ಮಹಾನ್ ಕಲಾವಿದ ಜಲವಳ್ಳಿ EXCLUSIVE ಸಂದರ್ಶನ

ಮಹಾನ್ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶರಾವ್ ಇನ್ನಿಲ್ಲ.

ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅಪಾರ.

ಅವರನ್ನು ದೂರದರ್ಶನಕ್ಕಾಗಿ ವಿಠ್ಠಲ ಭಂಡಾರಿ ಸಂದರ್ಶಿಸಿದರು. ಅದರ ಆಯ್ದ ಭಾಗ ಇಲ್ಲಿದೆ-

ಕಾಳಿಂಗ ನಾವುಡರು ತೀರಿ ಹೋದಾಗಲೇ ನಾನು ನನ್ನ ಕಸುಬು ಬಿಡಬೇಕಾಗಿತ್ತು.

ಜಲವಳ್ಳಿ ವೆಂಕಟೇಶರಾವ್ ಅವರ ಸಂದರ್ಶನದ ಆಯ್ದ ಭಾಗ 

ಸಂದರ್ಶಕರು: ಡಾ.ವಿಠ್ಠಲ ಭಂಡಾರಿ

ಯಕ್ಷಗಾನದ ಮೇರು ಶಿಖರದ ಮೇಲೇರಿ ಒಮ್ಮೆ ಹಿಂತಿರುಗಿ ನೋಡಿದರೆ ಕಾಣುವ ಚಿತ್ರ ಯಾವುದು? ನಿಮ್ಮ ಬಾಲ್ಯ, ಮನೆಯ ಸ್ಥಿತಿ ಗತಿಯನ್ನೂ ಒಳಗೊಂಡಂತೆ ಹೇಗಿತ್ತು?

ಬಾಲ್ಯದಲ್ಲೆ ತಂದೆ ತೀರಿಕೊಂಡರು ನನ್ನ ತಾಯಿಗೆ ನನ್ನನ್ನು ಸಾಕೊದು ಕಷ್ಟ ಆಯ್ತು. ಜಮೀನು ಇಯಾದಿ ಇರಲಿಲ್ಲ. ಓದುವ ವಾತಾವರಣವೂ ಇರಲಿಲ್ಲ. ನನ್ನ ಅಜ್ಜನ ಮನೆಯಲ್ಲಿ ನನಗೆ ಆಶ್ರಯ ಸಿಕ್ತು. ಅಲ್ಲಿ ಬಾಲ್ಯ ಕಳೆದು ಜಲವಳ್ಳಿಗೆ ಬಂದೆ. ಜಲವಳ್ಳಿ ಹುಟ್ಟಿದ ಊರು ಬಳಕೂರು ತಾಯಿಯ ತವರು ಮನೆ. ಅಲ್ಲೆ ಬಳಕೂರು ಕೂಡ್ಲಮನೆ ಶಾಲೆಗೆ ನನ್ನನ್ನು ಸೇರಿಸಿದ್ರು. ಒಂದನೇ ಇಯತ್ತಿ ಮುಗಿಸಿ ಎರಡನೇ ಇಯತ್ತೆಗೆ ಹೋದ ನೆನಪು. ಹಾಗೇ ಇತ್ತೀಚೆಗೆ ತಂದ ಸರ್ಟಿಫಿಕೆಟ್‌ನಲ್ಲಿ ನಮೂದು ಇದೆ. ಎರಡನೇ ಇಯತ್ತಿಗೆ ಹೊದ ನೆನಪಿಲ್ಲ. ಜಲವಳ್ಳಿಗೆ ಬಂದ ಮೇಲೆ ಕೂಲಿ ನಾಲಿ ಮಾಡಿ ಜೀವನೋಪಾಯ ಸಾಗಿಸುತ್ತಿದ್ದೆ. ಆಗಲೇ ಯಕ್ಷಗಾನದ ಕುರಿತು ಆಸಕ್ತಿ ಇತ್ತು. ಅಲ್ಲಿ ಸುತ್ತ-ಮುತ್ತಲೂ ಆಗೋ ಆಟವನ್ನು ನೋಡ್ತಿದ್ದೆ.

ಯಕ್ಷಗಾನ ಕಲೆ ನಿಮಗೆ ನಿಮ್ಮ ಹಿರಿಯರಿಂದ ಒಲಿದದ್ದಾ? ನಿಮ್ಮ ಮೊದಲ ಪ್ರವೇಶ ಹೇಗಾಯ್ತು?

ನಾನು ೧೯೩೩ ರಲ್ಲಿ ಹುಟ್ಟಿದ್ದು. ಮೊದಲ ವೇಷ ಮಾಡಿದ್ದು ನನ್ನ ೧೬ ನೇ ವಯಸ್ಸಿನಲ್ಲಿ ನಮ್ಮ ಹಿರಿಯರು ಯಾರು ಯಕ್ಷಗಾನ ಕ್ಷೇತ್ರದಲ್ಲಿ ಇರಲಿಲ್ಲ. ಇದು ನನ್ನ ಸ್ವಯಾರ್ಜಿತ. ಅಮ್ಮನಿಗೂ ನಾನು ಯಕ್ಷಗಾನಕ್ಕೆ ಸೇರೋದು ಇಷ್ಟ ಇರಲಿಲ್ಲ. ರಾತ್ರಿ ನಿದ್ದೆ ಕೆಟ್ರೆ ಆಯಸ್ಸು ಕಡಿಮೆ ಆಗ್ತದೆ ಅಂತ ಆಕೆಯ ನಂಬಿಕೆ ಆಗಿತ್ತು. ಈಗ ೮೩ ವರ್ಷ; ಆಯಸ್ಸು ಗಟ್ಟಿಯಾಗೆ ಇದೆ. ಸ್ವಲ್ಪ ಕಾಲುನೋವು, ಮಂಡಿನೋವು ಇತ್ಯಾದಿ ಸಣ್ಣ ಪುಟ್ಟ ಶೀಕು ಅಷ್ಟೆ.

ಒಮ್ಮೆ ನಮ್ಮೂರಲ್ಲಿ ಯಕ್ಷಗಾನ ಆದಾಗ ಅರ್ಜುನನ ಪಾರ್ಟುಮಾಡುವವನು ಬರಲೇ ಇಲ್ಲ. ಮೂರು ನಾಲ್ಕು ತಾಸಲ್ಲಿ ಆಟ ಸುರು ಆಗ್ಬೆಕು. ವೇಷದ ಕೊರತೆಯಿಂದ ಆಟ ನಿಲ್ಲಿಸುವಂತಿಲ್ಲ. ನನ್ನ ಪರಿಚಯ ಇದ್ದ ಕೆಲವರು ಬಂದು ಈ ಪಾತ್ರಕ್ಕೆ ನೀನೆ ಆಗಬಹುದು ಅಂದ್ರು. ಅಳುಕು ಇತ್ತು; ಆದ್ರು ಮಾಡ್ದೆ. ಒಳ್ಳೆ ಪ್ರವೇಶ ಆಯ್ತು. ಒಳ್ಳೆ ಅಭಿಪ್ರಾಯವು ಬಂತು. ಅಲ್ಲಿಂದಲೇ ನನ್ನ ಯಕ್ಷಗಾನ ರಂಗ ಪ್ರವೇಶ ಅನಿರೀಕ್ಷಿತವಾಗಿ ಪ್ರಾರಂಭವಾಗಿದ್ದು ಪೂರ್ಣವಾಗಿ ಮುಂದುವರಿಯಿತು.

ನಿಜವಾಗಿ ನಿಮ್ಮನ್ನು ಕಲಾವಿದರನ್ನಾಗಿ ರೂಪಿಸಿದ್ದು ಗುಂಡಬಾಳ ಇರಬೇಕಲ್ಲ? ಅಲ್ಲಿಯ ಅನುಭವ ಹೇಗಿತ್ತು?

ಹೌದು ನಿಜವಾಗಿ ನನ್ನ ಯಕ್ಷಗಾನ ಬದುಕು ಪ್ರಾರಂಭಾಗಿದ್ದು ಗುಂಡಬಾಳದಿಂದ. ಅಲ್ಲಿ ಹಲವು ವರ್ಷದಿಂದ ಹರಕೆ ಆಟ ನಡಿತಾ ಇತ್ತು. ಬಹುತೇಕ ನಮ್ಮಲ್ಲಿಯ ನಟರು ಮೊದಲು ಬಣ್ಣ ಹಚ್ಚಿದ್ದು ಅಲ್ಲಿಯೇ. ಯಕ್ಷಗಾನ ಕಲಿಸುವ ಬೇರೆ ಕೇಂದ್ರ ಇರಲಿಲ್ಲ. ಹಾಗಾಗಿ ನೋಡಿ ನೋಡಿ ಕಲಿಯುವುದೇ ಆಗಿತ್ತು. ನಾನು ಹಾಗೆ ನೋಡಿ ಕಲಿತಿದ್ದೆ ಶಾಸ್ತ್ರೀಯ ಕಲಿಕೆ ಅಲ್ಲ. ಆಗ ಸತ್ಯನಾರಾಯಣ ರಾಮ ಹೆಗಡೆ ಎನ್ನುವವರು ಬಂದು ಬಂದು ನನ್ನನ್ನು ಕರೆದುಕೊಂಡು ಹೋದ್ರು. ಮೊದಲು ಸ್ತ್ರೀ ವೇಷ ಮಾಡಲು ಹೇಳಿದರು ಆಗ ಸ್ತ್ರೀವೇಷ ಮಾಡುವವರೇ ಇರಲಿಲ್ಲ. ತೀರಾ ಕೊರತೆ ಇತ್ತು. ನಾನು ಆರ್ಥಿಕವಾಗಿ ಬಡವ ಆದ್ರು ನೋಡೊದಕ್ಕೆ ಹಾಗೆ ಕಾಣ್ತಾಇರಲಿಲ್ಲ. ಸುಂದರವಾಗಿಯೂ ಇದ್ದೆ. ನನ್ನನ್ನು ಯಾರ ಮನೆಯಲ್ಲಿ ಇಟ್ಟುಕೊಂಡು ಬೆಳಸಿದ್ರೊ ಅವರು ನನ್ನ ಊಟ ತಿಂಡಿಗೆ ಕೊರತೆ ಮಾಡಲಿಲ್ಲ. ಹಾಗಾಗಿ ಮೈ ಕೈ ತುಂಬಿಕೊಂಡಿದ್ದೆ.

ಅಲ್ಲಿ ಪ್ರತಾಪದ ದ್ರೌಪತಿ, ಕೀಚಕ ವದೆಯ ಸೈರೆಂದ್ರಿ, ವಿಶ್ವಾಮಿತ್ರ ಮೇನಕೆಯ ಮೇನಕೆ, ಚಂದ್ರಹಾಸ ಚರಿತೆಯ ವಿಷಯೇ ಮೀನಾಕ್ಷಿ, ತಾರೆ…….. ಹೀಗೆ ಹಲವು ವೇಷ ಮಾಡೊ ಅವಕಾಶ ಸಿಕ್ತು.

ಸ್ತ್ರೀ ವೇಷದಲ್ಲಿ ಪ್ರಸಿದ್ಧಿ ಪಡೆದರು ಯಾಕೆ ಪುರುಷ ವೇಷದ ಕಡೆ ಹೊರಳಿದ್ರಿ?

ಮೊದಲ ಪ್ರಸಂಗದಲ್ಲಿ ಸ್ತ್ರೀ ವೇಷ ಮಾಡಿದ ಮೇಲೆ ಮಧ್ಯರಾತ್ರಿ ನಂತರ ಸ್ವಲ್ಪ ಟೈಂ ಉಳಿತಿತ್ತು. ಆಗ ಯಾರಾದರೂ ಕಲಾವಿದರು ಬರದಿದ್ರೆ ಪುರುಷ ವೇಷ ಮಾಡ್ತಿದ್ದೆ. ಗದಾಯುದ್ಧ ಪ್ರಸಂಗ ಇತ್ತು. ಅದು ಯಾವಾಗಲೂ ಮೂರು ಘಂಟೆ ನಂತ್ರ ಆಡುವುದು. ಈಗ ಅಂತದ್ದೆಲ್ಲ ಇಲ್ಲ. ಎಷ್ಟೊತ್ತಿಗಾದರೂ ಆಡ್ತಾರೆ. ಆಗ ಭೀಮನನ್ನು ಮಾಡಬೇಕಾದವನು ಬಂದಿರಲಿಲ್ಲ ಯಜಮಾನರು ಬೀಮನ ಪಾತ್ರ ಮಾಡು ಕೌರವನ ಪಾತ್ರ ಚಿಟ್ಟಾಣಿಯವರದು. ಅಂದು ಭೀಮನ ಪಾತ್ರ ಮಾಡಿದೆ. ಅಲ್ಲಿಂದ ಸಾವಕಾಶ ಪುರುಷ ವೇಷವನ್ನೆ ಮಾಡಿದೆ. ಮೊದಮೊದಲು ಸ್ತ್ರೀ ವೇಷಕ್ಕೆ ಜನರೇ ಸಿಗುತ್ತಿರಲಿಲ್ಲ. ದೊಡ್ಡ ಕೊರತೆ ಇತ್ತು.

ಅಲ್ಲಿಂದಲೇ ನಿಮ್ಮ ಜೋಡಿ ಪ್ರಾರಂಭ ಆಗಿದ್ದೆ?

ಹೌದು, ನನ್ನದು ಮತ್ತು ಚಿಟ್ಟಾಣಿಯವರ ಜೋಡಿ ಪ್ರಾರಂಭವಾಗಿದ್ದು ಅಲ್ಲಿ. ಭಸ್ಮಾಸುರ ಮೋಹಿನಿ, ಕೀಚಕವಧೆ, ಗದಾಯುದ್ಧ, ಚಿತ್ರಾಕ್ಷಿ ಕಲ್ಯಾಣ… ಹಾಗೆ ಹಲವು ಮೇಳಗಳಲ್ಲಿ ಕೆಲಸ ಮಾಡುವಾಗಲೂ ಒಂದು ಜನಪ್ರಿಯ ಜೋಡಿಯಾಗಿ ಜನ ಮೆಚ್ಚಿಕೊಂಡರು. ಇವರೊಂದಿಗೆ ಸತ್ಯನಾರಾಯಣ ಹೆಗಡೆ. ಕೊಂಡಕುಳಿ ಶಿವರಾಮ ಆಚಾರಿ, ಶ್ರೀಧರ ಶೆಟ್ಟಿ, ಗುಂಡಿಬೈಲು ಗಣೇಶ ಭಟ್ಟರು. ಹಳದೀಪುರ ಗಜಾನನ ಭಂಡಾರಿ ಮುಂತಾದವರು ಜೊತೆಗೆ ಇದ್ದರು. ಹಿಮ್ಮೇಳದಲ್ಲಿ ಪ್ರಭಾಕರ ಭಂಡಾರಿ, ಸತ್ಯನಾರಾಯಣ ಭಂಡಾರಿ…… ಮುಂತಾದವರು ಇದ್ದರು.

ಚೌಕಿಮನೆಗೆ ಎಲ್ಲರಕ್ಕಿಂತ ಮೊದಲೇ ಬಂದು ವೇಷಕ್ಕೆ ಕೂರುತ್ತಿದ್ದ ಬಗ್ಗೆ ಹೇಳಿದ್ದರು.

ನಮಗೆ ಯಾವಾಗಲೂ ಹಾಗೆ, ಬಣ್ಣ ಮಾಡಿಕೊಳ್ಳಲು ಹೆಚ್ಚೊತ್ತು ಬೇಕು. ಹಿಂದೆಲ್ಲ ಕಲ್ಲನ್ನು ತಳೆದು ಬಣ್ಣ ಮಾಡ್ತಿದ್ರಂತೆ. ನಾನು ಬರುವಾಗ ಸಫೇತು, ಹಳದಿ, ಕೆಂಪು ಇತ್ಯಾದಿ ಬಂದಿತ್ತು. ಹಿಂದೆ ಪೌಡರ್ ಹೊಡೆದುಕೊಳ್ಳೋ ಪದ್ಧತಿ ಇರಲಿಲ್ಲ. ಈಗ ಅವೆಲ್ಲ ಇರೋದ್ರಿಂದ ಮುಖವರ್ಣಿಕೆ ಮಾಡಿಕೊಳ್ಳೋದು ಹೆಚ್ಚು ಖುಷಿ ಕೊಡ್ತದೆ. ನನಗೆ ಹೆಚ್ಚು ಸೂಕ್ಷ್ಮವಾಗಿ ಬಣ್ಣ ಮಾಡಿಕೊಳ್ಳೊ ರೂಡಿ ಮೊದ್ಲಿಂದ. ನಾನು ಯಾವುದಕ್ಕೆ ಗಡಿಬಿಡಿ ಮಾಡಿಕೊಂಡ್ರೂ ಇದಕ್ಕೆ ಮಾಡ್ತಿರಲಿಲ್ಲ. ನನ್ನ ಬಣ್ಣಗಾರಿಕೆ ಮೆಚ್ಚಿಕೊಂಡವರಲ್ಲಿ ಕೆರೆಮನೆ ಶಿವರಾಮ ಹೆಗಡೆಯವರು ಒಬ್ಬರು. ಗುಂಡುಬಾಗದಲ್ಲಿ ಹರಕೆ ಆಟವು – ಶಿವರಾಮ ಹೆಗಡೆಯವರು ಇರ‍್ತಿದ್ದರು. ಗದಾಯುದ್ಧದ ಭೀಮ, ಕೌರವ, ಚಿತ್ರಸೇನ, ಕೀಚಕ ಮುಂತಾದ ವೈವಿಧ್ಯಮಯ ಪಾತ್ರ ಮಾಡ್ತಿದ್ದರು. ದಕ್ಷಿಣೋತ್ತರ ದೊಡ್ಡ ಕಲಾವಿದರು ಆಮೇಲೆ ನನ್ನ ನೋಡಿ ಖುಷಿ ಆಯ್ತು. ನನಗೆ ಯಾವಾಗಲೂ ಮೇಕಪ್ ಮೇಲೆ ಬಹಳ ಹಿಡಿತ. ಮೀಸೆ ಹಚ್ಚುವುದು ಇತ್ಯಾದಿ.. ಆದರೆ ಅವರು ಬಹಳ ದೊಡ್ಡ ಕಲಾವಿದರು. ಆದರೂ ನಾನು ಮೀಸೆ ಹಚ್ಚಿಕೊಡಬೇಕಾಗಿತ್ತು. ಹುಟ್ಟು ಮೀಸೆ ಇರತಿತ್ತು. ಅದರ ಮೇಲೆ ಹಚ್ಚಬೇಕಾಗಿತ್ತು. ಕೊನೆ ಕೊನೆಗೆ ಅವರೇ ಹಚ್ಚಿಕೊಂಡು ನನ್ನ ಹತ್ತಿರ ಸ್ವಲ್ಪ ಮುಟ್ಟಿ ಬಿಟ್ಬಿಡು ಅಂತಿದ್ರು. ನಾನಂದ್ರೆ ಬಹಳ ಖುಷಿ. ಅಲ್ಲಿಂದ ನನಗೆ ಅವರ ಮೇಲೆ ಆಕರ್ಷಣೆ ಹೆಚ್ಚಿತು. ಇಷ್ಟು ದೊಡ್ಡ ಕಲಾವಿದರು ನನ್ನನ್ನು ಪ್ರೀತಿ ಮಾಡ್ತಾರಲ್ಲ ಅಂತ. ಭಕ್ತಿ, ಗೌರವ ಎರಡು ಇತ್ತು. ಮಾಬ್ಲ ಹೆಗಡೆಯವರು ಇರ‍್ತಿದ್ದರು. ಅವರು ಹಾಗೆ ಅದ್ಬುತ ಕಲಾವಿದರು. ಒಂದು ವೇಳೆ ಆದರೆ ಅಪ್ಪಿಕೊಂಡೆ ಮಾತಾಡೋದು. ಅವರು ಜಮದಗ್ನಿ ಮಾಡಿಕೊಂಡು ಹೊರಟಾಗ ರೇಣುಕೆಯನ್ನು ೩ ಸಲ ಕರಿತಾರೆ. ಮೂರನೇಸಲ ತಾರಕದಲ್ಲಿ ಕರೆದಾಗಲೇ ಬರಬೇಕು. ನಾನು ಅದನ್ನೇ ಮಾಡ್ತಿದ್ದೆ. ಅವರಿಗೆ ಅದು ಖುಷಿ. ನನ್ನನ್ನು ಹಲವು ಕಲಾವಿದರು ಮೆಚ್ಚಿದ್ದು ನಾನು ಅವರಿಗೆ ಒದಗಿದ್ದು ಎನ್ನುತ್ತಾರೆ. ಗುಂಡಬಾಳದಿಂದ ವೇದಾಹದ ವೃತ್ತ ವಿರಳ.

ಕೊಂಡದಕುಳಿ ಮೇಳ. ಕೆರೆಮನೆ ಇರುವಾಗಲೇ ಇಡಗುಂಜಿ ಮೇಳ ಎಂದು ಒಂದು ತಯಾರು ಮಾಡಿದ್ರು. ಅದು ಬಂದಾಯಿತು. ಕೊಂಡದ ಕುಳಿ ರಾಮ ಹೆಗಡೇರು ನಮ್ಮ ಮನೆಗೆ ಬಂದು ಕರೆದುಕೊಂಡು ಹೋದರು. ಎರಡು ವರ್ಷ ಇದ್ದೆ. ಅಲ್ಲಿಯೂ ಚಿಟ್ಟಾಣಿಯವರೇ ಶ್ರೀ ಪ್ರಭಾವ ಇದರಲ್ಲಿ ಪುರುಷ ವೇಷ. ಪ್ರಧಾನ ಸ್ತ್ರೀ ವೇಷದ ಕೊರತೆಯಿತ್ತು. ಹಿಮ್ಮೇಳ ಕೃಷ್ಣ ಕಡತೋಕ, ಜನಾರ್ಧನ ಹೆಬ್ಬಾರ ಇದ್ದರು.
ಕೆರೆಮನೆಗೆ ಕರೆದರು. ಅಲ್ಲಿ ಎರಡು ವರ್ಷ ತಿರುಗಾಟ. ಅಲ್ಲಿ ನೆಟ್ಟೂರು ಭಾಗದವರು. ನಂತರ ನರಸಿಂಹ ದಾಸರು ಬಂದ್ರು. ನಂತರ ಕೊಳಗೀ ಬೀಸ್ ಮೇಳ. ಅಲ್ಲಲಿ ನಾನು, ಚಿಟ್ಟಾಣಿ, ಕೊಂಡಕುಳಿಯವರು, ಗಜಾನನ ಭಂಡಾರಿ, ಹಳದೀಪುರ ಶ್ರೀ ವೇದಿಕೆ ಇದ್ದರು. ಸುಮಕ್ಷ, ಸೈರೇಂದ್ರಿ, ಮೇನಕೆ ಪಾತ್ರ ಮಾಡ್ತಿದ್ದರು. ಅಚ್ಚುಕಟ್ಟಾಗಿ ನಾಲ್ಕು ಮಾತನಾಡುವುದಿತ್ತು. ಹೀಗಿರುವಾಗ ಸುರತ್ಕಲ್ ಮೇಳದವರು ಹೇಳಿದ್ರು. ವರದರಾಜ ಪೈ, ಅನಂತರ ಕರೆದುಕೊಂಡು ಬಂದು ಬಿಡುತ್ತಿದ್ದರು. ವೇಷ ನೋಡಿ ನನಗೆ ಬರಲು ಹೇಳಿದರು.

ಮೂರನೇ ವರ್ಷ ಶೇಣಿಯವರು ಬರುವುದು ಎಂದಾಯಿತು. ಅವರು ಇರ‍್ತಾರೆ ಅಂದಕೂಡ್ಲೆ ನಾನು ಹೆದರಲು ಶುರು ಮಾಡಿದೆ. ಅವರ ಕೀರ್ತಿ ಕೇಳಿದ್ದೆ. ಯಾರನ್ನೂ ಮಿಕ್ಕಲು ಕೊಡುವುದಿಲ್ಲ. ಸ್ವರವೂ, ವಿದ್ವತ್ತೂ ಹಾಗೆ. ಕೌರವನನ್ನು ಅವರು ಮಾಡಿದರೆ ಅದೇಬರೆ ಕೃಷ್ಣನನ್ನು ಮಾಡಿದರೆ ಅದೇಬರೆ. ಹೀಗೆ ಎತ್ತರದ ಮಾತು. ಭಾಷೆಯ ಸಂದರ್ಭದಲ್ಲಿ ಅದು ಯಕ್ಷಗಾನಕ್ಕೆ ಬೇಕು ಅನ್ನುವುದನ್ನು ತೋರಿಸಿದರು. ಆಗ ಮಾತು ಕಡಿಮೆ ಇತ್ತು. ಅವರ ಜೊತೆ ಪಾತ್ರ ಮಾಡೋದೋ ಅಂತ ಬೀಥಿ ಆಗ್ತಿತ್ತು. ಬಣ್ಣ ಹಚ್ಚಲು ಕುಳ್ತಿದ್ದೆ. ಶನೀಶ್ವರ, ಅವರದು ವಿಕ್ರ, ನಾನು ಶನಿ. ಅಪ್ರತಿಮ ಒಮ್ಮೆ ಮಂಕಿಯಲ್ಲಿ ಆಡಾಗಿತ್ತು.

ಗೋವಿಂದ ಶಾನಭಾಗರು ಅಂತ ಮಾಡ್ಸಿದ್ರು. ಹೆಗಡೆಯವರ ವಿಕ್ರಮ, ನಾನು ಶನಿ. ಅವರು ವರದರಾಜ ಪೈ ಅವರಿಗೆ ಕೊಂಡಕುಳಿಯಲ್ಲಿ ಹೇಳಿದರು. ಅವರೇ ಫಿಕ್ಸ್, ಹೆದರಿಕೆ ಶುರು, ಇಲ್ಲಿಗೆ ಕೈತೊಳ್ಕೊಳ್ಳೋದೇನೋ ಅಂದ್ಕೊಂಡೆ. ಅವರು ಚೌಕಿಗೆ ಬಂದ್ರು. ಬರೋದೇ ಒಂದು ಗಾಂಭೀರ್ಯ. ದೊಡ್ಡ ಆಳು, ಬಣ್ಣದ ರಟ್ಟಿನ ಬಂದು ಕುಳಿತರು. ನಾನು ವೇಷ ಮಾಡ್ತಿದ್ದವನು ಎದ್ದು ನಿಂತು ಕೈ ಮುಗಿದೆ. ಅವರಿಗೆ ಖುಷಿ ಆಯ್ತು. ರಂಗ ಸ್ಥಳದ ಮೇಲೆ ನಿಮ್ಮ ಭೇಟಿ ಹೇಗಿದು?

ರಂಗದ ಮೇಲೆ ನಿಮ್ಮ ಅವರ ಸಂಬಂಧ ಹೇಗಿತ್ತು?

ನನ್ನ ಶನಿ ಪ್ರವೇಶ ಆಯ್ತು. ಶನಿ ಪ್ರವೇಶ ಆಗಬೇಕಾದರೆ ಪಕ್ಕದಲ್ಲಿ ಲೈಟ್ ಮಾಡುವವರ ಹತ್ತಿರದಿಂದ ನೋಡಿ ಖುಷಿಯಿಂದ ಹೋಗಿ ಕುಳಿತುಕೊಂಡರು. ಯಾವಾಗಲೂ ಅವರು ಸರಿಕಾಣದ್ದನ್ನು ಸಟ್ಟನೆ ಹೇಳುವುದಿದೆ. ಮಾಬ್ಲ ಹೆಗಡೆಯವರೂ ಹಾಗೆ. ಮೇಳದ ಯಜವಾದರಾದ ವರದರಾಜ ಪೈ ಅವರಿಗೆ “ವರದಣ್ಣ ಇವರ ವೇಷ ಪಾಸು” ಎಂದರಂತೆ. ನಾನು ಪ್ರವೇಶ ಮುಗಿಸಿ ಒಳಗೆ ಬಂದೆ. ಅವರು ಅಲ್ಲಿ ನನ್ನ ಬಗ್ಗೆ ಮಾತನಾಡುತ್ತಿದ್ದರು. ಬೆಳಿಗೆ ಅವರಲ್ಲಿ ಹೋಗಿ ಏನಾದ್ರೂ ಹೇಳಬೇಕು, ತಪ್ಪಿದ್ದಿದ್ರೆ ಎಂದೆ. ಅದಕ್ಕವರು ಅದು ಈಗ ಹಾಗೆ ಇರಲಿ ಮತ್ತು ಅದು ನಾಲ್ಕು ಆದಾಗ ಹೇಳ್ತೇನೆ ನಾನು.

ಇದು ಇಷ್ಟಕ್ಕೆ ನಿಲ್ಲೋದಿಲ್ಲ. ಒಂದು ರೌಂಡ್ ಆಗಿ ಇನ್ನೊಂದು ರೌಂಡಿಗೂ ಅದು ಆಗ್ತದ್ದೆನ. ಅದರ ಬಗ್ಗೆ ಯೋಚನೆ ಮಾಡಬೇಡ. ನೀನು ಅಳುಕ ಬೇಕಾದ ಅಗತ್ಯವೇ ಇಲ್ಲ. ಅದೇ ಸ್ಪೂರ್ತಿಯಿಂದ ನಡೆ. ವರ್ಷಕೂಡ ಹಲವರು ಚೌಕಿಗೆ ಬಂದು ಜಲವಳ್ಳಿಯವರಿದ್ದಾರಾ? ಎಂದು ಕೇಳುವಷ್ಟು ಜನರ ವಿಶ್ವಾಸಗಳಿಸಿದೆ. ಉಳಿದ ಕಲಾವಿದರು ಆಗ ಸ್ವಲ್ಪ ಬೇಸರ ಮಾಡಿಕೊಂಡಿದ್ದಿದೆ. ಆಗ ಶೇಣಿಯವರು ಅವರ ಶ್ರಮಕ್ಕೆ ಅವರಿಗೆ ಪ್ರತಿಫಲಸಿಕ್ಕಿದೆ. ನೀವ್ಯಾಕೆ ಹೊಟ್ಟೆಕಿಚ್ಚು ಮಾಡ್ತೀರಿ ಎಂದು ಕೇಳುತ್ತಿದ್ದರು.

ಆ ಮೇಳದಲ್ಲಿ ಒಳ್ಳೊಳ್ಳೆ ಕಲಾವಿದರಿದ್ದರು. ಬಣ್ಣದ ಮಾಲಿಂಗ, ರಘುರಾಮ ಭಾಗವತರು ಮುಂತಾದವರಿದ್ದರು. ಇವರೆಲ್ಲಾ ನನ್ನನ್ನು ಬೆಂಬಲಿಸಿದರು. ನಾನಾದರೂ ಮಾತಾಡ್ತಿರಲಿಲ್ಲ, ಜಗಳಕ್ಕೂ ಹೋಗ್ತಿರಲಿಲ್ಲ. ನಾನು ಅಲ್ಲಿಗೆ ಹೊಸಬ ಮತ್ತು ಯಾವಾಗಲೂ ಜಗಳಕ್ಕೆ ಹೋಗ್ತಿರಲಿಲ್ಲ.

ಮುಂದಿನ ನಿಮ್ಮ ನಡೆ ಸಾಲಿಗ್ರಾಮದ ಕಡೆಗೆ.

ಆಗ ಸಾಲಿಗ್ರಾಮ ಮೇಳ ಸ್ವಲ್ಪ ಡಲ್ ಆಗಿತ್ತು. ದೇವರು ಹೆಗಡೆಯವರ ಸ್ವರ ಒಡೆದು ಹೋಗಿತ್ತು. ಕುಮಟಾ ಗೋವಿಂದ ನಾಯ್ಕ ಅವರ ಶಕಾರ ಮಾಡ್ತಿದ್ದ. ಅದು ಅವನ ಫೇಮಸ್ ಪಾರ್ಟು. ನನ್ನ ಶನಿ ಇದ್ದ ಹಾಗೆ. ಆದ್ರೆ ಮೇಳಕ್ಕೆ ದುಡ್ಡು ಆಗ್ಲೇ ಇಲ್ಲ.

ತೆಂಕಿನ ಮೇಳದ ಸವಾಲನ್ನು ಹೇಗೆ ಸ್ವೀಕರಿಸಿದಿರಿ?

ನನಗೆ ತೆಂಕಿನ ಮೇಳಕ್ಕೆ ಹೋಗಿರುವುದರಿಂದ ರಗಳೆ ಅನ್ನಿಸಲಿಲ್ಲ. ಯಾಕೆಂದರೆ ಅವರೆಲ್ಲ ನನಗೆ ಬೇಗ ಹೊಂದಿಕೊಂಡರು. ನನಗೆ ಲಯದ ಜ್ಞಾನ ಮೊದಲೇ ಇರೋದ್ರಿಂದ ತೊಂದರೆ ಅನ್ನಿಸಲಿಲ್ಲ. ಕಷ್ಟವೂ ಆಗ್ಲಿಲ್ಲ.

ನಿಮಗೆ ಹೆಸರು ತಂದು ಕೊಟ್ಟ ಪಾತ್ರಗಳೆಲ್ಲ ಖಳ ಪಾತ್ರಗಳು. ಅದರಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು? ನಿಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂಬ ವಿಶ್ವಾಸ ಇರುವ ಪಾತ್ರ?

ನಾನು ಚಿತ್ರಾಕ್ಷಿ ಕಲ್ಯಾಣದಲ್ಲಿ ರಕ್ತಜಂಗಾಸುರನ ವೇಷ ಮಾಡ್ತಿದ್ದೆ. ಅದನ್ನು ಕಡತೋಕ ಕೃಷ್ಣ ಭಾಗವತರು ಆಯ್ಕೆ ಮಾಡಿ ಕೊಟ್ಟಿದ್ರು. ಚಿಟ್ಟಾಣಿಯವರ ರುದ್ರ ಕೋಪ ಅದು ಜನ ಮೆಚ್ಚುಗೆ ಪಡೆದರು. ನಂತರ ರಾವಣ, ದುಷ್ಟಬುದ್ಧಿ, ಶನೀಶ್ವರ, ವಟುಭೀಮ, ಕಂಸ, ಇವೆಲ್ಲ ಇಷ್ಟದ ಪಾತ್ರ. ಅದೆಲ್ಲಕ್ಕಿಂತ ಹೆಸರು ತಂದಿದ್ದು ಶನಿ ಪಾತ್ರ. ದಕ್ಷಿಣದಲ್ಲಿ ಮಾತ್ರವಲ್ಲ, ಚಿಕ್ಕಮಗಳೂರು, ಮೂಡಗೆರೆ, ಮಡಿಕೇರಿ ಆಕಡೆಗೆ ಪ್ರದರ್ಶನ ಆಗ್ತಿತ್ತು. ಕಾಫಿ ಎಸ್ಟೇಟಿನ ಮೆನೇಜರರೆಲ್ಲಾ ದೊಡ್ಡ ದೊಡ್ಡ ಶ್ರೀಮಂತರು.

ಅವರು ಕುಟುಂಬ ಸಮೇತ ಆಟಕ್ಕೆ ಬರೋರು. ಬೆಳಗ್ಗೆ ಶನೇಶ್ವರನ ವೇಷ ತೆಗೆಯೋದಕ್ಕೆ ಕೊಡ್ತಿರಲಿಲ್ಲ. ಬಂದು ಪಾದಗಾಣಿಕೆ ಮಾಡಿ, ಮನೆ ಮಂದಿ ಎಲ್ಲಾ ಕೈ ಮುಗಿದು ಹೋಗ್ತಿದ್ದರು. ೩೦೦-೪೦೦-೫೦೦ರೂ ನನಗೆ ಕಾಣಿಕೆ ಕೊಡ್ತಿದ್ದರು. ಇವನ್ನೆಲ್ಲಾ ಶೇಣಿಯವರು, ಕಸ್ತೂರಿ ಮಾಸ್ತಿ ಪೈ ಅವರು ನಿಬ್ಬೆರಗಾಗಿ ನೋಡ್ತಿದ್ದರು. ಒಬ್ಬ ಕಲಾವಿದ ಪಾತ್ರ ಮಾಡ್ತಾನೆ ಅಂತ ಟಿಕೇಟ್ ತಕೊಂಡು ಬರೋರು. ಆದರೆ ರಾತ್ರಿ ಆಟ ನೋಡಿ ನೋಡಿ ಬೆಳಿಗ್ಗೆ ಹೋಗುವಾಗ ಇಷ್ಟೊಂದು ಭವುಕರಾಗಿ ಪಾದಕ್ಕೆ ದುಡ್ಡು ಹಾಕಿ ಹೋಗೋದು ಎಂಥಾ ಆಶ್ಚರ್ಯ ಮಾರಾಯ ಎನ್ನುತ್ತಿದ್ದರು. ಶೇಣಿಯವರು ಯಕ್ಷಗಾನ ಮತ್ತು ನಾನು ಎನ್ನುವ ಅವರ ಪುಸ್ತಕದಲ್ಲಿ ನನ್ನಬಗ್ಗೆ ಬರೆದಿದ್ದಾರೆ. ಶನೀಶ್ವರನ ಬಗ್ಗೆ ಬರೆದಿದ್ದಾರೆ. ಬದುಕು ಸಾರ್ಥಕ ಅನ್ನಿಸಿತು.

ನಿಮ್ಮ ಮತ್ತು ಕಾಳಿಂಗ ನಾವುಡರ ಸಂಬಂಧದ ಬಗ್ಗೆ ಹೇಳಿ.

ಸಾಲಿಗ್ರಾಮ ಮೇಳಕ್ಕೆ ಬಂದ ಮೇಲೆ ಭಾಗವತರ ಕೊರತೆ ಆಯ್ತು. ಆಗೆಲ್ಲಾ ಕಾಳಿಂಗ ನಾವುಡರು, ನಾವು ಎಲ್ಲ ಬೆಂಗಳೂರಲ್ಲಿ ಒಟ್ಟಾಗಿರ‍್ತಿದ್ದೆವು. ನಾನು ಹಿಂದೆ ಗುಂಡಬಾಳ ಮತ್ತು ಕೊಳಗಿಬೀಸ್ ಮೇಳದಲ್ಲಿ ಇರುವಾಗ ಅವರ ತಂದೆಯವರು ನಮ್ಮ ಮೇಳಕ್ಕೆ ಬಂದಿದ್ರು. ರಾಮಚಂದ್ರನಾವುಡರು ಅಂತ ಆಗ ಈ ಮಾಣಿ ನಮ್ಮ ವಿಧ್ಯಾದರನಷ್ಟು ದೊಡ್ಡವ ಆಗಲೇ ಅಪ್ಪ ಭಾಮಿನಿ ವಾರ್ಧಕ್ಯ ಹೇಳಿ ಎಲ್ಲಿ ಮುಗಿಸ್ತಾನೋ ಅಲ್ಲಿಂದ ಮುಂದಿನ ಸಾಲಿಗೆ ಬಾಯಾಕ್ತಿದ್ದ ಅಷ್ಟು ಸಣ್ಣ ಹುಡುಗ ನಮ್ಮನ್ನೆಲ್ಲಾ ಪ್ರೀತಿಯಿಂದ ನೋಡ್ತಿದ್ದರು. ನಮ್ಮ ತೊಡೆಯ ಮೇಲೆಲ್ಲಾ ಕೂತ್ಕೊತ್ತಾ ಇದ್ದ. ನಮ್ಮೊಂದಿಗೆ ಮಲಗ್ತಿದ್ದ. ತಂದೆ ಒಟ್ಟಿಗೆ ಓಡಾಡ್ತ ಇದ್ದ. ಈ ಬಾಂಧವ್ಯ ಮೊದಲಿನಿಂದ ಇತ್ತು. ಒಂದಿನ ಅವರ ಹತ್ತಿರ ಹೋಗಿ ನಿಮಗೆ ನಿಜವಾಗಿ ಭಾಗವತರಾಗಿ ವೊಡಾಡುವ ಯೋಗ್ಯತೆ ಬಂದಿದೆ.

ಸಾಲಿಗ್ರಾಮ ಮೇಳಕ್ಕೆ ಒಳ್ಳೆ ಭಾಗವತರು ಬೇಕು. ನೀವು ಬರೋದಾದ್ರೆ ಯೋಗ್ಯ ಗೌರವದೊಂದಿಗೆ ಅಲ್ಲಿಗೆ ಅಲ್ಲಿಗೆ ಬರಮಾಡಿಕೊಳ್ಳುವ ಕೆಲಸ ಮಾಡ್ತೆ. ಹೇಗೂ ನಿಮ್ಮ ತಂದೆಯವರು, ನಂದು, ನಿತ್ಯದ ಒಡನಾಟ ಮೊದ್ಲಿಂದಲೂ ಇದೆ ಅಂದೆ. ಯಾಕೆ ಹೆಗ್ಡೆರು ನೇರ ನನ್ನನ್ನ ಕೇಳದೆ ಬೇರೆಯವರ ಹತ್ತಿರ ಹೇಳಿ ಕಳಿಸ್ತಾರೆ ಅನ್ನೋ ಅರ್ಥದಲ್ಲಿ ಮಾತನಾಡಿದರು. ನಾನೂ ಉತ್ತರ ಕೊಟ್ಟೆ. ಯಾಕೆಂದರೆ ಸೋಮನಾಥ ಹೆಗಡೆಯವರು ಅಂದ್ರೆ ದ.ಕ ದ ಮೇಳದ ಸಾವ್ಕಾರರ ಸಾಲಿನಲ್ಲಿ ಒಳ್ಳೆಯವರು, ಗಂಭಿರ ಜನ. ನಿಮ್ಮ ವಯಸ್ಸಿಗೂ ಅವರ ವಯಸ್ಸಿಗೂ ತುಂಬಾ ವ್ಯತ್ಯಾಸ ಇದೆ. ಒಂದು ವೇಳೆ ನೀವು ಬರೋದಿಲ್ಲ ಅಂದ್ರೆ ಅವರ ಗೌರವಕ್ಕೆ ಕೊರತೆ ಅಲ್ವ ಅದಕ್ಕಾಗಿ ಆ ಮೇಳದ ಎರಡನೇ ವೇಷಧಾರಿ ನಾನು ನನ್ನನ್ನು ಕೇಳಿಸಿದ್ದಾರೆ.

ನೀವು ಏನು ಹೇಳ್ತಿರೀ ಎಂದು ಕೇಳಿದೆ ‘ಆಯ್ತು’ ಎಂದರು. ಆಗ ಉಡುಪಿ ರಾಜಾಂಗಣದಲ್ಲಿ ಒಂದು ಆಟ ಇತ್ತು. ಕಾರ್ತಿವಿರ್ಯಾರ್ಜುನ ಆಗಿನ ಕಾಲದಲ್ಲಿ ೧೦೦ ರೂ ಟಿಕೇಟ್. ಆಗ ಜಲವಳ್ಳಿಯವರಿಗೆ, ಶಂಭು ಹೆಗಡೆಯವರಿಗೆ ಜೊಡಿ ಆಗದು. ಶಂಭು ಹೆಗಡೆಯವರು ಕಾರ್ತಿವಿರ್ಯ, ನಂದು ರಾವಣ ಎಂದರು. ನಾನು ಒಪ್ಪಿದೆ. ಶಂಭು ಹೆಗಡೆಯವರು ಹೇಳ್ತಿದ್ದರು. ನನಗಿಂತ ನೀನು ಸೀನಿಯರ್ ಮಾರಾಯ ಹೆಗಡೆರು ಗೀಗಡೆರು ಅಂತೆಲ್ಲಾ ಹೇಳ್ಬೆಡ ಅಂತಿದ್ರು. ಪಾಪ ರಾಶಿ ಒಳ್ಳೆಯವರಾಗಿದ್ರು. ಒಂದಿನ ಮುಂಬೈ ಗೋಕುಲಕ್ಕೆ ಫೋನ್ ಮಾಡಿ ಕರೆದ್ರು. ಹೌದೆನೋ ವೆಂಕಟೇಶ ನನ್ನೊಂದಿಗೆ ರಾವಣನ ಮಾಡಲು ಒಪ್ಪಿದ್ದು ಹೌದೇನೊ ಅಂದ್ರು. ಹೌದು ಅಂದೆ. ಒಳ್ಳೆಯದಾಯ್ತು. ಮತ್ಯರ‍್ನಾದ್ರೂ ಮಾಡಿಸಿಬಿಡೋರು ಅವರು. ಹಾಗಾಗಿ ಕೇಳಿಕೊಳ್ವಾ ಮಾಡಿದೆ ಅಂದ್ರು.

ಅವರು ರಂಗದಲ್ಲಿ ಒಂದು ಮಡಿ ಇಟ್ಟುಕೊಂಡವರು ಅವರು. ಅಲ್ಲಿ ಒಂದು ದುಡ್ದಾಯ್ತ ಮಾರಾಯ್ರೆ. ಅದೆಷ್ಟು ಅದು. ಕಾಳಿಂಗ ನಾವುಡರ ಸಾಲ ಎಲ್ಲಾ ತೀರಿ ಮತ್ತಾವುದು ಉಳಿತು ನೋಡಿ. ಅಲ್ಲಿಂದ ಸಾಲಿಗ್ರಾಮ ಮೇಳಕ್ಕೆ ಬಂದಿದ್ದೇ ಬಂದಿದ್ದು ಒಂದು ರೀತಿ ದಿಗ್ವಿಜಯ ಆಗೋಯ್ತು. ಇನ್ನೂ ಒಂದು ಸತ್ಯ ಹೇಳೋದಾದ್ರೆ ಕಾಳಿಂಗ ನಾವುಡರು ತೀರಾ ಹೋದಾಗಲೇ ನಾನು ನನ್ನ ಕಸುಬು ಬಿಡಬೇಕಾಗಿತ್ತು. ಅಲ್ಲಿಂದ ನನಗೆ ರಾಶಿ ಸೋಲಾಯ್ತು. ಯಜಮಾನಂಗೆ ನಾನು ಬೇಕಾಗಿತ್ತು; ಹಣ ಮಾಡಿಕೊಡಲು. ಆದ್ರೆ ನನಗೆ ತೊಂದರೆ ಆಯ್ತು.

ಇತ್ತೀಚೆಗೆ ಒಳ್ಳೆ ಭಾಗ್ವತರು ಬಂದಿದ್ದಾರೆ. ನಾನು ಮನೇಲಿರದೆ ಕಾಳಿಂಗ ನಾವುಡರು ನಮ್ನ ಅಲ್ಲ. ನನಗೆ ಚಿಟ್ಟಾಣಿಯವರ ಕೌರವನನ್ನು ಬಿಟ್ಟರೆ ಬೇರೆಯವರದು ಪೂರ್ಣ ಹಿಡಿನೋದಿಲ್ಲ. ಇತ್ತೀಚೆಗೆ ವಿದ್ಯಾಧರ ಚೆನ್ನಾಗಿ ಮಾಡ್ತಾನೆ ಅಂತ ರಾಶಿ ಜನ ಹೇಳ್ತಾರೆ. ನಾನು ತಲೆ ಅಲ್ಲಾಡಿಸ್ತೆ. ಪೂರ್ಣ ನಾನು ಒಪ್ಪಿಕೊಳ್ಳಿಲ್ಲ. ನಾನು ಅವನ ಪೂರ್ಣ ವೇಷವನ್ನು ನೋಡ್ಲಿಲ್ಲ.

೨೪ ವರ್ಷ ಸಾಲಿಗ್ರಾಮ ಮೇಳದಲ್ಲಿ ೨೪ ವರ್ಷ ಇದ್ದೆ. ಕಾರಣ ಕಾಳಿಂಗ ನಾವುಡರ ಭಾಗವತಿಕೆ, ಸೋಮನಾಥ ಹೆಗಡೆಯವರ ಯಜಮಾನಿಕೆ. ಕಲಾವಿದ ಯಜಮಾನರೊಂದಿಗೆ ಒಳ್ಳೆತನ ಉಳಿಸಿಕೊಳ್ಳಬೇಕು. ಅದು ಕಲಾವಿದನ ಘನಸ್ಥಿಕೆ ಉಳಿಸಿಕೊಳ್ಳೋದು. ಬಡತನ, ಸಾಲ ಎಲ್ಲಾ ಇರ‍್ತದೆ. ಅದು ಬೇರೆ. ನನಗೊಂದು ಇಚ್ಛೆ ಇತ್ತು. ಆಗ್ತದೆ ಅಂತ ನನಗೂ ಗೊತ್ತಿರಲಿಲ್ಲ. ಅವರಿಗೂ ಗೊತ್ತಿರಲಿಲ್ಲ. ಒಂದು ಮೇಳ ಮಾಡಿದ್ದಾನೆ. ಖುಷಿ ಆಯ್ತು.

ನಿಮ್ಮ ವೃತ್ತಿ ನಿಮಗೆ ತೃಪ್ತಿ ತಂದಿದೆಯೇ?

ಈವರೆಗೆ ನಾನು ನಿರೀಕ್ಷೆ ಮೀರಿ ಕೆಲಸ ಆಗಿದೆ. ಯಾರೇ ಆದ್ರೂ ಅವನಷ್ಟಿಗೆ ಅವ ಇರೋದು ದೊಡ್ಡ ಸಂಗತಿ ಅಲ್ಲ. ಸಮಾಜಕ್ಕೆ ಏನಾದರೂ ಮಾಡಬೇಕು. ಸಮಾಜಕ್ಕೆ ಏನು ಕೊಟ್ಟಾ ಎನ್ನುವುದು ಬೇಕಲ್ಲ. ಸಣ್ಣದಾಗಲಿ, ದೊಡ್ಡದಾಗಲಿ. ನಾನೂ ಸೂಚನೆ ಮಾಡ್ದೆ. ನಮ್ಮೂರಿನಲ್ಲಿ, ಹೊರಗಿನವರಿಗೆ, ಬಡ ಕಲಾವಿದರಿಗೆ, ಬಡವರಿಗೆ ೫-೧೦ ಸಾವಿರ ಸಹಾಯ ನೀಡುವ ಕೆಲಸ ಮಾಡ್ತಿದ್ದಾನೆ. ಈ ಮೊದಲೊಂದು ಕಾಲದಲ್ಲಿ ಎಂಥಾಕ್ಕೆ ಬಂದೆ ಅನ್ನಿಸಿತ್ತು. ಪಗಾರ ಎಲ್ಲಾ ಕಡಿಮೆ ಇತ್ತು. ಆನರ ಪ್ರೀತಿ, ಗೌರವ ಎಲ್ಲಾ ಸಿಕ್ಕಿದೆ. ಸ್ವಯಾರ್ಜಿತವಾಗಿ ಗಳಿಸಿದ್ದು. ಪರಂಪರೆ ಅಲ್ಲ. ಆದ್ರೆ ನನ್ನ ಮಗ ಅದನ್ನು ಮುಂದುವರಿಸಿದ್ದಾನೆ. ಇನ್ನು ಮೊಮ್ಮಕ್ಕಳು ತಯಾರಾಗಬೇಕು ಅಂತ ಒಂದು ಆಶಯ ಇದೆ. ನಾನು ಪಟ್ಟ ಬಡತನ, ತೊಂದರೆ ನನ್ನ ಮಕ್ಕಳಿಗೆ ಬರಬಾರದು. ಅಂತೂ ಸಂತೃಪ್ತಿ ಆಗಿದೆ.

‍ಲೇಖಕರು avadhi

March 7, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: