ಮಹಾಮನೆ ಅಂಕಣ – ಬೆದರಿದ ಹರಿಣಿಯಂತೋಡಿದಳು ತರುಣಿ ಒಳಮನೆಗೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

23

ಯಥಾ ಪ್ರಕಾರ ನನ್ನ ಎದುರುಗೊಂಡಳು ರೇಣುಕಮ್ಮಾ…

ಪ್ರೀತಿಯಿಂದ ಓಡಿ ಬಂದು ‘ಚೆನ್ನಾಗಿದ್ದೀರಾ ಭಾವ’ ಎನ್ನುತ್ತಾ ಅವಳಕ್ಕನಿಗೆ ‘ಗಂಗಾ ಭಾವ ಬಂದ್ರು’ ಎನ್ನುತ್ತಾ ಆ ಹುಡುಗಿ ಅದೆಷ್ಟು ಸಂಭ್ರಮಿಸಿದಳು.

‘ಬನ್ನಿ ಬನ್ನಿ’ ಎಂದು ನನ್ನ ಅತ್ತೆಯಾಗುವ ಲಿಂಗಮ್ಮನವರು ಸ್ವಾಗತಿಸಿದರು. ಮಂಗಳಮ್ಮ ರೂಮ ಸೇರಿದಳು… ‘ಅಡುಗೆ ಮನೆಯಿಂದ ಇಣುಕಾಕಿದ ‘ಪ್ರೇಮ’… ಭಾವ ಈಗ ಬಂದ್ರು… ಗಂಗನನ್ನು ನೋಡಕ್ಕೆ ಬಂದ್ರಾ ಎಂದು ತಮಾಷೆ ಮಾಡಿದಳು… ಗಂಗ ತನ್ನ ಮೆಳ್ಳಗಣ್ಣನ್ನು ಮತ್ತೂ ಅಗಲಿಸಿ… ನಸು ನಗುತ್ತಾ ನಾಚಿ ನೀರಾಗಿ ‘ಹೇ ಹೋಗೆ…’ ಎಂದು ತಂಗಿಯನ್ನು ಪ್ರೀತಿಯಿಂದ ಗದರಿ ಅಡುಗೆಮನೆ ಸೇರಿದಳು… ರೂಮಿನಲ್ಲಿ ಮಲಗಿದ್ದ ಅಜ್ಜಿ ಕೋಲೂರುತ್ತಾ ಬಂದು ತಮ್ಮ ಗುಳಿ ಕಣ್ಣುಗಳಿಂದ ನನ್ನ ನೋಡಿ… ತಮ್ಮ ಬೊಚ್ಚುಬಾಯಿಂದ ನಗುತ್ತಾ ಚೆನ್ನಾಗಿದ್ದೀರಪ್ಪಾ… ಬನ್ನಿ ಬನ್ನಿ’ ಎಂದು ಆಹ್ವಾನಿಸಿಲೇ ತಾಯಿ… ಇವ್ರು ಬಂದವರೇ ನೋಡ್ರೋ…’ ಎನ್ನುತ್ತಾ ಮನೆಯವರೆಲ್ಲ ಚೆನ್ನಾಗಿದ್ದರೇನಪ್ಪಾ’ ಎಂದು ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದರು. ಅಷ್ಟರಲ್ಲಿ ರೇಣು ಕುಡಿಯಲು ಬಿಸಿನೀರು ತಂದಳು… ಸಧ್ಯ ಅದು ನನಗೆ ಮೊದಲ ದಿನಕೊಟ್ಟ ಗಣಗಣ ಕಾದ ಬಿಸಿನೀರಿನಂತೆ ಮಳ್ಳೋಗದೆ ಕುಡಿಯಲು ಆಗುವಂತೆ ಸ್ವಲ್ಪ ಬೆಚ್ಚಗಿತ್ತು ಅಷ್ಟೇ… ಬದುಕಿದೆಯ ಬಡಜೀವವೇ ಎಂದುಕೊಳ್ಳುತ್ತಾ ನಾನು ನೀರನ್ನು ಭಯಭೀತಿಯಿಂದಲೇ ತುಟಿಗಿಟ್ಟಿ… ಹೊರಗಿನಿಂದ ಡಾಲಿ’ ಓಡಿ ಬಂದು ನನ್ನನ್ನ ಐದಾರು ಬಾರಿ ಮೂಸಿ ಬಾಲ ಅಳ್ಳಾಡಿಸಿ ಓ… ಇವನು ಅವನೇ… ಅವತ್ತೂ ಬಂದವನೆ’ ಎಂದು ಕನ್ಫರ್ಮ ಮಾಡಿ ನನ್ನ ಸುತ್ತಾ ನೆಗೆದಾಡಿ… ಕುಣಿದಾಡಿ… ನೀನು ನಮ್ಮ ಗಂಗಳನ್ನು ಮದುವೆ ಆಗುವ ಹುಡುಗ ಅಲ್ವೇನಯ್ಯ… ಈ ಮನೆ ಅಳಿಯ ಆಗೋನಲ್ವೇನಯ್ಯ’ ಎಂದು ತನ್ನ ಸಂತೋಷವನ್ನು ವ್ಯಕ್ತಪಡಿಸಿ ನನ್ನ ಮುಂದೆ ತನ್ನ ಎರಡೂ ಮುಂಗಾಲುಗಳನ್ನು ಮುಂಚಾಚಿ… ತನ್ನ ದೇಹವನ್ನೆಲ್ಲ ಹಿಂದೆಳೆದು ತಲೆಯನ್ನು ಕೆಳಗಾಕಿ ನಮಿಸುವಂತೆ ಒಂದು ಆಕ್ಷನ್’ ಮಾಡಿ ಬಾಲ ಅಲ್ಲಾಡಿಸುತ್ತಾ ನನ್ನ ಮುಂದೆ… ನನ್ನನ್ನೇ ನೋಡುತ್ತಾ ತಾನು ಕೂರಿತು… ಹೇ ಡಾಲಿ ಹೋಗಾಚೆ… ಎಲ್ಲಾದಕ್ಕೂ ಮುಂದೆ ಬಂದ್ಬಿಡ್ತಿಯಾ… ನೋಡಿ… ಲೇ ರೇಣು ಕಳಿಸೆ ಆಚಕೆ’ ಎಂದು ನಮ್ಮತ್ತೆಯವರು ಹೇಳಿದರೂ… ಡಾಲಿ… ನಮ್ಮತ್ತೆಯವರತ್ತ ಕತ್ತು ತಿರುಗಿಸಿ ಒಮ್ಮೆ ದೃಷ್ಟಿ ಹಾಯಿಸಿ… `ಐ ಡೊಟ್ ಕೇರ್’ ಎಂಬ ಭಾವದಲ್ಲಿ ಮತ್ತೆ ನನಗೆ ಸನಿಹವಾಗಿ ನನ್ನ ಕಾಲ ಬುಡಕ್ಕೆ ಬಂದು ಕುಳಿತು… ನನ್ನನ್ನೇ ನೋಡುತ್ತಿತ್ತು.

ಅಡುಗೆ ಮನೆಯಿಂದ ಗಂಗ ಕಾಫಿ ತಂದಳು… ಜೊತೆಗೆ ನನಗೆ ಪ್ರಿಯವಾದ ಬಿಸಿ ಬಿಸಿ ಉಪ್ಪಿಟ್ಟು ಇತ್ತು…

ಯಾವತ್ಬಂದ್ರಿ… : ನಾನು
ನಾಲ್ಕು ದಿನ ಆಯ್ತು… : ಮೆಳ್ಳಗಣ್ಣಿ
ರಜೆ ಹಾಕಿದ್ರಾ… : ನಾನು
ಇಲ್ಲ… ಹೂಂ ಹೂಂ… : ಮೆಳ್ಳಗಣ್ಣಿ
ಎಷ್ಟು ದಿನ ರಜೆ ಹಾಕಿದ್ದೀರಾ : ನಾನು
ಮೂರು ತಿಂಗಳು… ಅಲ್ಲ ಅಲ್ಲ ಮೂರು ವಾರ : ಮೆಳ್ಳಗಣ್ಣಿ…
ನೀವೋಬ್ರೆ ಬಂದ್ರಾ ಆದಿವಾಲದಿಂದ : ನಾನು
ಹೂಂ… ಇಲ್ಲ ಬಸ್ಸಲ್ಲಿ ಬಂದೆ : ಮೆಳ್ಳಗಣ್ಣಿ

ಅಜ್ಜಿ ನಮ್ಮಿಬ್ಬರ ಸಂಭಾಷಣೆಯನ್ನು ನೋಡುತ್ತಾ ತನ್ನ ಬೊಚ್ಚುಬಾಯಿಯಿಂದಲೇ ನಗುತ್ತಾ ಕುಳಿತಿತ್ತು…

ನಿನಗೇನು ಮಾತ್‌ ಬರಲ್ವ… ಅಥವಾ ಮೂಗಿನ… ಭಾವ ಅಷ್ಟು ಪ್ರೀತಿಯಿಂದ ಮಾತಾಡುತ್ಸಾ ಇದ್ದಾರೆ. ನೀನು… ಹಾಂ… ಹೂಂ ಅಷ್ಟೇ ಹೇಳ್ತಾ ಇದ್ದೀಯಾ… ಸರಿಯಾಗಿ ಮಾತಾಡ್ಸು… ಅಡುಗೆ ಮನೆಯಿಂದ ಪ್ರೇಮಳ ದನಿ.

ಗಂಗಕ್ಕೋ ನಿನಗೆ ಹೇಳಿದ್ದು ಸರಿಯಾಗಿ ಮಾತಾಡು… : ರೇಣು
ಪಾಪ… ಮೆಳ್ಳಗಣ್ಣಿ ಬೆದರಿದ ಹರಿಣಿಯಾಗಿದ್ದಳು…
ಬೆವರ ಹನಿಗಳು ಹಣೆಯ ಮೇಲೆ ಮುತ್ತುಗಳಾಗಿದ್ದವು…
ತುಟಿಯಲ್ಲಿ ನಸುನಗೆಯಿದ್ದರೂ ಕಣ್ಣುಗಳು ನಾಚಿದ್ದವು…

ಉಪ್ಪಿಟ್ಟು ನೀವೇನಾ ಮಾಡಿದ್ದು… : ನಾನು
ಇಲ್ಲ ಅಮ್ಮ ಮಾಡಿದ್ದು… ನಾನು ಕೊನೆಗೆ ಉಪ್ಪಾಕಿದೆ… : ಮೆಳ್ಳಗಣ್ಣಿ

ಚೆನ್ನಾಗಿದೆ…’ ಆದರೆ ಉಪ್ಪು ಜಾಸ್ತಿ ಇದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದ ನಾನು ನೀರು ಕುಡಿಯಲು ಲೋಟ ಕೈಗೆ ತೆಗೆದುಕೊಂಡೆ… ನನ್ನ ತಮಾಷೆಯ ಮಾತು ಮನೆಯವರೆಲ್ಲ ಕೇಳಿ ನಕ್ಕರು… ಡಾಲಿಯೂ ಕುಯ್… ಕುಯ್… ಎಂದಿತು. ಮೆಳ್ಳಗಣ್ಣಿ ಭೂಮಿಗಿಳಿದು… ಅಡುಗೆ ಮನೆಗೆ ಓಡಿದಳು…

ಕಾಫಿ ತಣ್ಣಗಾಗಿತ್ತು…
ಸ್ವಲ್ಪ ಬಿಸಿ ಮಾಡಿಕೊಡುತ್ತೀರಾ : ನಾನು
ಮೆಳ್ಳಗಣ್ಣು ಹೊರಬಂದು ಕಾಫಿ ಲೋಟವನ್ನು ಎತ್ತಿಕೊಳ್ಳಬೇಕು…
ಅಷ್ಟರಲ್ಲಿ…
ಕಾಫಿಗೂ ಉಪ್ಪಾಕಿಬಿಡಬೇಡಿ… ನಾನೆಂದನು…
ಮತ್ತೆ ಮನೆಯವರೆಲ್ಲರೂ ನಕ್ಕರು…

ಮೆಳ್ಳಗಣ್ಣಿ ಓಡಿದಳು… ಒಳಗೆ ಪಾಕಶಾಲೆಯೆಡೆಗೆ

ನಂತರ ಬಿಸಿ ಕಾಫಿ ಮಾಡಿ ತಂದವಳು… ರೇಣುಕಮ್ಮ… ಕಾಫಿ ಕೊಡುತ್ತಾ ಭಾವ ನೀವು ತುಂಬಾ ತಮಾಷೆ ಮಾಡ್ತೀರ… ನಮ್ಮಕ್ಕ ಮಾತೇ ಆಡಲ್ಲ… ಸುಮ್ನೆ ಯಾವಾಗ್ಲೂ… ಎಲ್ಲದಕ್ಕೂ ನಗ್ತಾ ನಗ್ತಾ ಬರ‍್ತಾಳೆ… ಚೆನ್ನಾಗಿರುತ್ತೆ ಜೋಡಿ ನಿಮ್ಮಿಬ್ಬರದು… ಎಂದಳು ರೇಣುಕಮ್ಮ…

ಒಳಮನೆಯಿಂದ ರೇಣುಕಮ್ಮನನ್ನು ಗದರಿದ ಸದ್ದು… ಅಕ್ಕ ತಂಗಿಯರ ಕಿಲಕಿಲ ನಗು… ಅಡುಗೆಮನೆಯ ತುಂಬಿ ತುಳುಕಿತು ಆ ನಗು…

ಆಹಾ ಯಂಗ್ ನಗ್ತಾಳೆ ನೋಡಿ… ಭಾವ ಕೇಳಿದ ಎಲ್ಲಾದಕ್ಕೂ ಹಾಂ… ಹಾಂ… ಅಂತ. ಮಾತೇ ಬರೋದೆ ಇಲ್ವೆನೋ ಅನ್ನೊಂಗೆ ಬರ‍್ತಾಳೆ. ರೇಣುಕಮ್ಮ ಛೇಡಿಸಿದಳು ಅಂತ ಕಾಣುತ್ತೆ ಮೆಳ್ಳಗಣ್ಣಿಯನ್ನು. ನಗಲಿ ಬಿಡೇ… ನಿನಗೇನು ಕಷ್ಟ… ನಗು… ನಗ್ತಾನೇ ಇರು. ಯಾವಾಗಲೂ ಭಾವನ ಮುಂದೆ ನಗ್ತಾ ಕೂತೇಯಿರು… ಈಗ ಹೋಗಿ ಭಾವನ ಜೊತೆ ಕೂತು ಅದೇನು ಮಾತಾಡೋಗು’… ಎಂದು ಪ್ರೇಮ ಹೇಳಿದ್ದು ಕೇಳಿಸಿತು.

ಯಪ್ಪಾ… ನಾನೋಗಲಪ್ಪ… ಮೆಳ್ಳಗಣ್ಣಿಯ ನುಡಿ.

ಹೂಂ… ನಗ್ತಾ ಇಲ್ಲೇ ಕೂತಿರು… ನಿನ್ನ ನಗೂನಾ ಭಾವನೂ ನೋಡ್ಲಿ… ಹೋಗು ಮಾತಾಡೋಗು… ಮತ್ತೆ ರೇಣುಕಮ್ಮ ಅಕ್ಕನನ್ನು ರೇಗಿಸಿದಳು.

ರೂಮಿನಲ್ಲಿ ಅದೇನನ್ನೋ ಓಡುತ್ತಾ ಕುಳಿತಿದ್ದ ಮಂಗಳಮ್ಮ… ಅಡುಗೆಮನೆ ಸೇರಿದಳು… ಅದೇನ್ರೇ… ನೀವ್ ನೀವೇ ನಗ್ತಾ ಇದೀರಾ… ನನಗೂ ಹೇಳ್ರೇ ಎಂದಳು ಮಂಗಳಮ್ಮ. ಹೂಂ… ನೀನೊಬ್ಬಳು ಕಡಿಮೆ ಇದ್ದೆ… ಬಾ ಬಾ… ನೋಡೆ ಅಕ್ಕ… ಈ ಗಂಗಳನ್ನು… ಹೊರಹೋಗಿ ಭಾವನ್ಹತ್ರ ಮಾತಾಡೋಗು ಅಂದ್ರೆ… ಇಲ್ಲಿ ಒಳಗ್ಬಂದಿರೋದು ಏನೇಳಿದ್ರೂ ನಗ್ತಾನೇ ಬರ‍್ತಾಳೆ’ ಎಂದು ರೇಣುಕಮ್ಮ ಮಂಗಳಮ್ಮನ ಬಳಿ ಗಂಗನ ಕುರಿತು ಅವಳ ನಗುವಿನ ಕುರಿತು ಹೇಳಿ ತನ್ನ ಗಂಗಕ್ಕಳನ್ನು ಮತ್ತೆ ಮತ್ತೆ ರೇಗಿಸುತ್ತಿದ್ದಳು.

ಸುಮ್ನಿರೇ ರೇಣು… ಪಾಪ… ಅವಳು ನಮ್ಮ ಹತ್ತಿರನೂ ಹಾಗೆ ಅಲ್ವೆ… ಮಾತಿಲ್ಲ ಕತೆಯಿಲ್ಲ… ಎಲ್ಲದಕ್ಕೂ ನಕ್ತಾನೇ ರ‍್ತಾಳೆ. ಅಲ್ವಾ… ಗಂಗ ನೀನು ಯಾವ ಕಾಲಕ್ಕೂ ನಗುವುದನ್ನು ಬಿಡಬೇಡ ಕಣೆ… ನಗ್ತಾನೇ ಇರೆ. ಸುಮ್ನಿರುವಾಗ ನಗು… ಊಟ ಮಾಡುವಾಗ ನಗು… ನಿದ್ದೆ ಮಾಡುವಾಗ ನಗು… ಹಿಂಗೆ ನಗ್ತಾನೇ ಇರು… ಆಯ್ತಾ… ಭಾವಾನ ಹೊಟ್ಟೆನಾ ನಿನ್ನ ನಗುವಿನಲ್ಲೇ ತುಂಬಿಸಿಬಿಡು ತಿಳಿತಾ… ಮಂಗಳಮ್ಮ ತನ್ನಕ್ಕನನ್ನು ಮತ್ತೂ ಕಿಚಾಯಿಸಿದಳು.

ಆಗಾಗ ನಗುವಿನ ಅಲೆ ಅಡುಗೆ ಮನೆಯಿಂದ ತೇಲಿ ಬರುತ್ತಲೇ ಇತ್ತು.

ತಂಗಿಯರೆಲ್ಲ ಸೇರಿ ಗಂಗಳನ್ನು ರೇಗಿಸುತ್ತಾ… ಛೇಡಿಸುತ್ತಲೇ ಇದ್ದರು. ನಗುವಿನ ಅಲೆ ಏಳುತ್ತಲೇ ಇತ್ತು…

ನಗುವ ನಯನ
ಮಧುರ ಮೌನ
ಮಿಡುವ ಹೃದಯ
ಇರೇ ಮಾತೇಕೆ
ಹೊಸ ಭಾಷೆಯಿದು
ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ…

ನನ್ನ ಜೊತೆಗೆ ಅಜ್ಜಿ ಅದೂ ಇದೂ ಮಾತಾಡುತ್ತಲೇ ಇದ್ದರೂ ನನ್ನ ಜ್ಞಾನವೆಲ್ಲ ಅಡುಗೆ ಮನೆಯತ್ತಲೇ ಇತ್ತು… ಕಿವಿಯೂ ಅತ್ತಲೇ ಇತ್ತು ಎಂದರೆ ತಪ್ಪಾಗಲ್ಲ ಬಿಡಿ… ಇದು ಸಹಜವೋ ಸಹ… ಆ ಕಾಲ… ಆ ಗಳಿಗೆ ಅಂತಹದು… ಮದುವೆಯಾಗಲಿರುವ ಗಂಡು ಹೆಣ್ಣುಗಳಿಗೆ ಜಗದ ಚರಾಚರದಲ್ಲೂ ಮತ್ತೇನೂ ಕಾಣುತ್ತಿರುವುದಿಲ್ಲ. ಎಲ್ಲವೂ ಅವನಾಗಿರುತ್ತಾನೆ… ಎಲ್ಲವೂ ಅವಳಾಗಿರುತ್ತಾಳೆ.

ಮಾತು ಮೌನಗಳಾಚೆ
ಹೊಸದೊಂದು ಭಾಷೆ

ನಗುವಿನ ಸಿಂಚನ
ಅಲೆ ಅಲೆಯಾಗಿ
ತೇಲಿ ತೇಲುತಿಹುದು
ಕಣ್ಣ ಸವಿ ನೋಟವೆ
ಜಗದ ಸೊಲ್ಲಾಗಿವುದು
ಜಗವೆಲ್ಲ ಅವನೇ ಅವಳಾಗಿರುವುದು
ಅವಳೇ ಅವನಾಗಿರುವುದು

ನಿಮಗೆ ಈ ಅನುಭವಗಳೆಲ್ಲವೂ ಆಗಿರುತ್ತವೆ ಕಣ್ರೀ… ಇದನ್ನೆಲ್ಲ ಹೇಳಲು ಕವಿನೇ ಆಗಿರಬೇಕೆಂದೇನಿಲ್ಲ… ನೀವು ಹೇಳಬಹುದು… ಇರ‍್ಲೀ ನೀವೂ ಒಂದು ಪದ ಕಟ್ಟಿ ಹಾಡಿಯಪ್ಪ… ಇಂತಹ ನೆನಪುಗಳೆಲ್ಲ ಬದುಕಿಗೆ ಉಲ್ಲಾಸ ತರುತ್ತವೇ… ನಿರಂತರವಾದ ರೊಟೀನ್ ಬದುಕಿಗೆ ಹೊಸದೊಂದು ಭಾಷ್ಯ ಬರೆಯುತ್ತವೆ… ಚೈತನ್ಯ ತರುತ್ತವೆ… ಹೂಂ… ಮತ್ತೇಕೆ ತಡ… ತಗೊಳ್ಳಿ… ಪೆನ್ನು ಪೇಪರ್ ತಗೊಳ್ಳಿ… ನಿಮ್ಮಾಕೆ… ನಿಮ್ಮಾತ ಮೊದಲು ಭೇಟಿ ಮಾಡಿದ ಸವಿಗಳಿಗೆ… ಮದುವೆ… ಮುದನೀಡಿದ ರಸಗಳಿಗೆಗಳನ್ನೆಲ್ಲ ಕುರಿತು ಬಂದ ಪದ ಬರದೇ ಬಿಡ್ರಲ್ಲಾ…

ಅಲ್ಲಾ ನಾನು ಈ ಮಾತನ್ನು ಮದುವೆ ಆದವರಿಗೆ ಹೇಳುತ್ತಿರುವ ಮಾತು… ಮದುವೆ ಆಗದವರು ನಮ್ಮಂತವರ ಅನುಭವಗಳನ್ನು… ಕವಿಯೋರ್ವನ ಸಿಹಿಗವಿತೆಯನ್ನು ಕೇಳಿ ಖುಷಿಪಡಿ… ಮದುವೆ ಆದ ಮೇಲೆ ಜೀವನರಾಗ’ವನ್ನು ಬದುಕುವುದು, ಬರೆಯುವುದು ಇದ್ದೇ ಇರುತ್ತೆ.

ನಾನು ಬಂದ ವಿಷಯವನ್ನು ಹೇಳಲು ರೇಣುಕಮ್ಮನನ್ನು ಕರದೆ
ಬೆದರಿದ ಹರಿಣಿಯಂತೆ ಒಳಮನೆಯಿಂದ ಬಂದಾಳೋ ತರುಣಿ…
ಅವಳ ಜೊತೆಗೂಡಿ ರೇಣು-ಪ್ರೇಮರೂ ಬಂದರು. ಮಂಗಳ ಬಾಗಿಲ ಮರೆಯಿಂದಲೇ ಇಣುಕಿದಳು…

ಅದೇ ಸಮಯಕ್ಕೆ ಹೋರಹೋಗಿದ್ದ ಮಾವನವರೂ ಬಂದರು…

ನಾನು ತಂದ ಸೀರೆಗಳನ್ನು ಟೀಪಾಯಿ ಮೇಲೆ ಬಿಡಿಸಿಟ್ಟೆ…

ಹೆಂಗಸರಿಗೂ…. ಹೆಣ್ಣುಮಕ್ಕಳಿಗೂ ಸೀರೆಗಳೆಂದರೆ ಅದೇನು ಸಂಭ್ರಮವೋ… ಸಡಗರವೋ ಕಾಣೆ ಕಣ್ರೀ… ಎಲ್ಲರೂ ಒಂದೊಂದು ಸೀರೆಗಳನ್ನು ತೆಗೆದು ತೆಗೆದೂ ನೋಡುತ್ತಲೇ ಇದ್ದರು. ತಿರುಗ್ಸಿ-ಮುರುಗ್ಸಿ ನೋಡುತ್ತಲೇ ಇದ್ದರು. ಅದರ ಬಣ್ಣ, ಸೆರಗು-ಪರಗು-ಅದೂ-ಇದೂ ಅಂತ. ನಾ ತಂದ ಸೀರೆಗಳ ಗುಣಗಾನ ಮಾಡುತ್ತಲೇ ಇದ್ದರೂ… ಮೆಳ್ಳಗಣ್ಣಿಯಂತೂ ಮೌನವಹಿಸಿ… ನಸುನಗುತ್ತಲೇ… ಆ ಸೀರೆಗಳ ಅಂದವನ್ನು ಸವಿಯುತ್ತಿದ್ದಳು… ನೀವು ತಂದಿರುವ ಸೀರೆಗಳು ಚೆನ್ನಾಗಿವೆಯೆಂದು ತನಗೊಪ್ಪಿಗೆಯೆಂದೂ… ಮೌನ ಸಂದೇಶವನ್ನು ನನ್ನ ಹೃದಯಕ್ಕೆ ತಲುಪಿಸುತ್ತಿದ್ದಳು. ಇದೆಲ್ಲವನ್ನು ನೋಡುತ್ತಿದ್ದ ಗಂಗಳ ಅಜ್ಜಿ ನಂಜಮ್ಮನವರ ಸಂತೋಷಕ್ಕೆ ಪಾರವೇ ಇರಲಿಲ್ಲ… ಗಂಗನ ತಾಯಿಯಂತೂ ಹಿರಿಹಿರಿ ಹಿಗ್ಗಿದರು… ರೇಣು ಮತ್ತು ಪ್ರೇಮಳಂತೂ ಒಂದೊಂದು ಸೀರೆ ತೆಗೆದೂ ತೆಗೆದು ಗಂಗಳ ನಿಲುವುಗಿಡಿಯುತ್ತಿದ್ದರು. ಹೆಗಲ ಮೇಲಾಕಿ ಸೆರಗಿನಂತೆ ಹೊದಿಸುತ್ತಿದ್ದರು… ನಡುನಡುವೆ ಸೀರೆಯ ವರ್ಣನೆ ನಡೆದೇ ಇತ್ತು. ಈ ಸೀರೆ ಚೆನ್ನಾಗಿದೆ ಭಾವ… ನೀವೇ ಸೆಲೆಕ್ಟ್ ಮಾಡಿದ್ರ ಭಾವ… ಇದು ನಮ್ಮ ಗಂಗನ ಕಲರ್‌ಗೆ ಒಪ್ಪುತ್ತೆ ಅಲ್ವಾ… ಈ ಕಲರ್ ನನಗೆ ಇಷ್ಟ ಆಯ್ತು ಭಾವ… ನಿನಗೂ ಈ ಕಲರ್ ಇಷ್ಟಾನ ಭಾವ… ಸೀರೆಗಳ ಕಲೆಕ್ಷನ್ ತುಂಬಾ ಚೆನ್ನಾಗಿದೆ ಭಾವ… ಯರ‍್ಯಾರು ಹೋಗಿದ್ರಿ ಸೀರೆ ತರೋದಕ್ಕೆ… ಗಂಗ ನಿನಗೆ ನಿನಗೆ ಯಾವ ಸೀರೆ ಇಷ್ಟೇ ಆಯ್ತು… ಬಿಡಿ ಭಾವ ನೀವು ಏನ್ ತಂದ್ಕೊಟ್ರೂ ನಮ್ಮಕ್ಕ ಒಪ್ಪಿಕೊಳ್ಳುತ್ತಾಳೆ… ಹೀಗೆ ಅಕ್ಕ ತಂಗಿಯರ ಮಾತು ಸಾಗೇಯಿದ್ದರೂ ಮೆಳ್ಳಗಣ್ಣಿ ಮಾತ್ರ ಮೌನ ವಹಿಸಿದ್ದಳು. ಅವಳ ಮೌನವೇ ನೂರು ಮಾತುಗಳನ್ನು ಹೇಳುತ್ತಿತ್ತು. ಅವಳ ಮೌನವೇ ಅವಳ ಸಂತೋಷವನ್ನು ಸಾರುತ್ತಿತ್ತು.

ಅಂತೂ ನಾವು ತಂದ ಸೀರೆ ಅವರ ಮನೆಯವರಿಗೆ ಅವಳ ತಂಗಿಯರಿಗೆ ಹಾಗೂ ಗಂಗಳಿಗೂ ಇಷ್ಟವಾಯಿತು… ಅವರಿಗೆ ಇಷ್ಟವಾದ ಸೀರೆಗಳನ್ನು ತಂದೆನಲ್ಲಾ ಎಂದು ನಾನು ಸಂತೋಷಪಟ್ಟೆ… ಆ ಖುಷಿಗೆ ನಾನು ಬೀಗಿದ್ದೆ. ನಾನು ನನ್ನ ಕುಡಿನೋಟದಿಂದಲೇ ಕೇಳಿದ ಮೆಳ್ಳಗಣ್ಣಿಗೆ ‘ಸೀರೆ ಚೆನ್ನಾಗಿದೆಯಾ’ ಎಂದು ಅವಳು ತನ್ನ ತುಟಿಯಿಂದಲೇ ಕಿರುನಗೆ ಬೀರಿ ತುಂಬಾ ತುಂಬಾ ಚೆನ್ನಾಗಿದೆ ಎಂದು ಮೌನದಲೇ ಒಪ್ಪಿಗೆ ಸೂಚಿಸಿದಳು.

ಗಂಗಳ ಅಮ್ಮನೂ ಸೀರೆಗಳನ್ನು ನೋಡಿ ಸಂತೋಷಿಸಿದರು. ಆ ಸಡಗರದಲ್ಲೇ… ನನಗೆ ಊಟ ಮಾಡೇಳಿ.. ಆಗ್ಲೆ ತಡ ಆಯ್ತು ಕಣ… ಗಂಗ ಅವರ ಕೈಗೆ ನೀರ್ ಕೊಡೋಗು…’ ಎಂದರು.

ಆ ಮೆಳ್ಳಗಣ್ಣಿಯೇ ಊಟ ಬಡಿಸಿದಳು…
ಬಿಸಿಬಿಸಿ ಮುದ್ದೆ… ಬಸ್ಸಾರು… ಕಾಳು… ಹಪ್ಪಳ… ಉಪ್ಪಿನಕಾಯಿ… ಜೊತೆಗೆ ನಸುನಗೆ… ಪ್ರೀತಿ… ಎಲ್ಲವನ್ನು ಬಡಿಸಿದಳು ಗಂಗೆ.

ಬಾಳೇಹಣ್ಣಿನ ತಟ್ಟೆ ಹಿಡಿದಳು ರೇಣು.

ಗಂಗಳ ಉಂಗುರ ಬೆರಳಿನ ಅಳತೆ ತೆಗೆದುಕೊಂಡೆ ನಾನು…

ಡಿಸೈನ್ ಯಾವುದಿರಲಿ ಎಂದೆ. ಎಂತಹ ಉಂಗುರಬೇಕು ನಿಮಗೆ ಎಂದೆ…

ಹವಳದುಂಗುರವೆ
ಮುತ್ತಿನುಂಗುರವೆ
ರತ್ನದುಂಗುರವೆ
ಹರಳಿಂಗುರವೆ
ಬಂಗಾರದುಂಗುರವೆ
ವಜ್ರದುಂಗುರವೆ

ಕಿರುನಗೆ ಬೀರಿ… ಅದ್ಯಾವುದೂ ಬೇಡ… ನಿಮ್ಮ ಪ್ರೀತಿಯುಂಗುರ ಸಾಕೆನಗೆ ಎಂದಳು ಬಂಗಾರಿ…

ಮಾತೇ ಬರುವುದಿಲ್ಲ ಎಂದುಕೊಂಡಿದ್ದೆ… ಮುತ್ತಿನಂತಾ ಮಾತಾಡಿದಳು ಮೆಳ್ಳಗಣ್ಣಿ.

ಮನೆಯ ತುಂಬಾ ನಗು ಅರಳಿತು
ನನ್ನ ಮನದ ತುಂಬಾ ಆ ನಗು ಉಳಿಯಿತು…
ನನ್ನೊಳಗೆ ಅದು ಕವಿತೆಯಾಯಿತು.

ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ

ಆದರೆ… ಬಹಳ ದಿನಗಳ ನಂತರ…

ಅಲೆಯಾಯಿತು ಜೀವದುಂಗುರ
ಬಾಡಿ ಹೋಯಿತು ಬದುಕಿನುಂಗುರ
ತೇಲಿಹೋಯಿತು ಬಾಳ ಬಂಧುರ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: