‘ಮಹಾನಗರಿಯೊಳಗಿರುವ ಮಿನಿ ದೇಶಗಳು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅದೊಂದು ಅಪರೂಪದ ಭೇಟಿ.

ಅಂದು ನನ್ನೆದುರು ಕುಳಿತ ಸೌಮ್ಯ ಸ್ವಭಾವದ, ತೆಳು ದನಿಯ ವ್ಯಕ್ತಿ ಆಪ್ತವಾಗಿ ಮಾತನಾಡುತ್ತಿದ್ದರು. ಅವರ ತಲೆಯ ಮೇಲಿದ್ದ ಬಿಳಿ ಟೋಪಿಯ ಮೇಲಿನ ಚಿನ್ನದ ಬಣ್ಣದ ಕುಸುರಿ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತ್ತು. ಜೊತೆಗೇ ವ್ಯಾಟಿಕನ್ ಪೋಪ್ ಧರ್ಮಗುರುಗಳನ್ನು ಹೋಲುವಂತೆ ಉದ್ದನೆಯ ಆಕರ್ಷಕ, ಸಾಂಪ್ರದಾಯಿಕ ದಿರಿಸು. ನಿಲುವಂಗಿಯಂತಿದ್ದ ಆ ವಸ್ತ್ರದ್ದೂ ಕೂಡ ಶ್ವೇತವರ್ಣ.

ಅಸಲಿಗೆ ಇವರನ್ನು ಭೇಟಿ ಮಾಡುವ ಮುನ್ನ ಅತಿಥಿಗಳ ಕಾಯುವಿಕೆಗಾಗಿಯೇ ಮೀಸಲಿರಿಸಿದ್ದ ಒಂದು ಪ್ರತ್ಯೇಕ ಕೊಠಡಿಯಲ್ಲಿ ನಾನು ಕೆಲ ನಿಮಿಷಗಳ ಕಾಲ ಕೂತಿದ್ದೆ. ಅಲ್ಲೂ ಸೋಫಾ, ಹೂಕುಂಡ, ಕಲಾಕೃತಿಗಳು, ಟೀಪಾಯಿಗಳನ್ನು ಹೊಂದಿರುವ ಸುಂದರ ಒಳಾಂಗಣವಿತ್ತು. ತನ್ನ ಪಾಡಿಗೆ ಗೊಣಗುತ್ತಿದ್ದ ಟಿವಿಯಲ್ಲೇನೋ ಅಪರಿಚಿತ ಭಾಷೆಯ ಕಾರ್ಯಕ್ರಮ. ಉಳಿದಂತೆ ಇರುವ ಒಂದೆರಡು ಮಹಡಿಗಳಲ್ಲಿ ಕಚೇರಿಯ ಹಲವು ವಿಭಾಗಗಳನ್ನು ನಿರ್ವಹಿಸುವ ಪುಟ್ಟ ಕಾರ್ಯಾಲಯಗಳಿದ್ದವು. ಒಟ್ಟಿನಲ್ಲಿ ಕೆಲವೇ ಕೆಲವು ಅಧಿಕಾರಿಗಳ ಸಿಬ್ಬಂದಿವರ್ಗವನ್ನು ಹೊಂದಿದ್ದ ಚಂದದ ಸರ್ಕಾರಿ ಆಫೀಸು.

ಅದು ವಿಶಾಲವಾದ ವೈಭವೋಪೇತ ಕೋಣೆ. ಗೋಡೆಯ ಮೇಲೆ ದೊಡ್ಡದಾದ ಒಂದು ಸ್ವರ್ಣವರ್ಣಾಲಂಕಾರ ಫ್ರೇಮಿನ ಭಾವಚಿತ್ರ. ಬಹುಷಃ ಆ ದೇಶದ ರಾಷ್ಟ್ರಾಧ್ಯಕ್ಷರದ್ದು. ಚಿತ್ರದ ಎರಡೂ ಬದಿಗಳಲ್ಲಿ ಆ ದೇಶದ ಧ್ವಜವನ್ನು ದ್ವಾರಪಾಲಕರಂತೆ ಇರಿಸಲಾಗಿತ್ತು. ರಾಯಭಾರ ಕಚೇರಿಯ ಗರ್ಭಗುಡಿಯಂತಿದ್ದ ಅಂಬಾಸಿಡರ್ (ರಾಯಭಾರಿ) ಕೋಣೆಯಲ್ಲಿ ಗೋಡೆಗಂಟಿಕೊಂಡಿದ್ದ ಪುಟ್ಟದೊಂದು ಗ್ರಂಥಾಲಯ.

ಇನ್ನು ನಮ್ಮಿಬ್ಬರ ಮಧ್ಯೆ ಇದ್ದ ಸುಂದರ ಕುಸುರಿ ಕೆತ್ತನೆಯ ಟೀಪಾಯಿಯ ಮೇಲೆ ಮಟ್ಟಸವಾಗಿ ಜೋಡಿಸಿಡಲಾಗಿದ್ದ ಹಲವು ಭಾಷೆಗಳ ಪತ್ರಿಕೆಗಳು. ಜೊತೆಗೇ ಆ ದೇಶದ ಪ್ರವಾಸೋದ್ಯಮವನ್ನು ಸಾರುವ ಆಯ್ದ ಪುಸ್ತಕಗಳು. ಅಂದು ನಾನು ಗ್ರೀನ್ ಟೀ ಹೀರುತ್ತಾ ಹರಟೆ ಹೊಡೆಯುತ್ತಿದ್ದಿದ್ದು ಆಫ್ರಿಕನ್ ದೇಶವೊಂದರ ರಾಯಭಾರಿಯ ಜೊತೆ.

ಹಾಗೆ ನೋಡಿದರೆ ರಾಯಭಾರಿಗಳು ಸ್ವತಃ ಮಾತಿಗೆ ಸಿಗುವುದು ತೀರಾ ಕಮ್ಮಿ. ವಿದೇಶೀ ನೆಲದಲ್ಲಿ ರಾಷ್ಟçವೊಂದರ ಅಧಿಕೃತ ಪ್ರತಿನಿಧಿಯಾಗಿರುವ ರಾಯಭಾರಿಯು ಬಹುಮುಖ್ಯ ವ್ಯಕ್ತಿಯೇ ಆಗಿರುತ್ತಾನೆ. ಎರಡು ದೇಶಗಳ ನಡುವಿನ ಕೊಂಡಿಯಾಗಿರುವ ಆತ ನಿಪುಣ ರಾಜತಾಂತ್ರಿಕನೂ ಆಗಿರುತ್ತಾನೆ. ಮುಖತಃ ಸಂಭಾಷಣೆಯಲ್ಲೂ, ಪತ್ರದಲ್ಲೂ ಸಂಬೋಧನೆಗೆ ಆತ ಎಲ್ಲರಂತೆ ಸಾಮಾನ್ಯ ಸರ್’ ಅಲ್ಲ. ರಾಯಭಾರಿಯನ್ನು ಸಂಬೋಧಿಸುವಾಗ ಗೌರವಪರ‍್ವಕವಾಗಿ ಯುವರ್ ಎಕ್ಸಲೆನ್ಸಿ’ ಎಂದು ಕರೆಯಲಾಗುತ್ತದೆ. ಆ ಉಚ್ಚ ಸ್ಥಾನಕ್ಕಿರುವ ಘನತೆಯು ಅಂಥದ್ದು.

ಸಾಮಾನ್ಯವಾಗಿ ಪೂರ್ವ ನಿಗದಿತ ಸಮಯದ ಸೂಚನೆಯಿಲ್ಲದೆ ರಾಯಭಾರಿಯೊಬ್ಬರನ್ನು ಭೇಟಿಯಾಗುವುದು ಸಾಧ್ಯವೇ ಇಲ್ಲ. ಅದರಲ್ಲೂ ಅಷ್ಟು ಮುಖ್ಯವಾದ ಸಂಗತಿಯಾದರೆ ಮಾತ್ರ ರಾಯಭಾರಿ ಮಾತಿಗೆ ಸಿಗಬಹುದು. ಇಲ್ಲವಾದರೆ ಅವರ ಕೈಕೆಳಗಿನ ಸರಕಾರಿ ಅಧಿಕಾರಿಗಳೇ ಮಾಡಬೇಕಾದ ಕೆಲಸವನ್ನು ನಿರ್ವಹಿಸಿ ರಾಯಭಾರಿ ಸಾಹೇಬರಿಗೆ ವರದಿಯನ್ನು ನೀಡುತ್ತಾರೆ.

ದೇಶವೊಂದರ ರಾಯಭಾರಿಯನ್ನು ಮುಖತಃ ಕಾಣಲೂ, ಆತ ಇರುವ ರಾಯಭಾರ ಕಚೇರಿಗೂ ಸುಖಾಸುಮ್ಮನೆ ಯಾರೂ ಹೋಗಿಬರುವಂತಿಲ್ಲ. ರಾಯಭಾರ ಕಚೇರಿಯು ಯಾವಾಗಲೂ ಪೋಲೀಸರ ಬಿಗಿಭದ್ರತೆಯಲ್ಲೇ ಇರುವಂತಹ ಆಯಕಟ್ಟಿನ ಪ್ರದೇಶ. ಸಾಂಸ್ಕೃತಿಕ ಕೇಂದ್ರಗಳನ್ನು ಹೊಂದಿರುವ ದಿಲ್ಲಿಯ ಕೆಲ ರಾಯಭಾರ ಕಚೇರಿಗಳನ್ನು ಹೊರತುಪಡಿಸಿದರೆ, ಇತರ ರಾಯಭಾರ ಕಚೇರಿಗಳು ಸೂಕ್ತ ಕಾರ್ಯಕಾರಣಗಳಿಲ್ಲದೆ ಯಾರಾದರೂ ಸುಮ್ಮನೆ ಹೋಗಿಬರುವ ಪ್ರದೇಶವಲ್ಲ. ಹೀಗಿದ್ದೂ ದಿಲ್ಲಿಯ ರಾಯಭಾರ ಕಚೇರಿಯೊಂದರಲ್ಲಿ ಆಫ್ರಿಕನ್ ದೇಶವೊಂದರ ಅಂಬಾಸಿಡರ್ ಒಬ್ಬರು ಸ್ವತಃ ಮಾತಿಗೆ ಸಿಕ್ಕಿದ್ದರು. ಇನ್ನು ಅವರೊಂದಿಗೆ ಚಹಾ ಸವಿಯುತ್ತಾ ‘ಆಫ್ ದ ರೆಕಾರ್ಡ್’ ಹರಟೆ ಹೊಡೆದಿದ್ದು ನನಗೆ ಸಿಕ್ಕ ಆ ದಿನದ ಆಕಸ್ಮಿಕ ಜಾಕ್-ಪಾಟ್.

ದಿಲ್ಲಿಯಲ್ಲಿರುವ ಸಂಸತ್ ಭವನ, ಮಂತ್ರಿ-ಸಂಸದರು ನೆಲೆಸಿರುವ ನಾರ್ತ್ ಬ್ಲಾಕ್ ಇತ್ಯಾದಿಗಳು ಅದೆಷ್ಟು ಸುಂದರ ಮತ್ತು ವೈಭವೋಪೇತ ಪ್ರದೇಶಗಳೋ, ವಿವಿಧ ದೇಶಗಳ ರಾಯಭಾಯ ಕಚೇರಿಗಳು ನೆಲೆಯೂರಿರುವ ಚಾಣಕ್ಯಪುರಿ, ವಸಂತ್ ವಿಹಾರ್ ಪ್ರದೇಶಗಳೂ ಕೂಡ ಅಷ್ಟೇ ಆಯಕಟ್ಟಿನ ಪ್ರದೇಶಗಳು. ಸುಂದರವಾದ ಬೀದಿಗಳು, ಅಗಲವಾದ ರಸ್ತೆಗಳು, ಈ ಮಾರ್ಗದಲ್ಲಿ ಸಾಗುವವರನ್ನು ದಾರಿಯುದ್ದಕ್ಕೂ ಸ್ವಾಗತಿಸುವ ಉದ್ಯಾನಗಳು, ವಿಶಾಲವಾಗಿ ಹಬ್ಬಿರುವ ಮರಗಳ ಛಾಯೆ, ಅಲ್ಲಲ್ಲಿ ಕಾಣಸಿಗುವ ಸಶಸ್ತ್ರಧಾರಿ ಕಮಾಂಡೋಗಳು, ಹಡಗಿನಂತಿರುವ ರಾಯಭಾರ ಕಚೇರಿಗಳ ವಿಶೇಷ ವಾಹನಗಳು… ಹೀಗೆ ಈ ಭಾಗಗಳ ವಿಶಿಷ್ಟ ಸೊಬಗನ್ನು ಕಂಡಾಗಲೇ ಇದೊಂದು ಶಕ್ತಿಕೇಂದ್ರವೆಂಬ ಅಂದಾಜು ಯಾರಲ್ಲಾದರೂ ಬಂದೇ ಬರುತ್ತದೆ.

ಹೀಗಾಗಿಯೇ ದಿಲ್ಲಿಯಲ್ಲಾಗಲೀ, ಬೆಂಗಳೂರಿನಲ್ಲಾಗಲೀ… ರಾಯಭಾರ ಕಚೇರಿಯೊಂದರಲ್ಲಿ ಏನಾದರೂ ಅನಿರೀಕ್ಷಿತ ಘಟನೆಯು ಸಂಭವಿಸಿದರೆ ಅದು ದೊಡ್ಡ ಸುದ್ದಿಯೇ ಆಗಿಬಿಡುತ್ತದೆ. ೨೦೨೧ ರ ಜನವರಿಯಲ್ಲಿ ದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಪುಟ್ಟದೊಂದು ವಿಸ್ಫೋಟವು ಸಂಬಂಧಿಸಿತ್ತು. ಸಹಜವಾಗಿಯೇ ಅದೊಂದು ದೊಡ್ಡ ಸುದ್ದಿಯಾಗಿ ಭದ್ರತಾ ಲೋಪದೋಷಗಳಿಗೆ ಸಂಬಂಧಪಟ್ಟಂತೆ ಹೊಸ ಚರ್ಚೆಯನ್ನು ಹುಟ್ಟುಹಾಕಿತ್ತು. ರಾಯಭಾರ ಕಚೇರಿಯು ಉಭಯರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಅಧಿಕೃತ ನೆಲೆಯಾಗಿರುವ ಕಾರಣ ಇಂಥಾ ಘಟನೆಗಳಿರುವ ಮಹತ್ವವನ್ನು ಕಡೆಗಣಿಸುವಂತೆಯೇ ಇಲ್ಲ.

ದಿಲ್ಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ಇಂದು ಹಲವು ದೇಶಗಳ ರಾಯಭಾರ ಕಚೇರಿಗಳನ್ನು ಒಟ್ಟಾಗಿ ಕಾಣಬಹುದು. ಸಾಮಾನ್ಯವಾಗಿ ವಿಶ್ವದ ಬಲಶಾಲಿ ರಾಷ್ಟ್ರಗಳು ಇತರ ದೇಶಗಳ ನೆಲದಲ್ಲಿ ದೊಡ್ಡ ಮಟ್ಟಿನಲ್ಲೇ ನೆಲೆಯೂರಿರುತ್ತವೆ. ಹೀಗಾಗಿ ದಿಲ್ಲಿಯಲ್ಲಿರುವ ಅಮೆರಿಕಾ, ಕೆನಡಾದಂತಹ ಪ್ರಮುಖ ದೇಶಗಳ ರಾಯಭಾರ ಕಚೇರಿಗೂ, ಕಾಂಗೋದಂತಹ ಪುಟ್ಟ ಆಫ್ರಿಕನ್ ದೇಶವೊಂದರ ರಾಯಭಾರ ಕಚೇರಿಗೂ ಕಾಣುವ ವ್ಯತ್ಯಾಸವು ಸ್ಪಷ್ಟ. ಉದಾಹರಣೆಗೆ ಈ ಭಾಗದಿಂದ ಹಾದುಹೋಗುವಾಗ ಭವ್ಯ ಅರಮನೆಯಂತಿರುವ ಥಾಯ್ಲೆಂಡ್ ರಾಯಭಾರ ಕಚೇರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ರಾಯಭಾರ ಕಚೇರಿಯು ಆವರಿಸಿಕೊಂಡಿರುವ ಪ್ರದೇಶದ ವ್ಯಾಪ್ತಿ, ಕಚೇರಿ ಸಂಕೀರ್ಣದ ಅಚ್ಚುಕಟ್ಟುತನ, ಭದ್ರತಾ ವ್ಯವಸ್ಥೆ… ಹೀಗೆ ಇವುಗಳ ಮಧ್ಯೆ ಬಹುತೇಕ ಎಲ್ಲದರಲ್ಲೂ ಅಜಗಜಾಂತರದ ವ್ಯತ್ಯಾಸ.

ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ, ದೊರೆ ಚಂದ್ರಗುಪ್ತ ಮೌರ್ಯನ ಸಲಹಾಕಾರನೂ, ಖ್ಯಾತ ಅರ್ಥಶಾಸ್ತ್ರಜ್ಞನೂ ಆಗಿದ್ದ ಚಾಣಕ್ಯನ ಹೆಸರನ್ನು ಹೊಂದಿರುವ ಚಾಣಕ್ಯಪುರಿ’ ಪ್ರದೇಶವು, ಇಂದು ಆ ಪ್ರತಿಭಾವಂತನ ಹೆಸರಿಗೆ ತಕ್ಕಂತೆ ರಾಜತಾಂತ್ರಿಕ ಚಟುವಟಿಕೆಗಳ ನೆಲೆಯಾಗಿದೆ. ಇನ್ನು ರಾಜತಾಂತ್ರಿಕ ಮೌಲ್ಯಗಳ ದ್ಯೋತಕವೋ ಎಂಬಂತೆ ಈ ಪ್ರದೇಶದಲ್ಲಿರುವ ಮುಖ್ಯ ರಸ್ತೆಗಳ ಹೆಸರುಗಳು ಗಮನ ಸೆಳೆಯುವುದು ಸತ್ಯ. ಅವುಗಳೆಂದರೆ: ನ್ಯಾಯ ಮಾರ್ಗ, ನೀತಿ ಮಾರ್ಗ, ಚಂದ್ರಗುಪ್ತ ಮಾರ್ಗ, ಪಂಚಶೀಲ ಮಾರ್ಗ ಮತ್ತು ಶಾಂತಿಪಥ್. ಹಿಂದಿ ಭಾಷೆಯ ಪದವಾದ ಮಾರ್ಗ’ ಎಂದರೆ ಮಾರ್ಗ/ರಸ್ತೆ ಎಂದರ್ಥ. ಅಂತೆಯೇ ‘ಪಥ್’ ಕೂಡ ಪಥ/ರಸ್ತೆ ಎಂಬರ್ಥವನ್ನೇ ಧ್ವನಿಸುತ್ತದೆ.

ಅಮೆರಿಕಾ, ರಷ್ಯಾ, ಬ್ರಿಟನ್ ನಂಥಾ ಬಲಶಾಲಿ ರಾಷ್ಟ್ರಗಳ ರಾಯಭಾರ ಕಚೇರಿಗಳನ್ನು ಹೊಂದಿರುವ ಶಾಂತಿಪಥ್ ಬಿಗಿ ಭದ್ರತೆಯನ್ನು ಹೊಂದಿರುವ ದಿಲ್ಲಿಯ ಪ್ರಮುಖ ಬೀದಿಗಳಲ್ಲೊಂದು. ಇವುಗಳಲ್ಲದೆ ಅಂತಾರಾಷ್ಟ್ರೀಯ ಶಾಲೆಗಳು, ಪಂಚತಾರಾ ಹೋಟೇಲುಗಳು, ಉದ್ಯಾನಗಳು ಮತ್ತು ರಾಯಭಾರ ಕಚೇರಿಗಳ ಸಿಬ್ಬಂದಿ ವರ್ಗಕ್ಕಾಗಿ ನಿರ್ಮಿಸಲಾದ ಅಚ್ಚುಕಟ್ಟಾದ ವಸತಿ ಸಂಕೀರ್ಣಗಳನ್ನೂ ಕೂಡ ಚಾಣಕ್ಯಪುರಿಯಲ್ಲಿ ನಾವು ಕಾಣಬಹುದು.

ಚಾಣಕ್ಯಪುರಿ ಪ್ರದೇಶವನ್ನು ೧೯೫೦ ರಲ್ಲಿ ಈ ಉದ್ದೇಶಕ್ಕೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿತ್ತು. ಮುಂದೆ ಚಾಣಕ್ಯಪುರಿಗೆ ತಾಗಿಕೊಂಡಿರುವ ವಸಂತ್ ವಿಹಾರ್ ಪ್ರದೇಶವನ್ನೂ ಕೂಡ ಇದೇ ರೀತಿ ರಾಯಭಾರ ಕಚೇರಿಗಳ ಮತ್ತು ಸಂಬಂಧಿ ವಸತಿ ಸಂಕೀರ್ಣಗಳ ನಿರ್ಮಾಣಕ್ಕಾಗಿ ಅರವತ್ತರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು. ಇಂದು ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಕೊಲಂಬಿಯಾ, ಕೀನ್ಯಾ, ಅಜರ್ ಬೈಜಾನ್, ಬುರ್ಕಿನಾಫಾಸೋ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ರಾಯಭಾರ ಕಚೇರಿಗಳು ವಸಂತ್ ವಿಹಾರ್ ಪ್ರದೇಶದಲ್ಲಿವೆ.

ಮೇಲ್ನೋಟಕ್ಕೆ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗಷ್ಟೇ ಸೀಮಿತವಾಗಿರುವಂತೆ ಕಾಣುವ ರಾಯಭಾರ ಕಚೇರಿಗಳು ಅದರಾಚೆಗೂ ಮೀರಿ ಬೆಳೆಯಬಲ್ಲವು. ಆದರೆ ಇಚ್ಛಾಶಕ್ತಿಯೊಂದು ಇರಬೇಕಷ್ಟೇ. ದಿಲ್ಲಿಯಲ್ಲಿರುವ ಹಲವು ರಾಯಭಾರ ಕಚೇರಿಗಳು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ಆಯಾ ದೇಶಗಳ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಉಡುಗೆ-ತೊಡುಗೆ, ಜೀವನಶೈಲಿ… ಹೀಗೆ ಹಲವು ನವನವೀನ ಸಂಗತಿಗಳನ್ನು ತಾವಿರುವಲ್ಲೇ ಒಂದಷ್ಟು ನೋಡುವ ಸದವಕಾಶವು ಈ ರಾಯಭಾರ ಕಚೇರಿಗಳಿಂದಾಗಿ ದಿಲ್ಲಿಯ ನಿವಾಸಿಗಳಿಗೆ ದಕ್ಕಿದೆ.

ಜಾಗತಿಕ ಮಟ್ಟದ ಸಿನೆಮಾಗಳ ದೊಡ್ಡ ಅಭಿಮಾನಿಯಾದ ನಾನು ದಿಲ್ಲಿಗೆ ಬಂದ ಆರಂಭದ ವರ್ಷಗಳಲ್ಲಿ ಅಪರೂಪಕ್ಕಾದರೂ ಇಂತಹ ರಾಯಭಾರ ಕಚೇರಿಗಳಿಗೆ ಹೋಗಿ ಆಯಾ ದೇಶಗಳ ಚಲನಚಿತ್ರ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದೆ. ಇದಕ್ಕೆ ಯಾವುದೇ ಪ್ರವೇಶಧನವಿಲ್ಲದಿರುವುದು ಈ ಅಭ್ಯಾಸಕ್ಕೆ ಮತ್ತಷ್ಟು ಇಂಬು ನೀಡುತ್ತಿತ್ತು. ಖುದ್ದು ರಾಯಭಾರ ಕಚೇರಿಗಳಲ್ಲಿ ಅಥವಾ ರಾಯಭಾರ ಕಚೇರಿಯ ಸಹಭಾಗಿತ್ವದಲ್ಲಿ ನಡೆಯುವ ಫುಡ್ ಫೆಸ್ಟಿವಲ್ಗಳು, ಭಾಷಾ ಕಲಿಕೆಯ ತರಗತಿಗಳು, ಕೋರ್ಸ್ಗಳು, ಉಪನ್ಯಾಸ ಮಾಲಿಕೆಗಳು, ಪುಸ್ತಕ ಬಿಡುಗಡೆ-ಚರ್ಚೆ, ರಂಗಪ್ರಸ್ತುತಿ-ಒಪೇರಾದಂತಹ ಕಾರ್ಯಕ್ರಮಗಳು ಖಂಡಿತವಾಗಿಯೂ ಆಸಕ್ತರ ಮನಸೂರೆಗೊಳ್ಳುವಂಥವುಗಳು.

ಸ್ವದೇಶವನ್ನು ಬಿಟ್ಟು ಪರದೇಶಗಳಿಗೆ ಹೋಗುವ ಮಂದಿಗೆ ಆಯಾ ನಗರದಲ್ಲಿರುವ ತನ್ನ ದೇಶದ ರಾಯಭಾರ ಕಚೇರಿಯು ಯಾವಾಗಲೂ ಪ್ರಿಯವಾದ ಸ್ಥಳವೇ ಆಗಿರುತ್ತದೆ. ಸಂಕಷ್ಟದ ಪರಿಸ್ಥಿತಿಗಳು ಒದಗಿ ಬಂದಾಗ ಬೆಂಬಲದ ಶಕ್ತಿಯಂತೆಯೂ ಇವುಗಳು ನಾಗರಿಕರ ಜೊತೆಗೆ ನಿಲ್ಲುತ್ತವೆ. ಪರದೇಶದಲ್ಲಿ ‘ನಮ್ಮದು, ನಮ್ಮವರು’ ಎಂಬ ಭಾವಗಳನ್ನು ಅಧಿಕೃತವಾಗಿ ತರುವ ಏಕೈಕ ಸ್ಥಳವೆಂದರೆ ಅದು ರಾಯಭಾರ ಕಚೇರಿಯೇ.

ಒಮ್ಮೆ ಹೀಗಾಯಿತು. ದೆಹಲಿ ಕರ್ನಾಟಕ ಸಂಘ ಆವರಣದ ಪಕ್ಕದಲ್ಲಿದ್ದ ಟೀ ಸ್ಟಾಲ್ ಒಂದರಲ್ಲಿ ಓರ್ವ ಯೂರೋಪ್ ಮೂಲದ ಮಧ್ಯವಯಸ್ಕನನ್ನು ನೋಡಿದ್ದೆ. ತೆಳ್ಳನೆಯ ಟಿ-ಶರ್ಟ್ ಮತ್ತು ಉದ್ದನೆಯ ಚಡ್ಡಿ ಧರಿಸಿದ್ದ ಆತ ಉಸಿರಾಟದ ತೊಂದರೆಯಿಂದ ಬಳಲುತ್ತಿರುವಂತೆ ಕಂಡುಬಂದಿತು. ತೆಳುವಾದ ದಾರದ ಚೀಲವೊಂದು ಆತನ ಬೆನ್ನಿಗಂಟಿಕೊಂಡಿತ್ತು. ಏನಾಯಿತೆಂದು ಹೋಗಿ ವಿಚಾರಿಸಿದರೆ ಆತ ಏಕಾಏಕಿ ಬಿಕ್ಕಿಬಿಕ್ಕಿ ಅಳತೊಡಗಿದ್ದ.

ಅಷ್ಟಕ್ಕೂ ಆಗಿದ್ದೇನೆಂದರೆ ಒಂದೆರಡು ದಿನಗಳ ಹಿಂದೆ ಪಾಸ್-ಪೋರ್ಟು ಮತ್ತು ಒಂದಷ್ಟು ಡಾಲರುಗಳನ್ನು ಹೊಂದಿದ್ದ ಆತನ ಬ್ಯಾಗನ್ನು ಯಾರೋ ಕಿಡಿಗೇಡಿಗಳು ಕದ್ದಿದ್ದರು. ಕಂಗಾಲಾದ ಆತ ದಿಲ್ಲಿಯಲ್ಲಿರುವ ತನ್ನ ದೇಶದ ರಾಯಭಾರ ಕಚೇರಿಗೆ ಹೇಗೋ ತೆರಳಿ ನೆರವನ್ನು ಕೋರಿದ್ದ. ಆದರೆ ಎರಡು ದಿನಗಳ ಕಾಲ ತಲೆಯ ಮೇಲೆ ಸೂರಿಲ್ಲದೆ ರಸ್ತೆಯಲ್ಲೇ ಕಳೆಯಬೇಕಾಯಿತು ಎಂದು ಹೇಳುತ್ತಾ ಮತ್ತೆ ಬಿಕ್ಕಿದ. ಬೆವತುಹೋದ ದೇಹ, ಬಿಳಿಚಿದ ಬಿಳಿತೊಗಲು ಆತನಿದ್ದ ಶೋಚನೀಯ ಸ್ಥಿತಿಯನ್ನು ಸಾರಿ ಹೇಳುವಂತಿತ್ತು. ಆತನಿಗಾಗಿದ್ದ ಆತಂಕ, ಆಘಾತಗಳು ಆತನ ಬೆರಳುಗಳ ಮಧ್ಯದಲ್ಲಿ ಸುಡುತ್ತಿದ್ದ ಮಾರ್ಲ್ಬೋರೋ ಸಿಗರೇಟಿಗಿಂತಲೂ ತೀವ್ರವಾಗಿದ್ದವು.

ವಿಷಯವು ನಿಜಕ್ಕೂ ಗೋಜಲಿನದ್ದಾಗಿತ್ತು. ಬೇಕೆಂದರೆ ನಿನ್ನ ದೇಶದ ರಾಯಭಾರ ಕಚೇರಿಗೆ ಕರೆದೊಯ್ಯುವೆ ಎಂದು ಆತನಿಗೆ ಧೈರ್ಯ ಹೇಳಿದೆ. ನೆರವಿನ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ ಆ ವ್ಯಕ್ತಿ, ತನ್ನ ಚಡ್ಡಿಯ ಜೇಬಿನಲ್ಲಿದ್ದ ಕೆಲ ನಾಣ್ಯಗಳನ್ನು ತೋರಿಸಿ ‘ಸದ್ಯ ಇದರಲ್ಲೇ ನಿಭಾಯಿಸುವೆ, ಜೀಸಸ್ ಕೃಪೆಯಿಂದ ಹೇಗೋ ನಾಳೆ-ನಾಡಿದ್ದರಲ್ಲಿ ತಾಯ್ನಾಡು ಸೇರಿದರಾಯಿತು’ ಎಂದ. ಆದರೂ ನನ್ನ ವಿಸಿಟಿಂಗ್ ಕಾರ್ಡನ್ನು ಆತನ ಕೈಗೆ ತುರುಕಿ, ಏನಾದರೂ ಗಡಿಬಿಡಿಯಿದ್ದರೆ ಖಂಡಿತ ತಿಳಿಸು ಎಂದಿದ್ದೆ. ಇದಕ್ಕೊಪ್ಪಿದ ಆತ ಧನ್ಯವಾದಗಳನ್ನರ್ಪಿಸಿ ಮುನ್ನಡೆದಿದ್ದ.

ಅಸಲಿಗೆ ಅಂಗೋಲಾ ದಿನಗಳಲ್ಲಿ ನಮ್ಮ ಕಾರಿನ ಸಮೇತವಾಗಿ ಪಾಸ್-ಪೋರ್ಟ್, ನಗದು ಮತ್ತು ಬಹುಮುಖ್ಯ ದಸ್ತಾವೇಜುಗಳನ್ನು ಕಳೆದುಕೊಂಡು ತಾಸುಗಟ್ಟಲೆ ಕಂಗಾಲಾದ ಸಂದರ್ಭವು ನನಗೆ ಮತ್ತೆ ನೆನಪಾಗಿತ್ತು. ಪರದೇಶಗಳಿಗೆ ಹೋಗಿ ನಮ್ಮದೇ ದಾಖಲಾತಿಗಳನ್ನು ಕಳೆದುಕೊಂಡೆವೆಂದರೆ ಅದಕ್ಕಿಂತ ಗೊಂದಲಮಯವಾದ ಪರಿಸ್ಥಿತಿಯು ಬೇರೊಂದಿಲ್ಲ. ಒಟ್ಟಿನಲ್ಲಿ ಆ ಐರೋಪ್ಯ ಆಗಂತುಕನಿಗೆ ದಿಲ್ಲಿಯು ಕಹಿ ಅನುಭವವನ್ನು ತಂದಿದ್ದು ಮಾತ್ರ ದುರದೃಷ್ಟಕರ.

ದಿಲ್ಲಿಯಲ್ಲಿರುವ ರಾಯಭಾರ ಕಚೇರಿಗಳು ನನಗೆ ಖ್ಯಾತ ಮಹಾನಗರಿಯೊಂದರ ಒಳಗಿರುವ ಪುಟ್ಟ ದೇಶಗಳಂತೆಯೇ ಕಂಡಿವೆ. ನಿಸ್ಸಂದೇಹವಾಗಿ ನನ್ನೊಳಗಿನ ವಿಶ್ವಮಾನವನನ್ನು ಜಾಗೃತಗೊಳಿಸಿವೆ. ಹೀಗಾಗಿ ಇಂಥಾ ಸ್ಥಳಗಳಿಗೆ ಭೇಟಿ ನೀಡುವಾಗ ಮನದಲ್ಲಿ ನಲಿದಾಡುವ ಹುಮ್ಮಸ್ಸೇ ಬೇರೆ.

ನಮ್ಮದೇ ಶಹರದ ಮಿತಿಯಲ್ಲಿದ್ದೂ ‘ಮುಸಾಫಿರ್’ ಆಗಿರುವುದೆಂದರೆ ಹೀಗೆ!

March 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: