‘ಬಹುರೂಪಿ’ ಎಂಬ ಸುಂದರ ಕನಸು

ಜಿ ಎನ್‌ ನಳಿನ

‘ಬಹುರೂಪಿ’ ಎಂಬುದು ಏನು..? ಇದು ಒಂದು ಪುಸ್ತಕ ಪ್ರಕಾಶನ ಮತ್ತು ಆನ್‌ಲೈನ್‌ ಪುಸ್ತಕ ಮಳಿಗೆ, ಬಹಳ ಜನರಿಗೆ ಗೊತ್ತಿರಬಹುದಾದ ಈ ಬಹುರೂಪಿ ಅದರ ಬಹುದಿನದ ಕನಸಿನ ಕೂಸಾಗಿದ್ದ ‘ಬಹುರೂಪಿ ಬುಕ್‌ ಹಬ್’ ಪುಸ್ತಕ ಕೆಫೆಯನ್ನು ಸಾಕಾರಗೊಳಿಸಿದ್ದು ಸಾಹಿತ್ಯ ಲೋಕದ ದಿಗ್ಗಜ ವರಕವಿ ಬೇಂದ್ರೆಯ ದಿನದಂದು

‘ನಾಕುತಂತಿ’ಯಲ್ಲಿ ಬಹುರೂಪಿಯ ಬಹುರೂಪವನ್ನು ನೋಡಿ ಆನಂದಪಟ್ಟವರಲ್ಲಿ ನಾನೂ ಒಬ್ಬಳು. ನಾನು ಸಾಧಾರಣವಾಗಿ ದೊಡ್ಡ ದೊಡ್ಡ ಪುಸ್ತಕ ಮಳಿಗೆಗೆಳನ್ನು ನೋಡಿದ್ದೆ, ಭೇಟಿ ಕೊಟ್ಟಿದ್ದೆ. ಬುಕ್‌ ಹಬ್‌ ಎಂದರೆ ಏನು?.. ‘ಪುಸ್ತಕ ಕೆಫೆ’ ಏನಿದರ ಅರ್ಥ ತಿಳಿದುಕೊಳ್ಳಬೇಕೆಂದು ‘ಬುಕ್‌ ಹಬ್’‌ನ ಪ್ರಾರಂಭೋತ್ಸವಕ್ಕೆ ಭೇಟಿಕೊಟ್ಟೆ.

ಹೊರ ನೋಟಕ್ಕೆ ಕಣ್ಸೆಳೆಯುವಂತಿದ್ದ ಅದರ ವಿನ್ಯಾಸ, ಕಟ್ಟಡದ ಮುಂಭಾಗದಲ್ಲಿ ಬಿಡಿಸಿದ್ದ ಸುಂದರವಾದ ಚಿತ್ರಣ, ಮನೆಯ ಹೆಸರು ಅದರ ಫಲಕ, ಅಲ್ಲಿನ ಅಲಂಕಾರಿಕ ಸಸ್ಯಗಳು, ವಿಭಿನ್ನತೆಯಿಂದ ಕೂಡಿದ ಪ್ರಚಾರ ಫಲಕಗಳು, ಅವೆಲ್ಲವನ್ನು ದಾಟಿ ಮೊದಲನೆ ಮಹಡಿಯಲ್ಲಿ ಇದ್ದ ಬಹುರೂಪಿಯ ವಾತಾವರಣಕ್ಕೆ ಕಾಲಿಟ್ಟೆ. ವಾವ್!‌ ಎಂಥ ಖುಷಿ, ಉತ್ಸಾಹ, ಹಬ್ಬದ ಸಂಭ್ರಮವಿತ್ತು. ಆ ಮಳಿಗೆಯಲ್ಲಿ. ಯಾಕೋ ಆ ಸ್ಥಳವನ್ನು ಮಳಿಗೆ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ. ಏನೆಂದು ಹೆಸರಿಸಲಿ… ಯೋಚಿಸುತ್ತಿದ್ದಾಗ ‘ಪುಸ್ತಕ ಮನೆ’ ಪದ ಮನಸ್ಸಿನಲ್ಲಿ ಮೂಡಿತು.

ಕಲಾತ್ಮಕವಾಗಿ ರೂಪುಗೊಂಡಿರುವ ಮನೆ. ಮನೆಯೆಂದರೆ ಜೀವನೋತ್ಸಾಹ, ನೆಮ್ಮದಿ, ಕಲಿಕೆ ಬೆಚ್ಚನೆಯ ಭಾವ ತುಂಬಿರುವ ಸ್ಥಳ. ಆದರೆ ಈ ಮನೆ ಮನಸ್ಸಿಗೆ ಖುಷಿ ತುಂಬುವಂತ ಶಾಂತ ವಾತಾವರಣದಿಂದ ಕೂಡಿ ನಮ್ಮ ಜ್ಞಾನ ದಾಹವನ್ನು ಇನ್ನಷ್ಟು ಹೆಚ್ಚಿಸುವ ತಾಣವಾಗಿತ್ತು. ಒಳಗೆ ಕಾಲಿಟ್ಟಾಗ ಕಂಡಿದ್ದು ಸಾಹಿತಿಗಳು, ಪುಸ್ತಕ ಪ್ರಕಾಶಕರು, ಪುಸ್ತಕ ಪ್ರಿಯರಿಂದ ತುಂಬಿದ್ದ ಮನೆ. ಮೆಲು ಸಂಗೀತ, ಗಾಯನ, ಸಂಭ್ರಮ ಎಲ್ಲ ಒಂದೆಡೆ ಸೇರಿತು. ಪುಸ್ತಕ ಮನೆ ಮೊದಲನೇ, ಎರಡನೇ ಮಹಡಿಯನ್ನೂ ಒಳಗೊಂಡಿದ್ದು ಮನೆಯ ಎಲ್ಲೆಲ್ಲೂ ಪುಸ್ತಕಗಳಿಂದ ತುಂಬಿತ್ತು.

ಕನ್ನಡದ ಹಲವಾರು ಹೆಸರಾಂತ, ಉದಯೋನ್ಮುಕ ಲೇಖಕ-ಲೇಖಕಿಯರ ಪುಸ್ತಕಗಳು ಅವುಗಳ ಮೇಲೆ ಬೆಳಕು ಬೀರುತ್ತ ತನ್ನಿರವನ್ನು ಸಾರುತ್ತಿದ್ದ ದೀಪಗಳು, ಮೆಟ್ಟಿಲುಗಳ ಮಧ್ಯೆ ವಿಭಿನ್ನ ರೀತಿಯಲ್ಲಿ ಪ್ರಚಾರ ನೀಡುತ್ತಿದ್ದ ಬರಹಗಾರರ ಹೆಸರು, ಕೃತಿಗಳು ಗೋಡೆಯ ಮೇಲಿನ ಚೌಕಟ್ಟಿನಲ್ಲಿದ್ದ ಕಲಾತ್ಮಕ ವಸ್ತುಗಳು, ಕಬ್ಬಿಣದ ಸರಳುಗಳ ಮೇಲೆ ತೂಗು ಹಾಕಿದ್ದ ಅರ್ಥಗರ್ಭಿತ ಪದಗಳ ಫಲಕಗಳು ಒಂದರೊಡನೊಂದು ಸ್ಪರ್ಧೆಗಿಳಿದಿವೆಯೇನೋ ಎನ್ನುವಂತೆ ಕಾಣುತ್ತಿತ್ತು. ಇವೆಲ್ಲವುಗಳ ಮದ್ಯೆ ಪುಸ್ತಕ ಪ್ರಿಯರು ತಮಗೆ ಬೇಕಾದ ಕೃತಿಗಳಿಗಾಗಿ ಉತ್ಸಾಹದಿಂದ ಹುಡುಕಾಟ ನಡೆಸಿದ್ದುದು ಕಾಣಬರುತ್ತಿತ್ತು.

ಈ ಉತ್ಸಾಹ ಹಿರಿಯರು ಕಿರಿಯರೆನ್ನದೆ ಎಲ್ಲ ವಯೋಮಾನದವರಲ್ಲೂ ಕಾಣುತ್ತಿತ್ತು. ಕೆಳಗಿದ್ದ ಒಂದು ಕೋಣೆಯನ್ನು ಮಕ್ಕಳ ವಿಭಾಗವಾಗಿ ಮಾಡಿದ್ದು ಅದನ್ನು ನೋಡಿದ ಮಕ್ಕಳ ಉತ್ಸಾಹ ಹೇಳತೀರದು. ಅದರ ಪ್ರವೇಶದ್ವಾರದಲ್ಲೆ ಹಾಕಿದ್ದ ಹಲಗೆ ಮೇಲೆ ತಮ್ಮ ಪುಟ್ಟ ಕೈಗಳಿಂದ ಚಿತ್ರ ಬಿಡಿಸುವವರು ಕೆಲವರಾದರೆ, ಒಳಗೆ ಜೋಡಿಸಿದ್ದ ಕನ್ನಡ-ಇಂಗ್ಲೀಷ್ ನ ಬಣ್ಣ ಬಣ್ಣದ ಪುಸ್ತಕಗಳು, ಚಿತ್ರಗಳಿಂದ ಆಕರ್ಷಿತರಾಗಿ ಅವುಗಳೊಂದಿಗೆ ಕೆಳಗಿದ್ದ ನೆಲಹಾಸಿನ ಮೇಲೆ ಕುಳಿತು ಅವುಗಳನ್ನು ನೋಡುತ್ತಾ, ಓದುತ್ತಾ ಒಬ್ಬರಿಗೊಬ್ಬರು ತೋರಿಸುತ್ತಾ ತಲ್ಲೀನರಾಗಿದ್ದ ಮಕ್ಕಳು, ಅವರ ಜೊತೆ ಓದಲು ಬಾರದ ಪುಟ್ಟ ಮಕ್ಕಳು ಪುಸ್ತಕದಲ್ಲಿದ್ದ ಚಿತ್ರಗಳನ್ನು ನೋಡುತ್ತಾ ತಮ್ಮದೇ ಆದ ಕಥಾಲೋಕದಲ್ಲಿ, ಊಹಾಲೋಕದಲ್ಲಿ ಮುಳುಗಿದ್ದರು ಅವರ ಭಂಗಿಗಳು ಗೋಡೆಯ ಮೇಲಿದ್ದ ಅಂದವಾದ ಮಕ್ಕಳ ಚಿತ್ರಪಟದೊಂದಿಗೆ ಸ್ಪರ್ಧಿಸುವಂತೆ ಕಾಣಿಸುತ್ತಿದ್ದವು. ಮಕ್ಕಳೆಲ್ಲ ತಮಗೆ ಬೇಕಾದ ಪುಸ್ತಕಗಳನ್ನು ಮನೆಗೊಯ್ಯುವ ಕಾತರದಲ್ಲಿದ್ದರು.

ಇವೆಲ್ಲವನ್ನು ನೋಡುತ್ತಾ ಎರಡನೇ ಮಹಡಿಯ ಪ್ರವೇಶದಲ್ಲೇ ಧುತ್ತೆಂದು ಎದುರಾದ ಪೂರ್ಣ ಚಂದ್ರ ತೇಜಸ್ವಿ ಯವರ ಚಿತ್ರ ಆ ಪುಸ್ತಕ ಮನೆಯನ್ನು ಅರ್ಥಪೂರ್ಣವಾಗಿಸಿತ್ತು. ಮೇಲಿನ ಒಂದು ಕೋಣೆಯನ್ನು ಕಛೇರಿಯನ್ನಾಗಿ ಮಾಡಿಕೊಂಡಿದ್ದು ಇನ್ನೊಂದು ಕೋಣೆ ಆಂಗ್ಲಭಾಷೆಯ ಪುಸ್ತಕಗಳಿಂದ ಯುವಜನರನ್ನು ತನ್ನತ್ತ ಸೆಳೆಯುತ್ತಿದ್ದು ಹೆಸರಾಂತ ಬರಹಗಾರರು, ಅನುವಾದಕರ ಕೃತಿಗಳಿಂದ ತುಂಬಿತ್ತು.

ಜನರು ಈ ಪುಸ್ತಕ ಮನೆಗೆ ಭೇಟಿ ನೀಡಿ ತಮಗಿಷ್ಟವಾದ ಕೃತಿಗಳನ್ನು ಖರೀದಿಸಬಹುದಾಗಿತ್ತು. ಜೊತೆಗೆ ಟೀ, ಕಾಫಿಯ ಘಮದ ಜೊತೆಗೆ ಆ ಪುಸ್ತಕದ ಘಮವನ್ನು ಅನುಭವಿಸುವಂತೆ ಹಸಿರಿನಿಂದ ಕೂಡಿದ್ದ ಸುಂದರ ವಾತಾವರಣವನ್ನು, ಅನುಕೂಲಗಳನ್ನು ಜನತೆಗೆ ಒದಗಿಸಿ ಬಹುರೂಪಿಯ ತನ್ನ ಕನಸನ್ನು ನನಸಾಗಿಸಿತ್ತು.

‍ಲೇಖಕರು Avadhi

March 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kiran Bhat

    ನಿಜ ಮೇಡಮ್ ನಾನೂ ಇದನ್ನ ‘ ಮನೆ’ ಅಂತ್ಲೇ ಕರ್ದಿದೇನೆ. ನಾನು ಹೋದಾಗ ಕಾಫಿಯ ಘಮ ಇನ್ನೇನು ಹರಡಲಿಕ್ಕಿತ್ತು.
    ಮುಂದಿನ ಬಾರಿ with coffee.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: