ಬದನವಾಳಿನಲ್ಲಿ ಗಾಂಧೀ ಧ್ಯಾನ – ಜಿ ಪಿ ಬಸವರಾಜು

ಜಿ ಪಿ ಬಸವರಾಜು

‘ತಾಳಿಕೆಯ ಬಾಳಿಗಾಗಿ’ ಬದನವಾಳು ಅಚ್ಚೊತ್ತಿರುವ ಚಿತ್ರಗಳು ಹಲವಾರು. ಬದನವಾಳು ಸಮಾವೇಶಕ್ಕೆಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಉತ್ಸಾಹಿಗಳು ಏನನ್ನು ಪಡೆದರು, ಏನನ್ನು ಬಿಟ್ಟುಹೋದರು ಎಂಬ ಪ್ರಶ್ನೆ ಬಹಳ ಸರಳವಾದದ್ದು. ಇಂಥ ಪ್ರಶ್ನೆಗಳಿಗೆ ಸರಳ ಉತ್ತರಗಳೂ ಸಿಕ್ಕುವುದಿಲ್ಲ. ಸಮಾವೇಶದ ದಿನ ನೂರಾರು ಕ್ಯಾಮೆರಾಗಳು ಕ್ಲಿಕ್ಕಿಸಿಕೊಂಡ ಚಿತ್ರಗಳು ಪಡೆದುಕೊಂಡ ಮತ್ತು ಪಡೆದುಕೊಳ್ಳುತ್ತಿರುವ ಅರ್ಥಗಳು ಸಾವಿರಾರು. ಇದಕ್ಕಿಂತಲೂ ಬದನವಾಳಿಗೆ ಬಂದವರ ಮನಸ್ಸುಗಳಲ್ಲಿ ಉಳಿದುಕೊಂಡ ಚಿತ್ರಗಳು ಬೆಳೆಯುತ್ತಿರುವ ರೀತಿ ಮತ್ತು ಅವು ಬಿಚ್ಚುತ್ತಿರುವ ಅರ್ಥಗಳಿಗೆ ಚೌಕಟ್ಟುಹಾಕುವುದು ಕಷ್ಟ. ವಿಶೇಷವಾಗಿ ಎಳೆಯ ತಲೆಮಾರಿನವರ ಮೇಲೆ ಬದನವಾಳು ಬೀರಿದ ಪರಿಣಾಮ ಮುಂದಿನದಿನಗಳಲ್ಲಿ ಮೊಳೆತು, ಚಿಗಿತು ಯಾವ ಬೆಳೆಯನ್ನು ಕೊಡುತ್ತದೆ ಎಂಬುದು ಮುಖ್ಯ. ಇದು ಒಂದರ್ಥದಲ್ಲಿ ಮುಂದಿನ ದಿನಗಳ ಭವಿಷ್ಯವನ್ನೂ ರೂಪಿಸಲಿದೆ ಎಂಬುದು ಸಣ್ಣ ಸಂಗತಿಯಲ್ಲ.
ಬದನವಾಳಿಗೆ ಎಷ್ಟು ಜನ ಬಂದರು? ಯಾಕಾಗಿ ಬಂದರು? ಏನನ್ನು ಹುಡುಕುತ್ತ ಬಂದರು? ಬಂದವರ ಮನಸ್ಸುಗಳಲ್ಲಿ ಎಂಥದೋ ಹುಡುಕಾಟ ನಡೆಯುತ್ತಿತ್ತು ಎಂಬುದು ಖಚಿತ. ಈಗಿರುವ ವ್ಯವಸ್ಥೆಯಲ್ಲಿ ನಮ್ಮ ಬದುಕಿನ ಮುಖ್ಯ ಸವಾಲುಗಳಿಗೆ ಜವಾಬು ಸಿಕ್ಕುವುದಿಲ್ಲ ಎಂಬುದು ಖಾತ್ರಿಯಾದವರು, ಈ ಜವಾಬನ್ನು ಹುಡುಕಿಯೇ ಬದನವಾಳಿಗೆ ಬಂದದ್ದು ನಿಕ್ಕಿ.
ಬದನವಾಳು ನಂಜನಗೂಡು ತಾಲ್ಲೂಕಿನ ಪುಟ್ಟ ಹಳ್ಳಿ. ಇತ್ತೀಚಿನ ವರ್ಷಗಳಲ್ಲಿ ಅದು ಹೆಸರನ್ನು ಪಡೆದುಕೊಂಡದ್ದು ಸರಿಯಾದ ಕಾರಣಕ್ಕಾಗಿ ಅಲ್ಲ. ಜಾತಿ ಜಗಳ ಕೊಲೆಗಳಲ್ಲಿ ಮುಕ್ತಾಯವಾಗಿ, ಅದು ನ್ಯಾಯಾಲಯದ ಕಟ್ಟೆಯನ್ನೂ ಹತ್ತಿತ್ತು. ಕೊಲೆಮಾಡಿದವರು ಕಂಬಿ ಎಣಿಸಿದರು; ಎಣಿಸುತ್ತಿದ್ದಾರೆ. ಜಾತಿ ಜಗಳ ಕೇವಲ ಬದನವಾಳಿಗೆ ಮೀಸಲಾದದ್ದಲ್ಲ. ದಲಿತರಿಗೆ ಅಕ್ಷರ ದೊರಕಿದ್ದು, ಅದರ ಫಲವಾಗಿ ಅವರ ಬದುಕು ಸುಧಾರಿಸಿದ್ದು, ಆತ್ಮಗೌರವ ಹೆಚ್ಚಿದ್ದು, ಸ್ವಾಭಿಮಾನ ತಲೆ ಎತ್ತಿದ್ದು ಮೇಲ್ಜಾತಿಯವರನ್ನು ಕಂಗೆಡಿಸಿರಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ಅವಕಾಶವನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಒದಗಿಸಿಕೊಟ್ಟಿದ್ದರೂ, ಈ ಜಾತಿ ವ್ಯವಸ್ಥೆ ಎಂಬ ಅನಿಷ್ಟ ಸಮಾನತೆಯನ್ನು ಗೌರವಿಸುವುದಿಲ್ಲ. ಇದನ್ನು ಮೇಲ್ಜಾತಿಯ ಜನ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಜಾತಿವ್ಯವಸ್ಥೆ ಎಂದರೆ ಮೇಲು ಕೀಳಿನ ಭಾವನೆಯನ್ನು ಬಿತ್ತುವ, ಆಚರಿಸುವ ವ್ಯವಸ್ಥೆ. ಜಾತಿವ್ಯವಸ್ಥೆಯನ್ನೇ ಭದ್ರಪಡಿಸಲು ಅನೇಕ ಶಕ್ತಿಗಳೂ ಈಗಲೂ ಬೇರೆ ಬೇರೆಯ ಕಾರಣಗಳಿಗಾಗಿ ಕ್ರಿಯಾಶೀಲವಾಗಿವೆ. ನಮ್ಮ ರಾಜಕಾರಣಿಗಳ ಓಟಿನ ಬೇಟೆಯೂ ಜಾತಿವ್ಯವಸ್ಥೆಯನ್ನೇ ಬಲಪಡಿಸುತ್ತ, ಅದರ ಪ್ರಯೋಜನವನ್ನು ಪಡೆಯಲು ನೋಡುತ್ತಿದೆ. ಇಂಥ ಹೊತ್ತಿನಲ್ಲಿ ಜಾತಿಯಿಂದ ಮುಕ್ತವಾಗುವುದು ಕಷ್ಟದ ವಿಚಾರವೇ. ಈ ಹಿನ್ನೆಲೆಯಲ್ಲಿಯೇ ಇವತ್ತಿಗೂ ಜಾತಿಜಗಳಗಳು ನಡೆಯುತ್ತಿವೆ. ಆದರೂ ಜಾತಿಗಳನ್ನು ಮೀರಿದ ವ್ಯವಸ್ಥೆಯೊಂದರ ಕಡೆಗೆ ಚಲಿಸಲು ಅಲ್ಲಲ್ಲಿ ಪ್ರಯತ್ನಗಳು ಸಣ್ಣ ಪ್ರಮಾಣದಲ್ಲಾದರೂ ನಡೆಯುತ್ತಿವೆ. ಬದನವಾಳಿನ ‘ತಾಳಿಕೆಯ ಬಾಳಿಗಾಗಿ’ ಸಮಾವೇಶ, ಜಾತಿ ವರ್ಗಗಳನ್ನು ಮೀರಿ ತಮ್ಮ ಬದುಕನ್ನು ಸರಳವಾದ ಸತ್ಯ ಮಾರ್ಗದಲ್ಲಿ ರೂಪಿಸುವುದು ಹೇಗೆ ಎಂಬ ಚಿಂತನೆಯ ಕಡೆ ಮುಖಮಾಡಿತ್ತು. ಈ ಚಿಂತನೆಯ ಕೇಂದ್ರದಲ್ಲಿ ಗಾಂಧೀಜಿಯೇ ಇದ್ದರು.

ಗಾಂಧೀಜಿ ಈ ಬದನವಾಳಿಗೆ ಬಂದದ್ದು 1932ರಲ್ಲಿ; ತಮ್ಮ ಕನಸಿನ ಗ್ರಾಮಸ್ವರಾಜ್ಯ ಈ ಬದನವಾಳಿನಲ್ಲಿ ಚಿಗುರೊಡೆಯುತ್ತಿದೆ ಎಂಬ ಮಾತನ್ನು ಕೇಳಿ. ಆಗ ಖಾದಿ ಮತ್ತು ಗ್ರಾಮೋದ್ಯೋಗದ ಅರ್ಥಪೂರ್ಣ ಚಟುವಟಿಕೆಗಳು ಬದನವಾಳಿನಲ್ಲಿ ನಡೆಯುತ್ತಿದ್ದವು. ಏಳೂವರೆ ಎಕರೆ ಭೂಮಿಯಲ್ಲಿ ರೂಪಿಸಿದ್ದ ಈ ಕೇಂದ್ರ 1927 ರಲ್ಲಿಯೇ ಆರಂಭವಾಗಿತ್ತು. ಬದನವಾಳಿನಲ್ಲಿ ತಯಾರಾಗುತ್ತಿದ್ದ ಹತ್ತಿಯ ನೂಲು ದೊಡ್ಡ ಹೆಸರು ಮಾಡಿತ್ತು. ಸುಮಾರು 300 ಜನ ಮಹಿಳೆಯರು ಇಲ್ಲಿ ಕೆಲಸ ಮಾಡುತ್ತ ತಮ್ಮ ಅನ್ನವನ್ನು ಗಳಿಸಿಕೊಳ್ಳುತ್ತಿದ್ದರು. ನೂಲುವುದು, ಬಣ್ಣಹಾಕುವುದು, ಬಟ್ಟೆ ನೇಯುವುದು; ಜೊತೆಗೆ ಬೆಂಕಿಪೊಟ್ಟಣ ತಯಾರಿಕೆ, ಕಾಗದ ತಯಾರಿಕೆ, ಸೋಪು ತಯಾರಿಕೆ, ಗಾಣದಲ್ಲಿ ಎಣ್ಣೆಯನ್ನು ತೆಗೆಯುವುದು ಹೀಗೆ ಇಲ್ಲಿ ಹಲವಾರು ಕಸುಬುಗಳು ನಡೆಯುತ್ತಿದ್ದವು. ಈ ಎಲ್ಲ ಸಂಗತಿಯನ್ನು ತಿಳಿದಿದ್ದ ಗಾಂಧೀಜಿ ಈ ಕೇಂದ್ರವನ್ನು ನೋಡಬೇಕೆಂದೇ ಬಂದಿದ್ದರು. ಬದನವಾಳು ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಿತ್ತು.
ಈಗ ಬದನವಾಳಿನಲ್ಲಿ ಉಳಿದಿರುವುದು ಕಳೆದ ಸಮೃದ್ಧಿಯ ದಿನಗಳ ನೆನಪು ಮಾತ್ರ. ಮುರುಕಲು ಕಟ್ಟಡಗಳು, ಎಂದೋ ಕಣ್ಮುಚ್ಚಿದ ಘಟಕಗಳು, ಬರಡು ಭೂಮಿಯಂತೆ ಕಾಣುವ ನೆಲ, ಇವುಗಳ ನಡುವೆ ಇನ್ನೂ ಕುಟುಕು ಜೀವ ಉಳಿಸಿಕೊಂಡಂತೆ ಇರುವ ನೂಲುವ, ಬಟ್ಟೆ ನೇಯುವ ಒಂದೆರಡು ಘಟಕಗಳು. ಆದರೂ ಈ ಕೇಂದ್ರದ ಆವರಣದಲ್ಲಿ ಇನ್ನೂ ಮರಗಿಡಗಳು ಉಳಿದುಕೊಂಡಿವೆ. ಕಾಲ ಕಾಲಕ್ಕೆ ಅವು ಎಲೆ ಉದುರಿಸಿ, ಹೊಸ ಚಿಗುರನ್ನು ಪಡೆಯುತ್ತ ಹೊಸ ಭರವಸೆಯಂತೆ ಕಾಣಿಸುತ್ತಿವೆ. ಚರಕ ಮತ್ತು ಕೈಮಗ್ಗಗಳ ಮೂಲಕ ಗಾಂಧಿಯ ಸಮೀಪ ಹೋಗಿರುವ ಪ್ರಸನ್ನ ಈ ಚಿಗುರನ್ನು ನೋಡಿಯೇ ಸ್ಫೂತರ್ಿ ಪಡೆದರು. ಆ ಆವರಣದಲ್ಲಿ ಹೊಸ ಬೆಳೆಯನ್ನು ತೆಗೆಯಬಹುದು ಎಂದು ಆಶಿಸಿ ಬದನವಾಳಿಗೆ ಬಂದರು. ಸುಮಾರು 20 ದಿನಗಳ ಕಾಲ ಅವರು ಉಳಿದುಕೊಂಡದ್ದು ಈ ಆವರಣದ ಒಂದು ಮುರುಕಲು ಮನೆಯಲ್ಲಿಯೇ. ಅಲ್ಲಿಂದಲೇ ಎಲ್ಲ ರೂಪರೇಷೆಗಳನ್ನು ಸಿದ್ಧಪಡಿಸಿದರು.
ಈ ಕೇಂದ್ರವನ್ನು ಮತ್ತೆ ಕಟ್ಟುವುದು ಅಗತ್ಯವಾದರೂ, ಅದೇ ಪ್ರಸನ್ನ ಅವರ ಮುಖ್ಯ ಉದ್ದೇಶವಲ್ಲ. ಅದನ್ನೂ ಬದನವಾಳನ್ನು ಎಲ್ಲ ಮನಸ್ಸುಗಳಲ್ಲೂ ಊರಬೇಕೆಂಬುದು ಅವರ ಹಂಬಲ. ಬದನವಾಳು ಎಂದರೆ ಗಾಂಧೀ. ಗಾಂಧೀ ಎಂದರೆ ಸರಳಬದುಕಿನತ್ತ ಚಲನೆ; ದುಡಿದು ತಿನ್ನುವ ತತ್ವದತ್ತ ನಡಿಗೆ; ಸರಳತೆ, ಸತ್ಯ, ಸಹಬಾಳ್ವೆ, ಎಲ್ಲರ ಜೊತೆಜೊತೆಯಲ್ಲಿ ನಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳುವುದು, ತಮ್ಮ ಊರನ್ನು ಕಟ್ಟಿಕೊಳ್ಳುವುದು, ತಮ್ಮ ರಾಷ್ಟ್ರವನ್ನು ಕಟ್ಟಿಕೊಳ್ಳುವುದು. ಇದು ಸಹಜ ಪಯಣ. ಸಹಜ ನಡೆ.
ಗಾಂಧೀಜಿ ಯಂತ್ರಗಳನ್ನು ವಿರೋಧಿಸಿದವರಲ್ಲ. ಅವರ ಚರಕವೇ ಒಂದು ಯಂತ್ರ; ನೂಲುವ, ನೇಯುವ, ಕಾಗದ ತಯಾರಿಸುವ ಎಲ್ಲವೂ ಯಂತ್ರಗಳೇ. ಆದರೆ ಈ ಯಂತ್ರಗಳು ಪ್ರತಿಯೊಬ್ಬನ ಕೈಯಳತೆಗೆ ನಿಲುಕುವಂತಿರಬೇಕು; ವ್ಯಕ್ತಿಯ ದುಡಿಮೆಗೆ ನೆರವಾಗುವಂತಿರಬೇಕು. ಸಮೂಹದ ಮುನ್ನಡೆಗೆ ಕಾರಣವಾಗುವಂತಿರಬೇಕು-ಇದು ಗಾಂಧೀಜಿಯರ ನಿಲುವು. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡಿ, ದೊಡ್ಡ ಬಂಡವಾಳದ ಎದುರಿಗೆ ಸಾಮಾನ್ಯರ ಉಸಿರುಕಟ್ಟಿಸಿ ತಲೆಎತ್ತುವ ಯಂತ್ರಗಳನ್ನು ಅವರು ವಿರೋಧಿಸಿದರು. ಪ್ರಸನ್ನ ಹೆಗ್ಗೋಡಿನಲ್ಲಿ ಚರಕ ಮತ್ತು ಕೈಮಗ್ಗಗಳ ಮೂಲಕ ಹೇಳುತ್ತಿರುವುದು ಈ ತತ್ವವನ್ನೇ. ಬೃಹತ್ ಬಂಡವಾಳ, ಜಾಗತಿಕ ಮಾರುಕಟ್ಟೆ, ಹಣದ ಹೊಳೆ ಸಾಮಾನ್ಯರನ್ನು ಬದುಕಲು ಬಿಡುವುದಿಲ್ಲ. ಅದರ ಎದುರು ನಿಂತು ಸೆಣಸುವುದು ಗಾಂಧೀಜಿಯ ಸ್ವಾವಲಂಬನೆ ಮತ್ತು ಸ್ವರಾಜ್ಯ ತತ್ವಗಳ ಮೂಲಕವೇ ಸಾಧ್ಯ.
ನಮಗೆ ಸ್ವಾತಂತ್ರ್ಯ ಸಿಕ್ಕಿ 68 ವರ್ಷಗಳು ಉರುಳಿ ಹೋಗಿದ್ದರೂ, ನಮ್ಮ ಊರುಗಳಿಗೆ ಇನ್ನೂ ಸ್ವರಾಜ್ಯ ಸಿಕ್ಕಿಲ್ಲ. ನಮ್ಮ ರೈತರು ರಸಗೊಬ್ಬರ, ಅಧಿಕ ಇಳುವರಿ, ಹೊಸ ಹೊಸ ತಳಿಗಳ ವಿಷ ವತರ್ುಲದಲ್ಲಿ ಸಿಕ್ಕಿಕೊಂಡಿದ್ದಾರೆ. ಹಣಕೊಟ್ಟೂ ವಿಷ ಉಣ್ಣುವ ಅನಿವಾರ್ಯದಲ್ಲಿ ನಮ್ಮ ಗ್ರಾಹಕರು ಉಬ್ಬಸಪಡುತ್ತಿದ್ದಾರೆ. ದುಡಿಯುವ ಕೈಗಳನ್ನು ದೂರವಿಟ್ಟು, ಯಂತ್ರಗಳು ಎಲ್ಲೆಲ್ಲೂ ಕಾಣಿಸಿಕೊಂಡಿವೆ. ಮನುಷ್ಯರು ಶ್ರಮದ ದುಡಿಮೆಯನ್ನೇ ಮರೆಯುತ್ತಿದ್ದಾರೆ. ಹಲ ಬಗೆಯ ಮಾಲಿನ್ಯಗಳು ನಮ್ಮನ್ನೆಲ್ಲ ಸುತ್ತಿಕೊಂಡಿವೆ. ನಗರಗಳು ಬೆಳೆಯುತ್ತ, ಕೊಳೆಗೇರಿಗಳಾಗುತ್ತಿದ್ದರೆ, ಹಳ್ಳಿಗಳು ಸೊರಗುತ್ತ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿವೆ. ಶಿಕ್ಷಣ ಎನ್ನುವುದು ಬದುಕಿನ ಜೊತೆಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದೆ. ಭಾಷೆ, ಸಂಸ್ಕೃತಿಗಳು ವಿನಾಶದ ಕಡೆ ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ನಮಗೆಲ್ಲ ಬಿಡುಗಡೆಯ ದಾರಿಯೊಂದು ಇದ್ದರೆ ಅದು ಗಾಂಧೀಜಿ ತೋರಿಸಿದ ದಾರಿಯೇ.
ಬದನವಾಳು ಸಮಾವೇಶ ಹೇಳಿದ್ದೇ ಇದನ್ನು. ಅಲ್ಲಿ ಬೇಡಿಕೆಗಳಿರಲಿಲ್ಲ; ಪ್ರತಿಜ್ಞೆಗಳಿದ್ದವು. ಸರಳ ಬದುಕನ್ನು ಸೂಚಿಸುವ ದಾರಿಗಳೇ ಪ್ರತಿಜ್ಞೆಗಳಾಗಿದ್ದವು. ಒಳ ಒತ್ತಡದಿಂದ ಬಿಡುಗಡೆ ಪಡೆಯಲು ಒಪ್ಪಿಕೊಳ್ಳಬಹುದಾಗಿದ್ದ ಪ್ರತಿಜ್ಞೆಗಳು. ಯಾರೂ ಬಹಿರಂಗವಾಗಿ ಇವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಿಲ್ಲ. ಸ್ವಪ್ರೇರಣೆಯಿಂದ ಮನದೊಳಗೇ ಹೇಳಿಕೊಳ್ಳಬಹುದಾಗಿದ್ದ ಮಾತುಗಳೇ ಪ್ರತಿಜ್ಞೆಗಳು.
ಬದನವಾಳಿನಲ್ಲಿ ಅವತ್ತು ಗಾಂಧೀಜಿ ಕಾಣಿಸುತ್ತಿದ್ದರು. ಅವರ ಮಾತುಗಳು ಗಾಳಿಯಲ್ಲಿ ಹರಿದಾಡುತ್ತಿದ್ದವು. ಗಾಂಧೀಜಿಯವರನ್ನು ಕಂಡುಕೊಂಡವರು ತಮ್ಮ ಎದೆಗಳಲ್ಲಿಟ್ಟುಕೊಂಡು ಹೋದರು. ಬದನವಾಳು ಬೀಜ ಈಗ ಅನೇಕ ಊರುಗಳನ್ನು ತಲುಪಿದೆ. ಅಲ್ಲಿ ನೆಲಕ್ಕೆ ಬಿದ್ದು ಈ ಬೀಜಗಳು ಮೊಳಕೆಯೊಡೆಯಬೇಕಾಗಿದೆ.

‍ಲೇಖಕರು G

April 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. maheshwari.u

    ಬದನವಾಳುವಿನ ಬಗ್ಗೆ ಏಕೆ ಬರಹಗಳು ಬರುತ್ತಿಲ್ಲ ಎಂದು ಕಾಯುತ್ತಿದ್ದೆ.ಪ್ರಸನ್ನ ಅವರ ಹಲವು ವರ್ಷಗಳ ಚಿಂತನೆಯಿಂದ ಆಳವಾದ ಅಧ್ಯಯನದಿಂದ ರೂಪುಗೊಂಡದ್ದು ಹೊರತಾಗಿ ಏಕಾಏಕಿ ಸಂಭವಿಸಿದ್ದಲ್ಲ .ಈ ಘಟನೆ ನಮ್ಮೆಲ್ಲರಲ್ಲೂ ಒಂದು ಸಂಚಲನವನ್ನು ಮೂಡಿಸಬೇಕಿತ್ತು. ನಮ್ಮೊಳಗನ್ನು ಕೆಣಕಬೇಕಿತ್ತು. ಆದರೆ ನಾವು ಎಷ್ಟೊಂದು ಜಡಗಟ್ಟಿದ್ದೇವೆ ಎಂದು ಆಶ್ಚರ್ಯ ವಾಗುತ್ತದೆ. .ಮಾಧ್ಯಮಗಳಲ್ಲಿ ಈ ಕುರಿತಾಗಿ ಚರ್ಚೆ, ಮೂಡಿದ ಎಚ್ಚರದ ಪ್ರತಿಫಲನ – ಕಾಣಿಸುತ್ತದೆಯೋ ಎಂದು ನೋಡಿದರೆ ಊಹೂಂ. ಇಲ್ಲ. ನಿಜವಾಗಿಯೂ ಖೇಡವೆನಿಸುತ್ತದೆ..ಆದರೂ ನೀವಂದಂತೆ ಬದನವಾಳು ಬೀಜ ಅನೇಕ ಊರುಗಳನ್ನು ತಲಪಿ ಅಲ್ಲಿನೆಲಕ್ಕೆ ಬಿದ್ದ ಬೀಜಗಳು ಮೊಳಕೆಯೊಡೆಯಬಹುದೆಂದು ಆಶಿಸೋಣ.ಲೇಖನಕ್ಕೆ ಕೃತಜ್ಜತೆಗಳು.

    ಪ್ರತಿಕ್ರಿಯೆ
  2. ಕುಸುಮಬಾಲೆ

    ತಪ್ಪು ಭಾವಿಸಬೇಡಿ ಸರ್. ಕಾಸಿದ್ದವರು , ಎಲ್ಲ ಸರಿಯಿದ್ದವರು ಹೇಳುವ ಥಿಯರಿಯೇ ಬೇರೆ. hard reality ಯೇ ಬೇರೆ. ಅಲ್ಲಿ ಚರಕ ಸುತ್ತುವವರನ್ನು ಮಾತಾಡಿಸಿ ನೋಡಿ, ಬೆಳಗಿಂತ ಸಂಜೆವರೆಗೂ ಸುತ್ತಿದರೆ ಅವರಿಗೆ ಸಿಗುವುದು ಕೇವಲ 80 ರೂಪಾಯಿ. ಅದಕಿಂತ ದಿನಗೂಲಿ ಮಾಡಿದರೆ ಡಬಲ್ ಸಿಗತ್ತೆ. ಅಲ್ಲಿ ನೂಲುತ್ತಿರುವವರು. ಕೂಲಿಗೆ ಹೋಗಲಾರದಷ್ಟು ಕಾಲು ನೋವಿರುವವರು.ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗದೇ ಈ ದೇಶಕ್ಕೆ ಖಂಡಿತಾ ಉಳಿಗಾಲವಿಲ್ಲ.ಆದರೆ ಅದಕ್ಕೆ ಬಲಿಯಾಗಬೇಕಾದುದು ಇವರ ಬದುಕಾ? ಸರಕಾರೀ ಶಾಲೆಗಳಲಿ ಖಾದಿ ಯೂನಿಫಾಮ್ ಮಾಡಲು ಒತ್ತಾಯಿಸಲಿ.ಖಾಸಗೀ ಶಾಲೆಗಳಿಗೆ ಹೇಳಲಿ, ಎಲ್ಲ ಫ್ಯಾಕ್ಟರಿಗಳವರೂ ಖಾದಿ ಧರಿಸಲಿ.ಮಾಲ್‍ಗಳಿಗೆ ಪರ್ಮಿಷನ್ ಕೊಡುವುದ ನಿಲ್ಲಿಸಲಿ. ಹೀಗೆ ಮೇಲೆ ದೊಡ್ಡ ಮಟ್ಟದಲಿ ಬದಲಾದರೆ, ಆಗ ಿವರ ಕೂಲಿಯೂ ಹೆಚ್ಚಿ, ಬದುಕೂ ಸುಧಾರಿಸಬಹುದು. ಅದು ಬಿಟ್ಟು ಸುತ್ತೀ ಸುತ್ತೀ ಅಂದೆ ರಟ್ಟೆ ಮುರುದುಕೊಂಡು ಎಷ್ಟು ಸುತ್ತೋದು? ಯಾವ ಸಾರ್ಥಕತೆಗಾಗಿ ಸುತ್ತೋದು ?

    ಪ್ರತಿಕ್ರಿಯೆ
  3. Gn Nagaraj

    ಗಾಂಧೀಜಿ ನಮಗೆ ಇಂದೂ ಪ್ರಸ್ತುತರು ನಿಜ . ಯಾವ ವಿಷಯಗಳಿಗೆ ಎಂಬುದರ ಬಗ್ಗೆ ಬೇರೆ ಬೇರೆ ಸಾಮಾಜಿಕ, ಬೇರೆ ಬೇರೆ ರಾಜಕೀಯ ವಲಯದವರಿಗೆ ಬೇರೆ ಬೇರೆ ಅಭಿಪ್ರಾಯಗಳಿರಬಹುದು. ಗಾಂಧೀಜಿಯವರ ಜೀವದ ಮಹಾ ಸಾಧನೆ ಪರದೀಶೀ ಆಳ್ವಿಕೆ ಶೋಷಣೆಗಳಿಂದ ಮುಕ್ತಿ . ಅದ್ಕಾಗಿ ಮಾಡಿದ ಹೋರಾಟ ಮತ್ತು ರೂಪಿಸಿದ ಸತ್ಯಾಗ್ರಹ ೆಂಬ ತತ್ವ . ಈ ವಿಷಯದಲ್ಲಿ ಯಾರಿಗಾದರೂ ಭಿನ್ನಾಭಿಪ್ರಾಯವಿರಲು ಸಾಧ್ಯವೇ ? ಇಂದು ಕೂಡ ನಮಗೆ ಅವರ ಬದುಕಿನ ೀ ಆಯಾಮ ಮುಖ್ಯವಾಗಿದೆ ೇಕೆಂದರೆ ಇಂದು ಪರದೇಶೀ ಕಂಪನಿಗಳು ನಮ್ಮ ದೇಶದಲ್ಲಿ ವಿವಿಧ ರೀತಿಯ ಶೋಷಣೆಯನ್ನು , ಆಳ್ವಿಕೆಯಲ್ಲಿ ಮಧ್ಯ ಪ್ರವೇಶವನ್ನು ಮಾಡುತ್ತಿವೆ.ಅದರ ವಿರುದ್ಧ ಪ್ರತಿಭಟನೆಯನ್ನು ಸ್ವಾತಂತ್ರಯ ಚಳುವಳಿಯ ಎರಡನೇ ಆವ್ರತ್ತಿ ಎನ್ನುವಷ್ಟು ಬೆಳೆಸಬೇಕಾಗಿದೆ. ಬದನವಾಳುವಿನಲ್ಲಿ ಮೊನ್ನೆ ಭೂಸ್ವಾಧೀನ ಸುಗ್ರೀವಾಜ್ಞೆಯ ವಿರುದಧವೂ ಘೋಷಣೆಯೂ ಕಾಣಿಸಿತು . ಅದು ಇಂದು ಪ್ರಧಾನ ಗುರಿಯಾಗಬೇಕು . ಆದರೆ ಬಸವರಾಜುರವರು ಅದನ್ನು ವಿವರಿಸುವುದಿರಲಿ ಉಲ್ಲೇಖ ಕೂಡ ಮಾಡುವುದಿಲ್ಲ. ಸರಳ ಬದುಕು ಬೇಕಾಗಿದೆ. ಯಾರಿಗೆ ಎಂಬುದೇ ಪ್ರಶ್ನೆ . ಅಸಹ್ಯಕರ ವೈಭವದ ಜೀವನ ನಡೆಸುತ್ತಾ ಮೆರೆಯುತ್ತಿರುವವರಿಗೆ ಅದನ್ನು ಒತ್ತಾಯಿಸಬೇಕಾಗಿದೆ. ಅದನ್ನು ಬೆಂಗಳೂರಿನ ವಿಸ್ತರಣಗಳ ಕಕ್ಕಸಿಗೇ ಕೋಟಿ ವೆಚ್ಚ ಮಾಡಿದ ಮನೆಗಳ ಮುಂದೆ , ಗ್ರಾನೈಟ್ ಗಳು ಇತ್ಯಾದಿಗಳ ಮೂಲಕ ನಮ್ಮ ನಾಡಿನ ಬೆಟ್ಟಗಳನ್ನು ನೆಲಸಮಮಾಡುತ್ತಿರುವ ಮನೆಗಳ ಮುಂದೆ , ಪ್ಯಾಲೇಸ್ ಬಯಲು , ಇತರ ಹಲವು ಕ್ಷ ಬಾಡಿಗೆ ಕಲ್ಯಾಣ ಮಂಟಪಗಳ ಮುಂದೆ ಪ್ರತಿಭಟನೆ ಮಾಡುವ ಮೂಲಕ ಅದನ್ನು ಮಾಡಬೇಕಾಗಿದೆ. ಕೋಟಿ ಬೆಲೆ ವಾಹನಗಳು, ಖಾಸಗೀ ವಿಮಾನಗಳ ಮಾಲೀಕರ ಮುಂದೆ , ಅಂತಹವಕ್ಕೆ ಲೈಸೆನ್ಸ್ ನೀಡುವ ಸರ್ಕಾರದ ಮುಂದೆ ಈ ಪ್ರತಿಭಟನೆ ನಡೆಯಬೇಕಾಗಿದೆ. ಅದಕ್ಕೆ ಬದಲಾಗಿ ಯಂತ್ರಗಳನ್ನು ಅಸುರ ಎನ್ನುವ ಮತ್ತು ಶ್ರಮದ ಬದುಕು ಬೇಕು ಎಂದು ಪತ್ರಿಕೆ , ಮಾಧ್ಯಮಗಳಲ್ಲಿ ರಾರಾಜಿಸುವವರು ತಾವು ಶ್ರಮರಹಿತ ಬದುಕನ್ನು ಸವಿಯುತ್ತಾ ದಿನ ದಿನವೂ ಬೆವರು ಹರಿಸಿ ದುಡಿಯುತ್ತಾ ಸೋತು ಸುಣ್ಣವಾಗುತ್ತಿರುವವರಿಗೆ ಶ್ರಮದ ಪಾಠ ಹೇಳುವಂತಹ ವ್ಯಂಗ್ಯವನ್ನು ನೋಡುತ್ತಿದ್ದೇವೆ . ಮೊದಲು ತಾವು ಕೈ ಮಗ್ಗದಿಂದ ಬಟ್ಟೆ ನೇಯ್ದು ಅಥವಾ ಬಿಸಿಲಿನಲ್ಲಿ ನೇಗಿಲಿನಿಂದ ಉತ್ತು , ಭಾವಿಯಿಂದ ರಾಟೆಯ ಮೂಲಕ ನೀರೂ ಎಳೆದು , ಕೊಟ್ಟಣದಿಂದ ಭತ್ತ ಕುಟ್ಟಿ ಅಕ್ಕಿ ಮಾಡಿ , ಬೀಸುವ ಕಲ್ಲಿನ ಮೂಲಕ ಹಿಟ್ಟು ಮಾಡಿ ಉಂಡು ತೋರಿಸೆ ನಂತರ ಬೇರೆಯವರಿಗೆ ಪಾಠ ಹೇಳಬೇಕು. ಗ್ರಾಹಕರು ವಿಷ ಪೂರಿತ ಾಹಾರ ತಿನ್ನಬೇಕೆಂದು ಯಾರು ಒತ್ತಾಯ ಮಾಡುತ್ತಿದ್ದಾರೆ ? ಅಂತಹ ಾಹಾರ ಬೇಡವೆನ್ನುವವರು ಕೊಳೆಗೇರಿಗಳಾಗಿರುವ ಕಲುಷಿತ ನಗರಗಳನ್ನು ಬಿಟ್ಟು ಹಳ್ಳಿಗಳತ್ತ ಮುಖ ಮಾಡಿ ತಾವೂ ವಿಷ ರಹಿತ ಾಹಾರ ುತ್ಪಾದನೆ ಮಾಡಿ ತನ್ನಲಿ ಗ್ರಾಹರಿಗೆ ವಿಷವಿಲ್ಲದ ಾಹಾರ ುಣಿಸಲಿ. ಅದನ್ನು ಬೇರೆಯವರು ಮಾಡಲಿ ಎಂದರೆ ಅದು ಕೇವಲ ಬೂಟಾಟಿಎಯ ಮಾತು ಅಷ್ಟೆ ,

    ಪ್ರತಿಕ್ರಿಯೆ
  4. sindhu

    Irrespective of the intention of this article, i am too skeptical about these lines.. ಬದನವಾಳಿನಲ್ಲಿ ಅವತ್ತು ಗಾಂಧೀಜಿ ಕಾಣಿಸುತ್ತಿದ್ದರು. ಅವರ ಮಾತುಗಳು ಗಾಳಿಯಲ್ಲಿ ಹರಿದಾಡುತ್ತಿದ್ದವು. ಗಾಂಧೀಜಿಯವರನ್ನು ಕಂಡುಕೊಂಡವರು ತಮ್ಮ ಎದೆಗಳಲ್ಲಿಟ್ಟುಕೊಂಡು ಹೋದರು. ಬದನವಾಳು ಬೀಜ ಈಗ ಅನೇಕ ಊರುಗಳನ್ನು ತಲುಪಿದೆ. ಅಲ್ಲಿ ನೆಲಕ್ಕೆ ಬಿದ್ದು ಈ ಬೀಜಗಳು ಮೊಳಕೆಯೊಡೆಯಬೇಕಾಗಿದೆ. Isn’t it too extreme? I have read Shri Basavaraj’s other articles and i have high regards for his write ups. But this, one sounded too much for me. I am always skeptical when one poses as a Gandhi. Gandhian thoughts are easy to adopt. but not Gandhi himself.
    Warm Regards,
    Sindhu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: