೆ ಆ ದಿನಗಳಲ್ಲಿ ಸಂಜೆಯ ಹರಟೆಯ ತಾಣ) ಭರತ್‌ರಾಜ್‌ ಸಿಂಗರು ಬಹಳ ವಿಶ್ವಾಸದಿಂದ ನನ್ನನ್ನು ಕುಳಿತುಕೊಳ್ಳುವಂತೆ ಹೇಳಿ ತಮ್ಮದೊಂದು ಪುಸ್ತಕದ ಲಿಸ್ಟ್‌ ತೆಗೆದು `ಇವುಗಳನ್ನು ಓದಿದ್ದೀಯಾ?’ ಎಂದು ಕೇಳಿದರು. ಆ ಎಲ್ಲ ಪುಸ್ತಕಗಳೂ ಇಂಗ್ಲಿಷ್‌ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿದ್ದವು.
ನನ್ನ ತಂದೆಯವರ ಆಸ್ಥೆಯಿಂದಾಗಿ ನಾನು ಗೋಲ್ಡ್‌ ಸ್ಮಿತ್‌ನ `ರಿಕಾರ್‌ ಆಫ್‌ ದಿ ವೇಕ್‌ ಫೀಲ್ಡ್‌’ ಕಾದಂಬರಿಯನ್ನು ಮಾತ್ರ ಓದಿದ್ದೆ. ಹಾಗೆಯೇ ಅವನ  `ಸಿಟಿಜನ್‌ ಆಫ್‌ ದಿ ವರ್ಲ್ಡ್‌’  ಪುಸ್ತಕದ ಕೆಲವು ಪ್ರಬಂಧಗಳನ್ನೂ ಓದಿದ್ದೆ. ಪ್ರೊ.ಸಿಂಗರ ಲಿಸ್ಟ್‌ನಲ್ಲಿದ್ದ ಉಳಿದ ಯಾವ ಪುಸ್ತಕವನ್ನೂ ಓದಿರಲಿಲ್ಲ.
ಶಾಲೆಗೆ ಹೋಗದೇ ಸ್ವತಃ ಓದುವುದನ್ನು ಕಲಿತ ನನ್ನ ತಂದೆ ವಾಲ್ಟರ್‌ ಸ್ಕಾಟ್‌ನ `Ivan hoe’ ಎನ್ನುವ ಪುಸ್ತಕವನ್ನು ಓದಿ ಕೆಲವು ದಿನ ಮಂಕಾಗಿಬಿಟ್ಟಿದ್ದರಂತೆ. ಅವರ ತಲೆಯ ಮೇಲಿನಿಂದ ನೀರು ತುಂಬಿದ ಕೊಡವನ್ನು ಸುರಿದು ಚಿಕಿತ್ಸೆ ಮಾಡಿದ್ದನ್ನು ನಮ್ಮ ತಾಯಿ ಹೇಳುತ್ತಿದ್ದರು.
ಗಣಿತ ಶಾಸ್ತ್ರವನ್ನು ನಾನು ಓದಬೇಕೆಂದು ಆಸೆಪಟ್ಟಿದ್ದ ನನ್ನ ತಂದೆ ನನ್ನ ಸಮಾಜವಾದಿ ಆಂದೋಲನ ಮತ್ತು ಸಾಹಿತ್ಯದ ಹುಚ್ಚನ್ನು ಅರಿತುಕೊಂಡು ಹೇಳಿದ್ದರು: `ನೀನು ಏನು ಬೇಕಾದರೂ ಓದು, ಆದರೆ ಆ ವಾಲ್ಟರ್‌ ಸ್ಕಾಟ್‌ ನ `Ivan hoe’ ಮಾತ್ರ ಓದಕೂಡದು’ ನನ್ನ ತಂದೆಯ ಅಪ್ಪಣೆಯಂತೆ ಈ ಹೊತ್ತಿನವರೆಗೂ ಅದನ್ನು ಓದಿಲ್ಲ. ಪ್ರೊ.ಸಿಂಗರಿಗೆ ನಾನು ಹೇಳಿದೆ: `ನಾನು ಏನೇನು ಓದಿದ್ದೇನೆ ಎಂಬುದನ್ನು ಹೇಳಬಹುದೇ ಸರ್‌’.  ಕೇಂಬ್ರಿಡ್ಜ್‌ನಲ್ಲಿ ಓದಿ ಬಂದಿದ್ದ ಸ್ನೇಹಮಯಿಯಾದ ಈ ಯುವ ಪ್ರಾಧ್ಯಾಪಕರು `ಹೇಳಿ’ ಎಂದರು. ನಾನು ಹೇಳತೊಡಗಿದೆ. ಗಾರ್ಕಿಯ ಕಥೆಗಳು, ಅವನ `ಮದರ್‌’, ಟಾಲ್‌ ಸ್ಟಾಯ್‌ನ `ರಿಸಲಕ್ಷನ್‌’, ಗಾಂಧಿಯ ಆತ್ಮಕತೆ, ನೆಹರೂರ `ಡಿಸ್ಕವರಿ ಆಫ್‌ ಇಂಡಿಯಾ’, ಆ ದಿನಗಳಲ್ಲಿ ಗಾಂಧಿಗೆ ಪ್ರಿಯವಾಗಿದ್ದ `ಲೈಟ್‌ ಆಫ್‌ ಇಂಡಿಯಾ’, ವಿವೇಕಾನಂದರ ಭಾಷಣಗಳು, ಜಯಪ್ರಕಾಶರ `ಮೈ ಸೋಷಲಿಸಮ್‌’,  ಈ ಲಿಸ್ಟ್‌ನ ಹಲವು ಪುಸ್ತಕಗಳು ಭರತರಾಜಸಿಂಗರ ಹುಬ್ಬೇರುವಂತೆ ಮಾಡಿದವು. ಪ್ರಾಧ್ಯಾಪಕರೊಬ್ಬರ ಲಿಸ್ಟ್‌ನಲ್ಲಿ ಇಲ್ಲದೇ ಇರುವುದನ್ನು ನಾನು ಓದಿದ್ದೆನೆಂಬುದೇ ಅವರ ಮೆಚ್ಚುಗೆಗೆ ಕಾರಣವಾದಂತೆ ತೋರಿತು.
ಆಗ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಡಾ.ಗೋಪಾಲಸ್ವಾಮಿ. ಇವರು ಜಗತ್‌ ಪ್ರಸಿದ್ಧ ಮನೋವಿಜ್ಞಾನಿಯೆಂದು ಆಗ ಎಲ್ಲರ ಅಭಿಮತ. ಮೈಸೂರಿನಲ್ಲಿ ಆಕಾಶವಾಣಿಯನ್ನು ಆ ಹೆಸರು ಕೊಟ್ಟು ಪ್ರಾರಂಭ ಮಾಡಿದರೆಂಬುದು ಅವರ ಕೀರ್ತಿ. ಇಂತಹ ಹಿರಿಯ ಪ್ರಿನ್ಸಿಪಾಲರೊಬ್ಬರು ಕೇವಲ ಪೈಜಾಮ ಜುಬ್ಬದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಇವರು ಎಷ್ಟು ಸರಳರೋ ಅಷ್ಟೇ ಉದಾರಿಯೂ,  ಹೆಚ್ಚು ಮಾತನಾಡದ ಚಿಂತಕರೂ ಆಗಿದ್ದರು. ಆ ದಿನಗಳಲ್ಲಿ ಉತ್ತಮವಾದ ಇಂಗ್ಲಿಷ್‌ ಚಿತ್ರಗಳನ್ನು ತೋರಿಸುತ್ತಿದ್ದ ಟಾಕೀಸೆಂದರೆ, `ಗಾಯತ್ರಿ’ ಟಾಕೀಸು. ನೂರಡಿ ರಸ್ತೆಯ ಮೇಲೆ ಇದ್ದ ಸಿನೆಮಾ ಮಂದಿರ ಅದು. ಅಲ್ಲಿ ನಾವು ಕಡಿಮೆ ದರ್ಜೆಯ ಟಿಕೆಟ್‌ ಪಡೆದು ಬೆಂಚುಗಳ ಮೇಲೆ ಹೋಗಿ ಕೂರುತ್ತಿದ್ದೆವು.
ಕೆಲವೊಮ್ಮೆ ಡಾ. ಗೋಪಾಲಸ್ವಾಮಿಯವರನ್ನು ವಿದ್ಯಾರ್ಥಿಗಳ ನಡುವೆ ಕಂಡು ನಾನು ಬೆರಗಾದದ್ದೂ ಉಂಟು. ಡಾ.ಗೋಪಾಲಸ್ವಾಮಿಯವರ ಕಾಲದಲ್ಲಿಯೇ ಮಹಾರಾಜಾ ಕಾಲೇಜಿನ ಶತಮಾನೋತ್ಸವ ನಡೆದಿತ್ತು. ಆಗ ಮೈಸೂರಿನ ಪ್ರಸಿದ್ಧ ಶಿಲ್ಪಿಯಾದ ಸಿದ್ಧಲಿಂಗಯ್ಯ ಅವರು ಮಾಡಿದ ಸರಸ್ವತಿ ವಿಗ್ರಹ ನಮ್ಮೆಲ್ಲರ ಕಣ್ಣಿಗೆ ಅಚ್ಚುಮೆಚ್ಚಾಗಿ ಸ್ಟೇರ್‌ ಕೇಸ್‌ ಹತ್ತಿ ಹೋಗುತ್ತಿದ್ದಂತೆ ಒಂದು ಗೂಡಿನಲ್ಲಿ ಇತ್ತು.
ಮಹಾರಾಜ ಕಾಲೇಜು ಎಲ್ಲ ಕಾಲೇಜಿನಂತಲ್ಲ. ಎಲ್ಲರೂ ನೆನೆಯುತ್ತಿದ್ದ ಮಹಾನುಭಾವರು ಯಾವ ಯಾವ ಕೋಣೆಯಲ್ಲಿ ಕೂತಿರುತ್ತಿದ್ದರು ಎಂಬುದನ್ನು ಹೊಸ ವಿದ್ಯಾರ್ಥಿಗಳಾದ ನಮಗೆ ತೋರಿಸುತ್ತಿದ್ದರು. `ಇಲ್ಲಿ ರಾಧಾಕೃಷ್ಣನ್‌ ಕೂತಿರುತ್ತಿದ್ದರು’, `ಇಲ್ಲಿ ರಾಧಾಕೃಷ್ಣನ್‌ರಿಗೇ ಭಾರತೀಯ ತತ್ವಶಾಸ್ತ್ರವನ್ನು ಕಲಿಸಿದ ಹಿರಿಯಣ್ಣ ಕೂತಿರುತ್ತಿದ್ದರು’…..ಹೀಗೆ.
ನಮ್ಮ ಕಾಲದಲ್ಲೂ ಮಹಾನುಭಾವರಾದ ಅಧ್ಯಾಪಕರಿದ್ದರು. ಕುವೆಂಪು ಕಚ್ಚೆ ಪಂಚೆಯುಟ್ಟು, ಬಿಳಿಯ ಜುಬ್ಬಾ ಧರಿಸಿ, ಮೈಸೂರಿನ ಪ್ರಸಿದ್ಧ ಟಾಂಗಾದಲ್ಲಿ ಬಂದು, ಸ್ವಲ್ಪ ದೂರದಲ್ಲಿಯೇ ಇಳಿದು, ಆಕಾಶವನ್ನು ಮಾತ್ರ ನೋಡುತ್ತಿರುವವರಂತೆ ನಡೆದು ಬಂದು, ಮೆಟ್ಟಿಲನ್ನು ಹತ್ತಿ, ಸೀದಾ ತಮ್ಮ ಕೋಣೆಗೆ ಹೋಗಿ ಕೂರುತ್ತಿದ್ದ ದೃಶ್ಯವನ್ನು ನಾವು ದೂರದಲ್ಲಿ ನಿಂತು ಗೌರವದಿಂದ ನೋಡುತ್ತಿದ್ದೆವು. ಡಿ.ಎಲ್‌. ನರಸಿಂಹಾಚಾರ್ಯರು ತಾವು ಹಿಡಿದ ಕೊಡೆಗೆ ಒಂದು ಕೈ ಇದೆ ಎನ್ನುವುದು ತಿಳಿಯದವರಂತೆ ಅದನ್ನೊಂದು ದೊಣ್ಣೆಯಂತೆ ಹಿಡಿದು, ತಮ್ಮ ಪೇಟದಲ್ಲೂ, ಕಿರಿದಾದ ನಾಮದಲ್ಲೂ ಬಹಳ ತೂಕದವರಂತೆ ನಮಗೆ ತೋರುತ್ತಿದ್ದರು. ಎಲ್ಲ ವಿದ್ಯಾರ್ಥಿಗಳನ್ನೂ ಅಚ್ಚುಮೆಚ್ಚಿನಿಂದ ಏಕ ವಚನದಲ್ಲಿ ಮಾತನಾಡಿಸುತ್ತಿದ್ದ ಆ ಕಾಲದ ಪ್ರಿಯ ಮೇಷ್ಟ್ರು ಎಂದರೆ ತ.ಸು.ಶಾಮರಾಯರು. ಅವರ ಮನೆಯಲ್ಲಿ ಹಲವು ಬಡ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರೆಂದು ನಾವೆಲ್ಲರೂ ಆ ದಿನಗಳಲ್ಲಿ ಬಹಳ ಗೌರವದಿಂದ ಕೇಳಿಸಿಕೊಂಡಿದ್ದೆವು.
ಈ ಔದಾರ್ಯದ ಕಥೆಗಳು ಹಲವಿದ್ದವು. ನಮ್ಮ ಕಾಲೇಜಿನಲ್ಲಿ ಓದಿದ್ದ  ಪ್ರೊ.ಶಂಕರನಾರಾಯಣ ರಾಯರು ಹೇಳಿದ ಒಂದು ಘಟನೆಯನ್ನು ನೆನೆಯುತ್ತೇನೆ. ಬಡ ವಿದ್ಯಾರ್ಥಿಯಾಗಿದ್ದ ಅವರಿಗೆ ಒಂದು ಪುಸ್ತಕ ಬೇಕಿತ್ತು. ಅದನ್ನು ಪಡೆಯಲು ಅಂಜುತ್ತಾ ಅವರು ಪ್ರೊ.ಹಿರಿಯಣ್ಣನವರ ಮನೆಗೆ ಹೋಗಿದ್ದರು. ಈ ವಿದ್ಯಾರ್ಥಿಯ ಕಷ್ಟಗಳನ್ನೆಲ್ಲ ಕೇಳಿಸಿಕೊಂಡ ಹಿರಿಯಣ್ಣನವರು ಪುಸ್ತಕವನ್ನು ಕೊಟ್ಟರು. ಶಂಕರನಾರಾಯಣ ರಾಯರು ಮನೆಗೆ ಬಂದು ಪುಸ್ತಕವನ್ನು ತೆರೆದಾಗ ಅದರೊಳಗೆ ಕೆಲವು ರೂಪಾಯಿಗಳ ನೋಟುಗಳಿದ್ದವು. (ಹಣ ಎಷ್ಟಿತ್ತೆಂದು ಅವರು ಹೇಳಿರಬೇಕು, ನಾನು ಮರೆತಿದ್ದೇನು)  ಮರೆತು ಪುಸ್ತಕದೊಳಗೆ ಇಟ್ಟ ಹಣವಿರಬಹುದೆಂದು ಶಂಕರನಾರಾಯಣರು ಹಿರಿಯಣ್ಣನವರ ಮನೆಗೆ ಹೋದರು. ಪ್ರೊ.ಹಿರಿಯಣ್ಣನವರು ನಸುನಕ್ಕು `ನಾನೇ ನಿಮಗಾಗಿ ಅದನ್ನು ಇಟ್ಟದ್ದು’ ಎಂದರು.
ನಾವು ಓದುವ ಸಮಯದಲ್ಲಿ ಹಿರಿಯಣ್ಣನವರು ಬದುಕಿರಲಿಲ್ಲ. ಪ್ರಖ್ಯಾತ ಬಿ.ಎಂ.ಶ್ರೀಯವರು ಕೂಡಾ ಇರಲಿಲ್ಲ. ಎ.ಆರ್‌.ಕೃಷ್ಣಶಾಸ್ತ್ರಿಯವರು ನಿವೃತ್ತರಾಗಿದ್ದರು. ಆದರೆ ಅವರೆಲ್ಲರೂ ಮಹಾರಾಜಾ ಕಾಲೇಜಿನ ಒಂದು ಅಂಶವೆಂಬಂತೆ ನಮ್ಮೊಡನಿದ್ದರು.
ನಾನು ಮಹಾರಾಜಾ ಕಾಲೇಜಿನಲ್ಲಿ ಓದುವಾಗ ಆ ಕಾಲೇಜಿನ ಪ್ರಸಿದ್ಧ  ವಾಗ್ಮಿಯೆಂದರೆ ಫಿಲಾಸಫಿ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದ ಪುರುಷೋತ್ತಮ್‌. ಅವರ ಇಂಗ್ಲಿಷ್‌ ಭಾಷಣವನ್ನು ಕೇಳಲು ನಾವೆಲ್ಲಾ ಕಿಕ್ಕಿರಿಯುತ್ತಿದ್ದೆವು. ಆ ಸಮಯದಲ್ಲಿಯೇ ಇಂಗ್ಲೆಂಡಿನಿಂದ ಓದಿ ಬಂದ ಪ್ರೊ.ಎಲ್‌.ಶ್ರೀಕಂಠಯ್ಯ ರಾಜ್ಯಶಾಸ್ತ್ರದ ಅಧ್ಯಾಪಕರಾದರು. ಕಾನೂನು ಪದವಿ ಪಡೆದಿದ್ದ ಇವರು ಬಹುಬೇಗ ಕಾಲೇಜಿನ ನೌಕರಿ ಬಿಟ್ಟರು. ಶ್ರೀಕಂಠಯ್ಯನವರು ಅಪ್ಪಟ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಬೆಂಬಲಿಗ. ಅವರೊಮ್ಮೆ ಪುರುಷೋತ್ತಮ್‌ ಅವರ ಆದರ್ಶವಾದಿ ಚಿಂತನೆಗೆ  ವಿರುದ್ಧವಾಗಿ ತಮ್ಮ ವಾಸ್ತವವಾದಿ ಮಾರ್ಕ್ಸಿಸ್ಟ್‌ ವಿಚಾರಗಳನ್ನು ಮಂಡಿಸಿದ್ದು ನನ್ನ ಮೇಲೆ ಗಾಢವಾದ ಪರಿಣಾಮವನ್ನು ಉಂಟುಮಾಡಿತು. ಕೆಲಸವನ್ನು ಬಿಟ್ಟ ಮೇಲೆ ಶ್ರೀಕಂಠಯ್ಯನವರು ಒಮ್ಮೆ ಎಮ್‌.ಎಲ್‌.ಎ.ಕೂಡಾ ಆದರು. ಆದರೆ ಕುಟಿಲ ರಾಜಕಾರಣ ಮಾಡಲಾರದ ಅವರು ಚಿಂತನಶೀಲರಾಗಿಯೇ ಬಹಳ ಕಾಲದವರೆಗೆ ನಮ್ಮೊಡನೆ ಬೆರೆಯುತ್ತಿದ್ದರು.
ಇಂಗ್ಲಿಷ್‌ ವಿದ್ಯಾರ್ಥಿಯಾಗಿದ್ದ ನನ್ನ ಮೇಲೆ ತುಂಬಾ ಗಾಢವಾಗಿ ಪರಿಣಾಮ ಬೀರಿದವರು ಕೇಂಬ್ರಿಡ್ಜ್‌ನಲ್ಲಿ ಎಫ್‌.ಆರ್‌.ಲೀವಿಸ್‌ನ ವಿದ್ಯಾರ್ಥಿಯಾಗಿ ಓದಿ ಆಗತಾನೇ ಮರಳಿದ್ದ ಸಿ.ಡಿ. ನರಸಿಂಹಯ್ಯನವರು. ಇವರು ಪಾಠ ಮಾಡುತ್ತಿದ್ದ ಕ್ರಮವೇ ಬೇರೆ. ನಾವು ಇದ್ದುದೇ ಏಳೆಂಟು ಮಂದಿ ವಿದ್ಯಾರ್ಥಿಗಳು. ಅವರ ಸಣ್ಣ ಕೋಣೆಯಲ್ಲಿಯೇ ನಾವು ಪಾಠಕ್ಕೆ ಸೇರುತ್ತಿದ್ದುದು. ಪಾಠವೆಂದರೆ ಲೆಕ್ಚರ್‌ ಅಲ್ಲ, ಸತತವಾದ ಚರ್ಚೆ. ಯಾರು ಏನನ್ನಾದರೂ ಕ್ಲಾಸ್‌ನಲ್ಲಿ ಹೇಳಬಹುದಿತ್ತು. ಒಂದು ಗಂಟೆ ಕಳೆದದ್ದೇ ನಮಗೆ ಗೊತ್ತಾಗುತ್ತಿರಲಿಲ್ಲ. ಗಂಭೀರವಾದ ಚರ್ಚೆಯಲ್ಲಿ ತಮಾಷೆಗೂ ಅವಕಾಶವಿರುತ್ತಿತ್ತು.
ನನ್ನ ಸಹಪಾಠಿ ಡಾ.ರತ್ನ ಬಹು ಹಾಸ್ಯ ಪ್ರಿಯರು. ಈಗ ನಾವು ಡಿಕನಸ್ಟ್ರಕ್ಷನ್‌ (Deconstruction) ಎನ್ನುವುದನ್ನು ಆಗಲೇ ಆತ ಮಾಡುತ್ತಿದ್ದ. ಹಾಪ್‌ಕಿನ್ಸ್‌ ಎಂಬ ಕಠಿಣವಾದ ಇಂಗ್ಲಿಷ್‌ ಕವಿ ಒಂದು ಮಾತು ಹೇಳುತ್ತಾನೆ:`ನಾನು ಅರ್ಥವಾಗಬೇಕಾದರೆ read it with your ear’ ಎಂದು. ಪ್ರೊ.ಸಿ.ಡಿ.ಎನ್‌ ಇದನ್ನು ನಮಗೆ ತಮ್ಮ ತೀವ್ರವಾದ ಉತ್ಕಟತೆಯಲ್ಲಿ ಹೇಳಿದಾಗ ರತ್ನ ಹಾಪ್‌ಕಿನ್ಸ್‌ ಪದ್ಯವನ್ನು ತನ್ನ ಕಿವಿಗೆ ಹಿಡಿದು ಕೂತು, `ಅರ್ಥವಾಗಲಿಲ್ಲ’ ಎಂದು ತಲೆಯಾಡಿಸಿ ಎಲ್ಲರನ್ನೂ ನಗಿಸಿದ್ದ.
ಸಾಹಿತ್ಯದ ಅರ್ಥ ನಮ್ಮಲ್ಲೇ ಉತ್ಪತ್ತಿಯಾಗುವಂತೆ ಸಿ.ಡಿ.ಎನ್‌ ಪಾಠ  ಮಾಡುವುದಾದರೆ ಅವರಿಗೂ ಹಿರಿಯರಾದ ಪ್ರೊ.ರಂಗಣ್ಣನವರು ಅರಿಸ್ಟಾಟಲ್‌ನಿಂದ ಈತನಕ ಬಂದ ಘನ ವಿದ್ವಾಂಸರನ್ನು ಕುರಿತು ಅಚ್ಚುಕಟ್ಟಾಗಿ, ನಾವು ಕಿವಿಗೊಟ್ಟು ಕೇಳುವಂತೆ, ನಿಧಾನವಾಗಿ ತಾವು ಮಾಡಿಕೊಂಡು ಬಂದ ನೋಟ್ಸನ್ನು ನೋಡುತ್ತಾ ಮೆಲು ದನಿಯಲ್ಲಿ ಮಾತನಾಡುತ್ತಿದ್ದರು. ನಾನು ಇವರಿಂದಲೂ ಬಹಳ ಕಲಿತೆ. ನಮ್ಮದೇ ಆದ ಅಭಿಪ್ರಾಯಗಳನ್ನು ಹೇಳುವುದನ್ನು ರಂಗಣ್ಣನವರು ಸ್ವ ಪ್ರತಿಷ್ಠೆ ಅಂದುಕೊಳ್ಳುತ್ತಾರೆ ಎನ್ನುವ ಕತೆ ಇತ್ತು. ಆದರೆ ಇದು ನನ್ನಮಟ್ಟಿಗೆ ನಿಜವಲ್ಲ. ನಾನು ಆನರ್ಸ್‌ ಮುಗಿಸಿದಾಗ ಇವರು ನನಗೆ ಕೊಟ್ಟ ಸರ್ಟಿಫಿಕೇಟ್‌  ಆಶ್ಚರ್ಯ ಚಕಿತನನ್ನಾಗಿ ಮಾಡಿತ್ತು.`ಇವನು ಅತ್ಯಂತ ಕಷ್ಟದಲ್ಲಿ ಓದಿಕೊಂಡು ಬೆಳೆದ. ಆದರೆ ಇವನಲ್ಲಿದ್ದ `ಒರಿಜಿನಲ್‌ ಥಿಂಕಿಂಗ್‌’ ನನಗೆ ಬಹಳ ಮೆಚ್ಚುಗೆಯಾಗಿದೆ.
ಈ ಇಬ್ಬರು ಪ್ರೊಫೆಸರ್‌ಗಳೂ ನಮ್ಮನ್ನು ವರ್ಷಕ್ಕೊಮ್ಮೆಯಾದರೂ ಮನೆಗೆ ಕರೆದು, ಊಟ ಹಾಕಿ ಪ್ರೀತಿಯಿಂದ ಉಪಚರಿಸುತ್ತಿದ್ದರು. ಪ್ರೊ.ರಂಗಣ್ಣನವರು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದುದಲ್ಲದೇ, ಸರಸ್ವತಿಯ ಪೂಜೆಯನ್ನೂ ಮಾಡಿ ತಮ್ಮ ಮೆಲುದನಿಯಲ್ಲಿ ಒಂದು ಗಂಟೆ ಭರ್ಜರಿ ಉಪದೇಶಾತ್ಮಕ ಭಾಷಣವನ್ನು ಕೊಡುತ್ತಿದ್ದರು. ಇವನ್ನೆಲ್ಲ ನಾವು ಸರಸ್ವತಿಯ ಮೇಲಿನ ಭಕ್ತಿಯಿಂದಲೂ ರುಚಿಕರವಾದ ಊಟ ಸಿಕ್ಕಿದ ಸಮಾಧಾನದಿಂದಲೂ ಕೇಳಿಸಿಕೊಳ್ಳುತ್ತಿದ್ದೆವು. ಆದರೆ ಆಧುನಿಕರಾದ ಸಿ.ಡಿ.ಎನ್‌ರ ಆದರಾತಿಥ್ಯದಲ್ಲಿ ನಾವು ಹಾಡಬಹುದಿತ್ತು; ಸ್ವಲ್ಪ ಅತ್ತ ಹೋಗಿ ಸಿಗರೇಟನ್ನೂ ಸೇದಬಹುದಿತ್ತು.
ಆ ದಿನಗಳಲ್ಲಿ ನನ್ನ ಪರಮಾಪ್ತ ಗೆಳೆಯನೆಂದರೆ ಕೆ.ವಿ.ಸುಬ್ಬಣ್ಣ. ಅಡಿಕೆ ಬೆಳೆಗಾರರ ಶ್ರೀಮಂತ ಕುಟುಂಬದಿಂದ ಬಂದ ಸುಬ್ಬಣ್ಣ ಮಹಾರಾಜಾ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ. ನನ್ನ ಸೋದರಮಾವನ ಜೊತೆ ಕೋಣೆಯಲ್ಲಿಯೇ ಅನ್ನ ಮಾಡಿ ಹೊಟೇಲಿನಿಂದ ಸಾಂಬಾರನ್ನು, ಮೊಸರನ್ನು ತಂದು ಊಟ ಮಾಡುತ್ತಿದ್ದ ನಾನು, ಅದರಿಂದ ಬೇಸತ್ತು ಕೆಲವು ದಿನ ಸುತ್ತೂರು ಹಾಸ್ಟೆಲ್‌ನಲ್ಲೂ, ಬಹಳ ಕಾಲ ಗಾಂಧಿವಾದಿ ಸುಬ್ಬಣ್ಣನವರು ನಡೆಸುತ್ತಿದ್ದ ಸಾರ್ವಜನಿಕ ಹಾಸ್ಟೆಲ್‌ನಲ್ಲೂ ಬಿಟ್ಟಿಯಾಗಿ ಊಟವನ್ನು ಮಾಡಿಕೊಂಡು ಖುಷಿಯಾಗಿ ಬೆಳೆದೆ. ನನ್ನಪ್ಪ ಕಳಿಸುತ್ತಿದ್ದ ಇಪ್ಪತ್ತು ರೂಪಾಯಿಗಳನ್ನು ಒಂದು ವಾರದಲ್ಲಿಯೇ ಬಿಯರ್‌ ಕುಡಿದೋ, ಸಿಗರೇಟ್‌ ಸೇದಿಯೋ, ಮಹಾರಾಜಾ ಕಾಲೇಜಿನ ಅಯ್ಯರ್‌ ಎಂಬೊಬ್ಬ ಧಾರಾಳಿ ನಡೆಸುತ್ತಿದ್ದ  ಕ್ಯಾಂಟೀನ್‌ನಲ್ಲಿ ಮಸಾಲೆ ದೋಸೆ ತಿಂದೋ ಖರ್ಚು ಮಾಡಿರುತ್ತಿದ್ದೆ.
ಊಟ ತಿಂಡಿಗೆ ಮಾತ್ರವಲ್ಲ; ಜ್ಞಾನಕ್ಕೆ ಸ್ವತಃ ಹಸಿದಿರುತ್ತಿದ್ದ ಕಾಲ ಅದು. ಈ ಹಸಿವನ್ನು ತಣಿಸಲು ಕೈಯಲ್ಲಿ ಕೊಂಚ ಹಣವಿದ್ದ ಸುಬ್ಬಣ್ಣನಂತಹ ಸ್ನೇಹಿತರಿದ್ದರು. ಸುಬ್ಬಣ್ಣನ ಜೊತೆ ಮೈಸೂರಿಗೆ ಬರುತ್ತಿದ್ದ ಎಲ್ಲ ನಾಟಕಗಳನ್ನೂ, ಸಿನೆಮಾಗಳನ್ನೂ ನೋಡಿದ್ದೇನೆ.  ನಾವಿಬ್ಬರೂ ಪ್ರತೀ ಭಾನುವಾರ ಮಹಾರಾಜಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಿಹಿಯೂಟ ಮಾಡಿದ್ದೇವೆ. ಕ್ಲಾಸ್‌ಗಳನ್ನು ತಪ್ಪಿಸಿಕೊಂಡು ಸುಬ್ಬಣ್ಣ, ರತ್ನ, ವಿಶ್ವನಾಥ ಮಿರ್ಲೆ ,ರಾಘವನ್‌, ಕೆ. ಸದಾಶಿವ ಇವರ ಜೊತೆ ಗಂಟೆಗಟ್ಟಲೆ ಕುಳಿತು ವರ್ಡ್ಸ್‌ವರ್ತ್‌, ಶೆಲ್ಲಿ, ಕುವೆಂಪು, ಕಾರಂತ, ಬೇಂದ್ರೆ, ಅಡಿಗರನ್ನು ಚರ್ಚಿಸಿದ್ದೇವೆ. ಆ ದಿನಗಳಲ್ಲಿ ಎಚ್‌.ಎಸ್‌.ಬಿಳಿಗಿರಿ ನಮಗೆಲ್ಲರಿಗೂ ಎಂ.ಎನ್‌.ರಾಯ್‌ರನ್ನು ಮತ್ತು ಅಮೆರಿಕದ ಖ್ಯಾತ ನಿರೀಶ್ವರವಾದಿ ಇಂಗರ್‌ಸಾಲ್‌ರನ್ನು ಓದಿಸಿದ್ದ.
ನಾನು ಎಷ್ಟರಮಟ್ಟಿಗೆ ನನ್ನ ಓದಿನಲ್ಲಿಯೇ ಮಗ್ನನಾಗಿದ್ದೆನೆಂದರೆ ನನಗಿಷ್ಟವಿಲ್ಲದ ಕ್ಲಾಸ್‌ಗೆ ಹೋಗುತ್ತಲೇ ಇರಲಿಲ್ಲ. ಹೀಗಾಗಿ ಎರಡನೇ ವರ್ಷದ ಆನರ್ಸ್‌ನಲ್ಲಿ ನನ್ನ ದ್ವಿತೀಯ ಭಾಷೆಯಾಗಿದ್ದ ಸಂಸ್ಕತದಲ್ಲಿ  ಅಗತ್ಯವಾಗಿದ್ದ ಅಟೆಂಡೆನ್ಸ್‌  ಸಿಗದೇ ಹೋಯಿತು. `ನೀನು ಪರೀಕ್ಷೆಗೆ ಕೂರುವಂತಿಲ್ಲ’ ಎಂಬ ಆದೇಶ ಬಂದದ್ದೇ-ನನ್ನ ಎಂದಿನ ಸಮಾಜವಾದೀ ಆಂದೋಲನದ ಹುರುಪಿನಲ್ಲಿ ಸೀದಾ ಆಗಿನ ವೈಸ್‌ ಛಾನ್ಸಲರ್‌ ಆಗಿದ್ದ ಮಂಜುನಾಥರ ಮನೆಗೆ ಹೋದೆ. `ನನಗೆ ಪರೀಕ್ಷೆಗೆ ಕೂಡಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯ ಮಾಡಿದೆ. ಕುಲಪತಿ ಮಂಜುನಾಥರು ನಕ್ಕು `ನೀನೇ ಒಬ್ಬ ಗುಮಾಸ್ತನಿಗೆ ಒಂದಿಷ್ಟು ಹಣ ಕೊಟ್ಟಿದ್ದರೆ ಅವನು ಅದನ್ನು ಸರಿಪಡಿಸುತ್ತಿದ್ದ. ಆದರೆ ಈಗ ನೀನು ಬಂದು ನನ್ನ ಬಳಿ ಹೇಳಿದ್ದರಿಂದ ಏನೂ ಮಾಡುವಂತಿಲ್ಲ. ಕಾನೂನು ಹೇಗಿದೆಯೋ ಹಾಗಾಗುತ್ತದೆ’ ಎಂದರು. ನಾನು ಕೋರ್ಟ್‌ನಿಂದ  ಸ್ಟೇ ತರುವುದಾಗಿ ಪ್ರಿನ್ಸಿಪಾಲರಿಗೆ ಹೇಳಿದೆ. ಆಗ ಪ್ರಿನ್ಸಿಪಾಲರು ಪ್ರೊ.ರಂಗಣ್ಣನವರಾದ್ದರಿಂದ ನಾನು ಪರೀಕ್ಷೆಗೆ ಕೂರಲು ಅವಕಾಶ ಮಾಡಿಕೊಟ್ಟು ಸಿಂಡಿಕೇಟಿಗೆ ಅದನ್ನು ತಿಳಿಸಿದರು. ಪರೀಕ್ಷೆಯೂ ಆಯಿತು. ನಾನು ಪಾಸಾದೆನೆಂಬುದು ಗೊತ್ತಾಯಿತು. ನಂತರ ಸಭೆ ಸೇರಿದ ಸಿಂಡಿಕೇಟು ನಾನು ತೆಗೆದುಕೊಂಡ ಪರೀಕ್ಷೆ ಮತ್ತು ಅದರಿಂದ ಬಂದ ರಿಸಲ್ಟ್‌ ಎರಡೂ `void ab initio’  ಅಂದರೆ `ಆಗಿದ್ದೂ ಆದಂತಲ್ಲ’ ಎಂಬ ತೀರ್ಮಾನ ಕೊಟ್ಟಿತು.
ನಾನು ಇನ್ನೊಂದು ವರ್ಷ ಅದೇ ಕ್ಲಾಸ್‌ನಲ್ಲಿ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿದ್ದು ಓದಿದೆ. ಹೀಗಾದ್ದರಿಂದಲೇ ನನಗೆ ರತ್ನ, ವಿಶ್ವನಾಥ ಮಿರ್ಲೆ, ಮೊನ್ನೆ ತಾನೇ ಗತಿಸಿದ ಡಿ.ಕೆ.ಸೀತಾರಾಮ ಶಾಸ್ತ್ರಿ  ಮತ್ತು  ಪದ್ಮಾ ರಾಮಚಂದ್ರ ಶರ್ಮ ಮುಂತಾದವರು ಸಹಪಾಠಿಗಳಾದದ್ದು. ಕೆ.ವಿ.ಸುಬ್ಬಣ್ಣ ನನಗಿಂತ ಮೊದಲೇ ಆನರ್ಸ್‌ನ್ನು ಮುಗಿಸುವಂತಾದದ್ದು. ಎರಡು ವರ್ಷದ ಇಂಟರ್‌ ಮೀಡಿಯಟ್‌ ನನಗೆ ಮೂರು ವರ್ಷವಾಯಿತು, ಮೂರು ವರ್ಷದ ಆನರ್ಸ್‌ ನಾಲ್ಕು ವರ್ಷವಾುತು. ಇದರಿಂದ ನಷ್ಟವಾದಂತೆ ನನಗೆ ಈಗ ತೋರುವುದಿಲ್ಲ. ಹೆಚ್ಚು ಜನ ಗೆಳೆಯರಾದರು. ಹೆಚ್ಚು ಓದುವಂತಾಯಿತು. ಆಗ ಸಮಾಜವಾದಿ ಚಟುವಟಿಕೆಯಲ್ಲಿ ಚುರುಕಾಗಿದ್ದ ಟಿ.ವಿ.ಶ್ರೀನಿವಾಸ ರಾವ್‌ (ಕನ್ನಡ ಮಾಧ್ಯಮ ಚಳವಳಿಯನ್ನು ಪ್ರಾರಂಭಿಸಿದವರು ಇವರೇ) ಮುಂತಾದವರ ಜೊತೆ ನನಗೆ ಬೇಕಾಗಿದ್ದನ್ನು ಆರಾಮದಲ್ಲಿ ಓದುವಂತಾಯಿತು.
ಮಹಾರಾಜಾ ಕಾಲೇಜಿನಲ್ಲಿ ಆ ದಿನಗಳಲ್ಲಿಯೂ ವಿದ್ಯಾರ್ಥಿ ಆಂದೋಳನಗಳಿದ್ದವು. ಒಂದು ಘಟನೆ ನೆನಪಾಗುತ್ತದೆ. ಕ್ಯಾಂಟೀನನ್ನು ಬೇರೆ ಯಾರಿಗಾದರೂ ವಹಿಸಿಕೊಡಬೇಕೆಂದು ನಮಗೆಲ್ಲರಿಗೂ ಎಷ್ಟೆಂದರೆ ಅಷ್ಟು ಸಾಲದ ಲೆಕ್ಕ ಬರೆಯಲು ಅವಕಾಶ ಮಾಡಿಕೊಟ್ಟ ಅಯ್ಯರ್‌ ವಿರುದ್ಧ ವಿದ್ಯಾರ್ಥಿಗಳ ಗುಂಪೊಂದು ಸತ್ಯಾಗ್ರಹ ನಡೆಸಿತು. ಈ ವಿದ್ಯಾರ್ಥಿಗಳ ಗುಂಪಿಗೆ ಆ ಕ್ಯಾಂಟೀನನ್ನು ನಡೆಸಲು ಬಯಸುತ್ತಿದ್ದ ರಾಜಕಾರಣಿಗಳೊಂದಿಗೆ ಸಂಬಂಧವಿತ್ತು. ಆಗ ಮನೋವಿಜ್ಞಾನಿ ಗೋಪಾಲಸ್ವಾಮಿಯವರು ಪ್ರಿನ್ಸಿಪಾಲರಾಗಿದ್ದರು. ಇವರು ವಿದ್ಯಾರ್ಥಿ ನಾಯಕರನ್ನು ತಮ್ಮ ಛೇಂಬರಿಗೆ ಕರೆಸಿ, ಅವರ ದೂರನ್ನು ಕೇಳಿದರು.`ಅಯ್ಯರ್‌ ಕೊಡುವ ಕಾಫಿ ಏನೇನೂ ರುಚಿಯಾಗಿರುವುದಿಲ್ಲ’ ಎನ್ನುವುದು ವಿದ್ಯಾರ್ಥಿಗಳ ದೂರು. ಜೊತೆಗೆ ಪಕ್ಕದ ಯುವರಾಜಾ ಕಾಲೇಜಿನಲ್ಲಿ ಇದ್ದ ಕಾಸ್ಮೊಪೊಲಿಟನ್‌ ಕ್ಲಬ್‌ನ ಕ್ಯಾಂಟೀನು ಇದಕ್ಕಿಂತ ಉತ್ತಮ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. ಪ್ರಿನ್ಸಿಪಾಲರು ಎರಡು ಕ್ಯಾಂಟೀನುಗಳಿಂದಲೂ ಎರಡು ದೊಡ್ಡ ಫ್ಲಾಸ್ಕ್‌ ಗಳಲ್ಲಿ ಕಾಫಿಯನ್ನು ತರಿಸಿ ಫ್ಲಾಸ್ಕ್‌ನ ಮೇಲೆ ಯಾವ ಕ್ಯಾಂಟೀನ್‌ನದೆಂದು ಗುಪ್ತವಾಗಿ ಗುರುತು ಮಾಡಿ, ಮೊದಲು ಒಂದು ಫ್ಲಾಸ್ಕ್‌ನಲ್ಲಿದ್ದ ಕಾಫಿಯನ್ನು ಎಲ್ಲರಿಗೂ ಕುಡಿಸಿ, ಆಮೇಲೆ ಇನ್ನೊಂದು ಫ್ಲಾಸ್ಕ್‌ನಲ್ಲಿದ್ದ ಕಾಫಿಯನ್ನೂ ಕುಡಿಸಿದರು. ನಂತರ ‘ಈ ಎರಡು ಕಾಫಿಗಳಲ್ಲಿ ಯಾವುದು ಉತ್ತಮ?’ ಎಂದು ಕೇಳಿದರು. ಎಲ್ಲರೂ ಉತ್ತಮ ಎಂದು ಹೇಳಿದ ಕಾಫಿ ಅಯ್ಯರ್‌ ಕ್ಯಾಂಟೀನ್‌ನದಾಗಿತ್ತು.
ಮಹಾರಾಜಾ ಕಾಲೇಜಿನ ದಿನಗಳಲ್ಲಿ ನನಗೆ ಬಹಳ ಪ್ರಿಯರಾದವರಲ್ಲಿ ಒಬ್ಬರೆಂದರೆ ಜಿ.ಎಚ್‌.ನಾಯಕರು. ನಾವಿಬ್ಬರೂ ಒಟ್ಟಿಗೆ ಸಾರ್ವಜನಿಕ ಹಾಸ್ಟೆಲ್‌ನಲ್ಲಿ ಊಟ ಮಾಡಿಕೊಂಡಿದ್ದೆವು. ಅವರು ಕನ್ನಡದ ವಿದ್ಯಾರ್ಥಿ. ನಾವು ಒಟ್ಟಿಗೆ ಚಾಮುಂಡಿಪುರಂನಲ್ಲಿರುವ ಮನೆಯಿಂದ ಮಹಾರಾಜಾ ಕಾಲೇಜಿಗೆ ನಡೆದುಕೊಂಡು ಬರುವುದು. ಬರುವಾಗ ದಾರಿಯಲ್ಲಿ ಗಂಟೆಗಟ್ಟಲೆ ನಾನಾಡುವ ಮಾತುಗಳಿಗೆ ಪ್ರತಿಕ್ರಿಯಿಸಿ ನನ್ನನ್ನು ಬೆಳೆಸಿದವರು ಜಿ.ಎಚ್‌.ನಾಯಕರು. ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಕೆ.ವಿ.ಸುಬ್ಬಣ್ಣನಂತೆಯೇ ಇವರೂ ನನಗೆ ಬಹು ಆಪ್ತರಾದವರು.
ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲದೇ ಬುದ್ಧಿವಂತರೂ ಸೂಕ್ಷಜ್ಞರೂ ಕಲಾವಿದರೂ ಆದ ವಿದ್ಯಾರ್ಥಿನಿಯರೂ ಇದ್ದರು. ಆ ದಿನಗಳಲ್ಲಿ `ಮಿತ್ರ ಮೇಳ’ ಎಂಬ ನಾಟಕತಂಡ ಹುಟ್ಟಿಕೊಂಡಿತು. ಸುಬ್ಬಣ್ಣ, ರತ್ನ, ಸಿಂಧುವಳ್ಳಿ ಹೀಗೆ ಹಲವರು ಬೆಳಕಿಗೆ ಬಂದದ್ದು ಮತ್ತು ಅರಳಿದ್ದು ಮಿತ್ರಮೇಳದಲ್ಲಿ. ಯುವಕರೂ ಚೆಲುವರೂ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿದ್ದ ಸಿ.ಡಿ.ಎನ್‌ ಮಿತ್ರಮೇಳದ ಅಧ್ಯಕ್ಷರು. ಈ ಮಿತ್ರ ಮೇಳದಲ್ಲಿ ಹುಡುಗರೂ ಹುಡುಗಿಯರೂ ಬೆರೆಯುವುದನ್ನು ಸಹಿಸಲಾರದ ಕೆಲವು ಕೇಡಿಗರು ಏನೇನೋ ಲೈಂಗಿಕ ಆಪಾದನೆಗಳನ್ನು ಹುಟ್ಟಹಾಕಿ, ಈ ಮಿತ್ರ ಮೇಳದ ನಾಶಕ್ಕೆ ಕಾರಣರಾದರು. ನಮ್ಮದೇಶದ ಮುಖ್ಯ ಪತ್ರಿಕೆಯೊಂದು ಇದಕ್ಕೆ ಅವಕಾಶ ಮಾಡಿಕೊಟ್ಟಿತೆಂಬುದು ನಮಗೆಲ್ಲರಿಗೂ ತುಂಬಾ ಬೇಸರದ ಸಂಗತಿಯಾಗಿತ್ತು. ಮಿತ್ರ ಮೇಳದಲ್ಲಿ ಮುಖ್ಯರಾಗಿದ್ದವರೇ ಮುಂದೆ `ಸಮತೆಂತೋ’ ಎನ್ನುವ ರಂಗ ಸಂಸ್ಥೆಯನ್ನು ಕಟ್ಟಿದರು. ಇದರ ಅಧ್ವರ್ಯು ನನ್ನ ಎಂದೆಂದೂ ಮುಗಿಯದ ಕಥಾ ಸಂಕಲನವನ್ನು ಮೊದಲು ಪ್ರಕಟಿಸಿದವರು. ಅವರೂ ನನ್ನ ಹೆಸರಿನವರೇ. ನಾವಿಬ್ಬರೂ ಬೇರೆ ಬೇರೆ ಎಂಬುದನ್ನು ಎಲ್ಲರಿಗೂ ತಿಳಿಯುವಂತೆ ಅವರ ಹೆಸರು ಸಿಂಧುವಳ್ಳಿ ಅನಂತಮೂರ್ತಿ ಎಂದಿದ್ದರೂ ನಾವು ಕರೆಯುವುದು ಸಿಂಧುವಳ್ಳಿ ಎಂದು.
ಆಗ ಒಂದು ಜೋಕ್‌ ಇತ್ತು. ಯಾರಾದರೂ ಅವನನ್ನು  `you(U.) are(R.) Ananthamurthy? ಎಂದರೆ ಅವನು ಸುಳ್ಳು ಹೇಳುತ್ತಿರಲಿಲ್ಲ. ಯಾಕೆಂದರೆ yes(S.) Ananthamurthy ಎಂದು ಬಿಡುತ್ತಿದ್ದ. ಅವನು ಸಾಯುವ ತನಕವೂ ಎಷ್ಟು ವರ್ಷಗಳ ನಂತರ ಅವನನ್ನು ಭೇಟಿಯಾದಾಗಲೂ ಈ ಜೋಕನ್ನು ನೆನೆದು ನಾವು ನಗುತ್ತಿದ್ದೆವು.
ನಾನು ಬರೆಯಲು ಪ್ರಾರಂಭ ಮಾಡಿದ್ದು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಪ್ರೊ.ಸಿ.ಡಿ.ಎನ್‌ ತರಗತಿಯಲ್ಲಿ ಎಲಿಯೆಟ್‌ ಪಾಠ ಮಾಡಿದರೆ ಸಂಜೆ ಕಾಫಿ ಹೌಸ್‌ನಲ್ಲಿ ನಾವು ಅಡಿಗರ ಜೊತೆ ಕೂತು ಹೊಸ ಕಾವ್ಯವನ್ನು ಚರ್ಚೆ ಮಾಡುತ್ತಿದ್ದೆವು. ಹೀಗಾಗಿ ಹೊಸ ಕಾವ್ಯದ ಕ್ರಾಂತಿ ಲಂಡನ್‌ನಲ್ಲಿ ಮಾತ್ರ ಆದದ್ದು ಅಲ್ಲ, ನಮ್ಮ ಮೈಸೂರಿನಲ್ಲಿಯೂ ಅದು ಆಯಿತು. ಸಂತ ಫಿಲೋಮಿನಾ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದ ಅಡಿಗರು ಎಲಿಯೆಟ್‌ನಂತೆ ನಮಗೆ ಮುಖ್ಯರೆನಿಸಿದರು. ರಾಮಚಂದ್ರ ಶರ್ಮರೂ ಆಗೀಗ ಬಂದು ಹೋಗುತ್ತಿದ್ದರು. (ಮುಂದೆ ಅವರು ಮದುವೆಯಾದ ಪದ್ಮಾ ನನ್ನ ಸಹಪಾಠಿಯಾಗಿದ್ದರು) ನನ್ನ ಆಗಿನ ವಯಸ್ಸಿಗೂ, ಸದ್ಯದ ಅನುಭವಕ್ಕೂ ಹತ್ತಿರವಾದವರು ರಾಮಚಂದ್ರಶರ್ಮರಾದರೆ, ನನ್ನ ಆತ್ಮವನ್ನು ಕ್ರಮೇಣ ಆಳವಾಗಿ ಮುಟ್ಟಿದ್ದು ಅಡಿಗರ ಹೆಚ್ಚು ಸಂಕೀರ್ಣವಾದ ಪದ್ಯಗಳು. ಮೈಸೂರಿನ ಕಾಫಿಹೌಸ್‌ನಲ್ಲಿ ನಮ್ಮ ಜೊತೆ ಕಥೆಗಾರ ಕೆ. ಸದಾಶಿವ, ಟಿ.ಜಿ.ರಾಘವರೂ ಇರುತ್ತಿದ್ದರು. ಆಗ ನಮಗೆ ಬಹು ಮೆಚ್ಚಿಗೆಯಾಗಿದ್ದ ಕಥೆಗಾರ್ತಿ ರಾಜಲಕ್ಷ್ಮಿ. ಎನ್‌.ರಾವ್‌ ಕೂಡಾ ಪರಿಚಯವಾದರು.
ನಾನು ಮೊದಲು ಬರೆದ ಪುಟ್ಟ ಕತೆಗಳನ್ನು ಪ್ರಕಟಿಸಿದ್ದು ವಿ.ಎಸ್‌.ರಾಘವನ್‌ ಎಂಬ ನನ್ನ ಗೆಳೆಯ ಮಿರ್ಲೆ ವಿಶ್ವನಾಥರ ಸಹಯೋಗದಲ್ಲಿ ನಡೆಸುತ್ತಿದ್ದ `varsity times’ ಎನ್ನುವ ಇಂಗ್ಲಿಷ್‌, ಕನ್ನಡ ಒಳಗೊಂಡ ಪತ್ರಿಕೆಯಲ್ಲಿ. ಕಾಲೇಜಿನಲ್ಲಿ ಓದುವುದು ಬೇರೆಯಲ್ಲ, ನಾವು ಇಷ್ಟ ಪಡುತ್ತಿದ್ದುದು ಬೇರೆಯಲ್ಲ ಎನ್ನಿಸುತ್ತಿದ್ದ ಅಪೂರ್ವ  ಕಾಲ ಅದು. ನಾವು ಬರಿಗಾಲಿನಲ್ಲಿಯೇ ಮೈಸೂರು ಇಡೀ ಓಡಾಡುತ್ತಿದ್ದೆವು. ಅವಸರವಾದರೆ ಬಾಡಿಗೆಗೆ ಸೈಕಲ್‌ ಪಡೆದು ಓಡಾಡುತ್ತಿದ್ದೆವು. ಕೈಯಲ್ಲಿ ದುಡ್ಡು ಇಲ್ಲವಾದರೆ ಹೊಟೇಲ್‌ನಲ್ಲಿ ಲೆಕ್ಕ ಬರೆಸಿ ತಿಂಡಿ ತಿನ್ನುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಕುಳಿತಾಗ ಮನಿ ಆರ್ಡರ್‌ ತರುತ್ತಿದ್ದ ಪೋಸ್ಟ್‌ ಮ್ಯಾನ್‌ ನಮಗೆ ದೇವತೆಯಂತೆ ಕಾಣುತ್ತಿದ್ದ.
ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ನಂತೆಯೇ ನಮ್ಮದೂ ಒಂದು ಮುಖ್ಯ ವಿದ್ಯಾ ಸಂಸ್ಥೆ. ಎಲಿಯಟ್‌, ಮಿಲ್ಟನ್‌ರಂತೆಯೇ ನಮ್ಮ ಕುವೆಂಪು ಮತ್ತು ಅಡಿಗರು. ತೀ.ನಂ.ಶ್ರೀ, ಡಿ.ಎಲ್‌.ಎನ್‌ ಮತ್ತು ಎ.ಆರ್‌,ಕೃಷ್ಣಶಾಸ್ತ್ರಿಗಳು ಜಗತ್ತಿನ ಯಾವ ವಿಮರ್ಶಕರಿಗೂ ಕಡಿಮೆ ಇಲ್ಲ. ನಾವು ಕೂಡಾ ನಮ್ಮ ನಮ್ಮ ಯೋಗ್ಯತೆಯಲ್ಲಿ ಜಾನ್ಞವನ್ನು ಸೃಷ್ಟಿಸುತ್ತಿರುವವರು ಎಂದು ನಮಗೆಲ್ಲ ಅನ್ನಿಸುವಂತೆ ಮಾಡಿದ ಮಹಾರಾಜಾ ಕಾಲೇಜನ್ನು ನಾನು ಯಾವತ್ತೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಅಭಿನವ ಚಾತುರ್ಮಾಸಿಕಕ್ಕಾಗಿ ನ.ರವಿಕುಮಾರ್‌ ಗೆ ಹೇಳಿ ಬರೆಯಿಸಿದ ಲೇಖನ,
.

 


‍ಲೇಖಕರು avadhi

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: