ಮಹಾಮನೆ ಅಂಕಣ – ‘ಸರಳ ಮದುವೆಗೆ’ ಸೋಪಾನ ಹಾಕಿದರು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

13

ಒಲವು ಚಲುವಿನ ಚಪ್ಪರವಷ್ಟೇ ಸಾಕು ಎಂದರು ಕುವೆಂಪು…

ತಮ್ಮ ಮನೆಗೆ ಬಂದ ನಮ್ಮನೆಯವರನ್ನೆಲ್ಲಾ ತುಂಬಾ ಚೆನ್ನಾಗಿ ನೋಡಿಕೊಂಡು… ಬಾಯಿತುಂಬ ಮಾತಾಡಿಸಿ ಉಪಚರಿಸಿದರು. ಅಪ್ಪ ಅಮ್ಮನಿಗೆ ತುಂಬಾನೇ ಖುಷಿಯಾಯಿತು. ಹುಡುಗಿ ಹಾಗೂ ಹುಡುಗಿ ಮನೆಯವರೆಲ್ಲರೂ ಇಷ್ಟವಾದರು… ನನ್ನ ಅಕ್ಕಂದಿರು ಬಾವಂದಿರಿಗೂ ಸಂಬಂಧ ಒಪ್ಪಿಗೆಯಾಯಿತು… ಆ ತಾಯಿ… ಆ ಮನೆಯವರೆಲ್ಲರೂ ನಮ್ಮನ್ನು ಬಾವಣಿಸಿದ ರೀತಿಯಂತೂ ನನಗೂ ಇಷ್ಟವಾಯಿತು… ತಮ್ಮ ಮಗಳನ್ನು ತನ್ನ ಮಗನಿಗೆ ತಂದುಕೊಳ್ಳುತ್ತಿದ್ದಾರೆ… ಆ ಮನೆಗೆ ಮಗಳು ಸೊಸೆಯಾಗಿ ಹೋಗುತ್ತಿದ್ದಾಳೆ ಎಂಬ ಸಹಜ ಸಂತೋಷದಿಂದ ನಮ್ಮ ಮನೆಯವರೆಲ್ಲರ ಬಗ್ಗೆ ಮತ್ತಷ್ಟು ಮುತುವರ್ಜಿ ವಹಿಸಿದರು.

ನನ್ನ ಅಕ್ಕಂದಿರಂತೂ ಆ ಮನೆಯ ಹೆಣ್ಣುಮಕ್ಕಳ ಜೊತೆಗೆ ಬೆರತೋದರು…. ನನ್ನ ಬಾವಂದಿರು ಸಹ ಯಜಮಾನರ ಜೊತೆಗೆ ಹಾಗೂ ನನಗೆ ಬಾವಮೈದ ಆಗುವ ರೇಣುಕಪ್ಪನ ಜೊತೆಗೆ ಅದು ಇದೂ ಮಾತಾಡುತ್ತಾ ಹಳೆಯ ಸಂಬಂಧಗಳು… ಕೊಟ್ಟ ಸಂಬಂಧಗಳು… ತಂದಿರುವ ಸಂಬಂಧಗಳು… ನೆಂಟರು ಇಷ್ಟರು… ಊರು… ಕೇರಿ…. ಕೆಲಸ ಕಾರ್ಯಗಳು… ಹಳ್ಳಿ ಬದುಕು… ನಗರ ಜೀವನ ಮಳೆ-ಬೆಳೆ ಎಲ್ಲಾ ಮಾತಾಡುತ್ತಾ ಸಂಬಂಧದ ಕೊಂಡಿಯನ್ನು ಮತ್ತಷ್ಟು ಬೆಸೆದರು.

ನಡು ನಡು ನಮ್ಮ ಅಪ್ಪಾಜಿಯ ಇಂಗ್ಲಿಷ್ ಮಾತುಗಾರಿಕೆ ನಡೆದೇ ಇತ್ತು… ಎಲ್ಲರೂ ಊಟ ಮಾಡಿ… ಹುಡುಗಿಯ ತಂದೆ-ತಾಯಿಯನ್ನು ಅವರ ಮನೆಯವರನ್ನು ನಮ್ಮ ಮನೆಗೆ ಅಂದರೆ ನಾಗಮಂಗಲಕ್ಕೆ ಆಹ್ವಾನಿಸಿ… ತಮಗೆ ಹುಡುಗಿ ಒಪ್ಪಿಗೆ ಇರುವುದಾಗಿಯೂ… ನಮ್ಮ ಮನೆಗೆ ನಿಮ್ಮ ಹುಡುಗಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಿದ್ದವೆಂದು ಒಪ್ಪಿಗೆ ಸೂಚಿಸಿದರು. ನಾವೆಲ್ಲರೂ ಹೊರಡುವ ಸಮಯದಲ್ಲಿ ಆ ಮೆಳ್ಳಗಣ್ಣಿಯೇ ನನ್ನ ತಾಯಿ ಅಕ್ಕಂದಿರಿಗೆ ಹೂವ ಕುಂಕುಮವಿತ್ತು… ನನ್ನ ತಂದೆ ತಾಯಿಯ ಕಾಲಿಗೆ ನಮಸ್ಕರಿಸಿದಳು.

ಭಾರತೀಯ ಸಮಾಜದಲ್ಲಿ ಇದೊಂದು ಸಂಪ್ರದಾಯ. ಮನೆಗೆ ಬಂದ ಮೈತ್ತೈದೆಯರಿಗೆ ಅರಿಸಿನ-ಕುಂಕುಮ-ಹೂವು ಫಲ ತಾಂಬೂಲ ಕೊಡುವುದು ಒಂದು ಸಂಸ್ಕೃತಿಯೂ ಸಹ… ಹಿರಿಯರಿಂದ ಆಶೀರ್ವಾದ ಪಡೆಯುವುದು… ಬಂದಂತ ಅತಿಥಿಗಳನ್ನು… ನೆಂಟರಿಷ್ಟರನ್ನು ಗೌರವಿಸುವ ಪರಿಯೂ ಸಹ… ಆ ನಂತರ ಆ ಹಿರಿಯರು ಅವರಿಗೆ ಶುಭ ಕಾಮನೆಗಳನ್ನು ಹೇಳಿ ಆಶೀರ್ವದಿಸುವುದು ಇವೆಲ್ಲವೂ ಸಹ ಒಂದು ಸತ್ಸಂಪ್ರದಾಯ… ಆ ಹುಡುಗಿ ನನ್ನಪ್ಪ ಅಮ್ಮನಿಗೆ ಹಾಗೂ ಅಕ್ಕ ಬಾವಂದಿರಿಗೂ ನಮಸ್ಕರಿಸಿದಳು. ಅವರೂ ಸಹ ತುಂಬಾ ಹೃದಯದಿಂದ ತುಂಬು ಮನಸ್ಸಿನಿಂದ ಹರಸಿದರು.

ದೀರ್ಘಸುಮಂಗಲಿಯಾಗು… ನಿಮ್ಮ ದಾಂಪತ್ಯ ಸುಖ-ಸಂತೋಷದಿಂದ ಕೂಡಿರಲಿ. ಇಂತಹ ಆರಕೆಗಳು… ಆಶೀರ್ವಾದಗಳು… ಕೇವಲ ಶುಭ ನುಡಿಗಳಷ್ಟೇ… ಆಶಯಗಳಷ್ಟೇ ಅನ್ನಿಸಿಬಿಡುತ್ತದೆ ಒಮ್ಮೊಮ್ಮೆ… ಯಾರು ಎಷ್ಟೇ ಶುಭ ಕೋರಿದರೂ ಅವೆಲ್ಲ ಸುಳ್ಳುಗಳಾಗಿ ಬಿಡುತ್ತವೆ ಒಮ್ಮೊಮ್ಮೆ… ಆಶಯಗಳೇ ಬೇರೆ… ಆಗುವುದೇ ಬೇರೆ… ಶುಭ ಹಾರೈಕೆಗಳೇ ಬೇರೆ… ಸಂಭವವೇ ಬೇರೆ… ಕಾಲಗರ್ಭದೊಳಗೆ ಏನೇನು ಅಡಗಿರುತ್ತದೆಯೋ ಯಾರೋ ಬಲ್ಲರು ಅದನ್ನು…
ಬದುಕು ಜಟಕಾಬಂಡಿ
ವಿಧಿಯದರ ಸಾಹೇಬ
ಡಿ.ವಿ.ಜಿ.ಯವರ ಈ ಸಾಲುಗಳು ನೆನಪಾಗುತ್ತಿವೆ… ಇರಲಿ ಆ ಕುರಿತು ಈ ಸಂದರ್ಭದಲ್ಲಿ ಹೆಚ್ಚು ಮಾತಾಡುವುದಿಲ್ಲ. ಈ ವಿಷಯವನ್ನು ಹೆಚ್ಚು ಲಂಬಿಸುವ ವೇಳೆಯೂ ಇದಲ್ಲ…

ನಮ್ಮ ಮನೆಯವರು ಆ ಹುಡುಗಿಯ ಮನೆಯವರನ್ನು ನಮ್ಮ ಮನೆಗೆ ಬರುವಂತೆ ಆಹ್ವಾನಿಸಿದರು… ಅವರೂ ಸಹ ನಾಗಮಂಗಲದ ಮನೆಗೆ ಬಂದ್ಹೋದರು… ಮದುವೆಯ ಮಾತೂಕತೆಯು ನಡೆಯಿತು… ಕೊಡುವುದು ತೆಗೆದುಕೊಳ್ಳುವ ಮಾತುಗಳು ಮದುವೆಯ ಸಂದರ್ಭದಲ್ಲಿ ಇದ್ದದ್ದೆ… ಹೆಣ್ಣಿಗೆ ಒಡವೆ ವಸ್ತ್ರಗಳು… ಸೀರೆ ಅದರಲ್ಲೂ ರೇಷ್ಮೆ ಸೀರೆ ಗಂಡಿಗೆ ಬಟ್ಟೆ ರೇಷ್ಮೆಪಂಚೆ, ಶರ್ಟು, ಶಲ್ಯ ವರದಕ್ಷಿಣೆ ಹೀಗೆ.

ಮದುವೆ ಅನ್ನುವುದು ಬಹಳ ಖರ್ಚಿನ ಬಾಬತ್ತು ಕಣ್ರೀ… ಎರಡು ಜೀವಗಳು ಒಂದಾಗಿ ಬದುಕಲು… ಎರಡು ಹೃದಯಗಳು ಬೆರೆತು ಜೀವಿಸಲು… ಮನುಕುಲ ಮಾಡಿಕೊಂಡಿರುವ ಈ ವ್ಯವಸ್ಥೆ ದುಬಾರಿ ಆಗಬಾರದು ಅಲ್ವೆ… ಭಾವನಾತ್ಮಕ ಸಂಬಂಧಗಳ ಜೊತೆಗೆ ಕುಟುಂಬ ಕುಟುಂಬಗಳ ಬೆಸುಗೆಯ ಈ ವ್ಯವಸ್ಥೆ ಈಗೀಗಂತೂ ಒಂದು ಫ್ಯಾಷನ್ ಆಗಿದೆ… ಒಂದು ವ್ಯವಹಾರವಾಗಿದೆ… ಉದ್ಯಮವಾಗಿ ಬೆಳೆದು ನಿಂತಿದೆ… ಉಳ್ಳವರ ಮನೆಯ ಶ್ರೀಮಂತಿಕೆಯ ಪ್ರದರ್ಶನವಾಗಿದೆ… ಇಲ್ಲದವರ ಮನೆಯ ಕೊರಳ ಕಂಟಕವಾಗಿದೆ… ನಗರವಾಸಿಗಳಲ್ಲಂತೂ ಮದುವೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ…. ಸಾಂಪ್ರದಾಯಿಕತೆ ಜಾರಿ ಹೋಗಿ ವೈಭವ-ವಿಜೃಂಭಣೆ ಮುಂದೆ ಬಂದಿದೆ… ರಾಜ ಮಹಾರಾಜರುಗಳ ಮದುವೆಯ ವೈಭವವನ್ನು… ಅರಮನೆಗಳಲ್ಲಿ ನಡೆಯುತ್ತಿದ್ದ ಕಲ್ಯಾಣವನ್ನು ಹಿಂದಿಕ್ಕಿದ್ದಂತೆ ಇಂದಿನ ಮದುವೆಗಳು ಜರುಗುತ್ತಿವೆ.

ಬಹಳ ಹಿಂದೆ ನಮ್ಮ ಪೂರ್ವಿಕರ ತಾತ-ಅಜ್ಜಿ… ಅಪ್ಪ ಅಮ್ಮಂದಿರ ಕಾಲದ ಮದುವೆಗಳು ನಡೆಯುತ್ತಿದ್ದ ರೀತಿಗೂ ಇಂದಿನ ಮದುವೆಗಳು ನಡೆವ ರೀತಿಗೂ ಬಹಳ ಅಜಾಗಜಾಂತರ ಬದಲಾವಣೆಗಳು ಕಾಣುತ್ತೇವೆ… ೭-೮ ದಿನಗಳು ನಡೆಯುತ್ತಿದ್ದ ಮದುವೆ ಇಂದು ಒಂದು ದಿನಕ್ಕೆ ಬಂದು ನಿಂತಿವೆ… ಪ್ರೀತಿ… ವಿಶ್ವಾಸದಿಂದ ಬಾಂಧವ್ಯ ತುಂಬಿದ ಮದುವೆಗಳು ಇಲ್ಲವಾಗಿ ಬರೀ ತೋರಿಕೆಯ ಮದುವೆಯ ಕಾಲ ಬಂದಿದೆ… ಆಡಂಬರ ಬಂದಿದೆ. ಬಾವಣಿಕೆಗಳು ಮರೆಯಾಗಿದೆ… ಹಣ ಮೆರೆದಿದೆ… ಪ್ರೀತಿ ಇಲ್ಲವಾಗಿದೆ… ಕೌಟುಂಬಿಕ ವಾತಾವರಣ ಮರೆಯಾಗಿ ಪ್ರತಿಷ್ಠೆ ತಲೆ ಎತ್ತಿ ನಿಂತಿದೆ… ಉಳ್ಳವರನ್ನು ನೋಡಿ ಇಲ್ಲದವರೂ ಸಹ ವೈಭವದ ಮದುವೆಗಳನ್ನು ಅನುಸರಿಸುವ ಕಾಲ ಬಂದಿದೆ.

‘ನವಿಲ ನೋಡಿ ಕೆಂಭೂತ ಪುಕ್ಕ ತರೆದುಕೊಂಡಿತು’ ಅನ್ನುವ ಮಾತಿನಂತಾಗಿದೆ… ಇಂದಿನ ಮದುವೆಗಳ ಡೌಲು. ಸಾಲ ಸೋಲ ಮಾಡಿ… ಮನೆ ಮಠ ಮಾರಿ ಮದುವೆ ಮಾಡುವ ಸ್ಥಿತಿಬೇಕಾ ಗೆಳೆಯರೇ… ನಾನು ಮೊದಲೇ ಹೇಳದ ಹಾಗೆ ಮದುವೆ ಅನ್ನುವುದು ಎರಡು ಜೀವಗಳ ಬೆಸುಗು… ಎರಡು ಕುಟುಂಬಗಳ ಬಾಂಧವ್ಯ… ಸಮರಸ ಬದುಕಿಗೆ ನಾಂದಿ. ಧನಕನಕದ ತೋರಿಕೆಯಲ್ಲ ಮದುವೆ ಪಟ್ಟೆ ಪೀತಾಂಬರದ ಮೆರವಣಿಗೆಯಲ್ಲ ಮದುವೆ ಸಿರಿತನದ ಪ್ರರ‍್ಶನವಲ್ಲ ಮದುವೆ ಅದೊಂದು ಸಂಬಂಧಗಳ ಬಂಧನ ಪ್ರೀತಿ ಪ್ರೇಮದ ತಂಬೆಲರು ಕೂಡು ಬಾಳಿನ ಪರಿ ಮಧುರ ಸುಮಧುರ ಸಿರಿ ಹಾಡು-ಹಸೆಯ ಪಸಿ ಒಲವ ಹೊಸಗಾಳಿಯು ಬೀಸಿ ಜೀವಜೀವದೊಳಗೆ ತಂಪು ನಗೆ ಸೂಸಿ ಹೂ ಬನದೊಳಗೆ ಗಂಧ ಸುಗಂಧವು ಬೀರಿ ಮಲ್ಲಿಗೆಯು ನಗೆ ಚೆಲ್ಲಿ ಒಲವ ನವಿಲು ನಲಿದು ಗಂಡು ಹೆಣ್ಣಿನ ಒಳಹೊರಗೆ ಬಣ್ಣ… ಬಣ್ಣವು ಮೂಡುವ ಗಳಿಗೆ ಮದುವೆ… ಮದುವೆ ಎಂದರೆ ಬರಿ ಮದುವೆಯಲ್ಲ ಶಿವಶಿವೆಯ ಪುರುಷ ಪ್ರಕೃತಿಯ ಸ್ತ್ರೀ-ಪುರುಷ ಗಂಡು-ಹೆಣ್ಣಿನ ಸಮ್ಮಿಲನದ ಸೋಪಾನ ಹಾಗಾಗೆ ಕುವೆಂಪು ಅವರು ಮದುವೆಯೆಂಬದು ಆಡಂಬರದ ತೋರಿಕೆ ಅಲ್ಲ… ಅದೊಂದು ಗಂಡು ಹೆಣ್ಣಿನ ಪವಿತ್ರ ಬಂಧನ… ಪ್ರೀತಿ ಅನುರಾಗದ ಕವಿತೆ… ಅದಕ್ಕೆ ಒಲವು ಚಲುವಿನ ಚಪ್ಪರವಷ್ಟೇ ಸಾಕು ಎಂದು ಎಲ್ಲೆಡೆಯೂಸರಳ ಮದುವೆಗೆ’ ಸೋಪಾನ ಹಾಕಿದರು… ನಾಂದಿ ಹಾಡಿದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: