ದರ್ಶನ್ ಜಯಣ್ಣ ಸರಣಿ – ಮಾತ್ರೆ-ಮನುಷ್ಯ ಮತ್ತು ಯಕ್ಷಪ್ರಶ್ನೆ

ದರ್ಶನ್ ಜಯಣ್ಣ

9

ಅಪ್ಪನಿಗೆ ಸ್ಟ್ರೋಕ್ ಆದನಂತರ ದೇಹದ ಎಡಗಡೆಯ ಭಾಗ ಅಷ್ಟು ಸ್ವಾದೀನದಲ್ಲಿರಲಿಲ್ಲ. ಶುರಿವಿನಲ್ಲಿ ಇದು ಅವರಿಗೆ ಅಷ್ಟು ಕಿರಿಕಿರಿಯನ್ನು ಉಂಟುಮಾಡಲಿಲ್ಲ. ಕಾರಣ, ಬಲಗೈ ಬಲಗಾಲ ಸಹಾಯದಿಂದ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಚುರುಕಾಗಿ ನಡೆಯಲು ಪ್ರಯತ್ನಿಸುತ್ತಿದ್ದರು. ಉಟಬೈಸ್ ಹೊಡೆಯುತ್ತಿದ್ದರು. ನಮ್ಮ ಮನೆಯ ಎರಡು ಮಹಡಿಯನ್ನು ಸುಮಾರುಸಾರಿ ಹತ್ತಿ ಇಳಿಯುತ್ತಿದ್ದರು. ದಿನಕ್ಕೆ ಮೂರುನಾಲ್ಕು ಕಿಲೋಮೀಟರು ನಡೆಯುತ್ತಿದ್ದರು.ಇಷ್ಟೆಲ್ಲಾ ಮಾಡಿ ಮೊದಲಿನಂತೆ ಆಗುವ ಅಚಲ ಹಠ ಅವರಲಿತ್ತು.

ಆದರೆ, ಅವರಿಗೆ ಸ್ಟ್ರೋಕ್ ಆದ ಮೊದಲದಿನದಿಂದಲೇ ಅಂಗಡಿ ಮುಚ್ಚಬೇಕಾಯಿತು. ಅವರ ಮಾತು ಅಷ್ಟು ಸ್ಪಷ್ಟವಾಗಿರಲಿಲ್ಲ. ತಡವರಿಸುತ್ತಿದ್ದರು. ನಾವೆಲ್ಲಾ ಇದು ಕೆಲವು ದಿನಗಳ ನಂತರ ಸರಿಹೋಗಬಹುದು ಅಂದುಕೊಂಡಿದ್ದೆವು. ಅಪ್ಪನೂ ಸಹ!
ಆದರೆ ಆದದ್ದೇ ಬೇರೆ. ಅಪ್ಪನ CT ಸ್ಕ್ಯಾನಿಂಗ್ ಮತ್ತು MRI ರಿಪೋರ್ಟ್ಗಳು ಮೆದುಳಿನ ಹಲುವು ಕಡೆಯಲ್ಲಿ ಸಣ್ಣ ಸಣ್ಣ ರಕ್ತ ಸ್ರಾವವಾಗಿ ಹೆಪ್ಪುಗಟ್ಟುವಿಕೆಯನ್ನು ಸ್ಪಷ್ಟವಾಗಿ ಹೇಳುತ್ತಿತ್ತು. ಇದರ ಬಗ್ಗೆ ವೈದ್ಯರಲ್ಲಿ ಕೇಳಿದಾಗ ಅದು ರಕ್ತದೊತ್ತಡದಿಂದ ಅಥವಾ ಮೆದುಳಿಗೆ ಸರಿಯಾಗಿ ರಕ್ತದ ಸರಬರಾಜು ಆಗದ ಕಾರಣ, ದೇಹದಲ್ಲಿ ಕೊಬ್ಬಿನ ಅಂಶದ ಕಾರಣ ಹೀಗೆಲ್ಲಾ ಆಗುವುದು ಎಂದು ಹೇಳಿ, ಸರಿಯಾಗಿ ಇನ್ನು ಮೇಲೆ BP, ಸಕ್ಕರೆ ಖಾಯಿಲೆ, ಕೊಬ್ಬು ಕರಗಿಸುವ ಮಾತ್ರೆಗಳನ್ನು ತಗೆದುಕೊಂಡರೆ ಎಲ್ಲಾ ಸರಿಹೋಗುವುದೆಂದೂ ಹೇಳಿದ್ದರು. ಈ ಮಾತ್ರೆಗಳ ಜೊತೆಯಲ್ಲಿ ಸ್ಟ್ರೋಕ್ ಗೆ ಸಂಬಂಧಪಟ್ಟ ಕೆಲವು ಕಡ್ಡಾಯ ಮಾತ್ರೆಗಳೂ ಸೇರಿದ್ದವು.

ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದ,  ಸದಾ ಕೆಲಸ ಕೆಲಸ ಅನ್ನುತ್ತಿದ್ದ ಅಪ್ಪ ಇದರಿಂದ ಕೆಲಸಕ್ಕೆ ಅಂದರೆ ತಮ್ಮ ಅಂಗಡಿಗೆ ಸೋಡಾ ಚೀಟಿ ಕೊಡಬೇಕಾಗಿಬಂತು. ಪರಿಸ್ಥಿತಿಯ ಅರಿವು ಅವರಿಗಿದ್ದದ್ದರಿಂದ ಟೈಮಿಗೆ ಸರಿಯಾಗಿ ಊಟ ತಿಂಡಿ ಮಾಡುತ್ತಾ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ, ವ್ಯಾಯಾಮ ಮಾಡುತ್ತಾ ಮತ್ತು ಆಗಾಗ ಕೇರಳ ಶೈಲಿಯ ಮಸಾಜು ಮಾಡಿಸಿಕೊಳ್ಳುತ್ತಾ ಸಾಗಿದ್ದರು.

ತಿಂಗಳುಗಳು ಕಳೆದಂತೆ ಅಪ್ಪನಿಗೆ ತನಗೆ ಶುರುವಿನಲ್ಲಿದ್ದ ಹುರುಪು ಇಲ್ಲವಾಗಿತ್ತು. ಅದಕ್ಕೆ ಕಾರಣ ಅವರು ಏನೇ ಮಾಡಿದರೂ ತಮ್ಮ ದೇಹದ ಎಡಗಡೆಯ ಭಾಗ ಒಂದು ಮಟ್ಟದಲ್ಲೇ ತಟಸ್ಥವಾಗಿ ಉಳಿದುಬಿಟ್ಟದ್ದು. ಆದ ಕಾರಣ ನಾವು ಇಂಗ್ಲಿಷ್ ಔಷದಿಯೊಟ್ಟಿಗೆ ಅವರಿಗೆ ಪ್ರಕೃತಿ ಚಿಕಿತ್ಸೆಯನ್ನು ಉಡುಪಿಯ ಉದ್ಯಾವರದಲ್ಲಿ, ಹಾಸನದಲ್ಲಿ ಮತ್ತು ಬೆಂಗಳೂರುಗಳಲ್ಲಿ ಕೊಡಿಸಿದ್ದೇ ಬಂತು. ಅಲ್ಲಿಂದ ಹಿಂದಿರುಗಿದ ಒಂದೆರಡುವಾರ ಲವಲವಿಕೆಯಿಂದ ಇರುತ್ತಿದ್ದವರು ನಂತರ ಮತ್ತೆ ಮಾಂಕಾಗುತ್ತಿದ್ದರು.

ಮೊದಮೊದಲಿಗೆ ಅವರಿಗೆ ಅಲ್ಲಿಗೆಲ್ಲ ಹೋಗಲು ಹುಮ್ಮಸ್ಸು ಇರುತ್ತಿತ್ತು. ಆಮೇಲೆ ನಮ್ಮ ಬಲವಂತಕ್ಕೆ ಬರುತ್ತಿದ್ದರು. ತಾವೇ ಸ್ವತಃ ಆಯುರ್ವೇದ ಗೊತ್ತಿದ್ದವರಾಗಿಯೂ ಅವರಿಗೆ ಅದೂ ತಮ್ಮ ಪರಿಸ್ಥಿತಿಯನ್ನು ನೀಗಿಸಲಾರದಾರ ಬಗ್ಗೆ ಖೇದವಿತ್ತು. ಆಮೇಲಾಮೇಲೆ ಒಂದು ರೀತಿಯ ಭ್ರಮನಿರಸನ ಅವರನ್ನು ಆವರಿಸಿತ್ತು. ಅದಕ್ಕೋ ಏನೋ ಮೊದಲಿನಂತೆ ಚಟುವಟಿಕೆಯಿಂದ ಇರುತ್ತಿರಲಿಲ್ಲ. ಒಂದಷ್ಟು ವ್ಯಾಯಾಮ ಬಿಟ್ಟುಬಿಟ್ಟರು. ಅವರು ಕುಂಟುತ್ತಾ ಸಾಗುವುದನ್ನು ಪ್ರಶ್ನಿಸುತ್ತಿದ್ದ, ಬಿಟ್ಟಿ ಉಪಾಯವನ್ನು ಕೊಡುತ್ತಿದ್ದ, ಅಯ್ಯೋ ನಿಮಗೇ ಹೀಗಾಯಿತೇ ಎಂದು ಕನಿಕರಿಸುತ್ತಿದ್ದವರನ್ನು ಎದುರಿಸಲಾಗದೆ ತಮ್ಮನ್ನು ಸಂಪೂರ್ಣ ಚಿಪ್ಪಿನೊಳಗೆ ಎಳೆದುಕೊಂಡು ಬಿಟ್ಟರು ಅನ್ನಿಸುತ್ತದೆ.

ಸಾಮಾನ್ಯವಾಗಿ ವಯಸ್ಸಾದಮೇಲೆ ಈ ರೀತಿಯ ತೊಂದರೆಗಳಿಂದ ಮನುಷ್ಯ ಸಂಪೂರ್ಣವಾಗಿ ಗುಣಮುಖನಾಗುವುದು ಕಷ್ಟಸಾಧ್ಯ. ಕಾರಣ, ಹರೆಯದಲ್ಲಿ ನಮ್ಮ ದೇಹದ ರಕ್ತದಿಂದ ಹಿಡಿದು, ಮೆದುಳಿನ ಕಣಗಳು, ಯಕ್ರುತ್ತು ಮುಂತಾದವು, ಎಂಥ ಪರಿಸ್ಥಿತಿಗೂ ಸ್ಪಂದಿಸುತ್ತವೆ. ದೇಹಕ್ಕೆ ಬೇಕಾದ ಅಂಶಗಳು ತ್ವರಿತಗತಿಯಲ್ಲಿ ಉತ್ಪಾದನೆಯಾಗುತ್ತವೆ. ಅರವತ್ತಾದಮೇಲೆ ಇವೆಲ್ಲದರ ಚಟುವಟಿಕೆ ಸಹಜವಾಗಿ ಕುಂಟಿತವಾಗುತ್ತದೆ. ಅಪ್ಪನಿಗೆ ಆದದ್ದು ಅದೇ.

ರಕ್ತದ ಚಲನವಲನದ ಏರುಪೇರಿನಿಂದ, cholestrol ಅಂಶದಿಂದ ಆದ ಸ್ಟ್ರೋಕ್ ಮೆದುಳಿನ ಕಣಗಳನ್ನು (neurons) ಬಲವಾಗಿ ಗಾಸಿಮಾಡಿತ್ತು. ಅದರ ಪರಿಣಾಮವಾಗಿ ಹಲವು ಭಾಗದಲ್ಲಿ ಮೆದುಳಿನ ಕಣಗಳು ಸತ್ತಿದ್ದವು. ಮೆದುಳಿನ ಯಾವ ಭಾಗದಲ್ಲಿ ಅದರ ಮರು ಉತ್ಪತ್ತಿಗೆ ಬೇಕಾದ ವೇಘದಲ್ಲಿ ಆಗುತ್ತಿರಲಿಲ್ಲವೋ ಆ ಭಾಗ ನಿಯಂತ್ರಿಸುತ್ತಿದ್ದ ದೇಹದ ಸ್ಥಿತಿ ಕುಂಟಿತ (Numb) ಆಗುತ್ತಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ de-generative disorder ಅಂತಲೂ ಕರೆಯುತ್ತಾರೆ.

ಅಪ್ಪನಿಗೆ ಮೊದಲ ಸ್ಟ್ರೋಕ್ ಆದ ಸುಮಾರು ಮೂರು ವರ್ಷಗಳ ನಂತರ ಪುನಃ ಮತ್ತೊಂದು ಬಾರಿ ಹಾಗೆಯೇ ಆಯಿತು. ಇದು ನಮ್ಮನ್ನು ಇನ್ನಷ್ಟು ಗಾಬರಿ ಗೊಳಿಸಿದ್ದಕ್ಕೆ ಕಾರಣ ಈ ಬಾರಿ ಅಪ್ಪ ಸಂಪೂರ್ಣ ಅಂದರೆ ನೂರಕ್ಕೆ ನೂರರಷ್ಟು ಪರಾವಲಂಭಿ ಆಗಿಬಿಟ್ಟರು. ವೈದ್ಯರ ಪ್ರಕಾರ ಹೀಗೆ ಎರೆಡೆರಡುಬಾರಿ ಆಗುವುದು ತುಂಬಾ ವಿರಳ ಅಂದರೆ ಬರೀ ಎರಡು ಪರ್ಸೆಂಟ್ನಷ್ಟು ಜನಕ್ಕೆ ಮಾತ್ರ. ಹೀಗಾಗುವ ಮುಂಚೆಯೇ ಅಪ್ಪ ನಡೆಯುವಾಗ ನನ್ನನ್ನು ಯಾರೋ ನೂಕಿದಹಾಗೆ ಆಗುತ್ತಿದೆ, ದೇಹದ ಸಮತೋಲನ ಸಿಕ್ಕುತ್ತಿಲ್ಲ ಎಂದೆಲ್ಲ ಹೇಳುತ್ತಿದ್ದರು. ಮನೆಯ ಹಾಲ್ನಿಂದ ಮುಂಬಾಗಿಲಿಗೆ ಅಥವಾ ಬಚ್ಚಲಿಗೆ ಹೋಗಲು ತುಂಬಾ ಪರಿಪಾಟ್ಲು ಬೀಳುತ್ತಿದ್ದರು. ಕೆಲವೊಮ್ಮೆ ಅಲ್ಲಲ್ಲೇ ಕುಸಿದು ಬೀಳುತ್ತಾ ತಮ್ಮ ಪರಿಸ್ಥಿತಿಗೆ ನಗುತ್ತಿದ್ದರು. ಕೆಲವೊಮ್ಮೆ ಥೇಟ್ ಅಂಗಾತ ಬಿದ್ದು ಎದ್ದೇಳಲಾಗದ ಹುಳುವಂತಾಗಿ ಬಿಡುತ್ತಿದ್ದರು.

ಎರಡನೆಯ ಬಾರಿ ಸ್ಟ್ರೋಕ್ ಆದಮೇಲೆ ಇವೆಲ್ಲಾ ಇನ್ನಷ್ಟು ಬಿಗಡಾಯಿಸಿತು. ಅವರಿಗೆ ಒಂದು-ಎರಡರ ಮೇಲಿನ ನಿಯಂತ್ರಣ ತಪ್ಪಿತು ಮತ್ತು ಈ ವಿಷಯ ಅವರನ್ನು ಮಾನಸಿಕ ಖಿನ್ನತೆಗೆ ನೂಕಿತ್ತು. ಇದರಿಂದ ತೀವ್ರವಾಗಿ ಗಾಸಿಯಾಗಿದ್ದು ಅಮ್ಮನಿಗೆ. ಇಲ್ಲಿಯವರೆಗೂ ಅಪ್ಪನ ಮೇಲೆ ಒಂದು ಕಣ್ಣಿಡಬೇಕಿತ್ತು ಆದರೆ ಈಗ? ಅಮ್ಮನಿಗೆ ಆ ಯೋಚನೆಯೇ ಭಯ ತಂದೊಡ್ಡಿತ್ತು. ನಾನು ವೀಕೆಂಡಿನಲ್ಲಿ, ರಜಾದಿನಗಳಲ್ಲಿ ಬಂದು ಅಪ್ಪನನ್ನು ನೋಡಿಕೊಳ್ಳುತ್ತಿದ್ದೆನಾದರೂ ಅಮ್ಮನ ಜವಾಬ್ದಾರಿ ಪ್ರತಿದಿನ, ನಿರಂತರ. ನಾವಾಗ ಅಂದುಕೊಳ್ಳುತ್ತಿದ್ದದ್ದು ಅಪ್ಪ ಕಡೆ ಪಕ್ಷ ಹೋದವರ್ಷ ಇದ್ದಹಾಗೆ ಇದ್ದರೆ ಸಾಕೆಂದು. ಇದು ಪ್ರತೀ ವರ್ಷವೂ ಮುಂದುವರಿದಿತ್ತು. ಆದರೆ ಅಪ್ಪನ ಪರಿಸ್ಥಿತಿ ಒಂದೊಂದೇ ಮೆಟ್ಟಿಲು ಕೆಳಗಿಳಿಯುತ್ತಿತ್ತು.

ನನಗಂತೂ ನನ್ನ ವೈದ್ಯ ಮಿತ್ರರು ಹೇಳಿದ ‘de-generative disorders are irreversible’ ಎಂಬ ಮಾತು ತಲೆಗೆ ಹೊಕ್ಕಲೇ ಇಲ್ಲ.  ಅಪ್ಪನನ್ನು ಅಲ್ಲಿ ಇಲ್ಲಿ ಕರೆದುಕೊಂಡು ಏಳದಾಡಿದೆ! ವೃತ್ತಿಯಿಂದ ಕೆಮಿಕಲ್ ಇಂಜಿನಿಯರ್ ಆದ ನನಗೇ ಕೆಲವೊಮ್ಮೆ ಅನ್ನಿಸುವುದು, ನಾವು ಪಂಪ್ ಮಾಡುವ ಅನೇಕ ಔಷಧಿಗಳೂ ಮನುಷ್ಯನ ಆರೋಗ್ಯ ಪತನಕ್ಕೆ ನೇರ ಕಾರಣವೆಂದು. ಆದರೆ ಎಲ್ಲ ಔಷಧಿಗಳನ್ನು ನಿಲ್ಲಿಸಿಬಿಡುವ ಧೈರ್ಯ ಬಂದೀತೆ? ಇದೊಂದು ಯಕ್ಷ ಪ್ರಶ್ನೆ.

| ಇನ್ನು ನಾಳೆಗೆ |

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: