ಡೈಲಿ ಬುಕ್ : ಸಂತೋಷ್ ಬಾಗಿಲಗದ್ದೆ ಬರೆದ ’ನೀನೇ ಉಸಿರು ನನ್ನೊಲವೆ’

ಸಂತೋಷ್ ಬಾಗಿಲಗದ್ದೆ ಬರೆದ ’ನೀನೇ ಉಸಿರು ನನ್ನೊಲವೆ’ ಪುಸ್ತಕವನ್ನು ಪಾಲ್ಗುಣಿ ಪ್ರಕಾಶನ ಸುಂದರವಾಗಿ ಹೊರತಂದಿದೆ

ನಿನ್ನೆ ಆ ಪುಸ್ತಕ ಬಿಡುಗಡೆ ಆಯಿತು

ಪುಸ್ತಕದ ಮುಖಪುಟ, ಲೇಖಕನ ಮಾತು, ಪ್ರಕಾಶಕರ ಮಾತು ’ಅವಧಿ’ ಓದುಗರಿಗಾಗಿ :

 

ಫಲ್ಗುಣಿ ಕಡೆಯಿಂದ

ಬರವಣಿಗೆಯ ತೆಕ್ಕೆಗೆ ಬಿದ್ದ ಮನಸು ಹೊರ ಜಗತ್ತಿನ ಪರಿಧಿಯಾಚೆಗಿನ ಅನೂಹ್ಯ ಲೋಕವೊಂದರಲ್ಲಿ ಅಡ್ಡಾಡಲಾರಂಭಿಸುತ್ತದೆ. ಅದರ ಸಾಂಗತ್ಯದಿಂದಲೇ ಹೆಚ್ಚಿನ ಸಂದರ್ಭಗಳಲ್ಲಿ ಮುದ್ದಾದ ಮುಗ್ಧತೆ, ಮಧುರವಾದೊಂದು ಅಂತಮರ್ುಖಿ ವಾತಾವರಣಕ್ಕೆ ಮನಸು ಒಗ್ಗಿಕೊಂಡು ಬಿಡುತ್ತದೆ. ಇಂಥಾ ಹಂತದಲ್ಲಿಯೇ ಅದೆಷ್ಟೋ ಕ್ರಿಯಾಶೀಲ ಬರವಣಿಗೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅದರಲ್ಲಿ ಅದೆಷ್ಟೋ ತೆರೆ ಮರೆಯಲ್ಲಿಯೇ ಉಳಿದು ಬಿಡುತ್ತವೆ. ಅದಕ್ಕೆ ಕಾರಣ ಆ ಬರಹಗಾರರ ಸಂಕೋಚ ಮತ್ತು ಒಳ್ಳೆಯದನ್ನ ಗುರುತಿಸಿ ಪ್ರೋತ್ಸಾಹಿಸುವವರ ಕೊರತೆ.
ಈ ದೆಸೆಯಿಂದಲೇ ಅದೆಷ್ಟೋ ಚೆಂದನೆಯ ಬರಹಗಳು ಹುಟ್ಟಿದಲ್ಲಿಯೇ ಕೊನೆಗಂಡಿವೆ. ಅದೆಷ್ಟೋ ಮಂದಿ ತಮ್ಮೊಳಗಿನ ಬರೆಯುವ ಕಸುವಿನ ಬಗ್ಗೆ ಅಪನಂಬಿಕೆಯಿಂದ ಬದುಕಿನ ಸಂತೆಯಲ್ಲೆಲ್ಲೋ ಕಳೆದು ಹೋಗಿದ್ದಾರೆ. ಎಂತೆಂಥಾದ್ದೋ ಬರಹ ಮೆರೆದ ಘಳಿಗೆಯಲ್ಲೆಲ್ಲ ತಮ್ಮನ್ನು ತಾವೇ ಹಳಿದುಕೊಂಡು ಸಂಕಟ ಪಡುವ ಪ್ರತಿಭಾವಂತರ ಸಂಖೈಯೂ ಲೆಕ್ಕವಿರದಷ್ಟಿದೆ. ಹಾಗೆ ಸಂಕೋಚದ ಚಿಪ್ಪಲ್ಲಿ ಅವುಸಿಟ್ಟುಕೊಂಡಿರುವ, ಸಂಪರ್ಕದ ಕೊರತೆಯೆದುರಿಸುತ್ತಿರುವ ಹೊಸಾ ಬರಹಗಾರರನ್ನ ಓದುಗರಿಗೆ ಪರಿಚಯಿಸಬೇಕೆಂಬುದು ನಮ್ಮ ಪ್ರಮುಖ ಉದ್ದೇಶ.
ನೀವೂ ಸಹ ಬಲು ಪ್ರೀತಿಯಿಂದ ಕಥೆ, ಕಾದಂಬರಿ ಅಥವಾ ಲೇಖನಗಳನ್ನ ಬರೆದಿದ್ದೀರಾ? ಅದನ್ನ ನಿಮ್ಮ ಕಟಾಂಜನದಿಂದ ಹೊರ ತೆಗೆದು ಧೂಳು ಕೊಡವಿ. ಯಾವುದೇ ಸಂಕೋಚವಿಟ್ಟುಕೊಳ್ಳದೆ ನಮಗೆ ಕಳುಹಿಸಿಕೊಡಿ. ಅದನ್ನ ಅಚ್ಚುಕಟ್ಟಾಗಿ ಮುದ್ರಿಸಿ ಓದುಗರಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ಆದರೆ ನೀವು ಕಳುಹಿಸುವ ಪ್ರತೀ ಬರಹದಲ್ಲಿಯೂ ಹೊಸತನ, ಕ್ರಿಯಾಶೀಲತೆ ಹಾಗೂ ಶ್ರದ್ಧೆಯನ್ನು ನಾವು ಖಂಡಿತವಾಗಿಯೂ ನಿರೀಕ್ಷಿಸುತ್ತೇವೆ.
ನಮ್ಮ ಮೊದಲ ಹೆಜ್ಜೆಗಳನ್ನು ಪ್ರೋತ್ಸಾಹಿಸಿ ತಮ್ಮ ‘ನೀನೇ ಉಸಿರು ನನ್ನೊಲವೆ’ ಎಂಬ ಪ್ರೇಮ ಪತ್ರಗಳ ಗುಚ್ವವನ್ನು ಪ್ರಕಟಿಸಲು ಅನುಮತಿ ನೀಡಿದ ನಮ್ಮ ನಡುವಿನ ಚೆಂದದ ಬರಹಗಾರ, ಪತ್ರಕರ್ತ ಸಂತೋಷ್ ಬಾಗಿಲಗದ್ದೆ ಅವರ ಪ್ರೀತಿಗೆ ನಾವು ಚಿರಋಣಿಗಳು. ‘ಫಲ್ಗುಣಿ ಪುಸ್ತಕ’ದ ಸದಸ್ಯರಲ್ಲಿ ಒಬ್ಬರಾಗಿರುವ ಸಂತೋಷ್ ಬಾಗಿಲಗದ್ದೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಇನ್ನೂ ದೊಡ್ಡ ಮಟ್ಟಕ್ಕೇರುವವರು. ಅವರ ಅಪಾರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಪ್ರತಿಫಲ ಸಿಗಲಿ ಎಂಬುದು ಫಲ್ಗುಣಿ ತಂಡದ ಎಲ್ಲರ ಆಶಯ.

ಫಲ್ಗುಣಿ ಪುಸ್ತಕ

 
ಇಲ್ಲಿರುವ ಪ್ರೇಮಪತ್ರಗಳನ್ನೊಮ್ಮೆ ನೀವು ಓದಿದರೆ, ಇವುಗಳನ್ನು ಬರೆದ ವ್ಯಕ್ತಿ ತುಂಬಾ ಮಾತುಗಾರನೋ, ಸುತ್ತಲಿನ ಜನರೊಂದಿಗೆ ಬೆರೆಯುವ ಮನಸ್ಥಿತಿಯವನೋ, ರಸಿಕನೋ ಇರಬೇಕೆಂಬ ಹತ್ತಾರು ರೀತಿಯ ಭಾವನೆ ಬಂದುಹೋಗಬಹುದು.
ವಿಚಿತ್ರವೋ ಏನೋ ಗೊತ್ತಿಲ್ಲ. ಮುತ್ತೋ, ಮಳೆಯೋ ಏನೇನೋ ಉದುರಿದಂತೆ ಪಟಪಟನೆ ಗಂಟೆಗಟ್ಟಲೆ ಮಾತಾಡುವವರ ಕೈಗೆ ಪೆನ್ನು ಕೊಟ್ಟರೆ ಎರಡು ಸಾಲೂ ಪೂತರ್ಿಗೊಳಿಸದೆ ಒದ್ದಾಡುತ್ತಾರೆ. ಸದಾ ಪ್ರೀತಿ, ಪ್ರೇಮ ಅಂತ ಕಾಲ ಕಳೆದವರಿಗೆ ಒಂದು ಲವ್ ಲೆಟರ್ ಬರೀ ನೋಡಣ ಅಂದರೆ ತಬ್ಬಿಬ್ಬಾಗಿಬಿಡುತ್ತಾರೆ. ತೀರಾ ಭಾವುಕರೆನಿಸಿಕೊಂಡವರಿಗೂ ಸಹ ಭಾವನೆಗಳನ್ನು ಕಟ್ಟಿಕೊಡುವ ನಾಲ್ಕು ಸಾಲು ಬರೆಯಲು ಸಾಧ್ಯವಾಗುವುದಿಲ್ಲ. ಆದರೆ ಗೆಳೆಯ ಸಂತೋಷ್ ಬಾಗಿಲಗದ್ದೆ ಇಲ್ಲಿ ತಿಳಿಸಿದ ಯಾವ ಕೆಟಗರಿಗೂ ಸೇರದವರು. ಆದರೆ ಎಂಥದ್ದೇ ವಿಷಯವಿರಲಿ, ತೀರಾ ಕಡಿಮೆ ಅವಧಿಯಲ್ಲಿ ಅದ್ಭುತವೆನ್ನುವಂತೆ ಬರೆಯಬಲ್ಲ ಟ್ಯಾಲೆಂಟೆಂಡ್ ರೈಟರ್ ಸಂತೋಷ್.
ಸಂತೋಷ್ರನ್ನು ನಮ್ಮ ಟೀಮಿಗೆ ಪರಿಚಯಿಸಿದ್ದು `ಗೌರಿ ಲಂಕೇಶ್’ ವಾರಪತ್ರಿಕೆ. ಗೆಳೆಯ ಹುಲಿಕುಂಟೆ ಮೂರ್ತಿ ಬಿಟ್ಟುಹೋದ ಜಾಗಕ್ಕೆ ಸಂತೋಷ್ರನ್ನು ನೇಮಿಸಿಕೊಂಡಿದ್ದರು. ಸದಾ ಲವಲವಿಕೆಯಿಂದಿದ್ದ ಮೂರ್ತಿಯ ಪ್ಲೇಸಿಗೆ ಬಂದಿದ್ದ ಈ ಆಸಾಮಿ ತಲೆಬಗ್ಗಿಸಿ ಬರೆಯಲು ಕೂತರೆ ಕತ್ತು ಮೇಲೆತ್ತುತ್ತಲೇ ಇರಲಿಲ್ಲ. ಲಂಕೇಶ್ಗೆ ಬರುವ ಮುಂಚೆಗಾಗಲೇ ಸಂತೋಷ್ ಸಿಕ್ಕಾಪಟ್ಟೆ ಸರ್ಕಸ್ಸುಗಳನ್ನು ಮಾಡಿ ಮುಗಿಸಿಕೊಂಡೇ ಬಂದಿದ್ದವರು. ಹಾಯ್ಬೆಂಗಳೂರಲ್ಲಿ ಒಂದಷ್ಟು ದಿನ, ನಂತರ ಅಗ್ನಿಯಲ್ಲೊಂದಿಷ್ಟು ವರ್ಷ ಇದ್ದು ಅದನ್ನೂ ಬಿಟ್ಟು ತನ್ನದೇ ದಾರಿಯಲ್ಲಿ ‘ಶೋಧ’ ಮಾಡಲು ಹೋಗಿ ಪ್ರಯೋಗದ ಹೊಡೆತ ತಿಂದುಬಂದಿದ್ದರು. ಸಂತೋಷ್ ಆಫೀಸಿಗೆ ಸೇರಿ ತಿಂಗಳುಗಳು ಕಳೆದರೂ ಇವರ ದನಿ ಹೇಗಿದೆ ಎಂಬುದರ ಪರಿಚಯವೂ ನಮಗಿರಲಿಲ್ಲ. ವಾರಕ್ಕೊಮ್ಮೆ ನಡೆಯುತ್ತಿದ್ದ ಅಸೈನ್ಮೆಂಟ್ ಮೀಟಿಂಗಲ್ಲಿ ಮೇಡಮ್ ಹೇಳಿದ್ದಕ್ಕೆ ತಲೆಯಾಡಿಸಿ ಸುಮ್ಮನಾಗಿಬಿಡುತ್ತಿದ್ದರು. “ಅದೇನು ಬರಿಯುತ್ತೋ ಇದು?” ಎಂದುಕೊಂಡವರು ಪತ್ರಿಕೆ ಪ್ರಿಂಟಿಗೆ ಹೋಗುವಷ್ಟರಲ್ಲಿ ಮೂಗು, ಬಾಯಿ ಎಲ್ಲೆಂದರಲ್ಲಿ ಕೈಯಿಟ್ಟುಕೊಳ್ಳುವಂತೆೆ ಬರೆದುಹಾಕುತ್ತಿದ್ದರು ಸಂತೋಷ್. ಸಂತೋಷ್ರ ಬರವಣಿಗೆಗೆ ಸ್ವತಃ ಆಫೀಸಿನಲ್ಲಿದ್ದ ನಾವೆಲ್ಲಾ ಅಭಿಮಾನಿಗಳಂತಾಗಿಬಿಡುತ್ತಿದ್ದೆವು. ಅಂಥಾ ಹರಿತ ಬರವಣಿಗೆಗಳು.
ಮಾತೇ ಆಡದೆ ಮಹಾಮೌನಿಯಂತಿರುವ ಈ ವ್ಯಕ್ತಿಗೆ ಇಷ್ಟು ಚೆಂದಗೆ, ಕಟುವಾಗಿ, ಮನಮುಟ್ಟುವ ಹಾಗೆ ಬರೆಯುವ ಕಲೆ ಹೇಗೆ ಬಂತೋ ಎಂದು ನಮ್ಮ ಟೀಮಿನವರು ಎಷ್ಟೋ ಬಾರಿ ಮಾತಾಡಿಕೊಂಡಿದ್ದಿದೆ. ಆಫೀಸಿನಲ್ಲಿ ಎಂಥದ್ದೇ ಅರಚಾಟವಿದ್ದರೂ ಜಗತ್ತಲ್ಲಿ ಏನೂ ಆಗುತ್ತಿಲ್ಲ ಎನ್ನುವಂತೆ ತಮ್ಮ ಪಾಡಿಗೆ ಸ್ಥಿತಪ್ರಜ್ಞರಾಗಿ ಕೂತು ಬರವಣಿಗೆಯ ಕಡೆಗಷ್ಟೇ ಗಮನ ಕೊಟ್ಟು ಕೂರುತ್ತಿದ್ದ ಸಂತೋಷ್ ಎಲ್ಲರ ಪಾಲಿಗೂ ಕುತೂಹಲದ ವ್ಯಕ್ತಿಯಾಗಿದ್ದರು. ಕಡೆಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಮುನ್ನುಗ್ಗಿ ಸಂತೋಷ್ರನ್ನು ನಮ್ಮ ಟೀಮಿಗೆಳೆದುಕೊಂಡುಬಂದಿದ್ದೆವು. ಆಮೇಲೆ ಸಂತೋಷ್ ಬಾಗಿಲಗದ್ದೆ ನಮ್ಮೆಲ್ಲರ ನೆಚ್ಚಿನ ಸಂತುವಾಗಿಬಿಟ್ಟರು. ಬರೀ ಮೌನಿಯೆಂದುಕೊಂಡಿದ್ದ ಸಂತು ತಪ್ಪೆಂದು ತೋಚಿದರೆ ಯಾವ ದೊಣ್ಣೆನಾಯಕನನ್ನೂ ಸುಮ್ಮನೆ ಬಿಡದೆ ಜಾಡಿಸಿಬಿಡುತ್ತಿದ್ದರು. ಗಂಟೆಗಟ್ಟಲೆ ಮಾತಾಡಿ ಪೋಸು ಕೊಟ್ಟವನನ್ನೂ ಒಂದೇ ಒಂದು ಮಾತಿಂದ ನೆಲಕ್ಕೆಳೆದು ಬಿಸಾಕುತ್ತಿದ್ದ ಸಂತುವಿನ ಮಾತಿನೇಟಿನ ರುಚಿ ಸವಿದವರಿಗಷ್ಟೇ ಗೊತ್ತು!
ಅದೊಂದು ದಿನ ಗೆಳೆಯ ರಾಠೋಡ್ರ ಮನೆಯಲ್ಲಿ ಸಂತುವಿನ ಶೋಧ ಪತ್ರಿಕೆಗಳ ಸಂಚಿಕೆಗಳು ಕೈಗೆಸಿಕ್ಕಿದ್ದವು. ಅಷ್ಟರಲ್ಲಾಗಲೇ `ಶೋಧ’ ಕಣ್ಮುಚ್ಚಿ ಸಂತು ಬಂದು ಲಂಕೇಶ್ನಲ್ಲಿ ಪ್ರತಿಷ್ಠಾಪನೆಗೊಂಡಿದ್ದೂ ಆಗಿತ್ತು. ಇಪ್ಪತ್ತು ಪುಟವಿದ್ದ ಪತ್ರಿಕೆಯ ತೊಂಬತ್ತೊಂಭತ್ತು ಪಸರ್ೆಂಟ್ ಇವರೊಬ್ಬರೇ ಬರೆದಿದ್ದರು. ಸಂಪಾದಕೀಯದಿಂದ ಹಿಡಿದು ಸಿನಿಮಾ ಬಿಟ್ಸ್ ತನಕ! ಆದರೆ ಒಂದೊಂದು ಬರವಣಿಗೆಗಳೂ ಬೇರೆಬೇರೆ ಶೈಲಿಯಲ್ಲಿದ್ದವು. ಅದರಲ್ಲೂ ಅದರ ಸಂಚಿಕೆಗಳಲ್ಲಿ ಪ್ರಕಟಗೊಂಡಿದ್ದ ‘ಲವ್ ಲೆಟರ್’ಗಳಂತೂ ಅದ್ಭುತವಾಗಿದ್ದವು.
ಮಾರನೇ ದಿನ ಆಫೀಸಿನಲ್ಲಿ ಸಿಕ್ಕ ಸಂತು ಬಳಿ ‘ನಿಮ್ಮ ಶೋಧ ಸಂಚಿಕೆಗಳನ್ನು ನೋಡಿದೆ. ಬಂದಿರೋದು ಮೂರೇ ಇಶ್ಯೂ ಆದ್ರೂ ಚೆನ್ನಾಗಿ ಮಾಡಿದೀರಿ. ಆ ಲವ್ ಲೆಟರ್ಗಳನ್ನ ಯಾರು ಬರೆದದ್ದು’ ಎಂದು ಕೇಳಿದಾಗ ‘ನಾನೇ’ ಎಂದಿದ್ದರು ಸಂತು. ನಿಜಕ್ಕೂ ಆಶ್ಚರ್ಯವಾಗಿತ್ತು. ಈ ಸಿಡುಕ, ಅಂತಮರ್ುಖಿ ಮನುಷ್ಯ ಇಷ್ಟು ಚೆಂದಗೆ ಪ್ರೇಮಪತ್ರಗಳನ್ನು ಬರೆಯೋಕೆ ಸಾಧ್ಯವಾ ಅಂತಾ… ಆಗಾಗ ನೆನಪಾದಾಗಲೆಲ್ಲಾ ‘ಲವ್ ಲೆಟರ್ಗಳನ್ನು ಬರೀತಾ ಇರಿ ಯಾವತ್ತಾದರೊಮ್ಮೆ ಪುಸ್ತಕ ಮಾಡ್ಬೋದು’ ಅಂದಾಗ ಸಂತೋಷ್ ಮುಖದಲ್ಲಿ ಅಪರೂಪದ ನಗೆ ಇಣುಕುತ್ತಿತ್ತು.
ಇವೆಲ್ಲ ಆಗಿ ಹತ್ತಿರತ್ತಿರ ನಾಲ್ಕೈದು ವರ್ಷಗಳೇ ಆಗಿವೆ. ಜಾಗ ಬೇರೆಯದ್ದಾದರೂ ಸಂತುವಿನ ನಂಟು ಹಾಗೇ ಉಳಿದಿದೆ. ಹಳೆಯ ಕನಸುಗಳಿಗೆ ಜೀವ ಬಂದಿದೆ. ಸಂತು ಬರೆದದ್ದು, ಬರೆಯುತ್ತಿರುವುದೆಲ್ಲಾ ಸೇರಿಸಿದರೆ ಹತ್ತಾರು ಪುಸ್ತಕಗಳಿಗೆ ಸರಕಾಗುತ್ತದೆ. ಆದರೆ ಈ ಪ್ರೇಮಪತ್ರಗಳ ಗುಚ್ಛ ಅವರ ಮೊದಲ ಪುಸ್ತಕವಾಗಿ ಹೊರಬರಬೇಕು ಎನ್ನುವುದು `ಫಲ್ಗುಣಿ’ ಬಳಗದ ಬಯಕೆ.
ಇಲ್ಲಿರುವ ಪತ್ರಗಳತ್ತ ಸುಮ್ಮನೇ ಒಮ್ಮೆ ಕಣ್ಣಾಡಿಸಿ ನೋಡಿ ಗೆಳೆಯ ಸಂತೋಷ್ ಬಾಗಿಲಗದ್ದೆ ಅವರ ಬರವಣಿಗೆ ತಾಕತ್ತೇನೆಂಬುದು ಗೊತ್ತಾಗುತ್ತದೆ. ಲವ್ವಿನಲ್ಲಿ ಬಿದ್ದವರು ‘ನಾವೂ ಯಾಕೆ ಒಂದು ಲೆಟ್ರು ಬರೀಬಾರ್ದು’ ಎಂದನ್ನಿಸದೇ ಇರಲು ಸಾಧ್ಯವಿಲ್ಲ.
ಅರುಣ್ ಕುಮಾರ್.ಜಿ
 

ಅರ್ಪಣೆ

ಬದುಕು ಬೆಂಗಳೂರಿನ ಬೀದಿಯಲ್ಲಿದ್ದಾಗ
ಬೆಳುದಿಂಗಳಂತೆ ಎದುರಾಗಿ
`ಅನು’ಕ್ಷಣವೂ ಕಾಡುತ್ತಿರುವವಳಿಗೆ,
ನೀ ಸಿಕ್ಕೇ ಸಿಗುತ್ತಿಯೆಂಬ ನಂಬಿಕೆಗೆ
ಮತ್ತು ಈ ಜಗತ್ತಿನ ನಿಷ್ಕಲ್ಮಶ ಪ್ರೀತಿಗೆ…
 

ಶೃಂಗೇರಿಯ ಭಾರತೀ ಬೀದಿಯಿಂದ…

ಅಷ್ಟಾಗಿ ಹೇಳಿಕೊಳ್ಳುವಂಥಾದ್ದೇನೂ ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಊರು ಕೊಗ್ರೆ, ಅದರ ಒಡಲಿನಲ್ಲಿರುವ ಬಾಗಿಲಗದ್ದೆ ನನ್ನೂರು. ಬೇರು ಅಲ್ಲೇ ಇದ್ದರೂ ಸದ್ಯ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತ್ತಿರುವುದು ಬೆಂಗಳೂರಿನಲ್ಲ್ಲಿ. ಶೃಂಗೇರಿ ನನ್ನ ಬದುಕಿನ ಶಾಶ್ವತ ಲ್ಯಾಂಡ್ ಮಾರ್ಕ್ .
ವಯಸ್ಸು ಇಪ್ಪತ್ತೇಳು. ಈಗ್ಗೆ ಎಂಟು ವರ್ಷಗಳ ಹಿಂದೆ ಬದುಕು ಅರಸಿ ಬೆಂಗಳೂರಿಗೆ ಬಂದಾಗ ಮೈಮನಸುಗಳನ್ನು ಆವರಿಸಿಕೊಂಡಿದ್ದದ್ದು ಪತ್ರಕರ್ತನಾಗಬೇಕೆಂಬ ಬಯಕೆ. ಆದರೆ ಹೊಟ್ಟೆಪಾಡಿಗಾಗಿ ಮೊದಲು ಕೆಲಸ ಮಾಡಿದ್ದು ಬೇಕರಿಯೊಂದರಲ್ಲಿ. ಆ ಕ್ಷಣದಲ್ಲಿಯೂ ಎದೆಯೊಳಗೆ ಅದಮ್ಯ ಅಕ್ಷರ ಪ್ರೀತಿಯಿತ್ತು. ಹಾಗೆ ಅನಿವಾರ್ಯತೆಯಿಂದ ಆ ಬೇಕರಿಯಲ್ಲಿ ಕೆಲಸ ಮಾಡಿದರೂ ಬನ್ನು, ಕೇಕು, ಕುರುಕಲು ಕಮಟಿನ ಈ ಜಗತ್ತಿನಲ್ಲಿಯೇ ಕಳೆದು ಹೋಗಿ ಬಿಡುತ್ತೇನೇನೋ ಅಂತ ಭಯವಾಗಿ ಉಸಿರುಗಟ್ಟಿದಂತಾಗುತ್ತಿತ್ತು. ನನ್ನೊಳಗೆ ತೀವ್ರವಾದ ಈ ತಳಮಳದಿಂದ ತಪ್ಪಿಸಿಕೊಳ್ಳಲಾರದೆ ಕೆಲಸಕ್ಕೆ ಸೇರಿ ತಿಂಗಳಾಗುವ ಮುಂಚೆಯೇ ಅದೊಂದು ದಿವ್ಯ ಮುಂಜಾನೆ ಕೆಲಸ ಕೊಟ್ಟವರಿಗೊಂದು ಮಾತೂ ಹೇಳದೆ ಬೇಕರಿಯಿಂದ ಓಡಿ ಹೋಗಿದ್ದೆ. ಆ ಕ್ಷಣದಲ್ಲಿ ಬದುಕಿನ ಹಾದಿ ಮತ್ತು ಗುರಿ ಎರಡೂ ಸ್ಪಷ್ಟವಾಗಿತ್ತು. ಹಾಗೆ ಬೇಕರಿಯ ಐಟಮ್ಮುಗಳ ಮೆನು ಕಾಡರ್ಿನಂತಿದ್ದ ಖಾಲಿ ಜೇಬಿನ ಕೊಳಕು ಬಟ್ಟೆಯಲ್ಲೇ ಹೋಗಿ ನಿಂತದ್ದು ರವಿ ಬೆಳಗೆರೆಯವರ ಮುಂದೆ. ಆ ಮೂಲಕ `ಹಾಯ್ ಬೆಂಗಳೂರ್’! ವಾರಪತ್ರಿಕೆಯಲ್ಲಿ ವೃತ್ತಿ ಆರಂಭ. ಆ ಬಳಿಕ `ಸಂಜೆ ನುಡಿ’, `ಅಗ್ನಿ’, `ಗೌರಿ ಲಂಕೇಶ್’ ವಾರ ಪತ್ರಿಕೆಗಳಲ್ಲಿ ಉಪ ಸಂಪಾದಕ, ವರದಿಗಾರನಾಗಿ ವೃತ್ತಿ ಮಂದುವರಿಕೆ. ಈ ಮಧ್ಯೆ `ಶೋಧ’ ಪತ್ರಿಕೆ ಆರಂಭಿಸಿ ಸಂಪಾದಕನಾಗಿಯೂ ಕಾರ್ಯ ನಿರ್ವಹಣೆ.
ಇಷ್ಟೇ ಇಷ್ಟು ವರ್ಷದ ಬದುಕು ಥರಥರದಲ್ಲಿ ಕಾಡಿಸಿದೆ. ಹೆಜ್ಜೆ ಹೆಜ್ಜೆಗೂ ಪಾಠ ಕಲಿಸಿದೆ. ಒಟ್ಟಾರೆಯಾಗಿ ಶಾಲಾ ಕಾಲೇಜು ದಿನಗಳಲ್ಲಿಯೇ ಆವರಿಸಿಕೊಂಡಿದ್ದ ಅಕ್ಷರದ ಗುಂಗು ಮಲೆನಾಡಿನ ಮೂಲೆಯಲ್ಲಿ ಮುದುರಿಕೊಂಡಿದ್ದವನನ್ನು ಇಲ್ಲೀತನಕ ಕೈ ಹಿಡಿದು ಕರೆ ತಂದಿದೆ. ಶೃಂಗೇರಿಯ ಭಾರತೀ ಬೀದಿಯಲ್ಲ್ಲಿ ಹಪ್ಪಳ ಮಾರುತ್ತಾ, ಓದಿನ ಮಧ್ಯೆಯೇ ಕಾಫಿ ಪುಡಿ ಅಂಗಡಿಯಲ್ಲಿ ಪ್ಯಾಕೆಟ್ಟು ಕಟ್ಟುತ್ತಾ, ಗಾರೆ ಕಲೆಸುತ್ತಾ, ಲಾಡ್ಜಿನಲ್ಲಿ ರೂಂಬಾಯ್ ಆಗಿದ್ದಾಗ ಯಾರೋ ಮಲಗೆದ್ದ ಹಾಸಿಗೆಯ ಸುಕ್ಕುಗಳನ್ನ ಸರಿಪಡಿಸುತ್ತಾ ಸಾಕಿಕೊಂಡಿದ್ದ ಅಕ್ಷರ ಲೋಕದ ಕನಸುಗಳೆಲ್ಲವೂ ಇದೀಗ ಒಂದೊಂದಾಗಿ ನನಸಾಗುತ್ತಿವೆ. ಎದೆಯಲ್ಲಿ ಇನ್ನೂ ಸಾವಿರ ಕನಸುಗಳಿವೆ. ಸೋಲಿನ ಪಾತಾಳ ತಲುಪಿದಾಗಲೂ ಮತ್ಯಾವುದೋ ಗೆಲುವಿನ ಏಣಿಗಾಗಿ ತಡಕಾಡುವ ಶತ ಹುಂಬತನವೂ ಇದೆ. ಸದ್ಯ ಇವುಗಳೇ ನನ್ನ ಚಿರ, ಚರ, ನಿರಂತರ ಆಸ್ತಿಗಳು!
ಅಂದಹಾಗೆ, ಇದು ನನ್ನ ಮೊದಲ ಪುಸ್ತಕ…
ಸಂತೋಷ್ ಬಾಗಿಲಗದ್ದೆ
 

‍ಲೇಖಕರು G

April 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: