ಪದ್ಮನಾಭ ಆಗುಂಬೆ ಹೊಸ ಕಥೆ- ವಾಟೆಹಳ್ಳದಲ್ಲೊಂದು ಸೋಪಿನ ಸ್ನಾನ

ಪದ್ಮನಾಭ ಆಗುಂಬೆ 

ಜಂಬುದ್ವೀಪದ ಕರುನಾಡು ರಾಜ್ಯ, ಅಲ್ಲಿ ಶಿವಮೊಗ್ಗವೆಂಬ ಜಿಲ್ಲೆ, ಅದರ ಮೂಲೆಯಲ್ಲೊಂದು ಸಾಲೂರು ಪೇಟೆಯೆಂದು ಕರೆಯಲ್ಪಡುವ ಹಳ್ಳಿ. ಬ್ರಿಟಿಷರ ಕಾಲದಿಂದಲೂ ಇರುವ ಒಂದು ಪ್ರೈಮರಿ ಮತ್ತು ಒಂದು ಮಿಡಲ್ ಸ್ಕೂಲು. ನಮ್ಮದೇ ಘನ ಸರಕಾರ ಸ್ಥಾಪಿಸಿದ ಹೈಸ್ಕೂಲು. ಹಳೇ ಕಾಲದ ಹೆಂಗಸಿನ ಬೈತಲೆಯಂತೆ ಊರನ್ನೆರೆಡು ಭಾಗವಾಗಿಸಿ ಹರಿಯುವ ವಾಟೆಹಳ್ಳವೆಂಬ ಜೀವನದಿ. ಮೇಲ್ಪೇಟೆ, ಹೊಳೆಂದಾಚೆ ಎಂಬೆರೆಡೂ ಭಾಗಗಳಲ್ಲೊಂದರಂತೆ ಎರಡೆರಡು ಸಾರಾಯಿ ಅಂಗಡಿಗಳು. ಪೂಜಿಸುವ ಹಿಂದುಗಳಿಗಾಗಿ ಪತ್ನೀ ಸಮೇತ ಮಲ್ಲಿಕಾರ್ಜುನ ದೇವಾಲಯ, ಮುಸ್ಲಿಮರಿಗಾಗಿ ಬದ್ರಿಯಾ ಮಸೀದಿ. ಇವು ಸಾಲೂರು ಪೇಟೆಯ ಪ್ರಮುಖ ಭೂಗುರುತುಗಳು.

ಐದೋ ಆರೋ ಕಿರಾಣಿ ಅಂಗಡಿಗಳು, ಒಂದು ರಾಟೆ, ಒಬ್ಬ ದರ್ಜಿ ಮತ್ತು ಕೆಲವು ಬಟ್ಟೆಗಳಿರುವ ಜವಳಿ ಅಂಗಡಿಯೊಂದು. ಮಂಗಳೂರು ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚರಿಸುವ, ಸಾಲೂರಿನಲ್ಲಿ ಎರಡೇ ನಿಮಿಷ ನಿಂತು ಮುಂದುವರೆಯುವ ಬಸ್ಸುಗಳಿಗಾಗಿ ಒಂದು ಬಸ್ಟ್ಯಾಂಡು. ಚಹಾ, ಗಟ್ಟಿಬಜೆ ಗೋಲಿಬಜೆ ಮಾರುವ ಹೋಟೆಲು ಒಂದು. ಎಸ್ಸೆಸೆಲ್ಸಿಯಲ್ಲಿ ಪಾಸಾಗಿ ಮುಂದೆ ಕಾಲೇಜಿಗೆ ಹೋಗಲಾರದೆ ಊರಲ್ಲೇ ಇರುವ ಹುಡುಗರಷ್ಟು, ಫೇಲಾಗಿರುವ ಹುಡುಗರಷ್ಟು, ಕಾಲೇಜು ಮುಗಿಸಿ ಅಥವಾ ಮುಗಿಸಲಾಗದೆಯೋ ಊರಿಗೆ ಮರಳಿರುವ ಹುಡುಗರಷ್ಟು, ಬಸ್ಟ್ಯಾಂಡು ಎದುರಿಗಿರುವ ಗ್ರಾಮ ಪಂಚಾಯತಿಯ ಪ್ರವಾಸಿ ಮಂದಿರದ ಕಟ್ಟೆಯ ಮೇಲೆ ಕುಳಿತು ಹರಟುತ್ತಲೇ ಇರುವ ಗುಂಪು.

ಬಸ್ಸುಗಳು ಬಂದಾಗ ಪಂಚೆ ಎತ್ತಿ ಕಟ್ಟಿ ಓಡಿ ಹೋಗಿ ‘ಯಾರ್ರೀ ಮಣಿಪಾಲ್, ಉಡುಪಿ ಮೇಂಗ್ಲೂರ್’ ಎಂದೋ, ‘ಯಾರ್ರೀ ಮೇಗ್ರೊಳ್ಳಿ, ತೀರ್ಥಳ್ಳಿ, ಶಿಮೊಗ್ಗಾ’ ಎಂದೋ ಕೂಗುವ ಒಂದಿಬ್ಬರೋ, ಮುವ್ವರೋ ಬಸ್ ಏಜೆಂಟರು. ಊರೆಂದ ಮೇಲೆ ಎಲ್ಲಾ ಊರಿನಲ್ಲಿರುವಂತೆ ರಾಜಕೀಯ ಜಾತಿ ಇತ್ಯಾದಿ ಇತ್ಯಾದಿ. ಸರಾಯಿ ಅಂಗಡಿಗಳು ಮಾತ್ರ ಯಾವ ಭೇದ ಭಾವವೂ ಇಲ್ಲದೇ ಕೂಲಿ ಮಾಡುವವರೂ ಸಣ್ಣ ಮತ್ತು ದೊಡ್ಡ ಹಿಡುವಳಿದಾರರೂ, ಹೈಸ್ಕೂಲು ಮಾಸ್ಟ್ರಂತಾ ಮೇಷ್ಟರೂ ಒಟ್ಟಿಗೆ ಸೇರುವ ಸ್ಥಳ. ಇದು ಸಾಲೂರಿನ ಒಂದು ಕಿರು ಪರಿಚಯ.

ಇಂತಿಪ್ಪ ಸಾಲೂರೆಂಬೊ ಊರಿನಲ್ಲಿ ಅದೊಂದು ಕಾರ್ತಿಕ ಮಾಸದ ರಾತ್ರಿ. ಗ್ರಾಮ ಪಂಚಾಯತಿಯವರು ಹಾಕಿಸಿದ ಬೀದಿ ದೀಪಗಳು ಅಲ್ಲೊಂದು ಇಲ್ಲೊಂದೆಂಬಂತೆ ಮಂಕಾಗಿ ಉರಿಯುತ್ತಾ ಕಾರ್ಗತ್ತಲೆಯೊಂದಿಗೆ ಸೆಣಸಾಡುತ್ತಿದ್ದವು. ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಹೊದಿಕೆ ಹೊದ್ದು, ಇನ್ನೇನು ನಿದ್ದೆಯ ಮಡಿಲಿಗೆ ಜಾರಬೇಕೆಂದಿರುವ ಸಾಲೂರಿನ ಆ ಹೆದ್ದಾರಿಯ ಮೇಲೆ ಸಿದ್ದನೆಂಬ ಎಸ್ ಟಿ ಸಿದ್ದಪ್ಪನೂ, ದೇವಣ್ಣನೆಂಬ ಆರ್ ಕೃಷ್ಣಮೂರ್ತಿ ಕಾಮತನೂ, ಪಾಪಣ್ಣಾಚಾರಿಯೆಂಬ ಜಿ ಜನಾರ್ಧನಾಚಾರ್ಯನೂ ಕೈ ಕಾಲುಗಳನ್ನು ಬೀಸುತ್ತಾ ಯಾವುದೋ ಮಹತ್ಕಾರ್ಯ ಸಾಧನೆಗೆಂಬಂತೆ ನಡೆಯುತ್ತಿದ್ದರು. ಹೀಗೆ ಅವರು ಹೊರಟಿದ್ದುದು ಕಾರ್ತೀಕ ಮಾಸದ ಮುವ್ವತ್ತೂ ದಿನಗಳು ದೇವಸ್ಥಾನದಲ್ಲಿ ನಡೆಯುವ ದೀಪಕ್ಕೆ.

ದೀಪವೆಂದರೆ ಉಳ್ಳವರು ಮಾಡಿಸುವ ಒಂದು ದೀಪಗಳ ಪೂಜೆ ದೀಪೋತ್ಸವ. ರಾತ್ರಿ ಸುಮಾರು ಏಳು ಗಂಟೆಯ ಮೇಲೆ ದೇವಸ್ಥಾನದ ಗರ್ಭಗುಡಿಯಿಂದ ಹೊರ ಪ್ರಾಂಗಣದವರೆಗೂ, ಅಡಿಕೆ ದಬ್ಬೆ ಅಥವಾ ಮರದ ಹಲಗೆಗಳಿಂದ ಮಾಡಿದ ಒಂದು ರೀತಿಯ ಅಟ್ಟಣಿಗೆಯ ಮೇಲೂ, ದೇವಸ್ಥಾನದ ಸುತ್ತೂ ಗೋಡೆಯ ಕಟ್ಟುಗಳ ಮೇಲೂ ಹಣತೆಗಳನ್ನಿರಿಸಿ, ಬೆಳಗಿಸಿ ಜೊತೆಗೆ ಎಂದಿನಂತೇ ದೇವರಿಗೆ ಹಣ್ಣು ಕಾಯಿ ಧೂಪ ಆರತಿಗಳನ್ನರ್ಪಿಸಿ ಗಂಟೆ ಬಾರಿಸುತ್ತಾ ಅರ್ಚಕರು ನೆರವೇರಿಸುವ ಪೂಜೆ. ಪೂಜೆ ನಡೆಯುವ ಮಧ್ಯೆ ಪೂಜೆ ಮಾಡಿಸುವವರು ಶಕ್ತ್ಯಾನುಸಾರ ಪಟಾಕಿ, ಹೂ ಬಾಣ, ಸುರ್ ಸುರ್ ಬತ್ತಿ ಇತ್ಯಾದಿಗಳ ಹಚ್ಚುವಿಕೆ. ಪೂಜೆಯ ನಂತರ ಅವಲಕ್ಕಿ ಅಥವಾ ಅರಳು-ಬೆಲ್ಲದ ಪಂಚ ಕಜ್ಜಾಯ, ಹುರಿಗಡಲೆ ಸಕ್ಕರೆಯ ಪುಟಾಣಿ ಅಂಥದ್ದೇ ಏನಾದರೂ ಚರ್ಪು ಪ್ರಸಾದ.

ಸಾಧಾರಣವಾಗಿ ಊರಿನ ಮಕ್ಕಳೆಲ್ಲರೂ ದೀಪಕ್ಕೆ ಹೋಗೇ ಹೋಗುತ್ತಾರೆ. ಹೀಗೆ ಮಕ್ಕಳು ತಪ್ಪದೆ ಹೋಗುವುದು ದೇವರ ಮೇಲಿನ ಭಕ್ತಿಯಿಂದ ಆಗಲಿ, ಮನೆಯಲ್ಲಿ ಅಪ್ಪ ಅಮ್ಮ ಹೋಗು ಎಂದು ಹೇಳುತ್ತಿದ್ದರಿಂದ ಆಗಲಿ ಅಲ್ಲ. ಪೂಜೆ ಮಾಡಿಸುವವರು ಹೊಡೆದ ಪಟಾಕಿಗಳು ಮತ್ತು ಹೊಡೆಯದ ಟುಸ್ ಪಟಾಕಿಗಳನ್ನು ಆಯ್ದು ಮನೆಗೆ ತಂದು ಮರುದಿನ ಅವುಗಳಿಂದ ಮದ್ದು ಸಂಗ್ರಹಿಸಿ ಬೇರೆಯೊಂದು ಪಟಾಕಿ ಮಾಡುವ ಆಸೆಯಿಂದಲೂ, ಚರ್ಪಿನ ಆಸೆಯಿಂದಲೂ, ಅಷ್ಟಲ್ಲದೆ ಪೂಜೆ ನಡೆಯುವ ಮೊದಲು ಅರ್ಚಕರು, ದೇವಾಡಿಗರು, ದೀವಿಟಿಗೆ ಹಿಡಿಯುವವರು ಇತ್ಯಾದಿ ದೇವಸ್ಥಾನದ ಪೂಜೆಗೆ ಸಂಬಂಧಪಟ್ಟವರು ಮಾಡುವ ತಯ್ಯಾರಿಯ ಸಮಯದಲ್ಲಿ ಗಂಡು ಹೆಣ್ಣು ಮಕ್ಕಳೆಲ್ಲರೂ ಕೂಡಿ ದೇವಸ್ಥಾನದ ವಿಶಾಲವಾದ ಕಟ್ಟಡದಲ್ಲಿ ಆಡುವ ಕಣ್ಣಾಮುಚ್ಚಾಲೆ ಅಥವಾ ಕಳ್ಳ-ಪೊಲೀಸ್ ಆಟಗಳ ಆಸೆಯಿಂದಲೂ ಮಕ್ಕಳು ಪ್ರತಿದಿನವೂ ದೀಪಕ್ಕೆ ಹಾಜರಾಗುತಿದ್ದದು.

ಅಂದು ಕಾರ್ತಿಕದ ಏಳನೆಯದೋ ಎಂಟನೆಯದೋ ದಿನವಿರಬೇಕು. ವಿದ್ಯುಚ್ಛಕ್ತಿ ಇರುವ ಕೆಲವರ ಮನೆಗಳಲ್ಲಿ ಗೂಡು ದೀಪಗಳು ಬೆಳಗುತ್ತಾ, ಬೀದಿ ದೀಪಗಳ ಬೆಳಕಿಗೆ ಕತ್ತಲೆಯೊಂದಿಗೆ ಹೋರಾಡಲು ಸಹಕರಿಸುತ್ತಿದ್ದವು. ಅಂತಾ ಬೆಳೆಕೆಂಬ ಬೆಳೆಕಿನಲ್ಲಿ, ಹೆದ್ದಾರಿಯೆಂಬೋ ದಾರಿಯಲ್ಲಿ ಎಂದಿನಂತೆ ಅಂದೂ ಸಿದ್ದ, ದೇವಣ್ಣ ಮತ್ತು ಪಾಪಣ್ಣತ್ರಯರು ದೇವಸ್ಥಾನದ ಕಡೆಗೆ ನಡೆಯತ್ತಿದ್ದು, ದೇವಣ್ಣನ ‘ಏ ಸಿದ್ದ, ಆಚಾರಿ, ನಮ್ಮಪ್ಪಯ್ಯ ಸೋಡಾ ದುಡ್ಡು ಕೇಳ್ಕನ್ಡ್ ಬಾ ಅಂತ ಹೇಳಿದಾರೆ, ಆ ಸಾಯಿಬನ ಅಂಗಡಿಲಿ ಕೇಳ್ಕನ್ಡ್ ಬರ್ತೀನಿ’ ಎಂಬ ಮಾತಿನ ಅಡಚಣೆಗೆ ಸಿಕ್ಕ ಅವರ ಹುಮ್ಮಸ್ಸು ಕಡಿದಂತಾಗಿ, ದೇವಣ್ಣನ ಹಿಂದೆಯೇ ಉಳಿದೀರ್ವರೂ ಹಿಂಬಾಲಿಸಿದರು.

ಒಣ ಮೀನು ಬುಟ್ಟಿಯನ್ನು ಹೊತ್ತುಕೊಂಡೇ ಘಟ್ಟದ ಮೇಲೆ ಬಂದು, ಹಂತ ಹಂತವಾಗಿ ಮೀನು ವ್ಯಾಪಾರದಿಂದ ಕಿರಾಣಿ ಅಂಗಡಿ, ಅಡಿಕೆ ವ್ಯಾಪಾರ ಮತ್ತು ಗದ್ದೆ ತೋಟಗಳಿಗೂ ಬಡ್ತಿ ಪಡೆದ ಅದ್ರುಸಾಕ್ ಸಾಯಿಬರ ಮಗ ಮೊಹಮ್ಮದ್ ಬ್ಯಾರಿಯ ಬಿಸ್ಮಿಲ್ಲಾ ಸ್ಟೋರೆಂಬ ಅಂಗಡಿ, ರೈತರಿಗೆ ಬೇಕಾಗುವ ಹಾರೆ, ನೇಗಿಲು, ಕುಳ, ಮೊಳೆಗಳಿಂದ ಹಿಡಿದು ಅಕ್ಕಿ, ರವೆ, ಅವಲಕ್ಕಿ, ಪೇಸ್ಟು, ಪೌಡರುಗಳವರೆಗೂ, ಜ್ವರ, ತಲೆ ನೋವಿಗೆ ಬೇಕಾಗುವ ಅನಾಸಿನ್, ಕ್ರೋಸಿನ್ ಇತ್ಯಾದಿತ್ಯಾದಿ ಇಂಗ್ಲಿಷ್ ಔಷಧಿಗಳಿಂದ, ದಶಮೂಲಾರಿಷ್ಟ ಬಾಲಗ್ರಹಪೀಡಾ ನಿವಾರಣಗಳಂತಾ ಆಯುರ್ವೇದಿಕ್ ಔಷದಿಗಳವರೆಗೂ ಎಲ್ಲಾ ಅವಶ್ಯಕತೆಗಳಿಗೂ ಸಾಲೂರು ಮತ್ತು ಸುತ್ತಲ ಹತ್ತೂ ಹಳ್ಳಿಗಳ ಜನ ಸಂಪರ್ಕಿಸಲೇಬೇಕಾದ ಒಂದು ರೀತಿಯ ಡಿಪಾರ್ಟಮೆಂಟಲ್ ಅಂಗಡಿಯಾಗಿತ್ತದು.

ರಾತ್ರಿ ಎಂಟು ಗಂಟೆಯ ಮೇಲಾಗಿದ್ದುದರಿಂದ ಗಿರಾಕಿಗಳ್ಯಾರೂ ಅಂಗಡಿಯಲ್ಲಿರಲಿಲ್ಲ. ಮುಂದೆ ಹೋದ ದೇವಣ್ಣ, ಗಾಜಿನ ಮುಂಭಾಗವನ್ನು ಹೊಂದಿರುವ ಶೋಕೇಸಿಗೆ ಒರಗಿ ನಿಂತು ‘ಹ್ವಾಯ್ ಮಮ್ಮದಣ್ಣಾ, ಎಂಟು ರೂಪಾಯಿ ಸೋಡಾ ದುಡ್ಡು ಕೊಡ್ಬೇಕಂತಲಾ’ ಎಂದ. ಹಾಗನ್ನುತ್ತಿರುವ ಆತನ ಕೈ ಉದ್ದೇಶರಹಿತವಾಗಿ ಶೋಕೇಸಿನ ಗಾಜನ್ನು ಸವರುತ್ತಿತ್ತು. ಸವರುತ್ತಿದ್ದ ಆತನ ಕೈಗೆ ಒಡೆದ ಗಾಜೂ, ಅದನ್ನು ಮುಚ್ಚಲು ಹಾಕಿದ ರಟ್ಟೂ ತಾಕಿದವು.

ಹಾಗೆಯೇ ರಟ್ಟನ್ನು ಬದಿಗೆ ಸರಿಸಿ ಕೈ ಒಳಗೆ ತೂರಿಸಿದವನಿಗೆ ಎಂತದೋ ಸಿಕ್ಕಿತು. ಸಿಕ್ಕಿದ್ದು ಏನೆಂಬುದು ತಿಳಿಯುವ ಮೊದಲೇ ಮೆಲ್ಲಗೆ ಹೊರ ತೆಗೆದ ದೇವಣ್ಣ, ಅದನ್ನು ಪಾಪಣ್ಣಾಚಾರಿಯ ಕೈಗೂ, ಪಾಪಣ್ಣಾಚಾರಿ ಸಿದ್ದನ ಕೈಗೂ ಹಸ್ತಾಂತರಿಸಿದರು. ಕೈಗೆ ಸಿಕ್ಕಿದ ವಸ್ತುವನ್ನು ಖಾಕಿ ಚೆಡ್ಡಿಯ ಜೋಬಿನೊಳಸೇರಿಸಿದ ಸಿದ್ದ, ಢವಗುಡುತಿದ್ದ ಎದೆಯೊಂದಿಗೆ ಮೆಲ್ಲ ಮೆಲ್ಲಗೆ ಹೊರಬಂದ. ಪಾಪಣ್ಣಾಚಾರಿಯೂ ಸಿದ್ಧನನ್ನು ಹಿಂಬಾಲಿಸಿದ. ಈ ಘಟನಾವಳಿ ನಡೆಯುವಾಗ ಮೊಹಮ್ಮದ್ ಬ್ಯಾರಿಯ ಗಮನ ಸೋಡಾ ಬಾಕಿಯ ಚೀಟಿಯ ಮೇಲೆ ಮಾತ್ರ ಇದ್ದಿದ್ದು ಗಮನಾರ್ಹ.  

‘ಎಂತದ್ರಿ ಕಾಮತ್ರೇ ಎಂಟು ರೂಪಾಯಿನೆಲ್ಲ ಹೇಳಿ ಕಳಿಸ್ತಾರಲ್ಲ ನಿಮ್ಮಪ್ಪಯ್ಯ, ಅವರಿಗೇನ್ ಮಂಡೆ ಹಾಳಾಗ್ಯಾದನ್ರಿ, ನಾಳೆ ಕೊಡ್ತಾರಂತ ಹೇಳ್ರಿ’ ಎಂಬ ಮೊಹಮ್ಮದನ ಮಾತಿನೊಂದಿಗೆ ದೇವಣ್ಣನೂ ಹೊರ ಬಂದ.

ಇಲ್ಲಿ ಸಿದ್ದ, ದೇವಣ್ಣ, ಪಾಪಣ್ಣಾಚಾರಿಗಳ ಪರಿಚಯ ಮಾಡುವುದೊಳಿತು.

ಎಸ್ ಟಿ ಸಿದ್ದಪ್ಪನೆಂಬ ಸಿದ್ದನು, ಸುಮಾರು ೧೧-೧೨ ವರ್ಷಗಳ ಹಿಂದೆ ಇದೇ ಸಾಲೂರಿನಲ್ಲಿ ಕೆ ತಿಮ್ಮಪ್ಪ ಮತ್ತು ಹೂವಮ್ಮರೆಂಬ ದಂಪತಿಗಳ ಹೊಟ್ಟೆಯಲ್ಲಿ ಹುಟ್ಟಿದ್ದನು. ಯಾಕೆಂದರೆ ಅವನಪ್ಪನಾದ ತಿಮ್ಮಪ್ಪನೂ ಸಿದ್ದಪ್ಪ ಹುಟ್ಟುವ ಸುಮಾರು ೩೦-೩೩ ವರ್ಷಗಳ ಹಿಂದೆ ನಾಗೇಗೌಡ ಮತ್ತು ಬುಳ್ಳಮ್ಮನವರ ಸುಪುತ್ರನಾಗಿ ಜನುಮ ತಾಳಿದ್ದನು. ಈ ನಾಗೇಗೌಡನೆಂಬುವನು ತಿಮ್ಮಪ್ಪ ಹುಟ್ಟುವ ೨-೩ ವರ್ಷಗಳ ಮುಂಚೆ ಅವನು ಹದಿನೆಂಟೋ ಹತ್ತೊಂಬತ್ತೋ ವಯುಸ್ಸುಳ್ಳವನಾಗಿರುವಾಗ ಬೊಂಬಾಯಿಯೆಂಬೋ ಊರಿಗೆ ಓಡಿ ಹೋಗಿ, ಅಲ್ಲಿ ಏನೂ ಮಾಡಲಾಗದೆಯೋ ಅಥವಾ ಮಾಡಲಾರದೆಯೊ ಬರೀ ಚಾ ಕುಡಿಯುವುದನ್ನು ಮಾತ್ರ ಕಲಿತು ತನ್ನೂರಾದ ಕಾರೇಗದ್ದೆ, ಸಾಲೂರು ಪೋಸ್ಟ್ ಗೆ ಮರಳಿ ಬಂದಿದ್ದನು.

ಹೀಗೆ ಬಂದವನಿಗೆ ಮದುವೆಯ ವಯಸ್ಸಾಗಿದೆಯೆಂದೂ, ಮದುವೆಯಾದರೆ ಊರಿನಲ್ಲೇ ನೆಲೆ ನಿಲ್ಲಬಹುದೆಂದೂ ಊಹಿಸಿದ ಅವರಪ್ಪ ಅಮ್ಮ, ಮೇಲ್ಗದ್ದೆಯ ನರಸಯ್ಯನ ಮಗಳಾದ ಬುಳ್ಳಮ್ಮನೊಂದಿಗೆ ಮದುವೆಯ ಮಾತು ‘ಪರ್ಸ್ಥಾಪಿಸಿ’ ಮದುವೆ ಮಾಡಿಸಿಯೇಬಿಟ್ಟಿದರು. ದೇವಸ್ಥಾನದ ಎರಡೆಕರೆ ಗೇಣಿ ಗದ್ದೆಯಲ್ಲಿ ಗೇಯಲಾಗದೆಯೋ, ಒಂದು ಹೊರೆ ಸೊಪ್ಪು ತರಲಾರೆದೆಯೋ ನಾಗೇಗೌಡ ‘ಯಾಪಾರ’ ಮಾಡುತ್ತೇನೆಂದು ಸಾಲೂರು ಪೇಟೆಗೆ ಬಂದು ಜೀವನ ಮಾಡಲಾರಂಭಿಸಿದ್ದನು.

ಜೀವನವೆಂದರೆ ಬೆಳಗ್ಗಾತ ಕಪ್ಪಲೆ ಎದ್ದು ಆ ಕಾಲದಲ್ಲಿಯೇ ಶಿವಮೊಗ್ಗದಿಂದ ಬರುತ್ತಿದ್ದ ಹಿತ್ತಾಳೆ ತಗಡಿನ ಬಸ್ಸುಗಳನ್ನು ನೋಡುತ್ತಾ ಬಸ್ಸ್ಟ್ಯಾಂಡಿನಲ್ಲಿ ಕೂರುವುದು. ರೈತರ್ಯಾರೋ ತಂದ ತಟ್ಟಿ ಬುಟ್ಟಿಗಳನ್ನು ಕೊಪ್ಪದಿಂದಲೂ, ಉಡುಪಿಯಿಂದಲೂ ಬಂದವರಿಗೆ ಮಾರಿ ದಿನಕ್ಕೆ ಎಂಟಾಣೆಯೋ ಹನ್ನೆರಡಾಣೆಯೋ ಗಳಿಸುವುದು, ಸಾಯಂಕಾಲ ಸರಾಯಿ ಸೇವನೆಯನ್ನು ಮಾಡಿಯೇ ಮನೆ ಸೇರುವುದು. ಹೀಗೆ ನಡೆಯುತ್ತಿದ್ದ ಜೀವನದಲ್ಲಿ ಮದುವೆಯಾದ ೩-೪ ವರುಷಗಳ ನಂತರ ಬುಳ್ಳಮ್ಮನವರ ಉದರದಲ್ಲೊಂದು ಕೂಸು ಜನುಮ ತಾಳಿ ತಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ನಾಮವನ್ನೇ ಹೊತ್ತು ಬೆಳೆಯಲಾರಂಭಿಸಿತು. ಅಂತಾ ಒಂದು ಕೂಸೇ ನಮ್ಮ ಸಿದ್ದಪ್ಪನ ಅಪ್ಪನಾದ ತಿಮ್ಮಪ್ಪ.

ಐದನೇ ವಯಸ್ಸಿಗೆ ಐಗಳ ಮಠದಲ್ಲಿ ಅಕ್ಷರ ತಿದ್ದಿದ ತಿಮ್ಮಪ್ಪನನ್ನು ನಾಗೇಗೌಡ ಆರನೇ ವಯಸ್ಸಿಗೆ ತನ್ನ ಹತ್ತಿರದ ಸಂಬಂಧಿಯೊಬ್ಬರ ಒಡೆಯರಾದ ಕೊಪ್ಪದ ಕಾಪಿಕಾನ್ ಗೋವಿಂದೇಗೌಡರ ಮನೆಯಲ್ಲಿ ಮನೆಕೆಲಸ ಮತ್ತು ಶಾಲೆ ಕಲಿಯುವುದಕ್ಕಾಗಿ ಹಾಕಿದನು. ಶಾಲೆ ಕಲಿಯುವಿಕೆ ಕುಂಟುತ್ತಾ ಸಾಗಿದರೂ ಮನೆ ಕೆಲಸವನ್ನು ಚೆನ್ನಾಗಿಯೇ ಕಲಿತ ತಿಮ್ಮಪ್ಪ, ಕೇವಲ ಹೆಂಗಸರು ಮಾತ್ರ ಮಾಡಬಹುದಾಗಿದ್ದಂತ ‘ರೊಟ್ಟಿ ಸುಡುವ’ ಕೆಲಸದಲ್ಲಿಯೂ ಪ್ರವೀಣನಾದನು.

ಹಾಗೋ ಹೀಗೋ ಲೋಯರ್ ಸೆಕೆಂಡರಿಯನ್ನು ಪಾಸು ಮಾಡಿದ ತಿಮ್ಮಪ್ಪ ತನ್ನೂರಾದ ಸಾಲೂರಿಗೆ ಬಂದು ನೌಕರಿಗೆ ಸೇರುವುದಾಗಿ ಸಾರಿದ. ಆಗ ನೌಕರಿಗೇನು ಬರವೇ? ಅದೂ ಲೋಯರ್ ಸೆಕೆಂಡರಿ ಓದಿದವರಿಗೆ! ದನಂದೂರಿನ ಸ್ಕೂಲಿನಲ್ಲಿ ಮೇಷ್ಟರ ಕೆಲಸವನ್ನು ೧ ವರುಷವೂ, ಅರಣ್ಯ ಇಲಾಖೆಯಲ್ಲಿ ಗಾರ್ಡ್ ಕೆಲಸವನ್ನು ೫ ವರುಷಗಳೂ ನಿರ್ವಹಿಸಿದ ತಿಮ್ಮಪ್ಪ, ಅವ್ಯಾವೂ ತನ್ನ ಅರ್ಹತೆಗೆ ತಕ್ಕುದಾದ ಕೆಲಸಗಳಲ್ಲವೆಂಬುದನ್ನು ಅದು ಹೇಗೋ ಮನಗಂಡು ಕೆಲಸವನ್ನು ಬಿಟ್ಟು ಮನೆಯಲ್ಲೇ ಇರಲಾರಂಭಿಸಿದನು. ಈ ೬ ವರುಷಗಳ ಅವಧಿಯಲ್ಲಿ ಆತನಿಗೆ ಬಾಳೇ ಹಳ್ಳಿಯ ಹೂವಮ್ಮನೊಂದಿಗೆ ಮದುವೆಯಾಗಿ, ನಾಗೇಗೌಡ ಹಾಕಿದ್ದ ಹುಲ್ಲು ಗುಡಿಸಿಲಿಗೆ ಹಂಚು ಬಂದಿದ್ದಲ್ಲದೇ ಈ ಸಿದ್ದಪ್ಪನೆಂಬ ಸಿದ್ಧನ ಜನನವೂ ಆಗಿತ್ತು.

ಪಾರ್ಶ್ವವಾಯು ಪೀಡಿತನಾಗಿದ್ದ ನಾಗೇಗೌಡ, ಸಿದ್ದ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅನ್ನ ನೀರು ಬಿಟ್ಟಿದ್ದ. ಸಿದ್ದ ಹುಟ್ಟುವ ಮೊದಲೇ ನಾಗೇಗೌಡ ಹುಟ್ಟುವ ಬಾಲೆಗೆ ತನ್ನಪ್ಪನಾದ ಸಿದ್ದೇಗೌಡನ ಹೆಸರಿಡಬೇಕೆಂದು ಹೇಳಿದ್ದುದರಿಂದ ಸಿದ್ಧನಿಗೆ ಆ ಹೆಸರಿಡಲಾಗಿತ್ತು. ತಿಮ್ಮಪ್ಪಗೌಡನು ತನ್ನ ಶಾಲೆ ಕಲಿಯುವ ಸಮಯದಲ್ಲಿ ಕೊಪ್ಪದ ಗ್ಯಾರೇಜಿನಲ್ಲಿ ಬಸ್ಸು ರಿಪೇರಿ ಮಾಡುವುದನ್ನು ನೋಡಿದ್ದುದರಿಂದಲೂ, ಮತ್ತೇನೂ ಕೆಲಸ ಗೊತ್ತಿಲ್ಲದುದರಿಂದಲೂ, ಒಂದು ಕಟ್ಟಿಂಗು ಪ್ಲೇಯರು, ಒಂದು ಸ್ಕ್ರೂ ಡ್ರೈವರೂ ಇಟ್ಟುಕೊಂಡು ಕೊಡೆ ರಿಪೇರಿ, ಸೈಕಲ್ಲು ರಿಪೇರಿ ಮತ್ತು ಸೈಕಲ್ಲು ಪಂಕ್ಚರು ಹಾಕುವುದನ್ನೇ ವೃತ್ತಿಯಾಗಿಸಿಕೊಂಡಿದ್ದನು. ಬಂದ ಹಣದಲ್ಲಿ ಸಾರಾಯಿ ಕುಡಿದು ಮಿಕ್ಕಿದ್ದುದರಲ್ಲಿ ತನ್ನ ಹೆಂಡತಿ ಹೂವಮ್ಮಳ ಹಾಗೂ ಸಿದ್ದಪ್ಪನ ಉದರ ಪೋಷಣೆಯೂ ಆಗುತ್ತಿತ್ತು.

ಸಿದ್ದ, ದೇವಣ್ಣ ಮತ್ತು ಪಾಪಣ್ಣಾಚಾರಿಗಳ ಕತೆ ಹೇಳುತ್ತಾ ಹೇಳುತ್ತಾ ಅವರಜ್ಜ ಮುತ್ತಜ್ಜರ ಕತೆಗೆ ಹೋಗಿ ಹಿಂದೆ ಬಂದಿರುವುದು ತಮಗೆ ಸೋಜಿಗವೆಂದೆನಿಸುತ್ತದೆಯೋ, ಹಾಗೆ ನನಗಿಲ್ಲಿ ನಿಮ್ಮನ್ನು ಸೋಜಿಗದೊಳಗೆಡವಿದ್ದಕ್ಕೆ ಕಾರಣ ಕೊಡಬೇಕೆನಿಸುತ್ತದೆ. ಅದು ಸಿದ್ದನೆಂಬ ಈ ಸಿದ್ದಪ್ಪನೇ ಈ ಕತೆಯ ನಾಯಕ ಹಾಗಾಗಿ ಆತನ ಪೂರ್ವಾಪರ ಇಲ್ಲಿ ಅವಶ್ಯವೆನಿಸುತ್ತದೆ.

ಪೋಷಕ ಪಾತ್ರಗಳಾಗಿರುವ ದೇವಣ್ಣ ಮತ್ತು ಪಾಪಣ್ಣರ ಪೂರ್ವಾಪರ ಪರಿಚಯ ಅಷ್ಟೊಂದು ಪ್ರಸ್ತುತವಲ್ಲದಿದ್ದರು ಅಪ್ರಸ್ತುತವಂತೂ ಅಲ್ಲ. ಹಾಗಾಗಿ ಇವರ ಪರಿಚಯವನ್ನು ಮಾಡಿಯೇ ಬಿಡುವುದೊಳಿತು. ರಾಜೀವಲೋಚನ ಕಾಮತ್ ಮತ್ತು ಸುಭದ್ರಮ್ಮನವರ ಹೊಟ್ಟೆಯಲ್ಲಿ ಜನುಮತಾಳಿ ಬಂದು ಸಾಲೂರಿನಲ್ಲಿ ಬಹುಮೇಲ್ಮಟ್ಟದ, ಆರ್ ಎಲ್ ಕಾಮತ್ ಅಂಡ್ ಬ್ರದರ್ಸ್ ಎಂಬ ದಿನಸಿ, ಜವಳಿ ಮತ್ತಿತರ ವ್ಯಾಪಾರ ನಡೆಸುತ್ತಿದ್ದವರ ಜೀವನಮಟ್ಟವನ್ನೇ ತಲೆಕೆಳಗು ಮಾಡಿಬಿಟ್ಟಿದ್ದನು, ಕೃಷ್ಣಮೂರ್ತಿ ಎಂಬ ಹೆಸರು ಹೊತ್ತ ಏಕಮಾತ್ರ ಪುತ್ರ. ಅದೇನು ಮಾಯೆಯೋ ಕಾಣೆ, ಈತ ಹುಟ್ಟಿದ ಒಂದೆರಡು ವರ್ಷಗಳಲ್ಲೇ ಅವರ ವ್ಯಾಪಾರ ವ್ಯವಹಾರಗಳೆಲ್ಲಾ ಲುಕ್ಸಾನು ಆಗಿ ಮುಚ್ಚಿ ಹೋಗಿತ್ತು. ಆ ಕಾರಣ ಹೊನ್ನಾವರದಲ್ಲಿದ್ದ ಅವರ ಹೆಣ್ಣು ಕೊಟ್ಟ ಮಾವನ ಹತ್ತಿರ ಹಣ ಸಾಲ ತಂದು ಒಂದು ಸೋಡಾ ಅಂಗಡಿಯನ್ನು ಪ್ರಾರಂಭಿಸಿದ್ದರು.

ದಿನವೂ ಸೋಡಾ ಮಷಿನನ್ನು ಸುತ್ತುವುದು, ಸೈಕಲ್ಲಿನಲ್ಲಿ ಹೇರಿಕೊಂಡು ಹೋಗಿ ಸಾಲೂರಿನ ಎಲ್ಲ ಅಂಗಡಿಗಳಿಗೂ ಪಕ್ಕದೂರುಗಳಾದ ಹಳೆಗದ್ದೆ ಹೊಸೂರುಗಳಿಗೂ ಸಪ್ಲಾಯಿ ಮಾಡುತ್ತಿದ್ದುದು ಅವರ ದೈನಂದಿನ ವ್ಯವಹಾರವಾಗಿತ್ತು. ಕೃಷ್ಣಮೂರ್ತಿಯ ಹುಟ್ಟಿಗೂ ರಾಜೀವಲೋಚನರ ವ್ಯಾಪಾರ ಲುಕ್ಸಾನಾದದ್ದಕ್ಕೂ ಸಂಬಂಧ ಕಲ್ಪಿಸಿದ್ದು ಊರ ಜನರೇ ಹೊರತು, ಕಾಮತರಾಗಲಿ, ಸುಭದ್ರಮ್ಮನವರಾಗಲಿ ಅಪ್ಪಿತಪ್ಪಿಯೂ ಕೃಷ್ಣಮೂರ್ತಿಯನ್ನುಆಪಾದಿಸುತ್ತಿರಲಿಲ್ಲ. ಅಲ್ಲದೇ ವಯಸ್ಸು ೧೪-೧೫ ಆದರೂ ಆರನೇ ತರಗತಿಯಲ್ಲೇ ಕುಂಟುತ್ತಿದ್ದ ಕೃಷ್ಣಮೂರ್ತಿಯನ್ನು ಅತಿಮುದ್ದಿನಿಂದ ಸಾಕಿ ದೇವೂ, ದೇವಾ, ದೇವಣ್ಣೂ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೀಗೆ ತಂದೆ ತಾಯಿಗಳಿಂದ ದೇವಣ್ಣನಾದ ಕೃಷ್ಣಮೂರ್ತಿ ಕಾಮತ ತನ್ನ ಗೆಳೆಯರಿಗೂ ದೇವಣ್ಣನೇ ಆಗಿದ್ದ.

ಘಟ್ಟದ ಕೆಳಗಿನಿಂದ ಎಂದೋ ವಲಸೆ ಬಂದು ಬಡಕಲಾಚಾರಿ ಎಂದೇ ಕರೆಯಲ್ಪಡುತ್ತಿದ್ದ ಗೋಪಾಲಕೃಷ್ಣಾಚಾರ್ಯರು ನೇಗಿಲು, ಬಟ್ಟಲು ಮರಿಗೆ, ಈಳಿಗೆಮಣೆ ಇತ್ಯಾದಿಗಳನ್ನು ಕೆತ್ತಿ ಜೀವನ ಮಾಡುತ್ತಿದ್ದರಲ್ಲದೇ, ಧರ್ಮಪತ್ನಿ ಕಮಲಾ ಚಾರ್ತಿಯಲ್ಲದೇ ಇನ್ನಿತರೆ ಮೂರು ಸ್ವಂತ ಮಕ್ಕಳೊಂದಿಗೆ ಹೇಗೋ ಕಾಲ ತಳ್ಳುತ್ತಿದರು. ಮೂರಾಗಿದ್ದ ಮಕ್ಕಳ ಸಂಖ್ಯೆ ಆರಾಗಿ, ಕೆತ್ತುತ್ತಿದ್ದ ಮರದ ನೇಗಿಲುಗಳ ಜಾಗವನ್ನು ಎರಡು ರೆಕ್ಕೆಯ ಕಬ್ಬಿಣದ ನೇಗಿಲುಗಳು ಆಕ್ರಮಿಸಿಕೊಂಡ ಮೇಲೆ ಆ ಕೆಲಸವನ್ನು ಕೈ ಬಿಟ್ಟು ಪತ್ನಿ, ಪರಿವಾರದೊಡಗೂಡಿ ಕಾಡಿನಲ್ಲಿ ಒಣಗಿ ಬಿದ್ದ ಮರಗಳನ್ನೊಡೆದು ಉರುವಲು ಚಕ್ಕೆಗಳನ್ನಾಗಿ ಮಾಡಿ ದೂರದ ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಕಳಿಸುತ್ತಿದ್ದರು. ಹೊರೆಗೆ ಎರಡು ರೂಪಾಯಿಯಂತೆ ದಿನಕ್ಕೆ ಸುಮಾರು ಹತ್ತು ರೂಪಾಯಿಗಳ ದುಡಿಮೆಯಂತೂ ಇದ್ದೇ ಇದ್ದಿತು.

ಹೀಗೆ ನಡೆಯುತ್ತಿದ್ದ ಚೆಕ್ಕೆ ವ್ಯಾಪಾರದಲ್ಲಿ ಅಂತಾ ಏರುಪೇರುಗಳೇನು ಇಲ್ಲದಿದ್ದರೂ, ಸಂಖ್ಯೆ ಆರರಲ್ಲಿದ್ದ ಮಕ್ಕಳು ಎಂಟಾಗಿ ಹೋಗಿದ್ದವು. ಎಂಟನೆಯವನೇ ಜನಾರ್ಧನನೆಂಬ ಪಾಪಣ್ಣ. ಅರ್ಥಾತ್ ಊರಜನರಿಗೆ ಬಡಕಲಾಚಾರಿಯ ಮಗ ಪಾಪಣ್ಣಾಚಾರಿ. ಮನೆಯಲ್ಲಿನ್ಯಾರೂ ಶಾಲೆಗೇ ಹೋಗದ್ದಿದರೂ ಕೊನೆಯವನಾದರೂ ಓದಲಿ ಎಂಬೊಂದೇ ಕಾರಣದಿಂದ ಅವನು ಶಾಲೆಗೆ ಹೋಗುತ್ತಿದ್ದ, ಇದೇ ಸಿದ್ದ ಮತ್ತು ದೇವಣ್ಣರ ಜೊತೆಯಲ್ಲಿ.

ಇಂತೆಲ್ಲಾ ಪೂರ್ವಾಪರವುಳ್ಳ ಈ ತ್ರಯರು ಅಂಗಡಿಯಿಂದ ಹೊರಬಿದ್ದವರೇ ಅನತಿದೂರ ಮಬ್ಬುಗತ್ತಲ್ಲಿದ್ದ ಜಾಗಕ್ಕೆ ಹೋಗಿ ಸಿದ್ದನ ಜೇಬಿನಲ್ಲಿದ್ದ ವಸ್ತುವನ್ನು ಹೊರ ತೆಗೆದು ನೋಡಿದರೆ ಆಹಾ! ಘಮಘಮಿಸುತ್ತಿದ್ದ ಸೋಪು! ಮೈ ಸೋಪು! ಸಿದ್ದನು ತನ್ನ ಕ್ಲಾಸಿನಲ್ಲಿ ‘ಫಸ್ಟು’ ಆಗಿದ್ದುದರಿಂದಲೂ, ಅವನ ಸಾಮಾನ್ಯ ಜ್ಞಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದುದರಿಂದಲೂ ಸೋಪಿನ ಮೇಲೆ ಬರೆದ ಇಂಗ್ಲೀಷು ಅಕ್ಷರಗಳನ್ನು ಕೂಡಿಸಿ ಓದಿಯೇ ಬಿಟ್ಟ ‘ಚಂದ್ರಿಕಾ’ ಎಂದು.

ಹುಟ್ಟಿದಾರಭ್ಯ ತಾಯಿ ಹೂವಮ್ಮನ ಸೀಗೆಪುಡಿ ಮತ್ತು ಮೈದೆಕಲ್ಲಿನ ಮನೆ ಸ್ನಾನ ಮತ್ತು ಈಜಿ, ಮುಳುಗಿ, ತೇಲಿ ಆಟವಾಡುತ್ತ ಮಾಡುವ ಬರೀ ನೀರಿನ ಹೊಳೆ ಸ್ನಾನವನ್ನು ಮಾತ್ರವೇ ಅನುಭವಿಸಿದ್ದ ಸಿದ್ದನಿಗೂ, ಒಂದು ಗೀರು ಬಾರು ಸೋಪಿನ ಮನೆ ಸ್ನಾನ ಮತ್ತು ಸಿದ್ಧನಂತದೇ ಹೊಳೆ ಸ್ನಾನವನ್ನು ಅನುಭವಿಸಿದ್ದ ದೇವಣ್ಣ, ಪಾಪಣ್ಣಾಚಾರಿಗಳಿಗೂ ಆಹಾ! ಮೈ ಸೋಪಿನ ವಾಸನೆಯಿಂದಲೇ ಸ್ವರ್ಗ! ಸೋಪೆಂದೂ, ಯಾವ ಸೋಪೆಂದೂ ಖಚಿತ ಪಡಿಸಿಕೊಂಡಾಕ್ಷಣ, ಪುನಃ ಸಿದ್ದನ ಚಡ್ಡಿಯ ಜೋಬಿನೊಳಗೇ ಸೇರಿಸಿಬಿಟ್ಟರು. ಆ ದಿನದ ದೀಪವನ್ನೂ, ಚರ್ಪನ್ನೂ ತ್ಯಾಗ ಮಾಡಿದ ತ್ರಯರು ಅವರ ಮನೆಯೆಂಬ ಮನೆಗಳಿದ್ದ ಹೊಳೆಂದಾಚೆಗೆ ಹೊರಟೇ ಬಿಟ್ಟರು. ಸೇತುವೆ ದಾಟಿ ಕಟ್ಟೆಯ ತುದಿಯಲ್ಲಿ ಕುಳಿತ ಅವರಿಗೆ ಏನೋ ಹಿಗ್ಗು.

ಮೂಗಿನ ಹೊಳ್ಳೆ ಬಿರಿಯುವಂತ ಪರಿಮಳ! ಗಾತ್ರದಲ್ಲಿ ದೊಡ್ಡವನಾಗಿಯೇ ಇದ್ದ ದೇವಣ್ಣ ಸಿದ್ಧನಿಗೆ ‘ತಗಿಯ ನೋಡಣ’ ಎಂದ. ಸಿದ್ದ ಮನಸಿಲ್ಲದ ಮನಸಿನಿಂದ ತೆಗೆದಿದ್ದೇ ಸರಿ ಗಬಕ್ಕನೇ ಕೈ ಹಾಕಿದರು ದೇವಣ್ಣ ಪಾಪಣ್ಣಾಚಾರಿಗಳು. ದೇವಣ್ಣನ ಕೈಗೆ ಸಿಕ್ಕಿದ್ದೇ ತಡ ಅದರ ಮೇಲಣ ಹೊದಿಕೆಯನ್ನು ಕಿತ್ತೆಸೆದು, ತನ್ನ ಜನಿವಾರವನ್ನು ಹೊರ ತೆಗೆದು ಸೋಪನ್ನು ಮೂರು ಭಾಗಗಳಾಗಿ ಕತ್ತರಿಸಿಯೇ ಬಿಟ್ಟ. ಸಿದ್ದ ಪಾಪಣ್ಣಾಚಾರಿಗಳು ಆಶ್ಚರ್ಯದಿಂದಲೂ, ಆಸೆಯಿಂದಲೂ ಬಿಟ್ಟ ಕಣ್ಣು ಮುಚ್ಚದಂತೆ ದೇವಣ್ಣ ಮಾಡುತ್ತಿದ್ದ ಕೆಲಸವನ್ನೇ ದಿಟ್ಟಿಸುತ್ತಿದ್ದರು. ಕ್ಷಣಮಾತ್ರದಲ್ಲಿ ಕತ್ತರಿಸಿದ ಮೂರು ಭಾಗಗಳನ್ನು ತಲೆಗೊಂದರಂತೆ ಹಂಚಿದ ದೇವಣ್ಣ ‘ನಡೀರ್ರೋ ಹೋಗಣ’ ಎಂದವನೇ ಮನೆಕಡೆಗೆ ಹೊರಟ. ಹಿಂದೆಯೇ ಸಿದ್ದ ಮತ್ತು ಪಾಪಣ್ಣಾಚಾರಿಗಳು ಹೊರಟರು ತಂತಮ್ಮ ಮನೆಗೆ.

ಮನೆಗ್ಹೋದವನೇ ಸಿದ್ದ ಚಡ್ಡಿ ಜೇಬಿನಲ್ಲಿದ್ದ ಸೋಪಿನ ತುಂಡನ್ನು ತೆಗೆದು ತನ್ನ ಸ್ಕೂಲು ಚೀಲದಲ್ಲಿ ಅಡಗಿಸಿಟ್ಟನು. ತಾಯಿ ಹೂವಮ್ಮ ಅಥವಾ ತಂದೆ ತಿಮ್ಮಪ್ಪನೇನಾದರೂ ನೋಡಿದರೆ ಎಂದು ಮಲಗುವವರೆಗೂ, ನಿದ್ದೆ ಹತ್ತುವವರೆಗೂ ತಲೆ ದಿಸೆಯಲ್ಲಿಯೇ ಗೋಡೆಯ ಮೇಲೆ ನೇತು ಹಾಕಿದ ಚೀಲದ ಮೇಲೆಯೇ ಕಣ್ಣಿಟ್ಟು ಕಾಯುತ್ತಿದ್ದನು.

ಸಾಲೂರಿನಲ್ಲಿ ಬೀಡು ಬಿಟ್ಟಿದ್ದ ಹಾವಿನಗೊಲ್ಲರ ಕತ್ತೆಯೊಂದು ಬೆಳಗಿನ ಜಾವವೇ ಮನೆಯೊಳಹೊಕ್ಕು, ನೇತುಹಾಕಿದ್ದ ಸ್ಕೂಲು ಚೀಲವನ್ನೆಳೆದು ಬೀಳಿಸಿ ಪುಸ್ತಕದ ಹಾಳೆಗಳನ್ನು ತಿನ್ನದೇ ಸೋಪನ್ನು ಮಾತ್ರವೇ ತಿಂದಂತೆ ಕನಸುಕಂಡು ಬೆಚ್ಚಿದ ಸಿದ್ದ, ಧಡಕ್ಕನೆದ್ದು ಕತ್ತಲೆಯಲ್ಲಿಯೇ ಚೀಲವನ್ನು ತಡವಿ, ಸೋಪಿನ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಪುನಃ ಹಾಗೆಯೇ ಗೋಣಿಚೀಲಗಳ ಮೇಲೆ ಹಾಸಿದ ಹಳೆಯ ಸೀರೆಯ ಹಾಸಿಗೆಯ ಮೇಲೆ ಪವಡಿಸಿದ.

ಮರುದಿನ ಬೆಳೆಗೆದ್ದು, ಚುಮುಚುಮು ಕೊರೆಯುತ್ತಿದ್ದ ಚಳಿಗಾಲವಾದರೂ ‘ಅಮ್ಮ ನಾ ಹೊಳೆ ಕಡೇ ಹೋಬರ್ತೀನಿ’ ಎಂದವನೇ ಸ್ಕೂಲು ಚೀಲದೊಳ ಕೈ ಹಾಕಿ ಸೋಪಿನ ತುಣುಕನ್ನು ತೆಗೆದು ಚಡ್ಡಿ ಜೇಬಿನಲ್ಲಿಟ್ಟುಕೊಂಡು ಹೊರಟ. ಗಂಜಿಯ ಎಸರಿಗೆ ಕುಚಲಕ್ಕಿಯನ್ನು ಸುರುವುತ್ತಿದ್ದ ಅವರಮ್ಮ ಎಂದಿನಂತೆ ಎರಡಕ್ಕೆ ಹೋಗುತ್ತಿದ್ದಾನೆಂದುಕೊಂಡು ಸರಿಯೆಂದು ಹ್ಞೂಗುಟ್ಟಿದಳು. ಮನೆಯಲ್ಲೇ ಸ್ನಾನ ಮಾಡಿದರೆ ಈ ಮೈ ಸೋಪು ಎಲ್ಲಿಂದ ಬಂತೆಂದು ಕೇಳುವುದಷ್ಟೇ ಅಲ್ಲದೆ, ಈ ಸೋಪಿನ ಸುಖವನ್ನು ತಂದೆ ತಾಯಿಗಳು ಹಂಚಿಕೊಳ್ಳುತ್ತಾರೆಂದು ಅದಕ್ಕೆ ಅವಕಾಶ ಕೊಡಲೇಬಾರದೆಂದುಕೊಂಡ ಸಿದ್ದ ಓಡುತ್ತಲೇ ಹೋದ ಸುಮಾರು ಅರ್ಧ ಮೈಲು ದೂರದ ಆನೆಗುಂಡಿಗೆ.

ಮಳೆಗಾಲದಲ್ಲಿ ಕೆಂಪಾಗಿ ಭೋರ್ಗರೆಯುತ್ತಾ ಸಾಲೂರಿನ ಸುತ್ತಲ ಮಣ್ಣೆಲ್ಲವನ್ನು ಕೊಚ್ಚಿಕೊಂಡು ಹೋಗಿ, ತೀರ್ಥಹಳ್ಳಿಗೆ ಸೇರಿಸಿಬಿಡುತ್ತದೋ ಎಂಬಂತೆ ಭ್ರಮೆ ಉಂಟು ಮಾಡುವ ವಾಟೆಹಳ್ಳ, ಬೇಸಿಗೆಯಲ್ಲಿ ಅಲ್ಲಲ್ಲಿ ಮಡುಗಟ್ಟಿ ನಿಂತು, ಅಲ್ಲಲ್ಲಿ ಧುಮುಕಿ, ನಿಧಾನವಾಗಿ ಹರಿದು ತುಂಗಾ ನದಿಯನ್ನು ಸೇರುವ ಮೊದಲು ಸುಮಾರು ಐವತ್ತು ಮೈಲು ಕ್ರಮಿಸುತ್ತದೆ. ಅಲ್ಲಲ್ಲಿ ನಿಂತ ಮಡುಗಳು ಅನೇಕ ಹೆಸರಿನಿಂದ ಕರೆಯಲ್ಪಡುತ್ತವೆ.

ಬೇಸಿಗೆಯಲ್ಲಿ ಅರಣ್ಯ ಇಲಾಖೆಯವರ ನಾಟ ಎಳೆಯಲು ಬರುವ ಆನೆಗಳ ಮೈ ತೊಳೆಯುವ ಆನೆಗುಂಡಿ, ಹಿಂದೆಂದೋ ಪೊಲೀಸನೆಂದು ಹೇಳಿ ಕೊಂಡಿದ್ದ ಸಾಲೂರಿಗೆ ಅಪರಿಚಿತನಾಗಿದ್ದ ವ್ಯಕ್ತಿಯೊಬ್ಬ ಹಾರಿ ಬಿದ್ದು ಸತ್ತ ಅಬ್ಬಿಯ ನಂತರದ ಮಡು, ಆ ಘಟನೆಯ ನಂತರ ಪೊಲೀಸ್ಗುಂಡಿ. ದೇವಸ್ಥಾನದ ಎದುರಿನ ಛತ್ರದಲ್ಲಿ ಉಂಡು ಕೈ ತೊಳೆಯಲೆಂದೇ ಇರುವ ಸೋಪಾನಗಳಿರುವ ಛತ್ರಗುಂಡಿ. ಹೀಗೆ ಊರಿನ ಸುತ್ತಮುತ್ತ ಈಜು ಬೀಳಲು ಅನುಕೂಲಕರವಾಗಿರುವ ಏಳೆಂಟು ಗುಂಡಿಗಳು. ಅಂತಾ ಈಜುಗುಂಡಿಗಳಲ್ಲೊಂದಾದ ಆನೆಗುಂಡಿಗೆ ಹೊರಟ ಸಿದ್ದ. ಆನೆಗುಂಡಿ ತಲುಪುವ ಮೊದಲು ಸಿಗುವ ನೀರ್ಮಗಿ ಸಂಕದ ಹತ್ತಿರ ಬಹಿರ್ದೆಸೆ ಮುಗಿಸಿ ಚೊಕ್ಕಟ ಮಾಡಿಕೊಂಡ. ಇದೆಲ್ಲವನ್ನು ಮಾಡುತ್ತಿರುವಾಗಲು ಕಳಚಿದ ಚಡ್ಡಿಯ ಜೇಬಿನೊಳಗೆ ಕೈ ಇಟ್ಟಿದ್ದ ಸಿದ್ದ ಸೋಪಿನ ತುಂಡನ್ನು ಭದ್ರವಾಗಿ ಹಿಡಿದುಕೊಂಡೇ ಇದ್ದ.

ನೀರ್ಮಗಿ ಸಂಕದಿಂದ ಹೊರಟ ಸಿದ್ದ ಆನೆಗುಂಡಿ ತಲುಪಿದವನೇ ಸುತ್ತಮುತ್ತ ಯಾರು ಇಲ್ಲದಿರುವುದನ್ನು ನೋಡಿಕೊಂಡೇ ತೊಟ್ಟ ಅಂಗಿ ಚಡ್ಡಿಗಳನ್ನು ಬಿಚ್ಚಿ ಓಡಿ ಬಂದು ನೀರಿಗೆ ‘ಡೈ’ ಹೊಡೆದ (ಇಂಗ್ಲೀಷಿನ ಡೈವ್ ಅಪಭ್ರಂಶಗೊಂಡು ಡೈ ಹೊಡೆಯುವುದಾಗಿದೆ). ಡೈ ಹೊಡೆದವನೇ ಸ್ವಲ್ಪ ದೂರದವರೆಗೆ ಮುಳುಗೀಜಿನಲ್ಲಿಯೇ ಹೋಗಿ, ತಲೆ ಮೇಲೆತ್ತಿ ತಿರುಗಿ ದಡದವರೆಗೂ ಈಜಿಕೊಂಡು ಬಂದ. ದಡದಲ್ಲಿದ್ದ ಚೆಡ್ಡಿ ಜೇಬಿಗೆ ಕೈ ಹಾಕಿ, ಬರಿಯ ಮೈನಲ್ಲಿದ್ದುದರಿಂದ ಯಾರಾದರೂ ನೋಡಿಯಾರೆಂಬ ಭಯದಿಂದ ಸೋಪನ್ನೆತ್ತಿಕೊಂಡು ಪುನಃ ನೀರಿಗಿಳಿದು ಸೊಂಟ ಮುಳುಗುವವರೆಗೂ ನಡೆದೇ ಹೋದ.

ಸೋಪನ್ನು ಮೈಗೆ ಹಚ್ಚಿಕೊಳ್ಳುವ ಮೊದಲು ನೆನೆಸಲೋಸುಗ ನೀರಿನಲ್ಲಿ ಅದ್ದಿ ಹೊರ ತೆಗೆದ. ಹೊರತೆಗೆಯುತ್ತಿದ್ದಂತೆಯೇ ಪುಳಕ್ಕನೆ ಸೋಪು ಜಾರಿ ಹೋಯಿತು. ಅಯ್ಯೋ ಎಂತ ಅಚಾತುರ್ಯವಾಯಿತೆಂದು ಸಿದ್ದ ನೀರಿನಲ್ಲಿ ಮುಳುಮುಳುಗಿ ಕಣ್ಣು ಬಿಟ್ಟು ಹುಡುಕತೊಡಗಿದ, ಹುಡುಕಿ ಹುಡುಕಿ ಸಾಕಾಗಿ ಕಣ್ಣುಗಳು ಉರಿಯತೊಡಗಿದವು. ಕೈ ಕಾಲುಗಳಲ್ಲಿ ತಡವತೊಡಗಿದ.

ಆ ದಿನಗಳಲ್ಲಿ ಯಾರೂ ಹೊಳೆ ಸ್ನಾನ ಮಾಡದೇ ಇದ್ದುದ್ದರಿಂದ ಕಾಡಿನ ತರಗೆಲೆಗಳು, ಅಕ್ಕಪಕ್ಕದ ವಾಟೆ, ಮುಂಡುಗದೆಲೆಗಳು ಕೆಳ ಕೂತಿದ್ದವು. ಅರ್ಧ ಘಂಟೆಯ ಕಾಲ ಹಾಗೆಯೇ ಹುಡುಕಿ ತಡಕುತ್ತಿದ್ದ ಸಿದ್ಧನಿಗೆ ನೀರು ರಾಡಿಯಾಗಿ, ಕೊಳೆಯುತ್ತಿದ್ದ ಎಲೆಗಳು ಮಾತ್ರ ಸಿಕ್ಕಿದವೇ ಹೊರತು, ರಾತ್ರಿ ಎಲ್ಲ ಜತನದಿಂದ ಕಾಪಾಡಿದ ಅವ್ವ ಅಪ್ಪನಿಗೂ ಕೊಡದೆ ಕಮ್ಮಿಯೆಂದರೆ ಒಂದು ತಿಂಗಳು ಪೂರ್ತಿ ಮೈಗೆ ಹಚ್ಚಿ, ಮೈಯನ್ನು ಘಮಘಮಿಸುವಂತೆ ಮಾಡುವ ಆಸೆ ಹುಟ್ಟಿಸಿದ್ದ ಆ ಸೋಪಿನ ಚೂರು ಸಿಗಲೇ ಇಲ್ಲ. ಉರಿಯುವ ಕಣ್ಣು, ಕೊರೆಯುವ ಚಳಿಯೊಂದಿಗೆ ಸಿದ್ದ ಮನೆಗೆ ಹೊರಟ.

ಆ ದಿನ ಶಾಲೆಯಲ್ಲಿ, ಪಕ್ಕದಲ್ಲಿ ಕುಳಿತ ದೇವಣ್ಣ ಪಾಪಣ್ಣಾಚಾರಿಗಳ ಮೈ ಸೋಪಿನ ವಾಸನೆ ಬರುತ್ತಿದ್ದರೆ ಸಿದ್ದ ಇನ್ನೊಮ್ಮೆ ಮಮ್ಮದಣ್ಣನ ಅಂಗಡಿಗೆ ಹೋಗುವ ವಿಚಾರ ಮಾಡ ತೊಡಗಿದ.

‍ಲೇಖಕರು Avadhi

March 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kalyani

    ನಿಮ್ಮ ಕಥೆ ಬಹಳ ಸೊಗಸಾಗಿ ಮೂಡಿ ಬಂದಿದೆ. ಒಂದು ಸಣ್ಣ ತುಣುಕು ಸೋಪಿನ ಸುತ್ತ ಹೆಣೆದ ಕಥೆ ನಮ್ಮ ಹಳೆಯ ಹಳ್ಳಿ ಜೀವನದತ್ತ ತುಸು ಹಿಂತಿರುಗಿ ನೋಡುವಂತೆ ಮಾಡಿತು. ನಿಮ್ಮ ಬರವಣಿಗೆಯ ಶೈಲಿ ಅತ್ಯುತ್ತಮ. ಧನ್ಯವಾದಗಳು ಇಂತ ಒಂದು ಚಂದದ ಕಥೆ ಕೊಟ್ಟಿದ್ದಕ್ಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: