ಕನ್ನಡಿ ಇಲ್ಲದ ಮನೆಯ ಸೌಂದರ್ಯೋಪಾಸನೆ…‌

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ತಡರಾತ್ರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದವನಿಗೆ ಇದ್ದಕ್ಕಿದಂತೆ ಒಂದು ವಿಲಕ್ಷಣ ಯೋಚನೆ ಬಂತು. ನಾನು ಹೊರಟಿದ್ದ ಊರು ಇನ್ನೂ ನೂರೈವತ್ತು ಕಿಲೋಮೀಟರ್ ಇದ್ದಿರಬಹುದು. ಆದರೆ ನಡುದಾರಿಯಲ್ಲಿ ಇಳಿದು ಬಿಡಬೇಕು ಅನ್ನಿಸಿತು. ಸರಿ ಸುಮಾರು ರಾತ್ರಿ ಎರಡು ಗಂಟೆಯ ಹೊತ್ತಲ್ಲಿ ಹೋಗಬೇಕಾದ ಊರು ಬಿಟ್ಟು ಹೈವೆನಲ್ಲಿರುವ ಇನ್ಯಾವುದೋ ಅಪರಿಚಿತ ಊರಿನಲ್ಲಿ ನನ್ನನ್ನು ನಾನು ಯಾವ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದೇನೆ ಎಂಬ ಸ್ಪಷ್ಟತೆಯೂ ನನ್ನಲ್ಲಿರಲಿಲ್ಲ.

ಡ್ರೈವರ್ ಹಿಂದಿನ ನಾಲ್ಕನೆಯ ಸೀಟಿನಲ್ಲಿದ್ದವನು ಬಾಗಿಲ ಬಳಿಯ ಸೀಟಿನಲ್ಲಿ ಕೂತಿದ್ದ ಕಂಡಕ್ಟರ್ ಹತ್ತಿರ ಹೋಗಿ, ‘ಬಸ್ ನಿಲ್ಸಿ. ನಾನು ಇಳೀಬೇಕು’ ಅಂದೆ. ಅರ್ಧಬಂರ್ಧ ನಿದ್ದೆಯಲ್ಲಿದ್ದ ಆತ ಕಣ್ಣುಜ್ಜಿಕೊಂಡು ಅಲ್ಲಿಂದಲೇ ಬಸ್ ಮುನ್ನುಗ್ಗುತ್ತಿದ್ದ ರಸ್ತೆಯನ್ನು ನೋಡಿ, ‘ಈಗಿನ್ನೂ ಟೀ, ಕಾಫಿಗೆ ಅ. ಹೋಗಿ ಕೂತ್ಕೊಳ್ಳಿ ಸುಮ್ನೆ. ಒಳ್ಳೆ ನಿದ್ದೆ ಮಾಡೋ ಟೈಮಲ್ಲಿ ಡಿಸ್ಟರ್ಬ್ ಮಾಡ್ತಿರಲ್ಲ’ ಎಂದು ಹೇಳಿ ಕಿಟಕಿಗೆ ತಲೆ ಒರಗಿಸಿದ. ನಾನು ಸೀದಾ ಡ್ರೈವರ್ ಬಳಿ ಹೋಗಿ ಬಸ್ ನಿಲ್ಲಿಸುವಂತೆ ಕೇಳಿಕೊಂಡೆ. ಮೊದಲು ಆತನು ಒಪ್ಪಲಿಲ್ಲವಾದರೂ ಒಂದೆರೆಡು ಬಾರಿ ಕೇಳಿಕೊಂಡ ಮೇಲೆ ಬಸ್ ನಿಲ್ಲಿಸಿದ. ನಾನು ಬಸ್ ನಿಂದ ಕೆಳಗಿಳಿದೆ. ನಾನು ಇಳಿದದ್ದನ್ನು ಕನ್ನಡಿಯಲ್ಲಿ ಕಂಡ ಮೇಲೆ ಅಲ್ಲಿಂದ ಬಸ್ ಮುಂದಕ್ಕೆ ಬಿಟ್ಟ. 

ಅಪರಾತ್ರಿಯಲ್ಲಿ ಹೀಗೆ ಬಸ್ ಇಳಿದ ನಾನು ರಸ್ತೆಯ ಮೇಲೆ ಸ್ವಲ್ಪ ಹೊತ್ತು ಸುಮ್ಮನೆ ಕೂತು, ನಂತರ ಬಸ್ಸು ಹೋಗಿದ್ದ ವಿರುದ್ಧ ದಿಕ್ಕಿನಲ್ಲಿ ನಡೆಯತೊಡಗಿದೆ. ಕನ್ಮಡಿಯಲ್ಲಿ ನೋಡಿದ ಡ್ರೈವರ್ ಗೆ ನಾನು ಅವನನ್ನು ಹಿಂಬಾಲಿಸುತ್ತೇನೆ ಎಂದೆನ್ನಿಸಬಾರದೆಂದು ಹಾಗೆ ಮಾಡಿರಬಹುದು ನಾನು. ಒಂದಷ್ಟು ಬಸ್ಗಳು, ‌ಲಾರಿಗಳು, ಒಂದೋ ಎರಡೋ ಬೈಕ್ ಗಳ ಓಡಾಟದ ನಡುವೆಯೂ ರಸ್ತೆಯ ನೀರವತೆ ಕತ್ತಲಿನೊಂದಿಗೆ ಸೇರಿ ಸಣ್ಣಗೆ ನಡುಕ ಹುಟ್ಟಿಸಿದವು. ರಸ್ತೆಯ ಆಚೀಚೆ ಕಣ್ಣಾಡಿಸಿದೆ. ಕಣ್ಣಳತೆಯ ದೂರದ ಗದ್ದೆಯೊಂದರಲ್ಲಿ ಮನೆಯೊಳಗೆ ಬೆಳಕು ಇದ್ದದ್ದು ಕಾಣಿಸಿತು.  
*   *    *

‘ಬನ್ನಿ, ಬನ್ನಿ’ ಎಂಬ ಇಂಪಾದ ಹೆಣ್ಣು ಧ್ವನಿ ಮಾತ್ರ ಮನೆಯೊಳಗಿಂದ ಕೇಳಿ ಬಂತು. ಯಾರೊಬ್ಬರೂ ಕಾಣದೆ ಹಾಗೆ ಧ್ವನಿ ಮಾತ್ರ ಕೇಳಿಸಿದ್ದು ನನ್ನಲ್ಲಿ ಸಣ್ಣ ನಡುಕ ಉಂಟು ಮಾಡಿತ್ತು. ‘ಯಾರಿದ್ದೀರಿ?’ ಎಂದೆ. 

‘ಬಾಗಿಲು ತೆಗೆದೇ ಇದೆ. ಒಳಗೆ ಬನ್ನಿ. ನೀವು ಬರೋದು ನನಗೆ ಗೊತ್ತಿತ್ತು. ಹಾಗಾಗಿ ಬಾಗಿಲು ತೆಗೆದೇ ಇಟ್ಟಿದ್ದೇನೆ. ಒಳಗೆ ಬನ್ನಿ’ ಎಂಬ ಕರೆಯೋಲೆ ಬಂತು. ಅದನ್ನು ತಕ್ಷಣಕ್ಕೆ ನಂಬಲು ನಾನು ಸಿದ್ಧನಿರಲಿಲ್ಲ. 

‘ಅದ್ಹೇಗೆ ನಾನು ಬರುವುದು ನಿಮಗೆ ಮೊದ್ಲೆ ತಿಳಿದಿತ್ತು? ಅದು ನನಗೇ ಗೊತ್ತಿರ್ಲಿಲ್ಲ. ಅಂತಾದ್ರಲ್ಲಿ ನಿಮಗೆ ಹೇಗೆ ತಿಳೀತು?’ ಎಂದು ತನಿಖೆಗೆ ಮುಂದಾದೆ. ಇದೇನು ನಿಜವಾಗಿಯೂ ಮನೆಯೋ ಅಥವಾ ದೆವ್ವದ ಮನೆಯೋ ಅನ್ನೋ ಭಯದಿಂದ ನಾನು ಹಾಗೆ ಪ್ರಶ್ನಿಸಿರಬಹುದು.
‘ಇಷ್ಟೊತ್ತಲ್ಲಿ ಈ ಜಾಗದಲ್ಲಿ ಯಾವ ಬಸ್ಸೂ ಯಾವತ್ತೂ ನಿಲ್ಲೋದಿಲ್ಲ. ಸುತ್ತಮತ್ತಲಿನ ಊರುಗಳಿಗೂ ಕಡಿಮೆ ಅಂದ್ರೆ ಐದು ಕಿಲೋ ಮೀಟರ್ ಅಂತರ ಇದೆ. ಹಾಗಿದ್ದಾಗ ಬಸ್ ನಿಲ್ತು ಅಂದ್ರೆ ಯಾರೋ ನನ್ನನ್ನೇ ಹುಡುಕಿಕೊಂಡು ಬಂದಿರಬಹುದು ಅಂಥ ಅನ್ನಿಸ್ತು. ಅದಕ್ಕೆ ಲೈಟ್ ಹಾಕಿ ಬಾಗಿಲು ತೆಗೆದು ಕೂತ್ಕೊಂಡೆ’ 

‘ನಾನ್ಯಾಕೆ ನಿನ್ನನ್ನ ಹುಡುಕಿಕೊಂಡು ಬರ್ತೀನಿ ಅನ್ಕೊಂಡೆ ನೀನು?’ 
‘ಅದನ್ನ ಮನೆ ಒಳಗೆ ಬಂದ್ರೆ ಹೇಳ್ಬೋದು’ 
ನಿನ್ನನ್ನ ನಂಬೋದು ಹೇಗೆ?’ 
‘ನನ್ನ ಮನೆಯಲ್ಲಿ ಕನ್ನಡಿ ಇಲ್ಲ. ಹಾಗಾಗಿ ನಂಬಬಹುದು’ 

ಅವಳ ಮಾತಿನ ಒಳಾರ್ಥ ಏನೆಂದು ತೋಚಲಿಲ್ಲ. ಸುಮ್ಮನೆ ಮನೆಯೊಳಗೆ ಹೋಗಿ ಹೊರಗಿನ ಕತ್ತಲ ಭಯದಿಂದ ಬಾಗಿಲು ಮುಚ್ಚಿದೆ. 
‘ಥ್ಯಾಂಕ್ಸ್. ನೀವೀಗ ಫ್ರೆಶ್ ಆಗಿ ಏನಾದರು ಬೇಕಾದರೆ ಅಡುಗೆ ಮನೆಯಲ್ಲಿ ಊಟ ಇದೆ ತಿನ್ನಬಹುದು’ ಅಂದಳು. ಮನೆಯ ಒಳಗೆ ಬಂದ ಮೇಲೂ ಅವಳು ಮಾತ್ರ ಕಾಣಲಿಲ್ಲ. ಇನ್ನೂ ಅಶರೀರವಾಣಿಯಲ್ಲೇ ಮಾತಾಡುತ್ತಿದ್ದದ್ದು ಕಂಡು ಅನುಮಾನ ಮತ್ತೆ ಭಯ ಒಟ್ಟೊಟ್ಟಿಗೆ ಆದವು. 
‘ಎಲ್ಲಿದ್ದೀರಾ? ಕೇವಲ ನಿಮ್ಮ ಧ್ವನಿ‌ ಮಾತ್ರ ಕೇಳ್ತಾ ಇದೆ. ನೀವು ಕಾಣ್ತಾ ಇಲ್ಲ?’ ಎಂದೆ.

‘ನೀವು ಮೊದಲು ಮುಖ ತೊಳೆದುಕೊಂಡು ಫ್ರೆಶ್ ಆಗಿ. ಆಮೇಲೆ ನನ್ನ ನೋಡಬಹುದು’ ಸರಿ ಎಂದುಕೊಂಡು ನಾನು ಫ್ರೆಶ್ ಆಗಿ ಬಂದು, ‘ನನಗೆ ಮುಖ ತೊಳೆದ ಮೇಲೆ ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸ. ಕನ್ನಡಿ ಎಲ್ಲಿದೆ?’ ಅಂದೆ.
‘ನಮ್ಮ ಮನೆಯಲ್ಲಿ ಈಗ ಕನ್ನಡಿ ಇಲ್ಲ’ 
‘ಈಗ ಇಲ್ಲ ಎಂದರೆ, ಮೊದಲು ಇತ್ತಾ?’ 
‘ಹೌದು. ಇತ್ತು. ನಂತರ ಅದು ಬೇಡ ಅಂತ ಒಡೆದು ಹಾಕಿದ’ 
‘ಯಾರು ಒಡೆದದ್ದು?’ 
‘ನನ್ನ  ಗೆಳೆಯ’ 
‘ಈಗೆಲ್ಲಿದ್ದಾನೆ ನಿನ್ನ ಗೆಳೆಯ?’ 
‘ಕೊಲ್ಲಲು ಹೋಗಿದ್ದಾನೆ’ 
ಈ ಮಾತು ಕೇಳಿ ನಿಜಕ್ಕೂ ಯಾವುದೋ ಕಷ್ಟಕ್ಕೆ ಸಿಲುಕಿಕೊಂಡೆನೇನೋ ಎಂಬ ಭಯವುಂಟಾಯ್ತು. 

‘ಯಾರನ್ನು ಕೊಲ್ಲುವುದಕ್ಕೆ?’ 
‘ನನ್ನನ್ನು ಯಾರೋ ನಿರಾಭರಣ ಸಹಜ ಸುಂದರಿ ಎಂದರಂತೆ ಅವರನ್ನು ಹುಡುಕಿ ಕೊಲ್ಲಲು ಹೋಗಿದ್ದಾನೆ’ 
‘ನೀವು ಅಷ್ಟು ಸುಂದರವಾಗಿದ್ದೀರ? 
‘ಗೊತ್ತಿಲ್ಲ. ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಎಷ್ಟೋ ವರ್ಷಗಳಾಯ್ತು’ 
‘ಅದೇಕೆ ಹಾಗೆ?’ 
‘ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಅವನೂ ಅಪ್ರತಿಮ ಸುಂದರ. ನಾನೂ ಅವನ ಪ್ರಕಾರ ಶ್ರೇಷ್ಠ ಸೌಂದರ್ಯವಂತೆ. ನಮ್ಮಿಬ್ಬರದ ಲೋಕದಲ್ಲಿರೋಣ ಎಂದು ಇಲ್ಲಿ ಬಂದು ಇರಲಾರಂಭಿಸಿದೆವು. ಇಬ್ಬರ ಸೌಂದರ್ಯವನ್ನೂ ಪರಸ್ಪರರು ಕೊಂಡಾಡುತ್ತಾ, ಅನುಭವಿಸಿದೆವು. ಆಮೇಲೆ…’ 
‘ಆಮೇಲೆ ಏನಾಯ್ತು ?’ 

‘ಗದ್ದೆ ಕೆಲಸಕ್ಕೆ ಬಂದ ಆಳೊಬ್ಬ ‘ಅಮ್ಮೋವ್ರು ತುಂಬಾ ಲಕ್ಷಣವಾಗಿದ್ದಾರೆ’ ಎಂದುಬಿಟ್ಟ. ಆವತ್ತಿಂದ ಅವನಿಗೆ ನನ್ನ ಸೌಂದರ್ಯದ ಮೇಲೆ ಅನುಮಾನ ಶುರುವಾಯ್ತು. ನೀನು ಬೇರೆಯವರಿಗೆ ಏಕೆ ಸುಂದರವಾಗಿ ಕಾಣಿಸಬೇಕು? ಎಂದ. ಅದಕ್ಕೆ ನಾನು ಏನು ಉತ್ತರ ಹೇಳುವುದು? ಸುಮ್ಮನಿದ್ದೆ. ಅದಕ್ಕೆ ಮೌನಂ ಸಮ್ಮತಿ ಲಕ್ಷಣಂ ಎಂದು ಹೇಳುತ್ತಾ, ಇನ್ನುಮೇಲೆ ನೀನು ಈ ಕನ್ನಡಿಯನ್ನೇ ನೋಡಬಾರದು ಎಂದು ಹೇಳಿ’ ನೀವು ಸುಂದರವಾಗಿದ್ದೀರಾ?’ ಎಂದು ಬಣ್ಣಬಣ್ಣದ ಅಕ್ಷರಗಳಲ್ಲಿ ಬರೆದಿದ್ದ ಕನ್ನಡಿಯನ್ನು ಒಡೆದು ಹಾಕಿದ. ಹಾಗಾಗಿ ನಮ್ಮ ಮನೆಯಲ್ಲಿ ಆವತ್ತಿಂದ ಕನ್ನಡಿಯೇ ಇಲ್ಲ’ ಎಂಬ ಆಕೆಯ ಆತ್ಮವೃತ್ತಾಂತ ಕೇಳಿ ನನಗೆ ಅಯ್ಯೋ ಪಾಪ ಅನ್ನಿಸಿತು. 

‘ನಿಮ್ಮದು ದುರಂತ ಕಥೆ. ಪಾಪ, ಹೀಗಾಗಬಾರದಿತ್ತು’ ಎಂದೆ. 
‘ನಾವಾಗಿಯೇ ದುರಂತಗಳನ್ನು ಆಹ್ವಾನಿಸಿಕೊಂಡಾಗ ಯಾರನ್ನೂ ದೂರಲಾಗದು ಅಲ್ವಾ?’ ಎಂಬ ಮರು ಪ್ರಶ್ನೆ ಬಂತು. 
‘ಅವನೂ ಸುಂದರವಾಗಿದ್ದಾನಲ್ಲ ಅವನ ಬಗ್ಗೆ ಯಾರೂ ಹೊಗಳುವುದಿಲ್ಲವೆ?’ 
‘ಅಯ್ಯೋ ಕೆಲಸಕ್ಕೆ ಬರುವ ಹೆಣ್ಣಾಳುಗಳು ಅವನನ್ನು ತಿನ್ನೋ ಹಾಗೆ ನೋಡ್ತಿದ್ರು. ಅವನೂ ಅಷ್ಟೆ ನೀಟಾಗಿ ಡ್ರೆಸ್ ಮಾಡಿಕೊಳ್ಳದೆ ಮನೆಯ ಹೊರಗೆ ಕಾಲಿಡುತ್ತಿರಲಿಲ್ಲ’ 
‘ಮತ್ತೆ ನೀವೇ ಕನ್ನಡಿ ಒಡೆದು ಹಾಕಬಹುದಿತ್ತಲ್ಲ?’ 
‘ನನಗೆ ಆ ಕನ್ನಡಿಯಲ್ಲಿ ಅವನು ಮಾತ್ರ ಕಾಣಿಸುತ್ತಿದ್ದ. ನನ್ನನ್ನು ನೋಡಿಕೊಂಡಾಗಲೂ ಅವನದೇ ಬಿಂಬ ಕಾಣಿಸುತ್ತಿತ್ತು. ಅಂತ ಕನ್ನಡಿಯನ್ನು ಒಡೆಯುವುದು ಹೇಗೆ?’ 
‘ಹಾಗದರೆ ಅವನೇಕೆ ಒಡೆ ?’ 
‘ಅವನಿಗೆ ಕನ್ನಡಿಯಲ್ಲಿ ನನ್ನ ಬಿಂಬ ಕಾಣಿಸದೇ ಹೋಗಿರಬಹುದು. ತಲೆಯಲ್ಲಿ ತುಂಬಿಕೊಂಡ ವಿಷಯಗಳ ಮೇಲೆ ಬಿಂಬಗಳು ಹೊರ ಹೊಮ್ಮತ್ತವೇನೋ. ಪಾಪ, ಆಗ ಕನ್ನಡಿ ಕೊಂದ. ಈಗ ನನ್ನ ಸೌಂದರ್ಯವನ್ನು ಹೊಗಳಿದವರನ್ನೆಲ್ಲ ಕೊಂದು ಬರಲು ಹೋಗಿದ್ದಾನೆ’ 
ಇದಕ್ಕೆಲ್ಲ ಏನು ಹೇಳುವುದೆಂದು ನನಗೆ ತೋಚಲಿಲ್ಲ. ಯಾಕೋ ಆ ಮನೆಯಲ್ಲಿದ್ದರೆ ಆತ ಕೊಲ್ಲುವವರ ಪಟ್ಟಿಗೆ ನಾನೂ ಸೇರ್ಪಡೆಯಾಗಬಹುದೇನೋ ಅನ್ನಿಸಿತು. ಅಲ್ಲಿಂದ ಹೊರಡಲು ಅಣಿಯಾದೆ. 

‘ನಾನಿನ್ನು ಹೊರಡುತ್ತೇನೆ. ಆಶ್ರಯಕ್ಕಾಗಿ ಧನ್ಯವಾದ’ ಎಂದೆ.
‘ಒಂದು ಪ್ರಶ್ನೆ ಕೇಳಿದರೆ ನಿಜವಾದ ಉತ್ತರ ಕೊಡುತ್ತೀರಾ?’ ಎಂದಳಾಕೆ.
‘ಖಂಡಿತಾ ನಿಜ ಹೇಳುತ್ತೇನೆ’ ಎಂದೆ.
‘ನನ್ನ ಸೌಂದರ್ಯದ ಬಗ್ಗೆ ಇಷ್ಟೆಲ್ಲ ಕೇಳಿದ ಮೇಲೂ ನನ್ನನ್ನು ಒಮ್ಮೆ ನೋಡಬೇಕು ಎಂದು ನಿಮಗೆ ಅನ್ನಿಸಲಿಲ್ಲವೆ?’ 
‘ನಿಜವಾಗಿಯೂ ನೋಡಬೇಕು ಅನ್ನಿಸಿತು. ಆದರೆ ಸೌಂದರ್ಯೋಪಾಸನೆಯ ಹಿಂದಿನ ಕ್ರೌರ್ಯನ್ನು ನೆನೆದು ಸುಮ್ಮನಾಗಿದ್ದೆ. ಒಮ್ಮೆ ಕೊಠಡಿಯಿಂದ ಹೊರಗೆ ಬನ್ನಿ. ನಾನೂ ನಿಮ್ಮನ್ನು ನೋಡುತ್ತೇನೆ’ 
‘ನೀವು ಸತ್ಯ ಹೇಳಿದ್ದು ಖುಷಿಯಾಯಿತು. ಆದರೆ ನೀವು ನನ್ನನ್ನು ನೋಡಲಾರಿರಿ’ 
‘ಏಕೆ?’ 
‘ನಾನು ನೀವು ಬಂದಾಗಿನಿಂದಲೂ ನೀವು ಕೂತಿರುವ ರೂಮಿನಲ್ಲೇ ಸ್ವಲ್ಪ ದೂರದಲ್ಲಿ ಕೂತು ಮಾತನಾಡುತ್ತಿದ್ದೇನೆ. ಆದರೆ ನಿಮಗೆ ಕಾಣಿಸಿಲ್ಲ ಅಷ್ಟೆ.’
‘ಏನು ಹೇಳುತ್ತಿದ್ದೀರಿ? ನೀವೇನು ದೆವ್ವವೆ ಹಾಗಾದರೆ?’ ನನ್ನ ಎದೆಬಡಿತ ಜೋರಾಗತೊಡಗಿತ್ತು. 

‘ನಾವಿಲ್ಲಿಗೆ ಬಂದಮೇಲಿಂದ ಹುಟ್ಟಿಕೊಂಡ ನನ್ನ ಸೌಂದರ್ಯಾರಾಧಕರನ್ನೆಲ್ಲರನ್ನೂ ಕೊಲ್ಲಲು ಹೊರಡುವ ಮುನ್ನ ಅವನು ಒಬ್ಬ ಪ್ರಚಂಡ ಮಂತ್ರವಾದಿಯನ್ನು ಕರೆಸಿ, ನನ್ನನ್ನು ‘ಅಗೋಚರ ಮನುಷ್ಯ’ಳನ್ನಾಗಿ ಪರಿವರ್ತಿಸಿ ಹೋಗಿದ್ದಾನೆ. ಹಾಗಾಗಿ ನಾನು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ನನ್ನನ್ನು ಯಾರೂ ನೋಡಲಾಗದು. ಅಲ್ಲಲ್ಲ ನನ್ನ ಸೌಂದರ್ಯವನ್ನು ಯಾರೂ ನೋಡಲಾಗದು. ಹಾಗಾಗಿಯೇ ಅವನು ನೆಮ್ಮದಿಯಿಂದ ತಿರುಗಾಡಿಕೊಂಡಿದ್ದಾನೆ. ಪ್ರಾಯಷಃ ನನ್ನನ್ನು ಹೊಗಳಿದವರ ಪಟ್ಟಿ ಬೆಳೆಯುತ್ತಲೇ ಇರಬೇಕು ಹಾಗಾಗಿ ವರ್ಷಗಳೇ ಕಳೆದರೂ ಇನ್ನೂ ಹಿಂತಿರುಗಿಲ್ಲ. ಬರುವಾಗ ಎಷ್ಟು ರಕ್ತ ಅಂಟಿಸಿಕೊಂಡು ಬರುತ್ತಾನೋ ಏನೋ!’ 
ಇನ್ನೊಂದು ನಿಮಿಷ ಅಲ್ಲಿರಬಾರದು ಅನ್ನಿಸಿತು ನನಗೆ. 

‘ಸರಿ , ನಾನು ಹೊರಡುತ್ತೇನೆ. ನಿಮಗೆ ಸೌಂದರ್ಯ ನೀಡಿರುವ ಶಿಕ್ಷೆಯಿಂದ ಬೇಗ ಸ್ವಾತಂತ್ರ ಸಿಗಲಿ’ ಎಂದು ಹೊರಟೆ. 
‘ನೀವು ತುಂಬಾ ಒಳ್ಳೆಯವರು’ ಎಂದಳಾಕೆ.
‘ಒಳ್ಳೆಯವರು ಬದುಕುಳಿಯುವುದೂ ಮುಖ್ಯ ಅಲ್ವಾ?’ ಎಂದು ನಕ್ಕೆ.
ಅವಳೂ ನಗುವ ಸದ್ದು ಕೇಳಿಸಿತು. 
ಅಲ್ಲಿಂದ ಹೊರಬಿದ್ದೆ…
*    *    * 
ಹೈವೇಗೆ ವಾಪಾಸ್ ಬಂದು ಬಸ್ ಗಾಗಿ ಕಾಯುತ್ತಿದ್ದೆ. ಗದ್ದೆ  ಮಧ್ಯದಲ್ಲಿದ್ದ ಆ ಮನೆಯ ಕಡೆ ಯಾರೋ ಹೋದಂತಾಯಿತು. 
ಅವನ ಕೊಲ್ಲುವ ಪಟ್ಟಿ ಮುಗಿದಿರಬಹುದೆ ? ಆಕೆಗೆ ಅಗೋಚರತೆಯಿಂದ ಮುಕ್ತಿ ಸಿಕ್ಕಿತೆ ಅಥವಾ ನಾನು ಹೋಗಿ ಬಂದದ್ದು ಅಪ್ಪಿ ತಪ್ಪಿ ಅವನ ಗಮನಕ್ಕೆ ಬಂದರೆ ಅವಳಿಗೆ ಜೀವನ್ಮುಕ್ತಿಯೇ ಸಿಕ್ಕು ಬಿಡಬಹುದೆ? 
ಬಸ್ ಗಾಗಿಯೇ ಕಾಯದೆ, ಆ ತಕ್ಷಣ ಬಂದ ಲಾರಿ ಹತ್ತಿದೆ.
*     *      *  
ಲಾರಿ ಇಳಿದಾಗ ಮಂಚದ ಕೆಳಗೆ ಮಲಗಿದ್ದೆ. ಸೆಖೆ ಎಂದು ನೆಲದ ಮೇಲೆ ಮಲಗಿದ್ದೇನೆ ಎಂದುಕೊಂಡ ನನ್ನವಳು ಆ ಬಗ್ಗೆ ಏನೂ ಕೇಳಲಿಲ್ಲ. ನಾನೂ ಈ ಭಯಾನಕವಾದ ಕನಸಿನ ಬಗ್ಗೆ ಅವಳಿಗೆ ಹೇಳಲೂ ಹೋಗಿಲ್ಲ … 

March 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: