ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿ.ರಂ ಮೇಷ್ಟರ ಹೋಟೆಲ್ಲುಗಳು… 

ಕಿ ರಂ ಮೇಷ್ಟ್ರು ಇಲ್ಲವಾದ ದಿನ ಅವರ ಪ್ರಿಯ ಶಿಷ್ಯಂದಿರು ಹೋಟೆಲ್ ನಲ್ಲಿ ಗಡದ್ದಾಗಿ ತಿಂದು ಅವರನ್ನು ಸ್ಮರಿಸಿಕೊಂಡದ್ದೇ ಸ್ಮರಿಸಿಕೊಂಡದ್ದು..

ರೇಣುಕಾರಾಧ್ಯ. ಎಚ್.ಎಸ್.

ಕಿ.ರಂ ಮೇಷ್ಟು. ಮೇಷ್ಟ್ರು ನಮಗೆಲ್ಲ ಕಾವ್ಯವನ್ನು ಓದುವ ಹುಚ್ಚು ಕಲಿಸಿದ್ದರ ಜೊತೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಶುಚಿಯಾದ, ರುಚಿಯಾದ, ಗುಣಮಟ್ಟದ ತಿಂಡಿ ಸಿಗುತ್ತವೆ ಅನ್ನೋದನ್ನು ಹೇಳ್ತಾ ಇದ್ದರು,ಕೆಲವೊಮ್ಮೆ ಕರೆದುಕೊಂಡು ಹೋಗಿ ಕೊಡಿಸಿ ನಾವು ಹೊಟ್ಟೆತುಂಬಾ ತಿನ್ನೋದನ್ನು ನೋಡಿ ಖುಷಿ ಪಟ್ಟವರು.

ಮೇಷ್ಟರ ಯಾವುದೇ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋದರೂ, ಸಮಯವಿದ್ದರೆ ಮಿಸ್ ಮಾಡದೇ ನಾನು ಗೆಳೆಯರನ್ನು ಕರೆದುಕೊಂಡು ಹೋಗೋದು ಗುಂಡಪ್ಪನ ಹೋಟೆಲ್ ( ಶ್ರೀರಾಮವಿಲಾಸ, ಧರ್ಮರಾಯಸ್ವಾಮಿ ದೇವಸ್ಥಾನದ ಎದುರಿನ) ಗೆ. ಮತ್ತು ಜನಾರ್ಧನ ಹೊಟೆಲ್ಗೆ.( ಶಿವಾನಂದ ಸರ್ಕಲ್ ಹತ್ತಿರ)

ಮೊನ್ನೆ ಕಾವ್ಯ ಶಿವರಾತ್ರಿಗೆ ಬೆಂಗಳೂರಿಗೆ ಹೋದಾಗ ಹೋದದ್ದು ಅದೇ ಗುಂಡಪ್ಪನ ಹೊಟೆಲ್ಲಿಗೆ. ಗುಂಡಪ್ಪನ ಹೊಟೆಲ್ಲಿಗೆ ಎಷ್ಟು ಸಲ ಹೋದರೂ ಈ ದೊಮ್ಮರೋಟು ಸಿಕ್ತಾ ಇರಲಿಲ್ಲ. ಈ ಸಲ ಸಿಕ್ತು ಎರಡು ಪ್ಲೇಟ್ ತಿಂದೆ, ಅದರಲ್ಲಿ ಗೆಳೆಯ ಜಗ್ಗನಿಗೆ ಸಿಕ್ಕಿದ್ದು ಒಂದೇ ಸ್ಪೂನ್. ಎಂದಿನ ಮಾಮೂಲಿ ವಿಮೂರ್ತಿ ಮತ್ತು ಬಾದಾಮಿ ಹಾಲು ಕುಡಿದು ಕಾವ್ಯಶಿವರಾತ್ರಿಗೆ ಹೊರಟಾಗ ಮೇಷ್ಟು ನೆನಪು ಒತ್ತರಿಸಿಕೊಂಡು ಬಂದು ಆಗ
ನೆನಪಾಗಿದ್ದು ಇಷ್ಟು.

ಚಿತ್ರಸಂತೆ ಬೆಂಗಳೂರಲ್ಲಿ ಆರಂಭವಾಗಿದ್ದ ದಿನಗಳವು ಅನ್ನಿಸುತ್ತೆ.

ಅವತ್ತು ಚಿತ್ರಸಂತೆಗೆ ಹೋಗೋಣ ಎಂದಿದ್ದ ಮೇಷ್ಟು ಚಿತ್ರಸಂತೆಗೆ ಬಂದರು. ನಾನು ನನ್ನ ಮಡದಿಯೊಂದಿಗೆ ಗೆಳೆಯ ಮಂಜುನಾಥ್ ಸಿ ನೆಟ್ಕಲ್ ನೊಂದಿಗೆ ಹೋಗಿದ್ದೆ. ಚಿತ್ರಸಂತೆಯನ್ನು ಒಂದು ಸುತ್ತು ಹಾಕಿದ ನಂತರ ಮೇಷ್ಟು ನನ್ನನ್ನು ಮಡದಿಯನ್ನು, ಮಂಜನನ್ನೂ ಕರೆದುಕೊಂಡು ಅಲ್ಲೆ ಇದ್ದ ಅದುವರೆಗೂ ನಾನು ಹೋಗಿಲ್ಲದ ಜನಾರ್ಧನ ಹೋಟೆಲ್ಲಿಗೆ ಕರೆದುಕೊಂಡು ಹೋದರು. ಒಳಗೆ ಹೋಗಿ ಕೂತಮೇಲೆ “ಈ ಹೋಟೆಲ್ ಬಗ್ಗೆ ಗೊತ್ತೇನ್ರಿ ಕಾರಂತರು ಬೆಂಗಳೂರಿಗೆ ಬಂದ್ರೆ ಇಲ್ಲೆ ಉಳಿದುಕೊಳ್ತಾ ಇದ್ದದ್ದು ಎಂದು ಹೇಳಿ. ಸಾಗು ದೋಸೆ ಆರ್ಡರ್ ಮಾಡಿದರು. ದೋಸೆ ಬರೋದಕ್ಕೆ ತಡ ಆಗುತ್ತೆ ಅಂಥ ಕಾರಸೇವೆ ತರಿಸಿದರು. ತಿನ್ನಿ ಎಂದು ಹೇಳಿ , ಇಲ್ಲಿನ ಸಾಗು ದೋಸೆ, ಕಾರಾಸೇವೆಯ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗಲ್ಲ ರೀ” ಅಂದ್ರು ಕಾರಾಸೇವೆ ಮತ್ತು ದೋಸೆ ತಿಂದಾದ ಮೇಲೆ ಗೊತ್ತಾಗಿತ್ತು ಮೇಷ್ಟ್ರ ಮಾತಿನ ಅಥೆಂಟಿಸಿಟಿ ಎಂಥದ್ದು ಅಂಥ.

ದೋಸೆ,ಕಾರಾಸೇವೆ ಜೊತೆಗೆ ಕಾಫಿ ಕೊಡಿಸಿ, ಖುಷಿಪಟ್ಟಿದ್ದ ಅವತ್ತಿನ ಮೇಷ್ಟ್ರು ಜನಾರ್ಧನ ಹೋಟೆಲಿನ ಸಾಗು ದೋಸೆ ಮತ್ತು ಕಾರಾಸೇವೆಯ ಘಮಲು ಮತ್ತು ರುಚಿ ಈಗಲೂ ನಾಲಿಗೆಯ ಮೇಲೆ ಇರುವಂತೆ ಇವತ್ತು ನೆನಪಿನ ನಾಲಗೆಯ ಮೇಲೆ ಅವತ್ತಿನ ಆ ಖುಷಿ ಹೊತ್ತ ಮುಖದಲ್ಲಿ ಕುಣಿಯುತ್ತಿದ್ದಾರೆ.

* ಜನಾರ್ಧನ ಹೊಟೆಲ್ಲಿನ ಸಾಗು ಮಸಾಲೆ, ಮತ್ತು ಕಾರಾಸೇವೆ, ಸಂಜೆ ಐದಕ್ಕೆ ತಿಂಡಿಗೆ ತೆರೆಯುವ ಈ ಹೊಟೆಲ್ಲಿನ ಸಾಗು ದೋಸೆಯ ರುಚಿ ಬೆಂಗಳೂರಲ್ಲಿ ಎಲ್ಲೂ ಸಿಗಲ್ಲ ಅನ್ನಿಸುತ್ತೆ. ಕಾರಾಸೇವೆಯಂತು ಅರ್ಧಗಂಟೆಯ ಒಳಗೆ ಖಾಲಿಯಾಗಿ ಬಿಡುತ್ತೆ.

ಇನ್ನೊಂದು ಹೋಟೆಲ್ ನಂದೀಶ್ವರ ಲಂಚ್ ಹೋಮ್. ಇದು ಲಾಲ್ ಬಾಗ್ ಬಳಿಯಿರುವ ಎಂಟಿಆರ್ ಎದುರಿನ ರಸ್ತೆಯಲ್ಲಿ, ಅಂದರೆ ಊರ್ವಶಿ ಥಿಯೇಟರ್ ಎದುರಿಗೆ ಇರುವ ಒಂದು ಸಣ್ಣ ಹೋಟೆಲ್ . ಇಲ್ಲಿನ ತಟ್ಟೆ ಇಡ್ಲಿಯ ರುಚಿ ತಿಂದೇ ಅನುಭವಿಸಬೇಕು… (ಈಗ ಈ ಹೋಟೆಲ್ ಇದೆಯೋ ಇಲ್ಲವೋ ಗೊತ್ತಿಲ್ಲ)

* ಗುಂಡಪ್ಪ ಹೋಟೆಲ್ಲಿನ ದೊಮ್ಮರೋಟು, ವಿಮೂರ್ತಿಸ್ವೀಟ್ ( ಅತ್ತ ಜಿಲೇಬಿಯೂ ಇತ್ತ ಜಾಂಗೀರು ಅಲ್ಲದ ಸ್ವೀಟು,) ಬಾದಾಮಿ ಹಾಲು, ಜಾಮೂನು, ಕಾರಸೇವೆ.

‍ಲೇಖಕರು avadhi

7 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading