ಚಂದ್ರಮನೊಟ್ಟಿಗೆ ಆಲಾಪ‌

ಮಂಜುಳಾ ಸಿ ಎಸ್

ಚಂದ್ರ ನನಗೆ ಬಹಳ ಕಾಡುವ ವಿಶೇಷ ಸಂಗತಿ ಯಾವತ್ತಿಗೂ! ಇಂದು ಹುಣ್ಣುಮೆ ಒಂದೇ ಮಾಸದಲ್ಲಿ ಎರಡು ಬಾರಿ ಚಂದ್ರಮನಿಗೆ ಪೂರ್ಣ ರೂಪ ಧರಿಸುವ ಸಂಭ್ರಮವಾದರೆ ನನಗೋ ಚಂದ್ರನ ಬೆಳದಿಂಗಳಲ್ಲಿ ಮನಸಾರೆ ತೋಯುವ ಆಸೆ. 

ಇಂದು ಸಾಮಾನ್ಯ ಹುಣ್ಣುಮೆಯಲ್ಲ! ಬ್ಲೂ ಮೂನ್ ಆದರೆ ನೀಲಿಯಲ್ಲ ಕೆಂಪಗೆ ಎಂದಿಗಿಂತ ನಮಗೆ ಸನಿಹ ಕಾಣುವ ವಿಶೇಷ. ಕೆಂಡಸಂಪಿಗೆಯ ಬಣ್ಣದೊಂದಿಗೆ ಇಳಿಸಂಜೆಯೊತ್ತಿಗೆ ಮೂಡುವ ಶಶಿ ಅಧ೯ ಮುಕ್ಕಾಲು ತಾಸಿಗೆಲ್ಲ ಬಿಳುಪಾಗ ತೊಡಗುತ್ತಾನೆ (ಹಾಲು ಬಿಳುಪಲ್ಲ). ಸೂರ್ಯ ಚಂದ್ರರ ಪ್ರಕೃತಿಯ ಸಾಧಾರಣ/ಅಸಾಧಾರಣ ಪ್ರಕ್ರಿಯೆಯಾದರೂ ನನಗೋ ಇಬ್ಬರೂ ಬಾಲ್ಯದಿಂದಲೇ ಕೌತುಕದ ಅಗಾಧ ಸಂತಸ ನೀಡುವ ಸುಂದರ ವರವೆಂದೇ ತೋರುತ್ತದೆ.

ಸೂರ್ಯನ ಪ್ರಕಾಶ ಸತ್ಯ ಹಾಗೇ ಚಂದ್ರ ಬೆಳದಿಂಗಳು ಭ್ರಮೆಯೆನ್ನುವವರುಂಟು. ಸುಂದರ ಭ್ರಮೆಯೂ ಕಟುಸತ್ಯಕ್ಕಿಂತ ಚೆಂದವೆನಿಸುವುದಿಲ್ಲವೇ? ಚಳಿಗಾಲದಲ್ಲಿ ಸೂರ್ಯನ ಪ್ರಕಾಶವಿಲ್ಲದೆ ಮುದುಡುತ್ತಿದ ಮನಸ್ಸಿಗೆ ಇರುಳಲ್ಲಿ ಮೋಡದ ಹಾಸಿಗೆಯಲ್ಲಿ ಪವಡಿಸಿ ಮಂಕಾಗಿ ಆಗೊಮ್ಮೆ ಈಗೊಮ್ಮೆ ಇಣುಕುವ ಶಿಶಿರದ ಶಶಿಯೂ ಇಷ್ಟವೇ. ಹಾಗೇ ವಸಂತ ಋತುವಿನ ಹಾಲ್ಬೆಳದಿಂಗಳ ಚೆಲ್ಲುತ ನಡುರಾತ್ರಿಯವರೆಗು ತನ್ನ ಮೋಹಕ ಚೆಲುವಿನಲ್ಲಿ ಅಲೌಕಿಕ ಮಾಯೆಯೊಳಗೆ ಬಂಧಿಸುತ್ತಾ ಕನಸ ಬೀರುವ ಚಂದಿರನೆಂದರೆ ಪ್ರಾಣ.

ಹರೆಯದಲ್ಲಿ ಸಖಿಯೊರಟ್ಟಿಗೆ ತರ ತರಹದ ರುಚಿಯಾದ ಬೆಳದಿಂಗಳ ಊಟದೊಟ್ಟಿಗೆ ಮನೆಯ ಮಾಳಿಗೆಯಲ್ಲಿ ಚಂದ್ರನ ಜತೆಯಲ್ಲೇ ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿಯುವಾಗ ಗೆಳತಿಯರು ಅಂತ್ಯಾಕ್ಷರಿಯಾಡಿ ಹೊತ್ತು ಕಳೆದು ರಾತ್ರಿ ಬಹಳವಾದರೂ ಚಂದ್ರನನ್ನೇ ದಿಟ್ಟಿಸುತ್ತಾ ಗರಬಡಿದಂತೆ ಕೂರುತ್ತಿದ್ದ ನನ್ನ ಬಿಟ್ಟು ಮನೆಗೆ ಹೋಗುತ್ತೇನೆಂದು ಬ್ಲಾಕ್ ಮೇಲ್ ಮಾಡುತ್ತಿದ್ದವರ ಹೇಗೋ ಪುಸಲಾಯಿಸಿ ಮತ್ತಷ್ಟು ಹೊತ್ತು ಬೆಳದಿಂಗಳ ಸವಿದು ವಿಧಿಯಿಲ್ಲದೆ ಇನ್ನೆಂದೂ ಚಂದ್ರನ ಭೇಟಿಯಾಗುವ ಸಂಭವವೇ ಇಲ್ಲವೆನ್ನುವವಳಂತೆ ದುಗುಡದಿಂದ ಮೆಟ್ಟಿಲು ಇಳಿಯುವಾಗಲೂ ಚಂದ್ರನನ್ನೇ ನಿಟ್ಟಿಸುತ್ರಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಮನೆ ಸೇರಿ ಕೋಣೆಯ ಕಿಟಕಿಯಲ್ಲಿ ಚಂದ್ರ ಕಾಣುವ ಹೊತ್ತಿಗಾಗಿ ಕಾಯುತ್ತಾ ನಿದ್ರಾದೇವಿಯ ಹೆಚ್ಚು ಕಾಲ ದೂರವಿಡಲು ಆಗದೆ ನಿದ್ರಾದೇವಿಯ ವಶವಾಗಿ ನಡುಹೊತ್ತಿನಲ್ಲಿ ಬೆಳದಿಂಗಳ ಕಿರಣಗಳಿಗೆ ತಟ್ಟನೆ ಎಚ್ಚರವಾಗಿ ಜಗದ ಪರಿವೆಯಿಲ್ಲದೆ ಚಂದ್ರನಿಗೆ ಪರವಶಳಾಗಿ ಮನಸ್ಸು ಅಲೌಕಿಕ ಆನಂದದಿಂದ ತುಂಬಿ ಹೋಗುತ್ತಿದ್ದ ಕಾಲ ಅದೆಷ್ಟೋ ಅಧ್ಭುತವಾಗಿತ್ತು.

ಯಾರು ಹೇಳಿದರೋ ಈ ಚಂದ್ರಮ ಪ್ರೇಮ ವಾಹಕನೆಂದು?! ಸರಿಯೇ ಅದೆಲ್ಲೋ ದೂರದಲ್ಲಿರುವ ತನ್ನ ಪ್ರೇಮಿಯ ನೋಡಲು ಚಂದ್ರನೇ ಸಾಕ್ಷಿಯಲ್ಲವೇ! ತನ್ನ ಸಖ/ಸಖಿಯ ಮೊಗ ಚಂದಿರನಲ್ಲೇ ತೋರುವ ಮಾಯಾಗನ್ನಡಿಯೆಂಬುದು ಸತ್ಯವೇ. ಒಂದೇ ಘಳಿಗೆಯಲ್ಲಿ ಪ್ರೇಮಿಗಳು ಚಂದಿರನ ದಿಟ್ಟಿಸಿದರೆ ಒಬ್ಬರ ಮೊಗ ಮತ್ತೊಬ್ಬರಿಗೆ ಕಾಣುವುದು ಮಿಥ್ಯೆಯಲ್ಲ ಬಿಡಿ. ನಂಬಿಕೆಯೇ ಎಲ್ಲ. ಮೊನ್ನೆಯಷ್ಟೇ ಓದಿದ ಯಂಡಮೂರಿಯವರ ಸಾಲು ನೆನಪಾಗುತ್ತಿದೆ’ ಎಲ್ಲಿ ಮನುಷ್ಯ ನಂಬಿಕೆಯನ್ನು ಕಳೆದು ಕೊಳ್ಳುತ್ತಾನೋ/ಳೋ ಅಲ್ಲಿ ಪ್ರೇಮವನ್ನು ಕಳೆದು ಕೊಳ್ಳುತ್ತಾನೆ/ತ್ತಾಳೆ.

ಚಂದಿರನೂ ಹಾಗೇಯೆ ವಿಜ್ಞಾನದ ತಿಳುವಳಿಕೆಯಿಂದ ಭೂಮಿಯ ಚಲನೆಯಿಂದ ಚಂದ್ರ ಫರಿಭ್ರಮಿಸುವ ಸಿದ್ಧಾಂತವೋ ಗ್ರಹಣವೋ ಇಲ್ಲ ಚಂದ್ರನ ಪ್ರಕಾಶವೂ ಸ್ವಂತದಲ್ಲವೆನ್ನುವ ಯಾವುದೇ ವಿಚಾರವೂ ನನ್ನ ಮತ್ತು ಚಂದ್ರನ ಹುಚ್ಚು ಪ್ರೀತಿಯನ್ನು ರವೆಯಷ್ಟಾದರೂ ಕುಂದಿಸಿಲ್ಲವೆನ್ನುವುದು ನನ್ನ ಅಭಿಮಾನ. ಮರೆತಿದ್ದೇ ನನ್ನ ಹಿರಿಯ ಗೆಳತಿ ಹೇಳುವ ಹಾಗೇ ನನಗೆ ಮೂನ್ ಸ್ರ್ಟೋಕ್ ಹೊಡೆಯುವ ಖಾಯಿಲೆಯಿದೆಯೆಂದು. ಪ್ರತಿಮಾಸದ ಹುಣ್ಣುಮೆಗಾಗಿ ಕಾದು ಸಂಭ್ರಮಿಸುವ ನನ್ನ ಈ ಖಾಯಿಲೆಗೆ ಮದ್ದು ಇಲ್ಲವೆನ್ನಿ! (ಮಳೆ/ಚಳಿಗಾಲದಲ್ಲಿ ಅನಿವಾರ್ಯ ವಿರಹ) ಕೃಷ್ಣನ ರಾಧಾ-ಗೋಪಿಕೆಯೊಂದಿಗಿನ ರಾಸಲೀಲೆಯೂ ಪ್ರತಿ ಹುಣ್ಣುಮೆಯಂದೇ ನಡೆಯುತ್ತಿದ್ದುದು ಹುಣ್ಣುಮೆ ಮಹತ್ವವನ್ನು ಸಾರುವ ಉದಾಹರಣೆ.

ನನ್ನ ಕಿರು ಕವಿತೆಗಳು ಹೆಚ್ಚು ಚಂದಿರನ ಕುರಿತಾಗಿಯೇ. ನನ್ನ ಮನಸ್ಸಿನ ಭಾವಕ್ಕೆ ತಕ್ಕುದಾಗಿ ಸಂತಸವನ್ನೋ ಬೇಸರದ ಗುರುತಿಗೆ ಚಂದ್ರನೂ ಮಂಕಾಗಿ ನನ್ನೊಡನೆ ದುಃಖಿಸುವಂತೆ ತೋರುವ ಇವನೆಂದರೆ ಸಖ್ಯ. ರಾತ್ರಿಯಾದೊಡನೆ ಹಗಲಿನ ವಾಸ್ತವತೆಯ ಮರೆಸಲು ನೆನಪುಗಳ ಜೋಳಿಗೆಯಿಡಿದು ಕಣಿವಿಯಿಂದ ಮೋಡದ ಮೆರವಣಿಗೆ ಹೊರಡುವ ಚಂದ್ರಮ ಕೆಲವೊಮ್ಮೆ ಸಂತಸ ಹಲವು ಬಾರಿ ಅಗಾಧ ನೋವಿಗೆ ಬೆಳದಿಂಗಳು ತಾಪವಾಗಿಸಿ ಬಿಡುತ್ತಾನೆ.

ಸುಡುವ ಬೆಳದಿಂಗಳು ತಾರಲು ಹಿಂದೆ ಮುಂದೆ ನೋಡದ ಇವನ ಬಗ್ಗೆ ಮುನಿಸಿಕೊಂಡು ಕಿಟಕಿಯ ಪರದೆ ಸರಿಸಿಬಿಡುವ ಸಂಭಾವ್ಯವೂ ಉಂಟು. ನಮ್ಮ ಭೈರಪ್ಪನವರ ಮಹಾನ್ ಕೃತಿ ‘ಪವ೯’ದಲ್ಲಿ ಅಜು೯ನನ ಸ್ವಗತದ ಅಧ್ಯಾಯದಲ್ಲಿ ಸುಭದ್ರೆಯೊಡನೆ ದ್ವಾರಕೆಗೆ ಹೋಗುವ ಅವಧಿಯಲ್ಲಿ ರಥದೊಟ್ಟಿಗೆ ಸಾಗಿ ಬರುತ್ತಿರುವ ತನ್ನ ಜತೆಗಾರನಾದ ಒಂಟಿ ಚಂದ್ರನ ನೋಡಿ ಅವನಂತೆ ತಾನು ಒಂಟಿಯೆನಿಸಿ ಲೋಕದ ಪರಿವೆಯಿಲ್ಲದೆ ಸುಭದ್ರೆ ಗಾಢ ನಿದ್ರೆಯಲ್ಲಿದ್ದು ಮನಸ್ಸಿನ ಭಾವನೆಗಳ ಹಂಚಿಕೊಳ್ಳುತ್ತಿದ್ದ ಸಖಿಯ ನೆನಪು ಮೂಡಿ ಒಡನೆ ದ್ರೌಪದಿಯ ನೆನಪಾಗಿ ಅವಳೊಡನೆ ಕಳೆದ ರಸ ನಿಮಿಷಗಳು ಕಾಡತೊಡಗಿ ತಾನೇ ವರಿಸಿ ತಂದ ಸುಭದ್ರೆಯೊಟ್ಟಿಗೆ ಮತ್ಸ್ಯಯಂತ್ರ ಭೇದಿಸಿ ಹೆಮ್ಮೆಯಿಂದ ಗೆದ್ದ ಸತಿ ಪಾಂಚಾಲಿಯ ಹೋಲಿಕೆ ಮಾಡಲು ತೊಡಗಿದಾಗ ದ್ರೌಪದಿಯು ಕೊರೆವ ಚಳಿಯ ಇರುಳಲ್ಲೂ ಬಿಡದೆ ಅಜು೯ನನ ಕಾಡಿ ಆಗಸದಲ್ಲಿ ಚಂದ್ರನೊಬ್ಬನನ್ಬೇ ಬಿಡಬಾರದೆಂದು ಕವಿತೆ ಕಟ್ಟಿ ಹಾಡಿ ಮಾಳಿಗೆಯ ಮೇಲೆ ಸಮಯ ಕಳೆಯುತ್ತಿದ್ದ ಮತ್ತೊಂದೂ ಬಾರದ ಆ ಘಳಿಗೆಯ ವಣ೯ನೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 

ಇನ್ನು ಚಂದ್ರನಿಗೂ ಹಾಡಿಗೂ ಮಧುರ ಬಾಂಧವ್ಯವಿದೆ. ಸುಮಧುರ ಗೀತೆಗಳು ಒಂದರ ನಂತರ ಮತ್ತೊಂದು ಕೇಳಿ ಬರುತ್ತಿದ್ದರೆಷ್ಟು ಚೆನ್ನ. ಹಮ್ ದಿಲ್ ದೇ ಚುಕೆ ಸನಂ ಮೂವಿಯ ಸಲ್ಮಾನ್‌ ಖಾನ್ ಹಾಗು ಐಶ್ವರ್ಯ ರೈ ಅಭಿನಯದ ‘ಚಾಂದ್ ಚುಪಾ ಬಾದಲ್ ಮೆ’ ಗೀತೆಯೂ ನಾಯಕಿಯ ಹಿಂದಿನ ಜೀವನದ ಸಂಭ್ರಮ ಬಿಂಬಿಸಿ ಹಾಡಿನ ಕೊನೆಗೆ ವಾಸ್ತವದ ವಿಷಾದ ಮೂಡಿಸುವ ಚಿತ್ರಣಕ್ಕೆ ನಿದೇ೯ಶಕ ಸಂಜಯ್ ಲೀಲಾ ಬನ್ಸಾಲಿಯವರು ಚಂದ್ರನ ಬಳಕೆ ಮಾಡಿರುವ ರೀತಿಯು ಮನೋಜ್ಞವಾಗಿದೆ.

ಹಾಗೇ ಕನ್ನಡದ ಪ್ರಸಿದ್ಧ ಭಾವಗೀತೆ ದ.ರಾ.ಬೇಂದ್ರೆಯವರ ‘ನೀ ಹಿಂಗ ನೋಡ ಬ್ಯಾಡ’ ಗೀತೆಯಲ್ಲಿ ‘ಚಂದ್ರನ ಹೆಣ ತೇಲಿಬಂತು ಮುಗಿಲ್ಯಾಗ’ ಎನ್ನುವ ಸಾಲು ಯಾವಾಗಲೂ ಮನಮೋಹಕವೆನಿಸುವ ಚಂದ್ರನ ಭೀಷಣ ವಣ೯ನೆ ಆ ಸಾಲಿನಲ್ಲಿದೆ. ಸರಿ ಹೊತ್ತಾಯಿತು ಹುಣ್ಣುಮೆ ಚಂದ್ರನೂ ನಿಧಾನವಾಗಿ ಮೋಡದ ಮರೆಯಲ್ಲಿ ಸರಿದು ಮಂಕಾಗ ತೊಡಗಿದ್ದಾನೆ. ಇರಲಿ ಚಂದ್ರನೊಟ್ಟಿಗೆ ಆಲಾಪ ಮಾಡಲು ತೊಡಗಿ ಬಹಳ ಹೊತ್ತಾಗಿದೆ. ಮೊದಲಿನಂತೆ ಚಂದ್ರಮನೊಟ್ಟಿಗೆ ನಡುರಾತ್ರಿಯವರೆಗೂ ನಿದ್ದೆಗೆಟ್ಟು ಸಂವಾದಿಸುತ್ತಾ ಕನಸು ಕಾಣಲು ಕಾಲ ವ್ಯಯಿಸಲು ಮನಸ್ಸಿದ್ದರೂ ಅವಕಾಶವಾಗುತ್ತಿಲ್ಲವೆಂಬ ಕೊರಗು ಈಗೀಗ ಆಗೊಮ್ಮೆ ಈಗೊಮ್ಮೆ ಕಾಡುವುದುಂಟು.

‍ಲೇಖಕರು Avadhi

March 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: