'ಮಹಾನಿರ್ವಾಣ್ ೪೦ ವರ್ಷ' – ಅಹಲ್ಯಾ ಬಲ್ಲಾಳ್

– ಅಹಲ್ಯಾ ಬಲ್ಲಾಳ್

ಸತೀಶ್ ಆಲೇಕರ್, ಮಹಾನಿರ್ವಾಣ್…..
ಅದೆಷ್ಟೋ ದಿನಗಳಿಂದ ಎಲ್ಲೋ ಕೇಳಿ ಇನ್ನೆಲ್ಲೋ ಓದಿ, ಮನೋನೇಪಥ್ಯದ ಯಾವುದೋ ಮೂಲೆಯಲ್ಲಿ ಉಳಿದುಕೊಂಡ ಎರಡು ಹೆಸರುಗಳು! ಕೆಲವು ವರ್ಷಗಳ ಹಿಂದೆ ಆಲೇಕರರ ತಂಡದ ಮರಾಠಿ ‘ನಾಗಮಂಡಲ’ ನೋಡಿದ ಅಷ್ಟಿಷ್ಟು ನೆನಪು ಮತ್ತು ನಮ್ಮ ಬಿ. ವಿ. ಕಾರಂತರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ'(ಲೇ: ವೈದೇಹಿ) ಪುಸ್ತಕದಲ್ಲಿ ಕಂಡ ಉಲ್ಲೇಖ -ಇವಿಷ್ಟು ಬಿಟ್ಟರೆ ಈ ನಿಟ್ಟಿನಲ್ಲಿ ನನ್ನ ಪ್ರಗತಿ ಊಂಹೂಂ … ಏನೂ ಇಲ್ಲ. ಕೊನೆಗೆ ಇತ್ತೀಚೆಗೆ ನನ್ನ ಪಾಲಿನ ರಂಗಪರದೆ ಸರಿಯಿತು. ಸಂದರ್ಭ: ಸಂಜನಾ ಕಪೂರ್ ಮತ್ತು ಸಮೀರಾ ಐಯಂಗಾರ್ ಇವರ ‘ಜುನೂನ್’ ಸಂಸ್ಥೆ ಆಯೋಜಿಸಿದ ಮುಂಬೈ ಲೋಕಲ್ ಕಾರ್ಯಕ್ರಮ. ಕಲೆಗಳನ್ನು ಮಹಾನಗರದ ಸಮುದಾಯಗಳತ್ತ ಒಯ್ಯುವ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮದಲ್ಲಿ ತಿಂಗಳಲ್ಲಿ ನಾಲ್ಕು ಬಾರಿ ನಾಲ್ಕು ಬೇರೆ ಬೇರೆ ತಾಣಗಳಲ್ಲಿ ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಖ್ಯಾತನಾಮರು ತಂತಮ್ಮ ಜೀವನದ ಪಯಣವನ್ನು ಪ್ರೇಕ್ಷಕರೊಡನೆ ಹಂಚಿಕೊಳ್ಳುತ್ತಾರೆ.

ನಾಟಕರಚನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಪದ್ಮಶ್ರೀ ಸತೀಶ್ ಆಲೇಕರ್ ಮತ್ತು ಅವರ ಕೃತಿವಿಶೇಷ ‘ಮಹಾನಿರ್ವಾಣ್’ (ಮರಾಠಿ, ೧೯೭೪) ಪರಿಚಯವಾಗಿದ್ದು ಹೀಗೆ. ಆಲೇಕರರು ವಿಜಯ್ ತೆಂದುಲ್ಕರ್ ಮತ್ತು ಮಹೇಶ್ ಎಲ್ಕುಂಚವಾರ್ ಇವರ ಸಾಲಿಗೆ ಸೇರುವ ಅತ್ಯಂತ ಪ್ರಭಾವಶಾಲೀ ನಾಟಕಕಾರರು. ಮಹಾರಾಷ್ಟ್ರವಷ್ಟೇ ಅಲ್ಲ, ಭಾರತೀಯ ರಂಗಭೂಮಿಗೇ ಸಲ್ಲುವ ಅನುಭವವುಳ್ಳ ನಿರ್ದೇಶಕರೂ ಹೌದು. ನಟನೆ ಹಾಗೂ ಶಿಕ್ಷಣ ಇವರ ಇನ್ನಿತರ ಆಸಕ್ತಿಗಳು. ಪುಣೆ ವಿಶ್ವವಿದ್ಯಾಲಯದ ಲಲಿತ ಕಲಾ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಮುಖ್ಯಸ್ಥರಾಗಿದ್ದವರು. ರಂಗಭೂಮಿಯ ಬಗ್ಗೆ ಅಧ್ಯಯನ ನಡೆಸಲು ನ್ಯೂ ಯಾರ್ಕಿನ ಏಶಿಯನ್ ಕಲ್ಚರಲ್ ಕೌನ್ಸಿಲ್ ಮತ್ತು ದಕ್ಷಿಣ ಏಶಿಯಾ ರಂಗಭೂಮಿಯ ಅಧ್ಯಯನಕ್ಕಾಗಿ ಫೋರ್ಡ್ ಫೌಂಡೇಶನ್ನಿನ ಫೆಲೋಶಿಪ್ ಗಳನ್ನು ಪಡೆದವರು; ಭಾರತೀಯ ರಂಗಭೂಮಿಯ ಬಗ್ಗೆ ಕಲಿಸಲು ಮತ್ತು ಇವರದ್ದೇ ನಾಟಕವೊಂದರ ಇಂಗ್ಲಿಷ್ ನಿರ್ಮಿತಿಯನ್ನು ನಿರ್ದೇಶಿಸಲು ಹೊರದೇಶಗಳಲ್ಲಿ ಆಹ್ವಾನಿತರು, ಎನ್ನುತ್ತದೆ ವಿಕಿಪೀಡಿಯಾ. ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಎಷ್ಟೋ ಭಾಷೆಗಳಿಗೆ ಅನುವಾದಗೊಂಡು, ಎಷ್ಟೆಷ್ಟೋ ನಿರ್ದೇಶಕರ ಕಲ್ಪನೆಯಲ್ಲಿ ಮೂಡಿ ಬಂದು, ಹಲವು ಪ್ರಮುಖ ನಾಟಕಸಂಗ್ರಹಗಳ ಭಾಗವೇ ಆಗಿರುವ ಅನೇಕ ನಾಟಕಗಳನ್ನು ಬರೆದಿದ್ದಾರೆ. ಮಧ್ಯಮ ವರ್ಗದ ಸಮಾಜಕ್ಕೆ, ಅನುಭವಕ್ಕೆ ಕನ್ನಡಿ ಹಿಡಿದಿದ್ದಾರೆ ಮತ್ತು ಈ ಕನ್ನಡಿಯಲ್ಲಿ ವಾರೆನೋಟಗಳು ಹೇರಳ.ಇವರ ರಚನೆಗಳಲ್ಲಿ ತುಂಬ ಪ್ರಸಿದ್ಧವಾದವು ಎಂದರೆ ‘ಮಹಾನಿರ್ವಾಣ್’ (ಮರಾಠಿ)(‘The Dread Departure’ – English ರೂಪ;ಅನುವಾದ:ಗೌರಿ ದೇಶ್ಪಾಂಡೆ), ‘ಬೇಗಂ ಬರ್ವೇ’, ‘ಮಹಾಪೂರ್ ‘, ‘ಅತಿರೇಕೀ’, ‘ಪಿಢೀಜಾತ್ ‘, ‘ಏಕ್ ದಿವಸ್ ಮಠಾಕಡೆ’ ಇತ್ಯಾದಿ.
ಇದಿಷ್ಟು ಹಿನ್ನೆಲೆಯ ಒಂದು ಭಾಗ, ಸರಿ. ನನಗೆ ಅವರ ಸಾಧನೆಯ ಜೊತೆಜೊತೆಗೇ ಎದ್ದು ಕಂಡ ಅಂಶವೆಂದರೆ ಕಾರ್ಯಕ್ರಮದಲ್ಲಿ ಅವರಲ್ಲಿ ಕಂಡು ಬಂದ ಸರಳತೆ ಮತ್ತು ಅಪ್ಪಟ ವೃತ್ತಿಪರತೆ. ಯಾವ ಹಮ್ಮುಬಿಮ್ಮೂ ಇಲ್ಲದೆ ಓರ್ವ ಶಿಕ್ಷಕ ತನ್ನ ವಿಷಯದ ಬಗ್ಗೆ ಅತ್ಯಂತ ಆಸಕ್ತಿಯಿಂದ ವಿದ್ಯಾರ್ಥಿಗಳಲ್ಲಿಯೂ ಆಸಕ್ತಿ ಮೂಡಿಸುವ ಸುಂದರ ಪರಿ; ಪ್ರೇಕ್ಷಕರಲ್ಲಿ ಮರಾಠಿ ಅರಿಯದವರೂ, ತಮ್ಮ ನಾಟಕಗಳನ್ನು ನೋಡದವರೂ ಇರಬಹುದು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ‘ಮಹಾನಿರ್ವಾಣ್’ ನಾಟಕ ರಚನೆಯ ಹಿನ್ನೆಲೆ, ಅದರ ವಸ್ತು, ಸಮಕಾಲೀನ ನಾಟಕಕಾರರ ಕೃತಿಯ ಉಲ್ಲೇಖಗಳು, ತಾವು ಅಳವಡಿಸಿಕೊಂಡ ಫಾರ್ಮ್ ಮುಂತಾದವನ್ನು ಸೊಗಸಾಗಿ ನಿರೂಪಿಸಿದ ರೀತಿ.
ಇನ್ನು ಈ ನಾಟಕ ಹುಟ್ಟಿಕೊಂಡ ಹಿನ್ನೆಲೆ..
“ಒಬ್ಬ ವ್ಯಕ್ತಿ ಜನನ ಹಾಗೂ ಮರಣದ ಸಮಯದಲ್ಲಿ ತನ್ನ ಸಮಚಿತ್ತವನ್ನು ಕಳೆದುಕೊಂಡು ವಿಕ್ಷಿಪ್ತತೆಯನ್ನು ತೋರಿಸುತ್ತಾನೆ” ಎಂದರು.
ಒಂದು ಕಲಾಕೃತಿ ಹುಟ್ಟುವ ಹಿನ್ನೆಲೆ ತುಂಬ ಸಂಕೀರ್ಣ ಹಾಗೂ ವ್ಯಕ್ತಿನಿಷ್ಠ; ಇಂಥದ್ದೇ ಎಂದು ಬೆರಳು ಮಾಡಿ ತೋರಿಸಲಾಗದು. ಆದರೂ …ತಮ್ಮ ಅಜ್ಜಿ ತೀರಿಕೊಂಡಾಗ ಅಜ್ಜನಾಡಿದ ನುಡಿಗಳು ಆ ಸಮಯದಲ್ಲಿ ಪೂರ್ತಿ ಅರ್ಥವಾಗದಿದ್ದರೂ ಮನದ ಒಳಪದರದೊಳಗೆ ಹೇಗೋ ಸೇರಿಕೊಂಡಿವೆ. ಜೊತೆಗೆ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಲ್ಲಿ ಚೀರುತ್ತ ಗಂಡನಿಗೆ ಹಿಡಿಶಾಪ ಹಾಕುತ್ತಿದ್ದ ಮಹಿಳೆಯರ ಉದ್ಗಾರಗಳು…..ಇವೆಲ್ಲವೂ ಯಾವುದೋ ಪಾಕವಾಗಿ ಹದಗೊಂಡು ಕೃತಿ ಹುಟ್ಟಿಕೊಂಡಿರಬಹುದು!
ನನಗೆ ಎಲ್ಲಕ್ಕಿಂತ ತುಂಬ ಮೆಚ್ಚುಗೆಯಾಗಿದ್ದು ‘ 40 Years Of Death In Theatre- Mahanirvan’ ವಿಷಯಕ್ಕೆ ಅವರು ನೀಡಿದ ಪೀಠಿಕೆ. ಒಂದು ನಾಟಕದಲ್ಲಿ ವಾತಾವರಣ ಹೇಗೆ ‘ಚಾರ್ಜ್’ ಆಗುತ್ತದೆ ಎಂಬುದನ್ನು ಎರಡು ಕ್ಲಿಪ್ಪಿಂಗ್ ಗಳ ಮೂಲಕ ತೋರಿಸಿಕೊಟ್ಟರು. ಒಂದು – ಹೆಸರಾಂತ ಅಭಿನೇತ್ರಿ ಜೋಹ್ರಾ ಸೆಹಗಲ್ ಇವರು ಫೈಜ್ ಕವನವನ್ನು (ಮುಝ್ ಸೆ ಪೆಹ್ಲೀ ಸಿ ಮೊಹಬ್ಬತ್ ) ಅಭಿನಯಿಸಿದ್ದು (ಆಸಕ್ತರಿಗಾಗಿ ಕೊಂಡಿ: https://www.youtube.com/watch?v=B6SSbjcGWOg) , ಇನ್ನೊಂದು – ಹಾಡುಗಾರ್ತಿ ನೂರ್ ಜಹಾನ್ ಅದನ್ನೇ ಹಾಡಿದ್ದು. ಅಭಿನಯ ಮತ್ತು ಸಂಗೀತ ಇವೆರಡೂ ಎಂತಹ ಪರಿಣಾಮ ಉಂಟುಮಾಡುತ್ತವೆ ಎಂಬುದು ನಾಟಕಪ್ರೇಮಿಗಳಲ್ಲದವರಿಗೂ ಮನದಟ್ಟಾಯಿತು!
ಇದರ ನಂತರ ಮಹಾನಿರ್ವಾಣ್ ನಲ್ಲಿ ತಾವು ಅಳವಡಿಸಿಕೊಂಡ ಕೀರ್ತನಕಾರ ಶೈಲಿಗಾಗಿ ಉತ್ತಮ ಕೀರ್ತನಕಾರರೊಬ್ಬರ ಒಂದೆರಡು ಪರ್ಫಾರ್ಮನ್ಸ್ ಕ್ಲಿಪಿಂಗ್ಸ್ . ಯಾವುದೇ ಇಡಿಯಮ್ ಅನ್ನು ಆಯ್ಕೆ ಮಾಡುವಾಗ ಅದನ್ನು ಮೊದಲು ಸ್ವೀಕರಿಸಿ, ಅದರ ಒಳಹೊಕ್ಕು ಸಂಪೂರ್ಣವಾಗಿ ಅರಿತು ನಂತರವೇ ಅದನ್ನು ತಗ್ಗಿಸಿ ಬಗ್ಗಿಸಿ, ಮಾರ್ಪಡಿಸಿ, ಕತ್ತರಿ ಪ್ರಯೋಗ ಮಾಡಿ ನಮಗೆ ಬೇಕಾದ ಪರಿಣಾಮ ಉಂಟುಮಾಡಲು ಸಾಧ್ಯ; ಹಾಗಲ್ಲದೇ ಹೋದರೆ ಅದು ಕೃತಕವಾಗಿಬಿಡುತ್ತದೆ ಎಂದು ವಿವರಿಸಿದರು. ಅದಕ್ಕೆ ಪೂರಕವಾಗಿ ಮಹಾನಿರ್ವಾಣ್ ನಾಟಕದಲ್ಲಿ ಸಾವಿನಂತಹ ಗಂಭೀರ ವಿಷಯದ ಜೊತೆ ಸುತ್ತಲಿನ ಸಮಾಜವನ್ನು ಸೆರೆಹಿಡಿಯಲು ಸತ್ತ ವ್ಯಕ್ತಿಯೇ ಎದ್ದು ಕೀರ್ತನೆ ಹಾಡುವ, ವ್ಯಂಗ್ಯಮಿಶ್ರಿತ ಹಾಸ್ಯ ಸನ್ನಿವೇಶದ ಸೃಷ್ಟಿಯ ಮೂಲಕ ಮಧ್ಯಮವರ್ಗದ ಆಷಾಡಭೂತಿತನ ಮತ್ತು ಓರೆಕೋರೆಗಳ ಚಿತ್ರಣ; ಸಾಂಪ್ರದಾಯಿಕ ಫಾರ್ಮ್ ಮೂಲಕ ಮರಣದಂತಹ ಮರಣಕ್ಕೇ ಆಧುನಿಕ ವ್ಯಾಖ್ಯಾನವೊಂದನ್ನು ನೀಡುವುದರಿಂದ ಇಡೀ ನಾಟಕಕ್ಕೆ ಒದಗಿ ಬಂದ ಒಂದು ಸ್ವಂತಿಕೆ, ಒಂದು ಅದ್ಭುತ ಚೇತನ …… ಆಹಾ!
ಜೊತೆಗೆ ನಡುನಡುವೆ ಈ ನಾಟಕದ ಹಿಂದಿನ ಪ್ರಯೋಗದ ವಿಡಿಯೋ ಕ್ಲಿಪಿಂಗ್ಸ್ ಅಂತೂ live performance ನಲ್ಲಿ ಇದ್ದಿರಬಹುದಾದ energyಯ ಅಂದಾಜು ಕಲ್ಪನೆ ಕೊಡಿಸಿ, ಇಡೀ ಕಾರ್ಯಕ್ರಮವೇ ಒಂದು ಮಾಸ್ಟರ್ ಕ್ಲಾಸ್ ನ ಸ್ವರೂಪ ಪಡೆದು, ಕೊನೆಯಲ್ಲಿ ಪ್ರೇಕ್ಷಕರಲ್ಲಿ ‘ಅಬ್ಬಾ’ ಎಂಬ ಉದ್ಗಾರ ಸಹಜವಾಗೇ ಮೂಡಿಬಂತು!
ಇಂದಿನ ಉದಾರೀಕರಣ, ಜಾಗತೀಕರಣ ಮುಂತಾದವು ಮಧ್ಯಮವರ್ಗದ ವರ್ತನೆ, ಮನೋಭಾವ, ದಿಕ್ಕುದೆಸೆ ಹಾಗೂ ಆಶೋತ್ತರಗಳನ್ನು ಅದೆಷ್ಟೋ ರೀತಿಯಲ್ಲಿ ಬದಲಾಯಿಸಿರಬಹುದು, ನಿಜ. ಈ ನಾಟಕ ಇಂದಿನ ಪರಿಸರದಲ್ಲಿ ಬರೆಯಲ್ಪಟ್ಟಿದ್ದರೆ ಹೇಗಿರಬಹುದು ಎಂಬುದು ಸಹಜ ಪ್ರಶ್ನೆ. ತಮ್ಮ ಎಲ್ಲ irreverence ಮತ್ತು ironyಯ ನಡುವೆ ಆಲೇಕರ್ ಪ್ರಸ್ತುತವೆನಿಸುವುದು ಹೀಗೂ ಒಂದು ನೋಟ ಸಾಧ್ಯ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಇಂದು ಅದು ಅಗತ್ಯ ಎಂಬುದನ್ನು ತೋರಿಸಿಕೊಟ್ಟದ್ದಕ್ಕೆ. ಹೀಗೆ ಒಂದು ಪ್ರಾತ್ಯಕ್ಷಿಕೆಯ ಮೂಲಕ ಮರಾಠಿ ರಂಗಭೂಮಿಯ ಮಹತ್ತರ ಭಾಗವೊಂದರ ಪರಿಚಯವಾಗಿ, ನಾಲ್ಕು ದಶಕಗಳ ಹಿಂದೆ ಈ ನಾಟಕ ಉಂಟುಮಾಡಿರಬಹುದಾಗಿದ್ದ ಸಂಚಲನೆಯನ್ನು ಊಹಿಸಿಕೊಂಡೆವು. ಸಭೆಯಲ್ಲಿ ದೀಪಗಳು ಮರಳಿ ಬಂದಾಗಲೇ ನಾವೆಲ್ಲ ವರ್ತಮಾನಕ್ಕೆ ಮರಳಿದ್ದು!
 

‍ಲೇಖಕರು G

April 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Ritwik Simha

    The play was performed in kannada, in 1982. Directed by Sri C.R.Simha and performed by Team Nataranga.

    ಪ್ರತಿಕ್ರಿಯೆ
  2. girijashastry

    ಕನ್ನಡಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಅಹಲ್ಯಾ…ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಸ್ವಲ್ಪ formal ಅಗಿ ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    ಪ್ರತಿಕ್ರಿಯೆ
  3. Radhatanaya

    Being a theater person yourself, you have found the virtues in a person who has done yeoman service in Marathi language. It inspires one and all to read much more about him. You have very impressive kannada write up as well. Keep it up.

    ಪ್ರತಿಕ್ರಿಯೆ
  4. Anuradha.B.Rao

    ಲೇಖನ ಚೆನ್ನಾಗಿದೆ ಅಹಲ್ಯಾ .. ಗೊತ್ತಿರದ ಅನೇಕ ವಿಷಯಗಳು ತಿಳಿದಂತಾಯ್ತು . ಅಭಿನಂದನೆಗಳು .

    ಪ್ರತಿಕ್ರಿಯೆ
  5. Ahalya Ballal

    Ritwik Simha: Good to know. Wish I had seen it! Thanks for reading and responding.I have very fond memories of seeing C.R.Simha in and as Tughlak,here in Mumbai. Unforgettable.
    Girija: ನೀವು ಓದಿದ್ದು ಖುಶಿ!ಅಭಿಪ್ರಾಯಕ್ಕಾಗಿ ಥ್ಯಾಂಕ್ಸೂ 🙂

    ಪ್ರತಿಕ್ರಿಯೆ
  6. shaila

    ರಂಗಭೂಮಿಯ ಬಗ್ಗೆ passionate ಆಗಿ ಬರ್ದಿದ್ದೀರ. ಮರಾಠಿ ರಂಗಭೂಮಿ ಬಗ್ಗೆ ನಂಗೆ ಅದೇನೋ ಕೌತುಕ.ನಿಮ್ಮ ಲೇಖನ ಓದಿ ಸುಮಾರು ವಿಷಯಗಳು ತಿಳಿದಂತಾಯ್ತು. Nice and quite informative.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: